ಜಿಎಸ್‌ಟಿ| ಮಂಡಕ್ಕಿ ಭಟ್ಟಿಗಳಲ್ಲಿ ಆತಂಕದ ಕರಿಛಾಯೆ

Mandakki bhatti

ಸಾಮಾನ್ಯ ಜನರ ತಿನಿಸು ಮಂಡಕ್ಕಿ. ಹತ್ತಾರು ಹೆಸರುಗಳಲ್ಲಿ ಮತ್ತು ಹತ್ತಾರು ರೂಪಗಳಲ್ಲಿ ತಿನ್ನಲ್ಪಡುವ ವಿಶೇಷ ಖಾದ್ಯ. ಈ ಬಡವರ ತಿನಿಸಿನ ಮೇಲೂ ಕೇಂದ್ರ ಸರ್ಕಾರ ಜಿಎಸ್‌ಟಿ ವಿಧಿಸಿದೆ. ಈಗಾಗಲೇ ಮೂಲಸೌಕರ್ಯದ ಕೊರತೆಯಿಂದ ಬಳಲುತ್ತಿರುವ ಮಂಡಕ್ಕಿ ಉತ್ಪಾದಕ ಘಟಕಗಳ ಮಾಲೀಕರ ಆತಂಕಕ್ಕೆ ಕಾರಣವಾಗಿದೆ, ನಷ್ಟದ ಭಯವೂ ಆವರಿಸಿದೆ

ಬಹಳಷ್ಟು ವರ್ಷಗಳಿಂದ ಮಂಡಕ್ಕಿ ಎಲ್ಲ ತೆರಿಗೆಯಿಂದಲೂ ಮುಕ್ತವಾಗಿತ್ತು. ಇತ್ತೀಚೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಷ್ಕರಿಸಿದ ಜಿಎಸ್ಟಿ ಪಟ್ಟಿಯಲ್ಲಿ ಮಂಡಕ್ಕಿ ಕೂಡ ಸೇರಿಕೊಂಡಿದೆ. ಈ ಅಂಶವೇ ಮಂಡಕ್ಕಿ ತಯಾರಕರಿಗೂ, ಬಳಕೆದಾರರಿಗೂ ಮತ್ತು ವ್ಯಾಪಾರಸ್ಥರಿಗೂ ಕಂಟಕವಾಗಿ ಪರಿಣಮಿಸಲಿದೆ ಎಂಬ ಆತಂಕ ಶುರುವಾಗಿದೆ.

ರಾಜ್ಯದ ಮೂಲೆ ಮೂಲೆಗಳಿಗೂ ಅತಿ ಹೆಚ್ಚಿನದಾಗಿ ಮಂಡಕ್ಕಿಯನ್ನು ತಯಾರಿಸಿ ಸರಬರಾಜು ಮಾಡುವ ದಾವಣಗೆರೆ ನಗರದ ಮಂಡಕ್ಕಿ ಲೇಔಟ್‌ನ ತಯಾರಿಕಾ ಕೇಂದ್ರಗಳು ʼಮಂಡಕ್ಕಿ ಭಟ್ಟಿʼಗಳು ಎಂದೇ ಪ್ರಖ್ಯಾತಿ ಹೊಂದಿವೆ. ಆದರೆ ಇಲ್ಲಿ ಕೆಲಸ ಮಾಡುವವರ ಬಾಳು ಅತ್ಯಂತ ದುಸ್ಥಿತಿಯಲ್ಲಿದೆ. ಸರಿಯಾದ ಸುಸಜ್ಜಿತ ತಯಾರಿಕಾ ಕೇಂದ್ರಗಳಿಲ್ಲದೆ, ಸೋರುವ ಕಟ್ಟಡಗಳಲ್ಲಿ ಮಂಡಕ್ಕಿ ತಯಾರಿಸುವವರ ಬದುಕು ಅತ್ಯಂತ ಶೋಚನೀಯವಾಗಿದೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಕೆಟ್ಟ ದೂಳು, ಬೆಂಕಿಯ ಶಾಖ, ವಿಷಮಯ ಹೊಗೆ ಇವುಗಳ ಮಧ್ಯದಲ್ಲೇ ಮಂಡಕ್ಕಿ ತಯಾರಿಸುವ ಇವರು ವಯಸ್ಸಾಗುತ್ತಲೇ ಭೀಕರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ಕೂಡ ಸರ್ಕಾರ ಈಗ ಅವಶ್ಯಕ ಪದಾರ್ಥಗಳ ಪಟ್ಟಿಯಲ್ಲಿರುವ ಮಂಡಕ್ಕಿಯನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದು ತೆರಿಗೆ ವಿಧಿಸಿರುವುದು ತಯಾರಕರಿಗೆ ವ್ಯಾಪಾರಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.

