ತೀಸ್ತಾ ಎಂಬ ಹೋರಾಟದ ನದಿಯ ನಿರ್ಭೀತ ನಡೆಗೊಂದು ಸಲಾಂ: ರೇಣುಕಾ ನಿಡಗುಂದಿ

Teesta

ನರಮೇಧದ ಕಾರಣಕರ್ತರಾಗಿರುವವರ ವಿರುದ್ಧ ಚಂಡಿಯಂತೆ ದಿಟ್ಟವಾಗಿ ನಿಂತ ತೀಸ್ತಾರ ಮೇಲಿನ ಹಗೆತನದ ರಾಜಕೀಯ ಅವರನ್ನು ಬಂಧಿಸುವ ಮೂಲಕ ಅಟ್ಟಹಾಸಗೈದಿವೆ. ನಾಟಕದ ದೃಶ್ಯಾವಳಿಗಳು ಹೀಗೆ ಹೀಗೇ ಇರಬೇಕು ಎಂದು ಮೊದಲೇ ಸಿದ್ಧಪಡಿಸಿ ಅದನ್ನು ಯಥಾವತ್ತಾಗಿ ಕಾರ್ಯಾಚರಣೆಗೆ ತಂದದ್ದು ದುಷ್ಟತನವಲ್ಲದೇ ಮತ್ತೇನಲ್ಲ

ಹಿಮಾಲಯದ ಮಡಿಲಲ್ಲಿ ಹುಟ್ಟಿ ಭಾರತ ಹಾಗೂ ಬಾಂಗ್ಲಾದೇಶದ ಗಡಿಯುದ್ದಕ್ಕೂ ಹರಿದು ಬಂಗಾಳಕೊಲ್ಲಿ ಸೇರುವ ತೀಸ್ತಾ ಎಂಬ ನದಿಯ ಹೆಸರನ್ನೇ ತಮ್ಮ ಮಗಳಿಗಿಟ್ಟಿದ್ದರು ಅತುಲ್ ಸೆಟಲ್ವಾಡ್. ತಂದೆಯನ್ನು ಮಕ್ಕಳು ಅಪ್ಪಾ….ಎನ್ನದೇ “ಅತುಲ್” ಎಂದೇ ಕರೆಯುತ್ತಿದ್ದರು. ಅದು ಅವರ ಬಯಕೆಯೂ ಅಗಿತ್ತಂತೆ. ಅಂಥ ಸಮತಾವಾದದ ಪರಿಪಾಲಕರಾಗಿದ್ದರು ಅತುಲ್ ಸೆಟಲ್ವಾಡ್.    

“ಪೊಲೀಸರ ದೊಣ್ಣೆಗಳು, ಏಜೆಂಟರ ಕತ್ತಿಗಳು, ವೇದಶಾಸ್ತ್ರಪುರಾಣ ಬಂದೂಕದ ಗುಡಾಣ, ತರಗಲೆ ಕಸಕಡ್ದಿಯಾಗಿ ತೇಲಿ ತೇಲಿ ಹರಿದವು, ಹೋರಾಟದ ಸಾಗರಕ್ಕೆ ನೂರಾರು ನದಿಗಳು“ ಎನ್ನುವ ಕವಿವಾಣಿಯಂತೆ  ತೀಸ್ತಾ ಸೆಟಲ್ವಾಡ್ ಎಂಬ ಹೋರಾಟದ ನದಿಗುಂಟ ಹೆಜ್ಜೆ ಹಾಕಿದವರೆಷ್ಟೋ, ಕತ್ತಲಿನಿಂದ ಬಳಲಿದವರು, ಅನ್ಯಾಯದಿಂದ ನಲುಗಿದವರು ಹೀಗೆ ಬೆಳಕ ಬಯಸಿ ಬಂದ ನೊಂದ ಜೀವಗಳೆಷ್ಟೋ.   

ಆದರೆ ಮೋದಿ ಎಂಬ ಛಪ್ಪನೈವತ್ತಾರು ಎದೆಯಿಂಚಿನ ವ್ಯಕ್ತಿ ಈ ತೀಸ್ತಾ ಎಂಬ ಹೋರಾಟದ ಕಿಡಿಗೆ ತತ್ತರಿಸಿದ್ದಂತೂ ನಿಜ. ಅದಕ್ಕಾಗಿಯೇ ಶಾ ಮೋದಿ ಕುಟಿಲರ ಸರ್ಕಾರ ಕೊಟ್ಟ  ನಿರಂತರವಾದ ಕಿರುಕುಳ, ಬೆದರಿಕೆ, ಸುಳ್ಳು ಆರೋಪಗಳು, ಸುಳ್ಳು ಮೊಕದ್ದಮೆಗಳು, ಒಳಕುತಂತ್ರಗಳು, ಅಸಹಾಯಕತೆ, ವಿಶ್ವಾಸದ್ರೋಹದ ಹೊರತಾಗಿಯೂ ತೀಸ್ತಾ ಧೈರ್ಯಗುಂದದೇ, ತನ್ನ ಹೋರಾಟದ ಕಿಡಿ ಆರದಂತೆ ಕಾಪಿಟ್ಟುಕೊಂಡು ಬಂದಿದ್ದಾರಲ್ಲ  ಅದೇ ಅವರ ಶಕ್ತಿ. ಆಕೆ ಹುಟ್ಟಾ ಹೋರಾಟಗಾರ್ತಿಯೇ, ಅವರ ಬಾಲ್ಯ, ಬೆಳೆದ ವಾತಾವರಣ ತೀಸ್ತಾ ಅವರಿಗೆ ಆ ರೀತಿ ತಾಲೀಮು ಕೊಟ್ಟಿತ್ತು. ಅವರಿಗೆ ತನ್ನ ಗುರಿಯ ಬಗ್ಗೆ ಸ್ಪಷ್ಟತೆ ಇತ್ತು.

