ʼಭಾರತವನ್ನು ಪುಢಾರಿಗಳಿಂದ ರಕ್ಷಿಸಿʼ ಎಂದಿದ್ದರು ಸಾದತ್ ಹಸನ್ ಮಂಟೋ

Sadath manto

ʼನೆನಪಿಡಿ, ಹೊಟ್ಟೆ ತುಂಬಿದವರೆಂದಿಗೂ ಈ ದೇಶದ ಸೇವೆಯನ್ನು ಮಾಡಲಾರರು. ತಮ್ಮ ಸ್ವಾರ್ಥ ಅಥವಾ ಯಾವುದಾದರೂ ಬಲವಾದ ಉದ್ದೇಶದಿಂದ ಯಾರಾದರೂ ದೇಶಸೇವೆಗಾಗಿ ಮುಂದೆ ಬಂದರೆ ಅಂತಹವರನ್ನು ಒದ್ದು ಹೊರಗೋಡಿಸಿ. ಸುಖವೈಭೋಗಗಳಲ್ಲಿ ಮುಳುಗಿದ ಮನುಷ್ಯರು ಉತ್ತಮ ಮಾರ್ಗದರ್ಶಕರಾಗರಾರರುʼ ಎಂದಿದ್ದರು ಸಾದತ್‌ ಹಸನ್‌ ಮಂಟೋ

ಸುಮಾರು 1942ರ ಆಸುಪಾಸಿನಲ್ಲಿ ಸಾದರ್‌ ಹಸನ್‌ ಮಂಟೋ ದೇಶದ ಜನರನ್ನು ಎಚ್ಚರಿಸಿದ ಈ ಪುಟ್ಟ ಲೇಖನ ಇವತ್ತು ಹಿಂದೂ–ಮುಸ್ಲಿಂ ಹೆಸರಿನಲ್ಲಿ ದೇಶವನ್ನು ಮನುಷ್ಯರನ್ನು ಒಡೆಯುತ್ತಿರುವ ಸಂದರ್ಭದಲ್ಲಿ ಮತ್ತೆ ಮತ್ತೆ ಓದುವ ಅಗತ್ಯವಿದೆ.

ಕಳೆದ ಕೆಲವು ತಿಂಗಳುಗಳಿಂದ ಹಿಜಾಬ್, ಅಜಾನ್, ಹಲಾಲ್, ಲವ್ ಜಿಹಾದ್, ಇತ್ಯಾದಿ ಆಕ್ಷೇಪಣೆ, ಆರೋಪ ವಾದ ವಿವಾದಗಳಿಂದ ಆರಂಭವಾದ ಈ ಮತೀಯ ದ್ವೇಷ, ವಿಭಜನೆ ಮತ್ತೊಮ್ಮೆ ನಾವು ಸ್ವಾತಂತ್ರ್ಯದ ಸಂದರ್ಭದಲ್ಲಿ ಎದುರಿಸಿದ್ದ ಕ್ರೂರ ದಿನಗಳನ್ನು, ಕೋಮು ಗಲಭೆ ನರಸಂಹಾರದ ಇತಿಹಾಸವನ್ನು ಹೊರಳಿ ನೋಡುವಂತೆ ಮಾಡಿದೆ.

