ಸಂಘ ಬಿಟ್ಟವರು ಬಿಚ್ಚಿಟ್ಟ ಸತ್ಯ| ಆಳ ಅಗಲವಿಲ್ಲದ ಹುಸಿ ದೇಶಭಕ್ತರ ಕಥೆಗಳು: ಕೆ ಎನ್‌ ಭಗವಾನ್

RSS

ದೇವನೂರ ಅವರು ಆರೆಸ್ಸೆಸ್ ಆಳ ಅಗಲಗಳ ಬಗ್ಗೆ ಮಾತನಾಡಿದಾಗ ಅದು ಭೌತಿಕ ಆಳ-ಅಗಲ ಅಲ್ಲ. ಅದು ಆರೆಸ್ಸೆಸ್‌ನ ಮಾನಸಿಕ ವಿಕೃತಿ, ವೈಚಾರಿಕ ಮೌಢ್ಯತೆ, ದಡ್ಡತನದ ಪರಮಾವಧಿ, ಕೊಳಕು ಮನಸಿನ ಕ್ರೌರ್ಯ, ಬಾಲಿಶ ಕಲ್ಪನೆಯ ವಿಧ್ವಂಸಕ ನೀತಿಯಿಂದ ಹೊಸ ಪೀಳಿಗೆಯ‌ ಮೇಲೆ ಆಗುವ ಪರಿಣಾಮಗಳ ಗಾಢ ಚಿಂತನೆಯನ್ನು ತೋರಿಸುತ್ತದೆ

ದೇವನೂರ ಮಹಾದೇವ ಯಾರಿರಬಹುದು, ಅವರ ಚಿಂತನೆಗಳೇನು ಎಂದು ಅವರನ್ನು ದೂರದಿಂದಲೇ ಅಲ್ಪ ಸ್ವಲ್ಪ ಅರ್ಥ ಮಾಡಿಕೊಂಡೆ. ಅವರನ್ನು ನೋಡಿ, ಮಾತುಗಳನ್ನು ಕೇಳಿ, ಮಹಾದೇವ ಏಕೆ ʼಮಹಾʼ ದೇವ ಆದರೆಂದು ತಿಳಿಯಿತು. ಈಗ ಅವರ ʼಆರೆಸ್ಸೆಸ್‌ ಆಳ-ಅಗಲʼ ವನ್ನು ಕೇಳಿ ತಿಳಿಯಲು ಪ್ರಯತ್ನಿಸಿದೆ.

ನಾನು ಪಾತಾಳದಲ್ಲಿದ್ದವನು ಎಂದು ನನ್ನ ಪೂರ್ವಾಶ್ರಮ ಜ್ಞಾಪಿಸಿಕೊಂಡೆ. ನಾನು ದಶಕಗಳ ಹಿಂದೆ ಈ ʼಪ್ರಕಾಂಡ ಪಂಡಿತರ, ದೇಶ ಪ್ರೇಮಿಗಳʼ ವಾತಾವರಣದಲ್ಲಿದ್ದೆ. ಚಿಕ್ಕಂದಿನಲ್ಲಿದ್ದಾಗ ನಮ್ಮ ಕುಟಂಬ ಹಾಲು ವ್ಯಾಪಾರದಲ್ಲಿದ್ದ ಕಾರಣಕ್ಕೆ ಆರೆಸ್ಸೆಸ್‌ ಕಾರ್ಯಾಲಯಕ್ಕೆ ಹಾಲು ಕೊಡಲು ಹೋಗುತ್ತಿದ್ದೆ. ಅವರ ಬಗ್ಗೆ ಕುತೂಹಲವಿತ್ತು. ಅಲ್ಲಿ ನಡೆಯುತ್ತಿದ್ದ ಮಾತುಕತೆ, ಎಲ್ಲವನ್ನೂ‌ ಅಡಿಗೆ ಮನೆಯಿಂದ ಶುರುವಾಗಿ ಭಾಷಣ ಮಾಡುವವರೆಗೆ ಅತಿ ಹತ್ತಿರದಿಂದ ನೋಡುತ್ತಿದ್ದೆ, ಅಳೆಯುತ್ತಿದ್ದೆ. ಆಗ ಅದೇನೆಂದು ಯಾರಿಗೂ ತಿಳಿಯದು.

