ಭಾರತವನ್ನು ಉಳಿಸುವುದೆಂದರೆ ಧರ್ಮ ನಿರಪೇಕ್ಷತೆಯನ್ನು ಸುಸ್ಥಿರಗೊಳಿಸಿ, ಏಕತೆ, ಸಮಗ್ರತೆಯನ್ನು ಎತ್ತಿ ಹಿಡಿಯುವುದು

ಧರ್ಮ ನಿರಪೇಕ್ಷತೆ

ಭಾರತದಲ್ಲಿ ಸಂಘಪರಿವಾರಿಗಳು ನಡೆಸುತ್ತಿರುವ ಯೋಜಿತ ಪ್ರಚಾರ ಮತ್ತು ದಮನಿತ ವರ್ಗಗಳ ಮೇಲಿನ ದೌರ್ಜನ್ಯಗಳು ಅಲ್ಪಸಂಖ್ಯಾತರು, ದಲಿತ ಮತ್ತು ಹಿಂದುಳಿದವರ ಹಕ್ಕುಗಳನ್ನು ಕಸಿಯುತ್ತಿರುವುದರ ಬಗ್ಗೆ ಗಂಭೀರ ಚರ್ಚೆಗಳಾಗುತ್ತಿಲ್ಲ. ಮಾಧ್ಯಮಗಳು ಇಂತಹ ಘಟನೆಗಳನ್ನು ವೈಭವೀಕರಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ

ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಬಹುತ್ವ ಮತ್ತು ಧರ್ಮನಿರಪೇಕ್ಷತೆಗಳನ್ನು ಬೌದ್ಧ ಭಿಕ್ಕುಗಳು, ಸೂಫಿಸಂತರು, ದಾಸ ಶ್ರೇಷ್ಟರು, ಸಮಾಜ ಸುಧಾರಕರು, ಮುತ್ಸದ್ದಿಗಳಾದಿಯಾಗಿ ಎಲ್ಲರೂ ರಕ್ಷಿಸುವ ಕಾಯಕದಲ್ಲಿ ಪ್ರಜ್ಞಾಪೂರ್ವಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಭಾರತವು ಧರ್ಮ ನಿರಪೇಕ್ಷತೆಯನ್ನು ಪ್ರಜ್ಞಾಪೂರ್ವಕವಾಗಿ ಪ್ರಮುಖ ಸಾಂವಿಧಾನಿಕ ಮೌಲ್ಯ ಹಾಗೂ ಜೀವನ ವಿಧಾನವನ್ನಾಗಿ ಹೊಂದಿದೆ. ಧಾರ್ಮಿಕ ಮೂಲಭೂತವಾದ ಭಾರತದ ಮಣ್ಣಿಗೆ ಒಗ್ಗುವುದಿಲ್ಲವೆಂಬ ಚಾರಿತ್ರಿಕ ಸತ್ಯವನ್ನು ರಾಷ್ಟ್ರನಾಯಕರು ಸ್ವಾತಂತ್ರ್ಯಾನಂತರದಲ್ಲಿ ಸ್ಪಷ್ಟವಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಧರ್ಮ ನಿರಪೇಕ್ಷತೆಯೆಂದರೆ ಯಾವುದೇ ಧರ್ಮವಿರೋಧಿಯಲ್ಲ. ಭಾರತವು ಹಿಂದುತ್ವ ರಾಷ್ಟ್ರವಾಗಿರದೇ ಬಹುತ್ವ ಮತ್ತು ಧರ್ಮನಿರಪೇಕ್ಷತೆಗಳನ್ನು ಸ್ವಾತಂತ್ರ್ಯಾನಂತರದಲ್ಲಿ ಅಳವಡಿಸಿಕೊಂಡಿದೆ. ದೇಶದ ಏಕತೆ, ಸಮಗ್ರತೆ ಮತ್ತು ಪ್ರಗತಿಗಳಿಗೆ ಅಡ್ಡಿಯುಂಟು ಮಾಡುವ ಧಾರ್ಮಿಕ ನಂಬಿಕೆಗಳು ಮತ್ತು ಆಚಾರಗಳನ್ನು ಭಾರತೀಯ ಸಂವಿಧಾನ ನಿಷೇಧಿಸಿದೆ.

