ಶಾಲೆಗಳಿಗೆ ಕೇಸರಿ ಬಣ್ಣ | ಸರ್ಕಾರಿ ಶಾಲೆಗಳು ರಾಜಕೀಯ ಪಕ್ಷದ ಕಚೇರಿಗಳಾ?

ಸರ್ಕಾರಿ ಶಾಲೆಗಳಿಗೆ ಕೇಸರಿ ಬಣ್ಣ

ರಾಜ್ಯದಲ್ಲಿ ಪಠ್ಯಗಳ ಕೇಸರೀಕರಣದ ನಂತರ ಸರ್ಕಾರವು ಶಾಲೆಯ ಗೋಡೆಗಳಿಗೂ ಕೇಸರಿ ಬಣ್ಣ ಬಳಿಯಲು ಹೊರಟಿರುವುದು ವಿಷಾದನೀಯ. ಎಲ್ಲ ಧರ್ಮೀಯರು ಕಲಿಯುವ ಶಾಲೆಗಳಿಗೆ ಒಂದು ಧರ್ಮವನ್ನು ಪ್ರತಿನಿಧಿಸುವ ಬಣ್ಣ ಬಳಿಯಲು ಹೊರಟಿರುವುದು ಅಕ್ಷ್ಯಮ್ಯ. ಶಾಂತಿ ಸೌಹಾರ್ದತೆಯ ಸಂಕೇತವಾಗಿರುವ ಬಿಳಿ ಬಣ್ಣ ಇದ್ದರೆ ಆಗದೇ?

ಕರ್ನಾಟಕದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ಮೇಲಿಂದ ಮೇಲೆ ಶಿಕ್ಷಣದಲ್ಲಿ ಕೋಮುವಾದ ಬೆರೆಸುತ್ತಿದೆ. ಶಿಕ್ಷಣದಲ್ಲಿ ಅವೈಜ್ಞಾನಿಕ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಯಾವ ಸರ್ಕಾರಗಳೂ ಈ ಹಿಂದೆ ಮಾಡಿರದ ಅಪವಿತ್ರ ಇರಾದೆಗಳನ್ನು ಪ್ರಸ್ತುತ ಸರ್ಕಾರ ಜಾರಿ ಮಾಡಿ, ಶಾಲೆಗಳಿಗೂ ಕೇಸರಿ ಬಣ್ಣ ಬಳಿಯಲು ಹೊರಟಿರುವುದು ವಿಷಾದನೀಯ!

