ಸಂಘ ಬಿಟ್ಟವರು ಬಿಚ್ಚಿಟ್ಟ ಸತ್ಯ| ಸಂಘಗೀತೆಯ ಚರಣ ಅಂತ್ಯಗೊಂಡಿದ್ದು ಒಂದು ಜನಾಂಗದ ನಿಂದನೆಯಿಂದ!

RSS

ವಿದ್ಯಾರ್ಥಿ ಪರಿಷತ್‌ನ ಒಂದು ದೊಡ್ಡ ಸಭೆಯನ್ನು ಮೈಸೂರಿನಲ್ಲಿ ಆಯೋಜಿಸಲಾಗಿತ್ತು. ದಾರಿಯಲ್ಲಿ ಅಂತ್ಯಾಕ್ಷರಿ ಆಟ ಆಡುವ ಮನಸ್ಸಾಯಿತು. ಆದರೆ ಯಾವುದೇ ಸಿನೆಮಾ ಹಾಡು  ಹಾಡುವುದನ್ನು ನಿಷೇಧಿಸಲಾಗಿತ್ತು. ಬರೀ ಸಂಘಗೀತೆಗಳನ್ನು ಹಾಡಬೇಕಿತ್ತು. ಒಂದು ಸಂಘಗೀತೆಯ ಚರಣ ಅಂತ್ಯಗೊಂಡಿದ್ದು ಒಂದು ಜನಾಂಗವನ್ನು ನಿಂದಿಸುವ ಶಬ್ದಗಳಿಂದ!

​ನನ್ನ ಹಿನ್ನೆಲೆ ವಿಚಿತ್ರ. ಆದರೆ ಅದರ ಚಿತ್ರ ಮಾತ್ರ ಇನ್ನೂ ನನ್ನ ಮನಸ್ಸಿನಿಂದ ಅಳಿಸಿಹೋಗಿಲ್ಲ. ನಾನು ಆಗ ಬಹುಶಃ ಹತ್ತು ವರ್ಷದ ಹುಡುಗ. ಪಿರಿಯಾಪಟ್ಟಣದಿಂದ ಒಬ್ಬ ವ್ಯಕ್ತಿ ಸೈಕಲ್ ಮೇಲೆ ಬಂದು, ಮನೆಮನೆಗೂ ಹೋಗಿ, ನನ್ನಂತಹ ಎಳೆಯ ಹುಡುಗರನ್ನು ಹಿಡಿದುಕೊಂಡು ಬಂದು ಕಬಡ್ಡಿ, ಕೊಕೊ ಇತ್ಯಾದಿ ಆಟಗಳನ್ನು ಆಡಿಸುತ್ತಿದ್ದ. ಕೆಲವು ತಿಂಗಳುಗಳ ಕಾಲ ನಾವು ಅಂದರೆ ನಾನು ಮತ್ತು ನನ್ನ ಸ್ನೇಹಿತರು, ಕುಗ್ರಾಮದಲ್ಲೊಂದು ಮನರಂಜನೆ ಸಿಕ್ಕಿತಲ್ಲ ಎನ್ನುವ ಸಂತೋಷದಿಂದ ಆಟ ಆಡುವುದಕ್ಕಾಗಿ ಪ್ರತಿದಿನ ಮುಗ್ಧತೆಯಿಂದ ತಪ್ಪದೇ ಆ ವ್ಯಕ್ತಿಗಾಗಿ ಕಾಯುತ್ತಿದ್ದೆವು.

ಹೈಸ್ಕೂಲ್ ಹೆಡ್ಮಾಸ್ಟರ್ ಆಗಿದ್ದ ನಮ್ಮಪ್ಪ ಅಂದು ಸಂಜೆ ಸ್ಕೂಲ್ ಬಾಗಿಲು ಹಾಕಿಕೊಂಡು ಮನೆಗೆ ಹೋಗುವಾಗ ನಾವು ಆಟ ಆಡುತ್ತಿದ್ದ ಸ್ಥಳದಲ್ಲಿ ಕಾವಿ ಬಣ್ಣದ ಧ್ವಜವನ್ನ ನೆಟ್ಟಿರುವುದನ್ನ ಕಂಡರು ಅನಿಸುತ್ತದೆ. ಆದರೆ ಅಲ್ಲಿ ಅವರು ಏನನ್ನೂ ಮಾತನಾಡದೇ ಮನೆಗೆ ಬಂದರು. ಅವರು ಅಸಹನೆಗೊಂಡಿದ್ದರು ಅನ್ನುವುದು ನನಗೆ ಗೊತ್ತಾಗಿದ್ದು ನಾನು ಮನೆಗೆ ಬಂದ ಮೇಲೆ.

