ಜೊತೆಗಿರಬೇಕಲ್ಲವೇ ಚಂದಿರರು?; ಇದು ಕರ್ನಾಟಕದ ಸ್ವಂತಿಕೆಗಾದ ಅವಮಾನ

jotegiruvanu chandira

ನೂರಾರು ಜನ ನಾಟಕ ನೋಡಲೆಂದೇ ಸೇರಿರುವ ಒಂದು ಜಾಗದಲ್ಲಿ, ನಾಲ್ಕೈದು ಜನರು ಬಂದು ನಾಟಕ ನಿಲ್ಲಿಸಿ ಎಂದಾಗ ಉಳಿದವರ ಸೊಲ್ಲೇಕೆ ಅಡಗುತ್ತದೆ? ಚಂದಿರನಂತೆ ತಣ್ಣಗೆ ಬೆಳಕನೀಯುವ ಗುಣ ಹೊಂದಿದವರು ಅಂತಹ ಸಂದರ್ಭದಲ್ಲಿ ಜೊತೆ ನಿಂತು ನಾವು ಇದು ಮುಂದುವರೆಯುವುದರ ಪರವಾಗಿದ್ದೇವೆ ಎಂದೇಕೆ ಹೇಳುವುದಿಲ್ಲ? 

ನಿನ್ನೆ ಸಂಜೆ ಶಿವಮೊಗ್ಗ ಜಿಲ್ಲೆ, ಸೊರಬ ತಾಲೂಕಿನ ಆನವಟ್ಟಿಯಲ್ಲಿ ಕರ್ನಾಟಕವು ತಲೆತಗ್ಗಿಸಬೇಕಾದ ಘಟನೆ ನಡೆದಿದೆ. ‘ಜತೆಗಿರುವನು ಚಂದಿರ’ ಎಂಬ ನಾಟಕವು ಪ್ರದರ್ಶನವಾಗುತ್ತಿರುವಾಗ ‘ಈ ನಾಟಕ ಇಲ್ಲಿ, ಈಗ ನಡೆಯಬಾರದು’ ಎಂದು ಅದನ್ನು ತಡೆಯಲಾಗಿದೆ. ಹಿಂದೂ ಮುಸ್ಲಿಮರ ವಿಚಾರಕ್ಕೆ ಸಂಬಂಧಿಸಿದಂತೆ ಈ ನಾಟಕ ನಡೆಯುತ್ತಿದ್ದು, ಇಂದಿನ ಪರಿಸ್ಥಿತಿಯಲ್ಲಿ ಅದನ್ನು ಪ್ರದರ್ಶನ ಮಾಡುವುದು ಸರಿಯಲ್ಲ ಎಂದು ಅದಕ್ಕೆ ಅಡ್ಡಿಪಡಿಸಿದವರ ತಕರಾರು. ಜಾತಿ-ಧರ್ಮಗಳಾಚೆ ದುಡಿಮೆಯೇ ಬದುಕಾಗಿರುವ ಜನಸಮೂಹಗಳು ಯಾವ ರೀತಿ ತೊಂದರೆಗೆ ಸಿಲುಕುವ ಕುರಿತ ನಾಟಕವಿದು. ಅಮೆರಿಕದ ಜೋಸೆಫ್ ಸ್ಟೀವ್‌ರ ‘ಫಿಡ್ಲರ್ ಆನ್ ದಿ ರೂಫ್’ ನಾಟಕವನ್ನು ಜಯಂತ್ ಕಾಯ್ಕಿಣಿ ಕನ್ನಡಕ್ಕೆ ತಂದಿದ್ದಾರೆ. ತಲೆ ತಗ್ಗಿಸಬೇಕಿರುವುದು ಅಂಥವರಾರೋ ಬಂದು ಅಡ್ಡಿ ಮಾಡಿದರು ಎಂಬ ಕಾರಣಕ್ಕಲ್ಲ; ಅಡ್ಡಿಯ ನಂತರ ನಾಟಕ ಮುಂದುವರೆಯದಿದ್ದಕ್ಕೆ ತಲೆ ತಗ್ಗಿಸಬೇಕು. ಈ ರೀತಿ ಹೇಳಲು ಒಂದು ಕಾರಣವಿದೆ.