Eedina App

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಎಲ್ಲರಿಗೂ ಶಿಕ್ಷಣ ದಕ್ಕುವ ವ್ಯವಸ್ಥೆಯಿಂದ ದೂರ ಸರಿದು ಗುರುಕುಲ ವ್ಯವಸ್ಥೆಯ ಕಡೆಗೆ ವಾಲುತ್ತಿರುವುದು ಸರ್ವವಿಧಿತ. ಕೋಮುವಾದಿ ಸನಾತನ ಪದ್ಧತಿಗಳನ್ನು ಜಾರಿ ಮಾಡುತ್ತಾ, ಶೋಷಿತ ವರ್ಗಗಳಿಗೆ ಶಿಕ್ಷಣ ದಕ್ಕದಂತೆ ಮಾಡುತ್ತಿರುವುದರ ಹಿಂದಿರುವ ಹುನ್ನಾರಗಳೇನು? ಕರ್ನಾಟಕ ಸರ್ಕಾರದ ಶಿಕ್ಷಣ ಕಸಿಯುವ ಮುಸ್ಲಿಂ ಹೆಣ್ಣುಮಕ್ಕಳ ಹಿಜಾಬ್‍ನಿಂದ ಹಿಡಿದು ಪಠ್ಯಪರಿಷ್ಕರಣೆ, ಪರಿಶಿಷ್ಟ ಜಾತಿ, ವರ್ಗದ ಕಲ್ಯಾಣಕ್ಕೆ ಮೀಸಲಿಟ್ಟ ಹಣದಲ್ಲಿ ವೇದಗಣಿತ ಭೋಧನೆಗಾಗಿ ಶಿಕ್ಷಕರನ್ನು ತರಬೇತುಗೊಳಿಸುತ್ತಿರುವು, ಪಠ್ಯಗಳ ಕೋಮುವಾದೀಕರಣವನ್ನು ರಾಜ್ಯದ ಎಲ್ಲ ಪ್ರಗತಿಪರರೂ ಪ್ರತಿಭಟಿಸಿದಾಗಲೂ ಹಿಂತೆಗೆದುಕೊಳ್ಳದೇ ಇರುವುದು, ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸುವ ಕುರಿತ ಹೇಳಿಕೆಗಳು, ಸಂವಿಧಾನವೇ ನಮಗೆ ನೀಡಿರುವ ಶಿಕ್ಷಣದ ಮೂಲಭೂತ ಹಕ್ಕನ್ನು ಸುತ್ತೋಲೆ ಹೋರಡಿಸುವ ಮೂಲಕ ಅನೂರ್ಜಿತಗೊಳಿಸುವ ಸರ್ಕಾರದ ನಡೆಗಳು ಏನನ್ನು ಸೂಚಿಸುತ್ತವೆ? ಇದಕ್ಕೂ ಹೊರತಾಗಿ ಬಿಜೆಪಿ ಸರ್ಕಾರವು ರಾಜ್ಯದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಶಾಲೆಗಳಲ್ಲಿ ಪ್ರತಿದಿನ ಧ್ಯಾನ ಮಾಡಿಸಲು ಸರ್ಕಾರವು ಶಿಕ್ಷಣ ಇಲಾಖೆಗೆ ಸುತ್ತೋಲೆ ಹೊರಡಿಸಲು ತಿಳಿಸಿದೆ.

ರಾಜ್ಯದಲ್ಲಿ ಪಠ್ಯಗಳ ಕೇಸರೀಕರಣದ ನಂತರ ಸರ್ಕಾರವು ಶಾಲೆಯ ಗೋಡೆಗಳಿಗೂ ಕೇಸರಿ ಬಣ್ಣ ಬಳಿಯಲು ಹೊರಟಿರುವುದು ವಿಷಾದನೀಯ. ಹಿಂದೆ ಕೇಸರಿ ಬಣ್ಣವೆಂದರೆ ಅದು ದೇವರ ಬಣ್ಣವೆಂದು ಗೌರವಿಸುತ್ತಿದ್ದೆವು. ಆದರೆ ಇಂದು ಆ ಕೇಸರಿ ಬಣ್ಣ ಒಂದು ಪಕ್ಷದ ಗುತ್ತಿಗೆಯಾಗಿ, ಜನಸಾಮಾನ್ಯರ ಸ್ವತ್ತಾಗಿದ್ದ ಶಿಕ್ಷಣ ಸಂಸ್ಥೆಗಳನ್ನು ʼಗುರುಕುಲʼ ಮಾಡುತ್ತಿರುವ ಮತ್ತು ಕೋಮುವಾದಿ ಪಕ್ಷದ ಬಣ್ಣವಾಗಿದೆ. 