ಆ ಕಾರ್ಯಾಲಯಕ್ಕೆ ಹಿರಿಯ ಪ್ರಚಾರಕರು, ಸಂಘದವರು, ಜನಸಂಘ, ಅಖಿಲ ಭಾರತೀಯ ವಿದ್ಯಾರ್ಥಿ  ಪರಿಷತ್, ಭಾರತೀಯ ಮಜ್ದೂರ್ ಸಂಘದ ನಾಯಕರುಗಳಾದ ವಾಜಪೇಯಿ, ಗುರೂಜಿ ಗೋಲ್ವಾಲ್ಕರ್, ದತ್ತೋಪಂತ ತೇಂಗಡಿ, ಜಗನ್ನಾಥ ರಾವ್ ಜೋಷಿ, ಭಾವೂರಾವ್ ದೇಶಪಾಂಡೆ, ಯಾದವರಾವ್ ಜೋಷಿ, ಸೂರ್ಯನಾರಾಯಣರಾವ್, ನಂ ಮಧ್ವರಾವ್, ವರದರಾಜ ಶೆಟ್ಟಿ, ಅಜಿತ್  ಕುಮಾರ್, ಬಾಳಾ‌ಸಾಹೇಬ್‌ ದೇವರಸ್, ಕೇದಾರ್ನಾಥ್  ಸಹಾನಿಯವರಂತೆ ಅನೇಕರು ಬರುತ್ತಿದ್ದರು. ಅಲ್ಲೇ ವಾಸ. ಅದಕ್ಕೆ ಕಾರಣ ಆರ್ಥಿಕವಾಗಿ ತೊಂದರೆ ಇತ್ತು. ಎಷ್ಟೆಂದರೆ, ಯಾವುದಾದರೂ ಸಭೆ ನಡೆಸಬೇಕಾದರೆ ಮೈಕ್ ಸೌಂಡ್ ಸಿಸ್ಟಮ್‌ಗೆ ಕೂಡಾ ಹೊರಗಡೆಯವರ ನೆರವು ಬೇಕಾಗಿತ್ತು.

ನಂತರ ನಾನು 'ಆರ್ಗನೈಝರ್' ವಾರಪತ್ರಿಕೆಯ ಏಜೆಂಟ್ ಆದೆ. ದಕ್ಷಿಣ ರಾಜ್ಯಗಳ ಮುಖ್ಯಸ್ಥ ನಾಗಪುರದ ಶಂಕರ್‌ ಶಾಸ್ತ್ರಿಯವರು ಬೆಂಗಳೂರಿಗೆ ಬಂದಾಗಲೆಲ್ಲಾ ನಮ್ಮ ದೊಡ್ಡ‌ ಮನೆಯಲ್ಲೇ ತಂಗುತ್ತಿದ್ದರು. ಆಗ ನಾನು ಸೈಕಲ್ ನಲ್ಲೇ ಬೆಂಗಳೂರು ಸುತ್ತಿ‌ ಸಂಘದವರು,‌ ಕೆಲವು ಪ್ರತಿಷ್ಠಿತರನ್ನೂ‌ ಈ ವಾರ ಪತ್ರಿಕೆಗೆ ಚಂದಾದಾರರಾಗಿ ಮಾಡುತ್ತಿದ್ದೆ. ಅದಕ್ಕೆ  ʼಆರ್ಗನೈಝರ್ ಭಗವಾನ್ʼ ಎಂದು ಪರಿಚಿತನಾದೆ.

