ತಮ್ಮನ್ನು ಸವೆಸಿಕೊಂಡು ಲೋಕಕ್ಕೆ ಸುವಾಸನೆ ನೀಡುವ ಶ್ರೀಗಂಧದಂತಹವರು ಸಿದ್ದಗಂಗಾ ಶ್ರೀ

Shivakumara Swami

ಇಂದು ಸಿದ್ದಗಂಗೆಯ ಚೇತನ ಶಿವಕುಮಾರ ಸ್ವಾಮಿಯವರ ಜನ್ಮದಿನ. ಅವರು ಎಂತಹ ಆದರ್ಶಪ್ರಾಯರಾಗಿದ್ದರು, ಅವರಿಂದ ಇಂದಿನ ಮಠಾಧೀಶರು, ಗುರುಗಳು, ಜಗದ್ಗುರುಗಳು ಕಲಿಯಬೇಕಾದ್ದು ಏನು, ಕಾರ್ಯರೂಪಕ್ಕೆ ತರಬೇಕಾದದ್ದು ಏನು ಎಂಬ ಕುರಿತು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬರೆದ ವಿಶೇಷ ಲೇಖನವಿದು

ಸರ್ವಾಂಗಲಿಂಗ ಶಿವಯೋಗಿ
ಲೋಕದಲ್ಲಿಹ ನೂರಾರು ಗುರುಗಳ ನೋಡಿ ನೋಡಿ
ನಾನು ಬೇಸರಗೊಂಡೆನಯ್ಯಾ.
ವಿತ್ತಾಪಹಾರಿ ಗುರುಗಳು ನೂರಾರು;
ಶಾಸ್ತ್ರಾರ್ಥ ಹೇಳುವ ಗುರುಗಳು ನೂರಾರು;
ಮಂತ್ರತಂತ್ರದಿಂದುಭಯ ಲೋಕದಲ್ಲಿ
ಸುಖದುಃಖವೀವ ಗುರುಗಳು ನೂರಾರು;
ಸತ್ಕರ್ಮೋಪದೇಶವನರುಹಿ
ಸ್ವರ್ಗ ಮರ್ತ್ಯದಲ್ಲಿ ಸುಖವೀವ ಗುರುಗಳು ನೂರಾರು;
ವಿಚಾರಮುಖದಿಂದ ಷಟ್ಸಾಧನೆಯನರುಹುವ ಗುರುಗಳು ನೂರಾರು.
ವಿಷಯಂಗಳೆಲ್ಲ ಮಿಥ್ಯಂಗಳೆಂದರುಹಿ
ಆತ್ಮಾನುರಾಗತ್ವವನೀವ ಗುರುಗಳು ನೂರಾರು;
ಶಿವಜೀವರ ಏಕತ್ವವನರುಹಿ
ನಿರ್ಮಲಜ್ಞಾನವೀವ ಗುರುಗಳು ಪ್ರಮಥರು.
ಸಂಶಯಾಳಿಗಳನೆಲ್ಲ ಜ್ಞಾನಾಗ್ನಿಯಿಂದ ದಹಿಸಿ
ಮುಕ್ತಿಯ ಹಂಗೆಂಬುದ ಅರುಹಿನ ಬಂಧದಲ್ಲಿರಿಸಿದ ಗುರು
ಚೆನ್ನಬಸವಣ್ಣಲ್ಲದೆ ಮತ್ತೋರ್ವನ ಕಾಣೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.

