ಜಿಎಸ್‌ಟಿ| ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳ ಭವಿಷ್ಯ ಡೋಲಾಯಮಾನ

MSME

ಜಿಎಸ್‌ಟಿ ಅನುಷ್ಠಾನಗೊಂಡು ಐದು ವರ್ಷಗಳಾಗಿವೆ. ಇಲ್ಲಿ ಪ್ರಸ್ತಾಪಿಸಿರುವ ಅಂಕಿ-ಅಂಶಗಳಿಂದ ನಮ್ಮ ದೇಶದ ಉತ್ಪಾದನಾ ಮತ್ತು ಸೇವಾ ವಲಯದಲ್ಲಿ ಸಣ್ಣ ಹಾಗೂ ಅತಿಸಣ್ಣ ಘಟಕಗಳು ಜಾಸ್ತಿಯಿವೆ ಎಂದು ವೇದ್ಯವಾಗುತ್ತದೆ. ಕೆಲವು ತಜ್ಞರ ಪ್ರಕಾರ ಜಿಎಸ್‌ಟಿಯ ರಚನೆಯೇ ದೊಡ್ಡ ಘಟಕಗಳಿಗೆ ಉತ್ತೇಜನವನ್ನು ನೀಡುವಂತಿದೆ. ಅದು ನಿಜವಾಗುತ್ತಿದೆ

ಎಂಎಸ್‌ಎಂಇ ಎಂದರೆ ಮೀಡಿಯಂ(ಮಧ್ಯಮ), ಸ್ಮಾಲ್(ಸಣ್ಣ) ಮತ್ತು ಮೈಕ್ರೊ(ಅತಿಸಣ್ಣ) ಘಟಕಗಳು.  ಎಂಎಸ್‌ಎಂಇ ಇಲಾಖೆಯ ಇತ್ತೀಚಿನ (2018-19) ವಾರ್ಷಿಕ ವರದಿಯ ಅನ್ವಯ ನಮ್ಮ ದೇಶದಲ್ಲಿ 6.34 ಕೋಟಿ ಎಂಎಸ್‌ಎಂಇಗಳಿವೆ. ಇವುಗಳ ಪೈಕಿ ಶೇ 51ರಷ್ಟು ಗ್ರಾಮೀಣ ಪ್ರದೇಶಗಳಲ್ಲಿ ಇವೆ. ಒಟ್ಟು ಇವುಗಳಲ್ಲಿ 11 ಕೋಟಿಗಳಿಗೂ ಸ್ವಲ್ಪ ಹೆಚ್ಚಿನ ಮಂದಿ ದುಡಿಯುತ್ತಿದ್ದಾರೆ. ಆದರೆ ಶೇ 55ರಷ್ಟು ಉದ್ಯೋಗಗಳು ನಗರ ಪ್ರದೇಶದ ಎಂಎಸ್‌ಎಂಇಗಳಲ್ಲಿ ಇವೆ. ಈ ಅಂಕಿ-ಅಂಶಗಳ ಅನ್ವಯ ಸರಾಸರಿ ಒಂದು ಎಂಎಸ್‌ಎಂಇಯಲ್ಲಿ ಸುಮಾರು ಎರಡು ಮಂದಿಗಿಂತಲೂ ಕಡಿಮೆ ಮಂದಿ ಕೆಲಸವನ್ನು ಮಾಡುತ್ತಿದ್ದಾರೆ. ಇದರಿಂದ ಸರಾಸರಿ ಇವುಗಳ ಗಾತ್ರ ಎಷ್ಟು ಚಿಕ್ಕದಾಗಿವೆ ಎಂದು ಅಂದಾಜಿಸಬಹುದು. 

