ರಾಜ್ಯೋತ್ಸವ | ಕನ್ನಡದ ಮಕ್ಕಳ ಕಷ್ಟಗಳು ನೂರಿವೆ, ನಾವು ಜಾತ್ರೆಯಲ್ಲೇ ಸುಖ ಕಾಣುತ್ತಿದ್ದೇವೆ

ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಸಮುದಾಯವು ಒಂದೆಡೆ ಸೇರಿ ಚರ್ಚಿಸಬೇಕಾದ ಅನೇಕ ಗಂಭೀರ ವಿಷಯಗಳಿವೆ. ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಪರೀಕ್ಷೆ ನಡೆಸುವುದರಿಂದ ಕೇಂದ್ರ ಸರ್ಕಾರದ ಹುದ್ದೆಗಳು ಕನ್ನಡಿಗರಿಗೆ ಸಿಗುವುದಿಲ್ಲ. ಅದರ ಬಗ್ಗೆ ಚಿಂತೆ ಮಾಡದ ನಾವು ಪ್ರತಿವರ್ಷ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಕೋಟಿ ಖರ್ಚು ಮಾಡಿ ಜಾತ್ರೆ ನಡೆಸುತ್ತಿದ್ದೇವೆ 

ಒಂದು ವಿಚಿತ್ರವಾದ ಸನ್ನಿವೇಶದಲ್ಲಿ ನಾವಿದ್ದೇವೆ. ನಮ್ಮ ಆರ್ಥಿಕ ಪರಿಸ್ಥಿತಿಯು ಬಿಕ್ಕಟ್ಟಿನಲ್ಲಿದೆ. ಜಗತ್ತಿನ ಅತಿ ಹೆಚ್ಚು ಹಸಿದುಕೊಂಡ ಮಂದಿ ಭಾರತದಲ್ಲಿದ್ದಾರೆಂದು ವರದಿಗಳು, ಸೂಚ್ಯಂಕಗಳು ಹೇಳುತ್ತಿವೆ. ಕೋಮು ಹಿಂಸೆ ಮಾತ್ರವಲ್ಲ, ಜಾತಿ ಧರ್ಮಗಳ ಹೆಸರಿನಲ್ಲಿ ನಮ್ಮ ವ್ಯಾಪಾರಿ ಚಲನಚಿತ್ರಗಳು ಕೂಡ ನಲುಗಿ ಹೋಗುತ್ತಿವೆ. ಇವೆಲ್ಲವುಗಳ ಮಧ್ಯೆ ಅದೇನು ಉತ್ಸವಗಳು, ಸಮಾರಂಭಗಳು, ಆಚರಣೆಗಳು, ಬೇರಾವುದೋ ಗ್ರಹದಿಂದ ಇಲ್ಲಿಗೆ ಯಾರಾದರೂ ಬಂದರೆ ವಿಶ್ವದ ಸೃಷ್ಠಿಯಾದಾಗಿನಿಂದ ಇಂಥ ಸಂಭ್ರಮ, ಸಂತಸದ ಸಮಾಜವೆಂದೂ ಸೃಷ್ಠಿಯಾಗಿರಲಿಲ್ಲವೆಂದುಕೊಳ್ಳಬಹುದು.

Eedina App

ಇಂಥ ಸಮಾಜದ ಸಂತೋಷದ ಸೂಚ್ಯಂಕ (Happiness index) ಗರಿಷ್ಠವಾಗಿದೆ ಎಂದು ಭಾವಿಸಬಹುದು. ಅತ್ಯಂತ ಎತ್ತರದ ಮೂರ್ತಿಗಳು, ಅತಿ ಎತ್ತರದಲ್ಲಿ ಕಟ್ಟಿದ ಅಣೆಕಟ್ಟು, ಅತಿ ಹೆಚ್ಚು ಸಂಖ್ಯೆಯ (1.35 ಕೋಟಿ) ಜನರು ಕನ್ನಡದ ಹಾಡುಗಳನ್ನು ಹೇಳಿದ್ದು ಎಲ್ಲವೂ ವಿಶ್ವದಾಖಲೆಗಳೆ. ಅತಿ ಕಡಿಮೆ ಸಮಯದಲ್ಲಿ ಕಿತ್ತುಹೋಗುವ ಹೊಸದಾಗಿ ನಿರ್ಮಿಸಿದ ರಸ್ತೆಗಳು ಕೂಡ ವಿಶ್ವದಾಖಲೆ ಸ್ಥಾಪಿಸಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳಂತೂ ವಿಶಾಲವಾದ ಕರ್ನಾಟಕದ ಭೂಮಿ, ಕಟ್ಟಡಗಳು ಸಾಕಾಗಲ್ಲವೇನೋ ಎಂಬ ಅನುಮಾನ ಬರುವಷ್ಟು ನಡೆಯುತ್ತಿವೆ.

