ಸುದ್ದಿ ಪ್ಲಸ್ | ಆಮದು ಮತ್ತಷ್ಟು ಹೆಚ್ಚಳ, ಸುಧಾರಣೆ ಕಾಣದ ವ್ಯಾಪಾರದ ಕೊರತೆ

Exports

ಅಮೆರಿಕವನ್ನು ಬಿಟ್ಟರೆ, ಹೆಚ್ಚು ಆಮದು ಮಾಡಿಕೊಳ್ಳುತ್ತಿರುವ ಮತ್ತು ಕೊರತೆ ಚಾಲ್ತಿ ಖಾತೆ ಇರುವ ದೇಶ ಭಾರತ ಮಾತ್ರ. ಹಾಗಾಗಿ, ಸಹಜವಾಗಿಯೇ ನಮ್ಮಲ್ಲಿನ ವಿದೇಶಿ ವಿನಿಮಯದ ಸಂಚಯದ ಹೆಚ್ಚಿನ ಭಾಗ ವಿದೇಶಿ ನೇರ ಹೂಡಿಕೆಯಿಂದ ಕೂಡಿದೆ. ಹೊರ ಹರಿವು ಹೆಚ್ಚಾದರೆ ಇಡೀ ಪರಿಸ್ಥಿತಿಯೇ ಬದಲಾಗಿಬಿಡಬಹುದು. ಈ ಕಾರಣಕ್ಕೆ, ಸದಾ ಎಚ್ಚರ ಅತ್ಯಗತ್ಯ

ಭಾರತದ ರಫ್ತಿನಲ್ಲಿ ಮತ್ತೆ ಹೆಚ್ಚಳವಾಗಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ 30.75 ಬಿಲಿಯನ್ ಡಾಲರ್ ಇದ್ದ ರಫ್ತಿನ ಪ್ರಮಾಣ ಈ ವರ್ಷ ಏಪ್ರಿಲ್‌ನಲ್ಲಿ 38.19 ಬಿಲಿಯನ್ ಡಾಲರ್ ಆಗಿದೆ. ಅಂದರೆ, ಕಳೆದ ವರ್ಷಕ್ಕೆ ಹೋಲಿಸಿದರೆ, ಶೇಕಡ 24.2ರಷ್ಟು ಹೆಚ್ಚಳವಾಗಿದೆ.

ಆದರೆ, ಕಳೆದ ತಿಂಗಳು ಅಂದರೆ, ಮಾರ್ಚ್ ತಿಂಗಳಿಗೆ ಹೋಲಿಸಿದರೆ ಈ ತಿಂಗಳು ಕಡಿಮೆಯಾಗಿದೆ ಅನ್ನುವುದೂ ನಿಜವೇ. ಕಳೆದ ತಿಂಗಳು ರಫ್ತು 42.2 ಬಿಲಿಯನ್ ಡಾಲರ್ ಆಗಿ, ದಾಖಲೆ ಸೃಷ್ಟಿಸಿ, ದೊಡ್ಡ ಸುದ್ದಿ ಮಾಡಿತ್ತು. ಅದಕ್ಕೆ ಹೋಲಿಸಿದರೆ, ಈ ತಿಂಗಳು ಶೇಕಡ 9.5ರಷ್ಟು ಕಡಿಮೆಯಾಗಿದೆ. ರಫ್ತಿನ ಜೊತೆಗೆ ಆಮದು ಕೂಡ ಹೆಚ್ಚುತ್ತಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ 46.04 ಬಿಲಿಯನ್ ಡಾಲರ್‌ನಷ್ಟಿದ್ದ ಆಮದು ಈ ತಿಂಗಳು 58.26 ಬಿಲಿಯನ್ ಡಾಲರ್ ಆಗಿದೆ. ಅಂದರೆ, ಶೇಕಡ 26.6ರಷ್ಟು ವೇಗದಲ್ಲಿ ಹೆಚ್ಚಿದೆ.

ರಫ್ತಿಗಿಂತ ಆಮದು ಹೆಚ್ಚಾಯಿತು ಅಂದ ಮೇಲೆ, ಸ್ವಾಭಾವಿಕವಾಗಿಯೇ ವ್ಯಾಪಾರದ ಕೊರತೆಯಲ್ಲೂ ಹೆಚ್ಚಳವಾಗಬೇಕು. ಅದು ಕಳೆದ ವರ್ಷ 15.29 ಬಿಲಿಯನ್ ಡಾಲರ್ ಇದ್ದದ್ದು, ಈ ವರ್ಷ ಏಪ್ರಿಲಿನಲ್ಲಿ 20.07 ಬಿಲಿಯನ್ ಡಾಲರ್ ಆಗಿದೆ.

