ಮೀಸಲಾತಿ ದಿನ | ಬಹುಜನರಿಗೆ 50% ಮೀಸಲಾತಿ ಘೋಷಿಸಿದ ಶಾಹು ಮಹಾರಾಜ್‌

shahu maharaj
  • ಮೀಸಲಾತಿ ಪರಿಕಲ್ಪನೆ ಕಟ್ಟಿಕೊಟ್ಟವರು ಶಾಹು ಮಹಾರಾಜ್‌
  • ಶೂದ್ರರಿಗೆ ಸರ್ಕಾರಿ ನೌಕರಿಯಲ್ಲಿ ಶೇ. 50ರಷ್ಟು ಮೀಸಲಾತಿ

ಶ್ರೇಣೀಕೃತ ಜಾತಿ ವ್ಯವಸ್ಥೆ ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಕಾಲವದು. ಪುರೋಹಿತಶಾಹಿಗಳು ಬಹುಜನರನ್ನು ಮೂಢನಂಬಿಕೆಗೆ ದೂಡಿದ್ದರು.  ಮೇಲ್ವರ್ಗದವರು ಶೂದ್ರರನ್ನು ಪ್ರಾಣಿಯಂತೆ ನಡೆಸಿಕೊಳ್ಳುತ್ತಿದ್ದ ಕಾಲಘಟ್ಟದಲ್ಲಿ  ಶೂದ್ರರ ಪರವಾಗಿ ದನಿಯೆತ್ತಿದ ಮಹಾನ್‌ ವ್ಯಕ್ತಿ ಶಾಹು ಮಹಾರಾಜ್.

ಘನತೆ, ಸಮಾನತೆ, ಸಮಾನ ಅವಕಾಶಗಳನ್ನು ಪ್ರತಿಪಾದಿಸಿದ್ದ ಶಾಹು ಮಹಾರಾಜ್‌ ಇಂದಿಗೆ 120 ವರ್ಷಗಳ ಹಿಂದೆಯೇ ಮೀಸಲಾತಿಯ ಕಲ್ಪನೆಯನ್ನು ಪರಿಚಯಿಸಿದ್ದರು.  ಸಾಮಾಜಿಕ ಪ್ರಜಾಪ್ರಭುತ್ವದ ರೂವಾರಿ, ಮಹಾನ್‌ ದಾರ್ಶನಿಕರಾಗಿದ್ದ ಶಾಹು ಮಹಾರಾಜ್‌ ಜ್ಯೋತಿಬಾ ಫುಲೆಯವರ ಸಶಕ್ತ ಉತ್ತರಾಧಿಕಾರಿ. ಅಸ್ಪೃಶ್ಯರು ಮತ್ತು ಹಿಂದುಳಿದ ವರ್ಗದವರಿಗೆ ಶಿಕ್ಷಣದ ಜತೆ ಅಧಿಕಾರದಲ್ಲಿ ಸಮಪಾಲು ಮತ್ತು ಸಾಮಾಜಿಕ ಸ್ಥಾನಮಾನ ದೊರಕಿಸಿಕೊಟ್ಟವರು. 

ಶೇಕಡಾ 50 ರಷ್ಟು ಮೀಸಲಾತಿ ಜಾರಿಗೆ

ತಮ್ಮ ಆಸ್ಥಾನದಲ್ಲಿ ʼಮೇಲ್ವರ್ಗದವರುʼ ಶೂದ್ರರನ್ನು ನಡೆಸಿಕೊಳ್ಳುತ್ತಿದ್ದ ರೀತಿಗೆ ಬೇಸತ್ತ ಶಾಹು ಮಹಾರಾಜ್‌ ತಮ್ಮ ಸಂಸ್ಥಾನದಲ್ಲಿ ಜುಲೈ 26, 1902ರಂದು ಶೂದ್ರರಿಗೆ ಸರ್ಕಾರಿ ನೌಕರಿಯಲ್ಲಿ ಶೇಕಡಾ 50ರಷ್ಟು ಮೀಸಲಾತಿ ಜಾರಿಗೆ ತಂದರು. ಈ ಮೀಸಲಾತಿಯನ್ನು ಬ್ರಾಹ್ಮಣ ಸಮುದಾಯ ತೀವ್ರವಾಗಿ ಖಂಡಿಸಿತು. ಇನ್ನೂ ಕೆಲವರು ಶಾಹು ಮಹಾರಾಜ್‌ ಅವರನ್ನು ಕೊಲ್ಲುವ ಪ್ರಯತ್ನಕ್ಕೂ ಮುಂದಾದರು. ಬಹುಮುಖ್ಯವಾಗಿ ಬಾಲಗಂಗಾಧರ ನಾಥ ತಿಲಕರು ಮೀಸಲಾತಿಯನ್ನು ತೀವ್ರವಾಗಿ ಖಂಡಿಸಿದರು. ಆದರೆ, ಶಾಹು ಮಹಾರಾಜರು ಮಾತ್ರ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. 