AV Eye Hospital ad

ಶಿಕ್ಷಣವನ್ನು ಕೋಮುವಾದೀಕರಣಗೊಳಿಸಿ ಮಕ್ಕಳ ಮನಸ್ಸನ್ನು ವೈಜ್ಞಾನಿಕ ನಡೆಯಿಂದ ವಿಮುಖರನ್ನಾಗಿಸುತ್ತಿರುವುದು ನಮ್ಮ ಕಾಲದ ದುರಂತವಾಗಿದೆ. ಇಂತಹ ಅವೈಜ್ಞಾನಿಕ ನಡೆಯನ್ನು ಕೇಸರಿ ಪಡೆಗಳು ರೂಢಿಸಿಕೊಳ್ಳುತ್ತಿರುವುದು ಈ ದೇಶದ ದುರಂತವೇ ಸರಿ. ಕೇಸರಿ ಬಣ್ಣ ಬಳಿಯುವುದರಿಂದ ಮಕ್ಕಳಿಗೆ ಏನಾದರೂ ಲಾಭವಿದೆಯೆ? ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಪ್ರತಿದಿನ 10 ನಿಮಿಷ ಧ್ಯಾನ, ಶಾಲಾ ಗೋಡೆಗಳಿಗೆ ಕೇಸರಿ ಬಣ್ಣ ಬಳಿಯಲು ಆದೇಶ ಹೊರಡಿಸಿ ಯಾವ ದೊಡ್ಡ ಸಾಧನೆ ಮಾಡಿದಂತಾಯಿತು. ಪರಿಶುದ್ಧವಾದ ಮಕ್ಕಳ ಮನಸ್ಸಿನಲ್ಲಿ ಕೋಮುವಾದಿ ವಿಷ ಬೀಜ ಬಿತ್ತಿದಂತಲ್ಲವೇ?

ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವುದರಿಂದ ಶಿಕ್ಷಣದ ಗುಣಮಟ್ಟ ಸುಧಾರಿಸುವುದೇ? ಅದೇ ರೀತಿ ಹಸಿರು, ನೀಲಿ ಹಲವರ ಸ್ವತ್ತಾಗಿವೆ.  ಶಾಲೆಯೆಂದರೆ ಮಕ್ಕಳ ಮನಸ್ಸು ಅರಳಿಸುವಂತಿರಬೇಕು. ಕೇಸರಿ, ಹಸಿರು, ನೀಲಿ ಬಣ್ಣಗಳನ್ನು ಹೊರತುಪಡಿಸಿ ಶುಭ್ರತೆಯ ಸಂಕೇತವಾಗಿರುವ, ಶಾಂತಿ ಸೌಹಾರ್ದತೆಯ ಬಿಂಬವಾಗಿರುವ ಬಿಳಿ ಇದ್ದರೆ ತಪ್ಪೇನು?

ಶಿಥಿಲಗೊಂಡ ಸರ್ಕಾರಿ ಶಾಲೆ
ಶಿಥಿಲಗೊಂಡ ಸರ್ಕಾರಿ ಶಾಲೆ

ಶಿಕ್ಷಣ ಸಚಿವರು ಇಂತಹ ಅವೈಜ್ಞಾನಿಕ ಆದೇಶಗಳನ್ನು ಹೊರಡಿಸುತ್ತಿದ್ದರೆ ಜಾಗತಿಕವಾಗಿ ಬೆಳೆಯಬೇಕಾದ ದೇಶವನ್ನು ಕುಬ್ಜಗೊಳಿದಂತಾಗುವುದಿಲ್ಲವೆ? ಶಾಲೆಗಳಲ್ಲಿ ಮಕ್ಕಳಿಗೆ ಸೈಕಲ್ ಕೊಟ್ಟಿಲ್ಲ, ಶೂ ಸಾಕ್ಸ್‌ ಕೊಟ್ಟಿಲ್ಲ. ಬಹಳಷ್ಟು ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಕೊನೆಯ ಪಕ್ಷ ಶೌಚಾಲಯ ಕುಡಿಯುವ ನೀರು ಇಲ್ಲದೇ ಇರುವ ಹಲವಾರು ಶಾಲೆಗಳಿವೆ. ಅದರ ಉನ್ನತೀಕರಣ ಮಾಡದೇ ದಾನಿಗಳಿಂದ ಹಣ ಸಂಗ್ರಹಿಸಿರಿ, ವಿದ್ಯಾರ್ಥಿಗಳ ಪಾಲಕರಿಂದ ಹಣ ವಸೂಲು ಮಾಡಿರಿ ಎಂದು ಹೇಳುವ ಸರ್ಕಾರಕ್ಕೆ ನೈತಿಕ ಜವಾಬ್ದಾರಿಯಿದೆಯೇ? ಶಿಕ್ಷಣ ಸಚಿವರಿಗೆ ಮಾನಸಿಕ ಕಾಯಿಲೆಯೇನಾದರೂ ಇದೆಯೇ ಎಂದು ಜನರಿಗೆ ಸಂಶಯ ಬರಲು ಶುರುವಾಗಿದೆ. ಪ್ರತಿ 15-20 ದಿನಗಳಿಗೊಂದು ಆದೇಶ ಹೊರಡಿಸುತ್ತಾ ಈ ಮೂಲಕ ಪ್ರಜಾಸತ್ತಾತ್ಮಕ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ.

