ಬಿಜಿಎಮ್ ನುಡಿನಮನ: ಬೌದ್ಧಿಕ ಪ್ರಾಮಾಣಿಕತೆಯ, ವೈಚಾರಿಕ ಸ್ಪಷ್ಟತೆಯ ಒರೆಗಲ್ಲು ನಮ್ಮ ಮೇಷ್ಟ್ರು

ಹೊಳೆನರಸೀಪುರದ ಪ್ರೊ ಬಿ ಗಂಗಾಧರಮೂರ್ತಿ ಗೌರಿಬಿದನೂರಿನ ತೆಲುಗು ಪ್ರಧಾನವಾದ ಜಡಗೊಂಡ, ಬರಡು ನೆಲದಲ್ಲಿ ಸಾಮಾಜಿಕ ಚಲನೆ ಮೂಡಿಸಲು ಶ್ರಮಿಸಿದರು. ಅವರು ದಲಿತ ಚಳವಳಿಗೆ ಬೌದ್ಧಿಕತೆಯ ಕಸುವು ತುಂಬಿದರು. ಅವರ ಸಾವು ದುಡಿಯುವ ವರ್ಗಗಳಿಗೆ, ಸಮಾನತೆಯನ್ನು ಬಯಸುವವರಿಗೆ, ಹೋರಾಟದ ಜೀವಗಳಿಗೆ ಒಂದು ದೊಡ್ಡ ನಷ್ಟ.

ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ಕ್ರಿಯಾಶೀಲ ಕಾಲೇಜು ಅಧ್ಯಾಪಕರ ಪರಂಪರೆಯೊ0ದಿದೆ; ಅನೇಕ ಅಧ್ಯಾಪಕರು ಕಾಲೇಜುಗಳಲ್ಲಿ ತಾವು ಪಾಠ ಮಾಡುವ ಜೊತೆಗೆ ತಮ್ಮ ಕ್ರಿಯೆಗಳ ಮೂಲಕ ಆ ಪ್ರದೇಶದ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಆಗುಹೋಗುಗಳನ್ನೂ ಪ್ರಭಾವಿಸುತ್ತಿದ್ದರು. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೆಲಸ ಮಾಡುತ್ತಲೇ ನಾಡಿನ ಭವಿಷ್ಯಕ್ಕಾಗಿ ಚಿಂತನೆ, ಕೃತಿ ರಚನೆ, ಬೀದಿ ಹೋರಾಟ ಮತ್ತಿತರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು. ಕರ್ನಾಟಕದ ಅಂಥ ಅಧ್ಯಾಪಕರ ಪೈಕಿ ಗೌರಿಬಿದನೂರು ನ್ಯಾಷನಲ್ ಕಾಲೇಜಿನ ಪ್ರೊ. ಬಿ. ಗಂಗಾಧರಮೂರ್ತಿಯವರೂ ಒಬ್ಬರು.

ಬಿಜಿಎಮ್ ಎಂದೇ ಕಾಲೇಜಿನಲ್ಲಿ ಮತ್ತು ಕಾಲೇಜಿನ ಹೊರಗೆ ಪ್ರಸಿದ್ಧರಾಗಿದ್ದ ಗಂಗಾಧರಮೂರ್ತಿಯವರು ಮೂಲತಃ ಹಾಸನ ಜಿಲ್ಲೆಯ ಹೊಳೆನರಸೀಪುರದವರು. ಬಡ ಕ್ಷೌರಿಕನ ಮಗನಾಗಿದ್ದ ಅವರು ಬಹಳ ಕಷ್ಟದಿಂದ ವಿದ್ಯಾಭ್ಯಾಸ ಮಾಡಿದರು. ಅವರ ತಂದೆ ಬೋರಯ್ಯ ಮಗ ವಿದ್ಯಾವಂತನಾಗಬೇಕೆಂದು ಕನಸು ಕಂಡು, ಅದಕ್ಕಾಗಿ ವಿಪರೀತ ಶ್ರಮ ಪಟ್ಟರು. ಹೊಳೆನರಸೀಪುರದಲ್ಲಿ ಹೈಸ್ಕೂಲ್‌ವರೆಗೆ ಓದಿದ ಅವರು ನಂತರ ಶಿವಮೊಗ್ಗದ ಸಂಬಂಧಿಕರೊಬ್ಬರ ಮನೆಯಲ್ಲಿದ್ದುಕೊಂಡು, ಪಿಯುಸಿ ಓದಿದರು. ಶಿವಮೊಗ್ಗದಲ್ಲಿ ಆಕಸ್ಮಿಕವಾಗಿ ಲೇಖಕ, ಪ್ರಾಧ್ಯಾಪಕ ಎಚ್ ಜೆ ಲಕ್ಕಪ್ಪಗೌಡರ ಪರಿಚಯವಾಗಿ, ಅವರಿಂದ ಓದುವ ಹವ್ಯಾಸ ಬೆಳೆಸಿಕೊಂಡರು.

