ಪಠ್ಯ ಪುಸ್ತಕ ವಿವಾದ | ಏನೇನೋ ಕಲಿಸಲು ಮುಂದಾಗುವವರಿಗೆ ಮಗುವಿನ ಕೆಲವು ಪ್ರಶ್ನೆಗಳು

Students 2

ಈಗೀಗ 'ಪಠ್ಯಪುಸ್ತಕ' ಅಂದಾಕ್ಷಣ ಬರೀ ವಿವಾದವೇ ನೆನಪಾಗುತ್ತದೆ. ಪಠ್ಯ ಎಂಬ ಅತ್ಯಂತ ಮಹತ್ವದ ವಿಚಾರವನ್ನು ವಿವಾದಗಳಿಂದ ಕೀಳುಮಟ್ಟಕ್ಕೆ ಕೊಂಡೊಯ್ದ ಮಹಾಶಯರಿಗೆ ಮತ್ತು ವಸ್ತುನಿಷ್ಠ ಚರ್ಚೆ ಬಿಟ್ಟು ಸುಮ್ಮನೆ ತೋಳೇರಿಸಿಕೊಂಡು ಮಾತಾಡುತ್ತಿರುವ ದೊಡ್ಡ ಮನುಷ್ಯರಿಗೆ ಮಗುವೊಂದು ಕೇಳಬಹುದಾದ ಅತ್ಯಂತ ಸಹಜ ಪ್ರಶ್ನೆಗಳು ಇಲ್ಲಿವೆ

ನನಗಾಗಿ ನೀವೆಲ್ಲ ಅದೆಷ್ಟು ಕಷ್ಟಪಡ್ತಾ ಇದ್ದೀರಲ್ವಾ? ನನಗೆ ಕಲಿಸೋಕೆ ಒಂದು ಪಠ್ಯ ತಯಾರಿಸಲು ಏನೆಲ್ಲ ನಡೆಸುತ್ತಿದ್ದೀರಾ ಎಂದು ನೋಡಿದರೆ, ನನಗೆ ನಿಮ್ಮ ಬಗೆಗೆ ಅಳಬೇಕೋ ನಗಬೇಕೋ ಅನುಕಂಪ ತೋರಿಸಬೇಕೋ ಏನೂ ಗೊತ್ತಾಗ್ತಾ ಇಲ್ಲ!

ನೀವೆಲ್ಲಾ ಧರ್ಮದಲ್ಲಿ ನಂಬಿಕೆ ಉಳ್ಳವರು ಮತ್ತು ವೈಜ್ಞಾನಿಕವಾಗಿ ಕೂಡ ಯೋಚನೆ ಮಾಡುವವರು ಎಂದು ಹೇಳಿಕೊಳ್ಳುತ್ತಾ ಇರ್ತೀರಲ್ವಾ? ನನಗೆ ಹದಿನೈದು ವರ್ಷಕ್ಕೆ ಏನೇನೋ ನೀತಿಪಾಠ, ಸಂಸ್ಕೃತಿ ಎಲ್ಲ ಕಲಿಸೋಕೆ ಹೊರಟಿದ್ದೀರಿ. ನಿಮ್ಮ ಉದ್ದೇಶ ಒಳ್ಳೇದೇ. ಆದರೆ, ನಿಮ್ಮದೇ ಆಧ್ಯಾತ್ಮಗಳು ಮತ್ತು ವಿಜ್ಞಾನ ಏನು ಹೇಳ್ತಾ ಇದೆ ಅಂತ ಮೊದಲು ತಿಳ್ಕೊಳ್ಳಿ. ನಿಮ್ಮ ತರ್ಕ, ಸಿದ್ಧಾಂತ, ವಿಚಾರಗಳೆಲ್ಲ ಅರ್ಥವಾಗುವುದಕ್ಕೆ ಇರುವ ಮುಮ್ಮೆದುಳು ಪೂರ್ಣ ಬೆಳೆಯೋದು ಯಾವಾಗ ಅಂತಾನಾದ್ರೂ ಗೊತ್ತಾ? 20-22 ವರ್ಷಕ್ಕೆ! ಕೆಲವು ವಿಜ್ಞಾನಿಗಳು 25-30 ವರ್ಷದವರೆಗೂ ಮುಮ್ಮೆದುಳು ಬೆಳವಣಿಗೆಯಾಗುತ್ತಲೇ ಇರುತ್ತೆ ಅಂತ ಹೇಳ್ತಾರೆ. ಹದಿನೈದು ವರ್ಷಕ್ಕೆ ನೀವಿಟ್ಟಿರೋ ಪಠ್ಯದ ದೊಡ್ಡ-ದೊಡ್ಡ ಸಿದ್ಧಾಂತಗಳನ್ನು ನಾನು ಉರು ಹೊಡೆದು ಪರೀಕ್ಷೆಯಲ್ಲಿ ಬರೀತೀನಿ ಅಷ್ಟೇ. ಕೊನೆಗೆ ಹೊರಗಿನ ಬದುಕಿಗೆ ಬಂದಾಗ ಎಲ್ಲ ಮರ್ತುಹೋಗಿರುತ್ತೆ!