ಎಂಎಸ್‌ಎಂಇಗಳ ಪೈಕಿ ಶೇ 99.5ರಷ್ಟು ಅತಿ ಸಣ್ಣ (ಮೈಕ್ರೊ) ವಿಭಾಗದಲ್ಲಿವೆ. ಈ ಅತಿ ಸಣ್ಣ ಘಟಕಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಮಾನವಾಗಿ ಪಸರಿಸಿದ್ದರೇ, ಸಣ್ಣ ಮತ್ತು ಮಧ್ಯಮ ಗಾತ್ರದ ಘಟಕಗಳು ಹೆಚ್ಚಾಗಿ ನಗರ ಪ್ರದೇಶಗಳಲ್ಲಿವೆ. ಬೇರೆ ಮಾತುಗಳಲ್ಲಿ ಹೇಳುವುದಾದರೇ, ಅತಿ ಸಣ್ಣ ಘಟಕಗಳಲ್ಲಿ ಒಬ್ಬ ಗಂಡು ಅಥವಾ ಹೆಣ್ಣು ಸ್ವಂತವಾಗಿ ತಮ್ಮ ಮನೆಯಿಂದಲೇ ದುಡಿಯುತ್ತಿದ್ದಾರೆ ಎನ್ನಬಹುದು. ಉಳಿದ ಶೇ 0.5 ಎಂಎಸ್‌ಎಂಇಗಳಲ್ಲಿ ಅಂದರೆ ಸಣ್ಣ ಮತ್ತು ಮಧ್ಯಮ ಘಟಕಗಳಲ್ಲಿ ಸುಮಾರು 5 ಕೋಟಿ ನೌಕರರು ದುಡಿಯುತ್ತಿದ್ದಾರೆ. 11 ಕೋಟಿ ನೌಕರರ ಪೈಕಿ ಸುಮಾರು ಶೇ 80ರಷ್ಟು ಪುರುಷರು ಮತ್ತು ಶೇ 20ರಷ್ಟು ಮಹಿಳೆಯರು ಇದ್ದಾರೆ. ಎಂಎಸ್‌ಎಂಇಗಳ ಪೈಕಿ ಶೇ 50ರಷ್ಟು ಏಳು ರಾಜ್ಯಗಳಲ್ಲಿವೆ- ಉತ್ತರ ಪ್ರದೇಶ(14%), ಪಶ್ಚಿಮ ಬಂಗಾಳ(14%), ತಮಿಳು ನಾಡು(8%), ಮಹಾರಾಷ್ಟ್ರ(8%), ಕರ್ನಾಟಕ(6%), ಬಿಹಾರ(5%) ಮತ್ತು ಆಂಧ್ರ ಪ್ರದೇಶ(5%).  

ಜುಲೈ 1, 2017ರಂದು ಜಿಎಸ್‌ಟಿಯನ್ನು ಜಾರಿ ಮಾಡಲಾಯಿತು. ಇದನ್ನು ಜಾರಿ ಮಾಡಿದ ನಂತರ ಸುಮಾರು 1.4 ಬಿಲಿಯ ಮಂದಿಗೆ ಒಂದು ಸಂಯುಕ್ತ ಮಾರುಕಟ್ಟೆ, ಉದ್ಯಮಶೀಲತೆ ಮತ್ತು ಉದ್ಯೋಗಗಳ ಸೃಷ್ಟಿಗೆ ಪುಷ್ಟಿ ಮುಂತಾದವು ಸಂಭವಿಸುತ್ತವೆ ಎಂದು ಆ ಸಂದರ್ಭದಲ್ಲಿ ಸಾರಲಾಗಿತ್ತು.  ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ವಿವಿಧ ತೆರನಾದ ಘಟಕಗಳನ್ನು ನಮ್ಮ ದೇಶದ ಔಪಚಾರಿಕ ಆರ್ಥಿಕತೆಗೆ ಸೇರ್ಪಡೆಗೊಳಿಸುವ ಉದ್ದೇಶವೂ ಇತ್ತು. ಇದರಿಂದ ತೆರಿಗೆಯ ಮೂಲಗಳು ವಿಸ್ತರಣೆಗೊಂಡು, ತೆರಿಗೆ ಮತ್ತು ಜಿಡಿಪಿಯ ಅನುಪಾತ ವೃದ್ಧಿಸುತ್ತದೆ ಎಂಬ ನಿರೀಕ್ಷೆಯೂ ಇತ್ತು.

