EWS | ಬಡತನದ ಕಾಯಿಲೆಗೆ ಮೀಸಲಾತಿ ಸರಿಯಾದ ಔಷಧವೇ?

ಭಾರತದ ಬಡತನ

ಈ ಹಿಂದೆ ನರಸಿಂಹರಾವ್ ಅವರ ಕಾಂಗ್ರೆಸ್ ಸರ್ಕಾರ ಕೂಡ ಇದೇ ರೀತಿಯ ವ್ಯವಸ್ಥೆ ಮಾಡಿತ್ತು. 1992ರಲ್ಲಿ ಸುಪ್ರೀಂ ಕೋರ್ಟ್ ಇದನ್ನು ಅಸಂವಿಧಾನಿಕ ಎಂದು ವಜಾಗೊಳಿಸಿತು. ಈ ಹೊಸ ತಿದ್ದುಪಡಿಯನ್ನು ಸಹ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಆದರೆ ಈ ಬಾರಿ ಇದಕ್ಕೆ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಅನುಮೋದನೆಯ ಮುದ್ರೆ ಹಾಕಿದೆ.

ಸಾಮಾನ್ಯ ವರ್ಗದ ಬಡವರಿಗಾಗಿ ಮಾಡಿದ ಮೀಸಲಾತಿ ವ್ಯವಸ್ಥೆಗೆ ಸುಪ್ರೀಂ ಕೋರ್ಟ್ ತನ್ನ ಒಪ್ಪಿಗೆಯ ಮುದ್ರೆಯನ್ನು ನೀಡಿದೆ. ಮೇಲ್ನೋಟಕ್ಕೆ ಈ ನಿರ್ಧಾರವು ಸಮರ್ಥನೀಯ ಮತ್ತು ತಾರ್ಕಿಕವಾಗಿ ಕಾಣುತ್ತದೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ, ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠದ ಈ ನಿರ್ಧಾರದಿಂದ ಕೆಲವು ದೊಡ್ಡ ಪ್ರಶ್ನೆಗಳು ಉದ್ಭವಿಸಿವೆ. ಈ ನಿರ್ಧಾರವು ಭವಿಷ್ಯದಲ್ಲಿ ಅನೇಕ ವೈಪರೀತ್ಯಗಳಿಗೆ ಕಾರಣವಾಗಬಹುದು.

Eedina App

ಮೇಲ್ವರ್ಗದವರಲ್ಲಿ ಕೂಡ ಆರ್ಥಿಕವಾಗಿ ದುರ್ಬಲರ, ಬಡವರ ಸಂಖ್ಯೆ ದೊಡ್ಡದಿದೆ ಎಂಬುದರಲ್ಲಿ ಸಂದೇಹವಿಲ್ಲ. ಉತ್ತರ ಪ್ರದೇಶ ಮತ್ತು ಬಿಹಾರದಿಂದ, ದೆಹಲಿ ಮತ್ತು ಮುಂಬೈನಂತಹ ಮಹಾನಗರಗಳಲ್ಲಿ ಬಂದು ಕೆಲಸ ಮಾಡುವ ಜನರಲ್ಲಿ ಮೇಲ್ಜಾತಿಗಳಿಗೆ ಸೇರಿದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರು ಸಾಮಾಜಿಕ ಪ್ರತಿಷ್ಠೆಯ ಕಾರಣ ಅವರ ಹಳ್ಳಿಗಳಲ್ಲಿ ಕಾರ್ಮಿಕ /ಶ್ರಮದಾಯಕ ದುಡಿಮೆ ಮಾಡುವಂತಿಲ್ಲ. ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಪಡೆಯುವಲ್ಲಿ ಕುಟುಂಬದ ಆರ್ಥಿಕ ಸ್ಥಿತಿ ಕೂಡ ದೊಡ್ಡ ಪಾತ್ರವನ್ನು ಹೊಂದಿದೆ ಎಂಬುದರಲ್ಲಿ ಸಂದೇಹವಿಲ್ಲ.

