ಅಪರೂಪದ ಜ್ಞಾನಿಯನ್ನೂ ರಾಜಕೀಯ ದುಷ್ಟತನ ನುಂಗಿ ಹಾಕಿತ್ತಲ್ಲ !: ವಿಶ್ವಾರಾಧ್ಯ ಸತ್ಯಂಪೇಟೆ

siddeshwara

ಜನಮಾನಸವನ್ನು ಕಾಡುತ್ತಿರುವ ಹಲವಾರು ಸಮಸ್ಯೆಗಳಿಗೆ ಹುಸಿ ಆಧ್ಯಾತ್ಮವೇ ಕಾರಣ ಎಂಬ ಸತ್ಯವನ್ನು ಸಿದ್ದೇಶ್ವರರು ಹೇಳಲು ಸಾಧ್ಯವಿಲ್ಲ. ಅವರೇ ವೇದ, ಶಾಸ್ತ್ರ, ಪುರಾಣಗಳ ಹುಸಿ ಭ್ರಾಂತಿಯ ಜೋಗುಳ ಹಾಡುತ್ತಿದ್ದಾರೆ. ಸ್ವತಃ ಸಿದ್ದೇಶ್ವರರೇ ಆ ನೇಣನ್ನು ಕಟ್ಟಿಕೊಂಡಿರುವಾಗ ಲಿಂಗಾಯತರಿಗೆ ಅಜ್ಞಾನದ ತೊಟ್ಟಿಲು ಮುರಿಯಲು ಹೇಳಿಕೊಡಲು ಸಾಧ್ಯವೇ ?

ಕವಿತ್ವ ಸಾಧಕರೆಲ್ಲ ಕಳವಳಿಸಿ ಕೆಟ್ಟರು
ವಿದ್ಯಾ ಸಾಧಕರೆಲ್ಲರು ಬುದ್ಧಿ ಹೀನರಾದರು
ಪವನ ಸಾಧಕರೆಲ್ಲ ಹದ್ದು ಕಾಗೆಗಳಾದರು.
ಜಲ ಸಾಧಕರೆಲ್ಲ ಕಪ್ಪೆ ಮೀನಗಳಾದರು
ಅನ್ನ ಸಾಧಕರೆಲ್ಲರು ಭೂತ ಪ್ರಾಣಿಗಳಾದರು
ಬಸವಣ್ಣ, ಸದ್ಗುರು ಸಾಧಕನಾಗಿ
ಸ್ವಯ ಲಿಂಗವಾದ ಕಾಣಾ ಗುಹೇಶ್ವರಾ.

ಕನ್ನಡ ನಾಡಿನ ನಡೆದಾಡುವ ದೇವರು, ವಾಗ್ಮಿ ಎಂದು ಬಹುಸಂಖ್ಯಾತ ಜನರಿಂದ ಕರೆಯಿಸಿಕೊಳ್ಳುವ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಪ್ರಧಾನಿ ನರೇಂದ್ರ ಮೋದಿಯವರು ಬಂದಾಗ ‘ಮೋದಿಯವರನ್ನು ನೋಡುವುದೇ ಸೌಭಾಗ್ಯ. ಇಂತಹ ಪ್ರಧಾನಿ ದೊರೆತದ್ದು ದೇಶದ ಸುದೈವ. ದೇಶಕಂಡ ಬಹಳ ಅಪರೂಪದ ಪ್ರಧಾನಿ’ ಎಂದು ಹೊಗಳಿದ ಸಂಗತಿ ಮಾಧ್ಯಮಗಳಲ್ಲಿ ಪ್ರಕಟವಾಗಿವೆ.