ಇದನ್ನು ಓದಿದ್ದೀರಾ? ಕನ್ನಡ ಹಬ್ಬ | ಅನ್ನದ ಬಟ್ಟಲು, ಬೇಸಾಯದ ಕತಿ, ನಡುವೆ ಸುಳಿವ ಹೆಣ್ಣು... ನನ್ನಿಷ್ಟದ ಪುಸ್ತಕ- ಅನುಪಮಾ ಪ್ರಸಾದ್

ಶಾಲೆಗಳು ಮನುವಾದದ ಕೇಂದ್ರಗಳಲ್ಲ: ಅವರು ಬೇಕಿದ್ದರೆ ಅವರ ಪಕ್ಷದ ಕಚೇರಿಗಳಿಗೆ ಕೇಸರಿ ಬಣ್ಣ ಬಳಿದುಕೊಳ್ಳಲಿ. ಆದರೆ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವ ಬದಲು ಮಕ್ಕಳಿಗೆ ಉತ್ತಮ ಗುಣಮಟ್ಟದ ವ್ಶೆಜ್ಞಾನಿಕ ಶಿಕ್ಷಣ ನೀಡುವಂತಾಗಲಿ. ಅವಶ್ಯವಿರುವ ಶಿಕ್ಷಕರನ್ನು ನೇಮಿಸಿಕೊಳ್ಳಲಿ. ಶಾಲೆಗೆ ಬೇಕಾದ ಕುಡಿಯುವ ಶುದ್ದ ನೀರು, ಶೌಚಾಲಯಗಳ ವ್ಯವಸ್ಥೆ ಮಾಡಲಿ. ಅದನ್ನು ಬಿಟ್ಟು ದಲಿತರ, ಬಡವರ, ಮಹಿಳೆಯರ, ಅಲ್ಪಸಂಖ್ಯಾತರ ಶಿಕ್ಷಣವನ್ನು ಕಸಿಯುವಂತಹ ವ್ಯವಸ್ಥೆಗೆ ನಾಂದಿ ಹಾಡುವಂತಾಗಬಾರದು. ಶಿಕ್ಷಣದಲ್ಲಿ ಮತೀಯ ವಿಚಾರಗಳನ್ನು ತುರುಕುತ್ತಿರುವ ಶಿಕ್ಷಣ ಸಚಿವ ತಾನು ಬೇಕಿದ್ದರೆ ಮೈತುಂಬ ಕೇಸರಿ ಬಣ್ಣ ಬಳಿದುಕೊಳ್ಳಲಿ, ಅಭ್ಯಂತರವಿಲ್ಲ. ಆದರೆ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವುದು ಅನವಶ್ಯಕವಾಗಿದೆ. ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿಯಿರುವುದನ್ನು ತುಂಬಿಸಿಕೊಳ್ಳಲು ಆದೇಶ ಹೊರಡಿಸುವುದನ್ನು ಬಿಟ್ಟು, ವೇದಗಣಿತ, ಧ್ಯಾನ, ಕೇಸರೀಕರಣ ಇವನ್ನು ಬಿಟ್ಟು  ಶಿಕ್ಷಣದ ಅಭಿವೃಧ್ಧಿಗೆ ಶ್ರಮಿಸಲಿ. ಜಗತ್ತು ಸಮಾನ ಶಿಕ್ಷಣಕ್ಕಾಗಿ ಯೋಚಿಸುತ್ತಿರುವ ಸಂದರ್ಭದಲ್ಲಿ ನಮ್ಮ ರಾಜ್ಯದ ಶಿಕ್ಷಣ ಸಚಿವರು ಬಹುಜನರಿಗೆ ಶಿಕ್ಷಣವನ್ನು ನಿರಾಕರಿಸುವ ಸನಾತನ ಬ್ರಾಹ್ಮಣ್ಯದ ಕರ್ಮಠಗಳನ್ನು ಬೋಧಿಸುತ್ತ, ಶಿಕ್ಷಣ ಸಂಸ್ಥೆಗಳನ್ನು ಪಕ್ಷದ ಪ್ರಣಾಳಿಕೆಯಾಗಿ ಮಾಡುತ್ತಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ.