ಇತ್ತೀಚಿನ ದಿನಗಳಲ್ಲಿ ಪ್ರತಿ ಪರೀಕ್ಷೆಯು ಟ್ಯೂಷನ್ ಮತ್ತು ಕೋಚಿಂಗ್ ಅನ್ನು ಅವಲಂಬಿಸಿರುತ್ತದೆ. ನಿಮ್ಮ ಜಾತಿ ಯಾವುದೇ ಇರಲಿ, ನಿಮ್ಮ ಹೆತ್ತವರಿಗೆ ದುಬಾರಿ ತರಬೇತಿ ವೆಚ್ಚ ಭರಿಸಲು ಸಾಧ್ಯವಾಗದಿದ್ದರೆ, ನಂತರ ನಿಮ್ಮ ಉನ್ನತ ಶಿಕ್ಷಣ ಮತ್ತು ಉದ್ಯೋಗ ಪರೀಕ್ಷೆಗಳಲ್ಲಿ ಯಶಸ್ವಿಯಾಗುವ ಸಾಧ್ಯತೆಗಳು ಬಹಳ ಕಡಿಮೆಯಾಗುತ್ತವೆ. ನಿಸ್ಸಂಶಯವಾಗಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ ಹೊರತಾಗಿ, ಸಾಮಾನ್ಯ ವರ್ಗದ ಬಡ ಕುಟುಂಬಗಳ ಮಕ್ಕಳಿಗೂ ಅವಶ್ಯಕ ವ್ಯವಸ್ಥೆಗಳನ್ನು ಮಾಡುವ ಅಗತ್ಯವಿದೆ.

AV Eye Hospital ad

ಪ್ರಶ್ನೆಯೆಂದರೆ, ಈ ವ್ಯವಸ್ಥೆಯು ಮೀಸಲಾತಿಯ ರೂಪವನ್ನು ಪಡೆಯಬೇಕೇ? ಸಾಮಾನ್ಯ ವರ್ಗದ ಬಡವರಿಗೂ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿಯ ಲಾಭ ಸಿಗಬೇಕೆ? ಬಡತನದ ಆಧಾರದ ಮೇಲೆ ದೊರೆಯುವ ಈ ಮೀಸಲಾತಿಯಿಂದ ದಲಿತ, ಬುಡಕಟ್ಟು ಮತ್ತು ಹಿಂದುಳಿದ ವರ್ಗದ ಬಡ ಜನರ ಹೊರಹಾಕಬಹುದೇ ? ಈ ಪ್ರಶ್ನೆ ಸುಪ್ರೀಂಕೋರ್ಟಿನ ಮುಂದಿತ್ತು. ಸರ್ಕಾರ 2019 ಚುನಾವಣೆಗೂ ಮುನ್ನ 103ನೇ ಸಂವಿಧಾನ ತಿದ್ದುಪಡಿಯ ಮೂಲಕ ಸಾಮಾನ್ಯ ವರ್ಗದ ಬಡ ಅಭ್ಯರ್ಥಿಗಳಿಗೆ ಈಗಿರುವ ಮೀಸಲಾತಿಯ ಹೊರತಾಗಿ ಶೇಕಡಾ 10 ಮೀಸಲಾತಿ ವ್ಯವಸ್ಥೆ ಮಾಡಿತ್ತು. ಆಗ ಎಲ್ಲ ಪಕ್ಷಗಳೂ ಬೆಂಬಲಿಸಿದವು.

