ʼನ್ಯಾ. ಸಂದೇಶ್‌ ಮಾತನಾಡಬೇಕಾದ ಕಾಲದಲ್ಲಿ ಮಾತನಾಡಿದ್ದಾರೆʼ

H P Sandesh

ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.‌ ಸಂದೇಶ್ ಈಚೆಗೆ ಪ್ರಕರಣವೊಂದರ ವಿಚಾರಣೆಯಲ್ಲಿ ಆಡಿದ ಮಾತುಗಳು ಏಕಕಾಲಕ್ಕೆ ಸರ್ಕಾರ ಮತ್ತು ಜನರನ್ನು ಜಾಗೃತಗೊಳಿಸಿವೆ. ಇನ್ನೇನು ನೈತಿಕತೆ ಸತ್ತೇ ಹೋಯಿತು ಅನ್ನುವಾಗ ಸಮಾಜಕ್ಕೆ ಸಾತ್ವಿಕ ಕೆಚ್ಚಿನ ಆಕ್ಸಿಜನ್ ನೀಡುವಂತಿದೆ. ನ್ಯಾಯಾಂಗದ ಮೇಲೆ ನಂಬಿಕೆ ಕಳೆದುಕೊಂಡಿದ್ದ ಜನರಲ್ಲಿ ಆತ್ಮವಿಶ್ವಾಸ ತುಂಬುವಂತಿವೆ‌.

ʼಮಾತಾಡಬೇಕಾದ ಕಾಲದಲ್ಲೇ ಮಾತಾಡಬೇಕು. ಬೀದಿಯಲ್ಲಿ ರಕ್ತ ಚೆಲ್ಲಿರುವಾಗ ರಕ್ತದ ಕುರಿತೇ ಮಾತಾಡಬೇಕುʼ ಎಂಬ ಮಾತಿದೆ. ಬ್ರೆಕ್ಟ್ ಹೇಳುವ ಈ ಮಾತು ಎಲ್ಲಾ ಕಾಲಕ್ಕೂ ಅನ್ವಯವಾಗುವಂತಹದ್ದು.

ಧರೆ ಹತ್ತಿ ಉರಿಯುವಾಗ ಇನ್ನಾರಿಗೆ ದೂರಲಿ ಕೂಡಲಸಂಗಮದೇವಾ ಎಂದು ಬಸವಣ್ಣ ತನ್ನ ಅಸಹಾಯಕತೆಯನ್ನು ಕೂಡಲಸಂಗಮನ ಎದುರು ಹೇಳಿಕೊಂಡ ಸನ್ನಿವೇಶ ನೆನಪಾಯಿತು‌. ಕಲ್ಯಾಣದ ದೊರೆ ಬಿಜ್ಜಳ ಪುರೋಹಿತಶಾಹಿಯ ಮಾತು ಕೇಳಿ, ಅನುಭವ ಮಂಟಪದ ಪಡೆಯನ್ನು ಶಿಕ್ಷಿಸಿದ ಸಮಯ ಅದು. ಬಸವಣ್ಣ  ಕಲ್ಯಾಣದಿಂದ ಕೂಡಲಸಂಗಮಕ್ಕೆ ಹೊರಟು ನಿಂತ ಸನ್ನಿವೇಶ. ಬಸವಣ್ಣ ನಿಟ್ಟುಸಿರಿನ ನಡುವೆ ಮಾತಾಡುತ್ತಾನೆ...‌‌.‌
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲುಬಾರದು.
ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ ! 

ಇಂತಹ ಸನ್ನಿವೇಶ ಈಗ ಕರ್ನಾಟಕದಲ್ಲಿದೆ ಹಾಗೂ ದೇಶದಲ್ಲೂ ಇದೆ. ಇಲ್ಲಿ ನಾನು ಪ್ರಸ್ತಾಪಿಸಬೇಕೆಂದು ಕೊಂಡದ್ದು  ಇವತ್ತಿನ ಭಾರತಕ್ಕೆ ರಾಜಕೀಯ ಪ್ರತಿಕ್ರಿಯೆ ಹೇಗಿರುತ್ತದೆ? ಮತ್ತು  ಜನ ಸಮುದಾಯದ ಪ್ರತಿಕ್ರಿಯೆ ಹೇಗಿರುತ್ತದೆ ಹಾಗೂ ಮಾಧ್ಯಮದ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಕುರಿತು.