ಕನ್ನಡ ಸಂಸ್ಕೃತಿ ಇಂದು ತೀವ್ರ ಅವನತಿಯಲ್ಲಿದೆ : ವಾಸ್ತವವೆಂದರೆ ಇದೊಂದು ಅಸಂಗತವಾದ ಸುಳ್ಳುಗಳ ಮೇಲೆ ಕಟ್ಟಿರುವ ಸನ್ನಿವೇಷವಾಗಿದೆ. ಎಲ್ಲವೂ ಕೇವಲ ಆಚರಣೆಯ ಮಟ್ಟಕ್ಕೆ ಇಳಿದಿವೆ. ಬೃಹತ್ ಈವೆಂಟ್‌ ಮ್ಯಾನೇಜ್‌ಮೆಂಟ್‌ನ ಘಟನೆಗಳಾಗಿವೆ. ಪೊಳ್ಳು ಮತ್ತು ಅರ್ಥಹೀನವಾಗಿವೆ. ನಿಜವೆಂದರೆ ಕನ್ನಡ ಸಂಸ್ಕೃತಿಯೆಂದು ನಾವು ನಂಬಿಕೊಂಡು ಬಂದಿದ್ದು ಇಂದು ತೀವ್ರ ಅವನತಿಯಲ್ಲಿದೆ. ನಾವು ನಂಬಿಕೊಂಡಿದ್ದು ಆದರ್ಶೀಕೃತವಾದ ಪರಿಕಲ್ಪನೆ ಇರಬಹುದು. ಆದರೆ ಅದರ ಬುನಾದಿಯಲ್ಲಿ ಒಂದಿಷ್ಟು ಚಾರಿತ್ರಿಕ ವಾಸ್ತವಗಳಿವೆ. ಬಹುಭಾಷಿಕತೆ, ಬಹುಮುಖಿ ಸಂಸ್ಕೃತಿಗಳು, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಆಶಯಗಳು ಇವೆಲ್ಲವು ಸ್ವಲ್ಪಮಟ್ಟಿಗಾದರೂ ಚಾರಿತ್ರಿಕ ಸತ್ಯಗಳಾಗಿದ್ದವು. ಈಗ ಅವುಗಳು ಸಂಪೂರ್ಣ ಅವನತಿಗೊಂಡು ಕೇವಲ ಪೊಳ್ಳು ಆವರಣವು ಮಾತ್ರ ಉಳಿದಿದೆ. ಏನು ಮಾಡಿದರೂ ಅದು ಮಾಧ್ಯಮಗಳ ಕ್ಯಾಮರಾಗಳಿಗಾಗಿ ಮಾಡಿದಂತಿರುತ್ತದೆ. ಸಾಹಿತ್ಯದ ಚರ್ಚೆಗಳು ಕೂಡ ಕೆಲವು ವರ್ಷಗಳಿಂದ ಕೆಲವು ವಿಮರ್ಶಕರು ಸಾಮಾಜಿಕ ಸಾಹಿತ್ಯಿಕ ಚಳವಳಿಗಳು ಇಲ್ಲದೇ ಇರುವುದರಿಂದ ಇಂದಿನ ಬರಹಗಾರರು ಸಿದ್ಧಾಂತಗಳ ಹೊರೆ ಇಲ್ಲದೆ ಸೃಜನಶೀಲವಾಗಿ, ಪ್ರಯೋಗಶೀಲವಾಗಿ ಬರೆಯುತ್ತಿದ್ದಾರೆ ಎಂದು ಹೇಳತೊಡಗಿದ್ದಾರೆ. ಆದರೆ ಚಳವಳಿಗಳು ಮತ್ತು ಸೈದ್ಧಾಂತಿಕತೆ ಇಲ್ಲದೆ ಇರುವ ನಿರ್ವಾತದಲ್ಲಿ ನಾವು ಕಾಣುತ್ತಿರುವುದೆಂದರೆ ಒಂದು ಮೀಡಿಯಾ ಈವೆಂಟ್‌ ಮಾತ್ರ ಅಥವಾ ಒಂದು ಗುಂಪಿನಲ್ಲಿ ಹಲವು ಲೈಕ್‌ಗಳನ್ನು ಪಡೆಯುವ ಒಂದು ಸಂದೇಶ ಮಾತ್ರ. ಬಿಡುಗಡೆಗಳೂ ಅದ್ದೂರಿಯಾಗಿರುತ್ತವೆ.

