ಮೀಸಲಾತಿ ದಿನ | ಸಾಮಾಜಿಕ ನ್ಯಾಯದ ಹರಿಕಾರ ಶಾಹು ಮಹಾರಾಜ್

ಜುಲೈ 26 ಭಾರತದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಘೋಷಣೆಯಾದ ದಿನ. ಅಂಥದ್ದೊಂದು ಘೋಷಣೆಯನ್ನು ಮಾಡಿ ಸ್ಥಗಿತಗೊಂಡಿದ್ದ ಭಾರತದ ಸಮಾಜಕ್ಕೆ ದೊಡ್ಡ ಚಲನೆಯನ್ನು ನೀಡಿದವರು ಛತ್ರಪತಿ ಶಾಹು ಮಹಾರಾಜ್. ಹಿಂದುಳಿದವರಿಗೆ ಶಿಕ್ಷಣ ದೊರಕಬೇಕು ಎಂದು ಬಯಸಿ ಅದಕ್ಕಾಗಿ ಶ್ರಮಿಸಿದ ಶಾಹು ಮಹಾರಾಜ್ ಅವರನ್ನು ಭಾರತದ ದಮನಿತ ಸಮುದಾಯಗಳು ಯಾವತ್ತೂ ಮರೆಯುವಂತಿಲ್ಲ.
shahu maharaj

1894ರಲ್ಲಿ ಶಾಹೂ ಕೊಲ್ಲಾಪುರದ ರಾಜ್ಯಾಧಿಕಾರ ವಹಿಸಿಕೊಂಡರು. ರಾಜ್ಯದ ಬಹುತೇಕ ಅಧಿಕಾರಿಗಳು ಬ್ರಾಹ್ಮಣರಾಗಿದ್ದರು. ಉಳಿದ ಹಿಂದುಳಿದ ವರ್ಗಗಳು ಶಿಕ್ಷಣದಿಂದ ದೂರವಿದ್ದವು. ಎಂದೇ ಅಧಿಕಾರದ ನೌಕರಿಗಳಿಂದಲೂ ದೂರವಿದ್ದವು. ಅಧಿಕಾರ ವಹಿಸಿಕೊಂಡ ದಿನದಿಂದಲೂ ಶಾಹೂ ಸಮಾಜವನ್ನು ಸರಿಯಾದ ದಾರಿಗೆ ತಂದು ಎಲ್ಲ ಜನವರ್ಗಗಳೂ ಉತ್ತಮವಾದ ಘನತೆಯ ಬದುಕನ್ನು ಸಮಾನ ನೆಲೆಯಲ್ಲಿ ಬದುಕಲು ಸಾಧ್ಯವಾಗುವಂತಹ ಪ್ರಯತ್ನಗಳನ್ನು ಶುರು ಮಾಡಿದರು.

ರಾಜ್ಯಾಧಿಕಾರ ವಹಿಸಿಕೊಂಡ ನಂತರ ಶಾಹೂ ತನ್ನ ರಾಜ್ಯದಲ್ಲಿ ಜಾತಿ ಶ್ರೇಣೀಕರಣ ನಾಶಗೊಳಿಸುವ ಕ್ರಮಗಳನ್ನು ಹಂತಹಂತವಾಗಿ, ವ್ಯವಸ್ಥಿತವಾಗಿ ಜಾರಿಗೆ ತಂದರು. ಅದರಲ್ಲಿ ಶಿಕ್ಷಣ ಪಡೆಯುವ ಅವಕಾಶವನ್ನು ಎಲ್ಲರಿಗೂ ಮುಕ್ತವಾಗಿ ತೆರೆದಿದ್ದು ಒಂದು ಮಹತ್ವದ ಹೆಜ್ಜೆ. ಅದಕ್ಕೂ ಮೊದಲು ಬ್ರಿಟಿಷರೇ ಆ ಪ್ರಯತ್ನ ಶುರುಮಾಡಿರಬಹುದು, ಆದರೆ ಅಂಥ ಶಾಲೆಗಳಿಗೆ ಕಲಿಯಹೋದವರ ಸಂಖ್ಯೆಯೂ ಕಡಿಮೆ. ಅಲ್ಲಿ ಕಲಿಸಲು ಒಪ್ಪಿ ಬರುತ್ತಿದ್ದ ಸವರ್ಣೀಯ ಶಿಕ್ಷಕರ ಸಂಖ್ಯೆಯೂ ಕಡಿಮೆ. ಜೊತೆಗೆ ಅವುಗಳ ಗುಣಮಟ್ಟ ತೀರಾ ಸಾಮಾನ್ಯವಾಗಿತ್ತು. ಆದರೆ, ಶಾಹೂ ಎಲ್ಲರಿಗೂ ಒಂದೇ ಗುಣಮಟ್ಟದ ಶಿಕ್ಷಣ ದೊರೆಯುವ ವ್ಯವಸ್ಥೆ ಮಾಡಿದರು.