ಸಿದ್ದೇಶ್ವರ ಸ್ವಾಮೀಜಿ ಮೋದಿಯವರನ್ನು ಹೊಗಳಿದ್ದು ಹಲವಾರು ಪ್ರಶ್ನೆ- ಆಶ್ಚರ್ಯಗಳಿಗೆ ಕಾರಣವಾಗಿವೆ. ಮೊದಲಿನಿಂದಲೂ ಅವರ ಪ್ರವಚನ ಹಾಗೂ ಚಿಂತನೆಗಳನ್ನು ಬಲ್ಲ ನನಗೆ ಇದೇನೂ ಹೊಸದೆಂದು ಅನಿಸಲೇ ಇಲ್ಲ. ಏಕೆಂದರೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಎಲ್ಲರೂ ಬಲ್ಲಂತೆ ಅದ್ಭುತವಾದ ವಾಕ್ ಚಾತುರ್ಯ ಹೊಂದಿರುವವರು. ಪ್ರೇಕ್ಷಕರನ್ನು ತಮ್ಮ ಮಾತುಗಳ ಮೂಲಕ ಹಿಡಿದಿಡುವ ಶಕ್ತಿಯನ್ನು ಹೊಂದಿದವರು. ಜ್ಞಾನಿಗಳು ಈ ಬಗ್ಗೆ ಯಾರಿಗೂ ತಕರಾರು ಇರಲಿಕ್ಕೆ ಸಾಧ್ಯವೆ ಇಲ್ಲ. ಸಮಯವನ್ನು ಪರಿಪಾಲನೆ ಮಾಡುವಲ್ಲಿ ಅವರದು ಎತ್ತಿದ ಕೈ. ಅವರ ಪ್ರವಚನದ ಆರಂಭ ಹಾಗೂ ಮುಕ್ತಾಯದ ಸಮಯವನ್ನು ನೋಡಿ ಗಡಿಯಾರದ ಮುಳ್ಳು ಸರಿಪಡಿಸಿಕೊಳ್ಳಬೇಕು ಎಂಬ0ತೆ ಅವರ ನಡತೆ, ಇದರಲ್ಲಿ ಎರಡು ಮಾತೇ ಇಲ್ಲ.

ವಚನಸಾಹಿತ್ಯ ಸಾರ ಬಿತ್ತುವಲ್ಲಿ ಸೋತ ಸ್ವಾಮೀಜಿ

ಆದರೆ, ಅವರ ಪ್ರವಚನಗಳು ಎಷ್ಟು ಜನರನ್ನು ಪ್ರಭಾವಿಸಿ, ಅವರ ಜೀವನವನ್ನು ಬದಲಿಸಿವೆ ? ಎಂದು ಪ್ರಶ್ನೆಗಳನ್ನು ಹಾಕಿಕೊಂಡು ಹೊರಟರೆ ಖಂಡಿತ ನಿರಾಶೆ ಉಂಟಾಗುತ್ತದೆ. ಹನ್ನೆರಡನೆಯ ಶತಮಾನದ ಜ್ಞಾನದ ನಿಧಿ ಅಲ್ಲಮಪ್ರಭುವಿನ ವಚನಗಳಿಗೆ ನಿರ್ವಚನ ಬರೆದು ಎಲ್ಲರಿಂದಲೂ ಸೈ ಎನಿಸಿಕೊಂಡವರು. ಪ್ರಶಸ್ತಿ, ಪದವಿಗಳಿಂದ ಬಹಳ ದೂರ ಇರುವವರು. ಸರಳವಾಗಿ ಬದುಕಿ ಎಲ್ಲರಿಗೂ ಆದರ್ಶರಾದವರು. ತಮಾಷೆಯೆಂದರೆ ತಮ್ಮ ಜೀವನದ ಸರಳತೆಗೆ, ಆಧ್ಯಾತ್ಮದ ಎತ್ತರಕ್ಕೆ ಏರಲು ಸಹಾಯಕವಾದ ಅಲ್ಲಮ, ಬಸವಣ್ಣ, ತುರುಗಾಯಿ ರಾಮಣ್ಣ, ಮಾದಾರ ಚೆನ್ನಯ್ಯ, ಶಿವಶರಣೆ ಅಕ್ಕಮಹಾದೇವಿ ಮುಂತಾದವರ ವಚನ ಸಾಹಿತ್ಯದ ಎತ್ತರ ಬಿತ್ತರಗಳನ್ನು, ಶರಣರ ಜನ ಪರ ನಿಲುವುಗಳನ್ನು ಸಾಮಾನ್ಯರಿಗೆ ತಿಳಿಸಿಕೊಡುವಲ್ಲಿ ಸಿದ್ದೇಶ್ವರ ಸ್ವಾಮೀಜಿ ಸೋತಿದ್ದಾರೆ ಎನ್ನಲೇಬೇಕಾಗಿದೆ.