ಮೊದಲಿಗೆ ವಿರೋಧ ವ್ಯಕ್ತವಾದ ನಂತರ ಇದೀಗ ಇಪ್ಪತ್ತೈದು ಲೀಟರ್‌ಗಳಿಗಿಂತಲೂ ಹೆಚ್ಚಿನ ಚೀಲಗಳಿಗೆ ಜಿಎಸ್ ಟಿ ವಿಧಿಸುವ ನಿರ್ಧಾರವನ್ನು ಕೈ ಬಿಟ್ಟಿದ್ದು ಇಪ್ಪತ್ತೈದು ಲೀಟರ್‌ಗಿಂತ ಕಡಿಮೆ ಇರುವ ಯಾವುದೇ ಅಳತೆಯ ಮಂಡಕ್ಕಿಯ ಚೀಲಗಳಿಗೆ ಶೇಕಡಾ 5 ಜಿಎಸ್‌ಟಿಯನ್ನು ವಿಧಿಸಿರುವುದು ಕೂಡ ಬಳಕೆದಾರರಿಗೆ ನುಂಗಲಾರದ ತುತ್ತಾಗಿದೆ. ಇಪ್ಪತ್ತು ಲೀಟರ್‌ನ ಚೀಲವೊಂದಕ್ಕೆ ಗ್ರಾಹಕರು ನೂರು ರೂಪಾಯಿಯನ್ನು ಪಾವತಿಸಿದರೆ ಜೊತೆಗೆ ಹೆಚ್ಚುವರಿಯಾಗಿ 5 ರೂಪಾಯಿಗಳ ಜಿಎಸ್‌ಟಿಯನ್ನು  ತೆರಬೇಕಾಗಿದೆ. ಇದರಿಂದಾಗಿ ಕಳೆದ 2 -3 ದಿನಗಳಲ್ಲಿಯೇ ಸರಕಿನ ತಯಾರಿಕೆ ಮತ್ತು ಸರಬರಾಜು ಅತ್ಯಂತ ಕಡಿಮೆಯಾಗಿ ತಯಾರಕರು ಮತ್ತು ವ್ಯಾಪಾರಸ್ಥರು ಕೂಡ ನಷ್ಟವನ್ನು ಅನುಭವಿಸುವಂತಾಗಿದೆ ಎನ್ನುತ್ತಾರೆ ಮಂಡಕ್ಕಿ ಉದ್ದಿಮೆದಾರರು ಮತ್ತು ಮಂಡಕ್ಕಿ ತಯಾರಿಕರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾಗಿರುವ ಮೊಹಮ್ಮದ್ ಅಕ್ಬರ್ ಅಲಿ.

ʼತಯಾರಿಕೆಗೆ ಬೇಕಾದ ಭತ್ತದ ಬೆಲೆ ಹೆಚ್ಚಾಗುತ್ತಿದೆ ಜೊತೆಗೆ ಕಾರ್ಮಿಕರ ಕೂಲಿ ಕೂಡ ಹೆಚ್ಚಾಗುತ್ತಿದೆ. ಹೀಗಿರುವಾಗ ಮಂಡಕ್ಕಿಗೆ ಜಿಎಸ್‌ಟಿ ವಿಧಿಸಿ ತೆರಿಗೆ ವ್ಯಾಪ್ತಿಗೆ ತಂದಿರುವುದು ಗ್ರಾಹಕರನ್ನು ಮಂಡಕ್ಕಿ ತಿನ್ನುವುದರಿಂದ ವಿಮುಖರನ್ನಾಗಿ ಮಾಡುವಂತಿದೆ. ವ್ಯಾಪಾರ ವ್ಯವಹಾರ ಇಳಿಮುಖವಾಗಿ ಮುಂದೆ ಮಂಡಕ್ಕಿ ಭಟ್ಟಿಗಳು ಇಲ್ಲದಂತಾಗುವ ಸನ್ನಿವೇಶ ಎದುರಾಗುತ್ತದೆ. ಆದ್ದರಿಂದ ಸರ್ಕಾರ ಈ ಕೂಡಲೇ ಗಮನಹರಿಸಿ ತೆರಿಗೆ ವ್ಯಾಪ್ತಿಯಿಂದ ಹೊರಗಿಡಬೇಕುʼ ಎಂದು ಅವರು ಆಗ್ರಹಿಸಿದರು.