ಪಿಯುಸಿ ನಂತರ ವಿದ್ಯಾಭ್ಯಾಸ ಮುಂದುವರೆಸಲು ಮನಸ್ಸಿದ್ದರೂ ದುಡಿಯುವುದು ಅನಿವಾರ್ಯವಾದ್ದರಿಂದ ಅಂಚೆ ಇಲಾಖೆ ಸೇರಿ ರೈಲ್ವೆ ಮೇಲ್ ಸರ್ವೀಸ್‌ನಲ್ಲಿ ಕೆಲಸ ಮಾಡತೊಡಗಿದರು. ಮೊದಲು ಒಂದಷ್ಟು ದಿನ ಬೆಳಗಾವಿಯಲ್ಲಿ ಕೆಲಸ ಮಾಡಿ ನಂತರ ಮೈಸೂರಿಗೆ ವರ್ಗವಾದರು. ರಾತ್ರಿ ಹೊತ್ತು ಟ್ರೈನ್‌ನಲ್ಲಿ ಸಂಚರಿಸುತ್ತ ಪತ್ರಗಳನ್ನು ತಲುಪಿಸುವ ಕೆಲಸ ಮಾಡುತ್ತಲೇ ಹಗಲು ಹೊತ್ತು ವಿದ್ಯಾಭ್ಯಾಸ ಮುಂದುವರೆಸಿದರು. ಹೀಗೆ ಕೆಲಸ ಮಾಡುತ್ತಲೇ ದೂರ ಶಿಕ್ಷಣದಿಂದ ಪದವಿ ಪಡೆದರು. ಮೈಸೂರಿಗೆ ಬಂದ ನಂತರ 'ಒಡನಾಡಿ' ನಾರಾಯಣ್ ಜೊತೆ ಸೇರಿ 'ವಿಕಾಸ ಪ್ರಕಾಶನ' ಆರಂಭಿಸಿದರು. ಅದರಿಂದ ದೇವನೂರ ಮಹಾದೇವ ಸೇರಿದಂತೆ ಹಲವು ಲೇಖಕರ ಕೃತಿಗಳನ್ನು ಪ್ರಕಟಿಸಿದರು. ಮೈಸೂರಿನಲ್ಲಿ ಅವರಿಗೆ ಅನೇಕ ಲೇಖಕರು, ಹೋರಾಟಗಾರರ ಪರಿಚಯವಾಯಿತು. ಅನಂತಮೂರ್ತಿಯವರ ಸಲಹೆಯ ಮೇರೆಗೆ ಗಂಗಾಧರಮೂರ್ತಿ ಇಂಗ್ಲಿಷ್ ಎಂಎ ಪದವಿ ಪಡೆದರು. ಮೈಸೂರಿನಲ್ಲಿರುವಾಗ ಸರಸ್ವತಿಪುರಂನಲ್ಲಿ ಮಾರ್ಕ್ಸ್‌ವಾದಿ ಲೈಬ್ರರಿ ಆರಂಭಿಸಿದರು. ಮಾರ್ಕ್ಸ್‌ವಾದಿ ಚಿಂತನೆ ಮತ್ತು ಚಟುವಟಿಕೆಗಳು ಅವರ ವ್ಯಕ್ತಿತ್ವವನ್ನು ರೂಪಿಸಿದ ಕಾಲಘಟ್ಟ ಅದು.

