ಕಬ್ಬು ಬೆಳೆಗೆ ದರ ನಿಗದಿ -2 | ಎಸ್‌ಎಪಿ, ಎಫ್‌ಆರ್‌ಪಿ ಎಂದರೇನು? ರೈತರಿಗೆ ಆಗುತ್ತಿರುವ ದ್ರೋಹವೇನು?

ಕಬ್ಬು ಬೆಳೆಗಾರ, ಎಫ್‌ಆರ್‌ಪಿ ದರ

ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕರ್ನಾಟಕಗಳಲ್ಲಿ ಹೆಚ್ಚಿರುವ ಕಬ್ಬು ಬೆಳೆಗಾರರಿಗೆ ದೆಹಲಿಯ ಅಧಿಕಾರದ ಕಾರಿಡಾರುಗಳ ಮೇಲೆ ಪ್ರಭಾವ ಬೀರುವ ಶಕ್ತಿ ಇರುವುದಿಲ್ಲ. ಹಾಗಾಗಿ, ಕೇಂದ್ರ ಸರ್ಕಾರ ಏನೇ ದರ ನಿಗದಿ ಮಾಡಿದರೂ, ರೈತರು ರಾಜ್ಯ ಸರ್ಕಾರಗಳ ಮೇಲೆ ಹೋರಾಟದ ಪ್ರಭಾವ ಬೀರಿ, ದರ ಹೆಚ್ಚಳಕ್ಕೆ ಪಟ್ಟು ಹಿಡಿಯುತ್ತಿದ್ದರು.

ಕಬ್ಬು ಬೆಳೆಯ ಬೆಲೆ ನಿಗದಿ ಮಾಡುವುದು ಸರ್ಕಾರ. ಅದಕ್ಕೆಂದೇ ಪ್ರತ್ಯೇಕ ಇಲಾಖೆ, ಸಮಿತಿಗಳಿವೆ. ಪ್ರತಿ ವರ್ಷವೂ ಈ ವಿಚಾರದ ಕುರಿತು ಕೇಳಿಬರುವ ಕೆಲವು ಪದಗಳಿವೆ. ಅವೇ ಎಫ್‌ಆರ್‌ಪಿ, ಎಸ್‌ಎಪಿ. ಕೆಲವು ವರ್ಷಗಳ ಹಿಂದೆ ಎಸ್‌ಎಂಪಿ ಎಂಬ ಇನ್ನೊಂದು ಪದವನ್ನೂ ಕಬ್ಬು ಬೆಳೆಗಾರರ ಸಂಘಟನೆಗಳು ಬಳಸುತ್ತಿದ್ದವು.

Eedina App

ಈ ಪದಗಳು ಕೇವಲ ಯಾವುದೋ ಇಂಗ್ಲಿಷ್‌ ಪದಗಳ ಸಂಕ್ಷಿಪ್ತ ರೂಪ ಅಲ್ಲ. ಇವುಗಳ ಹಿಂದೆ ರೈತರು, ಸಕ್ಕರೆ ಕಾರ್ಖಾನೆಗಳ ಮಾಲೀಕರ ಮಧ್ಯೆ ನಡೆಯುವ ಸಂಘರ್ಷದ ಕಥಾನಕವೂ ಇದೆ.

ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಆಗಿದ್ದ ರಂಗರಾಜನ್‌ ಅವರ ನೇತೃತ್ವದಲ್ಲಿ ನೇಮಿಸಲಾದ ಸಮಿತಿಯ ಶಿಫಾರಸ್ಸಿನ ನಂತರದಲ್ಲಿ ಈ ಪದಗಳಲ್ಲಿ ಕೆಲವು ಬದಲಾವಣೆಗಳೂ ಬಂದವು. ಕಬ್ಬು ಬೆಳೆಗಾರರ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕೆಂದರೆ, ಈ ಪದಗಳನ್ನೂ ಅರ್ಥ ಮಾಡಿಕೊಳ್ಳಬೇಕು.