ಇದನ್ನು ಓದಿದ್ದೀರಾ? ಬಡವರ ಜೇಬಿಗೆ ಕತ್ತರಿ ಹಾಕುವುದೇ ಬಿಜೆಪಿ ಸಾಧನೆ: ʼಆಪ್‌ʼ ಕಿಡಿ

ಮತ್ತೋರ್ವ ವ್ಯಾಪಾರಸ್ಥರಾದ ನಾಸಿರ್ ಕೋಲಾರಿ ಅವರು ಮಾತನಾಡಿ, ದಾವಣಗೆರೆ ವ್ಯಾಪ್ತಿಯಲ್ಲಿ ಸುಮಾರು 800ಕ್ಕೂ ಹೆಚ್ಚು ಮಂಡಕ್ಕಿ ತಯಾರಿಕೆಗೆ ಕೇಂದ್ರಗಳಿದ್ದು, ಇವುಗಳಲ್ಲಿ ಪ್ರತಿ ಕೇಂದ್ರಗಳಿಂದ ನಲವತ್ತಕ್ಕೂ ಹೆಚ್ಚು ಚೀಲಗಳಷ್ಟು ತಯಾರಿಸಲಾಗುತ್ತದೆ. ಪ್ರತಿ ಭಟ್ಟಿಯಲ್ಲೂ ಕೂಡ ಸುಮಾರು ಆರರಿಂದ ಏಳು ಚೀಲ ಭತ್ತಗಳು ಪ್ರತಿದಿನ ಖರ್ಚಾಗುತ್ತಿದ್ದು , 1ಚೀಲ ಭತ್ತಕ್ಕೆ 110 ಲೀಟರ್ ಮಂಡಕ್ಕಿ ಉತ್ಪಾದನೆಯಾಗುತ್ತದೆ. ಇದೀಗ ಜಿಎಸ್ ಟಿ ವ್ಯಾಪ್ತಿಗೆ ತಂದಿರುವ ಸರ್ಕಾರ ಮೊದಲಿಗೆ ಪ್ರತಿರೋಧದಿಂದ ಇಪ್ಪತೈದು ಲೀಟರ್ ನಂತರದ ಚೀಲಗಳಿಗೆ ಜಿಎಸ್ ಟಿಯನ್ನು ಕೈಬಿಟ್ಟಿದ್ದು ಇಪ್ಪತ್ತೈದಕ್ಕಿಂತ ಕಡಿಮೆ ಇರುವ ಮಾರಾಟದ ಪ್ಯಾಕ್ ಅಥವಾ ಚೀಲಗಳಿಗೆ ಜಿಎಸ್‌ಟಿಯನ್ನು ವಿಧಿಸಿದೆ. ಸಗಟು ಮಾರಾಟ ಮಾಡುವವರು ಮಾತ್ರ ಅತಿ ದೊಡ್ಡ ಚೀಲಗಳನ್ನು ಖರೀದಿಸುತ್ತಿದ್ದು ಸಣ್ಣ ಸಣ್ಣ ಅಂಗಡಿಗಳಲ್ಲಿ ಮಾಲ್‌ಗಳಲ್ಲಿ ಗ್ರಾಹಕರು 1, 2, 5 ಅಥವಾ ಹತ್ತು ಅಥವಾ  ಇಪ್ಪತ್ತು ಲೀಟರ್‌ನ ಚೀಲಗಳನ್ನಷ್ಟೆ ಖರೀದಿಸುತ್ತಾರೆ. ಇದರಿಂದ ಅವರಿಗೂ ಕೂಡ ಜಿಎಸ್‌ಟಿ ಹೊರೆ ಬೀಳುತ್ತಿದ್ದು, ಅವರು ಬಳಕೆಯನ್ನು ಕಮ್ಮಿ ಮಾಡಿದರೆ ವ್ಯಾಪರಸ್ಥರಾದ ನಮಗೆ ಮತ್ತು ತಯಾರಿಕಾ ಕೇಂದ್ರಗಳಿಗೆ ಕೂಡ ಇದರ ನೇರ ದುಷ್ಪರಿಣಾಮ  ಬೀರುತ್ತದೆ ಎಂದರು.

ತೆರಿಗೆ ಹೊರೆಯಿಂದಾಗಿ ವ್ಯಾಪಾರ ಸ್ಥಗಿತಗೊಳ್ಳುವ ಅಥವಾ ಮುಂದೆ ತಯಾರಿಕೆ ಕೇಂದ್ರಗಳು ಮುಚ್ಚಿ ಹೋಗುವ ಪರಿಸ್ಥಿತಿ ಎದುರಾಗುತ್ತದೆ. ಈಗಾಗಲೇ ತಯಾರಿಕಾ ಕೇಂದ್ರದ ಮಾಲೀಕರು ಮತ್ತು ಅಲ್ಲಿನ ಕೆಲಸಗಾರರು ಸೂಕ್ತ ಸೌಲಭ್ಯಗಳಿಲ್ಲದೆ ರೋಗರುಜಿನಗಳಿಂದ ನರಳುತ್ತಿದ್ದು, ಇದರಿಂದ ಮತ್ತಷ್ಟು ಜರ್ಜರಿತರಾಗಿ ಹೋಗಿದ್ದಾರೆ. ಹಾಗಾಗಿ ಈ ಕೂಡಲೇ ಜಿಎಸ್‌ಟಿ ವ್ಯಾಪ್ತಿಯಿಂದ ಮಂಡಕ್ಕಿಯನ್ನು ಹೊರಗಿಡಬೇಕು ಎಂಬುದು ವ್ಯಾಪಾರಸ್ಥರ ಒತ್ತಾಯ.

ನಿಮಗೆ ಏನು ಅನ್ನಿಸ್ತು?
1 ವೋಟ್