ಪ್ರಾಥಮಿಕ ಶಿಕ್ಷಣವನ್ನು ಉಚಿತ ಹಾಗೂ ಕಡ್ಡಾಯಗೊಳಿಸಿದರು. ಇದು ಭಾರತದಲ್ಲೇ ಅಂಥ ಮೊದಲ ಗುಣಾತ್ಮಕ ಪ್ರಯತ್ನ. ಅದು ಬಹಳ ದಿನ ಮುಂದುವರೆಯುವುದು ಅಸಾಧ್ಯವೆಂದು ಬೇರೆ ಸಂಸ್ಥಾನಗಳೂ, ಪತ್ರಿಕೆಗಳೂ ಬರೆದವು. ಇದಕ್ಕಾಗಿ ಸರ್ಕಾರಕ್ಕೆ ಒಂದು ಲಕ್ಷ ರೂಪಾಯಿ ಖರ್ಚು ಬರುತ್ತಿತ್ತು. ಅದೇನೂ ಸಣ್ಣ ಮೊತ್ತವಾಗಿರಲಿಲ್ಲ. ಆದರೂ ಎದೆಗುಂದದೆ ಪ್ರತಿ ಮನೆಗೂ ತಲಾ ಒಂದು ರೂಪಾಯಿ ಸುಂಕ ವಿಧಿಸಿದರು. ಅಲ್ಲದೇ ಸಿರಿವಂತರು, ಜಹಗೀರುದಾರರಿಗೆ ಅವರ ಆದಾಯದ ಮೇಲೆ 10-15% ಶಿಕ್ಷಣ ಸುಂಕ ವಿಧಿಸಿ ಅದನ್ನು ಶಿಕ್ಷಣಕ್ಕೆಂದು ಎತ್ತಿಟ್ಟರು. `ಶಿಕ್ಷಣ ಕರ’ ವೈದ್ಯರು, ವಕೀಲರು, ಸಾಹುಕಾರರು ಮತ್ತು ಅರಮನೆಯ ವರಿಷ್ಠ ಅಧಿಕಾರಿಗಳ ಮೇಲೂ ಬಿತ್ತು. 