ಆಧ್ಯಾತ್ಮದ ಮೇರು ಪರ್ವತವೇ ಆದ ಅಲ್ಲಮಪ್ರಭುಗಳು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆರೆಯುತ್ತಿದ್ದ, ಸಮಾಜ ಬದಲಾವಣೆಗೆ ಕ್ಷಣ ಕ್ಷಣಕ್ಕೂ ಹಾತೊರೆಯುತ್ತಿದ್ದ ಬಸವಣ್ಣನವರನ್ನು ಹುಡುಕಿಕೊಂಡು ಬಂದದ್ದು ಸಾಮಾನ್ಯವಲ್ಲ. ಬಸವಣ್ಣನವರಿಗಿಂತಲೂ ಹಿಂದೆ ಪವನ ಸಾಧಕರು, ಜಲ ಸಾಧಕರು, ಅನ್ನ ಸಾಧಕರು, ವಿದ್ಯೆ ಸಾಧಕರು ಸಾಕಷ್ಟು ಸಂಖ್ಯೆಯಲ್ಲಿ ಇದ್ದರು. ಆದರೆ ಬಸವಣ್ಣನವರಂತೆ ಅವರಾರು ಸ್ವಯಂ ಲಿಂಗವಾಗಿರಲಿಲ್ಲ. ಯಾರ ತುಡಿತ ತಳ ಸಮುದಾಯದ ಕಡೆಗೆ, ನಿರ್ಲಕ್ಷಿತರ ಎಡೆಗೆ, ಶೋಷಣೆಗೆ ಒಳಗಾದವರ ಕಡೆಗೆ ನೀರಾಗಿ ಹರಿಯುವುದಿಲ್ಲವೋ ಅವರ ಪಾಂಡಿತ್ಯವೆಲ್ಲ ಆಕಾಶದ ಮಾವಿನ ಫಲದಂತೆ. ಕೊಯ್ಯಲಿಲ್ಲ, ಮೆಲ್ಲಲಿಲ್ಲ. ಕೂಡಲ ಸಂಗನ ಶರಣರ ಅನುಭಾವವಿಲ್ಲದರು ಎಲ್ಲಿದ್ದಡೇನು ಎಂತಾದಡೇನು ?

ಹೊತ್ತಾರೆ ಎದ್ದುಕಣ್ಣ ಹೊಸೆಯುತ್ತ
ಎನ್ನ ಒಡಲಿಂಗೆ, ಎನ್ನ ಒಡವೆಗೆಂದು
ಎನ್ನ ಮಡದಿ ಮಕ್ಕಳಿಗೆಂದು
ಕುದಿದೆನಾದಡೆ ಎನ್ನ ಮನಕ್ಕೆ ಮನವೆ ಸಾಕ್ಷಿ

ಎಂಬ ಬಸವಣ್ಣನವರ ವಚನದ ಸಾಲುಗಳನ್ನು ಸಿದ್ದೇಶ್ವರ ಸ್ವಾಮೀಜಿಗಳು ಮರೆತು ಬಿಟ್ಟಿದ್ದಾರೆ. ಹೀಗಾಗಿಯೆ ಮೋದಿಯವರನ್ನು ಹಾಡಿ ಹೊಗಳಿದ್ದಾರೆ. ಸತ್ಯವೆಂಬುದು ಸತ್ ಶೀಲ ಎಂದು ಅವರೆ ಆಗಾಗ ಪ್ರವಚನಗಳಲ್ಲಿ ಹೇಳುವ ಎದೆಗಾರಿಕೆಯನ್ನು ಅವರು ತೋರದೆ ಇದ್ದದ್ದು ದುರಂತ. ಧೃತಿಗೆಟ್ಟು ಅನ್ಯರ ಬೇಡದಂತೆ, ಮತಿಗೆಟ್ಟು ಪರರ ಹೊಳದಂತೆ ಎನ್ನ ಪ್ರತಿಪಾಲಿಸು ಕೂಡಲ ಸಂಗಮದೇವಾ ಎಂಬ ವಚನಗಳನ್ನು ಜೀರ್ಣಿಸಿಕೊಳ್ಳುವ ಎದೆಗಾರಿಕೆ ಸಿದ್ದೇಶ್ವರ ಸ್ವಾಮೀಜಿಗಳಿಗೆ ಇಲ್ಲ.

