ಪಠ್ಯಪರಿಷ್ಕರಣೆ: ಎಂಟನೇ ತರಗತಿಗೆ ಮತ್ತೆ ಬಂದ ಸಿಂಧೂ ಸರಸ್ವತಿ!

harappa

ಸರಸ್ವತಿ ಹರಿವು ವ್ಯಾಪಿಸಿಕೊಂಡ ಪ್ರದೇಶಗಳಲ್ಲಿ ಉತ್ಖನನ ಮಾಡುವಾಗ ನೂರಾರು ಪ್ರಾಚೀನ ತಾಣಗಳು ದೊರೆತಿವೆ. ಅದರಲ್ಲಿ ಹರಪ್ಪ ಮೊಹಂಜೋದಾರೋ ಪ್ರಮುಖವಾದವು. ಅಲ್ಲಿಯೇ ನಾಗರಿಕತೆಯ ಕುರುಹುಗಳನ್ನು ತಜ್ಞರು ಮೊದಲು ಗಮನಿಸಿದ್ದು. ಹೀಗಾಗಿ ಪ್ರಾಚೀನ ಭಾರತದ ನಾಗರಿಕತೆಯನ್ನು ಬಳಕೆಯಲ್ಲಿ ಹೆಚ್ಚಾಗಿ ಹರಪ್ಪ ನಾಗರಿಕತೆ ಎಂದು ಗುರುತಿಸಲಾಗಿದೆ.

ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪುನರ್‌ ಪರಿಶೀಲನಾ ಸಮಿತಿ ಬಲಪಂಥೀಯ ಸಿದ್ಧಾಂತವನ್ನು ಪಠ್ಯಗಳಲ್ಲಿ ಅಳವಡಿಸಿದ್ದು ಹಾಗೂ ಬ್ರಾಹ್ಮಣೇತರರ ಪಾಠಗಳನ್ನು ಕೈಬಿಟ್ಟಿದ್ದು ಮಾತ್ರವಲ್ಲ ಬರಗೂರು ಸಮಿತಿ ತಿದ್ದುಪಡಿ ಮಾಡಿದ ಪಾಠವನ್ನು ಮತ್ತೆ ಮೂಲ ಸ್ವರೂಪದಲ್ಲಿ ಅಳವಡಿಸಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.

2012ರಲ್ಲಿ ಪ್ರೊ. ಜಿ.ಎಸ್.‌ ಮುಡಂಬಡಿತ್ತಾಯ ಮುಖ್ಯ ಸಂಯೋಜಕರಾಗಿದ್ದ ಪಠ್ಯಪರಿಷ್ಕರಣೆಯ ಸಮಿತಿ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಹರಪ್ಪ ನಾಗರಿಕತೆಯನ್ನು ಪರಿಚಯಿಸುವ ʼಸಿಂಧೂ ಸರಸ್ವತಿ ನಾಗರಿಕತೆʼ ಎಂಬ ಪಾಠ ಅಳವಡಿಸಿತ್ತು. ಅದಕ್ಕೆ ಹಲವು ಇತಿಹಾಸತಜ್ಞರು ಆಕ್ಷೇಪ ಎತ್ತಿದ್ದರು.  ಬರಗೂರು ಸಮಿತಿ ಪರಿಷ್ಕರಣೆ ಮಾಡುವಾಗ ಅದನ್ನು ಹರಪ್ಪ ನಾಗರಿಕತೆ ಎಂದು ತಿದ್ದುಪಡಿ ಮಾಡಿತ್ತು. ಈಗ ರೋಹಿತ್‌ ಚಕ್ರತೀರ್ಥ ಸಮಿತಿ ಪರಿಷ್ಕರಣೆ ಮಾಡಿದ ಪಠ್ಯದಲ್ಲಿ ಮತ್ತೆ ಸಿಂಧೂ ಸರಸ್ವತಿ ನಾಗರಿಕತೆ ಎಂಬ ಪಾಠವನ್ನು ಅಳವಡಿಸಿದೆ. ಈ ಮೂಲಕ ಸಿಂಧೂ ನಾಗರಿಕತೆ, ವೇದಗಳ ಕಾಲದ ನಂತರದ್ದು ಎಂದು ಇತಿಹಾಸವನ್ನು ತಿರುಚುವ ಪ್ರಯತ್ನ ನಡೆಸಿದೆ.

