ಕತ್ತು ಕತ್ತರಿಸುವ ರಾಕ್ಷಸ ಮನೋಭಾವ; ಧರ್ಮದ ಅಮಲಿನಲ್ಲಿ ತೇಲಿ ಬರುವ ರಕ್ಕಸ ಅಲೆ

Udayapur

ಈ‌ ದೇಶ ಹಿಂದೂ, ಮುಸ್ಲಿಂ ಎಂಬ ಎರಡು ಸಮುದಾಯಗಳ ನಡುವಿನ ಜ್ವಾಲಾಮುಖಿಯನ್ನು ತನ್ನ ಒಡಲೊಳಗೆ ಇಟ್ಟುಕೊಂಡಿದೆ. ಅದು‌ ಅಗ್ನಿ ಪರ್ವತವಾಗಿ ಸಿಡಿಯುವ ಮುನ್ನ ಎಲ್ಲಾ ಶಾಂತಿ ಪ್ರಿಯ ಮನಸ್ಸುಗಳು ಈಗಿನಿಂದಲೇ ಪ್ರಯತ್ನಿಸಬೇಕು. ಒಮ್ಮೆ ಅದು ಆಂತರಿಕ ಯುದ್ಧವಾಗಿ ಪರಿವರ್ತನೆ ಹೊಂದಿದರೆ ಇಡೀ ದೇಶ ಮತ್ತೊಮ್ಮೆ ಕೋಮುದಳ್ಳುರಿಗೆ ಬೀಳುವುದು ಖಚಿತ.

ಕನ್ನಯ್ಯಲಾಲ್ ಕತ್ತು ಕತ್ತರಿಸಿದ ರಾಕ್ಷಸ ಮನೋಭಾವ, ಧರ್ಮದ ಅಮಲಿನಲ್ಲಿ ತೇಲಿ ಬರುವ ಒಂದು ರಕ್ಕಸ ಅಲೆ ಎಂದರೆ ಸಾಂಪ್ರದಾಯಿಕ ಮನಸ್ಥಿತಿಯವರಿಗೆ ಬೇಸರವಾಗಬಹುದು.

ದಯವೇ ಧರ್ಮದ ಮೂಲ ಆಶಯ, ದಯವಿಲ್ಲದ ಧರ್ಮ ಅದಾವುದಯ್ಯ! ಎಲ್ಲಾ ಧರ್ಮಗಳು ಶಾಂತಿ ಪ್ರೀತಿ ಸಂಯಮಗಳನ್ನೇ ಬೋಧಿಸುತ್ತವೆ. ಇದು ಧರ್ಮದ ತಪ್ಪಲ್ಲ. ಅದರ ಆಚರಣೆಗಳ ಅಥವಾ ವ್ಯಕ್ತಿಗಳ ಕ್ರೌರ್ಯ ಕಾರಣ ಎಂದು ಧರ್ಮಗಳ ಅನುಯಾಯಿಗಳು - ಪ್ರತಿಪಾದಕರು ಸಮರ್ಥಿಸುತ್ತಾರೆ.

ರಾಜಸ್ಥಾನದ ಉದಯಪುರದಲ್ಲಿ ನಡೆದ ದರ್ಜಿ ಕನ್ನಯ್ಯಲಾಲ್ ಹತ್ಯೆ ಹೊಸದೇನು ಅಲ್ಲ. ಆ ಹತ್ಯೆ ಮಾಡಿದ ವ್ಯಕ್ತಿಗಳು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿರುವ ರಕ್ತ ಸಿಕ್ತ ಮಾತುಗಳಲ್ಲಿ ಸಹ ಆಶ್ಚರ್ಯ ಪಡುವುದು ಏನೂ ಇಲ್ಲ.

