ಕ್ಷಮಾಪಣೆ ಬಯಸದ ಕ್ರಾಂತಿಕಾರಿಗಳು ಭಾಗ 6 | ಸಾವರ್ಕರ್‌ ಸಹವರ್ತಿ ತ್ರೈಲೋಕ್ಯನಾಥ್ ಚಕ್ರವರ್ತಿ

Thrilokanath

ದೇಶ ವಿಭಜನೆಯ ಬಳಿಕ ಅಂದಿನ ಪೂರ್ವ ಪಾಕಿಸ್ತಾನದಲ್ಲಿ ‌(ಇಂದಿನ ಬಾಂಗ್ಲಾ) ನೆಲೆಸಿದ ಚಕ್ರವರ್ತಿ ಪಾಕಿಸ್ತಾನ್ ಸೋಷಿಯಲಿಸ್ಟ್‌ ಪಕ್ಷ ಸ್ಥಾಪಿಸಿದರು. ಪಾಕಿಸ್ತಾನದ ಅಸೆಂಬ್ಲಿ ಸದಸ್ಯರೂ ಆಗಿದ್ದರು. 1958ರಲ್ಲಿ ಸೇನಾಡಳಿತ ಅವರ ಎಲ್ಲಾ ಚಟುವಟಿಕೆಗಳಿಗೆ ನಿಷೇಧ ಹೇರಿತು. ಅನಾರೋಗ್ಯದ ಕಾರಣ ಅವರು ತಮ್ಮ ಕೊನೆಯ ದಿನಗಳನ್ನು ಹುಟ್ಟೂರಿನಲ್ಲಿ ಕಳೆದರು

ಅಂ‌ಡಮಾನಿನ ಜೈಲಿನ ಶಿಕ್ಷೆ ಸಹಿತ ತ್ರೈಲೋಕ್ಯನಾಥ್ ಚಕ್ರವರ್ತಿ 30 ವರ್ಷ ಜೈಲಿನಲ್ಲಿದ್ದರು. ಸಾವರ್ಕರ್‌  ಅವರ ಸಹಕೈದಿಗಳಾಗಿದ್ದ ಚಕ್ರವರ್ತಿ ಕ್ಷಮೆ ಕೋರಿ ಪತ್ರ ಬರೆಯಲಿಲ್ಲ; ಅಷ್ಟೇ ಅಲ್ಲ ಬಿಡುಗಡೆಯಾದ ಅನತಿ ಕಾಲದಲ್ಲಿ ಮತ್ತೆ ಹೋರಾಟಕ್ಕೆ ಧುಮುಕಿದ್ದರು! ಎಲ್ಲಿಯ ಸಾವರ್ಕರ್?‌ ಎಲ್ಲಿಯ ಚಕ್ರವರ್ತಿ ?

ತ್ರೈಲೋಕ್ಯನಾಥ್‌ ಚಕ್ರವರ್ತಿ ಆಗಸ್ಟ್‌ 2, 1889ರಂದು ಜನಿಸಿದರು. ಚಕ್ರವರ್ತಿಯವರು ಕ್ರಾಂತಿಕಾರಿ ಸಂಘಟನೆಯಾಗಿದ್ದ ಅನುಶೀಲನ್‌ ಸಮಿತಿಗೆ 1906ರಲ್ಲಿ ಸೇರ್ಪಡೆಯಾದರು. 1908ರಲ್ಲಿ ಬಂಧನಕ್ಕೊಳಗಾದ ಅವರು ಮತ್ತೆ 1912ರಲ್ಲಿ ಕೊಲೆ ಮೊಕದ್ದಮೆಯಲ್ಲಿ ಬಂಧನಕ್ಕೊಳಗಾದರು. 1914ರಲ್ಲಿ  ಬಾರಿಸಾಲ್‌ ಬಂಡಾಯ ಪ್ರಕರಣದಲ್ಲಿ ಬಂಧನಕ್ಕೊಳಗಾದ ಚಕ್ರವರ್ತಿಯವರನ್ನು ಸೀದಾ ಅಂಡಮಾನ ಜೈಲಿಗೆ ಕಳಿಸಲಾಯಿತು. ಸಾವರ್ಕರ್‌ ಸಹೋದರರು ಆಗ ಚಕ್ರವರ್ತಿಯವರೊಂದಿಗೇ ಜೈಲು ಶಿಕ್ಷೆ ಅನುಭವಿಸುತ್ತಿದ್ದರು.