"ಋಗ್ವೇದದ ಕಾಲದಲ್ಲಿ ಸರಸ್ವತಿ ತುಂಬಿ ಹರಿಯುವ ಬಲು ದೊಡ್ಡ ನದಿಯಾಗಿತ್ತೆಂದು ತಿಳಿದುಬರುತ್ತದೆ. ಕಾಲ ಕಳೆದಂತೆ ಇಂಗುತ್ತಾ ಬಂದು ಬತ್ತಿ ಹೋಯಿತು. ಇಂದಿಗೆ ವರ್ಷ ಹಿಂದಿನದು ಋಗ್ವೇದ ಕಾಲ ಎಂದು ಹೇಳಲಾಗಿದೆ. ಸರಸ್ವತಿ ಹರಿವು ವ್ಯಾಪಿಸಿಕೊಂಡ ಪ್ರದೇಶಗಳಲ್ಲಿ ಉತ್ಖನನ ಮಾಡುವಾಗ ನೂರಾರು ಪ್ರಾಚೀನ ತಾಣಗಳು ದೊರೆತಿವೆ. ಅದರಲ್ಲಿ ಹರಪ್ಪ ಮೊಹಂಜೋದಾರೋ ಪ್ರಮುಖವಾದವು. ಅಲ್ಲಿಯೇ ನಾಗರಿಕತೆಯ ಕುರುಹುಗಳನ್ನು ತಜ್ಞರು ಮೊದಲು ಗಮನಿಸಿದ್ದು. ಹೀಗಾಗಿ ಪ್ರಾಚೀನ ಭಾರತದ ನಾಗರಿಕತೆಯನ್ನು ಬಳಕೆಯಲ್ಲಿ ಹೆಚ್ಚಾಗಿ ಹರಪ್ಪ ನಾಗರಿಕತೆ ಎಂದು ಗುರುತಿಸಲಾಗಿದೆ. ಆದರೆ, ಅದನ್ನು ಸಿಂಧೂ ಸರಸ್ವತಿ ನಾಗರಿಕತೆ ಎಂದು ಕರೆಯುವುದು ಸೂಕ್ತ" ಎಂದು ಪಠ್ಯದಲ್ಲಿ ಹೇಳಲಾಗಿದೆ.

ಬರಗೂರು ಸಮಿತಿಯು 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ʼಪ್ರಾಚೀನ ನಾಗರಿಕತೆಗಳುʼ ಎಂಬ ಪಾಠದಲ್ಲಿ ಜಗತ್ತಿನ ಪ್ರಾಚೀನ ನಾಗರಿಕತೆಗಳ ಪರಿಚಯ ನೀಡಿತ್ತು. ಅದರಲ್ಲಿ ಈಜಿಪ್ಟ್‌, ಮೆಸಪಟೋಮಿಯಾ, ಚೀನಾ, ಹರಪ್ಪ ನಾಗರಿಕತೆಗಳ ಬಗ್ಗೆ ವಿವರವಾದ ಪಾಠ ಇದೆ. ಜೊತೆಗೆ ಗ್ರೀಕ್‌ - ರೋಮನ್‌ ನಾಗರಿಕತೆಗಳ ಪರಿಚಯವನ್ನೂ ನೀಡಲಾಗಿದೆ. ನಂತರ ವೇದ ಕಾಲದ ಬಗ್ಗೆಯೂ ಪಾಠ ಇದೆ. ಕಾಲಮಾನಕ್ಕೆ  ಅನುಗುಣವಾಗಿ ನಾಗರಿಕತೆಗಳನ್ನು ವಿವರಿಸಲಾಗಿತ್ತು. 8ನೇ ತರಗತಿಯ ಸಮಾಜ ವಿಜ್ಞಾನದ 3ನೇ ಅಧ್ಯಾಯದಲ್ಲಿ ಹರಪ್ಪ ಮೊಹಂಜೋದಾರೋ ನಾಗರಿಕತೆಗಳ ಬಗ್ಗೆ ಸವಿವರವಾದ ಮಾಹಿತಿಯಿತ್ತು. ನಂತರ ವೇದಗಳ ಕಾಲ ಎಂಬ ಪಾಠದಲ್ಲಿ ನಾಲ್ಕು ವೇದಗಳ ಕಾಲದ ಜೀವನ ಕ್ರಮದ ಬಗ್ಗೆ ಮಾಹಿತಿ ನೀಡಲಾಗಿತ್ತು.