AV Eye Hospital ad

2012ರಲ್ಲಿ ಅಸ್ತಿತ್ವಕ್ಕೆ ಬಂದ ರಂಗರಾಜನ್ ಸಮಿತಿಯು 2013ರಲ್ಲಿ ತನ್ನ ವರದಿಯನ್ನು ನೀಡಿತು. ಇಡೀ ಸಕ್ಕರೆ ಉದ್ಯಮವನ್ನು ಸಂಪೂರ್ಣ ನಿಯಂತ್ರಣ ಮುಕ್ತ ಮಾಡುವ ಶಿಪಾರಸ್ಸು ಮಾಡಿದ ಈ ಸಮಿತಿ ಅದುವರೆಗೆ ಜಾರಿಯಲ್ಲಿ ಇದ್ದ ಶಾಸನಬದ್ಧ ಕನಿಷ್ಠ ದರ (ಎಸ್‌ಎಂಪಿ) (Statutory minimum price) ಹಾಗೂ ರಾಜ್ಯ ಸಲಹಾ ದರ (ಎಸ್‌ಎಪಿ) (State advisory price) ಪದ್ದತಿಯನ್ನು ರದ್ದುಪಡಿಸಿತು.

ಕೇಂದ್ರ ಸರ್ಕಾರವು ಅಲ್ಲಿಯವರೆಗೆ ಪ್ರತಿ ವರ್ಷ ನಿಗದಿಪಡಿಸುತ್ತಿದ್ದ ದರವು ಎಸ್‌ಎಂಪಿ ಆಗಿದ್ದರೆ, ಅದರ ಮೇಲೆ ರಾಜ್ಯ ಸರ್ಕಾರವು ನಿಗದಿ ಪಡಿಸುತ್ತಿದ್ದ ಹೆಚ್ಚುವರಿ ದರ ಎಸ್‌ಎಪಿ ಆಗಿತ್ತು.

ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕರ್ನಾಟಕಗಳಲ್ಲಿ ಹೆಚ್ಚಿರುವ ಕಬ್ಬು ಬೆಳೆಗಾರರಿಗೆ ದೆಹಲಿಯ ಅಧಿಕಾರದ ಕಾರಿಡಾರುಗಳ ಮೇಲೆ ಪ್ರಭಾವ ಬೀರುವ ಶಕ್ತಿ ಇರುವುದಿಲ್ಲ. ಹಾಗಾಗಿ, ಕೇಂದ್ರ ಸರ್ಕಾರ ಏನೇ ದರ ನಿಗದಿ ಮಾಡಿದರೂ, ರೈತರು ರಾಜ್ಯ ಸರ್ಕಾರಗಳ ಮೇಲೆ ಹೋರಾಟದ ಪ್ರಭಾವ ಬೀರಿ, ದರ ಹೆಚ್ಚಳಕ್ಕೆ ಪಟ್ಟು ಹಿಡಿಯುತ್ತಿದ್ದರು. ಹಾಗಾಗಿಯೇ, ಎಸ್‌ಎಪಿ ರದ್ದು ಮಾಡಿದ ರಂಗರಾಜನ್‌ ಶಿಫಾರಸ್ಸನ್ನು ರೈತ ಸಂಘಟನೆಗಳು ವಿರೋಧಿಸಿದವು.

ಸಕ್ಕರೆ ಕಾರ್ಖಾನೆ ಮಾಲೀಕರ ಕಪಿಮುಷ್ಠಿಯಲ್ಲಿದ್ದ ಸರ್ಕಾರಗಳು ರೈತರ ವಿರೋಧವನ್ನು ಲೆಕ್ಕಿಸದೇ ರಂಗರಾಜನ್ ವರದಿಯನ್ನು ಸಂಪೂರ್ಣವಾಗಿ ಒಪ್ಪಿ ಜಾರಿ ಮಾಡಲು ಆರಂಭಿಸಿದವು. ಎಸ್‌ಎಂಪಿ ಹಾಗೂ ಎಸ್‌ಎಪಿ ಪದ್ದತಿಯ ಬದಲಿಗೆ ಎಫ್‌ಆರ್‌ಪಿ (ನ್ಯಾಯಯುತ ಹಾಗೂ ಲಾಭದಾಯಕ ದರ- Fair and remunerative price) ವ್ಯವಸ್ಥೆಯನ್ನು ಜಾರಿಗೆ ತಂದವು.

ಸಿಎಸಿಪಿ (ಕೃಷಿ ವೆಚ್ಚ ಮತ್ತು ದರ ಆಯೋಗ) ನಿಗದಿಪಡಿಸಿದ ಉತ್ಪಾದನಾ ವೆಚ್ಚವನ್ನು ಆಧರಿಸಿ ಎಫ್ ಆರ್ ಪಿಯನ್ನು ಕೇಂದ್ರ ಸರ್ಕಾರ ಪ್ರಕಟಿಸುತ್ತಾ ಬಂದಿದೆ. ಸಿಎಸಿಪಿಯು ಲೆಕ್ಕ ಹಾಕುವ ಉತ್ಪಾದನಾ ವೆಚ್ಚ ರೈತರು ಹೂಡುವ ಬಂಡವಾಳ ಮತ್ತು ಮೂಲ ಸೌಕರ್ಯಗಳ ಮೇಲೆ ಮಾಡಿರುವ ವೆಚ್ಚವನ್ನಾಗಲಿ, ನಿರ್ವಹಣಾ ಶ್ರಮವನ್ನಾಗಲಿ ಒಳಗೊಳ್ಳುವುದಿಲ್ಲ.

