ಜಿಎಸ್‌ಟಿ| ಸಾಮಾನ್ಯರಿಗೆ ಸುಡು ಬಿಸಿ, ಶ್ರೀಮಂತರಿಗೆ ತಂಗಾಳಿ

GST on milk products

ಬ್ರಿಟೀಷರು ದೇಶದ ಜನರ ಬಗ್ಗೆ ನಿಷ್ಕರುಣೆಯಿಂದ ಹೇರುತ್ತಿದ್ದ ತೆರಿಗೆಗಳನ್ನು ಭಾರತ ಸ್ವತಂತ್ರವಾದ ಕೂಡಲೇ ತೆಗೆದುಹಾಕಲಾಗಿತ್ತು. ಈಗ ದೇಶ ಸ್ವಾತಂತ್ರ್ಯದ 75ನೇ ವರ್ಷದ ಸಂಭ್ರಮದಲ್ಲಿರುವಾಗ ಸಾಮಾನ್ಯ ಜನರ ದಿನಬಳಕೆಯ ವಸ್ತುಗಳ ಮೇಲೆ ಮತ್ತೆ ತೆರಿಗೆ ಹೇರಲಾಗಿದೆ. ಇದೇ ದೇಶದ ಜನರಿಗೆ ಅಮೃತ ಮಹೋತ್ಸವಕ್ಕೆ ಮೋದಿ ಕೊಡುಗೆ

ನೂಲುದೆರೆ, ಮಗ್ಗದೆರೆ, ಬಣ್ಣದೆರೆ, ಕುಲುಮೆದೆರೆ, ಮೇದದೆರೆ, ಬಳೆದೆರೆ, ತೆಪ್ಪದೆರೆ, ಕುಂಬಾರದೆರೆ ಈ ಎಲ್ಲ ತೆರಿಗೆಗಳ ಬಗ್ಗೆ ಕೇಳಿದ್ದೀರಾ? ನೇಕಾರರ ಮೇಲೆಯೇ ಮೂರು ರೀತಿಯ ತೆರಿಗೆಗಳು, ಕಮ್ಮಾರ, ಕುಂಬಾರ, ಬುಟ್ಟಿ ತಯಾರಿಸುವ ಮೇದರು, ಬಳೆಗಾರರು ಈ ಎಲ್ಲದರ ಮೇಲೆ ತೆರಿಗೆ, ಇವುಗಳಲ್ಲದೆ ಹೆಣ್ಣು ಮೈ ನೆರೆದರೆ ತೆರಿಗೆ, ಚಪ್ಪರ ಹಾಕಿದರೆ ತೆರಿಗೆ, ಬಾಸಿಂಗ ತೆರಿಗೆ, ಹಸೆ ತೆರಿಗೆ ಇವುಗಳು ಸಾಲದೆಂಬಂತೆ ಮದುವೆ ತೆರಿಗೆ, ಸಾಕೇ ?

ರಾಣಿ ಪ್ರವಾಸ ಹೊರಟರೆ ತೆರಿಗೆ, ರಾಜಕುಮಾರ ಬಂದರೆ ತೆರಿಗೆ, ರಾಜನಿಗೆ ಮಗ ಹುಟ್ಟಿದರೆ ತೆರಿಗೆ, ಅವನು ಪಟ್ಟಾಭಿಷೇಕ ಮಾಡಿಕೊಂಡರೆ ತೆರಿಗೆ ಇವುಗಳ ಜೊತೆಗೆ ಕೃಷಿ ಫಸಲಿನ ಮೂರನೇ ಒಂದು ಭಾಗ ಕಂದಾಯ, ನೇಗಿಲು ತೆರಿಗೆ, ತಿಪ್ಪೆಯ ಮೇಲೂ ತೆರಿಗೆ. ಜೊತೆಗೆ ಹಲ ಹಲವು ಸಂದರ್ಭಗಳಲ್ಲಿ ರಾಜನಿಗೆ, ರಾಜ ಮನೆತನದವರು, ಸಾಮಂತರು, ದಣಾಯಕರುಗಳಿಗೆ ಬಿಟ್ಟಿ ದುಡಿಮೆ. ಹೀಗೆ ತೆರಿಗೆಗಳ ಮೇಲೆ ತೆರಿಗೆಯ ಜೊತೆಗೆ ಮತ್ತಷ್ಟು ವಿಧದ ಸುಲಿಗೆಗಳು.