Eedina App

ಭಾರತದ ಏಕತೆ ಮತ್ತು ಸಮಗ್ರತೆಗಳನ್ನು ಸುಸ್ಥಿರಗೊಳಿಸುವ ಸಲುವಾಗಿ ಭಾರತೀಯ ಸಂವಿಧಾನದಲ್ಲಿ ಧರ್ಮನಿರಪೇಕ್ಷತೆಯನ್ನು ಪ್ರಮುಖ ಮೌಲ್ಯವನ್ನಾಗಿ ಅಳವಡಿಸಲಾಗಿದೆ. ಅನುಚ್ಛೇದ 15 ಪ್ರಜೆಗಳನ್ನು ಧರ್ಮ, ಜನಾಂಗ, ಜಾತಿ, ಲಿಂಗ, ಹುಟ್ಟಿನ ಸ್ಥಳ ಮೊದಲಾದ ಕಾರಣಗಳಿಗಾಗಿ ತಾರತಮ್ಯಕ್ಕೆ ಒಳಪಡಿಸಬಾರದೆಂದು ತಿಳಿಸುತ್ತದೆ. ಅನುಚ್ಛೇದ 25 ಪ್ರಜೆಗಳಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡುತ್ತದೆ. ಧರ್ಮನಿರಪೇಕ್ಷತೆ ಎಲ್ಲರನ್ನು ಸೌಹಾರ್ದತೆ ನೆಲೆಗಟ್ಟಿನಲ್ಲಿ ಒಗ್ಗೂಡಿಸುವ ಸಾಮರ್ಥ್ಯ ಹೊಂದಿದೆ. ಭಾರತದಲ್ಲಿ ಸಾರ್ವಜನಿಕ ಬದುಕಿನಿಂದ ಧರ್ಮವನ್ನು ಪ್ರತ್ಯೇಕಿಸಬೇಕೆಂದು ಸಂವಿಧಾನ ಶಿಲ್ಪಿಗಳು ಪ್ರತಿಪಾದಿಸಿದ್ದರು.

‘ಸ್ವರಾಜ್ಯ ನನ್ನ ಆಜನ್ಮ ಸಿದ್ಧಹಕ್ಕು, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂಬ ಸಿಂಹಘರ್ಜನೆಯಿಂದ ದೇಶಾದ್ಯಂತ ಜನಮನ್ನಣೆ ಗಳಿಸಿದ್ದ ತಿಲಕರು ಉಗ್ರ ಹಿಂದುತ್ವವಾದಿಯಾಗಿದ್ದರು. ಅವರಿಗೆ ಭಾರತವು ಸ್ವತಂತ್ರ ರಾಷ್ಟ್ರವಾಗಿ ರೂಪುಗೊಳ್ಳಬೇಕೆಂಬ ಮಹೋನ್ನತ ಆಶಯವಿದ್ದರೂ ಸಹ ಧರ್ಮ ನಿರಪೇಕ್ಷತೆಯನ್ನು ಸುಸ್ಥಿರಗೊಳಿಸುವಲ್ಲಿ ಕನಿಷ್ಟಬದ್ಧತೆಯೂ ಇರಲಿಲ್ಲ. ಹಿಂದುತ್ವವಾದದ ಪ್ರಧಾನ ಪ್ರವರ್ತಕರಾದ ಹೆಡಗೆವಾರ್, ಸಾವರ್ಕರ್, ಗೋಲ್ವಾಲ್ಕರ್ ಮೊದಲಾದ ಯಹೂದಿ ಮೂಲದ ನಾಯಕರು ಬಹುತ್ವ ಮತ್ತು ಧರ್ಮನಿರಪೇಕ್ಷತೆ ಆಶಯಗಳನ್ನು ಅನುಷ್ಟಾನಗೊಳಿಸಲು ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು.