Eedina App

ಶಿವಯೋಗಿ ಸಿದ್ಧರಾಮೇಶ್ವರರ ಈ ವಚನ ಸಾರ್ವಕಾಲಿಕ ಸತ್ಯಕ್ಕೆ ಹಿಡಿದ ಕನ್ನಡಿ. ನಿಜವಾದ ಗುರು ಅರಿವಿನ ಆಗರ. ನಿರ್ಮಲ ಜ್ಞಾನ ನೀಡುವುದು ಅವರ ಕಾಯಕ. ಈ ನೆಲೆಯಲ್ಲಿ ಇಂದಿನ ಗುರುಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಇಂದು ಮಠಾಧೀಶರಿಗೆ, ಗುರುಗಳಿಗೆ, ಜಗದ್ಗುರುಗಳಿಗೆ ಕೊರತೆ ಇಲ್ಲ. ಹೊಸ ಹೊಸ ಮಠಗಳು, ಆಶ್ರಮಗಳು, ಸಂತರು ಹುಟ್ಟಿಕೊಳ್ಳುತ್ತಲೇ ಇದ್ದಾರೆ. ಇದೇನು ಸಂತೋಷಪಡುವ ಸಂಗತಿಯೇ? ಮಠಗಳು, ಆಶ್ರಮಗಳು, ಸಂತರು ಹೆಚ್ಚಿದಂತೆ ಸಮಾಜದಲ್ಲಿ ಆದರ್ಶ ವ್ಯಕ್ತಿಗಳ ಸಂಖ್ಯೆ ಬೆಳೆಯಬೇಕಾಗಿತ್ತು. ಭ್ರಷ್ಟತೆ ತೊಲಗಬೇಕಿತ್ತು. ರಾಜಕಾರಣ ಪರಿಶುದ್ಧವಾಗಬೇಕಿತ್ತು. ಸೇವಾ ಮನೋಭಾವ ಬರಬೇಕಾಗಿತ್ತು. ಸ್ವಾಹ ಗುಣ ದೂರವಾಗಬೇಕಾಗಿತ್ತು. ಆದರೆ, ಹಾಗಾಗದಿರುವುದು ವಿಷಾದನೀಯ. ಈ ನೆಲೆಯಲ್ಲಿ ವಯೋವೃದ್ಧ, ಜ್ಞಾನವೃದ್ಧ, ನಡೆದಾಡುವ ದೇವರೇ ಎಂದು ಪ್ರಸಿದ್ಧರಾಗಿರುವ ಸಿದ್ಧಗಂಗೆಯ ಚೇತನ ಶ್ರೀ ಶಿವಕುಮಾರ ಸ್ವಾಮಿಗಳ ಬದುಕು ಎಲ್ಲರಿಗೂ ಮಾರ್ಗದರ್ಶಿಯಾಗಿದೆ.

AV Eye Hospital ad

ಶ್ರೀಗಳು 110 ವರ್ಷ ಬದುಕಿದ್ದರು ಎನ್ನುವುದಷ್ಟೇ ಅವರ ಹೆಗ್ಗಳಿಕೆಯಲ್ಲ. ಶಿವಶರಣರು ಮೆಚ್ಚುವಂತೆ, ಶಿವನೊಲುಮೆ ಪಡೆದವರಂತೆ ಲೇಸಾದ ಬದುಕು ನಡೆಸಿರುವುದೇ ಅವರ ಹೆಗ್ಗಳಿಕೆ. ನಾಡಿನ ಮಠಾಧೀಶರಲ್ಲೇ ಅತ್ಯಂತ ಹಿರಿಯರಾದ ಅವರ ಕಾಲದಲ್ಲಿ ನಾವಿದ್ದೇವೆ ಎನ್ನುವುದೇ ಹೆಮ್ಮೆಯ ಸಂಗತಿ. ವ್ಯಕ್ತಿ ಎಷ್ಟು ವರ್ಷ ಬದುಕಿದರು ಎನ್ನುವುದಕ್ಕಿಂತ ಹೇಗೆ ಬದುಕಿದ್ದರು ಎನ್ನುವುದೇ ಗಮನಾರ್ಹ ಸಂಗತಿ.