ಈ ಲೇಖನ ಓದಿದ್ದೀರಾ?: 'ಈ ದಿನ' ವಿಶೇಷ | ಪೋಷಕರೇ, ಇಂತಹ ಪಠ್ಯವನ್ನು ನಿಮ್ಮ ಮಕ್ಕಳು ಓದಬೇಕೇ?

ನಾನು ಕಲಿಯೋದು ಹ್ಯಾಗೆ ಅಂತಾನಾದ್ರೂ ಗೊತ್ತಾ ನಿಮಗೆ? ನಂದೇ ಕತೆ ಹೇಳ್ತೀನಿ ಕೇಳಿ. ಒಂದು ವರ್ಷ ಆಗೋ ಹೊತ್ತಿಗೆ ಏನಾದ್ರೂ ಹಿಡ್ಕೊಂಡು ನಿಂತುಕೊಂಡು ನಾನು ನಿಮ್ಮನ್ನೆಲ್ಲ ನೋಡ್ತಿದ್ದೆ. ಅರೇ... ಇವರೆಲ್ಲ ಸರಸರ ಅಂತ ಓಡಾಡ್ತಾರಲ್ವಾ, ನಾನು ಅವರಂತೆ ನಡೀಬೇಕು ಅನ್ನಿಸ್ತು. ಎರಡು ಹೆಜ್ಞೆ ಇಟ್ಟೆ. ಮನೆಯವರೆಲ್ಲ ಓಡಿ ಬಂದು, “ಏ ಬೀಳ್ತೀಯಾ ಹುಷಾರು,” ಅಂತ ಕಿರುಚಿದ್ರು. ಪ್ರತಿ ಸಾರಿನೂ ಹೀಗೇ ಆಗ್ತಾ ಇತ್ತು. ನಾನೇನಾದ್ರೂ ನಿಮ್ಮ ಮಾತು ಕೇಳಿ ಹೆದರಿಕೊಂಡು ಸುಮ್ಮನಿದ್ರೆ 15 ವರ್ಷ ಆದ್ರೂ ಅಂಬೆಗಾಲಿಕ್ಕುತ್ತಾನೇ ಇರ್ತಿದ್ದೆ! ನನಗೆ ಅನ್ನಿಸಿತು, ದೊಡ್ಡೊರೆಲ್ಲ ಸರಾಗವಾಗಿ ಓಡಾಡ್ತಾ ಇರಬೇಕಾದ್ರೆ ನಾನೂ ಹಾಗೆ ಮಾಡ್ಲೇಬೇಕು, ಅಂತ. ಅದಕ್ಕೇ ಪ್ರಯತ್ನ ಬಿಡ್ಲೇ ಇಲ್ಲ. ಹೆಜ್ಜೆ ಇಟ್ಟೆ, ಬಿದ್ದೆ, ಎದ್ದೆ, ಗಾಯ ಮಾಡ್ಕೊಂಡೆ, ಅತ್ತೆ, ಕಿರುಚಿದೆ, ಆದರೂ ಮತ್ತೆ ಹೆಜ್ಜೆ ಇಟ್ಟೆ. ಕೊನೆಗೂ ಕಲಿತೇ ಬಿಟ್ಟೆ ನಿಮ್ಮಂಗೆ ಓಡಾಡೋಕೆ. ನೀವೇ ನನಗೆ ಮಾದರಿ.

ಮಕ್ಕಳು ಹ್ಯಾಗೇ ಕಲೀತಾರೆ ಅನ್ನೋದಕ್ಕೆ ಇಲ್ಲಿದೆ ನೋಡಿ ಪಾಠ. ನೀವೇನೋ ನಮ್ಮ ಮಿದುಳನ್ನು ಕೊರೆದು ತೂತು ಮಾಡಿ ನೀತಿಪಾಠ, ಧರ್ಮ, ಸಂಸ್ಕೃತಿ ಎಲ್ಲ ತುಂಬಿ ನಮ್ಮನ್ನು ಸುಸಂಸ್ಕೃತ ಪ್ರಜೆಗಳನ್ನು ಮಾಡ್ಬೇಕು ಅಂತೀದೀರಾ. ಅದು ಸಾಧ್ಯವಾಗೋಲ್ಲ. ಕಲಿಯೋಕೆ ನನಗೆ ಮಾದರಿಗಳು ಬೇಕು. ನಾವು ಗೌರವದಿಂದ ವರ್ತಿಸಬೇಕು ಅಂತೀರ; ಅದ್ಯಾವುದೋ ಶಾಲೆಯಲ್ಲಿ ಮಕ್ಕಳು ಅಧ್ಯಾಪಕರನ್ನು ಹೊಡೆದರು ಅಂತ ನಮ್ಮನ್ನು ಕೆಟ್ಟದಾಗಿ ನೋಡ್ತೀರ. ನೀವು ವಿಧಾನಸಭೆಯಲ್ಲಿ, ಸಾರ್ವಜನಿಕ ಭಾಷಣಗಳಲ್ಲಿ ಏನು ಮಾಡ್ತಾ ಇದೀರಾ? ನನಗೆ ಹುಟ್ಟಿದಾಗ ಕೆಟ್ಟ ಶಬ್ದ ಒಂದೂ ಗೊತ್ತಿರಲಿಲ್ಲ. ನಿಮ್ಮ ಭಾಷಣ ಕೇಳಿ-ಕೇಳಿ ಎಲ್ಲ ಕಲಿತೆ. ನಮ್ಮ ಸಿನಿಮಾಗಳಿಂದ ಅಂತೂ ನನಗೆ ಹೊಸ ನಿಘಂಟೇ ಸಿಕ್ತು. ಅನ್ಯಾಯ ಆದಾಗ ಬಂದೂಕು ತೊಗೋಬೇಕು ಅನ್ನೋದು ನನಗೆ ಹೀಗೇ ಗೊತ್ತಾಗಿದ್ದು. ಯಾರಾದ್ರೂ ನಾವು ಹೇಳಿದ್ದು ವಿರೋಧಿಸಿದರೆ ಹೇಗೆ ಝಾಡಿಸಬೇಕು ಅಂತ ನೀವೆಲ್ಲ ದಿನಾ ಕಲಿಸ್ತಿದೀರ.