1983ರಲ್ಲಿ UNESCO ವಿಶ್ವ ಪರಂಪರೆಯ ತಾಣವಾಗಿ ಗುರುತಿಸಿಕೊಂಡ ಹಾಗೂ "ಭಾರತದಲ್ಲಿ ಮುಸ್ಲಿಂ ವಾಸ್ತು ಕಲೆಯ ಮುಕುಟದಂತೆ ಪ್ರಪಂಚದಾದ್ಯಂತ ಸಾರ್ವತ್ರಿಕವಾಗಿ ಮೆಚ್ಚುಗೆ ಪಡೆದ ಮೇರುಕೃತಿಗಳಲ್ಲಿ ಒಂದಾದ ತಾಜ್ ಮಹಲ್ ಅಡಿಯಲ್ಲಿ ಶಿವಾಲಯವಿದೆ, ಕಾಶಿಯ ಜ್ಞಾನವಾಪಿ ಮಥುರಾದ ಶ್ರೀಕೃಷ್ಣ ಜನ್ಮಭೂಮಿ, ಕುತುಬ್ ಮಿನಾರ್ ಹೀಗೆ ಭಾರತದ ಮೊಗಲ್ ಇತಿಹಾಸದ ಚೆಲುವಿನ ತಾಣಗಳನ್ನೆಲ್ಲ ಅಗೆದುಹಾಕುವ ಮಟ್ಟಕ್ಕೆ ಇಂದು ಮತೀಯ ಶಕ್ತಿಗಳು ಅಟ್ಟಹಾಸಮಾಡುತ್ತಿವೆ.  ಆರೆಸ್ಸೆಸ್‌ ಪ್ರಣೀತ ಬಿಜೆಪಿ ಆಡಳಿತದ ಸರ್ಕಾರ ಮೌನವಾಗಿ ಮತೀಯ ವಿಭಜನೆ, ಕೋಮು ಧ್ರುವೀಕರಣ, ದ್ವೇಷರಾಜಕಾರಣಕ್ಕೆ ಒಪ್ಪಿಗೆಯೆ ಮುದ್ರೆಯನ್ನೊತ್ತಿದೆ. ಇಂಥ ದುರಿತ ಕಾಲದಲ್ಲಿ ಸಾದತ್ ಹಸನ್ ಮಂಟೋ ನೆನಪಾಗುತ್ತಾನೆ. ಆತ ಎಪ್ಪತ್ತೆಂಟು ವರ್ಷದ ಹಿಂದೆ ಬರೆದ ಈ ಬರೆಹವನ್ನು ಓದಿದರೆ ಕ್ಯಾಲೆಂಡರ್ ಬದಲಾಗಿದೆ, ಸರಕಾರ ಬದಲಾಗಿವೆ, ಆದರೆ ವರ್ತಮಾನದ ಪರಿಸ್ಥಿತಿ ಇನ್ನೂ ಹೆಚ್ಚು ಆತಂಕಕಾರಿಯಾಗಿದೆ ಎನಿಸುತ್ತದೆ. ಸ್ವಾತಂತ್ರೋತ್ತರ ಭಾರತದಲ್ಲಿ ಇದ್ದ ಬೆಲೆಯೇರಿಕೆ, ನಿರುದ್ಯೋಗ, ಬಡತನದಂಥ ಎಲ್ಲಾ ಸಂಕಟಗಳು ಇವತ್ತಿನ ಪ್ರಗತಿಶೀಲ ಭಾರತದಲ್ಲಿ ಇನ್ನೂ ಹಾಗೇ ಇವೆ. ದೇಶ ಬಂಡವಾಳಶಾಹಿಗಳ ಕಪಿಮುಷ್ಟಿಗೆ ಸಿಕ್ಕಿ ನರಳುತ್ತಿದೆ.       

ಮಂಟೋ ಬರಹ

ಒಂದು ವರ್ಷದಿಂದ ನಾವು ಕೇಳುತ್ತಿದ್ದೇವೆ. ಭಾರತವನ್ನು ಇದರಿಂದ ಉಳಿಸಿ, ಅದರಿಂದ ಉಳಿಸಿ ಎನ್ನುವುದನ್ನು. ಆದರೆ ವಾಸ್ತವವಾಗಿ ಭಾರತವನ್ನು ಈ ಬಗೆಯ ಕೂಗುಮಾರಿಗಳಿಂದ ಕಾಪಾಡಬೇಕಿದೆ.  ಇವರು ಗಲಭೆ -ಗಲಾಟೆಗಳನ್ನು ಹುಟ್ಟುಹಾಕುವಲ್ಲಿ ನಿಪುಣರು. ಅದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ಇವರ ಹೃದಯಗಳು ಅಂತಃಕರಣ ಶೂನ್ಯವಾಗಿವೆ. ರಾತ್ರಿ ಯಾವುದಾದರೊಂದು ಮೆರವಣಿಗೆಯಲ್ಲಿ ಹುರುಪಿನ ಭಾಷಣ ಮಾಡಿ ತಮ್ಮ ಮನೆಯ ಸುಪ್ಪತ್ತಿಗೆಯಲ್ಲಿ ಮಲಗಿಕೊಂಡಾಗ ಅವರ ಮೆದುಳು ಪೂರಾ ಖಾಲಿಯಾಗಿರುತ್ತದೆ. ಅವರ ಇರುಳಿನ ಸಣ್ಣಾತಿ ಸಣ್ಣ ಅಂಶವೂ ಭಾರತದ ಸರಹದ್ದಿನ ಕುರಿತು ಯೋಚಿಸುವುದಿಲ್ಲ. ವಾಸ್ತವದಲ್ಲಿ ಅವರು ತಮ್ಮ ತಮ್ಮ ಭೂಮಿ ಜಮೀನುಗಳ ಸರಹದ್ದಿನ ಬಗ್ಗೆ ಅದೆಷ್ಟು ಕಳೆದುಹೋಗಿರುತ್ತಾರೆಂದರೆ ಅವರಿಗೆ ತಮ್ಮ ತಾಯ್ನಾಡಿನ ಸರಹದ್ದಿನ ಕುರಿತು ಚಿಂತಿಸುವ ಸಮಯವೇ ಸಿಗುವುದಿಲ್ಲ.