Image
ಸಿದ್ದೇಶ್ವರ ಸ್ವಾಮೀಜಿಯವರ ಮಠದ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ
ಸಿದ್ದೇಶ್ವರ ಸ್ವಾಮೀಜಿಯವರ ಮಠದ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ

ಸೂಲಿಬೆಲಿ ಚಕ್ರವರ್ತಿಯಂಥ ಹುಸಿ ಭಕ್ತನನ್ನು ತಮ್ಮ ಹಲವಾರು ಸಭೆಗಳಿಗೆ ಕರೆಯಿಸಿ ಆತನಿಂದ ಜನತೆಗೆ ದೇಶ ಭಕ್ತಿಯ ಕುರಿತು ಹೇಳಲು ಅವಕಾಶ ಕೊಡುವ ಸಿದ್ದೇಶ್ವರ ಸ್ವಾಮೀಜಿಗಳ ಮನದ ಇಂಗಿತ ಏನೆಂಬುದು ಅತ್ಯಂತ ಸ್ಪಷ್ಟವಾಗಿ ಯಾರಿಗಾದರೂ ಗೋಚರವಾಗುತ್ತದೆ. ಭಕ್ತಿಯೆಂಬುದು ತೋರುಂಬ ಲಾಭ ಎಂದು ಹುಸಿ ದೇಶ ಪ್ರೇಮವನ್ನು ಪ್ರಕಟಿಸಿ ಬದುಕುತ್ತಿರುವ ಜನರನ್ನು ಸಾಕುತ್ತಿರುವ ಸಿದ್ದೇಶ್ವರ ಸ್ವಾಮಿಗಳ ನಿಯತ್ತು ಯಾವುದು ಎಂಬುದು ಅಗೋಚರವೆನಲ್ಲ.

ಚಾತುರ್ ವರ್ಣಗಳನ್ನು ನಾನೇ ಸೃಷ್ಟಿಸಿದ್ದೇನೆ ಎಂದು ಹೇಳುವ ಭಗತ್ ಗೀತೆಯನ್ನು ಪುಂಖಾನು ಪುಂಕವಾಗಿ ತಮ್ಮ ಸಭೆಗಳಲ್ಲಿ ಹೇಳುವ ಸಿದ್ದೇಶ್ವರ ಸ್ವಾಮಿಗಳು ಬಸವಣ್ಣನವರ ಗೀತವ ಹಾಡಿದಡೇನು ? ಶಾಸ್ತ್ರ  ಪುರಾಣಗಳ ಕೇಳಿದಡೇನು ? ವೇದ ವೇದಾಂತವ ಓದಿದಡೇನು ? ಎಂಬ ಮಾತುಗಳನ್ನು ಮುದ್ದಾಂ ಜನರಿಂದ ಮರೆ ಮಾಡುತ್ತಾರೆ. ಪ್ರವಚನ ಅಫೀಮು ಅಲ್ಲ. ಜನರೊಳಗಿನ ದ್ವಂದ್ವಗಳಿಗೆ, ಹಲವಾರು ಸಂಶಯಗಳಿಗೆ, ಅಜ್ಞಾನಿಗಳಿಗೆ ಜ್ಞಾನವನ್ನು ಧಾರೆಯೆರೆಯಬೇಕಾದ ಸಿದ್ದೇಶ್ವರ ಸ್ವಾಮೀಜಿಗಳು ಎಲ್ಲಾ ಗೊತ್ತಿದ್ದೂ ಸುಮ್ಮನಿರುತ್ತಾರಲ್ಲ, ಇದು ಅವರಿಗೆ ಅವರೆ ಮಾಡಿಕೊಂಡ ದ್ರೋಹವಾಗುವುದಿಲ್ಲವೆ ?

ʼಭಾರಿ ಪ್ರವಚನ ರೀ... ಜನ ಜಂಗುಳಿ ನೋಡಬೇಕು...