ಏಕೆಂದರೆ ಧರ್ಮಗಳ ಉಗಮದೊಂದಿಗೆ ಮನುಷ್ಯರ ಪ್ರತ್ಯೇಕತೆ ಮತ್ತು ಧಾರ್ಮಿಕ ಶ್ರೇಷ್ಠತೆಯ ವ್ಯಸನ ಪ್ರಾರಂಭವಾಯಿತು. ಅದರ ಪರಿಣಾಮ ಮನುಷ್ಯರಲ್ಲಿ ಒಬ್ಬರಿಗೊಬ್ಬರು ದ್ವೇಷಿಸುವ ಕೊಲ್ಲುವ ಅಸ್ತಿತ್ವಕ್ಕಾಗಿ ಹೋರಾಟ ವಿಶ್ವದಲ್ಲಿ ನಿರಂತರವಾಗಿ ನಡೆಯುತ್ತಿದೆ. ಮಧ್ಯಕಾಲೀನ ಯುಗದಲ್ಲಿ ಇದು ಪರಾಕಾಷ್ಠೆ ತಲುಪಿತು. ನಂತರದ ವರ್ಷಗಳಲ್ಲಿ ಸ್ವಲ್ಪ ಮಟ್ಟಿಗೆ ತಹಬಂದಿಗೆ ಬಂದಿತ್ತು. ಆದರೆ ಇಪ್ಪತ್ತನೆಯ ಶತಮಾನದ ಅಂತ್ಯದಿಂದ ಮತ್ತೆ ಭಯೋತ್ಪಾದನೆಯ ಹೆಸರಿನಲ್ಲಿ ಬಾಂಬು ಬಂದೂಕುಗಳೊಂದಿಗೆ ಮತ್ತೆ ವ್ಯಾಪಕವಾಗಿ ಹರಡಿತು. ಇದು ಮಾನವ ಬಾಂಬುಗಳೆಂಬ ಅತ್ಯಂತ ಭಯಾನಕ ಮತ್ತು ಕ್ರೂರ ರೂಪ ಪಡೆಯಿತು.

ವೈಯಕ್ತಿಕ ನೆಲೆಯಾಚೆ ಮನುಷ್ಯ ಮನುಷ್ಯರನ್ನೇ ಕೊಲ್ಲುವ ಕ್ರೌರ್ಯ ಉಂಟಾಗಲು ಮೂಲ ಕಾರಣ ಧರ್ಮಗಳೆಂಬ ಅಫೀಮುಗಳು. ಈ ಮಾದಕ ದ್ರವ್ಯ ಮನುಷ್ಯನ ಯೋಚನಾ ಶಕ್ತಿಯನ್ನೇ ಕುಂದಿಸಿ, ಸ್ವತಂತ್ರ ಚಿಂತನೆಯನ್ನು ನಾಶ ಮಾಡಿ ತನ್ನ ಅಡಿಯಾಳಾಗಿ ಮಾಡಿಕೊಂಡು ಆ ಮಂಪರಿನಲ್ಲಿ ಅನೇಕ ವಿಕೃತಗಳಿಗೆ ಕಾರಣವಾಗುತ್ತದೆ.

ದುರಂತವೆಂದರೆ ಈ ಇಡೀ ಪ್ರಕ್ರಿಯೆ ದೇವರು ಎಂಬ ಭಕ್ತಿಯ ಭ್ರಮಾಲೋಕದಲ್ಲಿ ಅತ್ಯಂತ ವ್ಯವಸ್ಥಿತವಾಗಿ, ಸುಲಭವಾಗಿ, ಸರಳವಾಗಿ, ಬದುಕಿನ ಸಾರ್ಥಕ ಮನೋಭಾವದಿಂದ ನೆರವೇರಿಸಲಾಗುತ್ತದೆ. ಅದು ಯಾವ ಹಂತ ತಲುಪುತ್ತದೆ ಎಂದರೆ ಅದಕ್ಕೆ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದವರನ್ನು ಸಹ ಕೊಲ್ಲುವುದೇ ಧರ್ಮ ಎಂದು ಸಹಜವಾಗಿ ಭಾವಿಸುವಷ್ಟು. ಈ ಧಾರ್ಮಿಕ ಕ್ರೌರ್ಯ ಬೇರೆ ಬೇರೆ ಧರ್ಮಗಳಲ್ಲಿ ಬೇರೆ ಬೇರೆ ರೂಪದಲ್ಲಿ ಇದೆ ಎಂಬುದೇ ಒಂದು ಸಂಕೀರ್ಣ ವಿಷಯ. ಈ ಸಂಕೀರ್ಣತೆಯೇ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ.