AV Eye Hospital ad
ಸಾಹಿತ್ಯ ಸಮ್ಮೇಳನ

ವಸ್ತುನಿಷ್ಟವಾದ, ಗಂಭೀರವಾದ ವಿಮರ್ಶೆಗೆ ಅವಕಾಶವೇ ಇಲ್ಲ. ಒಂದು ಕಾಲದಲ್ಲಿ ಸಾಕ್ಷಿ, ಸಂಕ್ರಮಣ, ರುಜುವಾತು, ಗಾಂಧೀ ಬಜಾರ್ ಪತ್ರಿಕೆ, ಸಾಧನೆ, ಶೂದ್ರ ಇಂಥ ಪತ್ರಿಕೆಗಳಲ್ಲದೆ ‘ಪ್ರಜಾವಾಣಿ’ ಯಂಥ ಪತ್ರಿಕೆಗಳ ಸಾಹಿತ್ಯ ಪುರವಣಿಗಳು ಗಂಭೀರ ಕಾಳಜಿ ಇರುವ ಒಂದು ಓದುಗ ವರ್ಗವನ್ನು ನಿರ್ಮಿಸಿದ್ದವು. ಎಲ್ಲಾ ಬಗೆಯ ಸಾಂಸ್ಕೃತಿಕ ರಾಜಕೀಯದ ಮಧ್ಯ ನಿಜವಾದ ಚರ್ಚೆ, ವಿಮರ್ಶೆಗಳು ನಡೆಯುತ್ತಿದ್ದವು. ಜಿ.ಎಸ್. ಶಿವರುದ್ರಪ್ಪನವರ ಮುಂದಾಳತ್ವದಲ್ಲಿ ನಡೆದ ವಿಚಾರ ಸಂಕಿರಣಗಳು ಕನ್ನಡ ಸಾಹಿತ್ಯ ಹಾಗೂ ಭಾಷೆಗಳ ಕಾರ್ಯಸೂಚಿಯನ್ನು ರಚಿಸಿಕೊಟ್ಟವು. ಕನ್ನಡ ವಿಶ್ವವಿದ್ಯಾಲಯದ ‘ಸಾಂಸ್ಕೃತಿಕ ಮುಖಾಮುಖಿ’ ಚರ್ಚೆಗಳು ಹಾಗೂ ಪ್ರಕಟಣೆಗಳು ಈ ಕೆಲಸವನ್ನು ಮುಂದುವರೆಸಿದವು.