ಆದರೆ, ರೋಹಿತ್‌ ಚಕ್ರತೀರ್ಥ ಸಮಿತಿ ನಾಗರಿಕತೆಗಳ ಕಾಲಮಾನವನ್ನೇ ಕಾಲ್ಪನಿಕ ಸಂಗತಿಗಳನ್ನು ಹೇಳುವ ಮೂಲಕ ತಿರುಚುವ ಪ್ರಯತ್ನ ಮಾಡಿದೆ. ಹರಪ್ಪ ನಾಗರಿಕತೆ ಮೊತ್ತ ಮೊದಲ ನೆಲೆ ಎಂದು ಹೇಳುತ್ತಲೇ ಅದನ್ನು 'ಸಿಂಧೂ ಸರಸ್ವತಿ ನಾಗರಿಕತೆ' ಎಂದು ಕರೆಯುವುದು ಸೂಕ್ತ ಎಂದು ಹೇಳಿರುವುದು ಮಕ್ಕಳಲ್ಲಿ ಗೊಂದಲಕ್ಕೆ ಕಾರಣವಾಗಲಿದೆ.

Image
Indus vally

ವೇದಗಳ ಕಾಲ ಹರಪ್ಪ ನಾಗರಿಕತೆಗೂ ಪ್ರಾಚೀನವೇ?

ʼಹರಪ್ಪ ನಾಗರಿಕತೆಯನ್ನು ಸಿಂಧೂ-ಸರಸ್ವತಿ ನಾಗರಿಕತೆ ಎಂದು ಕರೆಯುವುದು; ಸಿಂಧೂ-ಸರಸ್ವತಿ ನಾಗರಿಕತೆಯು ವೇದಗಳ ನಂತರದ ಕಾಲದ್ದೆಂದು ಪ್ರತಿಪಾದಿಸಲು ಹೊರಟಿರುವುದು ಇತಿಹಾಸವನ್ನು ತಿರುಚುವ ಪ್ರಯತ್ನವಾಗಿದೆʼ ಎಂದು ಇತಿಹಾಸ ತಜ್ಞರು ಹೇಳಿದ್ದಾರೆ.

ಮೊದಲನೆಯದಾಗಿ, ಪುರಾತತ್ವ ಅಧ್ಯಯನದಲ್ಲಿ ಆಯಾ ಸಂಸ್ಕೃತಿಯ ಮೊದಲ ನೆಲೆಯ ಹೆಸರಿನ ಮೂಲಕವೇ ಸಂಸ್ಕೃತಿಯನ್ನು ಗುರುತಿಸುವ  ನಿಯಮವಿದೆ (ಉದಾ: ಅಶ್ಯೂಲಿಯನ್ ಸಂಸ್ಕೃತಿ). ಸಿಂಧೂ ಕಣಿವೆಯ ಹರಪ್ಪ ಎಂಬಲ್ಲಿ ನಾಗರಿಕತೆಯ ಮೊದಲ ನೆಲೆ ಪತ್ತೆಯಾಯಿತು. ಆನಂತರದಲ್ಲಿ ಈ ನಾಗರಿಕತೆಯ ನೆಲೆಗಳು ಸಿಂಧೂ ಕಣಿವೆಯ ಆಚೆಗೆ ಅಂದರೆ, ಘಗ್ಗರ್- ಆಕ್ರಾ, ಯಮುನಾ, ತಪತಿ, ನರ್ಮದಾ ಕಣಿವೆಗಳಲ್ಲಿಯೂ ಬೆಳಕಿಗೆ ಬಂದಿದ್ದರಿಂದ ನದಿ ಕಣಿವೆಯ ಹೆಸರುಗಳಿಂದ ಈ ನಾಗರಿಕತೆಯನ್ನು ಗುರುತಿಸುವುದು ಅಸಾಧ್ಯವಾಯಿತು. ಆದ್ದರಿಂದ ಈ ಸಂಸ್ಕೃತಿಯ ಮೊದಲ ನೆಲೆಯಾದ ‘ಹರಪ್ಪ' ಹೆಸರಿನಿಂದಲೇ ಈ ನಾಗರಿಕತೆಯನ್ನು ಇತಿಹಾಸಕಾರರು ಗುರುತಿಸುತ್ತಾ ಬರುತ್ತಿದ್ದಾರೆ.