ಮಾಜಿ ಪ್ರಧಾನಿ ನರಸಿಂಹರಾವ್‌

ಈ ಹಿಂದೆ ನರಸಿಂಹರಾವ್ ಅವರ ಕಾಂಗ್ರೆಸ್ ಸರ್ಕಾರ ಕೂಡ ಇದೇ ರೀತಿಯ ವ್ಯವಸ್ಥೆ ಮಾಡಿತ್ತು. 1992ರಲ್ಲಿ ಸುಪ್ರೀಂ ಕೋರ್ಟ್ ಇದನ್ನು ಅಸಂವಿಧಾನಿಕ ಎಂದು ವಜಾಗೊಳಿಸಿತು. ಈ ಹೊಸ ತಿದ್ದುಪಡಿಯನ್ನು ಸಹ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಆದರೆ ಈ ಬಾರಿ ಇದಕ್ಕೆ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಅನುಮೋದನೆಯ ಮುದ್ರೆ ಹಾಕಿದೆ. ನಿರ್ಣಯವು ಸರ್ವಾನುಮತದಿಂದ ಇರಲಿಲ್ಲ. ಮೂವರು ನ್ಯಾಯಮೂರ್ತಿಗಳು ಅಂದರೆ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ, ಬೇಲಾ ಎಂ ತ್ರಿವೇದಿ ಮತ್ತು ಜೆ ಬಿ ಪರ್ದಿವಾಲಾ ಈ ಸಾಂವಿಧಾನಿಕ ತಿದ್ದುಪಡಿಯನ್ನು ಸಮರ್ಥಿಸಿಕೊಂಡರು. ನಿರ್ಗಮಿಸುತ್ತಿರುವ ಮುಖ್ಯ ನ್ಯಾಯಾಧೀಶ ಯು. ಯು. ಲಲಿತ್ ಮತ್ತು ನ್ಯಾಯಮೂರ್ತಿ ಭಟ್ ಸಂವಿಧಾನ ತಿದ್ದುಪಡಿಯನ್ನು ಅಸಾಂವಿಧಾನಿಕ ಎಂದು ಘೋಷಿಸಿದರು.

ಪೀಠದ ಸಂಪೂರ್ಣ ತೀರ್ಪನ್ನು ಓದಿದ ನಂತರ, ನಿಸ್ಸಂಶಯವಾಗಿ ಈ ಬಗ್ಗೆ ಸಾಕಷ್ಟು ಗದ್ದಲವಾಗುತ್ತದೆ. ಚರ್ಚೆಗಳು ನಡೆಯುತ್ತವೆ. ಆದರೆ ಆರಂಭಿಕವಾಗಿ ನ್ಯಾಯಾಲಯವು ತೀರ್ಪು ನೀಡಿರುವ ತಾರ್ಕಿಕತೆಯ ಆಧಾರದ ಮೇಲೆ ಕೆಲವು ಪ್ರಶ್ನೆಗಳನ್ನು ಎತ್ತಬೇಕಾಗಿದೆ. ಈಗ ಕಾನೂನುಬದ್ಧತೆಯನ್ನು ಹೊರತುಪಡಿಸಿ, ಎರಡು ಮಹತ್ವದ ಪ್ರಶ್ನೆಗಳನ್ನು ಕೇಳ ಬೇಕಾಗಿದೆ.

ಮೊದಲ ಪ್ರಶ್ನೆ ; ಬಡತನದ ಕಾಯಿಲೆಗೆ ಮೀಸಲಾತಿ ಸರಿಯಾದ ಔಷಧವೇ?
ಸಂವಿಧಾನದಲ್ಲಿ 'ಸಾಮಾಜಿಕ ಮತ್ತು ಶೈಕ್ಷಣಿಕ ರೀತಿಯಲ್ಲಿ ಹಿಂದುಳಿದ ವರ್ಗಗಳಿಗಾಗಿ ಇರುವ ವಿಶೇಷ ವ್ಯವಸ್ಥೆಯ ಅನುಮತಿಯನ್ನು ಬಡವರಿಗೂ ಅನ್ವಯಿಸಬಹುದೇ? ಎಂಬ ಬಗ್ಗೆ ಕಾನೂನು ಸಮಸ್ಯೆ ಇದೆ. ಆದರೆ ಈ ಕಾನೂನು ಜಟಿಲತೆಯನ್ನು ಬಿಟ್ಟರೂ ಯಾವ ಸಂದರ್ಭಗಳಲ್ಲಿ ಮೀಸಲಾತಿಯಂತಹ ಸಾಧನವನ್ನು ಬಳಸಬಹುದು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದುವರೆಗೆ ಮೀಸಲಾತಿ ಪರವಾದ ವಾದವೇನೆಂದರೆ ಇದು ಪೀಳಿಗೆಯಿಂದ ಪೀಳಿಗೆಗೆ, ನೂರಾರು ವರ್ಷಗಳ ನಿಷೇಧಗಳು ಮತ್ತು ಕೊರತೆಗಳನ್ನು ಕಡಿಮೆ ಮಾಡಲು ಬಳಸಬಹುದಾದ ಅಸಾಧಾರಣ ಸಾಧನವಾಗಿದೆ.