ಎಂಎ ಮುಗಿದ ನಂತರ ಬಿಜಿಎಮ್ ಅಧ್ಯಾಪಕರಾಗಿ ಬಂದದ್ದು ಚಿಕ್ಕಬಳ್ಳಾಪುರ (ಹಿಂದಿನ ಕೋಲಾರ) ಜಿಲ್ಲೆಯ ಗೌರಿಬಿದನೂರಿನ ಎಇಎಸ್ ನ್ಯಾಷನಲ್ ಕಾಲೇಜಿಗೆ. ಅದು ಕೋಲಾರ ಜಿಲ್ಲೆಯಲ್ಲಿ ದಲಿತ ಮತ್ತು ಕಮ್ಯುನಿಸ್ಟ್ ಚಳವಳಿಗಳು ತೀವ್ರವಾಗಿದ್ದ ಕಾಲ. ಹಾಗೆಯೇ ದಲಿತರ ಮೇಲಿನ ದೌರ್ಜನ್ಯಗಳೂ ಕೂಡ ಜಿಲ್ಲೆಯಲ್ಲಿ ಹೆಚ್ಚಾಗಿದ್ದವು. ಆಂಧ್ರಕ್ಕೆ ಹೊಂದಿಕೊಂಡ ಗೌರಿಬಿದನೂರಿನಲ್ಲಿ ರಾಯಲಸೀಮಾದ ಫ್ಯೂಡಲ್ ಪ್ರವೃತ್ತಿಗಳು ಇಡುಕಿರಿದಿದ್ದವು. ಗೌರಿಬಿದನೂರಿನ ಬದುಕು ಒಂದು ರೀತಿ ಜಡಗೊಂಡಿತ್ತು. ತೆಲುಗು ಪ್ರಧಾನವಾದ ಈ ತಾಲ್ಲೂಕು ಸಾಂಸ್ಕೃತಿಕವಾಗಿ ಬರಡಾಗಿತ್ತು. ಸಹಜವಾಗಿಯೇ ಬಿಜಿಎಮ್ ಅವರಿಗೆ ಕಾಲೇಜಿನ ಒಳಗೆ ಮತ್ತು ಹೊರಗೆ ಕೆಲಸ ಮಾಡಲು ಅದು ಅತ್ಯಂತ ಸವಾಲಿನ ಪ್ರದೇಶ ಮತ್ತು ಕಾಲವಾಗಿತ್ತು. ದಲಿತ ಹೋರಾಟಗಳಲ್ಲಿ ಪಾಲುಗೊಳ್ಳತೊಡಗಿದ ಗಂಗಾಧರಮೂರ್ತಿ, ಅಂಬೇಡ್ಕರ್ ಅವರನ್ನು ವ್ಯಾಪಕವಾಗಿ ಓದತೊಡಗಿದರು. ಕಮ್ಯುನಿಸಂ ಮತ್ತು ದಲಿತ ಹೋರಾಟ ಬದುಕಿನುದ್ದಕ್ಕೂ ಅವರ ಚಿಂತನೆ ಮತ್ತು ಕ್ರಿಯೆಗಳ ಜೀವಾಳವಾಯಿತು.   

ಚಳವಳಿಗಳ ಸಂಗಾತಿ; ಬೌದ್ಧಿಕ ಶಕ್ತಿ

ಬಿಜಿಎಮ್ ಕಾಲೇಜಿನ ಒಳಗೆ ಜನಪ್ರಿಯ ಅಧ್ಯಾಪಕರಾಗಿದ್ದರು. ಕಾಲೇಜಿನ ಹೊರಗೆ ಚಳವಳಿಗಳ ಸಂಗಾತಿಯಾಗಿದ್ದರು; ಅವುಗಳಿಗೆ ಬೌದ್ಧಿಕ ಶಕ್ತಿಯಾಗಿದ್ದರು. ಬೋಧನೆಯ ಜೊತೆಗೆ ಸಾಮಾಜಿಕ ಬದಲಾವಣೆಗಾಗಿ ದುಡಿಯತೊಡಗಿದರು. ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸುಮಾರು 15 ವರ್ಷ ಕಾಲ ಅವಿಭಜಿತ ಕೋಲಾರ ಜಿಲ್ಲೆಯನ್ನು ವ್ಯಾಪಕವಾಗಿ ಸುತ್ತಿದರು. ಜೀತದಾಳುಗಳ ಪುನರ್ವಸತಿ ಕಾರ್ಯಕ್ರಮದಲ್ಲಿಯೂ ತೊಡಗಿಸಿಕೊಂಡಿದ್ದರು. 