ನಮ್ಮಪ್ಪ ತನಿಖೆ ಮಾಡುವವರ ರೀತಿ “ಅದ್ಯಾರೊ, ನಿಮ್ಮನ್ನೆಲ್ಲಾ ಆಟ ಆಡಿಸುತ್ತಿದ್ದವರು?” ಅಂತ ಕೇಳಿದಾಗ ನಾನು, “ಅವರು ಪಿರಿಯಾಪಟ್ಟಣದಿಂದ ಸೈಕಲ್ಲಿನಲ್ಲಿ ಬರುತ್ತಾರೆ, ನಮಗೆ ಅನೇಕ ಆಟಗಳನ್ನು ಹೇಳಿಕೊಟ್ಟು, ಆಡಿಸುತ್ತಾರೆ. ಮೊದಲು ಒಂದು ಹಾಡನ್ನೂ ನಾವು ಹೇಳಬೇಕು” ಅಂತ ಹೇಳಿದಾಗ ನಮ್ಮಪ್ಪನಿಗೆ ಖಾತ್ರಿಯಾಗಿತ್ತೆನಿಸುತ್ತದೆ ಇದು ಆರ್.ಎಸ್.ಎಸ್‌ನ ಒಂದು ಶಾಖೆ ಎಂದು.

ಅಪ್ಪ ನನ್ನನ್ನು ಮರುದಿನದಿಂದ ಸಂಜೆ ಅಲ್ಲಿಗೆ ಹೋಗದಂತೆ ನಿಷೇಧಿಸಿದರು. ಆರ್.ಎಸ್.ಎ.ಸ್ ಮತ್ತು ಗೋಡ್ಸೆ ನಂಟು ಮತ್ತು ಅವನ ಗಾಂಧಿ ಹತ್ಯೆಯ ಕೃತ್ಯದ ನೆನಪು ಅವರಲ್ಲಿ ಹಸಿಯಾಗಿಯೇ ಇನ್ನೂ ಉಳಿದಿತ್ತು. ಅದಲ್ಲದೇ ಅವರು ಮುಂಬೈ ಲಾ ಕಾಲೇಜಿನಲ್ಲಿ ಅಂಬೇಡ್ಕರ್ ಅವರ ವಿದ್ಯಾರ್ಥಿ ಆಗಿದ್ದವರು ಕೂಡ. ಅಂಬೇಡ್ಕರ್ ಅವರ ವ್ಯಕ್ತಿತ್ವದ ಒಂದು ಕಿರಣ ಬಹುಶಃ ನನ್ನ ತಂದೆಯವರಲ್ಲಿಯೂ ಬಂದು ಹೊಕ್ಕಿದ್ದಿರಬಹುದು. ಅಲ್ಲಿಗೆ ನನ್ನ ಆರ್.ಎಸ್.ಎಸ್ ಸಂಸ್ಥೆಯ ಒಡನಾಟ ಮೊಳಕೆಯಲ್ಲಿಯೇ ಒಣಗಿಹೋಯಿತು. ಬಹುಶಃ ಮತ್ತೊಂದು ಸಂದರ್ಭಕ್ಕೆ ಹವಣಿಸುತ್ತಿತ್ತು!