ಜಿಎಸ್‌ಟಿ ಅನುಷ್ಠಾನಗೊಂಡು ಐದು ವರ್ಷಗಳಾಗಿವೆ. ಮೇಲೆ ಪ್ರಸ್ತಾಪಿಸಿರುವ ಅಂಕಿ-ಅಂಶಗಳಿಂದ ನಮ್ಮ ದೇಶದ ಉತ್ಪಾದನಾ ಮತ್ತು ಸೇವಾ ವಲಯದಲ್ಲಿ ಸಣ್ಣ ಹಾಗೂ ಅತಿಸಣ್ಣ ಘಟಕಗಳು ಜಾಸ್ತಿಯಿವೆ ಎಂದು ವೇದ್ಯವಾಗುತ್ತದೆ. ಕೆಲವು ತಜ್ಞರ ಪ್ರಕಾರ ಜಿಎಸ್‌ಟಿಯ ರಚನೆಯೇ ದೊಡ್ಡ ಘಟಕಗಳಿಗೆ ಉತ್ತೇಜನವನ್ನು ನೀಡುವಂತಿದೆ. ಇಂತಹ ಘಟಕಗಳಿಂದ ಬರಬೇಕಾದ ಹಣದಿಂದ ಅವು ʼಇನ್‌ಪುಟ್ ಟ್ಯಾಕ್ಸ್‌ ಕ್ರೆಡಿಟ್ಸ್‌ (ಉದಾ: ಒಂದು ಘಟಕ ಕಚ್ಚಾ ಮತ್ತು ಇತರ ಪದಾರ್ಥಗಳನ್ನು  ಖರೀದಿಸುತ್ತದೆ.  ಇದಕ್ಕಾಗಿ ಅದು ತೆರಿಗೆಯನ್ನು(ಇನ್‌ಪುಟ್ ಟ್ಯಾಕ್ಸ್) ನೀಡಬೇಕು. ತದನಂತರ ಅದು ತಯಾರಿಸಿದ ವಸ್ತುವನ್ನು (ಲಾಭಾಂಶವನ್ನು ಗಣನೆಗೆ ತೆಗೆದುಕೊಂಡು) ಮಾರಾಟ ಮಾಡುತ್ತದೆ. ಆಗಲೂ ತೆರಿಗೆಯ ವಿಷಯ ಬರುತ್ತದೆ(ಔಟ್‌ಪುಟ್ ಟ್ಯಾಕ್ಸ್). ಈ ಎರಡು ತೆರಿಗೆಗಳ ನಡುವಿನ ವ್ಯತ್ಯಾಸದ ಹಣವನ್ನು  ಘಟಕ ಸರ್ಕಾರಕ್ಕೆ ಕಟ್ಟಬೇಕು)ನ್ನು ಸೆಟ್‌ ಆಫ್‌ ಮಾಡಬಹುದು. ಇನ್ನೊಂದೆಡೆ ಸಣ್ಣ, ಅತಿಸಣ್ಣ ಘಟಕಗಳು ಹೆಚ್ಚಿನ ವೆಚ್ಚವನ್ನು (ತಮ್ಮ ಕಾರ್ಯಾಚರಣೆಗಳಿಗೆ ಹೋಲಿಸಿದಾಗ) ಮಾಡಬೇಕಾಗುತ್ತದೆ̤  ಈ ಕಾರಣದಿಂದ ಅವು ಸ್ಪರ್ಧೆಯಲ್ಲಿ ಹಿಂದುಳಿಯಬೇಕಾಗುತ್ತದೆ ಅಥವಾ ಅವು ಜಿಎಸ್‌ಟಿಯ ಪರಿಧಿಯಿಂದಲೇ ಹೊರಗುಳಿಯಬೇಕಾಗುತ್ತದೆ.