Image
B Gangadhara Murthy

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದ ಬಿಜಿಎಮ್, ಭಾರತ ಜ್ಞಾನ ವಿಜ್ಞಾನ ಸಮಿತಿಯ ಉಪಾಧ್ಯಕ್ಷರಾಗಿಯೂ ಎರಡು ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಮೌಢ್ಯ ನಿವಾರಣೆಗೆ ಅಪಾರವಾಗಿ ಶ್ರಮಿಸುತ್ತಿದ್ದ ಎಚ್ ನರಸಿಂಹಯ್ಯ ಅವರ ಮೌಢ್ಯವಿರೋಧಿ ಆಂದೋಲನವನ್ನು ಗೌರಿಬಿದನೂರಿನಲ್ಲಿ ಹರಡಲು ಶ್ರಮಿಸಿದರು. ವಿದ್ಯಾರ್ಥಿಗಳಲ್ಲಿ ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ಚಿಂತನೆ ಬೆಳೆಸುವಲ್ಲಿನ ಅವರ ಶ್ರಮ ಮತ್ತು ಬದ್ಧತೆ ಅವಿಸ್ಮರಣೀಯ. ದಲಿತ ಚಳವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಗಂಗಾಧರಮೂರ್ತಿಯವರು ಚಳವಳಿಗೆ ಪೂರಕವಾದ ಕೃತಿ ರಚನೆಯ ಜೊತೆಗೆ ಕಮ್ಮಟ, ತರಬೇತಿ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡಿದರು. ತಮ್ಮ ಓದು ಮತ್ತು ಚಿಂತನೆಗಳಿಂದ ರಾಜ್ಯದಲ್ಲಿ ದಲಿತ ಚಳವಳಿಗೆ ಸ್ಪಷ್ಟ ದಿಕ್ಕು ತೋರಿದವರಲ್ಲಿ ಗಂಗಾಧರಮೂರ್ತಿಯವರೂ ಒಬ್ಬರು. 

ದಲಿತ ಸಂಘರ್ಷ ಸಮಿತಿಯ ಬೌದ್ಧಿಕ ಶಕ್ತಿಗಳಲ್ಲಿ ಬಿ.ಗಂಗಾಧರಮೂರ್ತಿಯವರೂ ಒಬ್ಬರು; ಸಂಘಟನೆ ಆರಂಭವಾದಾಗಿನಿಂದ ಬಿಜಿಎಮ್ ಅದರ ಜೊತೆಗಿದ್ದರು. ಗೌರಿಬಿದನೂರು ತಾಲ್ಲೂಕಿನಲ್ಲಿ ನಡೆದ ನಾಗಸಂದ್ರ ಭೂ ಆಕ್ರಮಣ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಅದರ ಬಗ್ಗೆ ‘ನಾಗಸಂದ್ರ ಭೂ ಆಕ್ರಮಣ ಚಳವಳಿ’ ಪುಸ್ತಕ ಬರೆದು ಅದನ್ನು ದಲಿತ ಹೋರಾಟದ ಅದ್ವಿತೀಯ ಕಥನವನ್ನಾಗಿ ಹೋರಾಟದ ಚರಿತ್ರೆಯಲ್ಲಿ ನಿಲ್ಲುವಂತೆ ಮಾಡಿದವರು ಬಿಜಿಎಮ್. 

ಸಮಾಜದ ಬದಲಾವಣೆಗೆ ರಾಜಕೀಯ ಒಂದು ಪ್ರಬಲ ಅಸ್ತ್ರ ಎಂಬುದನ್ನು ಅರಿತಿದ್ದ ಮೇಷ್ಟ್ರು, ಒಮ್ಮೆ ಚುಣಾವಣೆಗೆ ನಿಲ್ಲುವ ಪ್ರಯತ್ನವನ್ನೂ ನಡೆಸಿದ್ದರು. ಆದರೆ, ಹಲವು ಕಾರಣಗಳಿಂದ ಅವರ ಆಸೆ ಈಡೇರಲಿಲ್ಲ.  

ಸಾಮಾಜಿಕ ಪರಿವರ್ತನೆಗಾಗಿ ಅಪಾರವಾಗಿ ಹಂಬಲಿಸುತ್ತಿದ್ದ ಬಿಜಿಎಮ್ ಎಂದೂ ಜಡಗೊಳ್ಳಲಿಲ್ಲ; ಕರ್ನಾಟಕದಲ್ಲಿ ಅಂಬೇಡ್ಕರ್ ಅವರನ್ನು ಅವರಷ್ಟು ಓದಿಕೊಂಡಿದ್ದವರು ಅಪರೂಪ; ಅಂಬೇಡ್ಕರ್ ಬದುಕು ಬರಹ ಚಿಂತನೆಗಳ ಬಗ್ಗೆ ಅಧಿಕೃತವಾಗಿ ಮಾತಾಡಬಲ್ಲ ವಿರಳ ವಿದ್ವಾಂಸರಾಗಿದ್ದರು. ಭಾರತಕ್ಕೆ ಅಂಬೇಡ್ಕರ್ ಅವರಂತೆ ಗಾಂಧಿಯೂ ಮುಖ್ಯ ಎಂಬುದು ಅವರ ನಂಬುಗೆಯಾಗಿತ್ತು; ಗಾಂಧಿಯವರ ಸಂಕ್ಷಿಪ್ತ ಜೀವನ ಕಥನವನ್ನೂ ಮೇಷ್ಟ್ರು ಬರೆದಿದ್ದಾರೆ. ಎಚ್‌ಎನ್ ಅವರ ದ್ವಂದ್ವ ನೀತಿಗಳನ್ನು ವಿರೋಧಿಸುತ್ತಲೇ, ಅವರು ಈ ಸಮಾಜಕ್ಕೆ ಎಷ್ಟು ಮುಖ್ಯ ಎಂಬುದನ್ನು ವಿವರಿಸುತ್ತಿದ್ದರು; ‘ಮೌಢ್ಯವಿರೋಧಿ ಹೋರಾಟಗಾರ ಎಚ್ಚೆನ್’ ಎನ್ನುವ ಕೃತಿಯನ್ನೂ ಬರೆದರು.             

