ಸುದ್ದಿ ಪ್ಲಸ್ | ಆರ್ಥಿಕ ಬೆಳವಣಿಗೆ ಬೇಕೋ, ಹಣದುಬ್ಬರದ ನಿಯಂತ್ರಣ ಬೇಕೋ?

Shakthikanth Das

ಹಣದುಬ್ಬರ ನಿಯಂತ್ರಿಸುವುದನ್ನು ಆರ್ಥಿಕತೆಯ ದೃಷ್ಟಿಯಿಂದ ಮುಖ್ಯ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಭಾವಿಸಿದ್ದರೆ, ರೆಪೋ ದರ ಏರಿಸುವುದರಿಂದ ಅದನ್ನು ನಿಯಂತ್ರಿಸುವುದಕ್ಕೆ ಸಾಧ್ಯ ಅಂದುಕೊಂಡಿದ್ದರೆ ತಕ್ಷಣದಲ್ಲಿ ರೆಪೋ ದರ ಏರಿಸಬೇಕಾಗುತ್ತದೆ. ಆದರೆ, ಅದರಿಂದ ಆರ್ಥಿಕ ಪ್ರಗತಿ ಆಗಿಬಿಡುವುದಿಲ್ಲ ಎಂಬುದು ಕೂಡ ಗಮನದಲ್ಲಿ ಇರಬೇಕಾಗುತ್ತದೆ

ಹಣಕಾಸು ನೀತಿಯನ್ನು ರೂಪಿಸುವ ಉದ್ದೇಶದಿಂದ ರಿಸರ್ವ್ ಬ್ಯಾಂಕಿನಲ್ಲಿ ಹಣಕಾಸು ನೀತಿ ಸಮಿತಿಯನ್ನು ರಚಿಸಲಾಗಿದೆ. ಇದನ್ನು ರಚಿಸುವುದಕ್ಕೆ ಅನುಕೂಲವಾಗಲೆಂದೇ 2016ರಲ್ಲಿ ರಿಸರ್ವ್ ಬ್ಯಾಂಕಿನ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲಾಯಿತು.

ಈ ಹಣಕಾಸು ನೀತಿ ಸಮಿತಿಯು ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ಸೇರಿ, ದೇಶದ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಿ, ಸೂಕ್ತ ಹಣಕಾಸು ನೀತಿಯನ್ನು ರೂಪಿಸುತ್ತದೆ. ಈ ಮೊದಲು ಬ್ಯಾಂಕಿನ ಗೌವರ್ನರ್ ಒಬ್ಬರೇ ಬ್ಯಾಂಕ್ ಬಡ್ಡಿದರಕ್ಕೆ ಸಂಬಂಧಿಸಿದಂತೆ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಹಣದುಬ್ಬರದ ದರ ಶೇಕಡ ಆರನ್ನು ಮೀರದಂತೆ ನೋಡಿಕೊಳ್ಳುವುದು ಸಮಿತಿಯ ಜವಾಬ್ದಾರಿ. ನಿರಂತರವಾಗಿ ಮೂರು ತ್ರೈಮಾಸಿಕ ಅವಧಿಯಲ್ಲಿ ಹಣದುಬ್ಬರದ ದರವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ ಅದು ಸರ್ಕಾರಕ್ಕೆ ವಿವರಣೆ ನೀಡಬೇಕು. ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಅಂದರೆ, ಒಂದು ದೇಶದ ಕೇಂದ್ರ ಬ್ಯಾಂಕ್ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಬಡ್ಡಿ ದರವನ್ನು ಹೆಚ್ಚು ಕಮ್ಮಿ ಮಾಡುವ ಮೂಲಕ ಆರ್ಥಿಕತೆಯಲ್ಲಿ ಚಲಾವಣೆಯಲ್ಲಿರುವ ಹಣದ ಪ್ರಮಾಣವನ್ನು ನಿಯಂತ್ರಿಸುತ್ತಿರುತ್ತದೆ. ಕೆಲವೊಮ್ಮೆ ಸರ್ಕಾರದಿಂದಲೂ ಹಲವಾರು ಕಾರಣಕ್ಕೆ ರೆಪೊ ದರವನ್ನು ಹೆಚ್ಚು ಅಥವಾ ಕಡಿಮೆ ಮಾಡಲು ಒತ್ತಾಯ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರದ ಒತ್ತಾಯವೇ ರೆಪೋ ದರದ ನಿರ್ಧಾರದಲ್ಲಿ ಬಹುಪಾಲು ಕೆಲಸ ಮಾಡುತ್ತದೆ ಎಂಬ ಆರೋಪವೂ ಇದೆ.