ಆಕೆ ಹೇಳುತ್ತಾರೆ… “ನಾನು 7ನೇ ತರಗತಿಯಲ್ಲಿದ್ದಾಗ, ನನಗಾಗ ಬಹುಶಃ 12 ವರ್ಷವಿರಬಹುದು. ಒಂದು ದಿನ ಅಪ್ಪ “ ಆಲ್ ದಿ ಪ್ರೆಸಿಡೆಂಟ್ಸ್ ಮೆನ್” ಎನ್ನುವ ಪುಸ್ತಕವನ್ನು ಮನೆಗೆ ತಂದಿದ್ದರು. ಅದನ್ನು ಸ್ಟ್ರ್ಯಾಂಡ್ ಬುಕ್ ಸ್ಟಾಲ್ ನಲ್ಲಿ ಖರೀದಿಸಲಾಗಿತ್ತು. ಅಮೆರಿಕದ ವಾಟರ್ ಗೇಟ್ ಪ್ರಕರಣ ಕುರಿತಾದ ಈ ಪುಸ್ತಕ ಓದಿದ ಮೇಲೆ ನನ್ನ ಬದುಕು ಮಗ್ಗಲು ಬದಲಿಸಿತು. ಅದು ಮತ್ತೆಂದೂ ಬದಲಾಗಲಿಲ್ಲ. ಆ ಪುಸ್ತಕವನ್ನು ಮತ್ತೆ ಮತ್ತೆ ಓದಿದೆ. ತಪ್ಪುಗಳನ್ನು ಬಯಲಿಗೆಳೆದು ಸರಿಯನ್ನು ಪುನರ್ ಸ್ಥಾಪಿಸುವ ಸಲುವಾಗಿ ಆ ಇಬ್ಬರು ಪತ್ರಕರ್ತರು ಮಾಡಿದ್ದ ಅನವರತ ಕೆಲಸ ನನ್ನನ್ನು ಬಹುವಾಗಿ ಆಕರ್ಷಿಸಿತ್ತು. ನಾನು ಬದುಕಿನಲ್ಲಿ ಏನು ಮಾಡಬೇಕು ಎನ್ನುವುದು ಗೊತ್ತಾಗಿಹೋಯಿತು. ಅಪ್ಪನಿಗೆ ಹೇಳಿದೆ. “ಪತ್ರಿಕೋದ್ಯಮ ನನ್ನ ಆಯ್ಕೆಯ ವೃತ್ತಿ , ಪತ್ರಿಕೋದ್ಯಮದ ಮೂಲಕ ಕಾನೂನು ಪಾಲನೆಯನ್ನು ಸ್ಥಾಪಿಸುವುದು ನನ್ನ ಗುರಿ". ( ಸಂವಿಧಾನದ ಕಾಲಾಳು - ತೀಸ್ತಾ ಸೆಟಲ್ವಾಡ್ ನೆನಪುಗಳು – ಅನು: ಎಸ್. ಸತ್ಯಾ)

ಭಾರತದ ಮೊದಲ ಮತ್ತು ಅತ್ಯಂತ ದೀರ್ಘಕಾಲದ ಅಟಾರ್ನಿ ಜನರಲ್ ಮತ್ತು ಅನೇಕ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಎಂ.ಸಿ. ಸೆಟಲ್ವಾಡ್ ಅವರ ಮೊಮ್ಮಗಳು ಮತ್ತು ಹೆಸರಾಂತ ವಕೀಲ ಅತುಲ್ ಸೆಟಲ್ವಾಡ್  ಅವರ ಮಗಳಾದ ತೀಸ್ತಾ ಸೆಟಲ್ವಾಡ್ ಅವರ ಬಾಲ್ಯ ಕಾನೂನು, ಹಕ್ಕು ಮತ್ತು ಕರ್ತವ್ಯ, ನ್ಯಾಯ- ಸಂವಿಧಾನ ಇವುಗಳ ಮಧ್ಯೆಯೇ ಕಳೆದಿದೆ. 2002ರಲ್ಲಿ ನಡೆದ ಗೋಧ್ರಾ ಹತ್ಯಾಕಾಂಡವನ್ನು ಇತಿಹಾಸದಡಿಯಲ್ಲಿ ಮುಚ್ಚಿ ಹಾಕಬೇಕೆನ್ನುವ ಶಕ್ತಿಗಳನ್ನು ಎದುರು ಹಾಕಿಕೊಂಡು ಎರಡು ದಶಕಗಳ ಕಾಲ ನಿರ್ಭೀತವಾಗಿ ಹೋರಾಡಿದ ಈ ದೇಶದ ಹೆಣ್ಣುಮಗಳು ತೀಸ್ತಾ ಅವರಿಗೆ ಈ ದೇಶದ ಜನತೆ ಹಾಗೂ ಇತಿಹಾಸ ಯಾವತ್ತೂ ಋಣಿಯಾಗಿರಬೇಕು. ಯಾಕೆಂದರೆ ತೀಸ್ತಾ ಮತ್ತು ಅವರಂಥ ಸಮಾನ ಮನಸ್ಕ ಅಧಿಕಾರಿಗಳು, ಕಾರ್ಯಕರ್ತರು ಒಂದಾಗಿ ನಿಂತು ಗೋಧ್ರಾ ಹತ್ಯಾಕಾಂಡವನ್ನು ಬಯಲಿಗೆಳೆದು ಸಂತ್ರಸ್ತರಿಗೆ ನ್ಯಾಯ ಒದಗಿಸಲು ಪ್ರಯತ್ನಿಸದೇ ಹೋಗಿದ್ದರೆ ಇಂದು ಕ್ಲೀನ್ ಚಿಟ್ ಪಡೆದುಕೊಂಡು ಮೆರೆಯುತ್ತಿರುವವರ ಬಣ್ಣ ಯಾವತ್ತೂ ಬಯಲಾಗುತ್ತಿದ್ದಿಲ್ಲ. ನರಮೇಧದ ಕಾರಣಕರ್ತರಾಗಿರುವವರ ವಿರುದ್ಧ ಚಂಡಿಯಂತೆ ದಿಟ್ಟವಾಗಿ ನಿಂತ ತೀಸ್ತಾರ ಮೇಲಿನ ಹಗೆತನದ ರಾಜಕೀಯ ಅವರನ್ನು ಬಂಧಿಸುವ ಮೂಲಕ ಅಟ್ಟಹಾಸಗೈದಿವೆ. ನಾಟಕದ ದೃಶ್ಯಾವಳಿಗಳು ಹೀಗೆ ಹೀಗೆ ಇರಬೇಕು ಎಂದು ಮೊದಲೇ ಸಿದ್ಧಪಡಿಸಿ ಅದನ್ನು ಯಥಾವತ್ತಾಗಿ ಕಾರ್ಯಾಚರಣೆಗೆ ತಂದದ್ದು  ದುಷ್ಟತನವಲ್ಲದೇ ಮತ್ತೇನಲ್ಲ.