ಇದು ಹನ್ನೊಂದನೆಯ ಶತಮಾನ ಮತ್ತು ಹನ್ನೆರಡನೇ ಶತಮಾನದ ಆದಿ ಭಾಗದಲ್ಲಿ ರಾಜರುಗಳು ಹೇರುತ್ತಿದ್ದ ತೆರಿಗೆಗಳು. ಜೊತೆಗೆ ದೇವಾಲಯಗಳು, ವಿವಿಧ ಆರಾಧನೆ, ಪೂಜೆಗಳು, ಪುರೋಹಿತರುಗಳು, ಶ್ಯಾನುಭೋಗರ ಕಾಣಿಕೆಗಳು. ಇತರ ಅಂಶಗಳ ಜೊತೆಗೆ ರೈತರು, ಕುಶಲಕರ್ಮಿಗಳು ತೆರಬೇಕಾಗಿದ್ದ ತೆರಿಗೆ, ಸುಂಕಗಳ ಹೊರೆ ಮಿತಿ ಮೀರಿದಾಗ ಕಾಯಕ ಜೀವಿಗಳು ರೋಸಿ ಹುಟ್ಟುಹಾಕಿದ್ದೇ ವಚನ ಚಳವಳಿಯಾಯ್ತು. ಬೇರೆ ಧರ್ಮ ಸ್ಥಾಪನೆಗೇ ಅಡಿಪಾಯವಾಯ್ತು ಎನ್ನುತ್ತಾರೆ ಸಂಶೋಧಕರು, ಸಾಹಿತಿಗಳೂ ಆದ ಸಿ. ವೀರಣ್ಣನವರು.

ಜಿಎಸ್‌ಟಿ ತೆರಿಗೆ ವ್ಯವಸ್ಥೆ ಜಾರಿಗೆ‌ ಬಂದಾಗಿನಿಂದ ರಾಜರ ವೈಭವಗಳಿಗೆ ಬಡಜನರನ್ನು ಕಿತ್ತು ತಿನ್ನುವ ತೆರಿಗೆ ಹಾಕುತ್ತಿದ್ದ ವ್ಯವಸ್ಥೆ ಮತ್ತೆ ಅಮಲಿಗೆ ಬಂದಂತೆ ಕಾಣುತ್ತದೆ.  ಈ ವರ್ಷದ ಜುಲೈನಿಂದ ಜಾರಿಗೆ ಬಂದ ತೆರಿಗೆಗಳು ಮತ್ತಷ್ಟು ಕ್ರೂರವಾಗಿವೆ. ಬ್ರಿಟಿಷ್ ವಸಾಹತುಶಾಹಿ ಆಡಳಿತದಲ್ಲಿ ಅಕ್ಕಿ, ಗೋಧಿ, ಬೇಳೆಗಳು, ಬೇಳೆಕಾಳುಗಳು, ಮೊಸರು, ಪನೀರ್, ಬೆಲ್ಲ, ಮೀನು, ಮಾಂಸಗಳಂತಹ ಆಹಾರ ವಸ್ತುಗಳ ಮೇಲೆ ನಮ್ಮ ದೇಶದ ಜನರ ಬಗ್ಗೆ ನಿಷ್ಕರುಣೆಯಿಂದ ಹೇರುತ್ತಿದ್ದ ತೆರಿಗೆಗಳನ್ನು ಭಾರತ ಸ್ವತಂತ್ರವಾದ ಕೂಡಲೇ ತೆಗೆದುಹಾಕಲಾಗಿತ್ತು. ಈಗ ಭಾರತದ ಸ್ವಾತಂತ್ರ್ಯ ಮಹೊತ್ಸವದ 75ನೇ ವರ್ಷದ ಸಮಯದಲ್ಲಿ ಇಂತಹ ಬಡವರಿಂದ ಹಿಡಿದು ಎಲ್ಲ ಸಾಮಾನ್ಯಜನರ ಬದುಕಿನ ಮುಖ್ಯ ಅಂಶಗಳಾದ ಇವುಗಳ ಮೇಲೆ ಮತ್ತೆ ತೆರಿಗೆ ಹೇರಲಾಗಿದೆ. ಇದೇ ಅಮೃತ ಮಹೋತ್ಸವಕ್ಕೆ ದೇಶದ ಜನರಿಗೆ ಮೋದಿ ಕೊಡುಗೆಯಾಗಿದೆ.

