ಎನ್‌ಇಪಿ| ಯಜಮಾನರ ಕಾರ್ಯಸೂಚಿ ಬಿಂಬಿಸುವ ಕರ್ನಾಟಕದ ಸಮಾಜ ವಿಜ್ಞಾನ ನಿಲುವು ವರದಿ

NEP 2020

ಈಗಾಗಲೇ ವಿವಾದಿತ ಪಠ್ಯ ಪರಿಷ್ಕರಣೆಯ ಸಮಿತಿಗಳಲ್ಲಿ ಸದಸ್ಯರಂತೆ, ಆಳುವವವರ ರಾಜಕೀಯ ಮತ್ತು ಸೈದ್ದಾಂತಿಕ ನಿಲುವುಗಳನ್ನು ಒಪ್ಪಿರುವವರನ್ನೇ ಈ ಸಮಿತಿಗೂ ಆಯ್ಕೆ ಮಾಡಲಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಇಂಥಾ ಅಪಸವ್ಯಗಳ ಮೂಲಕ ಶಾಲಾಶಿಕ್ಷಣದಲ್ಲಿ ನಮ್ಮ ರಾಜ್ಯವು ಮಾಡಿರುವ ಅಷ್ಟಿಷ್ಟು ಗಳಿಕೆಯೂ ನಷ್ಟವಾಗುತ್ತಿದೆ

ಕರ್ನಾಟಕ ಶಾಲಾ ಶಿಕ್ಷಣ, ಸಂಶೋಧನಾ ಮತ್ತು ತರಬೇತಿ ಇಲಾಖೆಯ ಸಮಾಜ ವಿಜ್ಞಾನಗಳ ಶಿಕ್ಷಣದ ನಿಲುವು ವರದಿ 
(ವರದಿ-4) ಎರಡು ನಾಲಗೆಯ ಹೇಳಿಕೆಯೇ ಸರಿ. ಸಮಾಜ ವಿಜ್ಞಾನದ ಬೋಧನೆಯನ್ನು ಉತ್ತಮಗೊಳಿಸಲು ಬೇಕಾದ ಆಡಳಿತಾತ್ಮಕ ಮತ್ತು ಸಾಂಸ್ಥಿಕ ವಿಷಯಗಳನ್ನು ಅದು ಎತ್ತಿಕೊಳ್ಳುತ್ತದೆ. ಆದರೆ ಅದು ಅಂತಿಮವಾಗಿ ಕರ್ನಾಟಕವನ್ನು ಈಗ ಆವರಿಸಿರುವ ಬೌದ್ಧಿಕ, ರಾಜಕೀಯ ಭಟ್ಟಂಗಿತನಕ್ಕೆ ಬಲಿಯಾಗಿದೆ.

ಸಾಮಾಜಿಕ ಅರಿವು ಮತ್ತು ಸಂವೇದನಾಶೀಲತೆಯನ್ನು ಸಾಧ್ಯಗೊಳಿಸುವ ಸಮಾಜ ವಿಜ್ಞಾನದ ಸಾಧ್ಯತೆಗೆ ಅವಕಾಶ ನೀಡದೇ ಈ ವರದಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪದ, ವಾಕ್ಯಗಳನ್ನು ಗಿಣಿ ಪಾಠ ಒಪ್ಪಿಸುತ್ತದೆ. ಭಾರತದಲ್ಲಿ ಸಮಾಜ ವಿಜ್ಞಾನಗಳು ಪಶ್ಚಿಮ ಕೇಂದ್ರಿತವಾಗಿವೆ ಎಂಬುದನ್ನು ಈ ವರದಿ ಪ್ರಶ್ನಿಸುವುದು ತಪ್ಪೇನಲ್ಲ. ಆದರೆ ಯುರೋಪ್‌, ಅಮೆರಿಕಾ ಕೇಂದ್ರಿತ ಸಮಾಜ ವಿಜ್ಞಾನ ಜ್ಞಾನ ರಾಶಿಗೆ ಸರಿಯಾದ ಅಪ್ಪಟ ಪರ್ಯಾಯ ಏನು ಎಂಬುದನ್ನು ಹೇಳಲು ಈ ವರದಿ ವಿಫಲವಾಗಿದೆ.     