Shivakumara Swami 2

ಹೊಸ-ಹೊಸ ಮಠಗಳು ಹುಟ್ಟಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಅಲ್ಲಿನ ಕಾವಿಧಾರಿಗಳಿಗೆ ಸಿದ್ಧಗಂಗಾ ಶ್ರೀಗಳ ಬದುಕು ದಾರಿದೀವಿಗೆ ಆಗಬೇಕು. ಬೃಹತ್ ಕಟ್ಟಡ, ಭವ್ಯ ವಾಹನ, ಅಪಾರ ಶಿಷ್ಯಸಮೂಹ, ಐಷಾರಾಮಿ ಜೀವನ ನಡೆಸುವ ಸ್ವಾಮಿಗಳು ಸರಳ ಬದುಕಿನ ಹಿರಿಯ ಚೇತನದಿಂದ ಅರಿವಿನ ಕಣ್ಣು ಪಡೆಯಬೇಕಿದೆ. ಇಂದು ಮಠಾಧೀಶರು ಸಾಧನೆ, ಬೋಧನೆ ಮಾಡುವುದಕ್ಕಿಂತ ಮಠಗಳನ್ನು ಬೃಹತ್ತಾಗಿಸುವ, ಅಲ್ಲಿ ಐಷಾರಾಮಿ ಜೀವನ ನಡೆಸುವ ತನ್ಮೂಲಕ ತಮ್ಮ ಕೀರ್ತಿಪತಾಕೆಯನ್ನು ಮೆರೆಯುವ ಕಾರ್ಯದಲ್ಲಿ ಸ್ಪರ್ಧೆ ನಡೆಸುತ್ತಿರುವುದು ನಿಜಕ್ಕೂ ಆತ್ಮಾವಲೋಕನಕ್ಕೆ ದಾರಿ ಮಾಡಿಕೊಡಬೇಕಾಗಿದೆ.

ಜೀವಪರ, ಜನಪರ ಮೌಲ್ಯಗಳಿಂದ ಪ್ರೇರಿತವಾಗಿರುವ ಶ್ರೀ ಶಿವಕುಮಾರ ಶ್ರೀಗಳವರ ಬದುಕು ಅನುಕರಣೀಯವಾದುದು. ಧರ್ಮ, ಅರ್ಥ, ಕಾಮ, ಮೋಕ್ಷಗಳಿಗೆ ವಿಶೇಷ ಮೆರುಗನ್ನು ತಂದವರು ಶ್ರೀಗಳು. ಇದಕ್ಕೆ ಅವರು ಮಾಡಿದ ಕೆಲಸ ಕಾರ್ಯಗಳೇ ಸಾಕ್ಷಿ ನುಡಿಯುತ್ತಿವೆ. 'ಸುಪ್ರಭಾತ ಸಮಯದಲ್ಲಿ ಅರ್ತಿಯಲ್ಲಿ ಲಿಂಗವ ನೆನೆದಡೆ ತಪ್ಪುವವು ಅಪಮೃತ್ಯು ಕಾಲಕರ್ಮಂಗಳಯ್ಯ' ಎನ್ನುವ ಬಸವವಾಣಿಯಂತೆ, ಸೂರ್ಯೋದಯಕ್ಕೆ ಮುನ್ನವೇ ಎದ್ದು ಇಷ್ಟಲಿಂಗಾರ್ಚನೆಯ ಪರಮಸುಖ ಸವಿಯುವ ಪೂಜ್ಯರು ನಿಜಾರ್ಥದಲ್ಲಿ 'ಲಿಂಗವ್ಯಸನಿಗಳು, ಜಂಗಮಪ್ರೇಮಿಗಳು.' ತಮ್ಮ ನಿರಂತರ ಕಾಯಕ, ಶಿಷ್ಯ ವಾತ್ಸಲ್ಯ, ಶಿಕ್ಷಣ ದಾಸೋಹದ ಮೂಲಕ ಭಕ್ತರ ಹೃದಯ ಸಿಂಹಾಸನದಲ್ಲಿ ವಿರಾಜಮಾನರಾಗಿದ್ದಾರೆ. ದುರ್ವ್ಯಸನ, ದುರಾಚಾರದಲ್ಲಿ ಮುಳುಗಿರುವವರು ಶ್ರೀಗಳಿಂದ ಪಾಠ ಕಲಿಯಬೇಕಿದೆ. ಶ್ರೀಗಳವರು ಬಸವಣ್ಣನವರು ಹೇಳುವಂತೆ ಲಿಂಗವ್ಯಸನ, ಜಂಗಮ ಪ್ರೇಮವನ್ನೇ ತಮ್ಮ ಬದುಕಿನ ಬಂಡವಾಳ ಮಾಡಿಕೊಂಡಿರುವುದು ಅವರ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗಿದೆ. ಅದನ್ನೀಗ ಅವರ ಭಕ್ತವೃಂದ ಅನುಷ್ಠಾನಕ್ಕೆ ತಂದಾಗಲೇ ಪೂಜ್ಯರಿಗೆ ಭಕ್ತಿ ಗೌರವ ಸಮರ್ಪಿಸಿದಂತೆ.