ರಘುರಾಂ ರಾಜನ್ 2014ರಲ್ಲಿ ರೆಪೋ ದರವನ್ನು ಕಡಿಮೆ ಮಾಡಲಿಲ್ಲ. ಆಗ ಅವರ ಮೇಲೆ ರೆಪೋ ದರ ಕಡಿಮೆ ಮಾಡಬೇಕೆಂಬ ಒತ್ತಾಯ ಇತ್ತು ಎಂಬ ಸುದ್ದಿ ಇತ್ತು. ಆದರೆ, ಅವರು ರೆಪೋ ದರವನ್ನು ಕಡಿಮೆ ಮಾಡುವ ಕೆಲಸಕ್ಕೆ ಕೈಹಾಕಲಿಲ್ಲ. ಅದನ್ನು ಶೇಕಡ 8ರಷ್ಟೇ ಉಳಿಸಿಕೊಂಡಿದ್ದರು. ಆಗಿನ ಹಣದುಬ್ಬರದ ಒತ್ತಡದಲ್ಲಿ ಅದು ಸಾಧ್ಯವಿರಲಿಲ್ಲ. 2015ರ ಫೆಬ್ರವರಿಯಲ್ಲಿ ಹಣದುಬ್ಬರದ ತೀವ್ರತೆ ಸ್ವಲ್ಪ ಕಡಿಮೆ ಆದಾಗ ರಾಜನ್ ರೆಪೋ ದರವನ್ನು 7.25ಕ್ಕೆ ಇಳಿಸಿದ್ದರು. ಆದರೆ, ಆಗಸ್ಟ್ 2015ರ ಸಭೆಯಲ್ಲಿ ಯಥಾಸ್ಥಿತಿಯನ್ನು ಉಳಿಸಿಕೊಂಡರು.

Image
Nirmala Sitharaman
ಒಕ್ಕೂಟ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ರಾಜನ್ ನಂತರ ಬಂದ ಊರ್ಜಿತ್ ಪಾಟೀಲ್, 2016ರಲ್ಲಿ ಶೇಕಡ 0.25ರಷ್ಟು ಕಡಿಮೆ ಮಾಡಿದರು. ನಂತರ ಅವರು ಅದನ್ನು ಕಡಿಮೆ ಮಾಡುವುದಕ್ಕೆ ಒಲವು ತೋರಲಿಲ್ಲ. ಅವರು 'ವೈಯಕ್ತಿಕ’ ಕಾರಣಕ್ಕೆ ರಾಜಿನಾಮೆ ನೀಡಿದ ಮೇಲೆ ಆ ಸ್ಥಾನಕ್ಕೆ ಶಕ್ತಿಕಾಂತ್ ದಾಸ್ ಗವರ್ನರ್ ಆದರು. ರೆಪೋ ದರವನ್ನು ಕಡಿಮೆ ಮಾಡಬೇಕೆನ್ನುವ ಸರ್ಕಾರದ ನಿಲುವಿಗೆ ಅವರ ಸಹಮತವಿತ್ತು. ಅವರ ಕಾಲದಲ್ಲಿ ಹಲವು ಬಾರಿ ರೆಪೋ ದರದಲ್ಲಿ ಕಡಿತ ಆಗಿ, 2020ರಲ್ಲಿ ಸಾರ್ವಕಾಲಿಕ ಕನಿಷ್ಠ ಶೇಕಡ 4ಕ್ಕೆ ಬಂದು ತಲುಪಿತು. ಅವರ ಕಾಲದಲ್ಲಿ ಆರ್ಥಿಕ ಬೆಳವಣಿಗೆ ಆದ್ಯತೆಯ ವಿಷಯವಾಯಿತು. ಹಣದುಬ್ಬರದ ನಿಯಂತ್ರಣ ಹಿನ್ನೆಲೆಗೆ ಸರಿಯಿತು. ಸರ್ಕಾರಕ್ಕೆ ಕಡಿಮೆ ದರದಲ್ಲಿ ಹಣ ಪಡೆದುಕೊಳ್ಳಲು ಸಹಾಯವಾಗುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂಬ ಆರೋಪ ಇದೆ. ಹಣದುಬ್ಬರದ ದರ ಹೆಚ್ಚಿದ್ದರೂ ರೆಪೋ ದರವನ್ನು ಹೆಚ್ಚಿಸದೆ ಕಡಿಮೆ ಮಾಡುತ್ತಲೇ ಸಾಗಿದ್ದು ಈ ಆರೋಪಕ್ಕೆ ಪುಷ್ಟಿ ನೀಡುತ್ತದೆ.