ಕೇವಲ ಆಯಾ ಋತುಮಾನದ ಕೃಷಿ ವೆಚ್ಚವನ್ನು ಮಾತ್ರ ಪರಿಗಣಿಸುತ್ತದೆ. ಈ ಕೃಷಿ ವೆಚ್ಚವೂ ಕೂಡ ಹೋಲಿಕೆಯಲ್ಲಿ ಅತ್ಯಂತ ಕಡಿಮೆ ಇರುವ ಕೃಷಿ ವೆಚ್ಚವನ್ನೇ ಸಂಪೂರ್ಣ ಆಧರಿಸಿದೆ. ಹೀಗೆ ಉತ್ಪಾದನಾ ವೆಚ್ಚದ ಲೆಕ್ಕದಲ್ಲೇ ಬಹಳ ಅನ್ಯಾಯ ಸಿಎಸಿಪಿ ಲೆಕ್ಕಾಚಾರದಲ್ಲಿ ಆಗುತ್ತಿದೆ. ಇದನ್ನು ಆಧರಿಸಿದ ಎಫ್ ಆರ್ ಪಿ ದರ ನ್ಯಾಯ ಮತ್ತು ಲಾಭದ ಅಣಕವಷ್ಟೇ.

ಕಬ್ಬು ದರ ನಿಗದಿ ಭಾಗ ೨

ಕೇಂದ್ರ ಸರ್ಕಾರ ಶಾಸನಬದ್ಧ ಕನಿಷ್ಠ ದರ (ಎಸ್‌ಎಂಪಿ) ಪ್ರಕಟಿಸುತ್ತಿದ್ದಾಗ ಕಬ್ಬು ಬೆಳೆಯುವ ಪ್ರತಿ ರಾಜ್ಯವು, ರಾಜ್ಯ ಸಲಹಾ ದರವನ್ನು ಪ್ರಕಟಿಸುತ್ತಿತ್ತು. ಇದು ಎಸ್‌ಎಂಪಿಕ್ಕಿಂತ ಹೆಚ್ಚಿರುತ್ತಿತ್ತು. ಸಹಜವಾಗಿ ರೈತರಿಗೆ ತಮ್ಮ  ಪ್ರತಿಭಟನೆಗಳ ಮೂಲಕ ಕೇಂದ್ರ ಸರ್ಕಾರಕ್ಕಿಂತ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹಾಕುವ ಸಾಮರ್ಥ್ಯ ಹೆಚ್ಚಾಗಿರುತ್ತದೆ. ಆದರೆ ಯಾವಾಗ ಎಫ್‌ಆರ್‌ಪಿ ವ್ಯವಸ್ಥೆ ಬಂತೋ ಆಗ ರಾಜ್ಯ ಸಲಹಾ ದರ ಪ್ರಕಟಿಸುವ ಪದ್ಧತಿಯನ್ನೇ ಸಕ್ಕರೆ ಕಾರ್ಖಾನೆಗಳ ಲಾಬಿಗೆ ಮಣೆ ಹಾಕಿ ಕೈ ಬಿಟ್ಟವು. ಆದರೂ ಪ್ರತಿಭಟನೆಗಳು ತೀವ್ರವಾಗಿ ನಡೆದಾಗಲೆಲ್ಲಾ ಆಗಾಗ್ಗೆ ರಾಜ್ಯ ಸಲಹಾ ದರವನ್ನು ರಾಜ್ಯ ಸರ್ಕಾರಗಳು ಪ್ರಕಟಿಸಿವೆ.

