ಕಬ್ಬು ಬೆಳೆಗೆ ದರ ನಿಗದಿ - ಭಾಗ 1 | ರಾಜ್ಯಾದ್ಯಂತ ಬೆಳೆಗಾರರ ಆಕ್ರೋಶ: ಸರ್ಕಾರದ ಮೋಸದಾಟ

ಕಬ್ಬು ಬೆಳೆಗಾರ-ಸರ್ಕಾರ

ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಂದರೆ, ಈ ಒಂಬತ್ತು ವರ್ಷಗಳಲ್ಲಿ ಕಬ್ಬಿನ ಎಫ್‌ಆರ್‌ಪಿ ದರ ಕೇವಲ ಒಂದು ಟನ್‌ಗೆ ₹72 ಮಾತ್ರ ಹೆಚ್ಚಾಗಿದೆ. ಮಾತ್ರವಲ್ಲ, ಎಫ್‌ಆರ್‌ಪಿ ದರ ಪಾವತಿಗೆ ಇದ್ದ ಬೇಸ್ ಲೇನ್ ಅನ್ನೇ ಕಾರ್ಖಾನೆಗಳ ಮಾಲೀಕರ ದರೋಡೆಗೆ ಅನುಕೂಲವಾಗುವಂತೆ ಬದಲಾಯಿಸಲಾಗಿದೆ

ರಾಜ್ಯದ ಕಬ್ಬು ಬೆಳೆಗಾರ ರೈತರು ಮತ್ತೊಮ್ಮೆ ಬೀದಿಗೆ ಇಳಿದಿದ್ದಾರೆ. ಅಫಜಲ್‌ಪುರ, ಹಳಿಯಾಳ ಸೇರಿದಂತೆ ರಾಜ್ಯದ ಎಲ್ಲೆಡೆ ಕಬ್ಬು ಬೆಳೆಗಾರರ ಕೂಗು ಮಾರ್ದನಿಸುತ್ತಿದೆ.

Eedina App

ಕಬ್ಬು ಬೆಳೆಗಾರರ ಆಕ್ರೋಶದ ಬಿಸಿಗೆ ರಾಜ್ಯದ ಹಲವೆಡೆ ಆಡಳಿತರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಜ್ಯ ಸರ್ಕಾರದ ಜನ ಸಂಕಲ್ಪ ಯಾತ್ರೆಯೇ ರದ್ದುಗೊಂಡಿದೆ. ಅಲ್ಲದೆ, ರೈತರ ಪ್ರತಿಭಟನೆ ಭಯದಿಂದ ಮಂತ್ರಿಗಳು ಹೆಚ್ಚುವರಿ ಪೊಲೀಸ್ ಭದ್ರತೆಯೊಂದಿಗೆ ಸಂಚರಿಸುತ್ತಿದ್ದಾರೆ.

ಈ ಮಧ್ಯೆ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ನೇತೃತ್ವದಲ್ಲಿ ಅಧಿಕಾರಿಗಳು, ಕಬ್ಬು ಬೆಳೆಗಾರರ ಸಂಘಟನೆ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಜಂಟಿ ಸಭೆ ನಡೆಸಿ, "ಸಕ್ಕರೆ ಕಾರ್ಖಾನೆಗಳ ಉಪ ಉತ್ಪನ್ನಗಳ ಲಾಭಾಂಶದ ಬಗ್ಗೆ ವರದಿ ನೀಡಲು ಸಕ್ಕರೆ ನಿರ್ದೇಶನಾಲಯ ಆಯುಕ್ತರ ಅಧ್ಯಕ್ಷತೆಯಲ್ಲಿ ತಾಂತ್ರಿಕ ತಜ್ಞರ ಸಮಿತಿ ರಚಿಸಲಾಗುವುದು ಹಾಗೂ ಈ ಸಮಿತಿಯಿಂದ ಹತ್ತು ದಿನಗಳಲ್ಲಿ ವರದಿ ಪಡೆದು ಆನಂತರ ಕಬ್ಬು ಬೆಳೆಗೆ ದರ ನಿರ್ಧರಿಸಲಾಗುವುದು" ಎಂದು ಪ್ರಕಟಿಸಿದ್ದಾರೆ.