ಒಂದು ದಿನ ಸಾಂಗ್ಲಿಯ ವಕೀಲ ಗಣಪತಿರಾವ್ ಅಭ್ಯಂಕರ್, ಶಾಹು ಮಹಾರಾಜರನ್ನು ಭೇಟಿಯಾಗಿ ಮೀಸಲಾತಿ ಬಗ್ಗೆ ಅಸಮ್ಮತಿ ಸೂಚಿಸುತ್ತಾರೆ. ಅವರ ವಾದವನ್ನು ಶಾಂತವಾಗಿ ಮತ್ತು ಗಂಭೀರವಾಗಿ ಆಗ ಯಾವ ವಿವಾದಕ್ಕೂ ಇಳಿಯದೆ ಮೌನವಾಗಿ ಕೇಳಿಸಿಕೊಳ್ಳುತ್ತಾರೆ.  ಅವರಿಬ್ಬರೂ ಕುಳಿತ ರಥ ಮಾತ್ರ ಅರಮನೆಯ ಹೆಬ್ಬಾಗಿಲಿಗೆ ಬರುತ್ತದೆ. ಆಗ ತನ್ನ ಮೌನ ಮುರಿದ ಮಹಾರಾಜರು ತನ್ನ ರಥಿಕನಿಗೆ ರಥವನ್ನು ಅಶ್ವಶಾಲೆಯತ್ತ ತಿರುಗಿಸುವಂತೆ ಆಜ್ಞಾಪಿಸುತ್ತಾರೆ. ಅಲ್ಲಿ ರಥದಿಂದ ಇಬ್ಬರೂ ಇಳಿಯುತ್ತಾರೆ. ತಕ್ಷಣ ಮಹಾರಾಜರು ತನ್ನ ಅಶ್ವಶಾಲೆಯ ಅಧಿಕಾರಿಯನ್ನು ಕರೆದು ಕುದುರೆಗಳಿಗೆ ಮೇವು ಹಾಕಲು ಆಜ್ಞಾಪಿಸುತ್ತಾರೆ. ಕೂಡಲೇ ಸೇವಕರು ಎಲ್ಲಾ ಕುದುರೆಗಳನ್ನು ಮೇವಿನ ತಾಣಕ್ಕೆ ಒಯ್ದು ಮೇವು ಹಾಕುತ್ತಾರೆ. ಆಗ ಎಲ್ಲ ಕುದುರೆಗಳು ಮೇವು ತಿನ್ನಲು ಮುನ್ನುಗ್ಗುತ್ತವೆ.

ಆದರೆ ಅಲ್ಲಿ ಬಲಿಷ್ಠ ಕುದುರೆಗಳು ದುರ್ಬಲ ಕುದುರೆಗಳನ್ನು ಹಿಂದಕ್ಕೆ ತಳ್ಳಿ ಮೇವು ತಿನ್ನಲು ಪ್ರಾರಂಭಿಸುತ್ತವೆ. ಇದನ್ನು ನಿರೀಕ್ಷಿಸುತ್ತಲೇ ಇದ್ದ ಮಹಾರಾಜರು ಕುದುರೆಗಳನ್ನು ಬೊಟ್ಟು ಮಾಡುತ್ತಾ ವಕೀಲರಿಗೆ ಹೇಳುತ್ತಾರೆ, ‘‘ನೋಡಿ ಬಲಿಷ್ಠ ಕುದುರೆಗಳು ತಿಂದುತೇಗುತ್ತಾ ಹೋಗುತ್ತಿವೆ. ಆದರೆ ದುರ್ಬಲ ಕುದುರೆಗಳು ಮೇವು ಸಿಗದೆ ಕಂಗಾಲಾಗಿವೆ. ಅದಕ್ಕಾಗಿಯೇ ನಾನು ದುರ್ಬಲರ ಬಗ್ಗೆ ಕಾಳಜಿ ವಹಿಸುತ್ತೇನೆ. ಒಂದು ವೇಳೆ ನಾನು ಹಾಗೆ ಮಾಡದಿದ್ದರೆ ಅವರೆಲ್ಲಾ ಉಪವಾಸದಿಂದ ಸಾಯುತ್ತಾರೆ. ಈಗ ಹೇಳಿ, ಶೂದ್ರರಿಗೆ ಮೀಸಲಾತಿ ನೀಡುವುದು ತಪ್ಪೇ? ನೀವೇ ಹೇಳಿ’’ ಎಂದರು. ಆಗ ವಕೀಲರು ನಿರುತ್ತರರಾಗುತ್ತಾರೆ. ಅಂದಿನಿಂದ ಅವರು ಶಾಹು ಮಹಾರಾಜ್ರ ನೀತಿಯ ಸಮರ್ಥಕರಲ್ಲಿ ಒಬ್ಬರಾಗುತ್ತಾರೆ.