ಐದು ವರ್ಷಗಳಲ್ಲಿ ನಾಲ್ಕು ಪ್ರತಿಗಳಿಂದ 278 ಪ್ರತಿಗಳಿಗೇರಿಸಿ ಅಖಿಲ ಭಾರತ ಮಟ್ಟದಲ್ಲಿ ಹೆಚ್ಚು ಪತ್ರಿಕೆ ಮಾರಾಟ ಮಾಡುವ ಸ್ಫರ್ಧೆಯಲ್ಲಿ ಮೂರನೆಯ ಸ್ಥಾನ ಪಡೆದು 50 ರೂಪಾಯಿ ಬಹುಮಾನ ಗಳಿಸಿದ್ದೆ. ಅಡ್ವಾಣಿಯವರು ಎಂಪಿಯಾಗುವುದಕ್ಕೆ ಮುಂಚೆ  ಪತ್ರಿಕೆಗೆ ಲೇಖನಗಳನ್ನು ಬರೆಯುತ್ತಿದ್ದುದರಿಂದ ಅವರ ಮನೆಗೆ ಹೋಗಿ ಭೇಟಿ ಮಾಡಿದ್ದೆ. ಆಗ ಅವರು ‌ದೆಹಲಿ ಮೆಟ್ರೋಪಾಲಿಟನ್ ಸೆಂಟರ್‌ನಲ್ಲಿ ಸದಸ್ಯರಾಗಿದ್ದರು.

ನನ್ನಣ್ಣ‌ ಜನಸಂಘದ‌ ಕಾರ್ಯಕರ್ತನಾಗಿದ್ದುದು ನನ್ನ‌‌ ಮೇಲೆ‌ ಪ್ರಭಾವ ಬೀರಿತ್ತು. ಸಂಘಕ್ಕೆ ಹೋಗಿದ್ದೇಕೆಂದರೆ ಅವರ ಸೂರ್ಯನಮಸ್ಕಾರ, ಹಾಡು, ಹಳೇ ಕತೆಗಳ ಕೇಳಲು. ನನ್ನಂತೆ ಮತ್ತೊಬ್ಬ ಬಾಲಕನೂ ಬರುತ್ತಿದ್ದ. ಅಲ್ಲಿ ಡಾ. ಹೆಡ್ಗೇವಾರರು‌ ಒಂದು ಹಸುವನ್ನು ಮುಸ್ಲಿಂ ಹಂತಕರಿಂದ ರಕ್ಷಿಸಿದರು ಎಂದು. ಅದೊಂದನ್ನೇ ಎಲ್ಲರಿಗೂ ಹೇಳಿ ಬೆನ್ನು ತಟ್ಟಿಕೊಳ್ಳುತ್ತಿದ್ದರು‌.‌ ನಾವು ಅವರಿಗಿಂತಲೂ ದಡ್ಡರು.

ದೇಶಭಕ್ತರು ನಿರ್ಮಿಸಿದ ʼಅವರ ಆದರ್ಶʼ ಆ ದಶಕಗಳಲ್ಲಿ ಈ ಆದರ್ಶವನ್ನು ನಾನು ಕೇಳಿರಲಿಲ್ಲ. ಯಾರೂ ಹೇಳುವವರೂ ಇರಲಿಲ್ಲ. ಈಗ, ಮಕ್ಕಳ ತಲೆಗೆ ತುಂಬಲು ಇವರಿಗೆ ಹೊಳೆದ ಆದರ್ಶ ʼಡಾ.ಜೀ ದುʼ ಎನ್ನುತ್ತಿದ್ದಾರೆ. 

ಸುಬೇದಾರ್ ಛತ್ರಂ ರೋಡಿನಲ್ಲಿದ್ದ ಭಾರತೀಯ ಮಜ್ದೂರ್ ಸಂಘದ ಕಾರ್ಯಾಲಯದಲ್ಲಿ ಟೈಪ್‌ರೈಟರ್ ಇದ್ದಿದ್ದರಿಂದ ಮತ್ತು ಶಾಖೆಯಲ್ಲಿ ಸೂರ್ಯ ನಮಸ್ಕಾರ, ಬೈಠಕ್, ಕಬಡ್ಡಿ ಆಡಲು ಸಂಘಕ್ಕೆ ಹೋಗುತ್ತಿದ್ದೆ.‌ ಈ ಪುರಾಣ ಏಕೆಂದರೆ ಶಾಖೆಗಳಲ್ಲಿ ಮಕ್ಕಳಿಗೆ ಆಸಕ್ತಿಯನ್ನು ಕೆರಳಿಸುವ ಐಡಿಯಾ ಬಳಸಿಕೊಂಡು, ಆ ಮುಗ್ಧರನ್ನು ಮಾತಿನ ಮೋಡಿಯಿಂದ ಮುಠ್ಠಾಳರನ್ನಾಗಿ ಪರಿವರ್ತಿಸುತ್ತಾರೆ ಎಂಬುದನ್ನು ಹೇಳುವುದಕ್ಕಾಗಿ.