ಮಹಾತ್ಮಾ ಗಾಂಧಿಯ ಸತ್ಯ ಅಹಿಂಸೆಯ ಗುಜರಾತಿಗೆ ಕಪ್ಪು ಮಸಿ ಬಳಿಯುವಂತಹ ನರಸಂಹಾರವನ್ನು ಅಂದಿನ ಮೋದಿ ಸರ್ಕಾರ ನಡೆಸಿತ್ತು. ಗೋಧ್ರಾ ಘಟನೆ ನಡೆದದ್ದು ಫೆಬ್ರುವರಿ 27ರಂದು. ಮರುದಿನ ಅಂದರೆ ಫೆಬ್ರುವರಿ 28ರಂದು ಆರೆಸ್ಸೆಸ್ ಸಂಘಟಿತ ಗುಂಪುಗಳು ನರೋಡ ಪಟಿಯಾ ಮತ್ತು ಗುಲ್ಬರ್ಗ್ ಸೊಸೈಟಿ ಇರುವ ಚಮನಪುರ್, ಗೋಮ್ತಿಪುರ್ ಹಾಗೂ ಅಹ್ಮದಾಬಾದಿನ ಇತರ ಪ್ರದೇಶಗಳಲ್ಲಿ ದಾಳಿ ನಡೆಸಿದ್ದವು. ಸ್ಥಳೀಯ ರಾಜಕೀಯ ನಾಯಕರಿಂದ ಆದೇಶಗಳನ್ನು ಪಡೆದಿದ್ದ ಸ್ಥಳೀಯ ಪೊಲೀಸರು ನಿಷ್ಕ್ರೀಯರಾಗಿ ಓಡಾಡುತ್ತಾ ಸುಮ್ಮನೇ ನೋಡುತ್ತಾ ನಿಂತಿದ್ದರು. ಅಂಥ ಸಮಯದಲ್ಲಿ ದೇಶದ ಎಲ್ಲಾ ಮಾಧ್ಯಮಗಳಲ್ಲಿ ಗುಜರಾತಿನ ಹಿಂಸಾಕಾಂಡ ವರದಿಯಾಗುವಂತೆ ನೋಡಿಕೊಂಡಿದ್ದು ತೀಸ್ತಾ ಸೆಟಲ್ವಾಡ್.   

Image
ಗೋಧ್ರಾ ಗಲಭೆಯಲ್ಲಿ ಹೊತ್ತಿ ಉರಿದ ರೈಲು
ಗೋಧ್ರಾ ಗಲಭೆಯಲ್ಲಿ ಹೊತ್ತಿ ಉರಿದ ರೈಲು

ಆ ದಿನಗಳಲ್ಲಿ ರಾಷ್ಟ್ರಪತಿಗಳಾಗಿದ್ದ ಕೆ. ಆರ್ ನಾರಾಯಣನ್ ಹೇಳುತ್ತಾರೆ, “ರಾಷ್ಟ್ರಪತಿಯಾಗಿ ನಾನು ಅನುಭವಿಸಿದ ಅಸಹಾಯಕ ಸ್ಥಿತಿಗೆ ಉದಾಹರಣೆ ಎಂದರೆ ಗುಜರಾತ್. ಗುಜರಾತ್ ಗಲಭೆಯ ಹಿಂದೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪಿತೂರಿ ಇತ್ತು ಎನಿಸುತ್ತದೆ” ಎಂದಿದ್ದನ್ನು ತೀಸ್ತಾ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ.  
ಗುಜರಾತಿನ ರಾಜಕಾರಣಿಗಳು ನರಹತ್ಯೆ ನಡೆಯಲೇ ಇಲ್ಲ ಎಂಬಂತಹ ಕಥಾನಕವನ್ನು ಹೆಣೆಯಲು ಪ್ರಯತ್ನಿಸುತ್ತಿರುವಲ್ಲಿ ಅವರು ಸಂತ್ರಸ್ತರಿಗೆ ನ್ಯಾಯ ಒದಗಿಸುವ ಸಲುವಾಗಿ ಸಾಕ್ಷ್ಯಗಳನ್ನು ಸಂಗ್ರಹಿಸುವ, ನರಹತ್ಯೆಯನ್ನು ಕಣ್ಣಾರೆ ಕಂಡವರ ಹೇಳಿಕೆಗಳನ್ನು ರೆಕಾರ್ಡ್ ಮಾಡುವ ಮುಂತಾದ ಕಷ್ಟಕರ, ಅಪಾಯಕಾರಿ ಕೆಲಸಗಳನ್ನು  ತೀಸ್ತಾ ಅವರ ಸಂಘಟನೆ ನಿರ್ಭೀತವಾಗಿ ಮಾಡುತ್ತಿದ್ದುದೇ ನರಹಂತಕರಿಗೆ ನುಂಗಲಾರದ ತುತ್ತಾಗಿತ್ತು.ಹಂತಕರ ನಿದ್ದೆಗೆಡಿಸಿದ ತೀಸ್ತಾ ಅವರನ್ನು ಹೇಗಾದರೂ ಮಟ್ಟಹಾಕುವುದೇ ಅವರ ಗುರಿಯಾಗಿತ್ತು.
ತೀಸ್ತಾ ನಡೆಸುತ್ತಿದ್ದ  “ಸಬ್ರಂಗ್” NGO ಮತ್ತು CJP ( Citizens or Justice and Peace) ಸಂಸ್ಥೆಗಳ  ಮೇಲೆ ಅನೇಕ ಬಾರಿ ಹಣ ದುರ್ಬಳಿಕೆಯ ಅಪವಾದ ಹಿಂಸಾಚಾರದಂಥ ಅಪರಾಧಗಳನ್ನು ಹೇರಿ ಅವರ  ದನಿಯಡಗಿಸುವ ಪ್ರಯತ್ನವನ್ನು ಮೋಶಾ ಜೋಡಿ ಮಾಡುತ್ತಲೇ ಬಂದಿದೆ. ಆಕೆಯನ್ನು ಖಳನಾಯಕಿಯಂತೆ ಬಿಂಬಿಸಿ ಆ ದುರಂತದ ಘಟನೆಗಳಿಗೆ ಆಕೆಯೇ ಕಾರಾಣಕರ್ತಳು ಎನ್ನುವಂತೆ ಸುಳ್ಳು ಕತೆಗಳನ್ನು ಹರಡುತ್ತಾ  ಕತ್ತಿ ಮಸೆಯುತ್ತಲೇ ಬಂದಿತ್ತು ಈ ಜೋಡಿ.  