ನನ್ನ ಎಸ್.ಎಸ್.ಎಲ್.ಸಿ. ಮುಗಿದು ನಾನು ಬೆಂಗಳೂರಿನ ನನ್ನ ಅಣ್ಣನ ಮನೆಯಲ್ಲಿ ನೆಲೆಸಿ ನನ್ನ ಪಿ.ಯು.ಸಿ. ಮತ್ತು ಬಿ.ಎಸ್.ಸಿ. ತರಗತಿಗಳನ್ನು ಮುಗಿಸಿದೆ. ನಂತರ ನನ್ನ ಕೆಲವು ಸಹಪಾಠಿಗಳು ಲಾ ಕಾಲೇಜು ಸೇರಿದರು. ಯಾವುದೇ ಗೊತ್ತುಗುರಿ ಇಲ್ಲದೇ ನಾನೂ ಲಾ ಕಾಲೇಜನ್ನು ಸೇರಿದೆ. ಅದೇ ಸಮಯಕ್ಕೆ ಅಣ್ಣ ಮುಂಬೈಯಲ್ಲಿ ಕೆಲಸಕ್ಕೆ ಸೇರಿದ. ಆಗ ನನ್ನ ವಾಸ್ತವ್ಯವೇ ಒಂದು ದೊಡ್ಡ ಸಮಸ್ಯೆಯಾಗಿ ನನ್ನನ್ನು ಕಾಡಿತು. ಇದನ್ನು ನನ್ನ ಸ್ನೇಹಿತನೊಬ್ಬನ ಹತ್ತಿರ ತೋಡಿಕೊಂಡೆ. ಎಲ್ಲಾದರೂ ರೂಮು ಕೊಡಿಸೊ ಅಂತ ಅವನ ಹಿಂದೆ ಬಿದ್ದೆ. ಅವನೊಬ್ಬ ನಿಷ್ಠಾವಂತ ಸ್ವಯಂಸೇವಕ ಅನ್ನುವುದು ನನಗೆ ಅಲ್ಲಿಯವರೆಗೂ ತಿಳಿದಿರಲಿಲ್ಲ. ನನ್ನ ಅಣ್ಣನ ಮನೆಯನ್ನು ಖಾಲಿ ಮಾಡುವುದಕ್ಕೆ ಒಂದು ತಿಂಗಳ ಸಮಯವಿತ್ತು. ನಾನಿನ್ನೂ ಅಲ್ಲಿಯೇ ವಾಸಿಸುತ್ತಿದ್ದೆ. ಎರಡು ದಿನಗಳ ನಂತರ ಇನ್ನೂ ಖಾಲಿ ಮಾಡದ ಅಣ್ಣನ ಮನೆಗೆ ಬಂದ ಅವನು, “ನಿನಗೆ ಇರಲು ಒಂದು ಜಾಗ ಇದೆ, ಆದರೆ ಒಂದು ಷರತ್ತು, ನೀನು ಸಂಘಕ್ಕೆ ಸೇರಬೇಕು” ಅಂದ. ನನ್ನ ಚಿಕ್ಕವಯಸ್ಸಿನಲ್ಲಾದ ಪ್ರಕರಣ ಆಗಲೇ ನೆನಪಿನಿಂದ ಮಾಸಿಹೋಗಿತ್ತು. ನನ್ನ ತಂದೆ ಈಗ ದೂರದ ಊರಾದ ಶೃಂಗೇರಿ ಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯರು. ಇರೋದಕ್ಕೆ ರೂಮು ಸಿಕ್ಕರೆ ಏನು ಬೇಕಾದರೂ ಮಾಡ್ತೀನಿ ಅನ್ನುವ ಪರಿಸ್ಥಿತಿಯನ್ನ ಎದುರಿಸುತ್ತಿದ್ದೆ ಆ ದಿನಗಳಲ್ಲಿ. ಇದು ಸಂಘದ ಸಹವಾಸದ ಎರಡನೇ ಇನ್ನಿಂಗ್ಸ್. ಅಂದಿನಿಂದ ನಾನು ಕಾರ್ಯಾಲಯದಲ್ಲಿ ವಾಸಿಸಲು ಪ್ರಾರಂಭಿಸಿದೆ.