ಯಾವುದೇ ಒಂದು ಕುಟುಂಬ ಅಥವಾ ವ್ಯಕ್ತಿಯ ಸಮಸ್ಯೆಗಳು ಅಥವಾ ಅವಕಾಶಗಳ ಸಮಾನತೆಗಾಗಿ ಇದನ್ನು ಬಳಸಿದರೆ ಅದು ಮೀಸಲಾತಿಯಂತಹ ಅಸಾಧಾರಣ ಸಾಧನದ ದುರುಪಯೋಗವಾಗಲಿದೆ. ಬಡತನದಿಂದ ಉಂಟಾಗಿರುವ ಅಸಮಾನತೆ ಸರಿಯಾಗಬೇಕಾದರೆ ಅದಕ್ಕೆ ಒಳ್ಳೆಯ ಶಾಲಾ ವ್ಯವಸ್ಥೆ, ವಿದ್ಯಾರ್ಥಿವೇತನ ಮತ್ತು ಇತರ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವುದು ಉತ್ತಮವಾಗಿರುತ್ತದೆ. ನೀವು ನಿಜವಾಗಿಯೂ ಬಡವರಿಗೆ ಉತ್ತಮ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ನೀಡಲು ಬಯಸಿದ್ದರೆ ಮೊದಲು ಶಿಕ್ಷಣದ ಖಾಸಗೀಕರಣವನ್ನು ನಿಲ್ಲಿಸಬೇಕು. ಇದರಿಂದಾಗಿಯೇ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವುದು ಕಷ್ಟವಾಗಿದೆ. ಪ್ರಶ್ನೆ ಏನೆಂದರೆ ದುಬಾರಿ ಶಿಕ್ಷಣದ ಬಗ್ಗೆ ಮೇಲ್ಜಾತಿಯ ಬಡವರಿಗಿರುವ ಕೋಪದಿಂದ ಅವರ ಗಮನವನ್ನು ಬೇರೆಡೆಗೆ ತಿರುಗಿಸಲು ಮೀಸಲಾತಿಯ ಲಾಲಿಪಾಪ್ ಅನ್ನು ಅವರ ಕೈಗಿಡಲಾಗಿದೆಯೇ ?

ಎರಡನೇ ಪ್ರಶ್ನೆ; ಬಡ ಕುಟುಂಬಗಳ ಮಕ್ಕಳಿಗೆ ಮೀಸಲಾತಿ ನೀಡಬೇಕೆಂದಿದ್ದಲ್ಲಿ ಸಾಮಾನ್ಯ ವರ್ಗಕ್ಕೆ ಮಾತ್ರ ಏಕೆ?
ತಮ್ಮ ಭಿನ್ನ ನಿರ್ಧಾರದಲ್ಲಿ ನ್ಯಾಯಮೂರ್ತಿ ಭಟ್ ಮತ್ತು ಲಲಿತ್ ಅವರು ಸರ್ಕಾರದ ಸಮೀಕ್ಷೆಯನ್ನು ಉಲ್ಲೇಖಿಸಿದ್ದಾರೆ. ದೇಶದ 6 ಬಡವರಲ್ಲಿ 5 ಮಂದಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಂದ ಬಂದವರು ಎಂದು ಅದು ಹೇಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಬಡವರ ಮೀಸಲಾತಿಯ ಹೆಚ್ಚಿನ ಭಾಗವೂ ಸಹ ಈ ವರ್ಗದ ಅಭ್ಯರ್ಥಿಗಳು ಪಡೆಯಬೇಕು. ಆದರೆ ಸಂವಿಧಾನದ 103ನೇ ತಿದ್ದುಪಡಿ ಪ್ರಕಾರ ಬಡತನದ ಮೀಸಲಾತಿಯ ಲಾಭ SC, ST ಅಥವಾ OBC ಅಲ್ಲದ ಕುಟುಂಬಗಳಿಗೆ ಮಾತ್ರ ಸಿಗುತ್ತದೆ.