ಈಗ ಪರಿಸ್ಥಿತಿ ಹೇಗಿದೆಯೆಂದರೆ ‘ಏನು ಹೇಳುವುದಿದ್ದರೂ 400 ಪದಗಳಲ್ಲಿ ಬರೆಯಿರಿʼ ಎನ್ನುವ ಆಣತಿಯು ಪತ್ರಿಕೆಗಳಿಂದ ಬರುತ್ತದೆ. ಉಭಯ ಕುಶಲೋಪರಿ ಮತ್ತು ಅಸಭ್ಯ ಅರ್ಥಹೀನ ಟಿಪ್ಪಣಿಗಳು ವಿಮರ್ಶೆಯ ಸ್ಥಾನವನ್ನು ಆಕ್ರಮಿಸಿಕೊಂಡಿವೆ. ಅಲ್ಲದೆ ಜಾತಿ, ವರ್ಗ, ಅಧಿಕಾರ ಮತ್ತು ಸಾಹಿತ್ಯ, ಸಂಸ್ಕೃತಿಗಳ ಸಂಬಂಧಗಳ ಬಗ್ಗೆ ಚರ್ಚಿಸಬೇಕಾದದ್ದು ಸೈದ್ಧಾಂತಿಕವಾಗಿ ಮಾತ್ರವಲ್ಲ ಸಮಾಜದ ಆರೋಗ್ಯದ ದೃಷ್ಟಿಯಿಂದಲೂ ಅತ್ಯಂತ ಅವಶ್ಯಕವಾಗಿದೆ. ಆದರೆ ಈ ಚರ್ಚೆಗಳಿಗೆ ಗಾಢವಾದ ಚಿಂತನೆ ಹಾಗೂ ಪ್ರಾಮಾಣಿಕವಾದ ಕಾಳಜಿಗಳ ಬೆಂಬಲವಿರಬೇಕು. ಕನ್ನಡದಲ್ಲಿ ನಡೆಯುತ್ತಿರುವ ಚರ್ಚೆಗಳು ಬಹುಪಾಲು ಒಂದು ನಿಲುವಿನ ಹೇಳಿಕೆಗಳಾಗಿರುತ್ತವೆ. ಅವುಗಳ ಹಿಂದಿನ ನಿಲುವುಗಳು ಪೂರ್ವನಿರ್ಧಾರಿತವಾಗಿರುತ್ತವೆ.

ಇಂಥ ಸಂದರ್ಭದಲ್ಲಿ ಮುಂದಿನ ಜನವರಿ ತಿಂಗಳಿನಲ್ಲಿ ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ನಡೆಯಲಿದೆ. ಸರಕಾರವು ಈ ಜಾತ್ರೆಗಾಗಿ 20 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ. ಹಾವೇರಿಯು ಮುಖ್ಯಮಂತ್ರಿಗಳ ಮತಕ್ಷೇತ್ರವೆಂದೇ ಪರಿಗಣಿತವಾಗಿರುವುದರಿಂದ ಮತ್ತು ಈವರೆಗೆ ಆ ಕ್ಷೇತ್ರ ಹಾಗೂ ಸುತ್ತಮುತ್ತಲಿನ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ಆಳುವ ಪಕ್ಷವು ಸೋಲನ್ನು ಕಂಡಿದ್ದರಿಂದ ಹಾವೇರಿ ಸಾಹಿತ್ಯ ಸಮ್ಮೇಳನವು ರಾಜಕೀಯ ಉದ್ದೇಶಕ್ಕಾಗಿ ಬಳಕೆ-ಯಾಗುತ್ತದೆ ಎನ್ನುವುದು ಖಚಿತವಾಗಿದೆ. ಅಲ್ಲದೆ ಭ್ರಷ್ಟಾಚಾರ ಕೋಮುವಾದ ಇವುಗಳ ಆರೋಪ ಹೊಂದಿರುವ ಸರಕಾರಕ್ಕೆ ಸಾಹಿತ್ಯ, ಸಂಸ್ಕೃತಿ, ಸಮಾರಂಭಗಳು ಸಾರ್ವಜನಿಕ ಶುದ್ಧೀಕರಣದ ಘಟನೆಗಳಾಗಿರುವುದು ಕನ್ನಡದ ಬಗ್ಗೆ ಅಂತೂ ನಿಜ.

ಅತಿ ಭಾವುಕವಾದ ಸಮೂಹ ಸನ್ನಿಯನ್ನು ಹುಟ್ಟಿಸಲು ಸಾಹಿತ್ಯವು ಇಲ್ಲಿ ಬಳಕೆಯ ವಸ್ತುವಾಗಿ ಕಂಡಿರುವುದು ಹೊಸದೇನಲ್ಲ. ಹೀಗಾಗಿ ಕನ್ನಡದ ಅಭಿಮಾನದ ಹೆಸರಿನಲ್ಲಿ ತನ್ನ ಅಸಾಮರ್ಥ್ಯವನ್ನು ಸರಕಾರವು ಮರೆಮಾಚಲು ಈ ಸಾಹಿತ್ಯ ಸಮ್ಮೇಳನವನ್ನು ಬಳಸಿಕೊಳ್ಳುತ್ತದೆ. ಮತ್ತು ಈ ಕೆಲಸವನ್ನು ಸಾಂಗವಾಗಿ ನೆರವೇರಿಸಲು ನೂರಾರು ದ್ವಿತೀಯ ದರ್ಜೆಯ ಬರಹಗಾರರು ಯಾವಾಗಲೂ ಸನ್ನದ್ಧರಾಗಿರುತ್ತಾರೆ. ಇನ್ನೇನು ಪತ್ರಕರ್ತರು ‘ಕನ್ನಡಮ್ಮನ ಜಾತ್ರೆ’, ‘ಕನ್ನಡದ ಭುವನೇಶ್ವರಿಯ ಪೂಜೆ’, ‘ಕನ್ನಡದ ಹಬ್ಬ’ ಎನ್ನುವ ಲೇಖನಗಳನ್ನು ಈಗಾಗಲೇ ಬರೆದಿಟ್ಟುಕೊಂಡಿದ್ದಾರೆ.