ಬಾವಿಗೆ ಬಿದ್ದವರು

ನಾನು ಡಬಲ್‌ ಗ್ರ್ಯಾಜುಯೇಟ್‌ ಆಗುವಾಗಲೇ ವೈಚಾರಿಕತೆ ಬೆಳೆಯುತ್ತಾ, ಈ ಮುಗ್ಧರು ಮುಟ್ಠಾಳರಾಗುವ ಬಗೆಯೂ ಆಲೋಚನೆ ಬರುತ್ತಿತ್ತು‌. ನಾನು ಹುಟ್ಟಾ ಬ್ರಾಹ್ಮಣ. ಹೆಚ್ಚು ಓದಿದವನು ಎಂಬ ಗೌರವದಿಂದ ನನ್ನನ್ನು‌ ಇವರು ಸಹಿಸುತ್ತಿದ್ದರು. ಜೊತೆಗೆ ಇಂಗ್ಲಿಷ್ ಪೇಪರಿನಲ್ಲಿಯೂ ಬರೆಯುತ್ತಿದ್ದುದರಿಂದ ನನ್ನನ್ನು ಸಹಿಸುತ್ತಿದ್ದರು.

Image
RSS mahadeva

ನಾನು ಕೂಡಾ ದೇವನೂರರಂತೆ ಇವರ ಬಗ್ಗೆ ಬರೆಯುವುದೇ ಆದರೆ ಅದಕ್ಕೆ "ಆಳ ಅಗಲವಿಲ್ಲದ ಹುಸಿ ದೇಶಭಕ್ತರ ಕಥೆಗಳು" ಎಂದು ಹೆಸರು ಕೊಡುತ್ತಿದ್ದೆ. ಸರಿಯಾಗಿ‌‌ ಹೇಳುವುದಾದರೆ ಈ ಸಂಸ್ಥೆ ನೆಲದ ಮೇಲೆ‌ ಬೆಳೆಯುವ ಹುಲ್ಲಿನಂತೆ. ಇದು ಮಳೆ ಬಂದರೆ ಪಕ್ಕದಲ್ಲಿ ಬೆಳೆಯುವುದೇ ವಿನಾ ಎತ್ತರಕ್ಕೆ ‌ಬೆಳೆಯುವುದೇ‌‌ ಇಲ್ಲ.

ಇವರ ಮೌಢ್ಯದ ಬಗ್ಗೆ ನಾನು‌ ಚಿಕ್ಕಂದಿನಿಂದ ಕೀಳರಿಮೆಯಲ್ಲೇ ಬೆಳೆದಿದ್ದೆ. ಈ ಕೀಳರಿಮೆಯೇ ನನ್ನನ್ನು‌ ಕೆರಳಿಸಿ, ಪ್ರಚೋದಿಸಿ ಅವರೇಕೆ ಹಾಗೆ, ನಾನೇಕೆ ಹೀಗೆ ಎಂದು ಕಾಡಿಸಿಕೊಂಡೇ ಬೆಳೆದೆ. ಆಗ ಬಾವಿಗೆ ಬಿದ್ದೆ. ಅಲ್ಲೂ ನನಗಿಂತಲೂ ಎಲ್ಲ ಕೋನಗಳಿಂದಲೂ ಕಡಿಮೆ ಇದ್ದವರನ್ನು ನೋಡಿ, ಇವರಿಗೂ‌ ಕಡಿಮೆ ಇದೆಯಲ್ಲಾ, ಅವರೆಲ್ಲಾ ಹಾಗಿರುವಾಗ ಇವರೂ ಬಾವಿಯಲ್ಲಿದ್ದಾರಲ್ಲಾ ಎಂಬ ತವಕ, ಕೂತೂಹಲ ಬೆಳೆಯುತ್ತಲೇ ಇತ್ತು. 