ತಮ್ಮ ಮನೆಯನ್ನು ಅಂದವಾಗಿ ಅಚ್ಚುಕಟ್ಟಾಗಿ ಇಟ್ಟುಕೊಳ್ಳದ, ಕೊಳಕು ಕೀಳು ನಡತೆಯುಳ್ಳ ಇವರು ಅಧಿಕಾರದ ಅಖಾಡದಲ್ಲಿ ಜನರಿಗೆ ತಮ್ಮ ನಾಡನ್ನು ಚೆಂದಗೊಳಿಸುವ ಹಾಗೂ ಸಭ್ಯತೆಯ ಪಾಠವನ್ನು ಹೇಳಲು ಬರುವುತ್ತಾರೆಂದರೆ ಹಾಸ್ಯಾಸ್ಪದವೆನಿಸುತ್ತದೆ !

ಇವರನ್ನು ಜನನಾಯಕರು /ಧುರೀಣರು ಎನ್ನಲಾಗುತ್ತದೆ. ಸರಕಾರ ಮತ್ತು ಧರ್ಮವನ್ನು ಕುಂಟ, ಮೊಂಡಗೈ ಹಾಗೂ ಗಾಯಗೊಂಡಂತೆ ಚಿತ್ರಿಸುತ್ತಾರೆ. ಅಂಗವೈಕಲ್ಯತೆಯನು ಪ್ರದರ್ಶಿಸಿ ನಮ್ಮಲ್ಲಿ ಭಿಕ್ಷೆ ಬೇಡುತ್ತಾರೆ. ತಥಾಕಥಿತ ಈ ನಮ್ಮ ನಾಯಕರುಗಳು ಸತ್ತ ಸರ್ಕಾರ ಮತ್ತು ಧರ್ಮದ ಹೆಣವನ್ನು ತಮ್ಮ ಹೆಗಲ ಮೇಲೆ ಹೊತ್ತು ತಿರುಗುತ್ತಾರೆ. ಸರಳ ಅಮಾಯಕರಿಗೆ ದೊಡ್ದದನಿಯಲ್ಲಿ ಈ ಹೆಣಕ್ಕೆ ಅವರು ಇಂದು ಹೊಸ ಜನ್ಮವನ್ನು  ನೀಡುತ್ತಿದ್ದಾರೆಂದು ಹೇಳಲಾಗುತ್ತದೆ.   

ಧರ್ಮ ಹೇಗಿತ್ತೋ ಹಾಗೇ ಇದೆ. ಮುಂದೂ ಹಾಗೇಯೇ ಇರುತ್ತದೆ. ಯಾವಾಗಲೂ ಒಂದೇ ರೀತಿಯಾಗಿರುತ್ತದೆ. ಧರ್ಮದ ಆತ್ಮ  ಎಂದೂ ಬದಲಾಗದ ಒಂದು ಕಟುವಾಸ್ತವ. ಧರ್ಮ ಒಂದು ಅಚಲವಾದ ಪರ್ವತವಿದ್ದಂತೆ ಅದನ್ನು ಸಮುದ್ರದ ಭೋರ್ಗರೆವ ಕ್ಷುದ್ರ ಅಲೆಗಳೂ ತಟ್ಟಲಾರವು. ಈ ಜನನಾಯಕರು, ಪುಢಾರಿಗಳು ಮೊಸಳೆ ಕಣ್ಣೀರನ್ನು ಸುರಿಸಿ ಧರ್ಮ ಅಪಾಯದಲ್ಲಿದೆ ಎಂದಾಗ ಅದು ನಿಜಕ್ಕೂ ಸತ್ಯವಲ್ಲ.  ಧರ್ಮ ಅಪಾಯಕ್ಕೆ ಬೀಳುವಂಥ ವಸ್ತುವೇ ಅಲ್ಲ. ಇಲ್ಲಿ ಏನಾದರೂ ಅಪಾಯವಿದ್ದರೆ ಅದು ಈ ಜನನಾಯಕರುಗಳಿಂದ. ಅವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಧರ್ಮವನ್ನು ಅಪಾಯಕ್ಕೆ ಒಡ್ಡುತ್ತಾರೆ.