21ನೇ ಶತಮಾನದ ಆಧುನಿಕ ಮಹಿಳೆಯರು ನಾಡಿನಲ್ಲಿ ಇಲ್ಲವೇ ಇಲ್ಲವೆನ್ನುವಂತೆ ಪೂರ್ಣಕುಂಭ ಸ್ವಾಗತಕ್ಕಾಗಿ ಇಳಕಲ್ ಸೀರೆ ತೊಟ್ಟು ಮಹಿಳೆಯರು ಈಗಾಗಲೇ ರಿಹರ್ಸಲ್ ಆರಂಭಿಸಿರುತ್ತಾರೆ. ಸರಕಾರಿ ನೌಕರರು ಒಒಡಿ ಸೌಲಭ್ಯಕ್ಕಾಗಿ ಓಡೋಡಿ ಬರಲಿದ್ದಾರೆ. ಕನ್ನಡದ ಪ್ರಮುಖ ಪತ್ರಿಕೆಗಳು ಸಮ್ಮೇಳನದ ಮೂರುದಿನ ಉಪಹಾರ ಮತ್ತು ಊಟದ ವಿವರಗಳನ್ನು ರುಚಿಕಟ್ಟಾಗಿ ಗದ್ಯ ಕಾವ್ಯದಲ್ಲಿ ವರ್ಣಿಸಲಿದ್ದಾರೆ. ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಇನ್ನೇನು ಬೇಕು?

ಗಂಭೀರ ಚರ್ಚೆ, ಒಳ್ಳೆಯ ಕಾವ್ಯ ಕೊಳ್ಳಲು ಪುಸ್ತಕಗಳು ಇವೇ ಮುಂತಾದ ಅನಿವಾರ್ಯವು ಯಾರಿಗೂ ಬೇಡವಾಗಿರುವ ವಿದ್ಯಮಾನಗಳು ಇದ್ದೇ ಇರುತ್ತವೆ ಎಂದು ಹೇಳಲಾಗದು. ಬದಲಾಗಿ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಗಳ ಜೀವಾಳವೇ ಆಗಿರುವ ಸಹಬಾಳ್ವೆ, ಸಹಿಷ್ಣುತೆ ಈ ಮೌಲ್ಯಗಳನ್ನು ಅಲ್ಲಗಳೆಯುವ ಪ್ರಯತ್ನಗಳು ಸಾಹಿತ್ಯದ ಮೂಲಕವೇ ಆ ಸಮ್ಮೇಳನದಲ್ಲಿ ನಡೆಯುವ ಸಾಧ್ಯತೆ ಕಾಣುತ್ತಿದೆ. ಉದಾಹರಣೆಗೆ ಸಮ್ಮೇಳನದಲ್ಲಿ ಸಾವರ್ಕರ್ ಅವರ ಹೆಸರು ಮತ್ತು ಭಾವಚಿತ್ರಗಳು ಖಂಡಿತವಾಗಿ ರಾರಾಜಿಸುತ್ತವೆ.