ಶ್ರೀಗಳು ನಾಡಿಗೆ ಪ್ರಾಣಶಕ್ತಿಯಂತಿದ್ದಾರೆ. ಸದಾ ಅಂತರ್ಮುಖಿಯಾಗಿದ್ದ ಅವರು, ಅಂತರಂಗದ ಬೆಳಕಿನಲ್ಲಿ ಬಹಿರಂಗದ ಕತ್ತಲೆ ಓಡಿಸುವ ಕಾರ್ಯವನ್ನು ಈಗಲೂ ಮೌನವಾಗಿ ಮಾಡುತ್ತಿದ್ದಾರೆ. ಸಭೆ ಸಮಾರಂಭಗಳಲ್ಲಿ ಅವರು ಕತ್ತೆತ್ತಿ ಕುಳಿತದ್ದನ್ನು ನಾವಂತೂ ಕಂಡವರಲ್ಲ. ಮಾತನಾಡುವಾಗಲೂ ತಲೆ ತಗ್ಗಿಸಿ, ಕಣ್ಣು ಮುಚ್ಚಿ ಅಂತರ್ವಾಣಿಯನ್ನು ಹೊರಹಾಕುವರು. ಇವತ್ತು ಬಹುತೇಕ ಸ್ವಾಮಿಗಳು ಬಹಿರ್ಮುಖಿಗಳಾಗಿರುವುದೇ ಹೆಚ್ಚು. ಹಾಗಾಗಿ ಅವರಿಗೆ ಸುಜ್ಞಾನ, ಅದರ್ಶ, ಸಮಾಜಮುಖಿ ಸೇವಾ ಕಾರ್ಯಗಳು ಬೇಕಾಗಿಲ್ಲ. ಅವರು ನೈಜ ಸುಖ, ಸಂತೋಷಗಳನ್ನು ಹೊರಗಿನ ವೈಭವದ ಜೀವನದಲ್ಲಿ ಹುಡುಕುವ ಸಾಹಸ ಮಾಡುವರು. ಅದಕ್ಕಾಗಿ ರಾಜಕಾರಣಿಗಳ, ಅಧಿಕಾರಿಗಳ, ಶ್ರೀಮಂತರ ಬೆನ್ನುಬೀಳುವರು. ಅವರ ನೀಚ ಕಾರ್ಯಗಳ ಬಗ್ಗೆ ನಿಷ್ಠುರವಾಗಿ ಮಾತನಾಡದೆ, ವಿವೇಕದ ನುಡಿಗಳನ್ನು ಹೇಳದೆ ಅವರಿಂದ ಎಷ್ಟು ಆರ್ಥಿಕ ಸಂಪನ್ಮೂಲಗಳನ್ನು ಪಡೆಯಬಹುದು ಎನ್ನುವ ಚಿಂತನೆಯಲ್ಲೇ ಕಾಲ ತಳ್ಳುವರು. ಅಂಥವರು ಸಿದ್ಧಗಂಗಾ ಶ್ರೀಗಳವರ ಬದುಕಿನ ವಿಧಾನವನ್ನು ಕಣ್ತೆರೆದು ನೋಡಬೇಕಿದೆ.