ಈ ನಾಟಕದ ಆಯೋಜನೆ ಶಿವಮೊಗ್ಗ ಜಿಲ್ಲೆಯ ರಂಗ ಬೆಳಕು ತಂಡದ್ದು. ಕರ್ನಾಟಕದುದ್ದಕ್ಕೂ ನಾಟಕಗಳನ್ನು ಪ್ರದರ್ಶಿಸಿರುವ ಈ ತಂಡದ ಮುಖ್ಯಸ್ಥರು ಕೊಟ್ರಪ್ಪ ಹಿರೇಮಾಗಡಿ. ಅತ್ಯಂತ ಕ್ರಿಯಾಶೀಲ ರಂಗತಂಡವನ್ನು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ನಡೆಸಿಕೊಂಡು ಬರುತ್ತಿದ್ದಾರೆ. ಕೊಟ್ರಪ್ಪ ಅದೇ ಸೊರಬ ತಾಲೂಕಿನವರು; ಶೋಷಿತ ಸಮುದಾಯದ ಹಿನ್ನೆಲೆಯವರು, ಹೈಸ್ಕೂಲ್ ಶಿಕ್ಷಕರು. ಶಿವಮೊಗ್ಗ ಜಿಲ್ಲೆಯಲ್ಲಿ ನೀನಾಸಂ ಇದೆ. ನೀನಾಸಂ ಮಾತ್ರವೇ ಇಲ್ಲ. ವಿವಿಧ ಹಿನ್ನೆಲೆಯ ಹಲವು ರಂಗಾಸಕ್ತರು ರಂಗತಂಡಗಳನ್ನು ಕಟ್ಟಿಕೊಂಡು ಬಹುವಿಧದ ರಂಗಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಹೆಚ್ಚಿನವರು ಬೀದಿಗೆ ಬಂದು ಹೋರಾಟ, ಪ್ರತಿಭಟನೆಗಳಲ್ಲಿ ಸೇರದಿರಬಹುದು; ಆದರೆ ಸಮಾಜದ ನೆಮ್ಮದಿಯನ್ನು ಹೆಚ್ಚಿಸುವ ಪ್ರತ್ಯಕ್ಷ ಹಾಗೂ ಪರೋಕ್ಷ ಕೆಲಸಗಳಲ್ಲಿ ಅವರೆಲ್ಲರೂ ಭಾಗಿ.

ಸೊರಬ ತಾಲೂಕಿನಲ್ಲಿ ಹಾಲಿ ಬಿಜೆಪಿ ಶಾಸಕರಿದ್ದಾರೆ. ಕುಮಾರ್ ಬಂಗಾರಪ್ಪನವರ ತಂದೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರೂ ಬಿಜೆಪಿಗೆ ಹೋಗಿ ಬಂದವರೇ. ಆದರೂ ಉಳಿದ ತಾಲೂಕುಗಳಿಗೆ ಹೋಲಿಸಿದರೆ ಭದ್ರಾವತಿ ಹಾಗೂ ಸೊರಬದಲ್ಲಿ ಸಾಮಾಜಿಕ ಸಾಮರಸ್ಯ ಕದಡುವ ಶಕ್ತಿಗಳಿಗೆ ಬಲ ಕಡಿಮೆ. ನಿನ್ನೆ ರಾತ್ರಿ ನಾಟಕ ಪ್ರದರ್ಶನಕ್ಕೆ ಅಡ್ಡಿ ಮಾಡಿದವರಿಗೂ ಐದು ನಿಮಿಷಕ್ಕಿಂತ ಹೆಚ್ಚು ಕಾಲ ಅಲ್ಲೇ ನಿಲ್ಲುವ ಧೈರ್ಯವಿರಲಿಲ್ಲ. ಹೀಗಿದ್ದೂ, ನಿನ್ನೆ ನಾಟಕ ನಿಂತು ಹೋಯಿತು. ಆ ಮೂಲಕ ಶಿವಮೊಗ್ಗದ ಹಾಗೂ ಕರ್ನಾಟಕದ ಪ್ರಜ್ಞಾವಂತರು ತಲೆತಗ್ಗಿಸುವಂತಾಯಿತು.

