ಪಠ್ಯಪುಸ್ತಕ ಪರಿಷ್ಕರಣೆ: 10ನೇ ತರಗತಿಯ ಕನ್ನಡದ ಗದ್ಯ-ಪದ್ಯ ಎಲ್ಲವೂ ಪುರುಷರವು!- ಡಾ.ಕೆ.ಷರೀಫಾ

textbook society1

ಹತ್ತನೇ ತರಗತಿಯ ಕನ್ನಡ ಪಠ್ಯದ ಗದ್ಯಭಾಗದಲ್ಲಿರುವ ಎಂಟು ಪಾಠಗಳೂ ಪುರುಷರವೇ ಆಗಿವೆ. ಪದ್ಯಭಾಗದಲ್ಲಿ ನೋಡಿದರೆ ಅಲ್ಲಿಯೂ ಎಂಟು ಪದ್ಯಗಳಿದ್ದೂ, ಒಬ್ಬ ಮಹಿಳೆಗೂ ಅಲ್ಲಿ ಪ್ರವೇಶ ದೊರೆಯದಿರುವುದಕ್ಕೆ ಇವರ ಬಳಿ ಯಾವ ಸಮರ್ಥನೆಯಿದೆ? ಇದು ಸಾಂಸ್ಕೃತಿಕ ಲೋಕದ ಮಹಿಳೆಯರಿಗೆ ಮಾಡಿರುವ ಅವಮಾನ.

ಪಠ್ಯಪುಸ್ತಕವೆಂದರೆ ಪಕ್ಷಗಳ ಪ್ರಣಾಳಿಕೆಯಲ್ಲ. ಸರ್ಕಾರ ಬದಲಾದಂತೆ ಪಠ್ಯಗಳೂ ಬದಲಾಯಿಸುವುದು ಎಂತಹ ಅವಿವೇಕದ ಕೆಲಸ! ಪಠ್ಯ ಪುಸ್ತಕಗಳ ಪರಿಷ್ಕರಣೆ ಆಗಬೇಕಿದ್ದರೆ ಅದು ಯಾಕೆ ಎಂಬ ಪ್ರಶ್ನೆ ಬರುತ್ತದೆ. ಹಿಂದಿನ ಪಠ್ಯಪುಸ್ತಕ ಸಮಿತಿಯ ಗಮನಕ್ಕೆ ಹಿಂದೆ ಆಗಿರುವ ಪ್ರಮಾದಗಳನ್ನು ತಂದು ಮುಂದಿನ ಬದಲಾವಣೆಯನ್ನು ಸಂವಿಧಾನಾತ್ಮಕ ಸಮಿತಿಯು ತೀರ್ಮಾನ ಕೈಕೊಳ್ಳಬೇಕು. ಹಾಗೆಂದು ಇತಿಹಾಸ, ಸಮಾಜಶಾಸ್ತ್ರ, ಚರಿತ್ರೆಗಳನ್ನು ತಿರುಚುವುದಲ್ಲ. ಪಠ್ಯಪುಸ್ತಕ ಸಮಿತಿಯಲ್ಲಿ ಆಯಾ ವಿಷಯತಜ್ಞರು, ಹಿರಿಯರು, ಶಿಕ್ಷಣತಜ್ಞರು, ಸಾಹಿತಿಗಳೂ ಇರಬೇಕಾದದ್ದು ನಿಯಮ. ಬರಗೂರು ರಾಮಚಂದ್ರಪ್ಪನವರ ಸಮಿತಿಯಲ್ಲಿ ಈ ನಿಯಮ ಪಾಲಿಸಿದ್ದರು.