'ಗುರುವಿಗೆ ತನುವ ಕೊಟ್ಟು, ಲಿಂಗಕ್ಕೆ ಮನವ ಕೊಟ್ಟು, ಜಂಗಮಕ್ಕೆ ಧನವ ಕೊಟ್ಟು ಶಿವನೊಲಿಸಬೇಕು' ಎನ್ನುವ ಶರಣರ ಸಂದೇಶದ ಸಾಕಾರವಾಗಿದ್ದಾರೆ ಶತಾಯುಷಿ ಶ್ರೀ ಶಿವಕುಮಾರ ಸ್ವಾಮಿಗಳು. ತ್ರಿವಿಧಕ್ಕೆ ತ್ರಿವಿಧವನರ್ಪಿಸುವ ಅವರ ಬದುಕು ಇತರರೂ ಸಮಾಜಸೇವಾ ದೀಕ್ಷೆ ಪಡೆಯಲು ಸ್ಫೂರ್ತಿಯಾಗಿದೆ. ವ್ಯಾವಹಾರಿಕ ಬದುಕಿನಲ್ಲೇ ಹೆಚ್ಚು ಅನುರಕ್ತರಾಗುತ್ತಿರುವ ಇಂದಿನ ಯುವ ಮಠಾಧೀಶರಿಗೆ ಶ್ರೀಗಳ ವಿರಕ್ತಭಾವ ಅನುಕರಣೀಯವಾಗಿದೆ. ಅವರ ಆಳವಾದ ಅಧ್ಯಯನ, ಮೂರೂ ಹೊತ್ತು ಶಿವಪೂಜೆ, ಭಕ್ತರ ಸಮಸ್ಯೆಗಳನ್ನು ಕೇಳಿ ಸಾಂತ್ವನ ನೀಡುವ ರೀತಿ, ನಿತ್ಯ ಸಹಸ್ರಾರು ವಿದ್ಯಾರ್ಥಿಗಳಿಗೆ ಅನ್ನ ಮತ್ತು ಜ್ಞಾನದಾಸೋಹ ಸೇವೆಗೈಯುತ್ತ ಅವರ ಬದುಕಿಗೆ ಬೆಳಕು ತುಂಬುವ ಕಾರ್ಯ ಎಂಥವರಿಗೂ ಸ್ಫೂರ್ತಿಯನ್ನು ನೀಡುವಂತಹುದಾಗಿದೆ. ಹಾಗಾಗಿ ಅವರು ಲಕ್ಷಾಂತರ ಬಡ ವಿದ್ಯಾರ್ಥಿಗಳ ಪಾಲಿಗೆ ಅಕ್ಷಯಪಾತ್ರೆಯಂತಾಗಿದ್ದಾರೆ.

Basavanna

ಶ್ರೀಗಂಧದ ಕೊರಡಿನಂತೆ ತಮ್ಮನ್ನು ತಾವು ಸವೆಸಿಕೊಂಡು ಸುತ್ತಲ ಪ್ರಪಂಚಕ್ಕೆ ಸುವಾಸನೆ ಸೂಸಿದ ಅವರ ಕಾರ್ಯ ಎಲ್ಲರಿಗೂ ಪ್ರಿಯವಾದುದೇ. ಪೂಜ್ಯರ ತ್ಯಾಗ, ಸೇವೆ, ಪ್ರೀತಿಯ ಗುಣಗಳಿಗೆ ಸರಿಸಾಟಿಯಿಲ್ಲ. ಹಾಗಾಗಿ, ಅವರ ಅನುಪಮ ವ್ಯಕ್ತಿತ್ವ ಸ್ತುತ್ಯರ್ಹ ಮತ್ತು ಅವರ್ಣನೀಯ. ಪ್ರತಿವರ್ಷ ಅವರು ನಡೆಸುತ್ತಿದ್ದ ಕೈಗಾರಿಕೆ, ಕೃಷಿ ವಸ್ತುಪ್ರದರ್ಶನ ಗ್ರಾಮೀಣಾಭಿವೃದ್ಧಿಯ ಕನಸನ್ನು ನನಸು ಮಾಡುವಂಥದ್ದಾಗಿತ್ತು. ಜಾತ್ರಾ ಮಹೋತ್ಸವ ಒಂದು ಸಾಂಸ್ಕೃತಿಕ ಉತ್ಸವವಾಗಿ ಪರಿಣಮಿಸಿದೆ. ಬಸವೇಶ್ವರ ನಾಟಕ ಪ್ರದರ್ಶನ ಮಾಡಿಸುತ್ತಿದ್ದದ್ದು ಅವರ ರಂಗಪ್ರೇಮಕ್ಕೆ ಹಿಡಿದ ಕನ್ನಡಿ. ಅವರ ಕಾಯಕನಿಷ್ಠೆ, ಕಾಲಪ್ರಜ್ಞೆ, ಕಾಸಿನ ಮಹತ್ವ ಬೃಹತ್ ಸಾಧನೆಗೆ ಪ್ರೇರಕವಾಗಿವೆ. ಅವರು ಶರಣರ ಆಶಯದಂತೆ ನಡೆ ಲಿಂಗ, ನುಡಿ ಲಿಂಗವಾದ್ದಾರೆ. ಸಕಲ ಜೀವಾತ್ಮರಿಗೆ ಲೇಸ ಬಯಸುವುದೇ ನಿತ್ಯ ಕಾಯಕವಾಗಿಸಿಕೊಂಡಿದ್ದ ಅವರ ಬದುಕು ಯುವ ಸನ್ಯಾಸಿಗಳಿಗೆ ಸ್ಪೂರ್ತಿಯ ಸೆಲೆಯಾಗಬೇಕಿದೆ.