ಬಾವಿಗೆ ಬಿದ್ದಿದ್ದರಿಂದ ಬಾವಿಯ ಬಗ್ಗೆ ಹೆಚ್ಚು ‌ತಿಳಿಯುವಂತಾಯಿತು. ಆಗ ಬಾವಿಗೆ ಬೀಳದೇ ಈಗ ಬಿದ್ದಿದ್ದರೆ? ನಾನು ಬಾವಿಯಿಂದ ಹೊರಗೆ ಬಂದಿರುವುದರಿಂದ ಬಾವಿಯ ಬಗ್ಗೆ , ಬಾವಿಗೆ ಬೀಳುವವರ ಬಗ್ಗೆ, ಬಾವಿಯಲ್ಲಿ ಬಿದ್ದಿರುವವರ ಬಗ್ಗೆ, ‌ಹೆಚ್ಚು ಹೆಚ್ಚು ಅರಿವು ಉಂಟಾಯಿತು‌. ನಂತರದಲ್ಲಿ ಪತ್ರಿಕೆಗಳಿಗೆ‌ ಬರೆಯುವ ಹವ್ಯಾಸ ರೂಢಿಸಿಕೊಂಡೆ. ಮೊಹಮಡನ್ ಬ್ಲಾಕ್ ನ ಮಕ್ಕಳಿಗೆ‌ ಎರಡು ವರ್ಷ‌ ಪಾಠ‌ ಹೇಳಿದೆ. ಹಾಗಾಗಿ ಮುಗ್ಧರನ್ನು‌ ತಟ್ಟಿ ತಿಳಿವಳಿಕೆ ಕೊಟ್ಟಿದ್ದೇನೆ. ಈ ಕಾರಣದಿಂದಲೇ ಬಾವಿಗೆ ತಳ್ಳುವವರು, ʼಭಗವಾನ್ ಜೊತೆ ಮಾತಾಡಬೇಡಿ, ಅವರು ಮನೆಗೆ ಕರೆದರೆ ಹೋಗಬೇಡಿʼ ಎಂದು ಎಚ್ಚರಿಸುತ್ತಾರೆ.

ನಾನು ನನ್ನ ಅನುಭವವನ್ನು‌‌ ಹೇಳಿ, ಬಾವಿಯ‌ ಬಗ್ಗೆ, ಅದಕ್ಕೆ  ಬೀಳುವವರ ಬಗ್ಗೆ, ಬಿದ್ದಿರುವವರ ಬಗ್ಗೆ ತಿಳಿಸಿ
ನಾನು‌ ಹೇಳಿದ್ದನ್ನೆಲ್ಲಾ ನಂಬಬೇಡಿ. ನೀವೂ ಎಲ್ಲವನ್ನೂ ನೋಡಿ. ನಂತರ‌‌ ನಿಮ್ಮ ತಿಳಿವಳಿಕೆಯಂತೆ ಎಲ್ಲಿಯೂ‌ ಬೀಳದೆ ಮೆಟ್ಟಲೇರಿ ಎನ್ನುತ್ತೇನೆ. ಬಾವಿಗೆ‌ ತಿಳಿಯದೆ ಬೀಳುವವರು ಮುಗ್ಧರು. ಬಾವಿಯೆಂದು‌ ತಿಳಿದೂ‌‌ ಹಗಲು ಬೀಳುವ ವಿದ್ಯಾವಂತ, ಕೀಳರಿಮೆಯುಳ್ಳ ದಡ್ಡರು ಮೂರ್ಖರು. ಎಷ್ಟೋ ಜನ ಬಾವಿಗೆ ಬೀಳುವವರಿಗೆ‌‌ ತಿಳಿವಳಿಕೆ ಕೊಟ್ಟಿದ್ದೇನೆ.

