ಟೆಕ್‌ ಲೋಕದಲ್ಲಿ ಬೀಸುತ್ತಿರುವ ಉದ್ಯೋಗ ಕಡಿತದ ಬಿರುಗಾಳಿ; ಕಾರಣಗಳೇನು?

‘ಸಿಬ್ಬಂದಿ ಕಡಿತ’ ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿರುವ ವಿದ್ಯಮಾನ. ಹೆಸರಾಂತ ಗೂಗಲ್‌, ಫೇಸ್‌ಬುಕ್‌, ಅಮೆಜಾನ್‌ ಸೇರಿದಂತೆ ಜಾಗತಿಕ ಮಟ್ಟದ ಬೃಹತ್‌ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ಕಿತ್ತೆಸೆಯುತ್ತಿವೆ. ಉದ್ಯೋಗಿಗಳ ಕಡಿತ ಆರಂಭವಾಗಿದ್ದೇಕೆ? ಅದಕ್ಕೆ ಕಾರಣಗಳೇನು? ಎಂಬುದರ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ.

ಜಾಗತಿಕ ಮಟ್ಟದಲ್ಲಿ ಉದ್ಯೋಗಿಗಳ ಸಾಮೂಹಿಕ ವಜಾಗೊಳಿಸುವಿಕೆ ಪರ್ವ ಶುರುವಾಗಿದೆ. ಪ್ರತಿನಿತ್ಯ ಒಂದಿಲ್ಲೊಂದು ಕಂಪನಿ ಸಿಬ್ಬಂದಿ ವಜಾಗೊಳಿಸುತ್ತಲೇ ಇದೆ! ಅಮೆಜಾನ್, ಮೆಟಾ, ಟ್ವಿಟರ್, ಆಪಲ್, ಮೈಕ್ರೊಸಾಫ್ಟ್, ಬೈಜೂಸ್ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ದೈತ್ಯ ಟೆಕ್ ಕಂಪನಿಗಳು ಸಿಬ್ಬಂದಿ ಕಡಿತಗೊಳಿಸಿವೆ.

‘ಉದ್ಯೋಗ ಕಡಿತ’ವನ್ನು ಟ್ರ್ಯಾಕ್ ಮಾಡುವ ಲೇಆಫ್ಸ್.ಫೈ (Layoffs.fyi) ವೆಬ್‌ಸೈಟ್‌ ವರದಿಯ ಪ್ರಕಾರ, ಕೋವಿಡ್ ಸಾಂಕ್ರಾಮಿಕದಿಂದ ಈವರೆಗೆ ಸುಮಾರು 1,371 ಟೆಕ್ ಕಂಪನಿಗಳು 2,30,155ಕ್ಕೂ ಹೆಚ್ಚು ಉದ್ಯೋಗಿಳನ್ನು ವಜಾಗೊಳಿಸಿವೆ. ಪ್ರಸಕ್ತ ವರ್ಷ ಜನವರಿಯಿಂದ ನವೆಂಬರ್ 20ರವರೆಗೆ, ಅಂದರೆ 11 ತಿಂಗಳ ಅವಧಿಯಲ್ಲಿ ಸುಮಾರು 836 ಕಂಪನಿಗಳು 1,36,539 ಸಿಬ್ಬಂದಿ ಕಡಿತಗೊಳಿಸಿವೆ.

ಟೆಕ್ ಕಂಪನಿಗಳು ಏಕಾಏಕಿ ಸಿಬ್ಬಂದಿ ಕಡಿತಕ್ಕೆ ಮುಂದಾಗಿದ್ದೇಕೆ?

ಪ್ರತಿ ಕಂಪನಿಯು ತಾನು ಉದ್ಯೋಗಿಗಳ ಕಡಿತ ಮಾಡುವಾಗ, ಬೇರೆ ಬೇರೆ ಕಾರಣಗಳನ್ನು ನೀಡಿವೆ. ಆದರೆ, ಈ ಕಾರಣಗಳಲ್ಲಿ ಬಹುಪಾಲು ಸಾಮ್ಯತೆಗಳಿವೆ.