ಬೇರೆಬೇರೆ ಜಾತಿಯವರು ಓದಲು ಬರಲಿ ಎಂಬ ಕಾರಣಕ್ಕೆ ಜೈನ, ಲಿಂಗಾಯಿತ, ಮುಸಲ್ಮಾನ, ಅಸ್ಪೃಶ್ಯ, ಸೋನಾರ, ಸಿಂಪಿಗ, ಪಾಂಚಾಳ, ಗೌಡ ಸಾರಸ್ವತ, ಇಂಡಿಯನ್ ಕ್ರಿಶ್ಚಿಯನ್, ಪ್ರಭು, ವೈಶ್ಯ, ಢೋರ, ಸಮಗಾರ, ಬಡಿಗ, ಕ್ಷೌರಿಕ, ಸೋಮವಂಶೀಯ ಕ್ಷತ್ರಿಯ, ನೇಕಾರ ಸಮುದಾಯದ ೨೦ ವಸತಿ ನಿಲಯಗಳನ್ನು ತೆರೆಯಲಾಯಿತು. ಹೆಣ್ಣುಮಕ್ಕಳಿಗೂ ವಿದ್ಯಾಭ್ಯಾಸ ಕಲ್ಪಿಸಿದರು. ಗ್ರಾಮಲೆಕ್ಕಿಗರ (ತಲಾಟಿ) ತರಬೇತಿ ಶಾಲೆ ಹಾಗೂ ಅಬ್ರಾಹ್ಮಣರಿಗೂ ವೇದ ಕಲಿಸುವ ಪಾಠಶಾಲೆ ತೆರೆದರು. ಹಿಂದುಳಿದ ವರ್ಗಗಳು ಸಮಾಜದ ಎಲ್ಲ ಸ್ತರಗಳಲ್ಲೂ ಕ್ರಿಯಾಶೀಲವಾಗಿ ಭಾಗವಹಿಸುವ ಅವಕಾಶ ದೊರೆಯಲೆಂದು ಅದರ ಮೊದಲ ಭಾಗವಾಗಿ 1902ನೇ ಇಸವಿಯಲ್ಲಿ ಶೇಕಡಾ 50ರಷ್ಟು ಮೀಸಲಾತಿಯನ್ನು ಜಾರಿಗೆ ತಂದರು. 1902ರಲ್ಲಿ ಇಂಗ್ಲೆಂಡಿನ ರಾಜ ಕಿಂಗ್ ಎಡ್ವರ್ಡ್ ಅವರ ಪಟ್ಟಾಭಿಷೇಕ ಮಹೋತ್ಸವಕ್ಕೆ ಲಂಡನ್ನಿಗೆ ಹೋಗುವಾಗ ಈ ಆಜ್ಞೆಯನ್ನು ಜಾರಿಗೊಳಿಸಬೇಕೆಂಬ ಆದೇಶ ನೀಡಿ ಹೊರಟರು. ರಾಜ್ಯದ ಶೇಕಡಾ 50ರಷ್ಟು ಸರ್ಕಾರಿ ನೌಕರಿಗಳು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೇ ಮೀಸಲಿಡಬೇಕು ಎಂದು ಆದೇಶಿಸಲಾಗಿತ್ತು. 

ಸಾಮಾಜಿಕ ಸುಧಾರಣೆಯ ಭಾಗವಾಗಿ ಮೀಸಲಾತಿ ನೀಡಿದ್ದು ದೇಶದ ಇತಿಹಾಸದಲ್ಲೇ ಮೊದಲ ಹೆಜ್ಜೆಯಾಗಿತ್ತು.

1902, ಜುಲೈ 26ರ ಮೂಲ ಆದೇಶ ಹೀಗಿದೆ:

`ಕೊಲ್ಲಾಪುರ ರಾಜ್ಯದಲ್ಲಿ ಎಲ್ಲ ಜನವರ್ಗಗಳಿಗೂ ಸಮಾನ ಶೈಕ್ಷಣಿಕ ಅವಕಾಶ ಸಿಗುವಂತೆ ಪ್ರಯತ್ನಗಳನ್ನು ಮಾಡಲಾಗಿದೆ. ಆದರೆ ಅತಿ ಹಿಂದುಳಿದ ವರ್ಗಗಳಲ್ಲಿ ಈ ಸುಧಾರಣಾ ಪ್ರಯತ್ನಗಳು ಯಶ ಕಾಣಲಿಲ್ಲವೆಂದು ವಿಷಾದದಿಂದಲೇ ಹೇಳಬೇಕಿದೆ. ನಾವು ಸೂಕ್ಷ್ಮವಾಗಿ ಅವಲೋಕಿಸಿ ನಿರ್ಧಾರ ತೆಗೆದುಕೊಂಡಿರುವಂತೆ ಆ ಜನಸಮುದಾಯಗಳಲ್ಲೂ ಸುಧಾರಣೆ ಕಂಡುಬರಬೇಕೆಂದರೆ ಉನ್ನತ ಶಿಕ್ಷಣ ಪಡೆದ ಹಿಂದುಳಿದ ವರ್ಗದವರಿಗೆ ಸೂಕ್ತ ಉದ್ಯೋಗಾವಕಾಶ ನೀಡಬೇಕಿದೆ. ಎಂದೇ ಮಹಾರಾಜರು ಸೂಕ್ಷ್ಮವಾಗಿ ಅವಲೋಕಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ: ನಮ್ಮ ರಾಜ್ಯದ ಹಿಂದುಳಿದ ವರ್ಗಗಳು ಶಿಕ್ಷಣ ಪಡೆಯಬೇಕು ಹಾಗೂ ಪಡೆದವರಿಗೆ ನೌಕರಿಗಳಲ್ಲಿ ಹೆಚ್ಚು ಭಾಗವನ್ನು ಮೀಸಲಿಡಬೇಕು.’