ಅಂಡಮಾನಿನ ಜೈಲು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಲು ಕೈದಿಗಳು ನಿರ್ಧರಿಸಿದಾಗ ಚಕ್ರವರ್ತಿ ಈ ಹೋರಾಟದಲ್ಲಿ ಭಾಗಿಯಾದರು. ಈ ಬಗ್ಗೆ ತಮ್ಮ ಆತ್ಮ ಚರಿತ್ರೆಯಲ್ಲಿ ಹೀಗೆ ಬರೆಯುತ್ತಾರೆ.

“ಅಂಡಮಾನಿನ ಜೈಲು ಖೈದಿಗಳಲ್ಲಿ ಮಂದಗಾಮಿ ಮತ್ತು ತೀವ್ರಗಾಮಿ ಎಂದು ಎರಡು ಗುಂಪುಗಳಿದ್ದವು. ಮಂದಗಾಮಿ ಗುಂಪಿನಲ್ಲಿ ಸಾವರ್ಕರ್‌ ಸಹೋದರರು ಮತ್ತು ಪುಲಿನ್‌ ಬಾಬು ಇದ್ದರು. ಅವರಿಗೆ ಜೈಲಿನಲ್ಲಿ ಒಂದಷ್ಟು ಸೌಲಭ್ಯಗಳು ದೊರಕಿದ್ದವು. ಅವರು ಜೈಲರ್‌ ಮತ್ತು ಸೂಪರಿಂಟೆಂಡೆಂಟ್‌ ಅವರಿಗೆ ಹತ್ತಿರವಾಗಿದ್ದರು. ತಮಗೆ ದಕ್ಕಿರುವ ಸವಲತ್ತು ಕಳೆದುಕೊಳ್ಳಲೂ ಅವರಿಗೆ ಮನಸ್ಸಿರಲಿಲ್ಲ"

1922ರಲ್ಲಿ ಬಿಡುಗಡೆಯಾಗಿದ್ದೇ ಮತ್ತೆ ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸಿದ ಆರೋಪದ ಮೇಲೆ 1924ರಲ್ಲಿ ಬಂಧಿತರಾಗಿ ಮಾಂಡಲೇ ಜೈಲು ಸೇರಿದರು. ಅಲ್ಲಿ ಅವರಿಗೆ ನೇತಾಜಿ ಅವರ ಪರಿಚಯವಾಯಿತು. 1928ರಲ್ಲಿ ಬಿಡುಗಡೆಯಾಗಿದ್ದೇ ಮತ್ತೆ ಅವರು ಹಿಂದುಸ್ತಾನ್‌ ರಿಪಬ್ಲಿಕನ್‌ ಆರ್ಮಿಯನ್ನು ಸೇರಿದರು. ಮತ್ತೆ 1930ರಲ್ಲಿ ಜೈಲು ಸೇರಿದ ಅವರು 1938ರಲ್ಲಿ ಬಿಡುಗಡೆ ಹೊಂದಿದರು. ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಹೋರಾಟ ಮಾಡಿದ್ದಕ್ಕಾಗಿ ಮತ್ತೆ ಬಂಧಿತರಾದ ಚಕ್ರವರ್ತಿ 1926ರಲ್ಲಿ ಬಿಡುಗಡೆ ಹೊಂದಿದರು. ಆ ಬಳಿಕ ಅವರು ನೌಖಾಲಿಯಲ್ಲಿ ಪುನರ್ವಸತಿ ಕಾರ್ಯದಲ್ಲಿ ತೊಡಗಿದರು.