AV Eye Hospital ad
ಧರ್ಮನಿರಪೇಕ್ಷತೆ

ಸಾಂವಿಧಾನಿಕ ಧರ್ಮನಿರಪೇಕ್ಷತೆ ಹಿಂದುತ್ವ ಕೇಂದ್ರಿತ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪ್ರಜಾಸತ್ತೆಗಳನ್ನು ಅನುಮೋದಿಸುವುದಿಲ್ಲ. ಎಲ್ಲ ಧರ್ಮಗಳೂ ಸಂವಿಧಾನದ ದೃಷ್ಟಿಯಲ್ಲಿ ಸಮಾನ. ಬಹುತ್ವ ಕೇಂದ್ರಿತ ಸಮಾಜೋ-ರಾಜಕೀಯ ವ್ಯವಸ್ಥೆ ಬಲಗೊಳ್ಳುವುದರಿಂದ ವರ್ಗ ಪ್ರಭುತ್ವ ಮತ್ತು ಜಾತಿಪ್ರಭುತ್ವಗಳಿಂದ ಭಾರತದ ಬಹುಜನರನ್ನು ಅಸಮಾನತೆಯಿಂದ ಸಮಾನತೆಯೆಡೆಗೆ ಮುನ್ನಡೆಸಬಹುದೆಂಬ ಅಂಬೇಡ್ಕರ್, ಪೆರಿಯಾರ್, ಲೋಹಿಯಾ, ನಾರಾಯಣಗುರು ಮೊದಲಾದವರು ಪ್ರತಿಪಾದಿಸಿದರು.

ಕಳೆದ 25 ವರ್ಷಗಳ ಹಿಂದೆ ಅಡ್ವಾಣಿ ನೇತೃತ್ವದಲ್ಲಿ ಜರುಗಿದ ರಥಯಾತ್ರೆ ಇಂದಿನ ಹಿಂದುತ್ವವಾದಿಗಳ ವಿಜಯದಶಮಿಗೆ ಮುನ್ನುಡಿ ಬರೆದಿತ್ತು. ತದನಂತರದ ಸಾಮಾಜಿಕ ಹಾಗೂ ರಾಜಕೀಯ ವಿದ್ಯಮಾನಗಳು ಹಿಂದುತ್ವವಾದಿಗಳು ಬಿಜೆಪಿ ಮತ್ತು ಸಂಘ ಪರಿವಾರಿಗಳ ನೇತೃತ್ವದಲ್ಲಿ 2014ರಲ್ಲಿ ದೇಶದ ಅಧಿಕಾರ ಗದ್ದುಗೆ ಹಿಡಿಯಲು ಸಹಕರಿಸಿದವು. ಹಿಂದುತ್ವವೆಂದರೆ ಪ್ರಾಯೋಗಿಕವಾಗಿ ವೈದಿಕಶಾಹಿಯ ರಕ್ಷಣೆಯೇ ಆಗಿದೆ. ಭಾರತದಲ್ಲಿ 2014ರಿಂದಲೂ ಕೋಮು ದ್ರುವೀಕರಣದಿಂದಾಗಿ ಪ್ರಜಾಸತ್ತೆ, ಸಂವಿಧಾನ, ಬಹುತ್ವ ಮತ್ತು ಧರ್ಮನಿರಪೇಕ್ಷತೆಗಳೆಂಬ ಜೀವಪರ ಮೌಲ್ಯಗಳು ಕುಸಿಯತೊಡಗಿವೆ. ವಿಶೇಷವಾಗಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಕರ್ನಾಟಕ ಮೊದಲಾದೆಡೆ ಧಾರ್ಮಿಕ ಅಲ್ಪಸಂಖ್ಯಾತರು ಹಿಂದುತ್ವವಾದ ಮತ್ತು ಬುಲ್ಡೋಜರ್ ಸಂಸ್ಕೃತಿಯ ಬಲಿಪಶುಗಳಾಗಿದ್ದಾರೆ. ಈ ರಾಜ್ಯಗಳಲ್ಲಿ ದಲಿತರು, ಆದಿವಾಸಿಗಳು ಮತ್ತು ಹಿಂದುಳಿದವರು ಸಾಂವಿಧಾನಿಕ ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ.  