1. ಕೋವಿಡ್ ತಂದ ಸಂಕಷ್ಟ; ಅವಕಾಶವಾಗಿ ಬಳಸಿಕೊಂಡ ಟೆಕ್ ಕಂಪನಿಗಳು

ಕೋವಿಡ್ 19 ವಿಶ್ವಾದ್ಯಂತ ಸಾರ್ವಜನಿಕರ ಆಫ್‌ಲೈನ್‌ ಬದುಕನ್ನು ಆನ್‌ಲೈನ್‌ನತ್ತ ನೂಕಿತು. ಆಹಾರದಿಂದ ಆರಂಭಿಸಿ ಶಾಪಿಂಗ್‌ವರೆಗೆ ಎಲ್ಲದಕ್ಕೂ ಆನ್‌ಲೈನ್‌ ವೇದಿಕೆಗಳನ್ನೇ ನೆಚ್ಚಿಕೊಳ್ಳುವಂತಾಯಿತು. ನೆಟ್‌ಫ್ಲಿಕ್ಸ್‌ , ಪ್ರೈಮ್, ಅಮೆಜಾನ್, ಇನ್‌ಸ್ಟಾಗ್ರಾಂ... ಬಹುಪಾಲು ಬಳಕೆದಾರರ ಮೆಚ್ಚಿನ ತಾಣವಾದವು. ಕೋವಿಡ್‌ ತಂದೊಡ್ಡಿದ ಸವಾಲುಗಳನ್ನು ಸೇವಾ ವಲಯದ ದೊಡ್ಡ ದೊಡ್ಡ ಟೆಕ್ ಕಂಪನಿಗಳು ಅವಕಾಶವಾಗಿ ಬಳಸಿಕೊಂಡವು. ಆಫ್‌ಲೈನ್ ಜೀವನ ಸ್ತಬ್ದಗೊಂಡಂತೆ, ಆನ್‌ಲೈನ್ ಚಟುವಟಿಕೆಗಳು ಹೆಚ್ಚಳಗೊಂಡವು. ಈ ಹೆಚ್ಚಿದ ಬೇಡಿಕೆಯು ಟೆಕ್ ಕಂಪನಿಗಳಿಗೆ ದಾಖಲೆ ಮಟ್ಟದ ಆದಾಯವನ್ನು ನೀಡಿತು. ಹೆಚ್ಚಿನ ಆದಾಯವು ಟೆಕ್ ಕಂಪನಿಗಳಿಗೆ ಹೆಚ್ಚಿನ ಲಾಭವನ್ನು ತಂದುಕೊಟ್ಟಿತು.

ಆದರೆ, ಇದೇ ಸಂದರ್ಭದಲ್ಲಿ ಹಲವು ಕಂಪನಿಗಳು ಹೆಚ್ಚುವರಿ ಸಿಬ್ಬಂದಿಯನ್ನು ವಜಾಗೊಳಿಸಲು ಆರಂಭಿಸಿದವು. ಮೆಟಾ ಹೊರತುಪಡಿಸಿ, ಹಲವು ಕಂಪನಿಗಳು ಕೋವಿಡ್ ಸಮಯದಿಂದಲೇ ಉದ್ಯೋಗಿಗಳನ್ನು ವಜಾಗೊಳಿಸಿದ್ದವು. ಆದರೆ, ಅದು ಸಾವಿರಾರು ಸಂಖ್ಯೆಯಲ್ಲಿ ಇರಲಿಲ್ಲ.

Image

2. ಹೆಚ್ಚಿದ ಉದ್ಯೋಗಿಗಳ ನೇಮಕಾತಿ

ಸಾಂಕ್ರಾಮಿಕ ಸಮಯದಲ್ಲಿ ಸೇವೆಗಳ ಬೇಡಿಕೆ ಹೆಚ್ಚಾಯಿತು. ಈ ಬೇಡಿಕೆಯನ್ನು ನಿಭಾಯಿಸಲು ಟೆಕ್ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಮುಂದಾದವು. ಬೃಹತ್ ಸಂಖ್ಯೆಯಲ್ಲಿ ಎಂಜಿನಿಯರ್‍ಸ್‌, ಡೆವೆಲಪರ್‍ಸ್‌ ಸೇರಿದಂತೆ ಇತರ ಟೆಕ್ ಉದ್ಯೋಗಿಗಳ ನೇಮಕವಾಯಿತು. ಕಂಪನಿಗಳು ತಮ್ಮ ತಂಡಗಳನ್ನು ವಿಸ್ತರಿಸಿ, ಹೊಸ ತಂಡಗಳನ್ನು ರಚಿಸಿದವು.