ಬಾವಿಗೆ ಬೀಳುವ ಬದಲು‌ ಬೆಳೆಯಿರಿ, ಬೆಳೆಯುತ್ತಾ ಬಾವಿಗೆ‌ ಬೀಳದೆಯೇ ಎತ್ತರಕ್ಕೆ ಬೆಳೆದು ದೇಶೋದ್ದಾರ ‌ಮಾಡಿ ಎಂದು ಹೇಳಿದ್ದೇನೆ. ಆದರೂ, ಬಾವಿಗೆ ಬಿದ್ದವರು, ಬಾಲ ಕತ್ತರಿಸಿ ಕೊಂಡವರು,‌ ಬಾವಿ‌ಯ ಆಳ ಆಗಲ ವೈಶಾಲ್ಯದ ಬಗ್ಗೆ ‌ಪ್ರಚಾರ ಮಾಡುತ್ತಾರೆ. 

ಒಬ್ಬ ತಮಿಳುನಾಡಿನ ಡಾಕ್ಟರ್ ಪದವಿಯಲ್ಲಿ ಚಿನ್ನದ‌ ಪದಕ ಪಡೆದವರು. ದೂರದಿಂದ‌ ಬಾವಿಯ‌ ಮನಮೋಹಕ ದೃಶ್ಯ,‌‌ ಬಿದ್ದಿದ್ದವರ ಹಣೆಯಲ್ಲಿನ ಎರಡಿಂಚು ಹಣೆಯಗಲದ  ಕುಂಕುಮ, ಬಿಳಿಯ‌ ಪಂಚೆ ಜುಬ್ಬಾ,‌ ಕೈ ಜೋಡಿಸಿ‌ ನಮಸ್ಕರಿಸುವ ಚಮತ್ಕಾರ, ಆ‌‌ ಮೃದು ಭಾಷೆಯನ್ನು ನೋಡಿ‌ ಬಾವಿಗೆ‌‌ ಬಿದ್ದ ಈ ಪ್ರಭಾವಿ ಮಗನನ್ನು‌ ಉತ್ತುಂಗಕ್ಕೇರುವ ಕನಸನ್ನು ಕಾಣುತ್ತಿದ್ದ ಪೋಷಕರಿಗೆ ಅರಿವಾಗದಂತೆ, ಅವರ  ಗಮನಕ್ಕೆ ತಾರದೇ ಬೆಂಗಳೂರಿಗೆ ತಂದು‌ ಬಾವಿಗೆ‌ ತಳ್ಳಿದ್ದರು.

ಮೊದಲು ಕೆಲವು ದಿನ, ಬೆಳಿಗ್ಗೆ ಎದ್ದು ‌ಕೇಸರಿಗೆ‌‌ ವಂದಿಸಿ ದೇಶದ ಗುಣಗಾನ ಮಾಡಿ‌ ಹಲವರು‌ ಬಾವಿಗೆ ಬೀಳದವರೇಕೆ‌‌ ಬೀಳಲು ಬಂದಿಲ್ಲ ಎಂದು‌‌ ಎಲ್ಲರ ಮನೆ ಅಲೆದು ವಿಶ್ರಮಿಸಿ ಸಹನಾವವತು, ಸಹನೌ ಭುನಕ್ತು ಎಂಬುದರ ಅರ್ಥ ತಿಳಿಯದಿದ್ದರೂ‌‌ ಹೇಳುತ್ತಾ ಭೋಜನ‌‌ ಮಾಡಿ,  ನಿದ್ದೆ‌‌ ಮಾಡಿ,‌ ಮತ್ತೆ‌ ಬೆಳಿಗ್ಗೆಯಂತೆ ಕಾಲಹರಣ‌ ಮಾಡಿದರೆ ದೇಶ ಉದ್ಧಾರವಾಗುವ ಬಗ್ಗೆ ‌ಅನುಮಾನ ಬಂದು ಬಾವಿಯಿಂದ‌ ಎದ್ದು ಪೋಷಕರನ್ನು‌ ಸೇರಿ, ಈಗ ಆ ಪರದೇಶದಲ್ಲಿ ವಿದ್ವಾಂಸನಾಗಿ ಸಂತೋಷವಾಗಿದ್ದಾನೆ.