ಭಾಗವತ್‌ ಹೇಳಿಕೆ ಸತ್ಯಕ್ಕೆ ದೂರ: ಕೇಂದ್ರ ಸರ್ಕಾರ ಸಿಎಎ ಜಾರಿಗೊಳಿಸಲು ನಡೆಸಿರುವ ಪ್ರಯತ್ನ ಧರ್ಮನಿರಪೇಕ್ಷತೆಗೆ ಧಕ್ಕೆಯುಂಟುಮಾಡಿದೆ. ಧರ್ಮನಿರಪೇಕ್ಷತೆಯನ್ನು ಒಂದು ಜೀವನ ವಿಧಾನವನ್ನಾಗಿ ಅಳವಡಿಸಿಕೊಂಡಿರುವ ಭಾರತದಲ್ಲಿ ಸಂಪೂರ್ಣ ಜನಾಂಗೀಯವಾಗಿರುವ ಈ ಮಸೂದೆಯು ಧರ್ಮನಿರಪೇಕ್ಷತೆಯನ್ನು ದುರ್ಬಲಗೊಳಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಆರ್‌ಎಸ್‍ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಧರ್ಮ ಆಧರಿತ ಜನಸಂಖ್ಯೆಯ ಅಸಮತೋಲನದ ಬಗ್ಗೆ ಮಾತನಾಡಿ ಹಿಂದೂಗಳ ಜನಸಂಖ್ಯಾ ಬೆಳವಣಿಗೆ ದರ ಮತ್ತು ಮುಸ್ಲಿಮರ ಜನಸಂಖ್ಯಾ ಬೆಳವಣಿಗೆ ದರಗಳ ನಡುವೆ ಅಸಮತೋಲನವಿರುವುದಾಗಿ ಪ್ರತಿಪಾದಿಸಿರುವುದು ಸತ್ಯಕ್ಕೆ ದೂರವಾಗಿದೆ. ಇವರೇನು ಪ್ರಬುದ್ಧ ಅರ್ಥಶಾಸ್ತ್ರಜ್ಞ ಅಥವಾ ಜನಸಂಖ್ಯಾ ಶಾಸ್ತ್ರಜ್ಞರೇ?

ಮೋಹನ ಭಾಗವತ್‌
ಆರೆಸ್ಸೆಸ್‌ ಮುಖ್ಯಸ್ಥ ಮೋಹನ ಭಾಗವತ್‌

ವಾಸ್ತವವಾಗಿ ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆಯ ಏರಿಕೆಯ ಪ್ರಮಾಣ ಹಿಂದೂಗಳ ಜನಸಂಖ್ಯೆ ಏರಿಕೆ ಪ್ರಮಾಣಕ್ಕಿಂತ ಗಣನೀಯವಾಗಿ ಕಡಿಮೆಯಾಗುತ್ತಿದೆಯೆಂಬ ಸತ್ಯ ಭಾಗವತ್‍ರಿಗೆ ಗೊತ್ತಿದ್ದರೂ ಈ ರೀತಿಯ ಅಪಪ್ರಚಾರದಲ್ಲಿ ಸಂಘ ಪರಿವಾರಿಗಳು ನಿರತರಾಗಿರುವುದು ಗೌಪ್ಯ ರಾಜಕೀಯ ಕಾರ್ಯಸೂಚಿಗೆ ಸಾಕ್ಷಿ ಒದಗಿಸುತ್ತದೆ. ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ ಹಾಕುವಂತೆ ಬಿಜೆಪಿ ಸಂಸದ ಪರ್ವೇಶ್ ವರ್ಮಾ ದೆಹಲಿಯಲ್ಲಿ ಹಿಂದುತ್ವವಾದಿಗಳಿಗೆ ನೀಡಿರುವ ಕರೆಯನ್ನು ಪೊಲೀಸರಾಗಲಿ ಅಥವಾ ನ್ಯಾಯಾಂಗದ ಅಧಿಕಾರಿಗಳಾಗಲಿ ಪ್ರಶ್ನಿಸದಿರುವುದು ತರವಲ್ಲ.