ಜಿಎಸ್‌ಟಿ ಮಾಲೆಯ ಇತರ ಬರಹಗಳಲ್ಲಿ ಹಲ ಹಲವು ತೆರಿಗೆ ಏರಿಕೆಗಳಿಂದ ಸಾಮಾನ್ಯ ಜನರ ಬದುಕು, ಕೃಷಿ, ಹಾಲು ಉತ್ಪಾದನೆ ಮೊದಲಾದ ರಂಗಗಳ ಆರ್ಥಿಕತೆಯ ಮೇಲಾಗುವ ಪರಿಣಾಮಗಳ ಬಗ್ಗೆ ಬರೆಯಲಾಗಿದೆ. ಆದರೆ ಅದೇ ಸಮಯದಲ್ಲಿ ಶ್ರೀಮಂತರ ಐಷಾರಾಮಿ ವಸ್ತುಗಳ ಮೇಲಿನ ತೆರಿಗೆಗಳಿಗೆ ಬಹು ದೊಡ್ಡ ಇಳಿಕೆಯ ಕೊಡುಗೆ ಲಭಿಸಿದೆ. ಜಿಎಸ್‌ಟಿ ತೆರಿಗೆಗಳ ಗರಿಷ್ಟ ಮಟ್ಟ ಇರುವುದೇ ಶೇ.28. ಆದರೆ ಭಾರತದಲ್ಲಿ ಶ್ರೀಮಂತರ ಐಷಾರಾಮಿ ವಸ್ತುಗಳ ಮೇಲೆ ಶೇ.40-50 ರಷ್ಟು ತೆರಿಗೆ ಹಾಕುತ್ತಿದ್ದುದು ಸಾಮಾನ್ಯ. ಈಗ ಗರಿಷ್ಠ ಮಟ್ಟವೇ ಶೇ.28 ಎಂದರೆ ಶ್ರೀಮಂತರ ಐಷಾರಾಮಿ ವಸ್ತುಗಳಿಗೆ ಎಷ್ಟೊಂದು ತೆರಿಗೆ ಇಳಿಕೆಯ ಕೊಡುಗೆ ಲಭಿಸುತ್ತದೆ, ಯೋಚಿಸಿ. ಉದಾಹರಣೆಗೆ ಲಕ್ಷರಿ ಕಾರುಗಳ ಮೇಲೆ ರಾಷ್ಟ್ರ,ರಾಜ್ಯ ತೆರಿಗೆಗಳೆಲ್ಲ ಸೇರಿ ಶೇ. 45ರಷ್ಟು ತೆರಿಗೆ ಇಂದು ಗರಿಷ್ಠ ಮಟ್ಟವೆಂಬ ಶೇ.28 ಕ್ಕೆ ಇಳಿದಿದೆ. ಚಿನ್ನದ ಖರೀದಿಗೆ ಶೇ. 3 ರಷ್ಟು, ವಜ್ರಗಳ ಖರೀದಿಗೆ ಶೇ.1.5 ರಷ್ಟು ತೆರಿಗೆಯಂತೆ. ಆದರೆ ಅಕ್ಕಿ ಮೊದಲಾದ ವಸ್ತುಗಳ ಮೇಲೆ 5 ಶೇ. ಅಂತೆ. ಇಂತಹಾ "ಸಾಮಾಜಿಕ ನ್ಯಾಯ" ಎಲ್ಲಿಯಾದರೂ ಉಂಟೇ !?!?!