ಆದರೆ ಗುಜರಾತ್ ನರಮೇಧದ ವಾಸ್ತವಿಕ ಸತ್ಯಗಳು ದೇಶದ ಜನರಿಗೆ ಗೊತ್ತಿರದ ಅಂಕಿಅಂಶಗಳು ಬೆಚ್ಚಿಬೀಳಿಸುವಂತಿವೆ. ಪರಿಹಾರ ಶಿಬಿರಗಳಲ್ಲಿ ಒಟ್ಟು 1,60,000 ನಿರಾಶ್ರಿತರಿದ್ದರು. ಇವರ ಮೇಲೆ ನಡೆದ ಅತ್ಯಾಚಾರ, ಅವಮಾನ ಹಾಗೂ ಕೊಲೆಯ ಯಾತನೆ  ಜೊತೆಗೆ ಈ ಅಪರಾಧಗಳು ನಡೆದೇ ಇಲ್ಲ ಎನ್ನುವ ಗಲಭೆಕೋರರ ನಿರಾಕರಣೆಯು ಇವರನ್ನು ಮತ್ತಷ್ಟು ಘಾಸಿಗೊಳಿಸುತ್ತಿತ್ತು. ಕ್ರೂರ ಗಲಭೆಗಳಲ್ಲಿ ನಡೆದ ಎಲ್ಲ ಅನ್ಯಾಯಗಳನ್ನು ಗುಡಿಸಿ ಹಾಕುವ ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿದ್ದವು.‌ ʼಹಿಂದೆ ಆಗಿದ್ದನ್ನು ಬಿಟ್ಟು ಬಿಡಿ, ಇನ್ನು  ಮುಂದಿನದನ್ನು ನೋಡಿ’ ಎನ್ನುವ ಮಾತುಗಳನ್ನು ಈ ಪರಿಹಾರ ಶಿಬಿರಗಳಲ್ಲಿ ಬಿತ್ತುವ ಕೆಲಸ ನಡೆಯುತ್ತಿತ್ತು.   

ಭಾರತವು ಜನಪ್ರತಿನಿಧಿ ಪ್ರಜಾಪ್ರಭುತ್ವವನ್ನು ಹೊಂದಿದ್ದು, ಇದು ಸದಾ ಬಹುಸಂಖ್ಯಾತ ಜನರ ಅಥವಾ ದೊಂಬಿ ಎಬ್ಬಿಸುವವರ ಅಭೀಪ್ಸೆಗಳ ಕಡೆಗೇ ವಾಲುತ್ತಿರುತ್ತದೆ. ಸಂವಿಧಾನಬದ್ಧವಾದ ಪ್ರಜಾಪ್ರಭುತ್ವವು ಸಮಾಜದ ಕಟ್ತಕಡೆಯ ಮನುಷ್ಯರ ದನಿಯನ್ನು ಕೇಳಿಸಿಕೊಳ್ಳಬೇಕು. ಭಿನ್ನಾಭಿಪ್ರಾಯಗಳನ್ನು ಗೌರವಿಸಬೇಕು. ದನಿ ಇಲ್ಲದವರ, ಅಂಚಿಗೆ ತಳ್ಳಲ್ಪಟ್ಟವರ – ಸಾಂಸ್ಥಿಕ ಕೋಮುವಾದ, ಜಾತಿವಾದ, ವರ್ಗವಾದಗಳಿಂದ ತಾರತಮ್ಯಕ್ಕೆ ಗುರಿಯಾದವರ ದನಿಗಳನ್ನು ಆಲಿಸಿ ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಅಷ್ಟೇ ಅಲ್ಲ ಆ ದನಿಗಳಿಗೆ ಅಗತ್ಯವಾದ ತನ್ನೆಲ್ಲ ಆಡಳಿತಾತ್ಮಕ ಮತ್ತು ಆರ್ಥಿಕ ಸಂಪನ್ಮೂಲಗಳನ್ನು ಬಳಸಿ ಬೆಂಬಲ ಒದಗಿಸಿ, ಆ ಜನರು ಮುಖ್ಯವಾಹಿನಿಯಲ್ಲಿ  ತಲೆ ಎತ್ತಿ, ಎದೆಯುಬ್ಬಿಸಿ ನಿಲ್ಲುವಂತೆ ಮಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಸಂವಿಧಾನದತ್ತವಾದ ಸ್ವತಂತ್ರ ಅಸ್ತಿತ್ವವನ್ನು ಹೊಂದಿರುವ ನ್ಯಾಯಾಂಗವು, ಅದರಲ್ಲೂ ಉಚ್ಛ ನ್ಯಾಯಾಲಯಗಳು ಸಮಾಜದಲ್ಲಿರುವ ಈ ಅಸಮತೋಲನಗಳನ್ನು ನಿವಾರಿಸಬೇಕಿದೆ. ದುರದೃಷ್ಟವಶಾತ್ ರಾಜಸತ್ತೆಯು ಸಂಪೂರ್ಣ ಅಧಿಕಾರವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡುಬಿಟ್ಟಿದೆ. ಆದರೆ ಆರೆಸ್ಸೆಸ್ ಯಾವಾಗಲೂ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡು ನಡೆದೇ ಇಲ್ಲ ಎನ್ನುವ ತೀಸ್ತಾರ ಮಾತುಗಳು ಇವತ್ತಿನ ರಾಜಕೀಯದ ಕಟುವಾಸ್ತವ.       