ದೇಶ ವಿಭಜನೆಯ ಬಳಿಕ ಅಂದಿನ ಪೂರ್ವ ಪಾಕಿಸ್ತಾನದಲ್ಲಿ ‌(ಇಂದಿನ ಬಾಂಗ್ಲಾ ದೇಶ) ನೆಲೆಸಿದ ಚಕ್ರವರ್ತಿ ಪಾಕಿಸ್ತಾನ್ ಸೋಷಿಯಲಿಸ್ಟ್‌ ಪಕ್ಷ ಸ್ಥಾಪಿಸಿದರು. ಪಾಕಿಸ್ತಾನದ ಅಸೆಂಬ್ಲಿ ಸದಸ್ಯರಾಗಿಯೂ ಆಯಕೆಯಾದರು. 1958ರಲ್ಲಿ ಸೇನಾಡಳಿತ ಅವರ ಎಲ್ಲಾ ಚಟುವಟಿಕೆಗಳಿಗೆ ನಿಷೇಧ ಹೇರಿತು. ಅನಾರೋಗ್ಯ ಬಾಧಿಸುತ್ತಿದ್ದ ಕಾರಣ ಅವರು ತಮ್ಮ ಕೊನೆಯ ವರುಷಗಳನ್ನು ತಮ್ಮ ಹುಟ್ಟೂರಿನಲ್ಲಿ ಕಳೆದರು. ಹೃದಯ ಸಂಬಂಧಿ ಕಾಯಿಲೆಯಿಂದ ನರಳುತ್ತಿದ್ದ ಅವರನ್ನು ಹೆಚ್ಚಿನ ವೈದ್ಯಕೀಯ ಶುಶ್ರೂಷೆಗಾಗಿ 1970ರಲ್ಲಿ ದೆಹಲಿಗೆ ಕರೆತರಲಾಯಿತು. ಅವರು ತಮ್ಮ ಹಿಂದಿನ ಕ್ರಾಂತಿಕಾರಿ ಸಹಯೋಗಿ ಸುರೇಂದ್ರ ಮೋಹನ್‌ ಘೋಷ್‌ ಅವರ ನಿವಾಸದಲ್ಲಿ  ಆಗಸ್ಟ್‌ 9, 1970ರಂದು ಕೊನೆ ಉಸಿರೆಳೆದರು. ಪ್ರಧಾನಿ ಇಂದಿರಾ ಗಾಂಧಿ ಸಹಿತ ದೇಶವೇ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿತು.

ಇದನ್ನು ಓದಿದ್ದೀರಾ? ಕ್ಷಮಾಪಣೆ ಬಯಸದ ಕ್ರಾಂತಿಕಾರಿಗಳು ಭಾಗ 5 | ಅರವತ್ತನೇ ವಯಸ್ಸಿನಲ್ಲಿ ಚಳವಳಿಗೆ ದುಮುಕಿದ ಮಾತಾಂಗಿನಿ ಹಜ್ರಾ

ತ್ರೈಲೋಕ್ಯನಾಥ ಚಕ್ರವರ್ತಿ ಮತ್ತು ಸಾವರ್ಕರ್‌ ಒಂದೇ ಸಮಯದಲ್ಲಿ ಅಂಡಮಾನ್‌ ಜೈಲಿನಲ್ಲಿದ್ದರು. ಗಣೇಶ್‌ ಸಾವರ್ಕರ್‌ ಅವರಿಗೆ ಬೆಂಗಾಲಿ ಕಲಿಸಿ ಅವರಿಂದ ತಾನು ಮರಾಠಿ ಕಲಿತಿದ್ದರು. ಗಣೇಶ್‌ ಸಾವರ್ಕರ್‌ ಅವರನ್ನು  ಗಣೇಶ್‌ ದಾ (ಅಣ್ಣ) ಎಂದು ಚಕ್ರವರ್ತಿ ಕರೆಯುತ್ತಿದ್ದರು. ಆದರೆ ಚಕ್ರವರ್ತಿ ಕ್ಷಮೆ ಕೋರಿ ಪತ್ರ ಬರೆಯಲಿಲ್ಲ. ಅಷ್ಟೇಕೆ ಪ್ರತೀ ಬಾರಿ ಬಿಡುಗಡೆಯಾದಾಗಲೂ ಮತ್ತೆ ಮತ್ತೆ ಸ್ವಾತಂತ್ರ್ಯ ಚಳವಳಿಗೆ ಧುಮುಕುತ್ತಿದ್ದರು.

ಎರಡನೇ ಮಹಾಯುದ್ಧದ ವೇಳೆಗೆ ದೊಡ್ಡ ಸಶಸ್ತ್ರ ಹೋರಾಟ ನಡೆಸಲು ನೇತಾಜಿಗೆ ಸಹಾಯ ಮಾಡುವ ಉದ್ದೇಶದಿಂದ ಚಕ್ರವರ್ತಿಯವರು ಹೆಡಗೇವಾರ್‌ ಮತ್ತು ಸಾವರ್ಕರ್‌ ಅವರನ್ನು ಸಂಪರ್ಕಿಸಿದ್ದರು. ಇಬ್ಬರಿಂದಲೂ ಉಚಾವಣೆಯ ಉತ್ತರ ಬಂದ ಕಾರಣ ನಿರಾಸೆಗೊಳಗಾಗಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್