ವಿದುರಾಶ್ವತ್ಥ ಗ್ಯಾಲರಿಯ ರೂವಾರಿ

ಒಂದು ಕಾಲದಲ್ಲಿ ಮೇಷ್ಟ್ರು ದಲಿತ ಚಳವಳಿಯ ಸಾಧ್ಯತೆಗಳ ಬಗ್ಗೆ ಅಪಾರ ಭರವಸೆ ಹೊಂದಿದ್ದರು. ಒಮ್ಮೆ ದಲಿತ ಮುಖಂಡ ಡಿ ಜಿ ಸಾಗರ್ ಅವರನ್ನು ಕಾಣಲು ಬೆಂಗಳೂರಿನ ಕಣ್ವ ಹೋಟೆಲಿಗೆ ಹೋಗುವಾಗ ನನ್ನನ್ನೂ ಕರೆದೊಯ್ದಿದ್ದರು. ಸಾಗರ್ ದಲಿತ ಚಳವಳಿಯ ಮಟ್ಟಿಗೆ ಮಾಸ್ ಲೀಡರ್; ಅವರಿಂದ ದಲಿತ ಚಳವಳಿ ಬೇರೊಂದು ನೆಲೆ ಮುಟ್ಟಲಿದೆ ಎಂದು ಅವರು ನಂಬಿದ್ದರು. ಹೀಗೆ ಕಾಲದಿಂದ ಕಾಲಕ್ಕೆ ಮೇಷ್ಟ್ರು ಹಲವರ ಬಗ್ಗೆ ನಂಬಿಕೆ ಇಟ್ಟು, ನಂತರ ನಿರಾಶೆ ಅನುಭವಿಸುತ್ತಿದ್ದರು. ಆದರೆ, ಅವರೆಂದೂ ಚಳವಳಿಯ ಬಗ್ಗೆ ಭರವಸೆ ಕಳೆದುಕೊಳ್ಳಲಿಲ್ಲ; ಹೋರಾಟದಿಂದ ಹಿಂತೆಗೆಯಲಿಲ್ಲ. 

Image
ವೀರಸೌಧದ ಮುಂದೆ ಚಿಂತಕ ಜಿ ರಾಮಕೃಷ್ಣ ಅವರೊಂದಿದೆ ಬಿ ಗಂಗಾಧರಮೂರ್ತಿ
ವೀರಸೌಧದ ಮುಂದೆ ಲೇಖಕಿ ಎನ್‌ ಗಾಯತ್ರಿ, ಚಿಂತಕ ಜಿ ರಾಮಕೃಷ್ಣ, ಸಿದ್ದನಗೌಡ ಪಾಟೀಲ ಅವರೊಂದಿಗೆ ಬಿ ಗಂಗಾಧರಮೂರ್ತಿ

ನಿವೃತ್ತರಾದ ನಂತರ ಅವರು ಮಾಡಿದ ಮಹತ್ವದ ಕೆಲಸಗಳೆಂದರೆ, ವಿದುರಾಶ್ವತ್ಥದ ಸ್ವಾತಂತ್ರ್ಯ ಸ್ಮಾರಕ ರೂಪಿಸಿದ್ದು. ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದೇ ಹೆಸರಾದ ವಿದುರಾಶ್ವತ್ಥದಲ್ಲಿ ಹುತಾತ್ಮರ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟದ ಸ್ಥೂಲ ಪರಿಚಯವನ್ನು ನೀಡುವ ಚಿತ್ರಪಟ ಗ್ಯಾಲರಿಯನ್ನು ಮೇಷ್ಟ್ರು ಅಲ್ಲಿ ಅಭಿವೃದ್ಧಿಪಡಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟ ಎಂದರೆ, ಅದೊಂದು ಏಕರೀತಿಯ, ಏಕತತ್ವದ ಅಥವಾ ಒಂದು ಗುಂಪಿನ ಹೋರಾಟವಲ್ಲ; ಹತ್ತಾರು ತತ್ವ, ಪಕ್ಷ, ಧರ್ಮಗಳ ಹಿನ್ನೆಲೆಯ, ಅಸಂಖ್ಯಾತ ಗುಂಪುಗಳ ವಿಭಿನ್ನ ವಿಚಾರಧಾರೆಯ, ವೈವಿಧ್ಯಮಯ ಮಾದರಿಯ ಹೋರಾಟಗಳ ಸಂಕೀರ್ಣ ಕಥನ. ಇದನ್ನೆಲ್ಲ ಅರಿತಿದ್ದ ಬಿಜಿಎಮ್, ಅಪಾರ ಅಧ್ಯಯನ, ಶ್ರಮ, ಒಳನೋಟ ಹಾಗೂ ಬದ್ಧತೆಗಳಿಂದ ಸ್ವಾತಂತ್ರ್ಯ ಹೋರಾಟದ ನಾನಾ ಮುಖಗಳು ಪರಿಚಯವಾಗುವಂತೆ ವಿಶಿಷ್ಟ ರೀತಿಯಲ್ಲಿ ಗ್ಯಾಲರಿ ರೂಪಿಸಿದ್ದಾರೆ.