ಸರ್ಕಾರ ಸಮಯಕ್ಕೆ ಸರಿಯಾಗಿ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಸರ್ಕಾರಿ ಶಾಲಾ ಮಕ್ಕಳಿಗೆ ನೀಡಬೇಕಾಗಿದ್ದ  ಸೈಕಲ್ ಇನ್ನೂ ನೀಡಿಲ್ಲ. ಅದಕ್ಕೆ ಮೀಸಲಿದ್ದ 700 ಕೋಟಿ ಹಣ ಎಲ್ಲಿ ಹೋಯಿತು? ಪಠ್ಯ ಮರುಮುದ್ರಣಕ್ಕೆ ತಗಲುವ ಕೊಟ್ಯಂತರ ಹಣ ಯಾರ ದುಡ್ಡು? ಅದೆಲ್ಲ ನಮ್ಮ ಜನರ ದುಡ್ಡು. ಅದನ್ನು ಪೋಲು ಮಾಡಲು ಇವರಿಗೆ ಯಾರು ಅಧಿಕಾರ ಕೊಟ್ಟವರು? ಸತ್ಯ ಮಾತಾಡುವವರು, ಇವರ ಜನವಿರೋಧಿ ನೀತಿಗಳನ್ನು ಟೀಕಿಸುವವರು ದೇಶದ್ರೋಹಿಗಳೇ? ಸರ್ಕಾರ ಮಾಡಬೇಕಾದ ಕೆಲಸ ಮಾಡದೇ ಪುಟ್ಟ ಮಕ್ಕಳ ತಲೆಯಲ್ಲಿ ಕೋಮುವಾದಿ ವಿಷ ಬೀಜ ಬಿತ್ತಲು ಮುಂದಾಗಿದೆ.

ʼಭಾರತದಲ್ಲಿ 74 ಮಿಲಿಯನ್ ಪ್ರಜೆಗಳು ಕಡುಬಡತನಕ್ಕೆ ಬಲಿಯಾಗಿ ಹಸಿವಿನಿಂದ ಬಳಲುತ್ತಿದ್ದಾರೆʼ ಎಂದು 2022ರ ಜಾಗತಿಕ ಆಹಾರ ನಿಯಮ ವರದಿ ಹೇಳಿದೆ. ಅದನ್ನು ಅಂತರರಾಷ್ಟ್ರೀಯ ಆಹಾರ ನಿಯಮ ಸಂಶೋಧನಾ ಸಂಸ್ಥೆಯು ಬಿಡುಗಡೆ ಮಾಡಿದೆ. ಅದರ ಕಡೆ ಗಮನ ಹರಿಸಬೇಕಿದೆ. ಅದರ ಬಗ್ಗೆ ಸರ್ಕಾರಗಳಿಗೆ ಕಾಳಜಿ ಇಲ್ಲ.

ಬರಗೂರು ರಾಮಚಂದ್ರಪ್ಪನವರು ಪಠ್ಯಪುಸ್ತಕ ಪುನರ್ ಪರಿಶೀಲನೆಯ ಕುರಿತು ಪತ್ರಿಕಾ ಹೇಳಿಕೆ ನೀಡಿ ʼಶಿಕ್ಷಣ ಸಚಿವ ಬಿ.ಸಿ.ನಾಗೇಶರವರು ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಗಾಂಧೀ, ಅಂಬೇಡ್ಕರ್, ಕುವೆಂಪುರವರನ್ನು ಬಿಟ್ಟು ಯಾವುದೇ ಪಠ್ಯಪುಸ್ತಕ ರಚನೆಯಾಗಲು ಸಾಧ್ಯವೇ ಇಲ್ಲ. ಶಿಕ್ಷಣ ಸಚಿವರು ಹೇಳಿರುವುದು ಅಪ್ಪಟ ತಪ್ಪು ಮಾಹಿತಿʼ ಎಂದು ಹೇಳಿದ್ದಾರೆ. ಮಾನ್ಯ ಸಚಿವರು ವಾದಕ್ಕೆ ಇಳಿಯುವ ಬದಲು ವಿವಾದವನ್ನು ಬಗೆಹರಿಸಿ ಶೈಕ್ಷಣಿಕ ಕ್ಷೇತ್ರದ ಘನತೆಯನ್ನು ಕಾಪಾಡಬೇಕು ಎಂದು ಕೋರಿದ್ದಾರೆ. ಸಚಿವರು ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಸಮಿತಿಯ ಅಧ್ಯಕ್ಷನ ಸಮರ್ಥನೆ ಮಾಡಿರುವ ರೀತಿ ಹೇಸಿಗೆ ಹುಟ್ಟಿಸುವಂತಿದೆ.