AV Eye Hospital ad

ಎಥೆನಾಲ್‌ ಸೇರಿದಂತೆ ಕಬ್ಬು ಬೆಳೆಯ ಉಪ ಉತ್ಪನ್ನಗಳ ಲಾಭಾಂಶದಲ್ಲಿ ಶೇಕಡಾ 50ರಷ್ಟನ್ನು ರೈತರಿಗೆ ಪಾವತಿಸಬೇಕು ಎಂದು ಕಬ್ಬು ಬೆಳೆಗಾರರು ನ್ಯಾಯಯುತವಾಗಿ ಆಗ್ರಹಿಸುತ್ತಾ ಬಂದಿರುವುದು ವಾಸ್ತವವಾಗಿದ್ದರೂ ಕಬ್ಬು ಖರೀದಿ ದರಕ್ಕೆ ಇದನ್ನು ಜೋಡಿಸುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಏಕೆಂದರೆ ರಾಜ್ಯದ ರೈತರು ತಮ್ಮ ಉತ್ಪಾದನಾ ವೆಚ್ಚವನ್ನು ಆಧರಿಸಿ ಎಂ ಎಸ್ ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಶೇಕಡಾ 50ರಷ್ಟು ಹೆಚ್ಚುವರಿ ಖರೀದಿ ದರಕ್ಕೆ ಆಗ್ರಹಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಹೀಗಿದ್ದರೂ ಉಪ ಉತ್ಪನ್ನಗಳ ಲಾಭಾಂಶದ ಅಧ್ಯಯನದ ನೆಪದಲ್ಲಿ ಖರೀದಿ ದರ ಪ್ರಕಟಿಸದೇ ರೈತರನ್ನು ವಂಚಿಸುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ನಡೆಸಿದೆ. ಇದು ಅತ್ಯಂತ ಖಂಡನೀಯ.

ಕಬ್ಬು ಬೆಳೆಗಾರರ ಪ್ರತಿಭಟನೆ
ಕಬ್ಬು ಬೆಳೆಗಾರರ ಪ್ರತಿಭಟನೆ

ಈ ವರ್ಷ ಏಕೆ ಈ ಪರಿ ಆಕ್ರೋಶ?
ಕಬ್ಬು ಬೆಳೆಯ ಉತ್ಪಾದನಾ ವೆಚ್ಚ ನಿರಂತರವಾಗಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ರಸಗೊಬ್ಬರ, ಡೀಸೆಲ್‌, ಕೀಟನಾಶಕಗಳು ಹಿಂದೆಂದೂ ಇಲ್ಲದಷ್ಟು ಪ್ರಮಾಣದಲ್ಲಿ ದುಬಾರಿಯಾಗಿವೆ. ಅದೇ ಸಂದರ್ಭದಲ್ಲಿ ಕಟಾವು ಮತ್ತು ಸಾಗಾಣಿಕೆ ವೆಚ್ಚ ಕಬ್ಬು ಬೆಳೆಗಾರರನ್ನು ಗೋಳು ಹುಯ್ದುಕೊಳ್ಳುವ ಸಾಧನವಾಗಿ ಮಾರ್ಪಟ್ಟು ಕಟಾವು ಮಾಡಲೇಬೇಕಾದ ಒತ್ತಡಕ್ಕೆ ಒಳಗಾದಂತೆಲ್ಲಾ ದರ ಏರಿಸಿ ಶೋಷಣೆಗೆ ಗುರಿಪಡಿಸಲಾಗಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಸಕ್ಕರೆ ದರದಲ್ಲಾಗುವ ಏರಿಳಿತವನ್ನು ಅನುಸರಿಸಿ ಸಕ್ಕರೆ ಕಾರ್ಖಾನೆಗಳು ತಮ್ಮ ಗರಿಷ್ಠ ಲಾಭಾಂಶವನ್ನು ಖಾತರಿಪಡಿಸಿಕೊಳ್ಳುವ ಸಲುವಾಗಿ ಕಾರ್ಖಾನೆಯನ್ನು ವಿಳಂಬವಾಗಿ ಆರಂಭಿಸುವುದು, ಕಬ್ಬು ಅರೆಯುವಲ್ಲಿ ಉದ್ದೇಶಪೂರ್ವಕ ವಿಳಂಬ ಮಾಡುವುದು, ಕರಾರಿಗೆ ಅನುಗುಣವಾಗಿ ಸ್ಥಳೀಯ ರೈತರ ಕಬ್ಬು ಅರೆಯುವ ಬದಲು ದೂರದ ಕಬ್ಬು ಅರೆಯಲು ಆದ್ಯತೆ ನೀಡುವುದು, ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಫ್ ಆರ್ ಪಿ (ನ್ಯಾಯಯುತ ಹಾಗೂ ಲಾಭದಾಯಕ ದರ) ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಇದ್ದರೂ ಅದನ್ನು ಕೂಡ ಪಾವತಿಸದೇ ಸತಾಯಿಸುವುದು ಮತ್ತು ಈ ದರದಲ್ಲೂ ವರ್ಷಗಟ್ಟಲೆ ಬಾಕಿ ಉಳಿಸಿಕೊಳ್ಳುವುದು ಹೀಗೆ ವಿವಿಧ ರೀತಿಯಲ್ಲಿ ಕಬ್ಬು ಬೆಳೆಗಾರರಿಗೆ ಕಿರುಕುಳ ನೀಡಿ ಶೋಷಿಸುತ್ತಿವೆ.

ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಂದರೆ, ಈ ಒಂಬತ್ತು ವರ್ಷಗಳಲ್ಲಿ ಕಬ್ಬಿನ ಎಫ್‌ಆರ್‌ಪಿ ದರ ಕೇವಲ ಒಂದು ಟನ್‌ಗೆ ₹72 ಮಾತ್ರ ಹೆಚ್ಚಾಗಿದೆ. ಮಾತ್ರವಲ್ಲ, ಎಫ್‌ಆರ್‌ಪಿ ದರ ಪಾವತಿಗೆ ಇದ್ದ ಬೇಸ್ ಲೇನ್ ಅನ್ನೇ ಕಾರ್ಖಾನೆಗಳ ಮಾಲೀಕರ ದರೋಡೆಗೆ ಅನುಕೂಲವಾಗುವಂತೆ ಬದಲಾಯಿಸಲಾಗಿದೆ.

