ಕ್ಷಮಾಪಣೆ ಬಯಸದ ಕ್ರಾಂತಿಕಾರಿಗಳು ಭಾಗ 4 | ಸ್ವಾತಂತ್ರ್ಯ ಸಿಕ್ಕ ನಂತರ ಬಿಡುಗಡೆಗೊಂಡ ಸೋಹನ್‌ ಸಿಂಗ್‌ ಬಾಖ್ನಾ

ಅಕ್ಟೋಬರ್‌ 13, 1914ರಂದು ಬ್ರಿಟಿಷರು ಬಾಖ್ನಾ ಅವರನ್ನು ಕೊಲ್ಕತ್ತಾದಲ್ಲಿ ಬಂಧಿಸಿದರು. ಶಿಕ್ಷೆಗೊಳಗಾದ ಬಾಖ್ನಾರನ್ನು ಮೊದಲು ಮುಲ್ತಾನ್‌ನ ಜೈಲಿನಲ್ಲಿರಿಸಲಾಯಿತು. ಬಳಿಕ ಕೊಯಂಬತ್ತೂರು ಜೈಲಿಗೆ, ಅಲ್ಲಿಂದ ಯರವಾಡಾ ಜೈಲಿಗೆ ಸ್ಥಳಾಂತರಿಸಲಾಯಿತು. ಸಿಖ್‌ ಕೈದಿಗಳಿಗೆ ಪೇಟ ಹಕ್ಕಿನ ಬಗ್ಗೆ ಬಾಖ್ನಾ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಹೂಡಿದರು.

ಸೋಹನ್‌ ಸಿಂಗ್‌ ಬಾಖ್ನಾ ಜನವರಿ 22, 1870 ರಂದು ಅಮೃತಸರದ ಬಳಿಯ ಹಳ್ಳಿಯಲ್ಲಿ ಜನಿಸಿದರು. ಪಂಜಾಬಿನಲ್ಲೇ ಓದಿ ಸ್ಥಳೀಯವಾಗಿ ರೈತರು ನಡೆಸುತ್ತಿದ್ದ ಬಿಡಿಬಿಡಿ ಪ್ರತಿಭಟನೆಗಳಲ್ಲಿ ಅಷ್ಟಿಷ್ಟು ಭಾಗವಹಿಸಿದರೂ ಪಂಜಾಬಿನಲ್ಲಿ ರೈತರ ಸ್ಥಿತಿ ದಿನೇ ದಿನೇ ದಾರುಣವಾಗುತ್ತಿದ್ದಂತೆ, ಬಾಖ್ನಾ ಅಮೆರಿಕಕ್ಕೆ ತೆರಳಿ, ಅಲ್ಲಿನ ಟಿಂಬರ್‌ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ದುಡಿಯತೊಡಗಿದರು. ನೂರಾರು ಭಾರತೀಯರು ಅಮೆರಿಕದಲ್ಲಿ ಉದ್ಯೋಗ ಅರಸಿ ಹೋದರೂ ಅಲ್ಲಿ ಅವರ ಬಗ್ಗೆ  ಸರಕಾರ ಉದಾಸೀನ ತೋರುತ್ತಿತ್ತು. ಅದೇ ವೇಳೆಗೆ ಭಾರತದ ಬ್ರಿಟಿಷ್‌ ದಬ್ಬಾಳಿಕೆ ವಿರುದ್ಧ ಈ ಭಾರತೀಯರು ಕ್ರಿಯಾಶೀಲರಾದರು. ಹೀಗೆ ಹುಟ್ಟಿದ್ದು ಗದ್ದಾರ್‌ ಸಂಘಟನೆ.

ಸಶಸ್ತ್ರ ಕ್ರಾಂತಿ ಮೂಲಕ ಬ್ರಿಟಿಷ್ ಆಡಳಿತವನ್ನು ಕಿತ್ತೊಗೆಯುವುದು ಗದ್ದಾರ್‌ ಸಂಘಟನೆಯ ಗುರಿಯಾಗಿತ್ತು. ಬಾಖ್ನಾ ಗದ್ದಾರ ಸಂಘಟನೆಯ ನಾಯಕರಾದರು. ಕೋಮಗತಮರು ಹಡಗಿನಲ್ಲಿ ಭಾರತದ ಕ್ರಾಂತಿಕಾರಿಗಳಿಗೆ ಶಸ್ತ್ರಾಸ್ತ್ರ  ಸಾಗಿಸಿದ್ದೂ ಈ ಸಾಹಸದ ಭಾಗ.