ಈ ಆದೇಶದ ಜೊತೆಗೇ ಒಂದು ಆಜ್ಞೆಯೂ ಹೊರಬಿತ್ತು:

`ಈ ಆದೇಶ ಬಂದ ದಿನಾಂಕದಿಂದ 50% ಖಾಲಿಯಾದ ಸರ್ಕಾರಿ ಹುದ್ದೆಗಳಿಗೆ ಹಿಂದುಳಿದ ವರ್ಗದ ವಿದ್ಯಾವಂತರನ್ನೇ ನೇಮಿಸಬೇಕು. ಹಿಂದುಳಿದ ವರ್ಗದ ಜನರ ಪ್ರಾತಿನಿಧ್ಯ ಶೇಕಡಾ 50ಕ್ಕಿಂತ ಕಡಿಮೆ ಇರುವ ಎಲ್ಲ ಕಚೇರಿಗಳಲ್ಲಿ ಮುಂದಿನ ನೇಮಕಾತಿಗಳನ್ನು ಹಿಂದುಳಿದ ವರ್ಗಗಳಿಗೇ ಕೊಡಬೇಕು. ಎಲ್ಲ ಇಲಾಖಾ ಮುಖ್ಯಸ್ಥರೂ ಈ ಆದೇಶ ಬಂದ ನಂತರ ತ್ರೈಮಾಸಿಕ ಪ್ರಗತಿ ವರದಿಯನ್ನು ಸಲ್ಲಿಸತಕ್ಕದ್ದು. ಈ ಆದೇಶದಲ್ಲಿರುವ ಹಿಂದುಳಿದ ವರ್ಗಗಳೆಂದರೆ ಬ್ರಾಹ್ಮಣರು, ಪ್ರಭುಗಳು, ಶೇಣ್ವಿಗಳು, ಪಾರ್ಸಿಗಳು ಮತ್ತಿತರೆ ಮುಂದುವರೆದ ಸಮುದಾಯಗಳನ್ನು ಹೊರತುಪಡಿಸಿ ಉಳಿದವರು ಎಂದು ಪರಿಗಣಿಸಬೇಕು.’

ಉದ್ಯೋಗ ಮೀಸಲಾತಿ ನೀಡಿದರೆ ಹಿಂದುಳಿದ ವರ್ಗಗಳು ಶಿಕ್ಷಣ ಪಡೆಯಲು ಮುಂದೆ ಬರಬಹುದು ಹಾಗೂ ಆ ಸಮುದಾಯದ ಏಳ್ಗೆಗೆ ಅದು ಮುಖ್ಯ ಮೆಟ್ಟಿಲಾಗಬಹುದು ಎನ್ನುವುದು ಅವರ ನಿಲುವಾಗಿತ್ತು.

1908ರಲ್ಲಿ ಹಿಂದುಳಿದ ವರ್ಗಗಳಲ್ಲಿ ಶಿಕ್ಷಣವನ್ನು ಪ್ರೋತ್ಸಾಹಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಚರ್ಚಿಸಲು ಹಾಗೂ ಕಾರ್ಯೋನ್ಮುಖರಾಗಲು ಒಂದು ಶೈಕ್ಷಣಿಕ ಪ್ರತಿಷ್ಠಾನವನ್ನು ಶುರು ಮಾಡಿದರು. ಆ ಪ್ರತಿಷ್ಠಾನಕ್ಕೆ ರಾವ್ ಬಹಾದೂರ್ ಸಬ್ನಿಸ್ ಅಧ್ಯಕ್ಷರು. ಈ. ಕೆ. ಕದಂ ಹಾಗೂ ಎ. ಬಿ. ಓಳ್ಕರ್ ಕಾರ್ಯದರ್ಶಿಗಳಾಗಿದ್ದರು. ಆಗ ಆ ಸೊಸೈಟಿಯ ವಾರ್ಷಿಕ ಸದಸ್ಯ ಶುಲ್ಕ ರೂ. 300. ಮಹಾರಾಜರು ಅದಕ್ಕೆ ಪ್ರೋತ್ಸಾಹ ನೀಡಿದ್ದಷ್ಟೇ ಅಲ್ಲ, ಆಗ ಬ್ರಿಟಿಷ್ ಸರ್ಕಾರದ ರಾಜಕೀಯ ಪ್ರತಿನಿಧಿಯಾಗಿದ್ದ ಮೇಜರ್ ವುಡ್‌ಹೌಸ್ ಕೂಡಾ ಕ್ರಿಯಾಶೀಲವಾಗಿ ಆಸಕ್ತಿ ತೋರಿಸಿ ಆ ಸೊಸೈಟಿಯ ಮೊದಲ ದರ್ಜೆ ಸದಸ್ಯರಾದರು.