Image
Nirmala Sitharaman

ಕಲ್ಲಿದ್ದಲು, ಪೆಟ್ರೋಲಿಯಂ, ಕಚ್ಚಾ ತೈಲ ಹಾಗೂ ಎಲೆಕ್ಟ್ರಾನಿಕ್ ಸರಕುಗಳ ಆಮದಿನಲ್ಲಿ ಆಗಿರುವ ಹೆಚ್ಚಳ ಈ ಕೊರತೆಗೆ ಕಾರಣ ಎಂದು ಹೇಳಲಾಗಿದೆ. ಇತ್ತೀಚೆಗೆ ಕೆಲವು ದೇಶಗಳೊಂದಿಗೆ ಮಾಡಿಕೊಂಡಿರುವ ವ್ಯಾಪಾರಿ ಒಪ್ಪಂದದಿಂದ ಪರಿಸ್ಥಿತಿ ಸುಧಾರಿಸಬಹುದು ಎಂಬ ಆಶಾಭಾವನೆಯನ್ನು ವಾಣಿಜ್ಯ ಮಂತ್ರಾಲಯ ವ್ಯಕ್ತಪಡಿಸಿದೆ. ಆದರೆ, ರಷ್ಯಾ-ಉಕ್ರೇನ್ ಯುದ್ಧ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿರುವುದರಿಂದ ಮತ್ತು ಯುದ್ಧದ ಪರಿಣಾಮ ಹಲವು ಕಾಲ ಮುಂದುವರಿಯುವ ಸಾಧ್ಯತೆ ಇರುವುದರಿಂದ, ಅದು ಭಾರತದ ಆರ್ಥಿಕತೆಯ ಮೇಲೂ ಪರಿಣಾಮ ಬೀರಲಿದೆ. ಜೊತೆಗೆ, ಜಾಗತಿಕ ಮಟ್ಟದಲ್ಲಿ ಕಾಣುತ್ತಿರುವ ಆರ್ಥಿಕ ಕುಸಿತದ ಪರಿಣಾಮವನ್ನೂ ಎದುರಿಸಬೇಕಾಗುತ್ತದೆ. ವ್ಯಾಪಾರದ ಕೊರತೆಯಿಂದಾಗಿ ಚಾಲ್ತಿ ಖಾತೆಯಲ್ಲೂ ಕೊರತೆ ಹೆಚ್ಚಾಗಿದೆ. ಅದು 2021-22ರ ಮೂರನೇ ಚಾತುರ್ಮಾಸದಲ್ಲಿ 23 ಬಿಲಿಯನ್ ಡಾಲರ್ ಆಗಿದೆ.

ಜೊತೆಗೆ, ಕಳೆದ ಆರು ತಿಂಗಳಿನಿಂದ ಭಾರತದ ಬಂಡವಾಳದ ಮಾರುಕಟ್ಟೆಯಿಂದ ಹೊರ ಹರಿವಿನ ಪ್ರಮಾಣ ಹೆಚ್ಚುತ್ತಿದೆ. ವಿದೇಶಿ ಬಂಡವಾಳ ಒಳಗೂ ಹರಿದುಬರುತ್ತಿದ್ದರಿಂದ ಈ ಸಮಸ್ಯೆ ಅಷ್ಟಾಗಿ ಕಾಣುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ವಿದೇಶಿ ಪೋರ್ಟ್‌ಫೋಲಿಯೊ ಹೂಡಿಕೆದಾರರು ಬಂಡವಾಳವನ್ನು ಹಿಂತೆಗೆದುಕೊಳ್ಳುತ್ತಿರುವುದು ಹೆಚ್ಚಿದೆ. ಅಮೆರಿಕದಲ್ಲಿ ಹೆಚ್ಚಿರುವ ಬಡ್ಡಿ ದರ ಇದಕ್ಕೆ ಕಾರಣ ಎನ್ನಲಾಗಿದೆ. ಅಕ್ಟೋಬರ್ 2021ರಿಂದ ಮಾರ್ಚ್ 2022ರವರೆಗಿನ ಆರು ತಿಂಗಳಲ್ಲಿ ಹೊರ ಹರಿವಿನ ಪ್ರಮಾಣ 21.5 ಬಿಲಿಯನ್ ಡಾಲರ್‌ನಷ್ಟಿಷ್ಟು. ಇದು ಕಳೆದ 20 ವರ್ಷಗಳಲ್ಲೇ ಹೆಚ್ಚು.