ನನ್ನ ತಂದೆ ಲಿಂಗಣ್ಣ ಸತ್ಯಂಪೇಟೆಯವರ ಮೇಲೆ ಸಿದ್ದೇಶ್ವರ ಸ್ವಾಮೀಜಿಗಳಿಗೆ ಪ್ರೀತಿ. ಅವರ ಹಲವಾರು ಪ್ರವಚನಗಳಿಗೆ ಅಪ್ಪ ಕೇಳಲು ಹೋದಾಗ ಅವರನ್ನೆ ಮಾತಾಡಲು ಹಚ್ಚಿ ಖುಷಿ ಪಟ್ಟವರು. ಮೆಲು ಮಾತಿನಲ್ಲಿ ಅಪ್ಪನೊಂದಿಗೆ ಮಾತಾಡುತ್ತ, ಲಿಂಗಣ್ಣ ನೀನು ಅಪ್ರತಿಮ ಧೈರ್ಯವಂತ ! ಎಂದೂ ಹೇಳಿದವರು. ಆದರೆ, ಆ ಧೈರ್ಯವನ್ನವರು ಎಂದು ತೋರಿದವರಲ್ಲ. ಒಂದು ಸಲ ನಾನು ಸಹ ಅವರ ಒಂದು ತಿಂಗಳ ಪ್ರವಚನ ಕೇಳಿದೆ. ಸಮೂಹ ಸನ್ನಿಗೆ ಒಳಗಾದವರಂತೆ ಜನ ತಂಡೋಪ ತಂಡವಾಗಿ ಬಂದು ಸೇರುತ್ತಿತ್ತು. ಅವರಲ್ಲಿ ಹಲವರನ್ನು ಪ್ರಶ್ನಿಸಿದೆ. ಪ್ರವಚನ ಹೇಗಿದೆ ? ಎಂದು. ʼಭಾರಿ ಪ್ರವಚನ ರೀ. ಜನ ಜಂಗುಳಿ ನೋಡಬೇಕು. ಎನ್ ಸಮಯಕ್ಕೆ ಬೆಲೆ ಕೊಡ್ತಾರಿ ಅಪ್ಪೋರು. ಅವರನ್ನ ನೋಡಿ ಸಮಯ ತಿಳಕೋಬೇಕುʼ ಎಂದು ಅಭಿಮಾನ ಗೌರವಗಳಿಂದ ಹೇಳಿದರು. ಆಗ ನಾನು ಅವರಿಂದಲೇ ಸತ್ಯ ಹೊರಬರಲಿ ಎಂದು ಕೆಣಕಿದೆ.

ಪೂಜ್ಯ ಸಿದ್ದೇಶ್ವರ ಅಪ್ಪಗಳ ಪ್ರವಚನದಲ್ಲಿ ಏನೇನು ಹೇಳ್ತಾರೆ ? ನಿಮಗೆ ಅವರ ಯಾವ ಮಾತು ಹೆಚ್ಚು ಪ್ರಭಾವಿಸಿತು? ಎಂದು ಕೇಳಿದೆ. ʼಅದನ್ನು ಹೇಳ್ಲಿಕ್ಕೆ ನಮಗ ಆಗೋದಿಲ್ಲರೀ. ನೀವಾ ಅಲ್ಲಿ ಬಂದು ಕೇಳಬೇಕು ಎಂದು ಪುಚಿಗೊಳ್ಳುವ ಮಾತಾಡಿದರು. ಆ ಪ್ರವಚನ ಕೇಳುಗರ ಮಾತು ಇಷ್ಟೆ: ಸಿದ್ದೇಶ್ವರ ಸ್ವಾಮಿಗಳ ಮಾತುಗಳಲ್ಲಿ ಹಕ್ಕಿ, ಹಳ್ಳ, ಕೊಳ್ಳ, ಪ್ರಾಣಿ, ನೀರು, ಗಾಳಿ, ಬೆಳಕು, ಗಿಡ ಗಂಟೆ ಮುಂತಾದವುಗಳೇ ಹೆಚ್ಚು ಸದ್ದು ಮಾಡುತ್ತವೆ. ಜೀವ ಜಗತ್ತಿನ ವಾಸ್ತವ ಸಂಗತಿಗಳನ್ನು ತಿಳಿಸಿಕೊಡುವಲ್ಲಿ ಸಂಪೂರ್ಣ ಸೋಲುತ್ತಾರೆ. ಡಾ. ಶಿವರಾಮ ಕಾರಂತರು ಹೇಳುವಂತೆ ತಿಳಿಯದವರು ತಿಳಿಯದವರಿಗೆ ತಿಳಿಯದಂತೆ ಹೇಳುವುದೆ ವೇದಾಂತ ಎಂಬ ಧಾಟಿಯಲ್ಲಿ ಸಿದ್ದೇಶ್ವರ ಸ್ವಾಮಿಗಳ ಪ್ರವಚನ ಇರುತ್ತದೆ.