ಭಾರತವನ್ನು ಈ ರಾಜಕಾರಣಿಗಳಿಂದ ಕಾಪಾಡಿರಿ. ಅವರು ದೇಶದ  ವಾತಾವರಣವನ್ನು ಕೆಡಿಸುತ್ತಿದ್ದಾರೆ, ಶಾಂತಿ ಸೌಹಾರ್ದತೆಯ ದಾರಿತಪ್ಪಿಸುತ್ತಿದ್ದಾರೆ. ನಿಮಗೆ ಗೊತ್ತಿಲ್ಲ ಆದರೆ ಇದು ಸತ್ಯ. ಭಾರತದಲ್ಲಿ ಈ ಜನಪ್ರಿಯ ಮಹಾನ್ ನಾಯಕರು ತಮ್ಮ ತಮ್ಮ ಬಗಲಿನಲ್ಲಿ ಒಂದು ಸಂದೂಕವನ್ನು ಹೊತ್ತು ತಿರುಗುತ್ತಾರೆ. ಅದರಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನ ಕಿಸೆಯನ್ನು ಲೂಟಿಮಾಡಿದ ಹಣವನ್ನು ಬಚ್ಚಿಟ್ಟುಕೊಂಡಿರುತ್ತಾರೆ. ಇವರ ಬದುಕು ಸಂಪತ್ತಿನ ಬೆನ್ನತ್ತಿ ನಾಗಾಲೋಟದಲ್ಲಿ ಓಡುತ್ತಿದೆ. ಇವರ ಉಸಿರು ಉಸಿರಿನಲ್ಲಿ ಆಷಾಢಭೂತಿತನ, ವಂಚನೆ, ದಗಲ್ಬಾಜಿತನದ ದುರ್ಗಂಧವನ್ನು ಮೂಸಬಹುದು. ದೊಡ್ದ ದೊಡ್ದ ಮೆರವಣಿಗೆಗಳನ್ನು ಮಾಡುತ್ತ, ದೊಡ್ದ ದೊಡ್ದ ಹಾರ ತುರಾಯಿಗಳಡಿಯಲ್ಲಿ ಸಿಕ್ಕು, ದೊಡ್ಡ ದೊಡ್ದ ಭಾಷಣದಲ್ಲಿ ಪೊಳ್ಳು ಪದಪುಂಜಗಳನ್ನು ದಾಳದಂತೆ ಎಸೆಯುತ್ತಾ, ನಮ್ಮ ಕೋಮಿನ ಈ ಜನಪ್ರಿಯ ಮಹಾನ್ ನಾಯಕ ಮಾರ್ಗದರ್ಶಿಗಳು ಕೇವಲ ತಮ್ಮ ಐಷಾರಾಮಿ ಮಾರ್ಗವನ್ನು ತಮಗಾಗಿ ಸಿದ್ಧಮಾಡಿಕೊಳ್ಳುತ್ತಾರೆ.

ಇವರು ದೇಣಿಗೆಯನ್ನು ಸಂಗ್ರಹಿಸುತ್ತಾರೆ. ಆದರೆ ಇದುವರೆಗೂ ಯಾವತ್ತಾದರೂ ನಿರುದ್ಯೋಗಕ್ಕೆ ಪರಿಹಾರವನ್ನು ಸೂಚಿಸಿದ್ದಾರೆಯೇ? ಸದಾ ಧರ್ಮ ಧರ್ಮ ಎಂದು ಕಿರುಚಾಡುವ ಇವರು ಎಂದಾದರೂ ಧರ್ಮದ ನಿಯಮಗಳನ್ನು ಪಾಲಿಸಿದ್ದಾರೆಯೇ? ಇವರು ದಾನದಲ್ಲಿ ಬಿಟ್ಟಿಯಾಗಿ ದೊರೆತ ಬಂಗಲೆಗಳಲ್ಲಿ ವಾಸಿಸುತ್ತಾರೆ. ದೇಣಿಗೆಯಿಂದ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಪುಗಸಟ್ಟೆ ಸಿಕ್ಕ ಐಶೋ ಆರಾಮದಲ್ಲಿ ಬದುಕುತ್ತಾರೆ. ಇವರ ಆತ್ಮ ಕುಂಟ, ಮೆದುಳು ಅಂಗಹೀನ, ನಾಲಿಗೆಗೆ ಲಕ್ವ ಹೊಡೆದಿದೆ, ಕೈ ಕಾಲುಗಳು ನಿಷ್ಕ್ರೀಯಗೊಂಡಿವೆ. ಇಂಥವರು ಈ ದೇಶವನ್ನು ಹೇಗೆ ಮುನ್ನಡೆಸಬಲ್ಲರು?