ಉದಾಹರಣೆಯಾಗಿ, ಫೇಸ್‌ಬುಕ್‌ನ ಮಾತೃ ಕಂಪನಿ ಮೆಟಾ, 2020- 2021ರಲ್ಲಿ ಸುಮಾರು 27,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಿಸಿತ್ತು. ಈ ವರ್ಷ ಆ ಪ್ರಮಾಣವು ಹೆಚ್ಚಾಯಿತು. ಜನವರಿಯಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಇನ್ನೂ 15,344 ಮಂದಿಯನ್ನು ನೇಮಿಸಿಕೊಂಡಿರುವುದಾಗಿ ಕಂಪನಿಯೇ ತಿಳಿಸಿತ್ತು. ಆದರೆ, ಕೋವಿಡ್‌ ನಂತರ ಟೆಕ್ ಉದ್ಯಮವು ಇತ್ತೀಚಿನ ತಿಂಗಳುಗಳಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿದೆ. ಈ ಪ್ರವೃತ್ತಿ ಈಗ ಹೆಚ್ಚಾಗಿದ್ದು, ಅಮೆಜಾನ್ ಮೆಟಾದಂತಹ ಕಂಪನಿಗಳು 10 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿವೆ.

ಈ ಸುದ್ದಿ ಓದಿದ್ದೀರಾ?: ಡೇಟಾ ಸುರಕ್ಷೆ ಕರಡು ಮಸೂದೆ ಎಂಬುದು ಕೋಳಿ ಕೇಳಿ ಅರೆದಿರುವ ಮಸಾಲೆ!

ಎನ್‌ಸಿಬಿಸಿ ವರದಿಯ ಪ್ರಕಾರ, ಆಲ್ಫಾಬೆಟ್, ಮೈಕ್ರೋಸಾಫ್ಟ್, ಮೆಟಾ, ಅಮೆಜಾನ್, ಟೆಸ್ಲಾ, ನೆಟ್‌ಫ್ಲಿಕ್ಸ್ ಹಾಗೂ ಆಪಲ್… ಒಟ್ಟು ಏಳು ಕಂಪನಿಗಳು ಕಳೆದ ವರ್ಷ ಸರಿ ಸುಮಾರು 24 ಸಾವಿರ ಕೋಟಿಯಷ್ಟು  (30 ಸಾವಿರ ಡಾಲರ್) ನಷ್ಟ ಅನುಭವಿಸಿವೆ.

3.  ಆನ್‌ಲೈನ್‌ ಚಟುವಟಿಕೆಗಳ ಬೇಡಿಕೆ ಕುಸಿತ

ಟೆಕ್ ಕಂಪನಿಗಳು ಯೋಜಿಸಿದಂತೆ ಕಳೆದ ಎರಡು ವರ್ಷಗಳಿಂದ ಸೇವಾ ವಲಯದ ಬೇಡಿಕೆ ಹೆಚ್ಚಿಲ್ಲ. ಬದಲಿಗೆ, ಜಗತ್ತು ಬಹುತೇಕ ಆಫ್‌ಲೈನ್‌ ಲೋಕಕ್ಕೆ ಮರಳಿದೆ. ಜನಸಾಮಾನ್ಯರು ಎಂದಿನಂತೆ ದಿನನಿತ್ಯದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಉದ್ಯೋಗಿಗಳ ನೇಮಕದ ಬಗ್ಗೆ ಸಕಾರತ್ಮಕವಾಗಿ ಮಾತನಾಡಿದ್ದ ಮೆಟಾ ಕಾರ್ಯ ನಿರ್ವಾಹಕ ಅಧಿಕಾರಿ (ಸಿಇಓ) ಮಾರ್ಕ್ ಜುಕರ್‌ಬರ್ಗ್ ತಮ್ಮ ಮಾತನ್ನು ಹಿಂತೆಗೆದುಕೊಂಡಿದ್ದಾರೆ. 