ರಾಜಕೀಯ ಪ್ರತಿಕ್ರಿಯೆಯಲ್ಲಿ  ಸಹಜವಾಗಿ ಆಡಳಿತ ಪಕ್ಷ  'ತಾನು ಮಾಡಿದ್ದೇ ಸರಿ' ಎಂದೇ ಪ್ರತಿಪಾದಿಸುತ್ತದೆ. ಹಾಗೂ ಅದು ತನಗಿರುವ ಎಲ್ಲಾ ಸಾಧ್ಯತೆಗಳನ್ನು ತನ್ನ ಪರವಾಗಿ ಇರುವಂತೆ ನೋಡಿಕೊಳ್ಳುತ್ತದೆ. ಕೆಲವು ಕಡೆ ಬಲ ಪ್ರಯೋಗ ಮಾಡುತ್ತದೆ. ಕೆಲವು ಕಡೆ ಪ್ರಭಾವಿಸುತ್ತದೆ. ಕೆಲವು ಕಡೆ ಎಲ್ಲವೂ ತನ್ನ ಕಾಲಬುಡಕ್ಕೆ ಬರುವಂತೆ ಸನ್ನಿವೇಶ ಸೃಷ್ಟಿಸುತ್ತದೆ. ಪ್ರತಿರೋಧವನ್ನು ತುಳಿಯುತ್ತದೆ, ಹತ್ತಿಕ್ಕುತ್ತದೆ. ಮಾಧ್ಯಮವನ್ನೇ ತನ್ನ ಹಿಡಿತದಲ್ಲಿ ಇಟ್ಟು  ಕೊಳ್ಳುತ್ತದೆ. ಗೊಬೆಲ್ಸಗಳ ಸಂಖ್ಯೆಯನ್ನು ಅಪಾರ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುತ್ತದೆ.

ರಾಜಕೀಯವಾಗಿ ವಿರೋಧ ಪಕ್ಷ ಸಾಧ್ಯವಿದ್ದಷ್ಟು ಅಧಿಕಾರದಲ್ಲಿರುವವರ ತಪ್ಪುಗಳಿಗೆ ಪ್ರತಿರೋಧ ತೋರುತ್ತಿದೆ.  ಇನ್ನು ಸದ್ಯದ ಸನ್ನಿವೇಶದಲ್ಲಿ ಮಾಧ್ಯಮದ ಶೇಕಡಾ 90 ಜನ ಆಡಳಿತದ ಪರವಾಗಿ ಅಂದರೆ, "ಪ್ರಭುತ್ವದ ಪರವಾಗಿ ಚಾಮರ ಬೀಸುತ್ತದೆ". ಭಾರತದ ಬಹುತ್ವಕ್ಕೆ ಪೆಟ್ಟು ನೀಡುತ್ತಾ, ಕೋಮುಸೌಹಾರ್ದಕ್ಕೆ ಎಳ್ಳು ನೀರು ಬಿಡುತ್ತಿದ್ದರೆ, ಅದೇ ಮಾಧ್ಯಮ ಲೋಕದ ಇನ್ನುಳಿದ ಶೇ 5ರಷ್ಟು ಜನ ತಟಸ್ಥ ನೀತಿಯನ್ನು, ಶೇ 5ರಷ್ಟು ಜನ ಪ್ರತಿರೋಧವನ್ನು ದಾಖಲಿಸುತ್ತಿದ್ದಾರೆ.