ಈ ಉದ್ದೇಶಿತ ಕ್ರಾಂತಿಯಲ್ಲಿ ಭಾಗವಹಿಸಲು ಭಾಕ್ನಾ ಭಾರತ ತಲುಪಿದರು. ಆದರೆ ಆಗಲೇ ಬ್ರಿಟಿಷ‌ರು ಈ ಸಂಚಿನ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಕಾರಣ ಇದು ವಿಫಲವಾಯಿತು. ಅಕ್ಟೋಬರ್‌ 13, 1914ರಂದು ಬ್ರಿಟಿಷರು ಬಾಖ್ನಾ ಅವರನ್ನು ಕೊಲ್ಕತ್ತಾದಲ್ಲಿ ಬಂಧಿಸಿದರು. ವಿಚಾರಣೆ ಬಳಿಕ ಶಿಕ್ಷೆಗೊಳಗಾದ ಬಾಖ್ನಾ ಅವರನ್ನು ಮೊದಲು ಮುಲ್ತಾನ್‌ನ ಜೈಲಿನಲ್ಲಿರಿಸಲಾಯಿತು. ಬಳಿಕ ಕೊಯಂಬತೂರ್‌ ಜೈಲಿಗೆ, ಅಲ್ಲಿಂದ ಯರವಾಡಾ ಜೈಲಿಗೆ ಸ್ಥಳಾಂತರಿಸಲಾಯಿತು. ಸಿಖ್‌ ಕೈದಿಗಳಿಗೆ ಪೇಟ ಹಕ್ಕಿನ ಬಗ್ಗೆ ಬಾಖ್ನಾ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಹೂಡಿದರು. ಮತ್ತೆ ಬ್ರಿಟಿಷ್‌ ಸರಕಾರ ಅವರನ್ನು ಲಾಹೋರ್‌ ಜೈಲಿಗೆ ಎತ್ತಂಗಡಿ ಮಾಡಿತು. ಅಲ್ಲಿ ಕೆಳ ಜಾತಿ ಸಿಖ್ಖರು ಮತ್ತು ಮೇಲ್ಜಾತಿ ಸಿಖ್ಖರ ನಡುವೆ ಪಂಕ್ತಿ ಬೇಧ ವಿರೋಧಿಸಿ ಬಾಖ್ನಾ ಮತ್ತೆ ಉಪವಾಸ ಸತ್ಯಾಗ್ರಹ ಹೂಡಿದರು! 1929ರಲ್ಲಿ ಮತ್ತೆ ಭಗತ್‌ಸಿಂಗ್‌ ಪರವಾಗಿ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾದರು. ಹದಿನಾರು ವರ್ಷಗಳ ಸುದೀರ್ಘ ಜೈಲುವಾಸದ ಬಳಿಕ 1930ರಲ್ಲಿ ಬಾಖ್ನಾ ಅವರ ಬಿಡುಗಡೆಯಾಯಿತು.

