ರಾಜ್ಯೋತ್ಸವ | ಕನ್ನಡ ಸಂಘಟನೆಗಳೆಂದರೆ ಬಲಪಂಥೀಯರಿಗೇಕೆ ಆತಂಕ?

ಕನ್ನಡಿಗರ ಉದ್ಯೋಗ ಸಿಗಬೇಕು ಎಂದು ರಣಧೀರ ಪಡೆಯ ಹರೀಶ್ ಕುಮಾರ್ ಬಿ ಅವರು 'ಜಾಬ್ ಫಾರ್ ಕನ್ನಡಿಗಾಸ್' ಎಂಬ ಘೋಷ ವಾಕ್ಯದಲ್ಲಿ ಧರಣಿ ಸತ್ಯಾಗ್ರಹ ನಡೆಸಿದಾಗ ಅದನ್ನು ವಿರೋಧಿಸಿದ್ದು ಸರ್ಕಾರವಲ್ಲ, ಬಲಪಂಥೀಯರು! ಸ್ಥಳೀಯರಿಗೆ ಉದ್ಯೋಗ ಸಿಗೋದಾದ್ರೆ ಬಲಪಂಥೀಯರು ಸಾಮಾಜಿಕ ಜಾಲತಾಣದಲ್ಲಿ ವಿರೋಧಿಸುವುದು ಯಾಕೆ?

ಕನ್ನಡ, ಕನ್ನಡ ಹೋರಾಟ, ಪ್ರಾದೇಶಿಕ ಹೋರಾಟ, ನೆಲ-ಜಲ-ಭಾಷೆಯ ಹೋರಾಟವೆಂದರೆ ಬಲಪಂಥೀಯರು ಉರಿದು ಬೀಳುತ್ತಾರೆ. ಕನ್ನಡ ಹೋರಾಟವನ್ನು ʼಓಲಾಟʼವೆಂದೂ, ಹೋರಾಟಗಾರರನ್ನು ʼಓಲಾಟಗಾರʼರೆಂದೂ ಕೋಮುವಾದಿಗಳು ಹಂಗಿಸುತ್ತಾರೆ. ಕರ್ನಾಟಕ ರಾಜ್ಯೋತ್ಸವೋ, ಕಾವೇರಿ ಹೋರಾಟದ ದಿನಗಳೋ ಬಂದವೆಂದರೆ ವಾಟಾಳ್ ನಾಗರಾಜ್, ಬೈರಪ್ಪ ಹರೀಶ್ ಕುಮಾರ್, ನಾರಾಯಣ ಗೌಡ, ಪ್ರವೀಣ್ ಶೆಟ್ಟಿ, ರೂಪೇಶ್ ರಾಜಣ್ಣ ಸೇರಿದಂತೆ ಎಲ್ಲ ಕನ್ನಡ ಹೋರಾಟಗಾರರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಲಾಗುತ್ತದೆ. ಕನ್ನಡ ಭಾಷೆ, ನೆಲ, ಜಲದ ಹೋರಾಟವೆಂದರೆ ಅದು ಬಲಪಂಥದ ವಿರೋಧ ಆಗುವುದು ಹೇಗೆ? ಆದರೆ ಖಂಡಿತವಾಗಿಯೂ ಕನ್ನಡ ಪರ ಹೋರಾಟವೆಂದರೆ ಕೋಮುವಾದದ ವಿರುದ್ಧದ ಹೋರಾಟವೇ ಆಗಿದೆ. ಅದು ಇರಬೇಕಾದದ್ದೇ ಹಾಗೆ!

Eedina App

ಯಾವ ಪಿತೂರಿಗಳು, ಅಪಪ್ರಚಾರಗಳು ಕನ್ನಡ ಪರ ಹೋರಾಟದ ಮೇಲೆ ಪರಿಣಾಮ ಬೀರದೇ ಇದ್ದಾಗ ಬಲಪಂಥೀಯರೇ ಪ್ರಾದೇಶಿಕ ಹೋರಾಟವನ್ನು ಕೈಗೆತ್ತಿಕೊಳ್ಳುತ್ತಾರೆ. ಅದು ಒಡೆಯುವ ಪ್ರಾದೇಶಿಕ ಹೋರಾಟ. ಉದಾಹರಣೆಗೆ ಪ್ರತ್ಯೇಕ ತುಳು ರಾಜ್ಯ, ಪ್ರತ್ಯೇಕ ಕೊಡಗು, ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟ ಇತ್ಯಾದಿ ಇತ್ಯಾದಿ. ಈ ಪ್ರತ್ಯೇಕತೆಯ ಹೋರಾಟಗಳು ಆಯಾ ಪ್ರಾಂತ್ಯದ ಅಭಿವೃದ್ದಿಗಾಗಿಯೋ, ಅಸ್ಮಿತೆಗಾಗಿಯೋ ಅಲ್ಲ. ಬದಲಾಗಿ ಅವೆಲ್ಲವೂ ಕನ್ನಡ ಹೋರಾಟದ ವಿರುದ್ಧವಾಗಿ ರೂಪುಗೊಂಡಿರುವಂತದ್ದು!