ಅಂಬೇಡ್ಕರ್‌ ಜತೆ ಶಾಹು ಮಹಾರಾಜರ ಒಡನಾಟ

ಕಲಾವಿದರಾದ ದತ್ತೋಬ ಪವಾರ್ ಮತ್ತು ಡಿಟ್ಟೋಬ ದಳವಿ ಅವರು ಶಾಹುಮಹಾರಾಜರಿಗೆ ಡಾ. ಬಿ ಆರ್‌ ಅಂಬೇಡ್ಕರ್‌ ಅವರನ್ನು ಪರಿಚಯಿಸಿದರು. ಅಂಬೇಡ್ಕರ್‌ ಅವರ ಕ್ರಾಂತಿಕಾರಿ ವಿಚಾರಗಳಿಂದ ಶಾಹು ಮಹಾರಾಜರು ಪ್ರಭಾವಿತರಾದರು. 1917 ರಿಂದ 1921ರವರೆಗೆ ಇಬ್ಬರೂ ಅನೇಕ ಬಾರಿ ಭೇಟಿಯಾಗಿ ʼಜಾತಿ ಆಧಾರಿತ ಮೀಸಲಾತಿʼ ನೀಡುವ ನಿಟ್ಟಿನಲ್ಲಿ ಚರ್ಚಿಸಿದರು. ಅಲ್ಲದೆ, ಶಾಹು ಮಹಾರಾಜರು 1920 ರ ಮಾರ್ಚ್‌ 21-22ರಲ್ಲಿ ಅಸ್ಪೃಶ್ಯರ ಒಳಿತಿಗಾಗಿ ಒಂದು ಸಮ್ಮೇಳನ ಆಯೋಜಿಸಿದರು. ಡಾ ಬಾಬಾ ಸಾಹೇಬರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದರು. 1921ರ ಜನವರಿ 31ರಂದು ಅಂಬೇಡ್ಕರ್‌ ಮತ್ತು ಶಾಹು ಮಹಾರಾಜು ಒಟ್ಟುಗೂಡಿ ಮೂಕನಾಯಕ ಪತ್ರಿಕೆ ಆರಂಭಿಸಿದರು.

ಈ ಸುದ್ದಿ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ನಾಚಬೇಡಿ ಹೆಣ್ತನಕೆ, ತಲೆಯೆತ್ತಿ ನಿಲ್ಲಿರಿ: ವಿಜಯಾ ದಬ್ಬೆ

ಅಸ್ಪೃಶ್ಯರ ಏಳಿಗೆಗೆ ಶ್ರಮಿಸಿದ ಶಾಹು ಮಹಾರಾಜ್

ಶಾಹು ಮಹಾರಾಜರು ಅಸ್ಪೃಶ್ಯರಿಗಾಗಿ 18 ಪ್ರತ್ಯೇಕ ಶಾಲೆಗಳ ಸ್ಥಾಪಿಸಿದರು. 1908ರಲ್ಲಿ ವಿದ್ಯಾಸಂಸ್ಥೆಯೊಂದರನ್ನು ಆರಂಭಿಸಿದರು. 1896 ರಿಂದ 1912ರ ಅವಧಿಯಲ್ಲಿ ಶೂದ್ರರಿಗೆ 22, ಅಸ್ಪೃಶ್ಯರಿಗೆ 27 ಶಾಲೆಗಳನ್ನು ನಿರ್ಮಿಸಿದರು. 1918 ರಲ್ಲಿ ಮಹಾತ್ಮ ಜೋತಿಬಾ ಫುಲೆ ಅವರ ಸತ್ಯಶೋಧಕ ಸಮಾಜವನ್ನು ಮುನ್ನಡೆಸಲು "ಶಾಹು ಸತ್ಯ ಶೋಧಕ ಸಮಾಜ" ಸ್ಥಾಪಿಸಿದರು.  ಶಾಹು ಮಹಾರಾಜರ ಈ ಮೀಸಲಾತಿಯು ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಬ್ರಾಹ್ಮಣೇತರ ಸಮುದಾಯಗಳಿಗೆ ಅವಕಾಶ ಕಲ್ಪಿಸಿತು. ಶಾಹು ಮಹಾರಾಜರ ಶಿಕ್ಷಣ ಸೇವೆ ಗುರುತಿಸಿದ ಕೆಂಬ್ರಿಡ್ಜ್‌ ವಿಶ್ವವಿದ್ಯಾಲಯ 1902ರ ಜೂನ್‌ 10 ರಂದು ಎಲ್‌ಎಲ್‌ಡಿ ಪದವಿ ನೀಡಿ ಗೌರವಿಸಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್