ಈ ಲೇಖನ ಓದಿದ್ದೀರಾ?: ಆಶಯಗಳೇ ಅಪಹಾಸ್ಯಗೊಂಡ ಪಠ್ಯಪುಸ್ತಕಗಳು!

ದುಡ್ಡು ಕೆಟ್ಟದು ಅಂತ ನನಗೆ ಪಾಠ ಹೇಳ್ಕೋಡ್ತೀರ. ನಮ್ಮಪ್ಪ ಎಷ್ಟು ಕಷ್ಟಪಟ್ಟು ಲಕ್ಷಾಂತರ ರೂಪಾಯಿ ಡೊನೇಶನ್ ಕೊಟ್ಟು ಶಾಲೆಗೆ ಸೇರಿಸಿದಾನೆ ಅಂತ ಗೊತ್ತಾ ನಿಮಗೆ? ಮತ್ತೆ ನಿಮ್ಮ ಕಚೇರಿಗಳಲ್ಲಿ ಎಲ್ಲ ಕೆಲಸಕ್ಕೂ ಕೋಟಿ-ಕೋಟಿ ಹಣ ಕೊಡಬೇಕಂತೆ.

ನೀವೆಲ್ಲ ನನಗೆ ಯಾವುದೇ ಪಾಠ ಕಲಿಸಿ; ಕೊನೆಗೆ ನಾನು ಮಾಡೋದು ನೀವು ಮಾಡಿರೋದನ್ನೇ ಹೊರತು ಹೇಳಿರೋದನ್ನಲ್ಲ. ನೀವು ಮಾಡಿರೋದನ್ನೂ ನಿಮಗಿಂತ ಯಶಸ್ವಿಯಾಗೇ ಮಾಡ್ತೀನಿ, ಯಾಕೇಂದ್ರೆ ನೀವೆಲ್ಲ ಹಗಲು-ರಾತ್ರಿ ಕಷ್ಟಪಟ್ಟು ಕಲಿಸ್ತಾ ಇದೀರಲ್ಲ!

ಕೊನೆಯ ಗುಟ್ಟು ಹೇಳ್ಲಾ? ಇದನ್ನೆಲ್ಲ ಬರ್ದಿದ್ದು ನಾನಲ್ಲ, ನಮ್ಮ ಅಪ್ಪ-ಅಮ್ಮ ಬರಕೊಟ್ಟಿದ್ದು! ನನಗೆ ಅವರು ಒಳ್ಳೆ ಮಾದರಿ ಆಗಿದ್ದಾರೆ. ಹಾಗಾಗಿ, ಅವರು ಹೇಳಿದ್ದು ನನಗೆ ನಿಜ ಅನ್ನಿಸ್ತು. ಅದಕ್ಕೇ ಹೇಳಿದೆ. ಸಾಧ್ಯವಾದರೆ ಅರ್ಥ ಮಾಡ್ಕೊಳ್ಳಿ. ಬೊಗಳೆ ಭಾಷಣ, ವಾದ-ವಿವಾದ ನಿಲ್ಲಿಸಿ. ನಿಮ್ಮ ಮಾತು, ವರ್ತನೆ, ಭಾಷೆ ಎಲ್ಲ ಹೇಗಿದೆ ಅಂತ ನೋಡ್ಕಳಿ. ಸಾಧ್ಯ ಆದ್ರೆ ಸರಿ ಮಾಡ್ಕಳಿ. ಅವಾಗ ಲೋಕ ತನ್ನಿಂದ ತಾನೇ ಉದ್ಧಾರ ಆಗುತ್ತೆ. ಏಸುಕ್ರಿಸ್ತ ಹೇಳಿದ್ದು ಏನು ಗೊತ್ತಾ? "ಸ್ವರ್ಗದ ಸಾಮ್ರಾಜ್ಯ ನಿಮ್ಮೊಳಗೇ ಇದೆ.”

ನಿಮಗೆ ಏನು ಅನ್ನಿಸ್ತು?
3 ವೋಟ್