ಪ್ರತ್ಯೇಕ ತುಳು ರಾಜ್ಯ ಹೋರಾಟವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ತುಳುನಾಡು ಎಂದು ಹೇಳುವ ಮಂಗಳೂರು ಮತ್ತು ಉಡುಪಿಯನ್ನು ರಾಜ್ಯ ಸರ್ಕಾರಗಳು ಎಲ್ಲ ಕ್ಷೇತ್ರಗಳಲ್ಲೂ ಕಡೆಗಣಿಸಿವೆ ಎಂಬುದು ತುಳು ಪ್ರತ್ಯೇಕ ರಾಜ್ಯವಾಗಬೇಕು ಎಂದು ವರ್ಷಕ್ಕೊಮ್ಮೆ ಹೇಳುವ ಮಾತು. ಮಂಗಳೂರಿನಲ್ಲಿರುವ ಬೃಹತ್ ಉದ್ದಿಮೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂಬ ಹೋರಾಟವನ್ನು ಪ್ರಗತಿಪರರು ಕೈಗೆತ್ತಿಕೊಂಡಾಗ ಪ್ರತ್ಯೇಕ ತುಳು ರಾಜ್ಯಕ್ಕಾಗಿ ಹೋರಾಡುವವರು ಸೊಲ್ಲೆತ್ತಲಿಲ್ಲ.  ಮಂಗಳೂರು ವಿಶೇಷ ಅರ್ಥಿಕ ವಲಯ, ಎಂಆರ್‌ಪಿಎಲ್‌ನಂತಹ ಉದ್ದಿಮೆಗಳು ರೈತರ ಭೂಮಿ ಸ್ವಾಧೀನ ಮಾಡಿದಾಗಲಾಗಲೀ, ಬ್ಯಾಂಕ್‌ಗಳನ್ನು ಉತ್ತರ ಭಾರತದ ಬ್ಯಾಂಕುಗಳೊಂದಿಗೆ ವಿಲೀನಗೊಳಿಸಿದ ಸಂದರ್ಭದಲ್ಲಾಗಲೀ ಪ್ರತ್ಯೇಕ ತುಳು ರಾಜ್ಯದ ಹೋರಾಟಗಾರರು ಬೀದಿಗಿಳಿಯಲಿಲ್ಲ. ಶಿಕ್ಷಣ, ನೀರು, ಉದ್ಯೋಗ, ಘನತೆಯ ಬದುಕಿಗಾಗಿ ನಡೆದ ಯಾವ ಹೋರಾಟವನ್ನು ಮುನ್ನಡೆಸದವರು ಪ್ರತ್ಯೇಕ ರಾಜ್ಯ ಕೇಳುತ್ತಾರೆ ಎಂದರೆ ಅವರ ಹಿನ್ನಲೆಯನ್ನು ಕೆದಕಬೇಕು. ಎಡಪಂಥೀಯ ಯುವ ಹೋರಾಟಗಾರ ಮುನೀರ್ ಕಾಟಿಪಳ್ಳ ನಡೆಸುವ ಸ್ಥಳೀಯರಿಗೆ ಉದ್ಯೋಗ ನೀಡಿ ಎಂಬ ಹೋರಾಟವನ್ನು ಅಣಕಿಸುವವರೇ ತುಳುರಾಜ್ಯದ ಬೇಡಿಕೆ ಮತ್ತು ಕನ್ನಡ ಹೋರಾಟವನ್ನು ವ್ಯಂಗ್ಯ ಮಾಡುವವರಾಗಿದ್ದಾರೆ.