ಇದು ತನ್ನದೇ ಮಾನದಂಡ ಬಳಸಿದರೆ ಭಾರತವನ್ನು ಅರ್ಥ ಮಾಡಿಕೊಳ್ಳುವದಕ್ಕೆ ಸಹಕಾರಿಯಗಬಹುದಾದ 14ನೇ ಶತಮಾನದ ಚಿಂತಕ ಇಬ್ನ್‌ ಖಾಲ್ಡನ್‌ನ್ನು ಪಥಾನ್ವೇಶಕ ಎಂದು ಗುರುತಿಸುತ್ತದೆಯೇ? ಸಮುದಾಯ, ಅಸ್ಮಿತೆ (ಐಡೆಂಟಿಟಿ)  ಜ್ಞಾನ, ಅಧಿಕಾರದ ಕುರಿತು ಈತನ ಚಿಂತನೆಗಳು ಭಾರತವನ್ನು ಅರ್ಥಮಾಡಿಕೊಳ್ಳಲು ಮುಖ್ಯ. ಒಂದು ವೇಳೆ ಭಾರತದ ಸಂಸ್ಕೃತಿ ಕೇಂದ್ರಿತ ಸಮಾಜ ವಿಜ್ಞಾನದ ಪಠ್ಯವೇ ಇರಬೇಕೆಂದಾದಲ್ಲಿ ಭಾರತದ ಸಾಮಾಜಿಕ ರಚನೆಯ ಸಂಕೀರ್ಣತೆಯ ಬಗ್ಗೆ ಟಾಗೋರ್‌ ಮತ್ತು ಅಂಬೇಡ್ಕರ್‌ ಅವರ ಅಮೂಲ್ಯ  ಬರವಣಿಗೆಗಳನ್ನು ಈ ವರದಿ ಯಾಕೆ ಗುರುತಿಸಿಲ್ಲ? ಬಹುತ್ವವನ್ನು ಎತ್ತಿ ಹಿಡಿದು ಸಂಭ್ರಮಿಸಿದ ಕುವೆಂಪು ಅವರಿಂದ ರಹಮತ್‌ ತರಿಕೆರೆ ವರೆಗಿನ ಕನ್ನಡ ಬರಹಗಾರರು ಈ ಪಠ್ಯಕ್ರಮದ ಭಾಗವಾಗಿರುತ್ತಾರಾ? ಬ್ರಾಹ್ಮಣಶಾಹಿ ಪಿತೃ ಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸಿದ ಅಕ್ಕಮಹಾದೇವಿ ಅಥವಾ ಪಂಡಿತ್‌ ರಮಾಬಾಯಿ ಅವರುಗಳು ಈ ಪಠ್ಯಕ್ರಮದಲ್ಲಿರುತ್ತಾರಾ? ನಮ್ಮ ಶ್ರೇಣೀಕೃತ ಸಮಾಜದ ಬುನಾದಿಯಾಗಿರುವ ಜಾತಿ ಪದ್ಧತಿಯಂಥಾ (ಇದು ಮನಃಸ್ಥಿತಿ ಮತ್ತು ಸಾಮಾಜಿಕ ಸಂಸ್ಥೆ-ಎರಡೂ ಆಗಿದೆ) ಸಾಮಾಜಿಕ ಸಂಸ್ಥೆಗಳನ್ನು ಗುರುತಿಸಲು ವಿಫಲವಾಗಿರುವುದೇ ಈ ವರದಿಯ ಬಲು ಲೋಪ.