ಒಂದು ಸಲ ನಾನು ಅವರಿರುವಲ್ಲಿಗೆ ಹೋಗಿ ʼಅಜ್ಞಾನವೆಂಬ ತೊಟ್ಟಿಲೊಳಗೆ ಜ್ಞಾನವೆಂಬ ಶಿಶುವ ಮಲಗಿಸಿ,
ಸಕಲ ವೇದ ಶಾಸ್ತ್ರವೆಂಬ ನೇಣ ಕಟ್ಟಿ ಹಿಡಿದು ತೂಗಿ
ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆ0ಬ ತಾಯಿ !
ತೊಟ್ಟಿಲು ಮುರಿದು ನೇಣ ಹರಿದು, ಜೋಗುಳ ನಿಂದಲ್ಲದೆ
ಗುಹೇಶ್ವರನೆ0ಬ ಲಿಂಗವ ಕಾಣಬಾರದುʼ ಎಂಬ ಅಲ್ಲಮಪ್ರಭುಗಳ ವಚನವನ್ನು ನಿರ್ವಚಿಸುವಂತೆ ಕೇಳಿಕೊಂಡೆ. ಸರ ಸರ ನಡೆದು ಹೋಗುತ್ತಿದ್ದವರೆ ಈ ವಚನವನ್ನು ನನ್ನಿಂದ ಕೇಳಿ ಅಪ್ಪ ಲಿಂಗಣ್ಣನಿಗೆ ಕೊನೆಗೆ ಏನಾಯಿತು?! ಎಂದು ಪ್ರಶ್ನಾರ್ಥಕವಾಗಿ ನನ್ನತ್ತ ನೋಡಿ ಮುನ್ನಡೆದು ಬಿಟ್ಟರು. ಆಗ ನನಗೆ ಕಡಕೋಳ ಮಡಿವಾಳಪ್ಪನವರ ಪದ್ಯ ‘ಹೆಂಗ ಮಹಾಂತನಾಗುತೀ. ನೀ ಹೆಂಗ ಭ್ರಾಂತಿ ನೀಗುತಿ ಹಂಗ ಹಿಂಗ ಹೊತ್ತುಗಳೆದು ನೀ ಹಿಂಗ ಸತ್ತು ಹೋಗುತಿ’ ನೆನಪಾಯಿತು.

ವೇದ ಪುರಾಣದ ಹುಸಿ ಭ್ರಾಂತಿ ಬಿತ್ತುತ್ತಾ...

ಅಜ್ಞಾನ ಅಂಧಕಾರ, ಕಂದಾಚಾರ, ಮೌಢ್ಯಗಳ ಬಲೆಯಲ್ಲಿ ಬಿದ್ದು ಒದ್ದಾಡುತ್ತಿರುವ ಬಸವ ಪ್ರಣೀತ ಲಿಂಗಾಯತ ಧರ್ಮಿಯರು ಈಗಾಗಲೆ ಸಕಲ ವೇದ ಶಾಸ್ತ್ರವೆಂಬ ನೇಣಿಗೆ ಬಲಿಯಾಗಿದ್ದಾರೆ. ಜನ ಮಾನಸವನ್ನು ತಿಕ್ಕಿ ಮುಕ್ಕಿ ಕಾಡುತ್ತಿರುವ ಹಲವಾರು ಸಮಸ್ಯೆಗಳಿಗೆ ಹುಸಿ ಆಧ್ಯಾತ್ಮವೇ ಕಾರಣ ಎಂಬ ಸತ್ಯವನ್ನು ಸಿದ್ದೇಶ್ವರ ಸ್ವಾಮಿಗಳು ಹೇಳಲು ಸಾಧ್ಯವಿಲ್ಲ. ಬದಲಾಗಿ ಜನತೆಯನ್ನು ವೇದ ಶಾಸ್ತ್ರ, ಪುರಾಣಗಳ ಹುಸಿ ಕಲ್ಪನೆಯ ಭ್ರಾಂತಿಯ ಜೋಗುಳ ಹಾಡುತ್ತಿದ್ದಾರೆ. ಸ್ವತಃ ಸಿದ್ದೇಶ್ವರ ಸ್ವಾಮಿಗಳೆ ಆ ನೇಣನ್ನು ಕಟ್ಟಿಕೊಂಡಿರುವಾಗ ಲಿಂಗಾಯತ ಧರ್ಮಿಯರಿಗೆ ಅಜ್ಞಾನದ ತೊಟ್ಟಿಲು ಮುರಿಯಲು ಹೇಳಿಕೊಡಲು ಸಾಧ್ಯವೆ ? ಪ್ರವಚನಗಳ ಮೂಲಕ ಲಿಂಗಾಯತರನ್ನು ಜೋಗುಳ ಹಾಡಿಸಿ ಮಲಗಿಸುತ್ತಿರುವುದರಿಂದ ಗುಹೇಶ್ವರನೆಂಬ ಲಿಂಗ ಕಾಣುವುದು ಯಾವಾಗ ?