"ಕೋವಿಡ್ ಸಮಯದಲ್ಲಿ ಸೇವಾ ವಲಯದ ಬೇಡಿಕೆಯ ಬಗ್ಗೆ ತಪ್ಪಾಗಿ ಲೆಕ್ಕ ಹಾಕಲಾಗಿತ್ತು. ಆದರೆ, ಪರಿಸ್ಥಿತಿ ಅಂದುಕೊಂಡಂತಿಲ್ಲ. ಪ್ರಸ್ತುತ ವಿವಿಧ ಕ್ಷೇತ್ರಗಳ ಮೇಲೆ ನಮ್ಮ ಹೂಡಿಕೆಯನ್ನು ನಿಧಾನವಾಗಿ ಹೆಚ್ಚಿಸುವ ನಿರ್ಧಾರ ಮಾಡಿದ್ದೇನೆ” ಎಂದು ಅವರು ವಿವರಿಸಿದ್ದಾರೆ.

Image

4. ಹೆಚ್ಚಿದ ಹಣದುಬ್ಬರ

ಭಾರತ ಸೇರಿದಂತೆ ವಿಶ್ವದ ಎಲ್ಲ ದೇಶಗಳು ಆರ್ಥಿಕ ಕುಸಿತ ಎದುರಿಸುತ್ತಿವೆ. ಅಮೆರಿಕದಲ್ಲಿ ಹಣದುಬ್ಬರ ಮಿತಿಮೀರಿದ್ದು, ಆರ್ಥಿಕ ಹಿಂಜರಿತ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಅಮೆರಿಕದ ಕಾರ್ಪೊರೇಟ್ ಕಂಪೆನಿಗಳು ಸಾವಿರಾರು ಸಿಬ್ಬಂದಿಯನ್ನು ಕಡಿತಗೊಳಿಸಿವೆ. ಹಣದುಬ್ಬರ ನಿಯಂತ್ರಿಸಲು ಅಮೆರಿಕದ ‘ಫೆಡರಲ್ ರಿಸರ್ವ್ ಬ್ಯಾಂಕ್’ ಬಡ್ಡಿದರ ಅಧಿಕಗೊಳಿಸಿದ್ದು, ಇದರ ಅಂಗವಾಗಿ ಕಾರ್ಪೊರೇಟ್ ಕಂಪನಿಗಳು ಭಾರಿ ಪ್ರಮಾಣದಲ್ಲಿ ಉದ್ಯೋಗ ಕಡಿತಗೊಳಿಸಿವೆ.

ಅಕ್ಟೋಬರ್‌ನಲ್ಲಿ ಅಮೆರಿಕದ ಹಲವು ಕಂಪನಿಗಳು ದೇಶಾದ್ಯಂತ ಸುಮಾರು 33,843 ಉದ್ಯೋಗಿಗಳನ್ನು ಕಡಿತಗೊಳಿಸಿವೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ಈ ತಿಂಗಳು ಸಿಬ್ಬಂದಿ ವಜಾ ಪ್ರಮಾಣ ಶೇ. 13ರಷ್ಟು ಅಧಿಕವಾಗಿದೆ.

ಈ ಸುದ್ದಿ ಓದಿದ್ದೀರಾ?: ಟೆಕ್‌ ಸಿಬ್ಬಂದಿ ವಜಾ | 60 ದಿನಗಳಲ್ಲಿ ಉದ್ಯೋಗ ಹುಡುಕದಿದ್ದರೆ ವಿದೇಶಗಳಿಂದ ಭಾರತೀಯರಿಗೆ ಗೇಟ್‌ ಪಾಸ್‌!

5. ಮಾರುಕಟ್ಟೆ ಬದಲಾವಣೆಗಳು

ಹಣದುಬ್ಬರವು ಜನರು ಹಣ ಬಳಸುವುದನ್ನು ಕಡಿಮೆ ಮಾಡಿತು. ಇದು ಜಾಹೀರಾತು ಕಂಪನಿಗಳು ಡಿಜಿಟಲ್ ಜಾಹೀರಾತುಗಳ ಮೇಲಿನ ವೆಚ್ಚ ಕಡಿತಕ್ಕೆ ಮುಂದಾಗಲು ಕಾರಣವಾಯಿತು.