ನಮ್ಮಲ್ಲಿ ತಾರತಮ್ಯ, ಅಸಮಾನತೆ ಮತ್ತು ಅವಮಾನಗಳನ್ನು ಅಂತರ್ಗತಗೊಳಿಸಿರುವ ಇಂಥಾ ವ್ಯವಸ್ಥೆಗಳನ್ನು ಪ್ರಶ್ನೆ ಮಾಡಬೇಕಾದ ಅವಶ್ಯಕತೆಯನ್ನೇ ಈ ವರದಿ ಗುರುತಿಸದೇ ಹೋಗಿದೆ ಅಷ್ಟೇ ಅಲ್ಲ, ಎಲ್ಲಾ ಸಂಪ್ರದಾಯಗಳೂ ಮೌಲ್ಯಯುತ ಎಂಬುದಕ್ಕೆ ತಲೆಬಾಗುವ ಮೆತ್ತಗಿನ ನಿರ್ಣಯಕ್ಕೆ ಬರುತ್ತದೆ.

ಪ್ರಗತಿಪರ ಚಿಂತನೆಗಳ ಬಗ್ಗೆ ವಿವರಿಸುವುದೇ ಇಲ್ಲ

‘ಅನುಭವಾಧಾರಿತ ಕಲಿಕೆ ಮೇಲೆ ಶಿಕ್ಷಣವನ್ನು ಕಟ್ಟಬೇಕೆಂಬುದನ್ನು ವರದಿ ಗುರುತಿಸಿದೆ. ಆದರೂ ನಮ್ಮ  ಸಮಾಜದ ವಿಭಿನ್ನತೆಯನ್ನು ವೈವಿಧ್ಯತೆಯ ಮೂಲಕ  ಅರ್ಥಮಾಡಿಕೊಳ್ಳಬಹುದು ಎಂಬುದನ್ನು ಎತ್ತಿ ತೋರಿಸಲು ವಿಫಲವಾಗಿದೆ. ಈ ವರದಿ ತನ್ನದೇ ವೈರುಧ್ಯಗಳ ಕಾರಣಕ್ಕೆ ಮುಗ್ಗರಿಸಿದೆ. ಅದು ಸಂವಿಧಾನದ ಪ್ರಾಮುಖ್ಯತೆಯನ್ನೂ ಅದರ ಮೌಲ್ಯಗಳನ್ನೂ  ಉಲ್ಲೇಖಿಸಿದರೂ, ಮಾನವೀಯ ಸಂಭಾವಿತ ಸಮಾಜವನ್ನು ಕಟ್ಟಲು ಅನುವು ಮಾಡುವ; ಸಂವಿಧಾನದಲ್ಲಿ ಹೇಳಿರುವ ಪ್ರಜಾಸತ್ತೆ, ಸರ್ವಧರ್ಮ ಸಮಭಾವ, ನ್ಯಾಯ, ಸಮಾನತೆ, ಮತ್ತಿತರ ಪ್ರಗತಿಪರ ಚಿಂತನೆಗಳ ಬಗ್ಗೆ ವಿವರಿಸುವುದೇ ಇಲ್ಲ.