ಇನ್ನು ನೂಪುರ ಶರ್ಮಾ ಎಂಬ ಬಾಯ್ಬಡುಕಿಯ ಪ್ರಕರಣ ಇರಬಹುದು, ಪಠ್ಯ ಪುಸ್ತಕ ಪರಿಷ್ಕರಣದ ಕೇಸರಿಕರಣ ಇರಬಹುದು, ಆನವಟ್ಟಿಯಲ್ಲಿ "ಜೊತೆಗಿರುವನು ಚಂದಿರ "ನಾಟಕಕ್ಕೆ ತಡೆಯೊಡ್ಡಿದ ಪ್ರಕರಣ ಇರಬಹುದು, ರಾಜಕೀಯ ಪಕ್ಷವೊಂದರ ಅಪರೇಶನ್ ಡೈಮಂಡ್ ಶಾಸಕರ ಪ್ರಕರಣ, ಅಡ್ಡ ಮತದಾನ, ಅಧಿಕಾರದಲ್ಲಿರುವವರ ಪರ ಚಾಮರ ಬೀಸುವುದರಲ್ಲೇ ಹಲವು ಮಾಧ್ಯಮಗಳ ಮಾಲೀಕರು, ಸಂಪಾದಕರು ತೃಪ್ತಿ ಕಂಡಿದ್ದಾರೆ. ಭಾರತದ ಸೌಹಾರ್ದ ಪರಂಪರೆ ಕಾಲುವೆ ಬಿದ್ದು ಅಸಹಾಯಕ ಸ್ಥಿತಿಯಲ್ಲಿರುವಾಗ, ಅಧಿಕಾರಸ್ಥರ ಪಾದತಲ ಎಂಬುದು 'ಮಾಧ್ಯಮ ವ್ಯಾಪಾರಿಗಳಿಗೆ ' ಖುಷಿ ನೀಡತೊಡಗಿದೆ.

Image
ನೂಪುರ್‌ ಶರ್ಮಾ
ನೂಪುರ್‌ ಶರ್ಮಾ

ಪ್ರತಿರೋಧದ ಪರಂಪರೆ

ಒಂದು ಸಮಾಧಾನಕರ ಸಂಗತಿ ಅಂದರೆ ಭಾರತದ ಇತಿಹಾಸದಲ್ಲಿ ಗುಲಾಮಿತನ ಇರುವಂತೆ, ಪ್ರತಿರೋಧದ ಪರಂಪರೆಯೂ ಇದೆ. ಅದು ಕಾಲ ಕಾಲಕ್ಕೆ ಜಾಗೃತವಾಗಿ ಜನ ಸಮುದಾಯದ ಹಿತ ಕಾಯುತ್ತಾ ಬಂದಿದೆ‌.

ಬಸವಣ್ಣ ಮತ್ತು ವಚನಕಾರರು ಚಳವಳಿ ಗಮನಿಸಿ; ಅದು ಕನ್ನಡದ ಪ್ರತಿರೋಧ ಪರಂಪರೆಯಾಗಿದೆ. ಸ್ಥಗಿತ ವ್ಯವಸ್ಥೆಯನ್ನು ಪ್ರಶ್ನಿಸಿ, ಚಲನಶೀಲ ಸಮಾಜ ಕಟ್ಟಿದ ಪರಂಪರೆಯಾಗಿದೆ. ಈ ಪರಂಪರೆಯನ್ನೇ ಪ್ರಸ್ತುತ ರಾಜ್ಯ ಸರ್ಕಾರ ಬುಡಮೇಲು ಮಾಡಲು ಹೊರಟಿರುವುದು.

ಕನಕದಾಸ, ಸರ್ವಜ್ಞ, ಪೆರಿಯಾರ್, ತಿರುವಳ್ಳವರ್, ವೇಮನ, ಸಮಾಜದ ಅನ್ಯಾಯ, ಅಸಮಾನತೆ ವಿರುದ್ಧ ಬಂಡೆದ್ದವರೇ ಆಗಿದ್ದಾರೆ. ಬಸವಣ್ಣ ಜಾತಿ ಮತ್ತು ಅಸಮಾನತೆಯ ವಿರುದ್ದ ಪ್ರತಿರೋಧ ಒಡ್ಡಿದ. ಕನಕದಾಸ ಜಾತಿ ಪದ್ಧತಿಯ ಕ್ರೌರ್ಯವನ್ನು ಭಕ್ತಿಯ ಮೂಲಕವೇ ಪ್ರತಿರೋಧ ದಾಖಲಿಸಿದ. ಸರ್ವಜ್ಞ, ವೇಮನರು ಸಹ ತ್ರಿಪದಿಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದರು.