ಇದನ್ನು ಓದಿದ್ದೀರಾ?: ಅರ್ಥ ಪಥ | ಢಾಕಾದ ಖಾದರ್ ಮಿಯಾ ಮತ್ತು ದೆಹಲಿಯ ಹಿಂದು ವ್ಯಾಪಾರಿ

ಹಾಗೆಯೇ, ವಿದೇಶಿ ಖಾತೆ ಸ್ವಲ್ಪ ನೆಮ್ಮದಿಯ ಸ್ಥಿತಿಯಲ್ಲಿದುದ್ದಕ್ಕೆ ಭಾರತದಲ್ಲಿ ಆಗುತ್ತಿದ್ದ ನೇರ ವಿದೇಶಿ ಹೂಡಿಕೆ ಸಾಕಷ್ಟು ಇದ್ದುದು ಮುಖ್ಯ ಕಾರಣ. 2021ರಲ್ಲಿ ನೇರ ವಿದೇಶಿ ಬಂಡವಾಳದ ಹೂಡಿಕೆಯ ಪ್ರಮಾಣ 35 ಬಿಲಿಯನ್ ಡಾಲರ್. ಅದರಿಂದ ಒಟ್ಟಾರೆ ವಿದೇಶಿ ಖಾತೆ ಅನುಕೂಲಕರ ಸ್ಥಿತಿಯಲ್ಲಿತ್ತು. ಈಗ ಅದೂ ಕಡಿಮೆಯಾಗುತ್ತಿದೆ. ಶೇಕಡ 36ರಷ್ಟು ಕಡಿಮೆಯಾಗಿದೆ ಎಂದು ಒಂದು ವರದಿ ತಿಳಿಸುತ್ತದೆ.

ಇವೆಲ್ಲ ಸೇರಿಕೊಂಡು ಕಾಪಿಟ್ಟ ವಿದೇಶಿ ವಿನಿಮಯದ ಮೇಲೆ ಒತ್ತಡ ಹೆಚ್ಚುತ್ತಿದೆ. ಫೆಬ್ರವರಿಯಲ್ಲಿ 623 ಬಿಲಿಯನ್ ಡಾಲರ್ ಇದ್ದ ಮೀಸಲು ಈಗ 590.24 ಬಿಲಿಯನ್ ಡಾಲರ್‌ಗೆ ಇಳಿದಿದೆ. ನಿಜ, ಭಾರತ ಈಗಲೂ ಅತಿ ಹೆಚ್ಚು ವಿದೇಶಿ ವಿನಿಮಯ ಕಾಪಿಟ್ಟ ದೇಶಗಳಲ್ಲಿ ಹತ್ತನೇ ಸ್ಥಾನದಲ್ಲಿದೆ. ಆದರೆ, ಉಳಿದ ಎಲ್ಲ ದೇಶಗಳಲ್ಲೂ ಚಾಲ್ತಿ ಖಾತೆಯ ಕೊರತೆ ಇಲ್ಲ. ಅಮೆರಿಕವನ್ನು ಬಿಟ್ಟರೆ, ಹೆಚ್ಚು ಆಮದು ಮಾಡಿಕೊಳ್ಳುತ್ತಿರುವ ಕೊರತೆ ಚಾಲ್ತಿ ಖಾತೆ ಇರುವ ದೇಶ ಭಾರತ ಮಾತ್ರ. ಹಾಗಾಗಿ, ಆತಂಕ ಪಡಬೇಕಾಗಿದೆ. ನಮ್ಮಲ್ಲಿನ ವಿದೇಶಿ ವಿನಿಮಯದ ಸಂಚಯದ ಹೆಚ್ಚಿನ ಭಾಗ ವಿದೇಶಿ ನೇರ ಹೂಡಿಕೆಯಿಂದ ಕೂಡಿದೆ. ಹೊರ ಹರಿವು ಹೆಚ್ಚಾದರೆ ಇಡೀ ಪರಿಸ್ಥಿತಿಯೇ ಬದಲಾಗಿಬಿಡಬಹುದು. ಈ ಕಾರಣಕ್ಕೆ, ಪ್ರತೀ ಹೆಜ್ಜೆಯನ್ನೂ ಅತಿ ಎಚ್ಚರದಿಂದ ಇಡಬೇಕಾದ ಸ್ಥಿತಿಯಲ್ಲಿ ನಮ್ಮ ಆರ್ಥಿಕತೆ ಇದೆ ಅನ್ನುವ ಅರಿವು ನಮಗಿರಬೇಕು.

ನಿಮಗೆ ಏನು ಅನ್ನಿಸ್ತು?
0 ವೋಟ್