ಪಿ.ಲಂಕೇಶ್. ಸಾರಾ ಅಬೂಬಕರ್, ಬಿ.ಟಿ. ಲಲಿತಾ ನಾಯಕ್, ಅರವಿಂದ ಮಾಲಗತ್ತಿ, ಕೆ.ನೀಲಾ, ಜಿ.ರಾಮಕೃಷ್ಣರವರ ಪಠ್ಯಗಳನ್ನು ತೆಗೆದು ಹಾಕಿ ಅದರ ಬದಲಿಗೆ ಆರ್.ಎಸ್.ಎಸ್ ಸಂಸ್ಥಾಪಕ ಕೇಶವ್ ಬಲರಾಮ್ ಹೆಡ್ಗೇವಾರ್ ಮತ್ತು ಚಕ್ರವರ್ತಿ ಸೂಲಿಬೆಲೆ ಪಾಠಗಳನ್ನು ಸೇರಿಸಲಾಗಿದೆ. ಇದರಿಂದ ಬೇಸರಗೊಂಡ ದೇವನೂರು ಮಹಾದೇವರವರು ʼಈ ಶಾಲಾ ಪಠ್ಯದಲ್ಲಿ ನನ್ನ ಬರಹವನ್ನು ಸೇರಿಸಲು ನನಗೆ ಒಪ್ಪಿಗೆ ಇಲ್ಲʼ ಎಂದು ತಮ್ಮ ಬರಹವನ್ನು ಹಿಂದಕ್ಕೆ ಪಡೆಯಲು ಪತ್ರ ಬರೆದಿದ್ದಾರೆ. ಒಬ್ಬ ಸಾಹಿತಿ ತಮ್ಮ ಲೇಖನವನ್ನು ಹಿಂದಕ್ಕೆ ಪಡೆದ ಘಟನೆ ಕರ್ನಾಟಕದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿ ನಡೆದಿದೆ. ಕುವೆಂಪು ಅವರಂತಹ ಮೇರು ವ್ಯಕ್ತಿತ್ವವನ್ನು ನಿಂದಿಸಿ ಬರೆದ ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕ ಸಮಿತಿ ಅಧ್ಯಕ್ಷರಾಗಲು ಯಾವ ರೀತಿಯ ಅರ್ಹತೆ ಪಡೆದಿದ್ದಾರೆ? ನಮ್ಮ ನಾಡಗೀತೆಯನ್ನು ಗೇಲಿ ಮಾಡಿದ, ವಿಕೃತ ಮನಸಿನ ವ್ಯಕ್ತಿ ನಮ್ಮ ಮಕ್ಕಳ ಪಠ್ಯ ಪುಸ್ತಕ ಸಮಿತಿಗೆ ಅಧ್ಯಕ್ಷನಾಗಿರುವುದು ರಾಜ್ಯದ ದುರಂತವೇ ಸರಿ.

ಈ ಮುಖ್ಯ ಪಠ್ಯಪುಸ್ತಕ ಸಮಿತಿಯಲ್ಲಿರುವ 7 ಜನರಲ್ಲಿ 6 ಜನ ಬ್ರಾಹ್ಮಣರಾಗಿದ್ದಾರೆ. ಹೊಸದಾಗಿ ಸೇರಿಸಿದ 10 ಪಠ್ಯಗಳನ್ನು 9 ಪಠ್ಯಗಳು ಬ್ರಾಹ್ಮಣರವು. ಬರಹಗಳನ್ನು ಕೈಬಿಟ್ಟ ಸಾಹಿತಿಗಳೆಲ್ಲ ಮಹಿಳೆಯರು ಮತ್ತು ಬ್ರಾಹ್ಮಣೇತರ ಸಮುದಾಯದವರು. ಬುದ್ಧ, ಬಸವ, ಅಂಬೇಡ್ಕರ್, ಭಗತ್‍ಸಿಂಗ್, ಟಿಪ್ಪುಸುಲ್ತಾನ, ನಾರಾಯಣಗುರು, ಪೆರಿಯಾರ್, ವಿವೇಕಾನಂದರಂತಹ ಸಾಧಕರು ಎಲ್ಲ ಜಾತಿ, ಮತ, ಪಂಥಗಳನ್ನು ಮೀರಿನಿಂತವರು. ಇವರನ್ನು ತನ್ನ ರಾಜಕೀಯ ಸ್ವಾರ್ಥಕ್ಕೆ ಬಲಿ ಕೊಡಬಾರದು. ಪಠ್ಯವೆಂದರೆ ಯಾವುದೇ ಪಕ್ಷದ ಪ್ರಣಾಳಿಕೆಯಲ್ಲ.