ಹಿಂದಿ ಹೇರಿಕೆ

ಕನ್ನಡ ಸಮುದಾಯವು ಒಂದೆಡೆ ಸೇರಿ ಚರ್ಚಿಸಬೇಕಾದ ಅನೇಕ ಗಂಭೀರ ವಿಷಯಗಳಿವೆ. ಎನ್‌ಇಪಿ ಅನುಷ್ಠಾನಕ್ಕೆ ಬಂದ ಮೇಲೆ ಈ ವರ್ಷ ಕಲಾವಿಭಾಗದ ಪ್ರವೇಶಗಳು ಕಾಲೇಜುಗಳಲ್ಲಿ ಶೇಕಡಾ 50ರಷ್ಟು ಕುಸಿದಿವೆ. ಇತರ ವಿಷಯಗಳಲ್ಲೂ ಹೀಗೇ ಆಗಿದೆ. ಹಾಗಿದ್ದರೆ ಸಾಹಿತ್ಯವನ್ನು ಓದುವರಾರು? ಯುವ ತಲೆಮಾರು ಕಲೆ, ಸಾಹಿತ್ಯ ಇವುಗಳನ್ನು ತ್ಯಾಜ್ಯ ವಸ್ತುಗಳೆಂದು ಏಕೆ ನೋಡುತ್ತಿವೆ? 1.35 ಕೋಟಿ ಕನ್ನಡಿಗರು ಹಾಡು ಹೇಳಿ ಸಂಭ್ರಮಿಸುತ್ತಿರುವಾಗಲೇ ಮತ್ತೆ Staff Selection Commission (ಎಸ್‌ಎಸ್‌ಸಿ) ತನ್ನ ಹುದ್ದೆಗಳಿಗಾಗಿ ನಡೆಸುವ ಪರೀಕ್ಷೆಗಳು ಕೇವಲ ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಇರುತ್ತವೆ ಎಂದು ತಿಳಿಸಿದೆ. ಹತ್ತನೆಯ ತರಗತಿ ಓದಿದ ಕನ್ನಡ ಯುವಕ ಯುವತಿಯರಿಗೆ ಈ ಯಾವ ಹುದ್ದೆಗಳೂ ಸಿಕ್ಕುವುದಿಲ್ಲ. ಹಿಂದಿ ಮತ್ತು ಸಂಸ್ಕೃತಗಳ ಯಜಮಾನಿಕೆಯಿಂದಾಗಿ ಕನ್ನಡಕ್ಕೆ ಖಂಡಿತವಾಗಿ ಅಪಾಯಗಳಿವೆ. ಆದರೆ ಇವು ಸಾಹಿತ್ಯ ಸಮ್ಮೇಳನದ ಕಾಳಜಿಗಳಾಗಿರುವುದಿಲ್ಲ. ಹೌದು ಕೊನೆಯ ಗೋಷ್ಠಿಯಲ್ಲಿ ಕನ್ನಡ ಪರವಾದ ಗೊತ್ತುವಳಿಗಳನ್ನು ಸ್ವೀಕರಿಸಿ ಸರಕಾರಕ್ಕೆ ನೀಡಲಾಗುತ್ತದೆ.

ಇಂದಿನವರೆಗೆ ಯಾವುದೇ ಸರಕಾರವು ಇಂಥ ಗೊತ್ತುವಳಿಗಳನ್ನು ಓದಿದ ದಾಖಲೆ ಇಲ್ಲ. ಹಾಗಿದ್ದರೆ 20 ಕೋಟಿ ವೆಚ್ಚದ ಸಮ್ಮೇಳನವು ಏನನ್ನು ಸಾಧಿಸುತ್ತದೆ? ಇಂಥ ವ್ಯರ್ಥ ಪ್ರಶ್ನೆಗಳನ್ನು ಕೇಳಬೇಡಿ. ಬನ್ನಿ ಕನ್ನಡಮ್ಮನ ಜಾತ್ರೆಗೆ, ಜೋಳದ ರೊಟ್ಟಿ, ಎಣ್ಣೆಕಾಯಿ ಪಲ್ಲೆ, ಜುಣುಕದ ವಡೆ- ಇವೆಲ್ಲ ನಿಮಗಾಗಿ ಕಾದಿವೆ. ಮುಖ್ಯವಾಗಿ ಅತಿ ಹೆಚ್ಚು ಸಂಖ್ಯೆಯ ಜನರು ಸಮ್ಮೇಳನಕ್ಕೆ ಬಂದಿದ್ದರು ಎನ್ನುವ ದಾಖಲೆ ನಿರ್ಮಿಸಬೇಕಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app