ವೀರಸೌಧದ ಗ್ಯಾಲರಿಯಲ್ಲಿ ಗಾಂಧಿಯವರ ಉಪ್ಪಿನ ಸತ್ಯಾಗ್ರಹದಿಂದ ಹಿಡಿದು ಕೇರಳದ ಮಾಪಿಳ್ಳೆ ದಂಗೆಗಳು, ಬಂಗಾಳದಲ್ಲಿ ವ್ಯಾಪಕವಾಗಿ ಹರಡಿದ್ದ ಫಕೀರರು ಮತ್ತು ಸನ್ಯಾಸಿಗಳ ಹೋರಾಟದವರೆಗೆ ಜನಪ್ರಿಯ ಸತ್ಯಗಳಾಚೆಗಿನ ಚರಿತ್ರೆಯ ಅನೇಕ ಘಟನೆಗಳು, ವಿವರಗಳನ್ನು ಫೋಟೋಗಳ ಮೂಲಕ ದಾಖಲಿಸಲಾಗಿದೆ. ಇತ್ತೀಚೆಗೆ ಸಂಘ ಪರಿವಾರದ ಕೆಲವರು ಸಾವರ್ಕರ್‌ಗೆ ಅವಮಾನವಾಗಿದೆ ಎನ್ನುವ ನೆಪದಲ್ಲಿ ಗ್ಯಾಲರಿ ಮೇಲೆ ದಾಳಿ ಮಾಡುವ ಎಚ್ಚರಿಕೆ ನೀಡಿದಾಗಲೂ ಬಂಡೆಗಲ್ಲಿನಂತೆ ನಿಂತು ತಮ್ಮ ಕೆಲಸವನ್ನು ಸಮರ್ಥಿಸಿಕೊಂಡಿದ್ದರು ಮೇಷ್ಟ್ರು. ಅದೇ ರೀತಿ ಗೌರಿಬಿದನೂರಿನ ತಾಲ್ಲೂಕು ಕಚೇರಿ ಪಕ್ಕದ, ಅಂಬೇಡ್ಕರ್ ಬದುಕು ಮತ್ತು ಸಾಧನೆಯ ಕಥೆ ಹೇಳುವ ‘ಸಮಾನತಾ ಸೌಧ’ ಗ್ಯಾಲರಿಯ ಕಲ್ಪನೆ ಮತ್ತು ವಿನ್ಯಾಸ ಕೂಡ ಅವರದ್ದೇ.     

ಆನಂದ್ ತೇಲ್ತುಂಬ್ಡೆಯವರನ್ನು ಕನ್ನಡಕ್ಕೆ ತಂದ ಮೊದಲಿಗರು ಬಿಜಿಎಮ್. ಅವರನ್ನು ಕಾಣಲು ಆಗಾಗ್ಗೆ ಮುಂಬೈಗೆ ಹೋಗುತ್ತಿದ್ದ ಬಿಜಿಎಮ್, ಆನಂದ್‌ ತೇಲ್ತುಂಬ್ಡೆ ಜೈಲಿಗೆ ಹೋದ ನಂತರ ಅಪಾರ ನೋವು ಅನುಭವಿಸುತ್ತಿದ್ದರು. ತೀಸ್ತಾ ಸೆಟಲ್ವಾಡ್ ಅವರಿಗೂ ಆತ್ಮೀಯರಾಗಿದ್ದ ಬಿಜಿಎಮ್, ಮುಂಬೈನಲ್ಲಿ ಅವರ ಕಾಯಂ ಅತಿಥಿಯಾಗಿರುತ್ತಿದ್ದರು. ತೀಸ್ತಾ ಕೂಡ ಜೈಲಿಗೆ ಹೋಗಿಬಂದ ನಂತರ ವಿಹ್ವಲಗೊಂಡಿದ್ದ ಅವರು, ಅದೇ ಕೊರಗಿನಲ್ಲಿ ತಮ್ಮ ಆರೋಗ್ಯವನ್ನು ಇನ್ನಷ್ಟು ಹದಗೆಡಿಸಿಕೊಂಡರು. ತಮಗೆ ನಿದ್ದೆಯಲ್ಲೂ ಅವರಿಬ್ಬರ ಪಾಡು ದುಃಸ್ವಪ್ನದಂತೆ ಕಾಡುತ್ತಿರುವುದಾಗಿ ಸಾಯುವ ಕೆಲವೇ ದಿನಗಳ ಮುಂದೆ ನನ್ನೊಂದಿಗೆ ಹಂಚಿಕೊಂಡಿದ್ದರು. 