ಇದನ್ನು ಓದಿದ್ದೀರಾ? ವಿಶ್ವ ಜನಸಂಖ್ಯೆ ಇಂದು 800 ಕೋಟಿ ತಲುಪಲಿದೆ : ವಿಶ್ವಸಂಸ್ಥೆ ವರದಿ

ಜಾತಿ ಆಧಾರದಲ್ಲಿ ಅವರಿಗೆ ಮೀಸಲಾತಿ ಸಿಗುತ್ತಿದ್ದು, ಆರ್ಥಿಕ ಆಧಾರದ ಮೇಲೆಯೂ ದುಪ್ಪಟ್ಟು ಲಾಭ
ನೀಡುವಂತಿಲ್ಲ ಎಂಬುದು ವಾದ. ಈ ತರ್ಕದ ಅರ್ಥವೆಂದರೆ ದೇಶದ 70 ರಿಂದ 75 ಪ್ರತಿಶತ ಬಹುಸಂಖ್ಯಾತ ಜನಸಂಖ್ಯೆಯನ್ನು 50 ಪ್ರತಿಶತದಷ್ಟು ಉದ್ಯೋಗಗಳಿಗೆ ಸೀಮಿತಗೊಳಿಸಲಾಗುತ್ತದೆ ಮತ್ತು ಉಳಿದ 50 ಪ್ರತಿಶತ ಉದ್ಯೋಗಗಳು ಪ್ರಾಯೋಗಿಕವಾಗಿ ದೇಶದ 25 ರಿಂದ 30 ಪ್ರತಿಶತ ಜನಸಂಖ್ಯೆಯ ಮುಂದುವರಿದ ಜಾತಿಗಳಿಗೆ ಮೀಸಲಾಗಿರುತ್ತವೆ.

ಮೇಲ್ಜಾತಿಯ ಬಡವರು ದೇಶದ ಜನಸಂಖ್ಯೆಯ ಶೇಕಡಾ 5 ರಿಂದ 6 ಕ್ಕಿಂತ ಹೆಚ್ಚಿಲ್ಲ. ಅವರಿಗೆ ಶೇ.10ರಷ್ಟು ಮೀಸಲಾತಿ ನೀಡುವುದು ನ್ಯಾಯ ಸಮ್ಮತವೇ ? ಇದರಿಂದ ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಅನ್ಯಾಯವಾಗುತ್ತದೆ. ಅದೇನೇ ಇರಲಿ, ನಮ್ಮ ದೇಶದಲ್ಲಿ ಜಾತಿಯ ಸುಳ್ಳು ಪ್ರಮಾಣಪತ್ರವನ್ನು ಮಾಡಿಸುವುದು ಕಷ್ಟ, ಆದರೆ ಬಡತನದ ಸುಳ್ಳು ಪ್ರಮಾಣಪತ್ರವನ್ನು ಮಾಡಿಸುವುದು ಸುಲಭ. ಒಬ್ಬ ಶ್ರೀಮಂತ, ಹೆಚ್ಚು ಸುಲಭವಾಗಿ ಬಡತನದ ಪ್ರಮಾಣಪತ್ರವನ್ನು ಮಾಡಿಸಬಹುದು.

ಈ ದೇಶದಲ್ಲಿ ನಡೆಯುತ್ತಿರುವ ಸಾಮಾಜಿಕ ಅನ್ಯಾಯಕ್ಕೆ ಉತ್ತರವಾಗಿ ಮೀಸಲಾತಿ ವ್ಯವಸ್ಥೆಯನ್ನು ಕಂಡಿದ್ದ ಎಲ್ಲರಿಗೂ ಸುಪ್ರೀಂ ಕೋರ್ಟ್‌ನ ಈ ತೀರ್ಪು ನಿರಾಸೆ ಮೂಡಿಸಿದೆ. ಈ ನಿರ್ಧಾರವನ್ನು ಹಿಂತೆಗೆದುಕೊಳ್ಳಲು ಎಷ್ಟು ವರ್ಷಗಳು ಅಥವಾ ದಶಕಗಳು ಬೇಕಾಗಬಹುದು ಎಂದು ಕಾದು ನೋಡಬೇಕಿದೆ.

ಅನುವಾದ | ರಂಜಿತಾ ಜಿ ಹೆಚ್‌
ನಿಮಗೆ ಏನು ಅನ್ನಿಸ್ತು?
0 ವೋಟ್
eedina app