ಶೇಕಡಾ 9.5 ಇಳುವರಿಗೆ ಇದ್ದ ಬೇಸ್ ಲೇನ್ (ಒಂದು ಟನ್ ಕಬ್ಬು ಅರೆದರೆ 95 kg ಸಕ್ಕರೆ ಉತ್ಪತ್ತಿ) ಅನ್ನು ಮೋದಿ ಸರ್ಕಾರ ಶೇಕಡಾ 10.25 ಕ್ಕೆ (ಒಂದು ಟನ್ ಕಬ್ಬು ಅರೆದರೆ ಒಂದು ಕ್ವಿಂಟಾಲ್ ಇಪ್ಪತೈದು ಕೆಜಿ ಸಕ್ಕರೆ ಉತ್ಪತ್ತಿ) ಬದಲಾಯಿಸಿದೆ.  ಅದರ ಅರ್ಥ, ಅದೇ ಇಳುವರಿಗೆ ಈ ಹಿಂದೆ ರೈತರಿಗೆ ಸಿಗುತ್ತಿದ್ದ ಬೆಲೆಯು ಈಗ ಕಡಿಮೆಯಾಗುತ್ತದೆ. ಅಂದರೆ ಈ ಒಂಬತ್ತು ವರ್ಷಗಳಲ್ಲಿ ಹೆಚ್ಚಳವಾಗಿರುವ ಕನಿಷ್ಠಾತಿಕನಿಷ್ಠ ಮೊತ್ತವು ಕೂಡ ರೈತರಿಗೆ ಸಿಗದಂತೆ ಆಗಿದೆ.

ಇದನ್ನು ಓದಿದ್ದೀರಾ? ಅಡಿಕೆ ಆತಂಕ| ಎಲೆಚುಕ್ಕೆ ರೋಗಕ್ಕೆ ತೋಟ ನಾಶ: ರೈತರ ಮೂಗಿಗೆ ಅನುದಾನದ ತುಪ್ಪ ಸವರಿತೇ ಸರ್ಕಾರ?

ಈ ಕಳೆದ 4 ವರ್ಷಗಳ ಏರಿಕೆ ಪ್ರಮಾಣ ಪರಿಗಣಿಸಿದರೆ ಅಂದರೆ 2018-19ರಿಂದ 2022-23 ರವರೆಗಿನ ಅವಧಿಯಲ್ಲಿ ಕಬ್ಬಿನ ಖರೀದಿ ದರ ಕೆಜಿಗೆ ಕೇವಲ ಇಪ್ಪತೈದು ಪೈಸೆ ಮಾತ್ರ ಹೆಚ್ಚಳ ಆಗಿದೆ.

ಒಂದು ಕಡೆ ರಸಗೊಬ್ಬರ, ಡೀಸೆಲ್, ಕೀಟನಾಶಕ, ಕಟಾವು, ಸಾಗಾಣಿಕೆ ವೆಚ್ಚ ನಾಗಾಲೋಟದಲ್ಲಿ ನೂರಾರು ರೂಗಳ ಲೆಕ್ಕದಲ್ಲಿ ಏರಿಕೆ ಆಗುತ್ತಿದ್ದರೆ ಇನ್ನೊಂದು ಕಡೆ ಕಬ್ಬು ಖರೀದಿ ದರ ಮಾತ್ರ ಕುಂಟುತ್ತಾ, ತೆವಳುತ್ತಾ ಪೈಸೆಗಳಲ್ಲಿ ಏರಿಕೆ ದಾಖಲಿಸಿದೆ. ಈ ಅನ್ಯಾಯವೇ ಕಬ್ಬು ಬೆಳೆಗಾರರು ಆಕ್ರೋಶಗೊಳ್ಳಲು ಕಾರಣವಾಗಿದೆ.

ಇದ್ದುದರಲ್ಲಿ ಸಂಘಟಿತವಾಗಿರುವ ಕಬ್ಬು ಬೆಳೆಗಾರರದ್ದೇ ಈ ಸಮಸ್ಯೆಯಾದರೆ, ಯಾವ ರೀತಿಯ ಸಂಘಟನೆ ಅಥವಾ ಸರ್ಕಾರಿ ನಿಯಂತ್ರಣ ಇಲ್ಲದಿರುವ ಇತರ ಬೆಳೆಗಳ ವಿಚಾರದಲ್ಲಿ ಏನಾಗುತ್ತಿರಬಹುದು ಎಂಬುದನ್ನು ನೀವೇ ಊಹಿಸಿ.

(ಮುಂದುವರೆಯುವುದು...)

ನಿಮಗೆ ಏನು ಅನ್ನಿಸ್ತು?
6 ವೋಟ್
eedina app