ಕೆಲವು ಪ್ರಚಾರಕರು ಮತ್ತು ನಿವಾಸಿಗಳ ಜತೆ ಬೇಗನೆ ಎದ್ದು ಪ್ರಾತಃ ಸ್ಮರಣೆಯ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದೆ. ನಂತರ ಏಳು ಗಂಟೆಗೆ ಬೆಳಗಿನ ಶಾಖೆಯ ಸಭೆ. ನಂತರ ನನ್ನ ಲಾ ಕಾಲೇಜು ಇತ್ಯಾದಿ. ಇಷ್ಟೇ ಆದರೆ ಹೇಗೋ ಅನುಸರಿಸಿಕೊಂಡು ಇದ್ದುಬಿಡಬಹುದು ಅಂತ ನನ್ನ ಮನಸ್ಸಿನಲ್ಲಿ ಅನಿಸತೊಡಗಿತು. ಆದರೆ ನನಗೊಂದು ಬಡ್ತಿ ಸಿಕ್ಕಿತು. ಅದು ಸಂಘದ ಪ್ರಮುಖ ಬೈಠಕ್ಕುಗಳಲ್ಲಿ ಕುಳಿತು ಅವರ ಮಾತುಗಳನ್ನು ಕೇಳುವ ಅವಕಾಶ. ನನಗೆ ಚಿಕ್ಕಂದಿನಲ್ಲಿ ನಮ್ಮಪ್ಪ ನನ್ನಲ್ಲಿ ಹುಟ್ಟುಹಾಕಿದ ಸೆಕ್ಯುಲರಿಸಂ ಬೀಜ ಮೊಳಕೆಯೊಡೆದು ಹೆಮ್ಮರವೇನೂ ಆಗದೆ, ಬಹುಶಃ ನನ್ನ ಸುಪ್ತಪ್ರಜ್ಞೆಯಲ್ಲಿ ತಟಸ್ಥವಾಗಿಯೇ ಇತ್ತು. ಈ ಬೈಠಕ್‌ಗಳಲ್ಲಿನ ವಿಚಾರ ಲಹರಿಗಳು ನನ್ನ ಕಿವಿಯ ಮೇಲೆ ಬೀಳುತ್ತಿದ್ದಂತೆ ಅದು ಮೊಳಕೆಯೊಡೆಯಲು ಶುರುವಾಯಿತು ಎನ್ನಬಹುದು. ಅದು ದೊಡ್ಡ ಮರವಾಗಿ ಬೆಳೆಯಲು ಹೆಚ್ಚು ಸಮಯವೇನು ಹಿಡಿಯಲಿಲ್ಲ. ಅದೇ ಕಾರಣಕ್ಕೆ ನಾನು ಅವರ ಸಂವಾದಗಳ ಮಧ್ಯೆ ಮೂಗು ತೂರಿಸಲು ಪ್ರಾರಂಭಿಸಿದೆ. ಒಂದು ದಿನ “ಹಾಗೇನಿಲ್ಲ, ನನ್ನ ಚಿಕ್ಕ ವಯಸ್ಸಿನ ಅನೇಕ ಸ್ನೇಹಿತರುಗಳ ನೀವು ಹೇಳುವ ಧರ್ಮಕ್ಕೆ ಸೇರಿದವರು. ಅದಲ್ಲದೇ ನನಗೆ ಕನ್ನಡವನ್ನ ಕಲಿಸಿದವರೇ ಸೈಯದ್ ಹುಸೇನ್ ಅನ್ನುವ ಮೇಷ್ಟ್ರು” ಅಂದಾಗ ಅಲ್ಲಿ ನೆರೆದಿದ್ದ ಪ್ರಮುಖರ ಮುಖದಲ್ಲೆಲ್ಲಾ ಅಸಹನೆಯ ಸುಕ್ಕುಗಳು ಮೂಡತೊಡಗಿದವು. ನಂತರ, ಇವನು ನಮ್ಮ ಗುಂಪಿಗೆ ಸರಿಹೊಂದುವುದಿಲ್ಲ ಎಂದು ನನ್ನನ್ನು ವಿದ್ಯಾರ್ಥಿ ಪರಿಷತ್‌ನ ಆಫೀಸನ್ನು ನೋಡಿಕೊಳ್ಳಲು ನಿಯೋಜಿಸಿಬಿಟ್ಟರು.

ಮನಸ್ಸಿನಲ್ಲಿ ವಿಪ್ಲವವೊಂದು ಆರಂಭಗೊಂಡಿತು

ಒಂದು ದಿನ ವಿದ್ಯಾರ್ಥಿ ಪರಿಷತ್‌ನ ಒಂದು ದೊಡ್ಡ ಸಭೆಯನ್ನು ಮೈಸೂರಿನಲ್ಲಿ ಆಯೋಜಿಸಲಾಗಿತ್ತು. ಅಂದು ಒಂದು ದೊಡ್ಡ ವ್ಯಾನಿನಲ್ಲಿ ಸ್ವಯಂಸೇವಕರ ಜತೆ ಮೈಸೂರಿಗೆ ನಾನೂ ಹೊರಟೆ. ದಾರಿಯಲ್ಲಿ ಅಂತ್ಯಾಕ್ಷರಿ ಆಟ ಆಡುವ ಮನಸ್ಸು ಎಲ್ಲರಿಗೂ ಆಯಿತು. ನನಗೂ ಖುಷಿ ಆಯಿತು. ಆದರೆ ಯಾವುದೇ ಸಿನೆಮಾ ಹಾಡು ಹಾಡುವುದನ್ನ ನಿಷೇಧಿಸಲಾಗಿತ್ತು. ಬರೀ ಸಂಘಗೀತೆಗಳು. ಒಂದು ಸಂಘಗೀತೆಯ ಚರಣ ಅಂತ್ಯಗೊಂಡಿದ್ದು ಒಂದು ಜನಾಂಗವನ್ನು ನಿಂದಿಸುವ ಶಬ್ದಗಳಿಂದ. ಅಂದು ನನ್ನ ಮನಸ್ಸಿನಲ್ಲಿ ವಿಪ್ಲವವೊಂದು ಆರಂಭಗೊಂಡಿತು. ಜಿಗುಪ್ಸೆಗೊಂಡ ನಾನು ಮೈಸೂರು ತಲುಪುವವರೆಗೂ ಮೌನದಿಂದಲೇ ಕುಳಿತುಬಿಟ್ಟಿದ್ದೆ.