Image
ಪ್ರವಚನ ನೀಡುತ್ತಿರುವ ಸಿದ್ದೇಶ್ವರ ಸ್ವಾಮಿ
ಪ್ರವಚನ ನೀಡುತ್ತಿರುವ ಸಿದ್ದೇಶ್ವರ ಸ್ವಾಮಿ

ಸಿದ್ದೇಶ್ವರ ಸ್ವಾಮೀಜಿ ಬಸವಣ್ಣನವರ ಎತ್ತರಕ್ಕೆ ಏರಿ ನಿಲ್ಲಲು ಸಾಧ್ಯವಿಲ್ಲ. ಅವರಂತೆ ‘’ನಿಮ್ಮ ನಿಲುವಿಂಗೆ ಕುದಿವೆನಲ್ಲದೆ, ಎನ್ನ ಒಡಲ ಅವಸರಕ್ಕೆ ಕುದಿದೆನಾದಡೆ ತಲೆದಂಡ ತಲೆದಂಡ ಕೂಡಲ ಸಂಗಮದೇವಾ’’ ಎಂಬ ಕ್ಷಾತ್ರತೇಜದ ಮಾತು ಸಾಧ್ಯವಿಲ್ಲ. ಹೀಗಾಗಿಯೇ ಮೋದಿಯಂಥ ಜೀವ ವಿರೋಧಿ ಹಾಗೂ ಒಳಗೊರಗೆ ಒಂದಾಗದವರನ್ನು ಹಾಡಿ ಹೊಗಳುವ ಪ್ರಮೇಯ ಇಂಥವರಿಗೆ ಉಂಟಾಗುತ್ತದೆ. ಇದು ಆಶ್ಚರ್ಯವೇನಲ್ಲ.

ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮೀಜಿಗಳ ಇಬ್ಬರು ಶಿಷ್ಯರಲ್ಲಿ ಲಿಂಗೈಕ್ಯ ಲಿಂಗಾನಂದ ಮಹಾಸ್ವಾಮೀಜಿ ಮತ್ತೊಬ್ಬರು ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು. ಒಬ್ಬರು ಸಾಮಾಜಿಕ ಕ್ರಾಂತಿಯ ಚಿಂತನೆಗಳನ್ನು ಜನ ಮಾನಸಕ್ಕೆ ತಲುಪಿಸುತ್ತಿದ್ದರೆ ಇನ್ನೊಬ್ಬರ ಭಾರತೀಯ ಸಂಸ್ಕೃತಿಯ ಆಧ್ಯಾತ್ಮದ ನಿಲುವುಗಳನ್ನು ಪ್ರಚುರ ಪಡಿಸುತ್ತ ಹೊರಟವರು. ಒಬ್ಬರು ಜನರ ಮನದ ಮೈಲಿಗೆಯ ಬಹಿರ್ಮುಖವನ್ನು ತೊಳೆಯಲು ಉತ್ಸುಕರಾಗಿ ನಿಂತರೆ, ಮತ್ತೊಬ್ಬರು ಜನರ ಅಂತರ್ಮುಖ ಚಿಂತನೆಗಳನ್ನು ಬದಲಿಸಲು ಇಡೀ ಬದುಕನ್ನು ಕಳೆದವರು. ದೇವರು ಧರ್ಮದ ಚಿಹ್ನೆಗಳನ್ನೇ ಒಪ್ಪದಿದ್ದ ಪೂಜ್ಯ ಲಿಂಗಾನಂದ ಮಹಾಸ್ವಾಮೀಜಿಯನ್ನು ಬದಲಿಸಿ ಆ ಧಾರ್ಮಿಕ ಚಿಹ್ನೆಗಳ ಮೂಲಕವೇ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದವರು ಪೂಜ್ಯ ಶ್ರೀ ಮಲ್ಲಿಕಾರ್ಜುನ ಗುರುಗಳು. ಪೂಜ್ಯ ಮಾತೆ ಮಹಾದೇವಿ ಅವರಿಗೆ ಮಹಿಳಾ ಜಗದ್ಗುರು ಎಂಬ ಪಟ್ಟವನ್ನು ಕಟ್ಟಿ, ಅವರನ್ನು ಆ ಪೀಠಕ್ಕೆ ಕುಳ್ಳಿರಿಸಿ ಹರ್ಷಪಟ್ಟವರು. ಮಹಿಳೆಯೂ ಜಗದ್ಗುರು ಪಟ್ಟವನ್ನು ಏರಬಹುದು ಎಂದು ನಿರೂಪಿಸಿದವರು.