ರಾಜಕೀಯ ಕಾರಣಗಳಿಗಾಗಿ ಧಾರ್ಮಿಕ ಕ್ರೌರ್ಯ

ವಿಚಿತ್ರ ನೋಡಿ, ಸಮಾಜದ ಕ್ರಮಬದ್ಧ ಮತ್ತು ಶಾಂತಿಯುತ ಮುನ್ನಡೆಗಾಗಿ, ವ್ಯಕ್ತಿಗಳ ನೆಮ್ಮದಿಯ ಬದುಕಿಗಾಗಿ ಧರ್ಮಗಳ ಉಗಮವಾಯಿತು. ಆದರೆ ಈಗ ಅದೇ ಅವನ ನಾಶಕ್ಕೂ ಕಾರಣವಾಗುತ್ತಿದೆ. ಅದಕ್ಕೆ ಪರ್ಯಾಯವಾಗಿ ಸಂವಿಧಾನವೆಂಬ ಅತ್ಯುತ್ತಮ ಮಾರ್ಗವನ್ನು ಕಂಡುಕೊಂಡ ನಂತರವೂ ಧರ್ಮದ ಪ್ರಭಾವ ಕಡಿಮೆಯಾಗಲಿಲ್ಲ. ರಾಜಕೀಯ ಕಾರಣಗಳಿಗಾಗಿ ಧಾರ್ಮಿಕ ಕ್ರೌರ್ಯ ಹೆಚ್ಚಾಗುತ್ತಿರುವುದು ಬಹಿರಂಗ ಸತ್ಯ. ಆದರೆ ಮೂಲ ಧರ್ಮ ಎಂಬುದು ಮರೆಯಾಗಿ ಮತಗಳಾಗಿ ಪರಿವರ್ತನೆ ಹೊಂದಿರುವುದೇ ಆಗಿದೆ.

ಈ‌ ದೇಶ ಹಿಂದೂ, ಮುಸ್ಲಿಂ ಎಂಬ ಎರಡು ಸಮುದಾಯಗಳ ನಡುವಿನ ಜ್ವಾಲಾಮುಖಿಯನ್ನು ತನ್ನ ಒಡಲೊಳಗೆ ಇಟ್ಟುಕೊಂಡಿದೆ. ಅದು‌ ಅಗ್ನಿ ಪರ್ವತವಾಗಿ ಸಿಡಿಯುವ ಮುನ್ನ ಎಲ್ಲಾ ಶಾಂತಿ ಪ್ರಿಯ ಮನಸ್ಸುಗಳು ಈಗಿನಿಂದಲೇ ಪ್ರಯತ್ನಿಸಬೇಕು. ಒಮ್ಮೆ ಅದು ಆಂತರಿಕ ಯುದ್ಧವಾಗಿ ಪರಿವರ್ತನೆ ಹೊಂದಿದರೆ ಇಡೀ ದೇಶ ಮತ್ತೊಮ್ಮೆ ಕೋಮುದಳ್ಳುರಿಗೆ ಬೀಳುವುದು ಖಚಿತ. ಆಗ ಅದು ನಿಯಂತ್ರಣ ಮೀರಿರುತ್ತದೆ. ನಾವು ಮತ್ತೆ ರಕ್ತ ಸಿಕ್ತ ಸಮಾಜದಲ್ಲಿ ‌ಬದುಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಕನ್ನಯ್ಯಲಾಲ್ ಪ್ರಕರಣ ಒಂದು ಎಚ್ಚರಿಕೆಯ ಗಂಟೆ. ಕೇವಲ ಭಾವೋದ್ರೇಕದ ಪ್ರತಿಕ್ರಿಯೆ ಅತ್ಯಂತ ಅಪಾಯ. ಸಮಗ್ರ ಚಿಂತನೆಯ‌ ಪ್ರೀತಿ ಸಹನೆ ಸಹಕಾರದ ವಾಸ್ತವ ಕಾರ್ಯ ಯೋಜನೆ ಖಂಡಿತ ಒಳ್ಳೆಯ ಫಲಿತಾಂಶ ನೀಡುತ್ತದೆ.