ಅದರ ಬದಲು ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ರ ಒತ್ತು ಇರುವ ಅಂಶಗಳಿಂದಲೇ ಎತ್ತಿಕೊಂಡು  ಸಮಾಜ ವಿಜ್ಞಾನದ ಕಲಿಕೆಗೆ ʼಆತ್ಮʼ, ʼಮೋಕ್ಷ,ʼ ʼಭಕ್ತಿʼ, ʼಜಾತಿʼ, ʼಬೇರಾದಾರಿʼ ಮುಂತಾದ ಪರಿಕಲ್ಪನೆಗಳು ಕೇಂದ್ರ ಚಿಂತನೆಗಳು ಎಂದು ಹೇಳುತ್ತದೆ! ಅಷ್ಟೇ  ಅಲ್ಲ, ಈ ಭಾರತೀಯ ಪದಗಳನ್ನು ಅನುವಾದಿಸದೇ ಹಾಗೇ ಉಳಿಸಿಕೊಂಡೇ ಪಾಠ ಮಾಡಬೇಕೆಂದೂ  ಹೇಳುತ್ತದೆ.  ಇದೇ ಸಮಯಕ್ಕೆ ಭಾರತೀಯೇತರ ಪದಗಳಾದ ರಿಲಿಜಿಯನ್‌, ಸಾಲ್ವೇಶನ್‌, ಗ್ರೇಸ್‌, ಡಿವಿನಿಟಿ ಮುಂತಾದ ಪದಗಳನ್ನು ಹಾಗೇ ಉಳಿಸಿಕೊಳ್ಳಬೇಕೆಂದು ಹೇಳುತ್ತದೆ. ಈ ಸಮಿತಿ ಸಮಾಜ ವಿಜ್ಞಾನ ಕಲಿಕೆಯ ಬುನಾದಿಯನ್ನೇ ಅಲ್ಲಗೆಳೆಯುವ ಪ್ರಯತ್ನಕ್ಕೆ ಕೈ ಹಾಕಿದೆ. ಸಮಾಜ ವಿಜ್ಞಾನ ಕಲಿಕೆ ಉದ್ದೇಶವೇ  ತೌಲನಿಕ ದೃಷ್ಟಿಕೋನಗಳಿಗೆ ಅನುವು ಮಾಡಿ, ಒಂದು ಸಮಾಜಕ್ಕೆ ಮುಖ್ಯವಾದ ಹೊಸ ಚಿಂತನೆ ಮತ್ತು ದೃಷ್ಟಿಕೋನಗಳನ್ನು ಬೆಳೆಸುವುದು.
ಈ ವರದಿ ವಿಮರ್ಶಾತ್ಮಕಪ್ರಜ್ಞೆಯನ್ನು ಬೆಳೆಸಬೇಕೆಂದು ಹೇಳಿ “ನಮ್ಮ ಪರಂಪರೆಯನ್ನು, ಭಾರತದ ಸಂದರ್ಭದ ಮನುಷ್ಯರ ಅಸ್ತಿತ್ವವನ್ನು ಅಗೌರವಿಸುವ, ತಿರಸ್ಕಾರದಿಂದ ನೋಡುವ ಸ್ವಭಾವ ಸಮಾಜ ವಿಜ್ಞಾನಕ್ಕಿದೆ“ (ಪುಟ-೨) ಎಂಬಂಥಾ ಅಸಂಬದ್ಧ ಹೇಳಿಕೆಯನ್ನು ನೀಡುತ್ತದೆ. 

ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತದಲ್ಲಿ ಮಕ್ಕಳಿಗೆ ಶ್ಲೋಕಗಳನ್ನು ಹೇಳಿಕೊಡಬೇಕೆಂದು ಈ ವರದಿ ಕರೆಕೊಡುತ್ತದೆ.  ಮಕ್ಕಳಿಗೆ ಬೇರೆ ಬೇರೆ  ಪಠ್ಯ ಪರಂಪರೆ, ದರ್ಶನಗಳು, ಋಷಿಗಳು, ಪರಂಪರೆ, ಭಾಷೆ ಮತ್ತು ಮೌಖಿಕವಾಗಿ ಉಚ್ಛರಿಸುವ ರೀತಿಗಳನ್ನು ಪರಿಚಯಿಸಬೇಕೆಂದು ಹೇಳುತ್ತದೆ. (ಪುಟ-೧೩) ಹಾಗೇ ಸಮಾಜ ವಿಜ್ಞಾನಗಳು ಅಸೈದ್ಧಾಂತಿಕವಾಗಿ ಇರಬೇಕು, ಸಾರ್ವಜನಿಕ ವಿವಾದಗಳಿಂದ ಹೊರತಾಗಿರಬೇಕು ಎಂದು ಹೇಳುತ್ತದೆ.   