ಆನ್‌ಲೈನ್‌ ಜಾಹೀರಾತುಗಳು ಅನೇಕ ಟೆಕ್ ಸಂಸ್ಥೆಗಳ ಆದಾಯದ ಮುಖ್ಯ ಮೂಲ. ಆದರೆ, ಹಣದುಬ್ಬರ ಮತ್ತು ಆರ್ಥಿಕ ಕುಸಿತದಿಂದಾಗಿ ಜಾಹೀರಾತು ನೀಡುವವರ ಸಂಖ್ಯೆ ಕಡಿಮೆಯಾಗಿದೆ. ಅನೇಕ ಸಂಸ್ಥೆಗಳು ಆನ್‌ಲೈನ್‌ ಜಾಹೀರಾತುದಾರ ಸಂಸ್ಥೆಗಳು ಬಜೆಟ್ ಕಡಿತಗೊಳಿಸಿವೆ.

Image

6. ವೆಚ್ಚ ಕಡಿತಕ್ಕೆ ಒತ್ತಡ

ಜಾಗತಿಕ ಮಟ್ಟದ ಟೆಕ್‌ ಕಂಪನಿಗಳ ಹೂಡಿಕೆದಾರರು ವೆಚ್ಚವನ್ನು ಕಡಿತಗೊಳಿಸುವಂತೆ ಒತ್ತಡ ಹೇರಿದ್ದರು. ಗೂಗಲ್ ಮತ್ತು ಯೂಟ್ಯೂಬ್‌ನ ಮೂಲ ಕಂಪನಿಯಾದ ಆಲ್ಫಾಬೆಟ್‌ಗೆ ಸರ್‌ ಕ್ರಿಸ್ಟೋಫರ್‌ ಹೊನ್‌ ಹೂಡಿಕೆ ಮಾಡಿದ್ದರು. ವೆಚ್ಚ ಕಡಿತದ ಬಗ್ಗೆ ಕಂಪನಿಗೆ ಬಹಿರಂಗ ಪತ್ರ ಬರೆದಿದ್ದ ಹೊನ್‌, ಸಿಬ್ಬಂದಿ ಕಡಿತಗೊಳಿಸಿ, ಹೂಡಿಕೆ ಮೊತ್ತ ಪಾವತಿಸುವಂತೆ ಒತ್ತಾಯಿಸಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಕಂಪನಿಗೆ ಬರೆದಿದ್ದ ಬಹಿರಂಗ ಪತ್ರದಲ್ಲಿ, ಆಲ್ಫಾಬೆಟ್ ಕಂಪನಿಯು ವೆಚ್ಚ ಹೆಚ್ಚಳದ ಬಗ್ಗೆ ಗಂಭೀರವಾಗಿರಬೇಕು. ಸ್ವಯಂ- ಚಾಲನಾ ಕಾರ್ ಕಂಪನಿ ‘ವೇಮೊ’ನಂತಹ ಯೋಜನೆಗಳಿಂದ ಆಗುತ್ತಿರುವ ನಷ್ಟವನ್ನು ಕಡಿಮೆಗೊಳಿಸುವಂತೆ ಆಗ್ರಹಿಸಿದ್ದರು.

ಕಳೆದ ತಿಂಗಳಷ್ಟೇ ಟ್ವಿಟರ್ ಖರೀದಿಸಿದ್ದ ಎಲಾನ್ ಮಸ್ಕ್, ಕಂಪನಿ ವೆಚ್ಚವನ್ನು ಕಡಿತಗೊಳಿಸುವ ಸಾಧ್ಯತೆಯ ಬಗ್ಗೆ ಆರಂಭದಲ್ಲಿಯೇ ಮಾತನಾಡಿದ್ದರು. ಅದರ ಬೆನ್ನಲ್ಲೇ, ಕಂಪನಿಯ ಅರ್ಧದಷ್ಟು ಸಿಬ್ಬಂದಿಯನ್ನು ವಜಾಗೊಳಿಸಿತ್ತು. ಇತ್ತೀಚೆಗಷ್ಟೆ, "ಕಂಪನಿಯ ಕಠಿಣ ನಿಯಮ’ಗಳಿಗೆ ಬದ್ಧರಾಗಲು ಸಿದ್ಧವಿರುವ ಉದ್ಯೋಗಿಗಳು ಕಂಪನಿಯಲ್ಲಿ ಉಳಿಯಬಹುದು. ಇಲ್ಲದೇ ಇದ್ದಲ್ಲಿ, ಕೆಲಸ ಬಿಟ್ಟು ಹೋಗಬಹುದು" ಎಂದು ಆದೇಶಿಸಿದ್ದರು.