ಶ್ರೀಗಳವರಂತೆ ಜನರಲ್ಲಿ ಕಾಲ, ಕಾಯಕ, ಕಾಸಿನ ಪ್ರಜ್ಞೆ ಜಾಗೃತವಾದಲ್ಲಿ ನಾಡಿನಲ್ಲಿ ಅದ್ಭುತ ಪ್ರಗತಿ ಸಾಧಿಸಲು ಸಾಧ್ಯ. ಇಂಥ ಚೇತನಕ್ಕೆ ನಿಜವಾದ ಭಕ್ತಿ ಗೌರವ ಸಲ್ಲಿಸುವುದೆಂದರೆ, ಅವರಿಗೆ ದೀರ್ಘದಂಡ ನಮಸ್ಕಾರ ಹಾಕುವುದಲ್ಲ. ಬದಲಾಗಿ, ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಆಂತರಿಕ ನೋಟವನ್ನೂ ಹೆಚ್ಚಿಸಿಕೊಳ್ಳುವುದು. ಇಂದು ಅವರಂಥ ಸನ್ಯಾಸಿಗಳು ಸಮಾಜಕ್ಕೆ ಬೇಕಾಗಿದ್ದಾರೆ. 'ಕೂಡಲಸಂಗಮದೇವರ ಒಲಿಸಬಂದ ಪ್ರಸಾದ ಕಾಯವ ವೃಥಾ ಕೆಡಿಸಲಾಗದು' ಎನ್ನುವ ಎಚ್ಚರವನ್ನು ಶ್ರೀಗಳವರ ಕಾಯಕ ನೋಡಿ ಪಡೆಯಬೇಕಾಗಿದೆ. ಅವರು ಪ್ರೇಮಮಯಿಯಾಗಿ ಎಲ್ಲ ವಿದ್ಯಾರ್ಥಿಗಳ ಮತ್ತು ಭಕ್ತರ ಒಡನಾಟ ಇಟ್ಟುಕೊಂಡಿದ್ದೇ ಅವರ ಆರೋಗ್ಯದ ಗುಟ್ಟೆಂದು ಭಾವಿಸಬೇಕಾಗಿದೆ.