ಇದನ್ನು ಓದಿದ್ದೀರಾ? ಸಂಘ ಬಿಟ್ಟವರು ಬಿಚ್ಚಿಟ್ಟ ಸತ್ಯ (ಭಾಗ 2)| ದಲಿತರ ನಂಬಿಕೆ, ವಿನಯವಂತಿಕೆಯೇ ಅವರಿಗೆ ಅಸ್ತ್ರ- ಮಂಜುನಾಥ ದಾಸನಪುರ

ಬಾವಿಗೆ ಬೀಳುವುದೇಕೆ?

ಬಾವಿಯಲ್ಲಿರುವವರು ತಮ್ಮ ಭಾವ ನಡೆ ನುಡಿ,‌ ಮಾತುಗಳು ಗಾಂಭೀರ್ಯಕ್ಕೆ ತಕ್ಕಂತೆ ಇದ್ದು ಜನರನ್ನು ಆಕರ್ಷಿಸುತ್ತದೆ. ಜೊತೆಗೆ ಅವರ ರಾಜಕೀಯ ನಾಯಕರ ಪ್ರಭಾವ ಕೂಡ ಆಕರ್ಷಿಸುತ್ತದೆ. ಇವರು ಮಾತನಾಡಬೇಕಾದರೆ ವಿದ್ಯೆ, ಉದ್ಯೋಗ, ಭವಿಷ್ಯದ ಬಗ್ಗೆ, ಪೋಷಕರ ಸೇವೆ ಬಗ್ಗೆ ಚಕಾರ ಎತ್ತದೆ ಸಂಘ ದೇಶ, ಇತಿಹಾಸಗಳ ಬಗ್ಗೆ ತಿಳಿದಿರುವುದನ್ನು ಹೇಳಿ ʼಇವರು ದೇಶದ ಚಿಂತಕರುʼ ಎಂಬ ಭಾವನೆ ಕೊಡುತ್ತಾರೆ. ಅವರ ಕೊಡುಗೆ‌ ಶೂನ್ಯ. ಎಲ್ಲವನ್ನೂ ಪಡೆದು ಅವರ ಆದೇಶಗಳನ್ನು ದೇಶದ ಉಳಿವಿಗಾಗಿ ಎಂಬಂತೆ ಬಿಂಬಿಸುತ್ತಾರೆ. ದೇಶಕ್ಕಾಗಿ ಕಾಣಿಕೆ ಕೊಟ್ಟು ನಿಮ್ಮನ್ನು ದೇಶಕ್ಕಾಗಿ ಅರ್ಪಿಸಿ ಎನ್ನುವ ಭಾಷಣ ಬಿಗಿಯುತ್ತಾರೆ.

ಬಾವಿಯಲ್ಲಿದ್ದು ನೋಡಿ ಕಲಿತಿದ್ದೇನೆಂದರೆ ಬಾವಿಗೆ ಬಿದ್ದು ಬಾಲ ಕತ್ತರಿಸಿಕೊಂಡು S S ಎಂದು ಮೂಕನಾಗಿರುವ ಬದಲು Y Y Y ಎಂದು‌ ಕೇಳುತ್ತಾ ವೀಕ್ಷಕನಾಗಿ, ಪರೀಕ್ಷಕನಾಗಿ ನನ್ನ ವಿಚಾರ ಹೇಳುತ್ತೇನೆ. ಈ ಹಿನ್ನೆಲೆಯಲ್ಲಿ ಮೂಕರು ಯಾರು, ದಡ್ಡರು ಯಾರು, ಮೂರ್ಖರು‌ ಯಾರು ತಿಳಿಯಬಹುದು.

ನಿಮಗೆ ಏನು ಅನ್ನಿಸ್ತು?
5 ವೋಟ್