ಹೀಗೇಕಾಗುತ್ತದೆ? ನೂರಾರು ಜನ ನಾಟಕ ನೋಡಲೆಂದೇ ಸೇರಿರುವ ಒಂದು ಜಾಗದಲ್ಲಿ, ನಾಲ್ಕೈದು ಜನರು ಬಂದು ನಾಟಕ ನಿಲ್ಲಿಸಿ ಎಂದಾಗ ಉಳಿದವರ ಸೊಲ್ಲೇಕೆ ಅಡಗುತ್ತದೆ? ಚಂದಿರನಂತೆ ತಣ್ಣಗೆ ಬೆಳಕನೀಯುವ ಗುಣ ಹೊಂದಿದವರು ಅಂತಹ ಸಂದರ್ಭದಲ್ಲಿ ಜೊತೆ ನಿಂತು ನಾವು ಇದು ಮುಂದುವರೆಯುವುದರ ಪರವಾಗಿದ್ದೇವೆ ಎಂದೇಕೆ ಹೇಳುವುದಿಲ್ಲ? ಈ ಪ್ರಶ್ನೆಯು, ಅಂದರೆ ಪ್ರಜ್ಞಾವಂತರ ಮೌನದ ಅಪಾಯವು ನಮ್ಮನ್ನು ಕಾಡಬೇಕು. ಅವರಷ್ಟೇ ಅಲ್ಲದೇ, ಕಾರ್ಯಕ್ರಮದ ಆಯೋಜಕರುಗಳೂ ಸಹಾ ‘ಈ ನಾಟಕ ಅಥವಾ ಸಿನೆಮಾ ಅಥವಾ ಕಾರ್ಯಕ್ರಮಕ್ಕೆ ಬಂದು ಅಡ್ಡಿ ಮಾಡಲು ಬಿಡೆವು’ ಎಂದು ಎದೆ ಸೆಟಿಸಿ ನಿಲ್ಲಲು ಹಿಂಜರಿಯುವುದಿದೆಯಲ್ಲಾ, ಅದು ಮೊದಲು ನಿಲ್ಲಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅಬ್ಬರ ಮಾಡಿದಷ್ಟಕ್ಕೆ, ಟಿವಿ ಚಾನೆಲ್‌ಗಳಲ್ಲಿ ಜೀವವಿರೋಧಿ ಜನರು ಕೂಗಾಟ ನಡೆಸಿದ ಮಾತ್ರಕ್ಕೆ, ಕೆಲವು ಬಾಯಿ ಹರುಕರು ಬಾಯಿಗೆ ಬಂದದ್ದು ಮಾತಾಡಿದಷ್ಟಕ್ಕೆ ಕರ್ನಾಟಕವು ಅವರ ಸೊತ್ತಾಗುವುದಿಲ್ಲ. ಇಂದಿಗೂ ಕರ್ನಾಟಕದ ಬಹುಸಂಖ್ಯಾತರು ಆ ನಿಲುವಿನ ಪರ ಇಲ್ಲ.

Image
ಅರವಟ್ಟಿಯಲ್ಲಿ ಭಾನುವಾರ ರಾತ್ರಿ ನಡೆಯುತ್ತಿದ್ದ ನಾಟಕವನ್ನು ವಿಎಚ್‌ಪಿಯ ಮುಖಂಡರು ಅರ್ಧಕ್ಕೆ ತಡೆದರು
ಸೊರಬದ ಆನವಟ್ಟಿಯಲ್ಲಿ ಭಾನುವಾರ ರಾತ್ರಿ ನಡೆಯುತ್ತಿದ್ದ ನಾಟಕ ಪ್ರದರ್ಶನವನ್ನು ಅರ್ಧಕ್ಕೆ ನಿಲ್ಲಿಸಲಾಯಿತು