AV Eye Hospital ad

ತುಳುನಾಡು ಪ್ರತ್ಯೇಕ ರಾಜ್ಯ ಆಗಬೇಕು ಎನ್ನುವವರು ಗಂಭೀರ ಬೇಡಿಕೆಗಳನ್ನು ಬಾಲಿಶವಾಗಿ ಮಂಡಿಸುತ್ತಾರೆ. ಆಂದ್ರದಿಂದ ತೆಲಂಗಾಣ ಪ್ರತ್ಯೇಕವಾದಂತೆ ಕರ್ನಾಟಕದಿಂದ ಕರಾವಳಿ ಪ್ರತ್ಯೇಕವಾಗಬೇಕು ಎಂದು ವಾದಿಸುತ್ತಾರೆ. ತೆಲಂಗಾಣ ಪ್ರತ್ಯೇಕ ಹೋರಾಟ ನಡೆದಿದ್ದು ವಿದ್ಯೆ, ಉದ್ಯೋಗ, ವಸತಿ, ಭೂಮಿಯ ಪ್ರಶ್ನೆಗಳನ್ನು ಇಟ್ಟುಕೊಂಡು. ತೆಲಂಗಾಣದಲ್ಲಿ ಎಡ ಹೋರಾಟ, ನಕ್ಸಲ್ ಹೋರಾಟದ ಜೊತೆ ಜನ ಬೆಂಬಲವಿತ್ತು. ನಿಜಾಮರ ಕಾಲದಲ್ಲೇ ಜನ ಪ್ರಾದೇಶಿಕ ಅಸ್ಮಿತೆಗಾಗಿ ಹೋರಾಟ ಮಾಡಿದ್ದರು. ಸ್ಥಳೀಯರಿಗೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಬೇಕು ಎಂಬ ಹೋರಾಟಕ್ಕೆ ಮಣಿದ ನಿಜಾಮರು ಮುಲ್ಕಿ ಕಾನೂನನ್ನು ಜಾರಿಗೆ ತಂದಿದ್ದರು. ಮುಲ್ಕಿ ಎಂದರೆ ಉರ್ದುವಿನಲ್ಲಿ ಸ್ಥಳೀಯ ಎಂದರ್ಥ. ಈ ಕಾನೂನಿನ ಪ್ರಕಾರ ಶೇಕಡಾ 50ರಷ್ಟು ಉದ್ಯೋಗ ಅವಕಾಶವನ್ನು ತೆಲಂಗಾಣದ ಸ್ಥಳೀಯರಿಗೇ ಮೀಸಲಿರಿಸಬೇಕಿತ್ತು. ಆಂದ್ರ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರವೂ ಮುಖ್ಯಮಂತ್ರಿ ಆಂದ್ರ ಸೀಮೆಯದ್ದಾದರೆ ಉಪಮುಖ್ಯಮಂತ್ರಿ ತೆಲಂಗಾಣದವರೇ ಆಗಬೇಕು ಎಂಬ ಒಪ್ಪಂದವಿತ್ತು. ಆದರೆ ಆಂದ್ರ ಸರ್ಕಾರ ತೆಲಂಗಾಣವನ್ನು ಕಡೆಗಣಿಸಿದಾಗ ಎಡಪಂಥೀಯರು ಹೋರಾಟದ ಹಾದಿ ಹಿಡಿದರು. ಎಡಪಂಥೀಯರ ಜೊತೆ ಜನ ನಿಂತಾಗ ಪ್ರತ್ಯೇಕ ತೆಲಂಗಾಣ ರಾಜ್ಯ ಉದಯಿಸಿತ್ತು. ತುಳುನಾಡು ಪ್ರತ್ಯೇಕ ರಾಜ್ಯ ಆಗಬೇಕು ಎಂದು ಹೇಳುವವರನ್ನು ನೀವು ಯಾವ ಹೋರಾಟದಲ್ಲೂ ಕಾಣಲಾರರಿ. ಅದರ ಅರ್ಥ ತುಳುನಾಡಿನಲ್ಲಿ ಇಂದು ನಡೆಯುತ್ತಿರುವ ಜನಪರ ಹೋರಾಟದಿಂದ ಜನರ ಮನಸ್ಸನ್ನು ಬೇರೆಡೆ ಸೆಳೆಯುವ ಪ್ರಯತ್ನವಷ್ಟೆ.