ಶಿಕ್ಷಣದಲ್ಲಿ ಪಠ್ಯ ಮತ್ತು ಪಠ್ಯೇತರ ವಿಷಯಗಳನ್ನು ಗೊತ್ತುಪಡಿಸಲು ಒಂದು ನಿರ್ಧಿಷ್ಟವಾದ ಶೈಕ್ಷಣಿಕ ಪ್ರಾಧಿಕಾರಕ್ಕೆ ಮಾತ್ರ ಅವಕಾಶವಿರುತ್ತದೆ. ಈಗಾಗಲೇ ಶಿಕ್ಷಣ ಸಚಿವರು ಮಾಡುತ್ತಿರುವ ಎಲ್ಲ ಆದೇಶಗಳೂ ಕಾನೂನುಬಾಹಿರವಾಗಿವೆ. ರಾಜ್ಯವನ್ನು ಪ್ರಗತಿಯೆಡೆಗೆ ಒಯ್ಯುವ ಸಂಕಲ್ಪವನ್ನು ಸರ್ಕಾರ ಮಾಡದೇ. ಮಕ್ಕಳಲ್ಲಿ ಅವೈಜ್ಞಾನಿಕತೆ, ಜಾತೀಯತೆ, ಮತೀಯ ದ್ವೇಷ ತುಂಬುವ ಕೆಲಸ ಮಾಡುತ್ತಿದೆ. ಪ್ರಾಥಮಿಕ ಶಾಲೆಗಳನ್ನು ಅಭಿವೃದ್ಧಿಪಡಿಸಿ, ಮೂಲಭೂತ ಸೌಕರ್ಯ ನೀಡಬೇಕಾಗಿದೆ. ಅದಕ್ಕಾಗಿ ಮೊದಲು ಶಿಕ್ಷಕರ ನೇಮಕಾತಿ, ನೀರು, ಶೌಚಾಲಯ, ಕಟ್ಟಡಗಳನ್ನು ಕಟ್ಟಿಸಿ ಸರ್ಕಾರಿ ಶಿಕ್ಷಣವನ್ನು ಉಳಿಸಿಕೊಳ್ಳಬೇಕಿದೆ ಎಂಬುದನ್ನು ಸಚಿವರು ಅರ್ಥ ಮಾಡಿಕೊಳ್ಳಲಿ. ಶಾಲೆಗಳಿಗೆ ಕೇಸರಿ ಬಣ್ಣ ಬಳಿದು ಪಕ್ಷದ ಕಚೇರಿಗಳಾಗಿ ಮಾಡುವುದರಿಂದ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿಯಾಗುವುದಿಲ್ಲ. ಭಾರತವು ಬಹುತ್ವದ ರಾಷ್ಟ್ರವಾಗಿದೆಯೇ ಹೊರತು ಹಿಂದುತ್ವದ ರಾಷ್ಟ್ರವಲ್ಲ. ಬಹುತ್ವದ ನಡೆಯಿಂದ ಪ್ರಗತಿಯಾಗುತ್ತದೆಯೇ ವಿನ: ಕೋಮುವಾದಿ ನಡೆಯಿಂದಲ್ಲವೆಂದು ನಮಗೆ ಚರಿತ್ರೆಯೇ ಪಾಠ ಹೇಳಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app