ಈ ವರದಿ ಸಮಾಜ ವಿಜ್ಞಾನಗಳ ಮುಖ್ಯ ಜವಾಬ್ದಾರಿಗಳನ್ನು ಕಡೆಗಣಿಸಿದೆ. ಚಾರಿತ್ರಿಕ ತಿಕ್ಕಾಟಗಳನ್ನು ಆ ಕಾಲದ ಸಂದರ್ಭಗಳ ಮೂಲಕವೇ ಅರ್ಥ ಮಾಡಿಕೊಳ್ಳುವ ಮತ್ತು ಆ ತಿಕ್ಕಾಟಗಳನ್ನು ವರ್ತಮಾನಕ್ಕೆ ಎಳೆದು ತರದಂತೆ ನೋಡಿಕೊಳ್ಳುವ ಜವಾಬ್ದಾರಿ ಇದು. ಅದೇ ರೀತಿ ವರ್ತಮಾನದ ಭಿನ್ನತೆಗಳನ್ನು ಸಾಮಾಜಿಕ ಸಾಂಸ್ಕೃತಿಕ ಅಂಶಗಳ ಮೂಲಕ ಅರ್ಥ ಮಾಡಿಕೊಳ್ಳಬೇಕು. ಹೀಗೆ ಮಾಡಿದಾಗ ಮಾತ್ರ ಅನುಕಂಪ ಮತ್ತು ಸಹಿಷ್ಣುತೆಗಳು ಬೆಳೆದಾವು.
ಕರ್ನಾಟಕದ ಇತರ ಭಾಷೆಗಳಾದ ತುಳು, ಕೊಂಕಣಿ, ಅರೆಭಾಷೆ, ಬ್ಯಾರಿ, ಹವ್ಯಕ, ಸಂಕೇತಿ ಇತ್ಯಾದಿ ಭಾಷೆಗಳಲ್ಲೂ ಸಮಾಜ ವಿಜ್ಞಾನ ಪಠ್ಯಗಳನ್ನು ಬೋಧಿಸಬೇಕೆಂಬ ನಿಲುವು ಪ್ರಶಂಸನೀಯ. ಆದರೆ, ಯಾರ್ಯಾರ ಪಠ್ಯಗಳು ಹೆಚ್ಚಿನ ಓದಿನ ಪಠ್ಯಗಳಾಗಿ ಪ್ರವೇಶ ಪಡೆಯುತ್ತದೆಂಬುದನ್ನು ಕಾದು ನೋಡಬೇಕಿದೆ.

ಈಗಾಗಲೇ  ಪಠ್ಯಗಳನ್ನು ಪರಿಷ್ಕರಿಸಿ, ತೆಳುಗೊಳಿಸಿ ವಿಕೃತಗೊಳಿಸುವ ಕರ್ನಾಟಕ ಸರ್ಕಾರದ ಹೆಜ್ಜೆ ಗತಿ ಗಮನಿಸಿದರೆ ,  ಗುಣಮಟ್ಟದ ಶಿಕ್ಷಣಕ್ಕೆ ಗಮನಾರ್ಹ ಕೊಡುಗೆ ನೀಡಿರುವ ಸಮಾಜ ವಿಜ್ಞಾನಿಗಳನ್ನು ಈ ವರದಿ ತಯಾರಿಸುವಾಗ ದೂರ ಇಟ್ಟಿರುವುದು ಅಚ್ಚರಿಯ ವಿಷಯವೇನಲ್ಲ.

ಈಗಾಗಲೇ ವಿವಾದಿತ ಪಠ್ಯ ಪರಿಷ್ಕರಣೆಯ ಸಮಿತಿಗಳಲ್ಲಿ ಸದಸ್ಯರಂತೆ, ಆಳುವವವರ ರಾಜಕೀಯ ಮತ್ತು ಸೈದ್ದಾಂತಿಕ ನಿಲುವುಗಳನ್ನು ಒಪ್ಪಿರುವವರನ್ನೇ ಈ ಸಮಿತಿಗೂ ಆಯ್ಕೆ ಮಾಡಲಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಇಂಥಾ ಅಪಸವ್ಯಗಳ ಮೂಲಕ ಶಾಲಾಶಿಕ್ಷಣದಲ್ಲಿ ನಮ್ಮ ರಾಜ್ಯವು ಮಾಡಿರುವ ಅಷ್ಟಿಷ್ಟು ಗಳಿಕೆಯೂ ನಷ್ಟವಾಗುತ್ತಿದೆ.