ಇತ್ತೀಚಿನ ಹಣಕಾಸು ಸಮಿತಿ ಮತ್ತೆ ಹಣದುಬ್ಬರ ನಿಯಂತ್ರಣದ ವಿಷಯ ಮಾತನಾಡಿದೆ. ಹಲವು ವರ್ಷಗಳಿಂದ ಆರ್ಥಿಕ ಬೆಳವಣಿಗೆಗೆ ಮಹತ್ವ ನೀಡುತ್ತ ಬಂದಿದ್ದ ರಿಸರ್ವ್ ಬ್ಯಾಂಕ್, ಈಗ ಹಣದುಬ್ಬರದ ನಿಯಂತ್ರಣ ತನ್ನ ಪ್ರಥಮ ಆದ್ಯತೆ ಎಂದು ಹೇಳಿದೆ. ಇದು ಹಣಕಾಸಿನ ನೀತಿಯಲ್ಲಿ ಆಗಿರುವ ಮುಖ್ಯ ಬದಲಾವಣೆ ಎನ್ನಬಹುದು. ಆದರೆ, ರೆಪೋ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡದೆ ಅದನ್ನು ಶೇಕಡ 4ರಷ್ಟೇ ಉಳಿಸಿಕೊಂಡಿದೆ. ಹಾಗೆಯೇ, ರಿವರ್ಸ್ ರೆಪೋ ದರದಲ್ಲಿ, ಅಂದರೆ, ಬ್ಯಾಂಕುಗಳು ಕೇಂದ್ರ ಬ್ಯಾಂಕಿನಲ್ಲಿಟ್ಟ ಠೇವಣಿಗೆ ಸಿಗುವ ಬಡ್ಡಿ ದರದಲ್ಲೂ ಯಾವುದೇ ಬದಲಾವಣೆ ಆಗಿಲ್ಲ.

ಇದನ್ನು ಓದಿದ್ದೀರಾ?: ಸುದ್ದಿ ಪ್ಲಸ್ | ಎಲ್‌ಪಿಜಿ ಬೆಲೆ ಭಾರತದಲ್ಲೇ ಹೆಚ್ಚು?