ಮೇಷ್ಟ್ರು ಮೇಲುನೋಟಕ್ಕೆ ಕಠೋರವಾಗಿ ಕಂಡರೂ ಆಳದಲ್ಲಿ ಅವರೊಬ್ಬ ಅಪ್ಪಟ ಮಾನವೀಯ ಅಂತಃಕರಣದ ಮನುಷ್ಯರಾಗಿದ್ದರು. ಹೊಳೆನರಸೀಪುರದಲ್ಲಿ ತಾವು ಟ್ಯೂಷನ್‌ಗೆ ಹೋಗುತ್ತಿದ್ದಾಗ ನಾಯಿಯೊಂದು ತಮ್ಮ ಕಾವಲಿಗೆ ಬರುತ್ತಿದ್ದುದನ್ನು ಅತ್ಯಂತ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಿದ್ದರು. 

ಎಚ್ ನರಸಿಂಹಯ್ಯ ಅವರು ತೀರಿಕೊಂಡಾಗ ನಾನು ‘ಅಗ್ನಿ’ ವಾರಪತ್ರಿಕೆಯಲ್ಲಿ ‘ಸಂತೆಯಲ್ಲಿ ಕಳೆದುಹೋದ ಸಂತ’ ಎನ್ನುವ ಲೇಖನ ಬರೆದಿದ್ದೆ. ಅದರಲ್ಲಿ ಎಚ್ಚೆನ್ ಬಗ್ಗೆ ಕೊಂಚ ಕಟುವಾಗಿ ಬರೆದಿದ್ದೆ. ನ್ಯಾಷನಲ್ ಕಾಲೇಜಿನ ಹಲವು ಅಧ್ಯಾಪಕರು ಸೇರಿದಂತೆ ಆ ಲೇಖನವನ್ನು ಅನೇಕರು ಮೆಚ್ಚಿಕೊಂಡು ನಾನು ಕೊಂಚ ಉಬ್ಬಿಹೋಗಿದ್ದೆ. ಒಮ್ಮೆ ಮೇಷ್ಟ್ರು ಸಿಕ್ಕಿದಾಗ ಆ ಲೇಖನವನ್ನು ಪ್ರಸ್ತಾಪಿಸಿ, ಅಪ್ಪಟ ಗಾಂಧಿವಾದಿಯಾದ ಎಚ್ಚೆನ್ ಬಗ್ಗೆ ನಾನು ಅಷ್ಟು ಕಟುವಾಗಬೇಕಾದ ಅಗತ್ಯವಿರಲಿಲ್ಲ ಎಂದು ಹೇಳಿದರು. ಒಮ್ಮೆ ಜ್ವರ ಬಂದು ನ್ಯಾಷನಲ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಗಡಗಡ ನಡುಗುತ್ತಾ ಹರಕಲು ಚಾಪೆ ಮೇಲೆ ಮುದುಡಿ ಮಲಗಿದ್ದ ಎಚ್ಚೆನ್‌ ಅವರ ಸ್ಥಿತಿಯನ್ನು ವಿವರಿಸಿ, ಅವರಂಥ ಬದ್ಧತೆಯುಳ್ಳ, ಪ್ರಾಮಾಣಿಕ ವ್ಯಕ್ತಿ ಸಾರ್ವಜನಿಕ ಜೀವನದಲ್ಲಿ ಎಷ್ಟು ಮುಖ್ಯ ಎನ್ನುವುದನ್ನು ನನಗೆ ಮನದಟ್ಟು ಮಾಡಿಸಿದರು. 