ಭಾರತಕ್ಕೆ ದಿನಕ್ಕೊಂದು ಹೊಸ ಹೊಸ ರಾಗವನ್ನು ಅಲಾಪಿಸುವ ಇಷ್ಟೊಂದು ಸಂಖ್ಯೆಯ ಜನನಾಯಕರ ಅಗತ್ಯವಿಲ್ಲ. ನಮ್ಮ ದೇಶಕ್ಕೆ ಒಬ್ಬನೇ ಒಬ್ಬ ನಾಯಕನ ಜರೂರತ್ತಿದೆ. ದೇವರಂತಹ ಕರುಣಾಳು, ಹೃದಯದಲ್ಲಿ ಯೋಧನಂತೆ ಸಾಹಸಿ ಸಂವೇದನಶೀಲ, ಹಸಿವೆಯನ್ನು ಲೆಕ್ಕಿಸದೇ ಬರಿಗಾಲಲ್ಲಿಯೇ ಎದ್ದು ಹೊರಡುವಂಥವನು, ಈ ದೇಶದ ಲಗಾಮಿಲ್ಲದ ಕುದುರೆಗೆ ಮೂಗುದಾರಹಾಕಿ ಅದನ್ನು ಸ್ವಾತಂತ್ರ್ಯದ ಮೈದಾನದೆಡೆಗೆ ವೀರನಂತೆ ಸಾಗಿಸಬಲ್ಲ ನಾಯಕನ ಅಗತ್ಯವಿದೆ.

ತಿಗಣೆಗಳಂಥ ನಾಯಕರು

ನೆನಪಿಡಿ, ಹೊಟ್ಟೆ ತುಂಬಿದವರೆಂದಿಗೂ ಈ ದೇಶದ ಸೇವೆಯನ್ನು ಮಾಡಲಾರರು. ತಮ್ಮ ಸ್ವಾರ್ಥ ಅಥವಾ ಯಾವುದಾದರೂ ಬಲವಾದ ಉದ್ದೇಶದಿಂದ ಯಾರಾದರೂ ದೇಶಸೇವೆಗಾಗಿ ಮುಂದೆ ಬಂದರೆ ಅಂತಹವರನ್ನು ಒದ್ದು ಹೊರಗೋಡಿಸಿ. ಸುಖವೈಭೋಗಗಳಲ್ಲಿ ಮುಳುಗಿದ ಮನುಷ್ಯರು ಉತ್ತಮ ಮಾರ್ಗದರ್ಶಕರಾಗರಾರರು. ಯಾರು ನೆಲದ ಮೇಲೆ ಮಲಗಬಲ್ಲರೋ, ಯಾರ ದೇಹಕ್ಕೆ ನವಿರು ನಾಜೂಕಿನ ರೇಶಿಮೆಯ ಪೋಷಾಕಿನ ವ್ಯಸನವಿಲ್ಲವೋ, ಅಥವಾ ಒಂದುವೇಳೆ ಯಾರಾದರೂ ರೇಶಿಮೆ ಬಟ್ಟೆಗಳನ್ನು ತೊಟ್ಟು ಬಡತನವನ್ನು ನಿವಾರಿಸುತ್ತೇನೆ ಎನ್ನುವ ಧೈರ್ಯ ಮಾಡಿದರೆ ಅವನನ್ನು ಎಲ್ಲಿಂದ ಬಂದಿದ್ದನೋ ಅಲ್ಲಿಗೇ ಹೋಗಿಬೀಳುವಂತೆ ಎತ್ತಿ ಬಿಸಾಕಿರಿ.  