ಇದಲ್ಲದೆ ಕಾರ್ಪೊರೇಟ್‌ಗಳು, ಅವರ ಸಂಘಗಳು, ಅವರ ತುತ್ತೂರಿಗಳಾದ ಮಾಧ್ಯಮಗಳು, ಪತ್ರಿಕೆಗಳಲ್ಲಿ ಇಂದು ಇರುವ ಶೇ.5, 12, 18, 28 ಎಂಬ ತೆರಿಗೆ ದರಗಳನ್ನು ಕೇವಲ 12,18 ಎಂಬ ಎರಡಕ್ಕೆ ಇಳಿಸಿ ಎಂಬ ಒತ್ತಡ ಹೇರಲಾಗುತ್ತಿದೆ.

ಇದರ ಮತಿತಾರ್ಥವೇನು? ಈಗ ಶೇ.5ರ ತೆರಿಗೆ ಇರುವ ಆಹಾರ ವಸ್ತುಗಳು, ಔಷಧಿಗಳು, ದಿನನಿತ್ಯದ ಅಗತ್ಯಗಳು ಮುಂತಾದವುಗಳ ದರವನ್ನು ಶೇ.12ಕ್ಕೆ ಏರಿಸಬೇಕು, ಅತ್ಯಂತ ಶೋಕಿಲಾಲರ ಕೊಳ್ಳುವಿಕೆಗಳನ್ನು ಶೇ. 28ರಿಂದ 18ಕ್ಕೆ ಇಳಿಸಿ ಈ ನೂರಾರು ಕೋಟ್ಯಾಧಿಪತಿಗಳ ಸಂಕಷ್ಟವನ್ನು ಪರಿಹರಿಸಬೇಕು.

ಹೇಗಿದೆ ಹುನ್ನಾರ ? ಒಂದು ದೇಶ, ಒಂದು ತೆರಿಗೆ ಎಂಬ ಹೆಸರಿನಲ್ಲಿ ಬಾಜಾ ಬಜಂತ್ರಿಗಳ ಅಬ್ಬರದೊಂದಿಗೆ ಜಿಎಸ್‌ಟಿಯನ್ನು ಜಾರಿಗೆ ತಂದ ಉದ್ದೇಶವೇನು ಎಂಬುದು ಇದರಲ್ಲಿ ಸ್ಪಷ್ಟ. ದೇಶೀ, ವಿದೇಶಿ ಕಾರ್ಪೊರೇಟ್‌ಗಳಿಗೆ ಮೃಷ್ಟಾನ್ನ. ಸಾಮಾನ್ಯರಿಗೆ ಅನ್ನಕ್ಕೂ ಕುತ್ತು.

ಜಿಎಸ್‌ಟಿ ತೆರಿಗೆಗಳಲ್ಲದೆ ಜನ ಸಾಮಾನ್ಯರು ತೆರುವ ಇತರ ತೆರಿಗೆಗಳಿರುವಾಗ ಜಿಎಸ್‌ಟಿಯನ್ನಷ್ಟೇ ಪ್ರತ್ಯೇಕವಾಗಿ ನೋಡಲಾಗುವುದಿಲ್ಲ. ಉದಾಹರಣೆಗೆ ಈ ಪರಿಧಿಯ ಹೊರಗಿರುವ ಪೆಟ್ರೋಲಿಯಂ ವಸ್ತುಗಳು- ಶ್ರೀಮಂತರ ಬಳಕೆ ವಸ್ತುಗಳ ಮೇಲೆ ಜಿಎಸ್‌ಟಿಯನ್ನು ತಗ್ಗಿಸಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆಯನ್ನು ಸಿಕ್ಕಾಪಟ್ಟೆ ಏರಿಸುವುದು, ಶೇ 50ಕ್ಕಿಂತ ಹೆಚ್ಚು ತೆರಿಗೆ ಅವುಗಳ ಮೇಲೆ ವಿಧಿಸುವುದೆಂದರೆ ಜನ ಸಾಮಾನ್ಯರ ಬಸ್, ರೈಲು, ಮೆಟ್ರೊ ಮತ್ತು ಇತರ ಪ್ರಯಾಣ ಸೌಲಭ್ಯಗಳ ದರಗಳನ್ನು, ಅಗತ್ಯ ವಸ್ತುಗಳ ಸಾಗಾಣಿಕೆ ದರವನ್ನು ಏರಿಸುವ ಮೂಲಕ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸುವ ಹುನ್ನಾರ .