ಬಿಡುಗಡೆಯ ಬಳಿಕ ಅವರು ಕಾರ್ಮಿಕ ಮತ್ತು ರೈತ ಚಳವಳಿಯಲ್ಲಿ ತೀವ್ರವಾಗಿ ತೊಡಗಿಸಿಕೊಂಡರು. ಜೊತೆಗೆ ಕಮ್ಯುನಿಸ್ಟ್‌ ಪಕ್ಷದ ಜೊತೆಗೂ ಗುರುತಿಸಿಕೊಂಡರು. ಜೈಲಿನಲ್ಲಿದ್ದ ಇತರ ಗದ್ದರ್‌ ಸಂಘಟನೆಯ ಸದಸ್ಯರ ಬಿಡುಗಡೆಗೂ ಶ್ರಮಿಸಿದರು. ಎರಡನೇ ಮಹಾಯುದ್ಧದ ವೇಳೆಗೆ ಮತ್ತೆ ಬ್ರಿಟಿಷ್‌ ಸರಕಾರ ಅವರನ್ನು ಜೈಲಿಗೆ ತಳ್ಳಿತು. ಸ್ವಾತಂತ್ರ್ಯ ಸಿಕ್ಕ ಮೇಲೆಯೇ ಅವರಿಗೆ ಬಿಡುಗಡೆ ದೊರಕಿದ್ದು. ಆಗಲೇ 80ರ ಹತ್ತಿರ ವಯಸ್ಸಾಗಿದ್ದ ಈ ಧೀರೋದಾತ್ತ ವೃದ್ಧ ಕ್ರಾಂತಿಕಾರಿಯನ್ನು ಮಾರ್ಚ್‌ 31, 1948ರಂದು ಸ್ವತಂತ್ರ ಭಾರತ ಬಂಧಿಸಿ, ಮೇ 8ರಂದು ಬಿಡುಗಡೆ ಮಾಡಿತು. ಮತ್ತೆ ಪೊಲೀಸರು ಅವರನ್ನು ಬಂಧಿಸ ಹೊರಟಾಗ ನೆಹರೂ ಅವರಿಗೆ ಗೊತ್ತಾಗಿ, ಅವರ ಬಂಧನಕ್ಕೆ ಬ್ರೇಕ್‌ ಬಿದ್ದಿತು. ತನ್ನ ಇಳಿಗಾಲದವರೆಗೂ ರೈತ- ಕಾರ್ಮಿಕರ ಪರವಾಗಿ ಚಳವಳಿ ಹೂಡುತ್ತಿದ್ದ ಈ ಕ್ರಾಂತಿಕಾರಿ ಭೀಷ್ಮ  ಡಿಸೆಂಬರ್‌ 21, 1968ರಲ್ಲಿ ನಿಧನ ಹೊಂದಿದರು.

ಇದನ್ನು ಓದಿದ್ದೀರಾ? ಕ್ಷಮಾಪಣೆ ಬಯಸದ ಕ್ರಾಂತಿಕಾರಿಗಳು ಭಾಗ 3 | ಭಗತ್‌ ಸಿಂಗ್‌ ಜೊತೆಗಾರ ಬಟುಕೇಶ್ವರ್‌ ದತ್‌

ದೇಶದ ಮೊದಲ ಕ್ರಾಂತಿಕಾರಿ ಸಂಘಟನೆ ಗದ್ದಾರ್‌ನ ನೇತಾರರಾಗಿ ಸುದೀರ್ಘ ಜೈಲುವಾಸ ಅನುಭವಿಸಿದರೂ, ಸ್ವಾತಂತ್ರ್ಯ ಸಿಕ್ಕ ಬಳಿಕವೂ ತಾನು ನಂಬಿದ ಸಮಸಮಾಜದ ಕನಸು ನನಸಾಗಲು ಈ ಜೀವ ಕೊನೆವರೆಗೂ ಹೋರಾಡಿತ್ತು. ಜೈಲಿನಲ್ಲಿರುವಾಗಲೂ ತನ್ನದೇ ಧರ್ಮದ ಒಳ ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ್ದ ಇನ್‌ಸೈಡರ್‌ ಕ್ರಿಟಿಕ್‌ ಬಾಖ್ನಾ, ಹೊರಬಂದ ಮೇಲೂ ತನ್ನ ಅನುಯಾಯಿಗಳ ಬಿಡುಗಡೆಗೆ ಸತತ ಪ್ರಯತ್ನ ಮಾಡಿದ್ದ ಜೀವ.

ಸಾವರ್ಕರ್‌ ಬಗ್ಗೆ ಮಾತಾಡುವವರು ಬಾಖ್ನಾ ಅವರಂಥಾ ಕ್ರಾಂತಿಕಾರಿಗಳ ಬಗ್ಗೆ ಓದಿದರೂ ಸಾಕು, ಸಾವರ್ಕರ್‌ ಎಂಥಾ ಹುಸಿ ಮನುಷ್ಯ ಎಂದು ಗೊತ್ತಾಗುತ್ತದೆ.

ನಿಮಗೆ ಏನು ಅನ್ನಿಸ್ತು?
1 ವೋಟ್