ರಂಗರಾಜನ್ ಸಮಿತಿ ಶಿಫಾರಸ್ಸು ಜಾರಿಗೆ ಬಂದ ಮೇಲೆ ರಾಜ್ಯ ಸರ್ಕಾರಕ್ಕೆ ಆಗಲಿ, ಕೇಂದ್ರ ಸರ್ಕಾರಕ್ಕೆ ಆಗಲಿ ದರ ನಿಗದಿಪಡಿಸುವ ಅಧಿಕಾರ ಇಲ್ಲ ಎಂದು ಸಕ್ಕರೆ ಕಾರ್ಖಾನೆಗಳ ಮಾಲೀಕರು ತಮ್ಮ ಪ್ರಭಾವಿ ಸಂಘಟನೆ ಮೂಲಕ ಕರ್ನಾಟಕ ಹೈಕೋರ್ಟ್ ಕದ ತಟ್ಟಿದಾಗ ಮಾಲೀಕರ ವಿರುದ್ಧವಾಗಿ ತೀರ್ಪು ಬಂದಿತು. ಈ ತೀರ್ಪಿಗೆ ಮೇಲ್ಮನವಿ ಸಲ್ಲಿಸಿದಾಗ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಆಗಸ್ಟ್ 2020ರಲ್ಲಿ ಕಬ್ಬು ಖರೀದಿ ದರ ನಿಗದಿ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಇದೆ ಎಂದು ತೀರ್ಪು ನೀಡಿತು.

ಇದನ್ನು ಓದಿದ್ದೀರಾ? ಕಬ್ಬು ಬೆಳೆಗೆ ದರ ನಿಗದಿ - ಭಾಗ 1 | ರಾಜ್ಯಾದ್ಯಂತ ಬೆಳೆಗಾರರ ಆಕ್ರೋಶ: ಸರ್ಕಾರದ ಮೋಸದಾಟ

ಹೀಗೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳು ರಾಜ್ಯ ಸಲಹಾ ದರ ನಿರ್ಧರಿಸುವ ರಾಜ್ಯ ಸರ್ಕಾರಗಳ ಅಧಿಕಾರವನ್ನು ಎತ್ತಿ ಹಿಡಿದಿದ್ದರೂ ತಮ್ಮ ಅಧಿಕಾರ ಚಲಾಯಿಸಲು ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತಿಲ್ಲ.

ಕಾರ್ಖಾನೆ ಆರಂಭಕ್ಕೂ ಮುಂಚೆ ಕಬ್ಬು ಬೆಳೆ ಉತ್ಪಾದನಾ ವೆಚ್ಚ ಆಧರಿಸಿ ರಾಜ್ಯ ಸಲಹಾ ದರವನ್ನು ನಿಗದಿಪಡಿಸುವ ಬದಲು ಉಪ ಉತ್ಪನ್ನಗಳ ಲಾಭಾಂಶ ಮತ್ತು ಕಾರ್ಖಾನೆಗಳ ಆದಾಯವನ್ನು ಪರಿಗಣಿಸುವ ಸರ್ಕಾರದ ವರಸೆ ಕಬ್ಬು ಬೆಳೆಗಾರರಿಗೆ ಮೋಸ ಮಾಡುವ ದುರುದ್ದೇಶವನ್ನು ಹೊಂದಿರುವುದಾಗಿದೆ. ಲಾಭವನ್ನು ನಷ್ಟವಾಗಿ ತೋರಿಸಿಕೊಳ್ಳುವ ಕಾರ್ಖಾನೆಗಳ ಕಲೆ ಮಾಲೀಕರಿಗೆ ಚೆನ್ನಾಗಿ ಕರಗತವಾಗಿದೆ.

ರಾಜ್ಯ ಸಲಹಾ ದರ ನಿಗದಿಯನ್ನು ಯಾವುದೇ ಕಾರಣಕ್ಕೂ ಮುಂದಕ್ಕೆ ಹಾಕಬಾರದು ಮತ್ತು ಉಪ ಉತ್ಪನ್ನಗಳ ಲಾಭಾಂಶದಲ್ಲಿ ಶೇ.50ರಷ್ಟು ಪಾಲು ಕಬ್ಬು ಪೂರೈಸಿರುವ ರೈತರಿಗೆ ಸಿಗಬೇಕು. ಇದರಲ್ಲಿನ ವಂಚನೆಯ ವಾಸನೆ ಸಂಘಟನೆಗಳಿಗೆ ಹೊಡೆಯುತ್ತದೆ; ಆಗ ಕಬ್ಬು ಬೆಳೆಗಾರರು ಹೋರಾಟ ಶುರುವಾಗುತ್ತದೆ. ಈಗ ಆಗಿರುವುದೂ ಅದೇ.

(ಮುಂದುವರೆಯುವುದು...)

ನಿಮಗೆ ಏನು ಅನ್ನಿಸ್ತು?
2 ವೋಟ್
eedina app