ಎರಡನೆಯದಾಗಿ, ಸಿಂಧೂ ನಾಗರಿಕತೆಯು ವೇದಗಳ ನಂತರದ ಕಾಲದ್ದು ಎಂದು ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ.  ಮಹತ್ವದ ಇತಿಹಾಸಕಾರ ಆರ್.ಸಿ. ಮಜುಂದಾರ್ ಅವರೇ ಸಿಂಧೂ ನಾಗರಿಕತೆಯು ವೇದ ಕಾಲಕ್ಕೂ ಮೊದಲಿನದೆಂದು ಸ್ವಷ್ಟವಾಗಿ ತೋರಿಸಿ ಕೊಟ್ಟಿದ್ದಾರೆ. ಇದೇ ಅಭಿಪ್ರಾಯವನ್ನು ಆರ್.ಎಸ್.ಶರ್ಮ ಮೊದಲಾದ ಇತಿಹಾಸಕಾರರು ಕೂಡ ಸಿಂಧೂ ನಾಗರಿಕತೆ ಮತ್ತು ವೇದಗಳ ಸಂಸ್ಕೃತಿ ಹೇಗೆ ಬೇರೆ ಬೇರೆ ಹಾಗೂ ಸಿಂಧೂ ನಾಗರಿಕತೆ ವೇದಗಳ ನಾಗರಿಕತೆಗಿಂತ ಹೇಗೆ ಪ್ರಾಚೀನ ಎಂಬುದನ್ನು ತರ್ಕಬದ್ಧವಾಗಿ ನಿರೂಪಿಸಿದ್ದಾರೆ.

Image
ಹರಪ್ಪ ಕಾಲದಲ್ಲಿ ಪ್ರಾಣಿ, ಮರಗಿಡಗಳನ್ನು ದೇವರೆಂದು ಪೂಜಿಸುತ್ತಿದ್ದರು
ಹರಪ್ಪ ಕಾಲದಲ್ಲಿ ಪ್ರಾಣಿ, ಮರಗಿಡಗಳನ್ನು ದೇವರೆಂದು ಪೂಜಿಸುತ್ತಿದ್ದರು ಎಂಬುದನ್ನು ಸಂಕೇತಿಸುವ ಚಿತ್ರ

ಆರ್.ಸಿ. ಮಜುಂದಾರ್ ಅವರು ಹರಪ್ಪ ನಾಗರಿಕತೆ ಯಾ ಸಿಂಧೂ ನಾಗರಿಕತೆ ಹಾಗೂ ವೇದ ಸಂಸ್ಕೃತಿಯ ನಡುವಿನ ಕಾಲಘಟ್ಟದ ವ್ಯತ್ಯಾಸವನ್ನು ಕುರಿತು ಹಲವು ಅಂಶಗಳನ್ನು ಬಿಡಿಸಿಟ್ಟಿದ್ದಾರೆ: ಭಾರತದ ತರುವಾಯದ ಎಲ್ಲ ನಾಗರಿಕತೆಗಳಿಗೂ ಮೂಲವಾದ ಇಂಡೋ-ಆರ್ಯರ ವೇದಗಳ ನಾಗರಿಕತೆಗೂ ಸಿಂಧೂಕಣಿವೆಯ ಸಂಸ್ಕೃತಿಗೂ ಇದ್ದ ಸಂಬಂಧದ ಪ್ರಶ್ನೆ ಪ್ರಾಯೋಗಿಕವಾಗಿ ಅತಿ ಮುಖ್ಯವಾದುದು. ಹೊರನೋಟದಲ್ಲಿಯೇ ಇವೆರಡು ಸಂಸ್ಕೃತಿಗಳಿಗೂ ಬಹಳ ವ್ಯತ್ಯಾಸಗಳಿವೆ. ವೇದಗಳ ಕಾಲದ ಆರ್ಯರು ಹೆಚ್ಚಾಗಿ ಗ್ರಾಮವಾಸಿಗಳಾಗಿದ್ದರೆ ಸಿಂಧೂ ಕಣಿವೆಯ ನಾಗರಿಕತೆಗೆ ಸೇರಿದ ಜನರು ಹೆಚ್ಚು ಸೌಕರ್ಯಗಳಿದ್ದ ನಗರಗಳಲ್ಲಿ ವಾಸಿಸುವರಾಗಿದ್ದರು. ಆರ್ಯರಿಗೆ ಕಬ್ಬಿಣ ಹಾಗೂ ರಕ್ಷಣಾತ್ಮಕ ಆಯುಧಗಳ ಉಪಯೋಗ ಪ್ರಾಯಶಃ ತಿಳಿದಿದ್ದಿತು, ಆದರೆ ಸಿಂಧೂಕಣಿವೆ ಜನರಿಗೆ ಅವುಗಳ ಉಪಯೋಗ ತಿಳಿದಿರಲಿಲ್ಲ. ವೇದಗಳ ನಾಗರಿಕತೆಯಲ್ಲಿ ಕುದುರೆ ಪ್ರಮುಖ ಪಾತ್ರವಹಿಸಿದರೆ, ಸಿಂಧೂಕಣಿವೆ ನಾಗರಿಕತೆಯ ಪ್ರಾರಂಭದಲ್ಲಿ ಈ ಪ್ರಾಮುಖ್ಯ ಕಂಡು ಬರುವುದಿಲ್ಲ. ಧಾರ್ಮಿಕ ನಂಬಿಕೆಗಳು ಹಾಗೂ ಆಚರಣೆಗಳಲ್ಲಿ ಸಹ ಮುಖ್ಯ ವ್ಯತ್ಯಾಸಗಳಿದ್ದವು. ವೇದಗಳ ಆರ್ಯರು ಗೋವನ್ನು ಪೂಜಿಸಿದರೆ, ಸಿಂಧೂ ಬಯಲಿನ ಜನರು ತಮ್ಮ ಪೂಜ್ಯಭಾವನೆಯನ್ನು ಬಸವನಿಗೆ ಮೀಸಲಾಗಿಟ್ಟಿದ್ದರು. ಸಿಂಧೂಕಣಿವೆಯ ಜನರ ಪ್ರಮುಖ ದೇವತೆಗಳಾಗಿದ್ದ ದೇವಮಾತೆ ಮತ್ತು ಶಿವ ವೇದಗಳ ಕಾಲದಲ್ಲಿ ಹಿರಿಯ ಪಾತ್ರವಹಿಸಲಿಲ್ಲ; ಕೆಲವು ವ್ಯಾಖ್ಯಾನಕಾರರ ಅಭಿಪ್ರಾಯದಲ್ಲಿ ವೇದಗಳ ಕಾಲದಲ್ಲಿ ಶಿಶ್ನ ಪೂಜೆಯನ್ನು ಖಂಡಿಸಲಾಗಿತ್ತು, ವಿಗ್ರಹಗಳ ಆರಾಧನೆ ಸಿಂಧೂ ಜನರಲ್ಲಿ ರೂಢಿಯಲ್ಲಿತ್ತು. ಆದರೆ, ಆರ್ಯರಿಗೆ ಅದು ತಿಳಿದಿರಲಿಲ್ಲ.