ವಾಣಿಜ್ಯ ಬ್ಯಾಂಕುಗಳು ಬೇಡಿಕೆ ಕಡಿಮೆ ಇದ್ದ ಸಂದರ್ಭದಲ್ಲಿ ತಮ್ಮಲ್ಲಿ ಹೆಚ್ಚುವರಿಯಾಗಿದ್ದ ಹಣವನ್ನು ಕೆಲ ಕಾಲ ರಿಸರ್ವ್ ಬ್ಯಾಂಕಿನಲ್ಲಿಡಬಹುದು. ಅದಕ್ಕೆ ಪ್ರತಿಯಾಗಿ ಕೇಂದ್ರ ಬ್ಯಾಂಕ್ ಸರ್ಕಾರದ ಬಾಂಡುಗಳನ್ನು ಬ್ಯಾಂಕಿಗೆ ನೀಡುತ್ತವೆ. ಈ ರಿವರ್ಸ್ ರೆಪೋ ದರದಲ್ಲೂ ಸಮಿತಿ ಯಾವುದೇ ಬದಲಾವಣೆ ಮಾಡಿಲ್ಲ. ಅದನ್ನು ಶೇಕಡ 3.35ರಷ್ಟೇ ಉಳಿಸಿಕೊಳ್ಳಲಾಗಿದೆ. ಆದರೆ, ಇಲ್ಲೊಂದು ಮುಖ್ಯ ಬದಲಾವಣೆಯಾಗಿದೆ. ಈಗ ಆರ್‌ಬಿಐ ರಿವರ್ಸ್ ರೆಪೋ ದರದ ಬದಲು ಸ್ಥಾಯಿ ಠೇವಣಿ ಸೌಲಭ್ಯವನ್ನು (ಸ್ಟಾಂಡಿಂಗ್ ಡಿಪಾಸಿಟ್ ಫೆಸಿಲಿಟಿ) ಚಾಲನೆಗೆ ತಂದಿದೆ. ಈ ಮೂಲಕ ಬ್ಯಾಂಕುಗಳು ತಮ್ಮಲ್ಲಿರುವ ಹೆಚ್ಚುವರಿ ಹಣವನ್ನು ಆರ್‌ಬಿಐನಲ್ಲಿ ಇಟ್ಟು ರಿವರ್ಸ್ ರೆಪೋ ದರಕ್ಕಿಂತ ಶೇಕಡ 0.40ಯಷ್ಟು, ಹೆಚ್ಚೆಂದರೆ, ಶೇಕಡ 3.75ರಷ್ಟು ಬಡ್ಡಿ ಪಡೆಯಬಹುದು. ಈ ವ್ಯವಸ್ಥೆಯಲ್ಲಿ ವಾಣಿಜ್ಯ ಬ್ಯಾಂಕುಗಳು ಇಟ್ಟ ಠೇವಣಿಗಳಿಗೆ ಪ್ರತಿಯಾಗಿ ರಿಸರ್ವ್ ಬ್ಯಾಂಕ್ ಸರ್ಕಾರದ ಬಾಂಡುಗಳನ್ನು ನೀಡುವುದಿಲ್ಲ.

ಆರ್ಥಿಕತೆಯಲ್ಲಿನ ಹಣದ ಪ್ರಮಾಣವನ್ನು ನಿರ್ವಹಿಸುವುದಕ್ಕೆ ಈ ವಿಶೇಷ ಠೇವಣಿ ಸೌಲಭ್ಯವನ್ನು ಒಂದು ಸಾಧನವಾಗಿ ಬಳಸಲಾಗುತ್ತದೆ. ಆರ್ಥಿಕತೆಯಲ್ಲಿ ಹಣ ಹೆಚ್ಚು ಚಲಾವಣೆಯಲ್ಲಿದ್ದರೆ ರಿಸರ್ವ್ ಬ್ಯಾಂಕ್ ಹೆಚ್ಚುವರಿ ಹಣವನ್ನು ಶೇಕಡ 3.75 ಬಡ್ಡಿ ಕೊಟ್ಟು ಪಡೆದುಕೊಳ್ಳುತ್ತದೆ. ಹಾಗೆಯೇ, ಪಾಲಿಸಿ ಕಾರಿಡಾರ್ ಅಂತರವನ್ನು ಅಂದರೆ, ಗರಿಷ್ಠ ಹಾಗೂ ಕನಿಷ್ಠ ಬಡ್ಡಿ ದರಗಳ ನಡುವಿನ ಅಂತರವನ್ನು ಶೇಕಡ 0.50ಗೆ ಸೀಮಿತಗೊಳಿಸಿದೆ. ಇದರಿಂದ ಬಡ್ಡಿ ದರಗಳು 3.75 ಹಾಗೂ 4.25ರ ನಡುವೆ ಚಲಿಸಬೇಕಾದ್ದರಿಂದ ಹಣಕಾಸು ಸ್ಥಿರತೆ ಸಾಧ್ಯ ಎಂಬುದು ಅಂದಾಜು.