ಪುಂಡರನ್ನು ತಡೆಯದ ಪೊಲೀಸರು
ವಾಸ್ತವದಲ್ಲಿ ನಿನ್ನೆ ಅಡ್ಡಿ ಪಡಿಸಲು ಬಂದವರಿಗೆ ಸಂಖ್ಯಾಬಲವೂ ಇರಲಿಲ್ಲ; ಪುಂಡು ಧೈರ್ಯವೂ ಇರಲಿಲ್ಲ. ಹೀಗೆ ಬಂದು ಒಂದೆರಡು ಮಾತಾಡಿ ಹಾಗೆ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಬರುವಾಗಲೇ ಪೊಲೀಸರನ್ನೂ ಕರೆತಂದು ‘ಮುಂದಿನ ಕೆಲಸ ಮಾಡುವ’ ಜವಾಬ್ದಾರಿಯನ್ನು ಅವರಿಗೇ ಕೊಟ್ಟು ಹೊರಟಿದ್ದಾರೆ. ಅಲ್ಲಿಗೆ ಬಂದ ಪೊಲೀಸರು ‘ಇದು ವಿವಾದಾಸ್ಪದವಾದ ನಾಟಕ, ಹೇಗೂ ನಿಲ್ಲಿಸಿದ್ದೀರಿ, ನಿಲ್ಲಿಸಿಬಿಡಿ’ ಎಂದು ತಾಕೀತು ಮಾಡಿದ್ದಾರೆ. ಆಯೋಜಕರಿಗೆ ಅಲ್ಲಿಂದ ಮುಂದುವರೆಯಲಾಗಿಲ್ಲ. ಎಲ್ಲರೂ ಮೌನವಾಗಿರಲಿಲ್ಲ; ಆಯೋಜಕರೂ ಗಟ್ಟಿ ಜನ. ಅವರ ಜೊತೆಗೆ ಕೆಲವು ರಂಗಾಸಕ್ತರೂ ದನಿಯೆತ್ತಿದ್ದಾರೆ. ಆ ಮಟ್ಟಿಗೆ ಸೊರಬದಲ್ಲಿ ಪ್ರಜ್ಞಾವಂತಿಕೆ ಜೀವಂತವಾಗಿದೆ. ಹಾಗಿದ್ದೂ ನಾಟಕ ನಡೆಯಲಿಲ್ಲ ಎಂಬುದು ವಾಸ್ತವ. ಏಕೆಂದರೆ ಆ ಸಭಾಂಗಣದಲ್ಲಿದ್ದ ಎಲ್ಲರೂ, ಸಭಾಂಗಣದ ಹೊರಗಿನ ಎಲ್ಲರೂ ಜೊತೆಗಿರುವ ಚಂದಿರರು ಎಂಬ ವಿಶ್ವಾಸ ಆಯೋಜಕರುಗಳಿಗೆ ಇರಲಿಲ್ಲ ಎಂಬುದೇ ವಾಸ್ತವ. ಈ ‘ವಾಸ್ತವ’ವನ್ನು ಬದಲಿಸಬೇಕು. ಇಲ್ಲದಿದ್ದರೆ ಕರ್ನಾಟಕವು ಪೂರಾ ತಲೆ ತಗ್ಗಿಸಿಯೇ ಇರುವಂತಾಗುತ್ತದೆ.

ಇದು ಕರ್ನಾಟಕಕ್ಕೆ ತಕ್ಕುದ್ದಲ್ಲ. ಇದರ ಪರಂಪರೆಯಲ್ಲಿ ಭಿನ್ನ ವಿಚಾರಗಳ ಅಭಿವ್ಯಕ್ತಿಗೆ ಉದ್ದಕ್ಕೂ ಅವಕಾಶವಿದ್ದೇ ಇದೆ. ವ್ಯವಸ್ಥೆಯನ್ನು ಪ್ರಶ್ನಿಸಿದ ಬಸವಣ್ಣನ ವಿಚಾರ ಹಾಗಿರಲಿ, ಅನುಭವ ಮಂಟಪದಲ್ಲೇ ಬಸವಣ್ಣನನ್ನೂ ಪ್ರಶ್ನಿಸಿದ ವಚನಕಾರ್ತಿಯರು ಉಸಿರಾಡಿದ ನೆಲವಿದು. ಇಡೀ ದೇಶ ರಾಜಕೀಯವಾಗಿ ಒಂದು ದಿಕ್ಕಿನೆಡೆ ಯೋಚಿಸುತ್ತಿದ್ದಾಗ, ಅದಕ್ಕೆ ವಿರುದ್ಧವಾಗಿ ಕರ್ನಾಟಕವು ನಿಂತಿತ್ತು ಎಂಬುದನ್ನು ಮರೆಯಬಹುದೇ? ಇಡೀ ದೇಶದ ರೈತ ಚಳವಳಿಗೆ ಕರ್ನಾಟಕವು ನಾಯಕತ್ವ ಕೊಟ್ಟಿತ್ತು; ಮಹಾರಾಷ್ಟ್ರದ ದಲಿತ್ ಪ್ಯಾಂಥರ್ಸ್ ನಂತರ ಅಂತಹ ಸ್ವಾಭಿಮಾನಿ ಚಳವಳಿಯು ಇನ್ನೂ ವಿಶಿಷ್ಟ ಬಗೆಯಲ್ಲಿ ಇಲ್ಲಾಗಿತ್ತು ಎಂಬುದನ್ನೆಲ್ಲಾ ನೆನಪಿನಿಂದ ಅಳಿಸಿ ಕೂತಿದೆಯೇ ಕರ್ನಾಟಕ?

ಮೌನವಾಗಿರುವವರ ಸಂಖ್ಯೆ ಹೆಚ್ಚು!