2014ರ ಚುನಾವಣೆಯ ನಂತರ ಬಿಜೆಪಿಯ ಹಿಂದುತ್ವ ರಾಜಕಾರಣ ಪ್ರಾಬಲ್ಯವು ದೇಶದ ಜಾತ್ಯಾತೀತ ಸಂಪ್ರದಾಯದ ಭವಿಷ್ಯದ ಕಾರ್ಯಸಾಧ್ಯತೆ ಮತ್ತು ವೈವಿಧ್ಯತೆಗೆ ಅಪಾಯವುಂಟು ಮಾಡಿರುವುದಕ್ಕೆ ಹಲವಾರು ದೃಷ್ಟಾಂತಗಳಿವೆ. ಕರ್ನಾಟಕದಲ್ಲಿ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ 24 ಪ್ರಕರಣಗಳನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದು ರಾಜ್ಯಾಧಿಕಾರದ ದುರುಪಯೋಗಕ್ಕೆ ಸಾಕ್ಷಿಯಾಗಿದೆ. ದ್ವೇಷ ಹರಡುವವರ ಬೆಂಬಲಕ್ಕೆ ನಿಂತಿರುವ ಕರ್ನಾಟಕ ರಾಜ್ಯ ಸರ್ಕಾರ ಆಳುವ ನೈತಿಕ ಹಕ್ಕನ್ನು ಕಳೆದುಕೊಂಡಿದೆ. ಹೆಚ್ಚುತ್ತಿರುವ ಉದ್ಯೋಗ ನಷ್ಟ ಮತ್ತು ಬೆಲೆಗಳಿಂದಾಗಿ ಬಡವರು ಮತ್ತು ಮಧ್ಯಮ ವರ್ಗದವರ ಬದುಕು ಅಸಹನೀಯವಾಗುತ್ತಿದೆ. ಶ್ರೀಮಂತರನ್ನು ರಕ್ಷಿಸಲೆಂದೇ ಅಧಿಕಾರಕ್ಕೆ ಬಂದಿರುವ ಮೋದಿ ಸರ್ಕಾರಕ್ಕೆ ಇವುಗಳು ಸವಾಲುಗಳಾಗಿ ಕಾಣುತ್ತಿಲ್ಲದಿರುವುದು ಪ್ರಜೆಗಳ ದೌರ್ಭಾಗ್ಯವಾಗಿದೆ.

ಭಾರತೀಯ ಪ್ರಜಾಸತ್ತೆಯನ್ನು ಕೊಂದಂತೆ: ಭಾರತದಲ್ಲಿ ಸಂಘಪರಿವಾರಿಗಳು ನಡೆಸುತ್ತಿರುವ ಯೋಜಿತ ಪ್ರಚಾರ ಮತ್ತು ದಮನಿತ ವರ್ಗಗಳ ಮೇಲಿನ ದೌರ್ಜನ್ಯಗಳು ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು ಮತ್ತು ಹಿಂದುಳಿದವರ ಮೂಲಭೂತ ಹಕ್ಕುಗಳನ್ನು ಕಸಿಯುತ್ತಿರುವುದರ ಬಗ್ಗೆ ಶಾಸಕಾಂಗದಲ್ಲಿ ಗಂಭೀರ ಚರ್ಚೆಗಳಾಗುತ್ತಿಲ್ಲ. ಮಾಧ್ಯಮಗಳು ಇಂತಹ ಘಟನೆಗಳನ್ನು ಟಿಆರ್‌ಪಿಗಾಗಿ ವೈಭವೀಕರಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. “ಮೋದಿಯವರ ಆಡಳಿತದಿಂದ ಜಗತ್ತಿನ ದೇಶಗಳು ಭಾರತವನ್ನು ಅನುಸರಿಸುವಂತಾಗಿದೆ” ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್‍ ಅವರ ಮಾತುಗಳು ಅವಿವೇಕದ ಪರಮಾವಧಿಯನ್ನು ಸೂಚಿಸುತ್ತವೆ.

ಆರೆಸ್ಸೆಸ್‌ನ ಯಶವಂತ ಶಿಂಧೆ
ಆರೆಸ್ಸೆಸ್‌ನ ಯಶವಂತ ಶಿಂಧೆ

ಈ ದೇಶದಲ್ಲಿ ದ್ವೇಷ ರಾಜಕಾರಣ ನಡೆಸಿ ಧರ್ಮ ನಿರಪೇಕ್ಷತೆಯನ್ನು ಕೊಲ್ಲುತ್ತಿರುವ ಮನುವಾದಿಗಳ ಮೋಸ ಹಲವಾರು ಪ್ರಕರಣಗಳಲ್ಲಿ ಬಯಲಾಗಿದೆ. ಸಂಘ ಪರಿವಾರಿಗಳು ದೇಶದ ಎಲ್ಲೆಡೆ ನಡೆಸಿದ ಸ್ಫೋಟಗಳನ್ನು ಕುರಿತಂತೆ ತಾನು ನೇರವಾಗಿ ಭಾಗಿಯಾಗಿರುವುದಾಗಿ ಯಶವಂತ ಶಿಂಧೆ ನ್ಯಾಯಾಲಯದಲ್ಲಿ ಅಫಿಡೆವಿಟ್ ಸಲ್ಲಿಸಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ. ಬಾಂಬ್ ಸ್ಫೋಟಗಳಿಗೆ ಅನುವು ಮಾಡಿಕೊಟ್ಟ ಆರ್‌ಎಸ್‍ಎಸ್ ಶಿಬಿರಗಳ ವಿವರಗಳು ಅಫಿಡೆವಿಟ್‍ನಲ್ಲಿ ಇವೆ. ಧರ್ಮನಿರಪೇಕ್ಷತೆಯನ್ನು ಕೊಂದರೆ ಭಾರತೀಯ ಪ್ರಜಾಸತ್ತೆಯನ್ನು ಕೊಂದಂತೆ ಎಂಬ ಸತ್ಯ ನಮ್ಮನ್ನು ಆಳುವವರಿಗೆ ಮನವರಿಕೆಯಾಗಿಲ್ಲ.