ಇದನ್ನು ಓದಿದ್ದೀರಾ? ಮಾನ್ಯ ಮುಖ್ಯಮಂತ್ರಿಗಳೇ ನೀವು ಕರ್ನಾಟಕದಲ್ಲಿ ಜಾರಿಗೆ ತರಬೇಕೆಂದಿರುವ ಯುಪಿ ಮಾಡೆಲ್‌ ಇದೇನಾ?

ʼ80ರ ದಶಕದ ಸುದೀರ್ಘ ಬರ ಬಿಸಿಯೂಟಕ್ಕೆ ನಾಂದಿ ಹಾಡಿತು. ರಾಷ್ಟ್ರೀಯ ಆಹಾರದ ಹಕ್ಕು ಅನುಷ್ಠಾನಗೊಳ್ಳುವ ಮೊದಲೇ ನಮ್ಮಲ್ಲಿ ಇದು ಆರಂಭವಾಯಿತು ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ದಿವಂಗತ ಅನಿತಾ ಕೌಲ್‌ ಅವರು ನಲಿ-ಕಲಿಯನ್ನು ಆರಂಭಿಸಿದರು. ಪ್ರೊ. ನಿರಂಜನಾರಾದ್ಯ ಮತ್ತಿತರರು ಸುಲಲಿತಗೊಳಿಸಿದ ಶಾಲಾಭಿವೃದ್ಧಿ ಸಮಿತಿಗಳೂ ಹೀಗೆ ಆರಂಭವಾದವು. ಇವೆಲ್ಲಾ ರಾಜ್ಯದ ಸಾಧನೆಯನ್ನು ಬಿಂಬಿಸುವ ಪ್ರಜಾಸತ್ತಾತ್ಮಕ ಶಿಕ್ಷಣ ವ್ಯವಸ್ಥೆಯ ಉದಾಹರಣೆಗಳು.

ಈಗ ಯಜಮಾನರ ಕಾರ್ಯಸೂಚಿಯನ್ನು ಪ್ರತಿಧ್ವನಿಸುವ ತಜ್ಞರ ಕೂಟವೊಂದು ಕಳೆದು ಹೋದ ಪರಂಪರೆ ಮತ್ತು ಸಂಸ್ಕೃತಿಯ ಹೆಸರಿನಲ್ಲಿ  ಧಾರ್ಮಿಕ ಮತ್ತು ರಾಷ್ಟ್ರೀಯವಾದಿ ಸಿದ್ಧಾಂತಗಳನ್ನು ಮುಂದೊತ್ತುತ್ತಿದ್ದಾರೆ. ಈ ಸಂಕುಚಿತ ಅಜೆಂಡಾಗಳ ನಿಜವಾದ ಬಲಿಪಶು ಶಿಕ್ಷಣ ವ್ಯವಸ್ಥೆ ಅಷ್ಟೇ ಅಲ್ಲ ಲಕ್ಷಾಂತರ ಎಳೆ ಮನಸ್ಸುಗಳ ಮಕ್ಕಳು. ಸೌಹಾರ್ದದಿಂದ ಬಾಳುವ ಅವರ ಭವಿಶ್ಯವನ್ನು ಸಾಧ್ಯಗೊಳಿಸುವ ಶಿಕ್ಷಣ ವ್ಯವಸ್ಥೆಯನ್ನು ಪ್ರೋತ್ಸಾಹಿಸುವಲ್ಲಿ ವಿಫಲವಾಗಿರುವ ಕಾರಣ  ಅವರ ಭವಿಶ್ಯವೂ ಮಸುಕಾಗಲಿದೆ.

 (ಆಭಾರ: 22-೦7-2022 ರಂದು ಡೆಕ್ಕನ್‌ ಹೆರಾಲ್ಡ್‌ ನಲ್ಲಿ ಪ್ರಕಟವಾದ ಲೇಖನ)                                        

ಅನುವಾದ: ಕೆ ಪಿ ಸುರೇಶ
ನಿಮಗೆ ಏನು ಅನ್ನಿಸ್ತು?
1 ವೋಟ್