Image

7. ಇತರ ಉದ್ಯಮಗಳ ಮೇಲೆ ಬಂಡವಾಳ ಹೂಡಿಕೆ

ವರ್ಚುವಲ್ ರಿಯಾಲಿಟಿ (ವಿಆರ್), ಚಾಲಕರಿಲ್ಲದೇ ಕಾರ್ ಓಡಿಸುವುದು (ಡ್ರೈವರ್‌ಲೆಸ್ ಕಾರ್), ಅಲೆಕ್ಸಾ… ಹೀಗೆ ನಾನಾ ಬಗೆಯ ಹೊಸ ತಂತ್ರಜ್ಞಾನ ಆಧಾರಿತ ಯೋಜನೆಗಳ ಮೇಲೆ ಕಂಪನಿಗಳು ಅಧಿಕ ಬಂಡವಾಳ ಹೂಡಿಕೆ ಮಾಡಿದ್ದು, ಕಂಪನಿಗಳ ನಷ್ಟ ಅನುಭವಿಸಲು ಕಾರಣ ಎನ್ನುತ್ತವೆ ವರದಿಗಳು. ಈ ಹೂಡಿಕೆಗಳು ದೀರ್ಘ ಕಾಲದ ಯೋಜನೆಗಳಾಗಿದ್ದು, ಅಲ್ಪಾವಧಿ ಲಾಭ ಗಳಿಕೆ ಅಸಾಧ್ಯವಾಗಿತ್ತು. 

ಈ ಎಲ್ಲ ಕಂಪನಿಗಳ ನಿರ್ಧಾರಗಳು ಭಾರತೀಯರ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುತ್ತಿದೆ ಎಂಬುದನ್ನು ಮರೆಯುವಂತಿಲ್ಲ. ಈಗಾಗಲೇ ವಜಾಗೊಂಡಿರುವ ಉದ್ಯೋಗಿಗಳಲ್ಲಿ ಭಾರತೀಯರ ಪ್ರಮಾಣ ಹೆಚ್ಚಿದೆ. ಭಾರತೀಯ ಮೂಲದ ಬೇರೆ ಬೇರೆ ದೇಶಗಳಲ್ಲಿ  ಕೆಲಸ ಮಾಡುತ್ತಿರುವವರು ಉದ್ಯೋಗ ಕಳೆದುಕೊಂಡಿರುವುದು ಒಂದೆಡೆಯಾದರೆ, ಈ ಜಾಗತಿಕ ಕಂಪನಿಗಳ ಶಾಖೆಗಳು ಭಾರತದಲ್ಲಿಯೂ ಇದ್ದು, ಇಲ್ಲಿನ ಉದ್ಯೋಗಿಗಳ ಕಡಿತವೂ ಅತ್ಯಧಿಕವಾಗಿದೆ. ಟ್ವಿಟರ್‌ ಇಂಡಿಯಾದಲ್ಲಿ ಸುಮಾರು 200ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರು. ಪ್ರಸ್ತುತ ಸಿಬ್ಬಂದಿ ಕಡಿತದಿಂದಾಗಿ ಶೇ. 90ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

ಜಾಗತಿಕ ಮಟ್ಟದ ಟೆಕ್ ಕಂಪನಿಗಳು ಕೇವಲ ಸಿಬ್ಬಂದಿ ಕಡಿತಕ್ಕೆ ಮುಂದಾಗಿಲ್ಲ. ಇದರೊಂದಿಗೆ, ಉದ್ಯೋಗಿ ನೇಮಕಕ್ಕೂ ತಡೆಒಡ್ಡಿವೆ. ಅದೇನೆ ಇರಲಿ, ಈ ‘ಸಾಮೂಹಿಕ ಉದ್ಯೋಗಿಗಳ ವಜಾಗೊಳಿಸುವಿಕೆ’ ಕೇವಲ ಒಂದೆರಡು ತಿಂಗಳು ಸಭವಿಸುವ ವಿದ್ಯಮಾನವಲ್ಲ. ಉದ್ಯೋಗಿಗಳ ವಜಾ- ನೇಮಕರಾಹಿತ್ಯ ಪರಿಸ್ಥಿತಿ ಮುಂದಿನ ವರ್ಷಗಳಲ್ಲೂ ಕೂಡ ಮುಂದುವರೆಯಲಿದೆ ಎಂಬುದನ್ನು ನಾವು ಮರೆಯುವಂತಿಲ್ಲ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180