Image
ಬಂಧಿತರಾಗಿರುವ ಶ್ರೀಕುಮಾರ್‌ ಮತ್ತು ತೀಸ್ತಾ
ಬಂಧಿತರಾಗಿರುವ ಶ್ರೀಕುಮಾರ್‌ ಮತ್ತು ತೀಸ್ತಾ

ಇಂದು ಅಘೋಷಿತ ಸರ್ವಾಧಿಕಾರವು ದೇಶದ ಬಹುತ್ವವನ್ನು ನಾಶಮಾಡಿ ಬಹುಸಂಖ್ಯಾತರ ವಿಚಾರ ಧಾರೆಯನ್ನು ಹೇರುತ್ತಿರುವಾಗ, ಏಳು ದಶಕಗಳ ದೇಶಕಟ್ಟುವ ಪ್ರಕ್ರಿಯೆಗೆ ಸವಾಲು ಹಾಕುತ್ತಿರುವಾಗ ತೀಸ್ತಾ,  ಶ್ರೀಕುಮಾರ್, ಸಂಜೀವ್ ಭಟ್‌ ಅವರಂಥವರು ಈ ದೇಶಕ್ಕೆ ಬೇಕಿದೆ. ಅವರಂತಹ ಹಕ್ಕು ಹೋರಾಟಗಾರರ  ಮೌಲ್ಯವನ್ನು ಇವತ್ತಿನ ರಾಜಕಾರಣಿಗಳು  ಅರಿತುಕೊಳ್ಳಬೇಕಿದೆ. ಯಾರೂ ಧೈರ್ಯ ಮಾಡದ ಒಂದು ದೊಡ್ಡ ಕೆಲಸಕ್ಕೆ ತೀಸ್ತಾ ಕೈಹಾಕಿದರು.    

ಕ್ರಿಮಿನಲ್ ಸಂಚುಗಾರಿಕೆ, ಸಾಮೂಹಿಕ ಹತ್ಯೆ , ನರಮೇಧ ಮತ್ತು ಬೆದರಿಕೆ ಹಾಕುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮತ್ತು ಇತರ 62 ಜನರ ವಿರುದ್ಧ ಎಫೈಆರ್ ದಾಖಲಿಸಬೇಕು ಎಂದು ಅಗ್ರಹಿಸಿ 2007ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಜಾಕಿಯಾ ಜಾಫ್ರಿ ಮತ್ತು ಸಿಜೆಪಿ ಜಂಟಿಯಾಗಿ) ಸಲ್ಲಿದ್ದರು. ಆಗಲೂ ತೀಸ್ತಾ ಅವರಿಗೆ ಕರೆ ಮಾಡಿದ ಕೆಲ ವಕೀಲರು, ʼಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಐಎಎಸ್ ಅಧಿಕಾರಿಗಳನ್ನು ಆರೋಪಿಗಳನ್ನಾಗಿ ನಮೂದಿಸಿದ ಈ ಪ್ರಕರಣದಲ್ಲಿ ತೊಡಗಿಸಿಕೊಂಡರೆ ಸ್ವಯಂ ಆಪತ್ತು ತಂದುಕೊಂಡಂತೆ’ ಎಂದು ಎಚ್ಚರಿಸಿದ್ದರು. ಎದುರಿಸಲಾಗದ ವೈರಿಗಳನ್ನು ಕಟ್ಟಿಕೊಳ್ಳಬೇಕಾಗುತ್ತದೆʼ ಎಂದರು.  ಇವೆಲ್ಲವೂ ಸಿಜೆಪಿಯಂತಹ ಮಾನವೀಯ ಸಂಸ್ಥೆಗಳು ಮಾಡುತ್ತಿರುವ ಅಸಾಮಾನ್ಯ ಕೆಲಸಗಳನ್ನು ಹತ್ತಿಕ್ಕಲು ಮಾಡುತ್ತಿರುವ ನೀಚ ಕುತಂತ್ರಗಳು.” ಎಂದು ಹೇಳುವ ತೀಸ್ತಾರ ಬಗ್ಗೆ ಹೆಮ್ಮೆಯುಕ್ಕುತ್ತದೆ.