ಕನ್ನಡ ಸಂಘಟನೆಗಳು

ಕನ್ನಡಿಗರ ಉದ್ಯೋಗ ಸಿಗಬೇಕು ಎಂದು ರಣಧೀರ ಪಡೆಯ ಹರೀಶ್ ಕುಮಾರ್ ಬಿ ಅವರು 'ಜಾಬ್ ಫಾರ್ ಕನ್ನಡಿಗಾಸ್' ಎಂಬ ಘೋಷ ವಾಕ್ಯದಲ್ಲಿ ಧರಣಿ ಸತ್ಯಾಗ್ರಹ ನಡೆಸಿದಾಗ ಅದನ್ನು ವಿರೋಧಿಸಿದ್ದು ಸರ್ಕಾರವಲ್ಲ, ಬಲಪಂಥೀಯರು! ಸ್ಥಳೀಯರಿಗೆ ಉದ್ಯೋಗ ಸಿಗೋದಾದ್ರೆ ಬಲಪಂಥೀಯರು ಸಾಮಾಜಿಕ ಜಾಲತಾಣದಲ್ಲಿ ವಿರೋಧಿಸುವುದು ಯಾಕೆ? ಎಂಆರ್‌ಪಿಎಲ್‌ನಲ್ಲಿ ಖಾಲಿ ಇದ್ದ ಹುದ್ದೆಗಳಿಗೆ ನೇಮಕವಾದ ಉದ್ಯೋಗಿಗಳ ಪಟ್ಟಿ ಬಯಲಾಗಿತ್ತು. ಆ ಪಟ್ಟಿಯಲ್ಲಿ ಉತ್ತರ ಭಾರತದವರೇ ಇದ್ದರು. ಒಬ್ಬ ಉದ್ಯೋಗಿ ಮಾತ್ರ ಮಂಗಳೂರಿನವನಾಗಿದ್ದ. ಆತನೂ ಕೂಡಾ ಕೇವಲ ವಿಳಾಸದಲ್ಲಿ ಮಂಗಳೂರಿಗನಾಗಿದ್ದು ಆತ ಮೂಲತಃ ಉತ್ತರ ಪ್ರದೇಶದವನು! ಅದಕ್ಕಿಂತಲೂ ಮುಖ್ಯವಾಗಿ ನೇಮಕವಾದವರೆಲ್ಲರೂ ಬ್ರಾಹ್ಮಣರು! ಸ್ಥಳೀಯರಿಗೇ ಉದ್ಯೋಗ ಕೊಡಿ ಎಂಬ ಕನ್ನಡ ಹೋರಾಟಗಾರರ ಚಳವಳಿಗೆ ಬಲಪಂಥೀಯರು ಯಾಕೆ ವಿರೋಧ ಮಾಡುತ್ತಾರೆ ಮತ್ತು ಯಾರು ಈ ವಿರೋಧವನ್ನು ಸಂಘಟಿಸುತ್ತಾರೆ ಎಂಬುದು ನಿಮಗೀಗ ಅರ್ಥ ಆಗಿರಬಹುದು.

ಈ ಸುದ್ದಿ ಓದಿದ್ದೀರಾ?: ರಾಜ್ಯೋತ್ಸವ | ಕನ್ನಡಿಗರ ಭವಿಷ್ಯ ನಾಶ ಮಾಡುವ ಶಿಫಾರಸ್ಸುಗಳ ಬಗ್ಗೆ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ

ಕನ್ನಡ ಹೋರಾಟವನ್ನು ನಾವೂ ಕೈಗೆತ್ತಿಕೊಳ್ಳಬೇಕು ಎಂದು ಬಲಪಂಥೀಯರು ಹರಸಾಹಸಪಟ್ಟಿದ್ದರು. ಆದರೆ ಬಲಪಂಥೀಯರ ಮೂಲ ಆಶಯಕ್ಕೂ, ಕನ್ನಡ ನೆಲ ಹೊಂದಿರುವ ಆಶಯಕ್ಕೂ ಹೊಂದಿಕೆಯಾಗುತ್ತಿಲ್ಲ. ನಿಮಗೆ ನೆನಪಿರಬಹುದು. 2006 ರಲ್ಲಿ ಪಾಂಡುರಂಗ ಮೋರೆ ಎಂಬ ಬೆಳಗಾವಿಯ ಮೇಯರ್ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ ನಿರ್ಣಯ ಮಾಡಿದ್ದರು. ಆಗ ನಾರಾಯಣ ಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಈ ನಿರ್ಣಯವನ್ನು ವಿರೋಧಿಸಿ ದೊಡ್ಡ ಆಂದೋಲನ ಮಾಡಿತ್ತು. ಪಾಂಡುರಂಗ ಮೋರೆಯು ಬೆಂಗಳೂರಿನ ವಿಧಾನಸೌಧಕ್ಕೆ ಬಂದಾಗ ಈಗ ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷರಾಗಿದ್ದ, ಆಗ ಕರವೇ ಮುಖಂಡರಾಗಿದ್ದ ಬೈರಪ್ಪ ಹರೀಶ್ ಕುಮಾರ್, ಪ್ರವೀಣ್ ಕುಮಾರ್ ಶೆಟ್ಟಿ ಮೋರೆ ಮುಖಕ್ಕೆ ಮಸಿ ಬಳಿದಿದ್ದರು.‌ ಇದು ರಾಷ್ಟ್ರಾದ್ಯಂತ ಚರ್ಚೆಯಾಗಿತ್ತು. 'ಕನ್ನಡ ವಿರೋಧಿಗಳ ಮುಖಕ್ಕೆ ಮಸಿ ಬಳಿಯದೆ ಇನ್ನೇನು ಫೇರ್ ಅ್ಯಂಡ್ ಲವ್ಲಿ ಬಳಿಯಬೇಕೇ?' ಎಂದು ಪೂರ್ಣಚಂದ್ರ ತೇಜಸ್ವಿ ಪ್ರಶ್ನಿಸಿದ್ದರು. ಬೈರಪ್ಪ ಹರೀಶ್ ಕುಮಾರ್ ಜೈಲಿನಲ್ಲಿ ಇದ್ದಾಗಲೇ ಆಗಿನ ಮುಖ್ಯಮಂತ್ರಿ ಧರ್ಮಸಿಂಗ್ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಿ ನಿರ್ಣಯವನ್ನು ರದ್ದುಗೊಳಿಸಿದ್ದರು. ಇದು ಕನ್ನಡ ಹೋರಾಟದ ತಾಕತ್ತು.

ರೈತ ಮುಖಂಡ ಟಿಕಾಯತ್

ಬಲಪಂಥೀಯರು ಇತ್ತೀಚೆಗೆ ಕನ್ನಡ ಸಂಘಟನೆಯೊಂದನ್ನು ಕಟ್ಟಿದ್ದಾರೆ. ಇಡೀ ದೇಶ ಗೌರವಿಸುವ ರೈತ ಮುಖಂಡ ರಾಕೇಶ್ ಟಿಕಾಯತ್ ಬೆಂಗಳೂರಿಗೆ ಬಂದಾಗ ಟಿಕಾಯತ್ ಮುಖಕ್ಕೆ ಬಲಪಂಥೀಯ ಕನ್ನಡ ಹೋರಾಟಗಾರರು ಮಸಿ ಬಳಿದಿದ್ದರು. ಇದು ದೆಹಲಿಯಲ್ಲಿದ್ದ ಬಲಪಂಥೀಯ ನಾಯಕರಿಗೆ ಅಸಹ್ಯ ತರಿಸಿ, ಉಗ್ರ ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಪೊಲೀಸರು ಆ ಬಲಪಂಥೀಯ ಕನ್ನಡ ಹೋರಾಟಗಾರರ ಮೇಲೆ ರೌಡಿಶೀಟ್ ತೆರೆದು ಜೈಲಿಗಟ್ಟಿದ್ದರು.

ಕನ್ನಡವೆಂದರೆ ಬಲಪಂಥೀಯರಿಗೆ ಆತಂಕ.‌ ಹಾಗಾಗಿ ಬಲಪಂಥೀಯರು ಕನ್ನಡ ಹೋರಾಟಗಾರರನ್ನು ಕಂಡಾಕ್ಷಣ ವ್ಯಂಗ್ಯ ಮಾಡಲು ಶುರು ಮಾಡುತ್ತಾರೆ. ನಾಡು, ನುಡಿ, ಸ್ಥಳೀಯರಿಗೆ ಶಿಕ್ಷಣ, ಸ್ಥಳೀಯರಿಗೆ ಉದ್ಯೋಗ ಕೊಡಿ ಎಂದು ಕನ್ನಡ ಹೋರಾಟಗಾರರು ಕೇಳುವುದು 'ಬ್ರಾಹ್ಮಣ್ಯದ ಮೇಲಿನ ದಾಳಿ'ಯಂತೆ ಅವರಿಗೆ ಕಾಣುತ್ತದೆ. ಅದು ವಾಸ್ತವವೂ ಹೌದು. ಹಾಗಾಗಿ ಆತಂಕವೂ ಸಹಜವೇ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app