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಬಿಜೆಪಿ ಹಿಂದುತ್ವ ಕೇಂದ್ರಿತ ಸ್ನೇಹಯಾತ್ರೆ ನಡೆಸುತ್ತಿರುವುದು ನಿಜಕ್ಕೂ ರಾಜಕೀಯ ಗಿಮಿಕ್ ಆಗಿದೆ. ಹಿಂದುಳಿದ ಸಮುದಾಯಕ್ಕೆ ಸೇರಿದ ಯಾದವಯೇತರ ಜಾತಿಗಳು, ಜಾಟವಯೇತರ ದಲಿತರು ಮತ್ತು ಹಿಂದುಳಿದ ಮುಸ್ಲಿಮರನ್ನು ದಾರಿತಪ್ಪಿಸಿ ರಾಜ್ಯಾಧಿಕಾರವನ್ನು ಉಳಿಸಿಕೊಳ್ಳುವ ಬಿಜೆಪಿಯ ತಂತ್ರಗಾರಿಕೆ ಹಿಂದೆ ಆರ್‌ಎಸ್‍ಎಸ್ ಮತ್ತು ಸಂಘ ಪರಿವಾರಿಗಳ ಗುಪ್ತ ಕಾರ್ಯಸೂಚಿಯಿದೆ. ಇವೆಲ್ಲವೂ ಧರ್ಮ ನಿರಪೇಕ್ಷತೆಯನ್ನು ಮಣ್ಣುಪಾಲು ಮಾಡಿ ಹಿಂದುತ್ವವೇ ಭಾರತದ ಸಂಸ್ಕೃತಿಯೆಂದು ಬಿಂಬಿಸುವ ಸಂಚುಗಾರಿಕೆಯಾಗಿದೆ.

ಇದನ್ನು ಓದಿದ್ದೀರಾ? ಎಂಬಿಎ ಓದಿರುವ ಬ್ರಿಟನ್‌ನ ಮೊದಲ ಪ್ರಧಾನಿ ರಿಷಿ ಸುನಕ್‌

ಇಂತಹ ಪ್ರವೃತ್ತಿಗಳನ್ನು ದಮನಿತ ಸಮುದಾಯಗಳು ಅರ್ಥಮಾಡಿಕೊಳ್ಳದಿದ್ದರೆ ಪ್ರಬಲ ಸಾಮಾಜಿಕ ಪ್ರತಿರೋಧ ವ್ಯಕ್ತಪಡಿಸುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪೊಳ್ಳು ಭರವಸೆಗಳು ಮತ್ತು ಕೇಂದ್ರ – ರಾಜ್ಯ ಸರ್ಕಾರಗಳ ದಮನಕಾರಿ ಪ್ರವೃತ್ತಿಗಳಿಂದಾಗಿ ದೇಶದ ಸಾಂವಿಧಾನಿಕ ಮೂಲತತ್ವಗಳಲ್ಲಿ ಒಂದಾದ ಧರ್ಮ ನಿರಪೇಕ್ಷತೆಗೆ ಧಕ್ಕೆಯುಂಟಾಗಿದೆ. ಭಾರತವನ್ನು ಉಳಿಸುವುದೆಂದರೆ ಧರ್ಮ ನಿರಪೇಕ್ಷತೆಯನ್ನು ಸುಸ್ಥಿರಗೊಳಿಸಿ ಭಾರತದ ಏಕತೆ, ಸಮಗ್ರತೆ ಮತ್ತು ಅಭಿವೃದ್ಧಿಗಳನ್ನು ಸಾಧಿಸುವುದು ಎಂದರ್ಥ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app