ಆ ಸೊಸೈಟಿಯ ಮೊದಲ ಮತ್ತು ತಕ್ಷಣದ ಗುರಿ ಎಂದರೆ ಸ್ಥಳೀಯ ರಾಜಾರಾಂ ಪ್ರೌಢಶಾಲೆ ಮತ್ತು ಕಾಲೇಜಿನಲ್ಲಿ ಓದುತ್ತಿದ್ದ ಕೆಲ ಹಿಂದುಳಿದ ವರ್ಗಗಳ ಹುಡುಗರು ಓದು ಪೂರೈಸಲು ನೆರವಾಗುವುದು. ಆ ಹುಡುಗರಿಗಾಗಿ ವಿಶೇಷ ತರಬೇತಿ ನೀಡಲಾಯಿತು. ಅವರ ಸಾಮಾಜಿಕ ಬದುಕನ್ನು ಉತ್ತಮಗೊಳಿಸುವುದೂ ಸೊಸೈಟಿಯ ಮತ್ತೊಂದು ಉದ್ದೇಶವಾಗಿತ್ತು. ಅವರ ಓದನ್ನು ಪ್ರೋತ್ಸಾಹಿಸಲು ಬಹುಮಾನಗಳನ್ನು ಘೋಷಿಸಲಾಯಿತು. ಕೊಲ್ಲಾಪುರದ ನಾಲ್ವರು ಅಸ್ಪೃಶ್ಯ ಸಮುದಾಯದ ಹುಡುಗರಿಗೆ ಸ್ಕಾಲರ್‌ಶಿಪ್ ಕೊಡಲಾಯಿತು. ಜೊತೆಗೆ ಆ ಸಮುದಾಯಗಳಲ್ಲಿ ಶಿಕ್ಷಣದ ಮಹತ್ವ ಮತ್ತು ಉಪಯೋಗ ತಿಳಿಸುವ ಸಲುವಾಗಿ ಹಲವು ಉಪನ್ಯಾಸಗಳನ್ನು ಏರ್ಪಡಿಸಲಾಯಿತು. ಸಣ್ಣ ಮೊತ್ತದ ಬಹಳಷ್ಟು ಬಹುಮಾನಗಳನ್ನು ವಿದ್ಯಾಭಾಸದಲ್ಲಿ ಮುಂದಿರುವವರಿಗೆ ಕೊಡಲಾಯಿತು. 

ಈ ಸುದ್ದಿ ಓದಿದ್ದೀರಾ?: ಹೊಸಿಲ ಒಳಗೆ-ಹೊರಗೆ | ಹೆಣ್ಣು, ಲೆಸ್ಬಿಯನ್, ಗೇ, ಕ್ವೀರ್, ಗಂಡು... ಯಾರಿಗೇ ಆಗಲಿ, ಮನೆಗೆಲಸ ಹೊರೆಯಾಗದಿರಲಿ