ಇದನ್ನು ಓದಿದ್ದೀರಾ? ಪಠ್ಯಗಳಲ್ಲಿ ಧಾರ್ಮಿಕ ಮೂಲಭೂತವಾದವನ್ನು ಹೇರುವ ಉದ್ದೇಶ ಸ್ಪಷ್ಟ

ಇಷ್ಟೊಂದು ಗಮನಾರ್ಹ ವ್ಯತ್ಯಾಸಗಳ ಆಧಾರದ ಮೇಲೆ ಸಿಂಧೂಕಣಿವೆಯ ನಾಗರಿಕತೆ ವೇದಗಳ ಕಾಲದ ಸಂಸ್ಕೃತಿಗಿಂತ ಬೇರೆಯದು ಮತ್ತು ಅದೇ ಮೊದಲಿನದು ಎಂದು ಸಾಮಾನ್ಯವಾಗಿ ಪರಿಗಣಿಸಲಾಗಿದೆ. ಇದು ಸಾಮಾನ್ಯವಾಗಿ ಅಂಗೀಕೃತವಾಗಿರುವ ಕಾಲಗಣತಿಯ ಕ್ರಮದೊಡನೆ ಸರಿ ಹೊಂದುತ್ತದೆ. ಆದರೆ, ಯಾವುದೇ ಪುರಾವೆ ಇಲ್ಲದೇ ಊಹೆಗಳ ಆಧಾರದಲ್ಲಿ ಸಿಂಧೂ ನಾಗರಿಕತೆ ವೇದಗಳ ನಂತರದ್ದು ಎಂದೂ, ಸರಸ್ವತಿ ನದಿ ತೀರದ ನಾಗರಿಕತೆ ಎಂದು ಹೇಳಲು ಹೊರಟಿರುವುದು ಇತಿಹಾಸಕಾರರಿಗೆ ಮಾಡುವ ಅವಮಾನವಷ್ಟೇ ಎಂದು ಹಿಂದಿನ ಸಮಿತಿಯಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದ ಇತಿಹಾಸ ಪ್ರಾಧ್ಯಾಪಕರೊಬ್ಬರು ಹೇಳುತ್ತಾರೆ.

ನಿಮಗೆ ಏನು ಅನ್ನಿಸ್ತು?
3 ವೋಟ್