ದೇಶದಾದ್ಯಂತ ಈ ಬಂಧನೆಯನ್ನು ಖಂಡಿಸಿ ಅನೇಕ ಪ್ರದೇಶಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಅವರನ್ನು ಬಂಧಿಸುವ ಸಲುವಾಗಿಯೇ ವ್ಯವಸ್ಥಿತವಾಗಿ ಕರಡನ್ನು ತಯಾರಿಸಿ ಈ ನಾಟಕವನ್ನು ಆಡಿದ್ದು ಈ ದೇಶದ ನ್ಯಾಯಾಂಗದ ಸೋಲು. ತೀಸ್ತಾ ಮೇಲಿನ ಎರಡು ದಶಕದ ಹಗೆತನವನ್ನು ಮೋಶಾ ಈಗ ತೀರಿಸಿಕೊಂಡಿದ್ದಾರೆ. ಯಾವುದೇ ನೋಟಿಸ್‌ ಕೊಡದೇ ಮನೆಗೆ ನುಗ್ಗಿದ ಪೊಲೀಸರು ಅಮಾನವೀಯವಾಗಿ ಅವರನ್ನು ಬಂಧಿಸುವ ಮೂಲಕ ತಮ್ಮ ವಿಕೃತರೂಪವನ್ನು ಜಗಜ್ಜಾಹೀರುಗೊಳಿಸಿದ್ದಾರೆ.

ತೀಸ್ತಾ ಸೆಟಲ್ವಾಡ್ ಅವರ ಬಂಧನದ ಬೆನ್ನಲ್ಲೇ ಆಲ್ಟ್ ನ್ಯೂಸ್ ನ ಸಹ ಸಂಪಾದಕ ಮೊಹಮ್ಮದ್ ಜುಬೇರ್ ಅವರ ಬಂಧನವನ್ನು ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆದವು. ಅಂತಾರಾಷ್ಟ್ರೀಯ ಮೂಲಗಳೂ ತೀಸ್ತಾ ಸೆಟಲ್ವಾಡರ ಬಂಧನಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿವೆ. ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಆಂಟೋನಿಯೋ ಗುಟೆರಸ್ ಅವರ ವಕ್ತಾರರೂ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತಿರುವುದನ್ನು ಖಂಡಿಸಿ "ಪತ್ರಕರ್ತರು ಏನು ಬರೆಯುತ್ತಾರೆ, ಅವರು ಏನು ಟ್ವೀಟ್ ಮಾಡುತ್ತಾರೆ ಮತ್ತು ಅವರು ಏನು ಹೇಳುತ್ತಾರೆ" ಎಂಬುದಕ್ಕಾಗಿ ಜೈಲಿಗೆ ಹಾಕಬಾರದು ಮತ್ತು ಯಾವುದೇ ಕಿರುಕುಳದ ಬೆದರಿಕೆಯಿಲ್ಲದೆ ಜನರು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ನೀಡುವುದು ಮುಖ್ಯ ಎಂದಿದ್ದಕ್ಕಾದರೂ ಈ ಸರ್ಕಾರ ನಾಚಿಕೆಪಡಬೇಕಾಗಿತ್ತು.

ಬಂಧನಕ್ಕೆ ಯಾವುದೇ ನೋಟಿಸನ್ನು ಜಾರಿಮಾಡದೇ ಸ್ವತಃ ಕಾನೂನಿನ ಮಾನದಂಡಗಳನ್ನು ಗಾಳಿಗೆ ತೂರಿ ನಾಚಿಕೆಯಿಂದ ತಲೆತಗ್ಗಿಸುವಂತ ಕಾರ್ಯವನ್ನು ನಮ್ಮ ಘನ ಸುಪ್ರೀಂ ಕೋರ್ಟ್ ಮಾಡಿದೆ. ಬಹುಶಃ ದೇಶದ ಇತಿಹಾಸದಲ್ಲಿಯೇ ಇದು ನಾಚಿಕೆಪಡುವಂತಹ ಘಟನೆಯೊಂದಕ್ಕೆ ರುಜುಹಾಕಿದೆ.

ಆಧುನಿಕ ದಿನದ ನೀರೋ‌

ಅತ್ತ ಸುಪ್ರೀಂ ಕೋರ್ಟ್ ತೀರ್ಪು ಹೊರಬರುವುದೇ ತಡ ಮಾನ್ಯ ಗೃಹಮಂತ್ರಿಗಳು ತಡಮಾಡದೇ ಒಂದು ಕ್ಷಣವನ್ನೂ ವ್ಯರ್ಥಮಾಡದೇ ANI ಗೆ ಸಂದರ್ಶನವಿತ್ತರು. ಸಂದರ್ಶನದಲ್ಲಿ ಶಾ ಅವರು ತೀಸ್ತಾ ಸೆಟಲ್ವಾಡ್ ಅವರನ್ನು ಗುಜರಾತಿನದ್ಯಂತ ಬಿಜೆಪಿ ಕಾರ್ಯಕರ್ತರ ವಿರುದ್ಧ ಆರೋಪ ಮಾಡಿದ ಕಾರ್ಯಕರ್ತ ಎನ್‍ಜಿಒಗಳಲ್ಲಿ ಒಂದು ಎಂದು ಹೆಸರಿಸಿದ್ದು. ಇದು ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ಗುಜರಾತ್ ಪೋಲೀಸರೂ ಅಂಡಿಗೆ ಸೂಜಿಚುಚ್ಚಿಸಿಕೊಂಡವರಂತೆ ತೀಸ್ತಾರನ್ನು ಬಂಧಿಸಲು  ಮುಂಬೈಗೆ ಧಾವಿಸಿದ್ದನ್ನು ನೋಡಿದರೆ ಇದೆಲ್ಲವೂ ಪೂರ್ವನಿಯೋಜಿತವಾದ ಬಿಜೆಪಿ ಪ್ರಾಯೋಜಿತ  ಕಾರ್ಯಕ್ರಮವೆಂದು ಎಂಥ ದಡ್ದರಿಗೂ ಗೊತ್ತಾಗುತ್ತದೆ. ಸುಪ್ರೀಂ ಕೋರ್ಟ್ ಕೂಡ ತನ್ನ 452 ಪುಟಗಳ ತೀರ್ಪಿನಲ್ಲಿ ಉದ್ದೇಶ ಪೂರ್ವಕವಾಗಿಯೇ ಮುಂದಿನ ಕಾರ್ಯಕ್ರಮಗಳಿಗೆ ಏದೆಮಾಡಿಕೊಡುವಂತೆ -  the judgment added that “All those involved in such abuse of process, need to be in the dock and proceeded with in accordance with law” ಎಂದು ಶರಾ ಬರೆಯಿತು.  ಇದೇ ಸುಪ್ರೀಂ ಕೋರ್ಟ್ ನರೇಂದ್ರ ಮೋದಿ ಸರ್ಕಾರದ ಗೋಧ್ರಾ ಪೂರ್ವೋತ್ತರದ ನಡವಳಿಕೆಯನ್ನು “ಆಧುನಿಕ ದಿನದ ನೀರೋ” ಇದ್ದಂತೆ ಎಂದುದನ್ನು ಮರೆತಿದೆ