ಈ ರಾಜಕಾರಣಿಗಳು ತಿಗಣೆಗಳಿದ್ದಂತೆ. ಕಾಟಿನ ನಾಲ್ಕೂ ಮೂಲೆಗಳಲ್ಲಿ ಹೊಕ್ಕಿಕೊಂಡಿರುತ್ತವೆ. ಅವನ್ನು ತಿರಸ್ಕಾರದ ಕುದಿಯುವ ನೀರನ್ನು ಹಾಕಿ ಹೊರಗೆಳೆಯಬೇಕಾಗುತ್ತದೆ. ಸಭೆ ಸಭಿಕರಲ್ಲಿ ಇವರು ಸಭ್ಯರಂತಿರುತ್ತಾರೆ, ಸಭ್ಯತನದ ಎಲ್ಲಾ ಪ್ರಯೋಜನಗಳನ್ನು ತಮ್ಮ ಒಳಿತಿಗಾಗಿ ಗಂಟುಕಟ್ಟಿಟ್ಟುಕೊಂಡು  ಸಭ್ಯರ ವಿರುದ್ಧ ವಿಷಕಾರುತ್ತಾರೆ. ಸಭ್ಯರಿಗಿಂತಲೂ ಇಂತಹವರು ನೀಚರಲ್ಲವೇ? ಕಳ್ಳರ ಕಳ್ಳರು, ಮಾರ್ಗದರ್ಶಕರ ಮಾರ್ಗದರ್ಶಕರು. ದೇಶ ಇಂಥವರ ಬಗ್ಗೆ ತನ್ನ ಅನುಮಾನವನ್ನು ವ್ಯಕ್ತಪಡಿಸುವ  ಕಾಲವೀಗ ಬಂದಿದೆ.

ಇದನ್ನು ಓದಿದ್ದೀರಾ? ಉಕ್ರೇನಿನ ಭಾವನಾತ್ಮಕ ಭಾರವನ್ನು ಹೊತ್ತ ಪ್ರಥಮ ಮಹಿಳೆ ಓಲೆನಾ ಝೆಲೆನ್‌ಸ್ಕಿ

ಹರಕು ಅಂಗಿಯ ನಮ್ಮ ತರುಣರು ಎದ್ದೇಳಬೇಕು, ಧೈರ್ಯದಿಂದ, ನಿರ್ಭೀತರಾಗಿ ಇಂತಹ ಮಹಾನ್ ಪುಢಾರಿಗಳನ್ನು ಅವರ ಉನ್ನತ ಸ್ಥಾನದಿಂದ ಕೆಳಗೆ ಎತ್ತಿ ಒಗೆಯುವ ಜರೂರತ್ತಿದೆ. ಇವರೆಲ್ಲ ನಮ್ಮ ಅನುಮತಿಯಿಲ್ಲದೆಯೇ ಈ ಎತ್ತರಕ್ಕೇರಿ ಕುಳಿತಿದ್ದಾರೆ.  ಅವರಲ್ಲಿ ನಮಗಾಗಿ, ನಮ್ಮ ಬಡತನಕ್ಕಾಗಲಿ ಸಹಾನುಭೂತಿ ತೋರುವ ಯಾವ ಹಕ್ಕೂ ಇಲ್ಲ. ನೆನಪಿಡಿ, ಬಡತನ ಅಪಮಾನವಲ್ಲ, ಅದನ್ನು ಅಪಮಾನವೆಂದು ಪರಿಗಣಿಸುವವರು ಸ್ವತಃ ತಿರಸ್ಕರಿಸಲ್ಪಟ್ತವರಿದ್ಡಾರೆ. ತಮ್ಮ ಬದುಕಿನ ನಾವೆಯನ್ನು ತಾವೇ ಸ್ವತಃ ಅಂಬಿಗನಾಗಿ ನಡೆಸಬಲ್ಲ ಬಡವ ಶ್ರೀಮಂತನಿಗಿಂತ ಹತ್ತುಪಾಲು ಉತ್ತಮ. ನಿಮ್ಮ ನಾವೆಯ ಅಂಬಿಗ ನೀವೇ ಆಗಿ. ನಿಮ್ಮ ಲಾಭ ನಷ್ಟಗಳನ್ನು ನೀವೇ ಸ್ವತಃ ಯೋಚಿಸುವವರಾಗಿ. ಆಗ ಈ ಖ್ಯಾತನಾಮ ಮಾರ್ಗದರ್ಶಕರು ತಮ್ಮ ಬದುಕಿನ ಈ ಆಗಾಧವಾದ ಸಮುದ್ರದಲ್ಲಿ ತಮ್ಮ ಬೃಹತ್ ಹಡಗನ್ನು ಹೇಗೆ ನಡೆಸಬಹುದೆಂಬ ತಮಾಷೆ ನೋಡಿರಿ.    

ನಿಮಗೆ ಏನು ಅನ್ನಿಸ್ತು?
1 ವೋಟ್