ಪೆರಿಯಾರ್ ರಾಮಸ್ವಾಮಿ ಕ್ರಾಂತಿಯ ಕಿಡಿಯನ್ನು ದ್ರಾವಿಡರಲ್ಲಿ ತುಂಬಿದರು‌. ಮಹಾತ್ಮ ಗಾಂಧಿ ಏಕಕಾಲಕ್ಕೆ ಬ್ರಿಟಿಷರು ಹಾಗೂ  ಜನಾಂಗೀಯವಾದಿ ಹಿಂದುತ್ವ ಪ್ರತಿಪಾದಕರಿಗೆ ನುಂಗಲಾರದ ತುತ್ತಾದರು‌. ಅಂಬೇಡ್ಕರ್ ಬ್ರಿಟಿಷರ ಕಣ್ಣು ತೆರೆಸುತ್ತಲೇ ; ಹಿಂದೂ ಧರ್ಮದ ಶ್ರೇಣಿಕೃತ ಸಮಾಜವನ್ನು ತಿದ್ದಲು ಯತ್ನಿಸಿದರು. ಸಾಧ್ಯವಾಗದೇ ಹೋದಾಗ ಹಿಂದೂ ಧರ್ಮ ತ್ಯಜಿಸಿ, ಬೌದ್ಧ ಧರ್ಮಕ್ಕೆ ಮತಾಂತರವಾದರು‌. ಹೀಗೆ ನಮ್ಮ ದೇಶದಲ್ಲಿ ನಿರಂತರವಾಗಿ ಹರಿವ ಅಧಿಕಾರದ ನದಿಯಲ್ಲಿ ಪ್ರವಾಹಕ್ಕೆ ಎದುರಾಗಿ ನಿಂತು, ಪ್ರತಿರೋಧ ಪರಂಪರೆಯ ದಾಖಲಿಸಿ ಸತ್ಯ ಹೇಳಿದವರ ದೊಡ್ಡ ಸಾಲು ಇದೆ‌.
ಬಸವಣ್ಣ , ಬುದ್ಧ, ಗಾಂಧಿಗೆ ಸೋಲಾಗಿರಬಹುದು. ಈ ಮಹಾತ್ಮರ ಕೊಲೆಯಾಗಿರಬಹುದು. ಆದರೆ ಅವರ ಸಿದ್ಧಾಂತ, ನಡೆ, ಬಿತ್ತಿದ ಚಳವಳಿಗಳು ಇನ್ನೂ ಬದುಕಿವೆ ಎಂಬುದು ಆಶಾದಾಯಕ. ಅಂಬೇಡ್ಕರ್ ಸಂವಿಧಾನದ ಒಂದಲ್ಲ ಒಂದು ರೂಪದಲ್ಲಿ ಭಾರತದ ಬಹುತ್ವದ ಚೌಕಟ್ಟನ್ನು ಕಾಪಾಡುತ್ತಿದೆ.

ಸಂವಿಧಾನದ ಮೂರನೇ ಅಂಗವಾದ ನ್ಯಾಯಾಂಗ ಮಾತನಾಡಲೇ ಬೇಕಾದ ವಿಷಯಗಳ ಕುರಿತು ಮಾತಾಡಿದ್ದು , ಸೌಹಾರ್ದತೆ ಹಾಗೂ ಬಹುತ್ವ ಬಯಸುವ ಬಹುಜನ ಸಮುದಾಯಗಳಲ್ಲಿ ಭರವಸೆ ತುಂಬುವಂತಿದೆ‌.

ನಮ್ಮ ಕಾರ್ಯಾಂಗ, ಶಾಸಕಾಂಗ, ದೃಶ್ಯ ಮಾಧ್ಯಮ ಸೇರಿದಂತೆ ಪತ್ರಿಕಾ ರಂಗ ಹಾದಿ ತಪ್ಪಿ ಕವಲು ದಾರಿ ಹಿಡಿದಾಗ, ಸ್ಥಾಪಿತ ಹಿತಾಸಕ್ತಿ ಅತೀ ಅನಿಸಿದಾಗ ನ್ಯಾಯಾಲಯಗಳು, ನ್ಯಾಯಮೂರ್ತಿಗಳು ಸಂಬಂಧಿಸಿದವರತ್ತ ಚಾಟಿ‌ ಬೀಸಿವೆ. ಚಿಂತಕರು ಅಲ್ಲಲ್ಲಿ ಧ್ವನಿ ಎತ್ತಿ ದೇಶದ ಘನತೆ ಕಾಪಾಡಿದ್ದಾರೆ. ಪ್ರಸ್ತುತ ಸನ್ನಿವೇಶದ ಬಗ್ಗೆ ಕಳಕಳ ವ್ಯಕ್ತಪಡಿಸಿ, ಸ್ವಾತಂತ್ರ್ಯ ರಕ್ಷಣೆಯ ಮಹತ್ವವನ್ನು ಪರ್ಯಾಯವಾಗಿ ಸೂಚಿಸಿದ್ದಾರೆ‌.

ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.‌ ಸಂದೇಶ್ ಈಚೆಗೆ ಪ್ರಕರಣವೊಂದರ ವಿಚಾರಣೆಯಲ್ಲಿ ಆಡಿದ ಮಾತುಗಳು ಏಕಕಾಲಕ್ಕೆ ಸರ್ಕಾರ ಮತ್ತು ಜನರನ್ನು ಜಾಗೃತಗೊಳಿಸಿವೆ. ಇನ್ನೇನು ನೈತಿಕತೆ ಸತ್ತೇ ಹೋಯಿತು ಅನ್ನುವಾಗ ಸಮಾಜಕ್ಕೆ ಸಾತ್ವಿಕ ಕೆಚ್ಚಿನ ಆಕ್ಸಿಜನ್ ನೀಡುವಂತಿದೆ ಅವರ ಮಾತು. "ಸಂವಿಧಾನಿಕ ಹುದ್ದೆ ನಿಭಾಯಿಸುವ ನ್ಯಾಯಮೂರ್ತಿಗಳು ಯಾವುದೇ ಪಕ್ಷದ ಸಿದ್ಧಾಂತದ ಪರವಾಗಿ ಇರಬಾರದು. ರಾಜ್ಯ ಸರ್ಕಾರ ಐಎಎಸ್ ಮತ್ತು ಐಪಿಎಸ್ ಲಾಬಿಯ ಅಣತಿಯಂತೆ ನಡೆಯುತ್ತಿದ್ದು ಸರ್ಕಾರವೂ ಅಪರಾಧದ ಭಾಗವಾಗಿದೆ".

"ನನಗೆ ವರ್ಗಾವಣೆಯ ಪರೋಕ್ಷ ಬೆದರಿಕೆ ಹಾಕಲಾಗಿದೆ. ನಾನೀಗ ನ್ಯಾಯಾಂಗದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕಿದೆ. ಜಡ್ಜ್  ಆದ ಮೇಲೆ ನಾನು ಒಂದಿಂಚೂ ಆಸ್ತಿ ಮಾಡಿಲ್ಲ. ವರ್ಗಾವಣೆ ಬೆದರಿಕೆ ಎದುರಿಸುತ್ತೇನೆ. ಜನರ ಒಳಿತಿಗಾಗಿ ವರ್ಗಾವಣೆಯಾಗಲು ಸಿದ್ಧನಿದ್ದೇನೆ. ನನಗೆ 500 ರೂಪಾಯಿಯಲ್ಲಿ ಜೀವನ ಮಾಡಿಯೂ ಗೊತ್ತು. 5000ದಲ್ಲಿ ಜೀವನ ಮಾಡಿಯೂ ಗೊತ್ತು. ಯಾರ ಹೆದರಿಕೆಯೂ ಇಲ್ಲ. ಬೆಕ್ಕಿಗೆ ಗಂಟೆಕಟ್ಟಲು ಸಿದ್ಧನಿದ್ದೇನೆ. ಇವತ್ತು ಭ್ರಷ್ಟಾಚಾರ ಸಮಾಜದಲ್ಲಿ ಕ್ಯಾನ್ಸರ್ ಆಗಿ ಪರಿಣಮಿಸಿದೆ" ಎಂದಿದ್ದಾರೆ‌. ಈ ಮಾತುಗಳು ಸೋತು ಹೋದ ಜನರಲ್ಲಿ ಆತ್ಮವಿಶ್ವಾಸ ತುಂಬುತ್ತವೆ‌.

Image
ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ

ಇನ್ನು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಭಾರತೀಯ ಅಮೆರಿಕನ್ನರ ಒಕ್ಕೂಟ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ "ನ್ಯಾಯಾಂಗವು ಸಂವಿಧಾನಕ್ಕೆ ಮಾತ್ರ ಉತ್ತರದಾಯಿಯಾಗಿದೆಯೇ ವಿನಾ ಯಾವುದೇ ರಾಜಕೀಯ ಪಕ್ಷಗಳ ನಿಲುವು ಅಥವಾ ಸಿದ್ಧಾಂತಗಳಿಗೆ ಅಲ್ಲ"  ಎಂದಿದ್ದಾರೆ.