ನಾವೆಲ್ಲರೂ ರಾಜಕೀಯ ಹೊರತುಪಡಿಸಿದ ‌ವಿಶಾಲ ಮನೋಭಾವದ ಅಭಿಪ್ರಾಯ ರೂಪಿಸಿಕೊಂಡು ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸೋಣ. ವಿಶ್ವದ ಸುತ್ತಾ ಒಮ್ಮೆ ಗಮನಿಸಿ.
ನಾಗರಿಕ - ನೆಮ್ಮದಿಯ ದೇಶಗಳು ಯಾವುದು ಮತ್ತು ಏಕೆ ? ಹಾಗೆಯೇ ಅನಾಗರಿಕ - ಹಿಂಸಾತ್ಮಕ ದೇಶಗಳು ಯಾವುವು ಮತ್ತು ಏಕೆ ? ಆಗ ನಿಮಗೇ ಆ ಬದಲಾವಣೆ ಅರ್ಥವಾಗುತ್ತದೆ. ಆಗ ನಮ್ಮ ನಡೆ ಪ್ರಗತಿಯೆಡೆಗೆ ಸಾಗುತ್ತದೆ.

ಇದನ್ನು ಓದಿದ್ದೀರಾ? ಉದಯಪುರ ಘಟನೆ: ಯಾವ ಹತ್ಯೆಗಳೂ ಸಮರ್ಥನೀಯವಲ್ಲ

ಮುಖ್ಯವಾಗಿ ಎಲ್ಲಾ ರೀತಿಯ ಧಾರ್ಮಿಕ ಸಂಘಟನೆಗಳನ್ನು ನಿಷೇಧಿಸಿ ಸಾಂಸ್ಕೃತಿಕ ಶೈಕ್ಷಣಿಕ ಸಂಘಟನೆಗಳಿಗೆ, ವೈಚಾರಿಕ ಸಂಸ್ಥೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದರೆ ಬಹುಶಃ ಈ ಹಿಂಸೆ ಕಡಿಮೆಯಾಗಬಹುದು. ಜೊತೆಗೆ ಇದು ಕಾನೂನಿನ ಬಲದಿಂದ ಮಾತ್ರ ಸಾಧ್ಯವಿಲ್ಲ. ಒಟ್ಟು ಮನುಷ್ಯರ ವ್ಯಕ್ತಿತ್ವದಲ್ಲಿಯೇ ಮೂಲಭೂತ ಬದಲಾವಣೆಗಾಗಿ ಹೊಸ ಸಂಸ್ಕೃತಿಯನ್ನೇ ನಿಧಾನವಾಗಿ ಹುಟ್ಟುಹಾಕಬೇಕಿದೆ. ಇದು ಅತ್ಯಂತ ಕಠಿಣ ನಿಜ, ಆದರೆ ಅಸಾಧ್ಯವಲ್ಲ. ಪ್ರಾರಂಭಿಕ ಹಂತ ದಾಟಿದರೆ ಮುಂದೆ ಸುಲಭವಾಗಬಹುದು. ಈ ಸಂಘರ್ಷಮಯ ವಾತಾವರಣ ತಿಳಿಯಾಗಿಸಲು ನಮ್ಮ ನಮ್ಮ ನೆಲೆಯಲ್ಲಿ ನಿರಂತರವಾಗಿ ಪ್ರಯತ್ನಿಸೋಣ.

ನಿಮಗೆ ಏನು ಅನ್ನಿಸ್ತು?
9 ವೋಟ್