ಇಂದು ಫ್ಯಾಸಿಸ್ಟ್ ಶಕ್ತಿಗಳು ನಮ್ಮ ಮನೆಯವರೆಗೂ ಬಂದಿವೆ.  ನಮ್ಮ ಬ್ಯಾಂಕ್ ಖಾತೆ, ನಾವು ಸಕ್ರಿಯವಾಗಿರುವ ಸಾಮಾಜಿಕ ಜಾಲತಾಣಗಳು, ನಾವು ಪ್ರಯಾಣಿಸುವ ಪ್ರದೇಶ, ವಸತಿ, ಆಹಾರ, ಆಸ್ತಿ, ಸಂಬಳ ಇತ್ಯಾದಿ ಖಾಸಗಿ ಮಾಹಿತಿಗಳೆಲ್ಲದರ ಮೇಲೂ ಪ್ರಭುತ್ವದ ಕಾವಲಿದೆ.  ಮನುಷ್ಯರ ಬದುಕುಗಳನ್ನು ನಿಯಂತ್ರಿಸುತ್ತಿರುವ ಈ ಸರ್ವಾಧಿಕಾರಿಯ ಆಡಳಿತ ದೇಶದ ಆರ್ಥಿಕತೆಯನ್ನು ನಾಶಮಾಡಿ ಸಾರ್ವಜನಿಕರ ಬದುಕನ್ನು ಹಗ್ಗದ ನಡಿಗೆಯನ್ನಾಗಿಸಿದೆ. ಆಚೆ ಈಚೆ ತುಸು ಬ್ಯಾಲನ್ಸ್‌ ತಪ್ಪಿದರೂ ಬದುಕು ಡೋಲಾಯಮಾನವಾಗಿಬಿಡುತ್ತದೆ.

ಪ್ರಿಯಾ ಪಿಳ್ಳೈ,ಆಕಾರ್ ಪಟೇಲ್, ಹರ್ಷ ಮಂದರ್, ಗೌತಮ್ ನವಾಲ್ಕಾ ...

ಇವತ್ತಿನ ಈ ಸ್ಥಿತಿಗೆ ಕೂಗುಮಾರಿ ಟಿವಿ ಮಾಧ್ಯಮಗಳೂ ಒಂದು ಕಾರಣವಾಗಿವೆ.  ಇವು ಅತಿರೇಕದ ನಿರೂಪಣೆಯಿಂದ ಸಾಮಾಜಿಕ ಶಾಂತಿಗೆ ಭಂಗತರುವುದಲ್ಲದೇ ಸರ್ಕಾರವನ್ನು, ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ, ಟೀಕಿಸುವವರನ್ನು ದೇಶದ್ರೋಹಿಗಳೆಂದು, ನಗರ ನಕ್ಸಲೀಯರೆಂದು ಹಣೆಪಟ್ಟಿಹಚ್ಚಿ ಅವರನ್ನು ಜೈಲಿಗಟ್ಟಲಾಗುತ್ತಿದೆ. 2015ರಲ್ಲಿ ಗ್ರೀನ್‍ಪೀಸ್ ಪರಿಸರ ಕಾರ್ಯಕರ್ತೆ ಪ್ರಿಯಾ ಪಿಳ್ಳೈ ಲಂಡನ್ನ್‍ಗೆ ಪ್ರಯಾಣಿಸುವುದನ್ನು ನಿರ್ಬಂಧಿಸಲಾಗಿತ್ತು. ಭಾರತದಲ್ಲಿನ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಮುಖ್ಯಸ್ಥ ಆಕಾರ್ ಪಟೇಲ್ ಅವರು ವಿದೇಶಕ್ಕೆ ಪ್ರಯಾಣಿಸುವುದನ್ನು ನಿಷೇಧಿಸಿದ್ದಾರೆ.  ಬುಡಕಟ್ಟು ಹಕ್ಕುಗಳ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಹಲವಾರು ಆರೋಪಗಳಲ್ಲಿ ಮೂರುವರ್ಷಗಳ ಕಾಲ ಜೈಲುವಾಸ ಅನುಭವಿಸಿ ಇದೀಗ ಜಾಮೀನಿನ ಮೇಲೆ ಹೊರಬಂದಿದ್ದಾರೆ.  ಶಾಂತಿ ಪ್ರಚಾರಕ ಹರ್ಷ ಮಂದರ್ ತನಿಖೆಗೆ ಒಳಪಟ್ಟಿದ್ದಾರೆ. ಗೌತಮ್ ನವಾಲ್ಕಾ ಅವರಂತಹ ಮಾನವ ಹಕ್ಕುಗಳ ಹೋರಾಟಗಾರರು ಕಂಬಿಗಳ ಹಿಂದಿದ್ದಾರೆ. 