Image
Narendra Modi
ಪ್ರಧಾನಿ ನರೇಂದ್ರ ಮೋದಿ

ಫೆಬ್ರವರಿಯಲ್ಲಿ ನಡೆದ ಸಭೆಯಲ್ಲಿ ಹಣದುಬ್ಬರ ಮತ್ತು ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದಂತೆ ಮಾಡಿದ ಅಂದಾಜನ್ನು ಹಣಕಾಸು ನೀತಿ ಸಮಿತಿಯು ಇತ್ತೀಚಿನ ಸಭೆಯಲ್ಲಿ ಪರಿಷ್ಕರಿಸಿದೆ. ಹಿಂದಿನ ಸಭೆಯಲ್ಲಿ ಪ್ರಸ್ತುತ ಹಣಕಾಸು ವರ್ಷದಲ್ಲಿ ಶೇಕಡ 7.8ರಷ್ಟು ಬೆಳವಣಿಗೆಯನ್ನು ಅಂದಾಜು ಮಾಡಲಾಗಿತ್ತು. ಈಗ ಅದು ತನ್ನ ಅಂದಾಜನ್ನು ಶೇಕಡ 7.3ಕ್ಕೆ ಇಳಿಸಿಕೊಂಡಿದೆ. ಹಾಗೆಯೇ, ಗ್ರಾಹಕರ ಬೆಲೆ ಸೂಚಿಯ ಹಣದುಬ್ಬರದ ದರವನ್ನು ಶೇಕಡ 4.5ರಷ್ಟು ಇರುತ್ತದೆ ಎಂದು ಅಂದಾಜು ಮಾಡಿತ್ತು. ಈಗ ಅದನ್ನು ಶೇಕಡ 5.7ರಷ್ಟು ಆಗಬಹುದು ಎಂದು ಅಂದಾಜು ಮಾಡಿದೆ. ಹೀಗೆ ಅಂದಾಜು ಮಾಡುವಾಗ, ಕಚ್ಚಾ ತೈಲ ಪ್ರಸಕ್ತ ಸಾಲಿನಲ್ಲಿ ಪ್ರತಿ ಬ್ಯಾರಲ್‌ಗೆ 100 ಡಾಲರ್ ಇರುತ್ತದೆ ಎಂದು ಭಾವಿಸಲಾಗಿದೆ.

ಈವರೆಗೂ ಆರ್ಥಿಕ ಬೆಳವಣಿಗೆಗೆ ಆದ್ಯತೆ ನೀಡಿದ್ದರಿಂದ ಅದಕ್ಕೆ  ಪೂರಕವಾಗುವಂತೆ ಅಕಾಮಡೇಟಿವ್ ಅಥವಾ ಹೊಂದಿಕೊಳ್ಳುವ ನಿಲುವನ್ನು ರಿಸರ್ವ್ ಬ್ಯಾಂಕ್ ಇಟ್ಟುಕೊಂಡಿತ್ತು. ಅಂದರೆ, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದಕ್ಕೆ ಬೇಕಾದ ಹಣದ ಪೂರೈಕೆಯನ್ನು ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲು ಸಿದ್ಧವಿತ್ತು. ಅದಕ್ಕಾಗಿ ಬಡ್ಡಿ ದರವನ್ನು ಕಡಿತಗೊಳಿಸುವುದಕ್ಕೆ ಬದ್ಧವಾಗಿತ್ತು. ಅದರಿಂದ ಬಡ್ಡಿ ದರವನ್ನು ಹೆಚ್ಚಿಸುವ ಸಾಧ್ಯತೆ ಇರಲಿಲ್ಲ. ಯಾಕೆಂದರೆ, ಹೆಚ್ಚಿನ ಬಡ್ಡಿ ದರ ಆರ್ಥಿಕ ಬೆಳವಣಿಗೆಗೆ ಮಾರಕ ಎಂಬುದು ಸ್ವೀಕೃತ ನಂಬಿಕೆಯಾಗಿತ್ತು. ಆದರೆ, ಈಗ ರಿಸರ್ವ್ ಬ್ಯಾಂಕ್ ಹಣದುಬ್ಬರದ ನಿಯಂತ್ರಣ ಆದ್ಯತೆಯ ವಿಷಯ ಎಂದು ಘೋಷಿಸಿದೆ. ಹಾಗಾಗಿ ಅದು ತನ್ನ ಬೆಳವಣಿಗೆಗೆ ಹೊಂದಿಕೊಳ್ಳುವ ನಿಲುವನ್ನು ಕೈಬಿಟ್ಟು, ನ್ಯೂಟ್ರಲ್ ಅಂದರೆ ತಟಸ್ಥ ನೀತಿಯನ್ನು ತಾಳುವ ಸಾಧ್ಯತೆ ಇದೆ. ಅಂದರೆ, ಬಡ್ಡಿ ದರವನ್ನು ಅವಶ್ಯಕತೆಗೆ ತಕ್ಕಂತೆ ಏರಿಸಲೂಬಹುದು. ಇಳಿಸಲೂಬಹುದು. ಆದರೆ, ಈ ಸಭೆಯಲ್ಲಿ ಅಂತಹ ನಿರ್ಧಾರ ತೆಗೆದುಕೊಂಡಿಲ್ಲ.