ಬಹಳ ಕಡಿಮೆ ಸಂಖ್ಯೆಯಲ್ಲಿರುವ ಕೆಲವರೇ ಕರ್ನಾಟಕದ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಬೇಕು ಬೇಡಗಳನ್ನು ನಿರ್ಧರಿಸಲು ಅವಕಾಶ ಕೊಟ್ಟರೆ ಕರ್ನಾಟಕದ ಸ್ವಂತಿಕೆ ಸತ್ತು ಹೋದಂತೆಯೇ ಸರಿ. ಬಹಳ ಹೆಚ್ಚು ಸಂಖ್ಯೆಯಲ್ಲಿರುವವರಿಗೂ ಆ ಹಕ್ಕಿರುವುದಿಲ್ಲ. ಸೊರಬದಂತಹ ಜಾಗದಲ್ಲಿ, ಶೂದ್ರ-ದಲಿತ ಸಮುದಾಯಕ್ಕೆ ಸೇರಿದ ವಿಚಾರವಂತರೇ ಹೆಚ್ಚಿದ್ದ ಜಾಗದಲ್ಲಿ, ಅವರ ಊರುಗಳಿಗೆ ಸಮೀಪವೇ ಇರುವ ಹೋಬಳಿ ಕೇಂದ್ರದಲ್ಲಿ ನಿನ್ನೆ ನಾಟಕ ಮುಂದುವರೆಸಲಾಗದೇ ಹೋಗಿದ್ದು ಸಣ್ಣ ವಿಚಾರವಲ್ಲ. ಅವರಾದರೂ ತಮಗೆ ಸಾಧ್ಯವಿರುವ ಪ್ರಮಾಣಕ್ಕೆ ಎದುರಿಸಿ ನಿಂತರು. ಹೆಚ್ಚಿನ ಕಡೆ ಅಷ್ಟೂ ಆಗುವುದಿಲ್ಲ. ಇದು ಬಹು ಕಡಿಮೆ ಸಂಖ್ಯೆಯಿರುವವರ ಶಕ್ತಿಯನ್ನು ವಿಪರೀತವಾಗಿ ಬಿಂಬಿಸಿರುವುದರಿಂದ ಆಗಿರುವ ಅಪಾಯ. ಇಲ್ಲ, ಅವರ ಸಂಖ್ಯೆ ಹೆಚ್ಚಿಲ್ಲ. ಮೌನವಾಗಿರುವವರ ಸಂಖ್ಯೆ ಹೆಚ್ಚು. ತಮ್ಮದೇ ರೀತಿಯಲ್ಲಿ ದನಿಯೆತ್ತುತ್ತಿರುವವರೂ ಸಹಾ ಕರ್ತವ್ಯಪ್ರಜ್ಞೆಯಿಂದ ಅದನ್ನು ಮಾಡುತ್ತಿದ್ದಾರೆ ಅಷ್ಟೇ. ಕರ್ನಾಟಕದ ಪರಂಪರೆಗೆ, ವರ್ತಮಾನಕ್ಕೆ ಇರುವ ಸತ್ವದ ಕುರಿತು ವಿಶ್ವಾಸವಿಲ್ಲದೇ, ಕೇವಲ ಕರ್ತವ್ಯಪ್ರಜ್ಞೆಯಿಂದ ದನಿಯೆತ್ತುತ್ತಿದ್ದಾರೆ.

ಇಡೀ ಕರ್ನಾಟಕವು ಒಂದು ತೀರ್ಮಾನಕ್ಕೆ ಬರಬೇಕು. ಇಲ್ಲಿ ಕೆಲವು ಪುಂಡರು ಸಾರ್ವಜನಿಕ ವಾಗ್ವಾದದ ದಿಕ್ಕು-ದೆಸೆ ನಿರ್ಧರಿಸಲು ಬಿಡಬಾರದು. ಪುಂಡರ ಬೆನ್ನ ಹಿಂದೆ ಬಂದು, ರಾಜೀ ಪಂಚಾಯಿತಿಯಲ್ಲಿ ಖಾಜೀ ನ್ಯಾಯ ಮಾಡುವ ಪೊಲೀಸರೂ ಇದನ್ನು ನಿರ್ಧರಿಸಲು ಬಿಡಬಾರದು. ಅಂತಹ ತೀರ್ಮಾನವನ್ನು ಒಂದಷ್ಟು ಜನರು ಮಾಡುವುದಾದರೆ ಎಲ್ಲ ಚಂದಿರರೂ ಜೊತೆ ನಿಲ್ಲುತ್ತಾರೆ. ಕರ್ನಾಟಕಕ್ಕೆ ಆ ಶಕ್ತಿಯಿದೆ.

ನಿಮಗೆ ಏನು ಅನ್ನಿಸ್ತು?
14 ವೋಟ್