Image
ಗಂಗಾಧರಮೂರ್ತಿ ಅವರ ಎರಡು ಪುಸ್ತಕಗಳು
ಗಂಗಾಧರಮೂರ್ತಿ ಅವರ ಎರಡು ಪುಸ್ತಕಗಳು

ಇನ್ನೂ ಹತ್ತಾರು ವರ್ಷ ನಮ್ಮೊಂದಿಗಿರಬೇಕಾಗಿದ್ದ ಮೇಷ್ಟ್ರು ಹಠಾತ್ ಆಗಿ ನಿರ್ಗಮಿಸಿದ್ದಾರೆ. ಅವರ ಅಂತಿಮ ದರ್ಶನಕ್ಕೆಂದು ಸ್ವಾಮೀಜಿಗಳು, ಶಾಸಕರು, ಸಂಸದರು, ಮಾಜಿ ಮಂತ್ರಿಗಳು ಹೀಗೆ ದೊಡ್ಡ ದೊಡ್ಡವರೆಲ್ಲ ಸೇರಿದ್ದರು. ಹಾಗೆಯೇ ಅನೇಕ ಅಧ್ಯಾಪಕರು, ಅಪಾರ ಶಿಷ್ಯರು, ದಲಿತ ಸಂಘರ್ಷ ಸಮಿತಿಯ ಬಹುತೇಕ ಎಲ್ಲ ಬಣಗಳ ಮುಖಂಡರೂ ಅಲ್ಲಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಆಗತಾನೇ ಹೊಲಗದ್ದೆಗಳಲ್ಲಿ ಕೆಲಸ ಮಾಡಿ ಬಂದವರಂತೆ ಕಾಣುತ್ತಿದ್ದ ಕೆಲವು ರೈತರು, ಕೂಲಿ ಕಾರ್ಮಿಕರು ಕೂಡ ಬಂದು ತಮಗಾಗಿ ದುಡಿದ ಮೇಷ್ಟ ಅಂತಿಮ ದರ್ಶನ ಪಡೆದರು. ಮೇಷ್ಟ್ರ ಜೀವನದ ಸಾಧನೆ ಏನು ಅನ್ನುವುದನ್ನು ಅಲ್ಲಿ ನೆರೆದಿದ್ದ ಜನರ ವೈವಿಧ್ಯಮಯ ಹಿನ್ನೆಲೆಗಳೇ ಹೇಳುತ್ತಿದ್ದವು. 

ಇದನ್ನು ಓದಿದ್ದೀರಾ? ಮಳೆಗಾಲ ಅಧಿವೇಶನ | ವಿಧಾನಸಭೆ, ವಿಧಾನ ಪರಿಷತ್‌ ಕಲಾಪದಲ್ಲಿ ʼಹಿಂದಿ ದಿವಸ್‌ʼ ವಿರೋಧಿಸಿ ಪ್ರತಿಭಟನೆ       

ನನಗಂತೂ ಮೇಷ್ಟ್ರು ವೈಚಾರಿಕ ಸ್ಪಷ್ಟತೆಯ, ಬೌದ್ಧಿಕ ಪ್ರಾಮಾಣಿಕತೆಯ ಒರೆಗಲ್ಲಾಗಿದ್ದರು. ಸ್ವಕೇಂದ್ರಿತ ನೆಲೆಯಿಂದ ಎಲ್ಲವನ್ನೂ ಕಾಣುವ, ಅದಕ್ಕೆ ತಕ್ಕಂತೆ ಅವಕಾಶವಾದಿ ತಾತ್ವಿಕತೆಯನ್ನು ಮಂಡಿಸುವವರಿಂದ ದ್ವಂದ್ವಕ್ಕೆ ಸಿಲುಕಿದಾಗಲೆಲ್ಲ ನಾನು ವೈಚಾರಿಕ ಸ್ಪಷ್ಟತೆಗಾಗಿ ಮೇಷ್ಟರ ಬಳಿ ಓಡುತ್ತಿದ್ದೆ.                        

ಅವರ ಸಾವನ್ನು ದುಡಿಯುವ ವರ್ಗಗಳು, ಸಮಾನತೆಯನ್ನು ಬಯಸುವವರು ಮತ್ತು ವೈಚಾರಿಕ ಸ್ಪಷ್ಟತೆಗಾಗಿ ಅವರನ್ನು ಅವಲಂಬಿಸಿದ್ದ ನನ್ನಂಥವರು ಅಷ್ಟು ಸುಲಭವಾಗಿ ಮರೆಯಲು ಸಾಧ್ಯವಿಲ್ಲ.

ನಿಮಗೆ ಏನು ಅನ್ನಿಸ್ತು?
2 ವೋಟ್