ಇದನ್ನು ಓದಿದ್ದೀರಾ? ಸಂಘ ಬಿಟ್ಟವರು ಬಿಚ್ಚಿಟ್ಟ ಸತ್ಯ| ಆರೆಸ್ಸೆಸ್‌ನಲ್ಲಿ ಯಾರಿಗೂ ಸ್ವಂತವಾಗಿ ಯೋಚಿಸುವ ಅವಕಾಶವೇ ಇರುವುದಿಲ್ಲ

ನನ್ನ ಮನಸ್ಸಿನಲ್ಲಿ ಎದ್ದ ವೈಚಾರಿಕ ಭಾವನೆಗಳು ಘನೀಭವಿಸಿ ರೂಪಪಡೆಯಲು ಪ್ರಾರಂಭವಾಗಿತ್ತು ಎನ್ನಬಹುದು. ಯಾವ ಪರಂಪರೆಯಲ್ಲಿಯೂ ಅದರಲ್ಲೂ ಭಾರತೀಯ ಪರಂಪರೆಯಲ್ಲಿ, ಅದು ನೈಜ ಸ್ವರೂಪದ್ದಾಗಿದ್ದರೆ, ಇನ್ನೊಂದು ಧರ್ಮಕ್ಕೆ ಸೇರಿದ ಜೀವಗಳ ಸಾವನ್ನ ಹಾಡಿನ ರೂಪದಲ್ಲಿ ವೈಭವಿಕರಿಸುತ್ತದೆಯೇ? ನನಗೆ ಗೊತ್ತಿದ್ದಂತೆ ನಮ್ಮ ಭಾರತೀಯ ಪರಂಪರೆಯ ಧರ್ಮದಲ್ಲಿ ಯಾವುದನ್ನ ಹಿಂದೂ ಅಂತ ಕರೆಯುತ್ತವೆಯೋ ಅದೊಂದು ಹನಿಹನಿಯಾಗಿ ಇಡೀ ಭೂಮಿ ತಣಿಸುವ ಸೋನೆ ಮಳೆಯ ಹಾಗೆ ಅಲ್ಲವೇ? ಮಳೆ ಬಿದ್ದರೆ ಒಂದು ಪಂಗಡಕ್ಕಾಗಿಬೀಳುತ್ತದೆಯೇ? ಆದರೆ ಅದೇ ನೀರು ಶೇಖರಣೆಯಾಗಿ ಒಂದು ಗುಂಡಿಯಲ್ಲಿ ನಿಂತು, ಕೊಳೆತು ಬಗ್ಗಡವಾಗಿ ಕಾಯಿಲೆ ಹರಡಲು ಶುರು ಮಾಡಿಬಿಟ್ಟರೆ? ಈ ರೀತಿಯ ದ್ವಂದ್ವಗಳು ನನ್ನನ್ನು ಕಾಡತೊಡಗಿತು.

ಇನ್ನು ಈ ವಾತಾವರಣದಲ್ಲಿದ್ದರೆ ನನ್ನ ಆಲೋಚನೆಗಳೂ ಇದೇ ರೀತಿ ಬಗ್ಗಡವಾಗಿಬಿಡಬಹುದು ಅನ್ನುವ ಭಯದಿಂದ ನಾನು ಆ ಸಭೆಗೆ ಹೋಗದೇ ವಾಪಸ್ಸು ಬೆಂಗಳೂರಿನ ಬಸ್ಸನ್ನು ಹತ್ತಿದೆ. ನಾನು ವಾಸಿಸುತ್ತಿದ್ದ ಸ್ಥಳಕ್ಕೆ ನನ್ನ ಬಟ್ಟೆ ಬರೆಯನ್ನು ತೆಗೆದುಕೊಳ್ಳುವುದಕ್ಕೂ ನಾನು ಅಲ್ಲಿಗೆ ಹೋಗಲಿಲ್ಲ. ಇಲ್ಲಿಗೆ ಸಂಘದ ನನ್ನ ಎರಡನೇ ಇನ್ನಿಂಗ್ಸ್ ಕೂಡ ಕೊನೆಯಾಗಿತ್ತು. ಅದೇ ಕೊನೆಯಾಗಿತ್ತು.

ನಿಮಗೆ ಏನು ಅನ್ನಿಸ್ತು?
5 ವೋಟ್