Image
ಗ್ರೀನ್‌ ಪೀಸ್‌ ಪರಿಸರ ಹೋರಾಟಗಾಋತಿ ಪ್ರಿಯಾ ಪಿಳೈ
ಗ್ರೀನ್‌ ಪೀಸ್‌ ಪರಿಸರ ಕಾರ್ಯಕರ್ತೆ ಪ್ರಿಯಾ ಪಿಳ್ಳೈ

ಜೆಎನ್ಯೂವಿನ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲೀದ್‍ಗೆ 2020ರ ಈಶಾನ್ಯ ದೆಹಲಿಯ ಗಲಭೆ ಪ್ರಕರಣದಲ್ಲಿ ಇನ್ನೂ  ಜಾಮೀನು ಸಿಕ್ಕಿಲ್ಲ. ಹತರಸ್ ಘಟನೆಯ ಸಂಬಂಧ ದೇಶದ್ರೋಹ ಮತ್ತು ಹಿಂಸೆಯನ್ನು ಪ್ರಚೋದಿಸುವ ಆರೋಪದ ಮೇಲೆ ವರ್ಶದಿಂದಲೂ ಜೈಲಿನಲ್ಲಿದ್ದಾರೆ.  ಬಂಧನಕ್ಕೊಳಗಾದ ಕೇರಳದ ಪತ್ರಕರ್ತ ಕಪ್ಪನ್ ಸಿದ್ದೀಕಿಗೆ ಜಾಮೀನು ಸಿಕ್ಕಿಲ್ಲ. ಯುಎಪಿಎ ನಿಬಂಧನೆಗಳ ಅಡಿಯಲ್ಲಿ ಸ್ಟಾನ್‌ ಸ್ವಾಮಿ ಗುಟುಕು ನೀರಿಗಾಗಿ ಹಲುಬಿ ಜೈಲಿನಲ್ಲಿಯೇ ಪ್ರಾಣತೆತ್ತರು. 

ಇದನ್ನು ಓದಿದ್ದೀರಾ? ದ್ವೇಶದ ಹತ್ಯೆಗಳು ಧರ್ಮವನ್ನು ಕೊಲ್ಲುತ್ತವೆ: ರಂಗನಾಥ ಕಂಟನಕುಂಟೆ

ಆದರೆ ಇದೇ ಬಿಜೆಪಿಯ ನಾಯಕರು “ಗೋಲಿ ಮಾರೋಂ ಸಾಲೋಂಕೋ” ಎನ್ನುವಂಥ  ಪ್ರಚೋದನಕಾರಿ ಹೇಳಿಕೆಗಳನ್ನು ಕೊಟ್ಟರೂ ಅಡ್ಡಿಯಿಲ್ಲ. ಅಖಲಕ್, ಅನ್ಸಾರಿಯಂಥವರನ್ನು ಗುಂಪು ಥಳಿಸುವಿಕೆಯಲ್ಲಿ ಕೊಂದರೂ ಅಡ್ಡಿಯಿಲ್ಲ, ಜಿಂದಾಲ್ ಮತ್ತು ನೂಪುರ್ ಶರ್ಮಾಳನ್ನು ರಕ್ಷಿಸುವ ಬಿಜೆಪಿ ಮೊಹಮ್ಮದ್‌ ಜುಬೇರ್‌ನನ್ನು ಬಂಧಿಸುತ್ತದೆ. ಇದೆಂಥ ನ್ಯಾಯ! ಇದೆಂಥ ದ್ವೇಷರಾಜಕಾರಣ!

ಅಷ್ಟಕ್ಕೂ ತೀಸ್ತಾ ಮಾಡಿದ ಅಪರಾಧವಾದರೂ ಏನು?

ನರಮೇಧದಲ್ಲಿ ಬಲಿಯಾದ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದು ಅಪರಾಧವೇ? ಇಲ್ಲಾ ದೇಶದ ಕಾನೂನು ಎಲ್ಲರಿಗೂ ಸಮನಾಗಿರುವುದದರೆ ಆ ಶಿಕ್ಷೆ ಗೋಧ್ರಾ ಹಂತಕರಿಗೂ ದೊರೆಯಬೇಕು ಎಂದಿದ್ದು ತಪ್ಪೇ? ಇಲ್ಲ , ದ್ವೇಷ ರಾಜಕಾರಣದ ವಿರುದ್ಧ ಸಮರ ಸಾರಿದ ಅವರ ಜೀವಪರ ಕಾಳಜಿಗೆ ಒಂದು ದೊಡ್ದ ಸಲಾಮು.   ಕಡುಕಷ್ಟಕರವಾದ, ದುರ್ಗಮವಾದ ಸಾಮಾನ್ಯರು ಆರಿಸಿಕೊಳ್ಳಲಾಗದ ಅಸಾಮಾನ್ಯ ಮಾರ್ಗವನ್ನು ಆರಿಸಿಕೊಂಡು ಎದೆಗುಂದದೇ, ತನ್ನ ಮಾರ್ಗದಲ್ಲಿ ಬರುವ ಎಲ್ಲಾ ಕೊರಕಲುಗಳನ್ನು, ಹಳ್ಳಕೊಳ್ಳಗಳನ್ನು, ದಾಟಿ ಮುನ್ನುಗ್ಗುವ ನದಿಯಂತಹ ತೀಸ್ತಾ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು. ನಿಮ್ಮೊಂದಿಗೆ ನಾವೂ ಇದ್ದೇವೆ.  ಈ ದೇಶದ ಜೀವಪರ ಮನಸ್ಸುಗಳು ನಿಮ್ಮೊಂದಿಗಿವೆ.      

ನಿಮಗೆ ಏನು ಅನ್ನಿಸ್ತು?
1 ವೋಟ್