ನೂಪೂರ್ ಶರ್ಮಾ ಬೆಂಕಿಯುಗುಳುವ ಮಾತಿಗೆ ಬ್ರೇಕ್ ಹಾಕಿದ ಹೈಕೋರ್ಟ್ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಅವರು ಎಚ್.ಆರ್. ಖನ್ನಾ ಸ್ಮಾರಕ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತಾಡುತ್ತಾ, " ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಅನವಶ್ಯಕವಾಗಿ ಮಧ್ಯ ಪ್ರವೇಶಿಸಿ ಮಾಧ್ಯಮಗಳೇ ವಿಚಾರಣೆ ನಡೆಸುವುದನ್ನು ನಿಯಂತ್ರಿಸಲು ಸಂಸತ್ತು ಕಾನೂನುಗಳನ್ನು ಜಾರಿಗೆ ತರಬೇಕು ಎಂದಿದ್ದಾರೆ.

ಈ ನ್ಯಾಯಮೂರ್ತಿಗಳ ಮಾತುಗಳು ಆಶಾದಾಯಕ ಸ್ಥಿತಿ ಸೃಷ್ಟಿಸಿ, ಆಡಳಿತ ಅಧಿಕಾರ ನಡೆಸುವವರನ್ನು ಎಚ್ಚರಿಸಲಿವೆ ಎಂದುಕೊಂಡಾಗಲೇ, ದೇಶದ ಕೆಲ ರಾಜ್ಯಗಳ 15 ನಿವೃತ್ತ ನ್ಯಾಯಮೂರ್ತಿಗಳು, ಕೆಲ ನಿವೃತ್ತ ಅಧಿಕಾರಿಗಳು, ಸುಪ್ರಿಂಕೊರ್ಟ್‌ ನ್ಯಾಯಮೂರ್ತಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ ವಿರುದ್ಧ ಲಕ್ಷ್ಮಣ ರೇಖೆ ದಾಟಿದ್ದಾರೆಂದು ನವದೆಹಲಿಯಲ್ಲಿ ಹೇಳಿಕೆ ಬಿಡುಗಡೆ ಮಾಡಿರುವುದು ವಿಪರ್ಯಾಸ.

ಇದನ್ನು ಓದಿದ್ದೀರಾ? ನ್ಯಾಯಾಧೀಶರಿಗೆ ವರ್ಗಾವಣೆ ಬೆದರಿಕೆ: ತನಿಖಾ ಸಮಿತಿ ರಚಿಸಲು ಸಿಜೆಐಗೆ ವಕೀಲರ ಸಂಘದ ಮನವಿ

ನಿವೃತ್ತರಾದ ನ್ಯಾಯಮೂರ್ತಿಗಳ ಪತ್ರದ ಆಶಯ ಗಮನಿಸಿದರೆ "ಪುರೋಹಿತಶಾಹಿ ಹೆಣ್ಣಿಗೆ ಹಾಕಿದ ಲಕ್ಷ್ಮಣ ರೇಖೆಯನ್ನು ಉಲ್ಲೇಖಿಸಿದಂತೆ ಕಾಣುತ್ತಿದೆ " ಅದು ರಾಜಪ್ರಭುತ್ವದ ಕಾಲದ ಲಕ್ಷ್ಮಣ ರೇಖೆ. ಅಂಬೇಡ್ಕರ ಸಂವಿಧಾನದ ಮಾನವೀಯ ರೇಖೆಯಲ್ಲ. ಲಕ್ಷ್ಮಣ ರೇಖೆ ಪ್ರಸ್ತಾಪ ಮಾಡಿದವರು ವ್ಯವಸ್ಥೆಯ ಗುಲಾಮಗಿರಿ ಮೀರಿ ಕೆಲಸ ಮಾಡಿರಲಿಲ್ಲ ಎಂಬುದು ತಮಗೆ ತಾವೇ ಜಾಹೀರು ಮಾಡಿಕೊಂಡಂತಾಗಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್