ಇಂತಹ ಕುತಂತ್ರಗಳಿಂದ ಸಾಮಾನ್ಯರ ತೆರಿಗೆ ದರ ಏರಿಸಿ ಶ್ರೀಮಂತರು ನೀಡಬೇಕಾದ ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆಗಳನ್ನು ಪ್ರತಿ ವರ್ಷ ಲಕ್ಷ ಕೋಟಿ ರೂಗಳಷ್ಟು ದೊಡ್ಡ ಪ್ರಮಾಣದಲ್ಲಿ ಇಳಿಸುವುದು ಜಿಎಸ್‌ಟಿಯಂತಹ ಅಪ್ರತ್ಯಕ್ಷ ತೆರಿಗೆ ದರಗಳ ಒಳ ವಿನ್ಯಾಸ.

ಇದನ್ನು ಓದಿದ್ದೀರಾ? ಜಿಎಸ್‌ಟಿ| ಸಣ್ಣ ಅತಿಸಣ್ಣ ಕೈಗಾರಿಕೆಗಳ ಭವಿಷ್ಯ ಡೋಲಾಯಮಾನ

ಈ ತೆರಿಗೆಗಳ ವಿನ್ಯಾಸದಲ್ಲಿ ಸಾಮಾನ್ಯರಿಂದ ಕಿತ್ತು ಶ್ರೀಮಂತರಿಗೆ ಉಣಬಡಿಸುವ ಹಲ ಹಲವು ವಿಧಾನಗಳಿವೆ. ಅದರಲ್ಲಿ ಒಂದು ಈ ತೆರಿಗೆ ವಿಧಿಸಿದ ಮೊದಲ ವರ್ಷಗಳಲ್ಲಿ ಬಯಲಿಗೆ ಬಂತು. ಈ ತೆರಿಗೆಗಳಲ್ಲಿ ಜನರಿಗೆ ನೀಡಲಾದ ಕೆಲವು ರಿಯಾಯತಿಗಳನ್ನು ಜನರಿಗೆ ವರ್ಗಾಯಿಸದೇ ಅದನ್ನು ತಾವೇ ಕಬಳಿಸುವುದು. ಮತ್ತೊಂದು ಈ ತೆರಿಗೆಗಳ ಭಾಗವಾಗಿರುವ input tax concessionಗಳನ್ನು ಪಡೆಯುವಲ್ಲಿ ಲಕ್ಷ ಕೋಟಿಗಟ್ಟಲೆ ಅಪರಾ ತಪರಾ. ಹೀಗೆ ಜನ ಸಾಮಾನ್ಯರನ್ನು ಸುಲಿಯುವ  ಅಪ್ರತ್ಯಕ್ಷ ತೆರಿಗೆಗಳ ಪ್ರಧಾನ ಸಾಧನವಾಗಿ ಜಾರಿಗೆ ತಂದ ಜಿಎಸ್‌ಟಿಯಿಂದಾಗಿ ಜನರು ಬಾಣಲೆಯಿಂದ ಬೆಂಕಿಗೆ ದೂಡಿದಂತಾಗಿದೆ.

ನಿಮಗೆ ಏನು ಅನ್ನಿಸ್ತು?
17 ವೋಟ್