ಆದರೆ ರಿಸರ್ವ್ ಬ್ಯಾಂಕು ಮಾಡಿರುವ ಹಣದುಬ್ಬರ ಮತ್ತು ಆರ್ಥಿಕ ಬೆಳವಣಿಗೆಯ ದರದ ಬಗೆಗಿನ ಲೆಕ್ಕಾಚಾರದ ಬಗ್ಗೆ ಸಾಕಷ್ಟು ಅನುಮಾನಗಳನ್ನು ವ್ಯಕ್ತಪಡಿಸಲಾಗಿದೆ. “ಭೂ-ರಾಜಕೀಯ ಘರ್ಷಣೆಯಿಂದ, ಜಾಗತಿಕ ಸರಕು ಬೆಲೆ ಏರುತ್ತಿರುವುದರಿಂದ, ಪೂರೈಕೆಯಲ್ಲಿ ಆಗಬಹುದಾದ ವ್ಯತ್ಯಯದಿಂದ ಹಣದುಬ್ಬರ ಹೆಚ್ಚುವ ಹಾಗೂ ದೇಶಿಯ ಬೆಳವಣಿಗೆ ಕುಂಠಿತಗೊಳ್ಳುವ ಸಾಧ್ಯತೆ ಇದೆ,” ಎಂದು ಹಣಕಾಸು ನೀತಿ ಸಮಿತಿ ಒಪ್ಪಿಕೊಳ್ಳುತ್ತದೆ. ಹಾಗಾಗಿ, ಹಣದುಬ್ಬರವು ನಿರೀಕ್ಷೆಯ ಮಟ್ಟಕ್ಕಿಂತ ಏರುವ ಸಾಧ್ಯತೆ ಇದೆ. ಹಾಗೆಯೇ, ಆರ್ಥಿಕ ಪ್ರಗತಿ ಕುಂಠಿತವಾಗುವ ಸಾಧ್ಯತೆಯೂ ಇದೆ. ಹಾಗಾಗಿ, ಹಣದುಬ್ಬರವನ್ನು ನಿಯಂತ್ರಿಸುವುದನ್ನು ಆರ್ಥಿಕತೆಯ ದೃಷ್ಟಿಯಿಂದ ಮುಖ್ಯ ಎಂದು ಕೇಂದ್ರ ಬ್ಯಾಂಕ್ ಭಾವಿಸಿದ್ದರೆ, ರೆಪೋ ದರ ಏರಿಸುವುದರಿಂದ ಅದನ್ನು ನಿಯಂತ್ರಿಸುವುದಕ್ಕೆ ಸಾಧ್ಯ ಎಂದು ಅಂದುಕೊಂಡಿದ್ದರೆ ತಕ್ಷಣದಲ್ಲಿ ರೆಪೋ ದರ ಏರಿಸಬೇಕಾಗುತ್ತದೆ. ಆದರೆ, ಅದರಿಂದ ಆರ್ಥಿಕ ಪ್ರಗತಿ ಆಗಿಬಿಡುವುದಿಲ್ಲ. ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದಕ್ಕೆ ಹೂಡಿಕೆಯನ್ನು ಹೆಚ್ಚಿಸುವಂತಹ ಪ್ರತ್ಯೇಕ ಕ್ರಮಗಳನ್ನು ತೆಗೆದುಕೊಳ್ಳಬೇಕು. ನಿರುದ್ಯೋಗ, ಆರ್ಥಿಕ ಪ್ರಗತಿ, ದಾರಿದ್ರ್ಯ,, ಅಸಮಾನತೆ ಇವೆಲ್ಲವನ್ನು ನೇರವಾಗಿ ಎದುರಿಸದೆ ಹೋದರೆ ಪರಿಹಾರ ಸಾಧ್ಯವಿಲ್ಲ. ಸರ್ಕಾರಗಳು ಹಣದುಬ್ಬರದ ಬಗ್ಗೆ ತೋರುವ ಕಾಳಜಿಯನ್ನು ಉಳಿದ ವಿಷಯಗಳ ಬಗ್ಗೆ ತೋರುವುದಿಲ್ಲ.

ನಿಮಗೆ ಏನು ಅನ್ನಿಸ್ತು?
0 ವೋಟ್