ಸಾಹಿತ್ಯ ಲೋಕದ ಮಹಿಳೆಯರಿಗೆ ಅವಮಾನ

ಪಠ್ಯದಲ್ಲಾದರೂ ಮಹಿಳೆಯರಿಗೇನಾದರೂ ನ್ಯಾಯ ಕೊಟ್ಟಿದ್ದಾರೆಯೇ ಎಂದು ದೀಪ ಹಚ್ಚಿ ಹುಡುಕಿದರೂ ಸಿಗುವುದಿಲ್ಲ. ಇಲ್ಲಿ ಯಾವುದೇ ಸಮಾನತೆ, ಜ್ಯಾತ್ಯತೀತತೆ, ಸೌಹಾರ್ದತೆಯ ಆಶಯಗಳೇ ಇಲ್ಲ. ಹೆಣ್ಣನ್ನು ದೇವತೆಯಾಗಿ ಪೂಜಿಸುತ್ತೇವೆ ಎಂದು ಹೇಳುವ ಇವರು 10ನೇ ತರಗತಿಯ ಕನ್ನಡ ಪಠ್ಯದಲ್ಲಿ ಗದ್ಯಭಾಗದಲ್ಲಿರುವ 8 ಪಠ್ಯಗಳೂ ಪುರುಷರವೇ ಆಗಿವೆ. ಪದ್ಯಭಾಗದಲ್ಲಿ ನೋಡಿದರೆ ಅಲ್ಲಿಯೂ 8 ಪದ್ಯಗಳಿದ್ದೂ, ಒಬ್ಬ ಮಹಿಳೆಗೂ ಅಲ್ಲಿ ಪ್ರವೇಶ ದೊರೆಯದಿರುವುದಕ್ಕೆ ಯಾವ ಸಮರ್ಥನೆಯಿದೆ! ಇದು ಸಾಂಸ್ಕೃತಿಕ ಲೋಕದ ಮಹಿಳೆಯರಿಗೆ ಮಾಡಿರುವ ಅವಮಾನ.

ವಿದ್ಯವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯ ಬರೆದ 3ನೆಯ ಪಠ್ಯ ʼಶುಕನಾಸನ ಉಪದೇಶʼ ದಲ್ಲಿ ಹೆಣ್ಣಿನ ಬಗ್ಗೆ ಬಹಳ ತುಚ್ಛವಾಗಿ ಬರೆಯಲಾಗಿದೆ. ʼಈ ಸಿರಿಯೆಂಬ ಹೊಸ ಹೆಣ್ಣನ್ನು ಕಂಡು ಮರುಳಾಗದವರನ್ನು ನಾನು ಕಂಡಿಲ್ಲ. ಎಲ್ಲರೂ ಆಕೆಯತ್ತ ಆಕರ್ಷಿತರಾದವರೇ. ಎಲ್ಲರೂ ಆಕೆಯಿಂದ ಮೋಸ ಹೋಗುವವರೇ. ಯಾವನೇ ಒಬ್ಬನನ್ನು ನಿರ್ವಂಚನೆಯಿಂದ ಪ್ರೇಮಿಸುವುದು ಆಕೆಯ ಜಾಯಮಾನಕ್ಕೇ ಸಲ್ಲದು. ಕೆಟ್ಟ ನಡತೆಯ ಇಂಥ ಸಿರಿಯೆಂಬ ಹೆಣ್ಣು ಹೇಗೋ ದೈವಯೋಗದಿಂದ ಕೆಲ ಮಂದಿ ರಾಜರಿಗೆ ಒಲಿಯುತ್ತಾಳೆ. ಅಲ್ಲಿಗೆ ಮುಗಿಯಿತು ಅವರ ಕತೆ. ಏನು ಸಂಭ್ರಮ. ಏನು ಕೋಲಾಹಲ! ಜಗತ್ತಿನ ಎಲ್ಲ ದೌರ್ಜನ್ಯಗಳಿಗೆ ಅವರು ಆಸರೆʼ ಎಂದು ಹೇಳುವ ಲೇಖಕರಿಗೆ ಯಾವ ಮಹಿಳಾ ಸಂವೇದನೆಯೂ ಇಲ್ಲ.