Image
MSME jaipur

ಸಣ್ಣ , ಅತಿಸಣ್ಣ ಘಟಕಗಳು ನಲುಗಿದ ಪರಿಸ್ಥಿತಿ

ಈ ಜಿಎಸ್‌ಟಿ ವ್ಯವಸ್ಥೆಗೆ ಮಾಡಲಾಗುತ್ತಿರುವ ಕಿವಿಹಿಂಡುವ ಕ್ರಿಯೆಗಳಿಂದ ಮತ್ತು ಆಡಳಿತದ ಪದ್ಧತಿಯಿಂದ ಸಣ್ಣ, ಅತಿಸಣ್ಣ ಘಟಕಗಳಿಗೆ ಸಮಯವೂ ವ್ಯಯವಾಗುತ್ತದೆ; ಸಂಪನ್ಮೂಲಗಳು ಕೂಡ.  ಹೀಗಾಗಿ, ಉದ್ಯಮ ವಲಯದಲ್ಲಿ ದೊಡ್ಡ ಘಟಕಗಳಿಗೆ ಹೆಚ್ಚಿನ ಪ್ರೋತ್ಸಾಹ ಲಭಿಸುತ್ತಿದೆ ಎಂದೆನ್ನಬಹುದು. ಕಳೆದ ಆರು ವರ್ಷಗಳಲ್ಲಿ ನಮ್ಮ ದೇಶದ ಸಣ್ಣ/ಅತಿಸಣ್ಣ ಘಟಕಗಳ ವಲಯ ಮೂರು ಆಘಾತಕಾರಿ ಬೆಳವಣಿಗೆಗಳನ್ನು ಎದುರಿಸಬೇಕಾಯಿತು. ಅವೆಂದರೆ- ನಗದು ರದ್ದತಿ (ಡಿಮಾನಿಟೈಸೇಷನ್), ಜಿಎಸ್‌ಟಿಯ ತರಾತುರಿ ಜಾರಿ ಮತ್ತು ಕೋವಿಡ್‌ 19 ಸಾಂಕ್ರಾಮಿಕ ಪಿಡುಗು. ಕೋವಿಡ್‌ ಪಿಡುಗು ತಲೆದೋರುವ ಮುನ್ನವೇ ನಮ್ಮ ಆರ್ಥಿಕತೆ ಗಂಭೀರ ಪರಿಸ್ಥಿತಿಯಲ್ಲಿತ್ತು. ಪ್ರಸ್ತುತ ನಮ್ಮ ಅರ್ಥ ವ್ಯವಸ್ಥೆ  k- shaped Recovery ಯನ್ನು (ಆರ್ಥಿಕ ಹಿಂಜರಿತದಿಂದಾಗಿ ಭಿನ್ನ ಕ್ಷೇತ್ರಗಳು ಭಿನ್ನ ರೀತಿಗಳಲ್ಲಿ ಚೇತರಿಕೆಯನ್ನು ಕಾಣುವ ಪ್ರಕ್ರಿಯೆ) ಕಾಣುತ್ತಿದೆ.  ಇಂತಹ ವಾತಾವರಣದಲ್ಲಿ ಸಣ್ಣ / ಅತಿಸಣ್ಣ ಘಟಕಗಳು ನಲುಗಿದ ಪರಿಸ್ಥಿತಿಯಲ್ಲಿಯೇ ಇವೆ.  