ಇದನ್ನು ಓದಿದಿರಾ?: ಕೊಂಡಾಟ | ತುಳುನಾಡಿನ ಬಪ್ಪ ಬ್ಯಾರಿ ಕತೆ

ದೇಹ, ಮನಸ್ಸು, ಬುದ್ಧಿ ಒಂದಾಗಿ ಸತ್ಕಾರ್ಯಗಳನ್ನು ಮಾಡುವ ಹೃದಯವಂತಿಕೆ ಬೆಳೆಸಿಕೊಂಡರೆ ಅದೇ ವ್ಯಕ್ತಿಗತ ಮತ್ತು ಸಾಮಾಜಿಕ ಆರೋಗ್ಯಕ್ಕೆ ನಾಂದಿಯಾಗುವುದು. ಈ ನೆಲೆಯಲ್ಲಿ ಶ್ರೀಗಳು ಅಂತರ್ಮುಖಿಗಳಾಗಿ ಪಡೆದ ಬೆಳಕನ್ನು ಲೋಕಕ್ಕೆ ಧಾರೆ ಎರೆದಿದ್ದಾರೆ. ಅದರಿಂದಾಗಿ ಅವರ ಸಾಧನೆಗಳು ಗೌರಿಶಂಕರ ಶಿಖರದಂತಾಗಿವೆ. ಎಲ್ಲರಂತೆ ಅವರ ಹುಟ್ಟು ಇದ್ದರೂ ತಮ್ಮ ಸಾಧನೆಯ ಮೂಲಕ ಸಂತಶ್ರೇಷ್ಠರಾಗಿದ್ದಾರೆ. ಲಿಂಗವ ಪೂಜಿಸಿ ಲಿಂಗವೇ ಆಗಿದ್ದಾರೆ. ಶರಣರಿಗೆ ಮರಣವೆಂಬುದಿಲ್ಲ. ಇಂಥವರ ಬದುಕನ್ನು ಗಮನಿಸಿಯೇ ಬಸವಣ್ಣನವರು 'ಎಮ್ಮವರಿಗೆ ಸಾವಿಲ್ಲ, ಎಮ್ಮವರು ಸಾವನರಿಯರು' ಎಂದಿರುವುದು. ಹೌದು; ಆತ್ಮೋನ್ನತಿ ಮತ್ತು ಲೋಕಕಲ್ಯಾಣ ಕಾರ್ಯವೆಸಗುವವರಿಗೆ ಸಾವಿಲ್ಲ. ಅವರಿಗೆ ಮರಣ ಮಹಾನವಮಿ.

ಶರೀರವಿರುವುದು ಕೇವಲ ಉಂಡುಟ್ಟು ಸುಖಿಸುವುದಕ್ಕಲ್ಲ, ಐಷಾರಾಮಿ ಬದುಕಿಗಲ್ಲ ಎನ್ನುವ ಸತ್ಯವನ್ನರಿತ ಪೂಜ್ಯರು, ಪರೋಪಕಾರವೇ ಪರಮಾತ್ಮನ ಪೂಜೆ ಎಂದು ಭಾವಿಸಿ ಶಿಕ್ಷಣ ಸಂಸ್ಥೆಗಳ ಮೂಲಕ, ಜನರನ್ನು ಅಜ್ಞಾನದಿಂದ ಜ್ಞಾನದ ಕಡೆ ಕರೆದೊಯ್ಯುವ ಪುಣ್ಯಕಾರ್ಯದಲ್ಲಿ ಅನುಪಮ ಸೇವೆ ಸಲ್ಲಿಸಿರುವುದು ಸ್ಮರಣಾರ್ಹ. ಅವರು ಬಸವಣ್ಣನವರಂತೆ ಲೇಸೆನಿಸಿಕೊಂಡು ಬದುಕಿದ್ದಾರೆ. ಲಿಂಗಾಯತ ಧರ್ಮದ ಸಾಕಾರ ಮೂರ್ತಿಯಾಗಿದ್ದಾರೆ. ಸುಖವೊಂದು ಕೋಟಿ ಬಂದರೂ ಅವರು ಬಸವಣ್ಣನವರನ್ನು ಮರೆತವರಲ್ಲ, ದುಃಖವೊಂದು ಕೋಟಿ ಬಂದರೂ ಬಸವಣ್ಣನವರನ್ನು ಬಿಟ್ಟವರಲ್ಲ. ಎಲ್ಲವೂ ಬಸವಣ್ಣನವರ ಕರುಣೆ ಎಂದು ಭಾವಿಸಿ ಬಸವತತ್ವದಂತೆ ಬಾಳಿದ ಪೂಜ್ಯರ ನಿಷ್ಪೃಹ ಬದುಕು ಎಲ್ಲರಿಗೂ ಸ್ಪೂರ್ತಿದಾಯಕ. ಅವರು ಸರ್ವಾಂಗಲಿಂಗ ಶಿವಯೋಗಿಗಳು.

ನಿಮಗೆ ಏನು ಅನ್ನಿಸ್ತು?
6 ವೋಟ್
eedina app