ಇದನ್ನು ಓದಿದ್ದೀರಾ? ಪಠ್ಯಪುಸ್ತಕ ಪರಿಷ್ಕರಣೆ ಹೊಸ ಶಿಕ್ಷಣ ನೀತಿಯ ಶಿಫಾರಸುಗಳನ್ನು ಪಾಲಿಸಿಲ್ಲ (ಭಾಗ1): ಪುರುಷೋತ್ತಮ ಬಿಳಿಮಲೆ

ಗಣೇಶ ಶತಾವಧಾನಿಯವರ ʼಶ್ರೇಷ್ಠ ಭಾರತೀಯ ಚಿಂತನೆಗಳುʼ ಸನಾತನ ಸಂಸ್ಕೃತಿಯ ಪಾಠವಾಗಿದೆ. ಅದನ್ನು ಓದಿ ಎಲ್ಲರೂ ಆರ್.ಎಸ್.ಎಸ್. ಶಾಖೆ ಸೇರಬೇಕು. ನಮ್ಮ ಮಕ್ಕಳಿಗೆಲ್ಲ ತ್ರಿಶೂಲದೀಕ್ಷೆ, ಬಂದೂಕು ಕೊಟ್ಟು ಅವರ ಮಕ್ಕಳಿಗೆ ವಿದೇಶಕ್ಕೆ ಆಧ್ಯಯನಕ್ಕಾಗಿ ಕಳಿಸುವಂತೆ ಕಾಣುತ್ತದೆ. ಇಂತಹ ಧೀಕ್ಷೆ ಪಡೆದ ನಮ್ಮ ಮಕ್ಕಳು ಕ್ರಿಮಿನಲ್‌ಗಳಾಗಿ ಜೈಲುಸೇರಿದರೆ, ಅವರ ಮಕ್ಕಳು ಅಧಿಕಾರಿಗಳಾಗಿಯೋ ರಾಜಕಾರಣಿಯಾಗಿಯೋ ಆಗಿ ಅಧಿಕಾರ ನಡೆಸುತ್ತಾರೆ.

ಆದ್ದರಿಂದ ಶಿಕ್ಷಣ ಸಚಿವರು ಮಕ್ಕಳ ಉತ್ತಮ ಭವಿಷ್ಯದ ದೃಷ್ಟಿಯಿಂದ ಇಂತಹ ಕೀಳು ಮಟ್ಟದ ಪಠ್ಯಗಳನ್ನು ಅಳವಡಿಸದೇ, ಈಗಿನ ಪಠ್ಯಪುಸ್ತಕ ಸಮಿತಿಯನ್ನು ವಜಾಗೊಳಿಸಿ, ಹಿಂದಿನ ಪಠ್ಯವನ್ನು ಮಕ್ಕಳಿಗೆ ನೀಡಬೇಕು. ಇಲ್ಲವಾದರೆ, ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಈಗಾಗಲೇ ಪಠ್ಯಪುಸ್ತಕ ಮುದ್ರಣಕ್ಕೆ ವೆಚ್ಚವಾಗಿರುವ ಹಣದ ನಷ್ಟವನ್ನು ಮಾನ್ಯ ಸಚಿವರೇ ತುಂಬಿ ಕೊಡಬೇಕು. ಜನರ ದುಡ್ಡನ್ನು ಹೀಗೆ ಪೋಲು ಮಾಡುವುದು ನ್ಯಾಯವಲ್ಲ. ಪಠ್ಯದ ಕೇಸರೀಕರಣವನ್ನು ಸರ್ಕಾರ ತಕ್ಷಣ ನಿಲ್ಲಿಸಬೇಕು.

ನಿಮಗೆ ಏನು ಅನ್ನಿಸ್ತು?
1 ವೋಟ್