ಈ ಅಂಶಗಳನ್ನು ಪರಿಗಣಿಸದೇ, ಹೆಚ್ಚಿನ ಮಟ್ಟದ ನಮ್ಮ ವ್ಯಾಪಾರ ಮಾಧ್ಯಮ (ಬಿಸಿನೆಸ್‌ ಮೀಡಿಯಾ) ದೊಡ್ಡ ವ್ಯಾಪಾರಗಳಿಗೆ ಯಾವುದು ಒಳ್ಳೆಯದೋ, ಅದು ಭಾರತೀಯರೆಲ್ಲರಿಗೂ ಒಳ್ಳೆಯದು ಎಂದು ಸಾರುತ್ತಿರುವುದು ಎಷ್ಟು ಸರಿ?

ಈಗಾಗಲೇ ಪ್ರಸ್ತಾಪಿಸಿರುವ ಮೂರು ದೊಡ್ಡ ಆಘಾತಗಳಿಂದ ನಮ್ಮ ರಾಜ್ಯದ ಕೈಗಾರಿಕಾ ಪ್ರದೇಶಗಳ ಸಣ್ಣ/ಅತಿಸಣ್ಣ ಘಟಕಗಳು ತತ್ತರಿಸಿವೆ. ದೊಡ್ಡ ಸಂಖ್ಯೆಯ ಸಣ್ಣ / ಅತಿಸಣ್ಣ ಘಟಕಗಳು ತಮ್ಮ ಕದಗಳನ್ನು ಮುಚ್ಚಿವೆ. ದೊಡ್ಡ ಮಟ್ಟದಲ್ಲಿ ಕೆಲಸಗಳು ನಶಿಸಿವೆ. ಇವುಗಳಿಂದ ಅನೇಕ ಕುಟುಂಬಗಳಿಗೆ ನೆಮ್ಮದಿಯ ನಾಳೆಗಳು ಗಗನಕುಸುಮಗಳಾಗಿವೆ.

ಇದನ್ನು ಓದಿದ್ದೀರಾ? ಜಿಎಸ್‌ಟಿ| ಯುವಜನರನ್ನು ನಿರುದ್ಯೋಗ, ಆತ್ಮಹತ್ಯೆಯೆಡೆಗೆ ತಳ್ಳುವ ಧೋರಣೆ

ಕಳೆದ ನಾಲ್ಕು ವರ್ಷಗಳ ಹಿಂದೆ, ಒಂದು ಅಂದಾಜಿನಂತೆ ಬೆಂಗಳೂರಿನ ಪೀಣ್ಯ ಕೈಗಾರಿಕ ಪ್ರದೇಶದಲ್ಲಿ ಸುಮಾರು 6000 ಸಣ್ಣ ಘಟಕಗಳಿದ್ದವು (ರಾಜ್ಯಾದ್ಯಂತ ಸುಮಾರು ಮೂರು ಲಕ್ಷ). ಈ ಪ್ರದೇಶದಲ್ಲಿರುವ  ಸುಮಾರು 12500 ಎಂಎಸ್‌ಎಂಇಗಳಲ್ಲಿದ್ದವು. ಸುಮಾರು 7000 ಜಾಬ್‌ ಕಂಟ್ರಾಕ್ಟರರು ಇದ್ದರು. ಇಡೀ ಸಣ್ಣ ಘಟಕಗಳ ಕ್ಷೇತ್ರವೇ ಜಿಎಸ್‌ಟಿ ಪ್ರಹಾರಗಳಿಂದ ತತ್ತರಿಸಿದ್ದವು. ಅನೇಕ ಸಣ್ಣ ಘಟಕಗಳು ಮುಚ್ಚಲ್ಪಟ್ಟವು; ಅತಿಸಣ್ಣವು ಕೂಡ. ನಂತರ ವಕ್ಕರಿಸಿದ ಕೋವಿಡ್‌ ಪಿಡುಗಿನಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಸಣ್ಣ ಘಟಕಗಳ ಶ್ರೇಯಸ್ಸಿನ ದೃಷ್ಟಿಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.

ನಿಮಗೆ ಏನು ಅನ್ನಿಸ್ತು?
1 ವೋಟ್