ಇದನ್ನು ಓದಿದ್ದೀರಾ? ಸಿದ್ದೇಶ್ವರರು ಮೋದಿಯನ್ನು ಹೊಗಳದೇ, ಸಮಾನತೆಗಾಗಿ ತನ್ನಿಡಿ ಬದುಕನ್ನೇ ಸವೆಸಿದ ಬಸವಣ್ಣನ ಹೊಗಳಲು ಸಾಧ್ಯವೇ?

ಸಿದ್ದೇಶ್ವರ ಸ್ವಾಮೀಜಿ ತಮ್ಮ ಜೀವನದ ಉದ್ದಕ್ಕೂ ಕಾವಿ ಧರಿಸದೆ ಒಳಗೊಳಗೆ ಕಾವಿತ್ವದ ಅಮಲನ್ನು ಪ್ರತಿಭಟಿಸಿದವರು. ಸ್ವಾಮೀಜಿಗಳು ಧರಿಸುವಂತೆ ಕಡಾವು ಹಾಕಿದವರಲ್ಲ, ಪಾದ ಪೂಜೆ ಮಾಡಿಸಿಕೊಂಡವರಲ್ಲ. ಸ್ವಾಮೀತ್ವದ ಲಾಂಛನಗಳನ್ನು ಒಪ್ಪದೆ ಅದನ್ನು ಕಾಯ್ದುಕೊಂಡು ಬಂದವರು.

ಅನುಕರಣೀಯ ನಡವಳಿಕೆಯ ಮೂಲಕ ಜನ ಮಾನಸವನ್ನು ಸೂರೆಗೊಂಡವರು. ಯಾವ ಪಕ್ಷದ ರಾಜಕೀಯ ನಾಯಕರಿಗೂ ಬಳಕೆಯಾಗದೆ ತಮ್ಮ ಜೀವನವನ್ನು ಕಾಪಿಟ್ಟು ಕಾಯ್ದುಕೊಂಡು ಬಂದವರಿವರು. ತೀರಾ ಇತ್ತೀಚೆಗೆ ಅಪಘಾತವೊಂದರಲ್ಲಿ ದೈಹಿಕ ಪೆಟ್ಟಿಗೆ ಗುರಿಯಾಗಿದ್ದರು. ಆ ದೈಹಿಕ ನೋವು ಮಾಯವಾಗಿರಬಹುದು. ಆದರೆ, ಅವರು ನಾಡಿನ ಜನತೆಗೆ ಕೊಟ್ಟ ಮಾನಸಿಕ ಹೊಡೆತ ಆತಂಕ ಉಂಟು ಮಾಡಿದೆ.

ಒಂದು ನಿಮಿಷ್ಯದ ಉದಾಸೀನ ಆಯುಷ್ಯವ ಕೆಡಿಸಿತ್ತು ಎಂಬಂತೆ ರಾಜಕೀಯ ವ್ಯಕ್ತಿಯನ್ನು ಹೊಗಳುವ ಮೂಲಕ ತಮ್ಮ ವ್ಯಕ್ತಿತ್ವವನ್ನೆ ಪ್ರಶ್ನಿಸುವಂತೆ ಮಾಡಿಕೊಂಡ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಬಗ್ಗೆ ನನಗೆ ಈಗಲೂ ಖೇದವಿದೆ. ನಾಡಿನ ಅಪರೂಪದ ಜ್ಞಾನಿಯನ್ನೂ ರಾಜಕೀಯ ದುಷ್ಟತನ ನುಂಗಿ ಹಾಕಿತ್ತಲ್ಲ, ಎಂಬ ನೋವು ಇದೆ. ಒಲೆ ಹತ್ತಿ ಉರಿದೊಡೆ ನಿಲಬಹುದಲ್ಲದೆ, ಧರೆ ಹತ್ತಿ ಉರಿದೊಡೆ ನಿಲಬಹುದೆ ?

ನಿಮಗೆ ಏನು ಅನ್ನಿಸ್ತು?
12 ವೋಟ್