ಮೊದಲು ಅಸ್ಪೃಶ್ಯರಿಗೆಂದೇ ಪ್ರತ್ಯೇಕ ಶಾಲೆಗಳಿದ್ದವು. ಶಾಹು 1894ರಲ್ಲಿ ಅಧಿಕಾರಕ್ಕೆ ಬಂದಾಗ ಅಂತಹ 5 ಶಾಲೆಗಳಲ್ಲಿ 168 ವಿದ್ಯಾರ್ಥಿಗಳಿದ್ದರು. ನಂತರ ವರ್ಷದಿಂದ ವರ್ಷಕ್ಕೆ ಅಂತಹ ಶಾಲೆಗಳೂ, ಅದರಲ್ಲಿ ಓದುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತ ಹೋಯಿತು. 1896-97ರಲ್ಲಿ ವಿಶೇಷ ಶಾಲೆಗಳ ಸಂಖ್ಯೆ 6 ಆಯಿತು, ವಿದ್ಯಾರ್ಥಿಗಳ ಸಂಖ್ಯೆ 196ಕ್ಕೇರಿತು. 1907-08ರಲ್ಲಿ ವಿಶೇಷ ಶಾಲೆಗಳ ಸಂಖ್ಯೆ 16 ಹಾಗೂ ವಿದ್ಯಾರ್ಥಿಗಳ ಸಂಖ್ಯೆ 418ಕ್ಕೇರಿತು. ಅವರಲ್ಲಿ 40 ವಿದ್ಯಾರ್ಥಿನಿಯರಿದ್ದರು.1909-10ರಲ್ಲಿ ಶಾಲೆಗಳ ಸಂಖ್ಯೆ 22, ವಿದ್ಯಾರ್ಥಿಗಳ ಸಂಖ್ಯೆ 694 ಆಯಿತು. 1902-13ರ ಆಡಳಿತ ವರದಿಯು ಮಹಾರಾಜರಿಗೆ ಹಿಂದುಳಿದವರಲ್ಲಿ ಶೈಕ್ಷಣಿಕ ಜಾಗೃತಿ ಹೆಚ್ಚು ಮಾಡುವುದರಲ್ಲಿ ಇದ್ದ ಆಸಕ್ತಿಯನ್ನು ತೋರಿಸುತ್ತದೆ. ಆ ವೇಳೆಗೆ `ಅಂತ್ಯಜ’ರಿಗೆಂದು 27 ಶಾಲೆಗಳಿದ್ದು 850 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆಂದೂ, ಆ ಸಂಖ್ಯೆಯನ್ನು ಹೆಚ್ಚಿಸುವ ಅವಶ್ಯಕತೆಯಿದೆಯೆಂದೂ ವರದಿ ಹೇಳುತ್ತದೆ. 1913-14ರ ರಾಜ್ಯ ಸರ್ಕಾರದ ವರದಿಯು ಹಿಂದುಳಿದವರ ಕಲ್ಯಾಣ ಕಾರ್ಯಕ್ರಮಗಳಲ್ಲಿ ಆಗಲೇ ಉತ್ತಮ ಸ್ಥಿತಿ ತಲುಪಿರುವ ಮೇಲ್ಜಾತಿ ಜನರ ಸಹಕಾರ ಇಲ್ಲದಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸುತ್ತದೆ.

ಡಾ. ಎಚ್. ಎಸ್. ಅನುಪಮಾ ಅವರ 'ಛತ್ರಪತಿ ಶಾಹೂ: ಜನರ ನೋವಿಗೆ ಮಿಡಿದ ಪ್ರಾಣಮಿತ್ರ' ಪುಸ್ತಕದ ಆಯ್ದ ಭಾಗ.

ಮೀಸಲಾತಿ, ಅಸ್ಪೃಶ್ಯತಾ ನಿವಾರಣೆ, ಅಲೆಮಾರಿ ಸಮುದಾಯದ ಅಭ್ಯುದಯ, ಶಿಕ್ಷಣ ಮತ್ತು ಉದ್ಯೋಗಾವಕಾಶ ಮೊದಲಾದ ಶಾಹೂ ಅವರ ಸಾಮಾಜಿಕ ಕಳಕಳಿಯ ಕಾರ್ಯಗಳ ಬಗೆಗೆ ತಿಳಿಯಲು 'ಛತ್ರಪತಿ ಶಾಹೂ: ಜನರ ನೋವಿಗೆ ಮಿಡಿದ ಪ್ರಾಣಮಿತ್ರ' (ಛತ್ರಪತಿ ಶಾಹೂ ಜೀವನಚರಿತ್ರೆ, ಲೇ: ಡಾ. ಎಚ್. ಎಸ್. ಅನುಪಮಾ, ಪ್ರಕಟಣೆ: ಲಡಾಯಿ ಪ್ರಕಾಶನ) ಪುಸ್ತಕವನ್ನು ಓದಿ. ಪ್ರತಿಗಳಿಗಾಗಿ ಸಂಪರ್ಕಿಸಿ:9480286844 

ನಿಮಗೆ ಏನು ಅನ್ನಿಸ್ತು?
0 ವೋಟ್