ತೀಸ್ತಾರನ್ನು ಬೆಂಬಲಿಸುತ್ತಾ ನಾಗರಿಕ ಪ್ರತಿರೋಧವನ್ನು ಸಶಕ್ತಗೊಳಿಸಬೇಕಾಗಿದೆ: ಕೆ ಪಿ ಸುರೇಶ

Teestha

ಮೋದಿ ಸರ್ಕಾರ ಇಷ್ಟೆಲ್ಲಾ ಹಗೆತನ ತೋರಿ ಈ ಹೋರಾಟಗಾರರನ್ನು ಜೈಲಿಗೆ ತಳ್ಳುವಾಗ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳಿಂದ ಯಾಕೆ ದೊಡ್ಡ ಮಟ್ಟದ ವಿರೋಧ ಬಂದಿಲ್ಲ ಎಂಬುದನ್ನು ಗಮನಿಸಬೇಕು. ಮೋದಿಗೆ ಇರುವ ಪೂರ್ವ ನಿದರ್ಶನ ಸ್ವತಃ ಕಾಂಗ್ರೆಸ್ಸಿನ ತುರ್ತು ಪರಿಸ್ಥಿತಿ. ಇದೇ ಮೋದಿಗೆ ಸ್ಫೂರ್ತಿ. ಆದ್ದರಿಂದಲೇ ಕಾಂಗ್ರೆಸ್‌ನ ನಾಲಗೆ, ಕೈಗಳಿಗೆ ಗರ ಬಡಿದಿದೆ

ಈ ದೇಶದ ಅಗ್ರಮಾನ್ಯ ಮಾನವ ಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ ಅವರ ಬಂಧನವಾಗಿದೆ. ಸುಪ್ರೀಂ ಕೋರ್ಟು ಸರ್ಕಾರದ ವಾದವನ್ನು ಕಣ್ಣು ಮುಚ್ಚಿ ಒಪ್ಪಿದ್ದಲ್ಲದೇ ಸರ್ಕಾರಕ್ಕಿಂತಲೂ ಹೆಚ್ಚಿನ ಅಸಹನೆ ವ್ಯಕ್ತಪಡಿಸಿ ಆವೇಶಭರಿತ ಕಮೆಂಟುಗಳನ್ನೂ ಮಾಡಿದೆ!  ಇದಕ್ಕೇ ಕಾಯುತ್ತಿದ್ದಂತೆ ಸರ್ಕಾರ ತೀಸ್ತಾ ಅವರನ್ನು ಬಂಧಿಸಿದೆ.
ತನ್ನ ರಾಜಕೀಯ ಎದುರಾಳಿಗಳನ್ನು  ರೈಡುಗಳ ಮೂಲಕ ಬೆದರಿಸಿ, ಚೌಕಾಶಿ ಮಾಡಿ ಸರ್ಕಾರ ನಿಭಾಯಿಸುತ್ತೆ.  ಹೀಗೆ ಪಳಗಿಸಿದ ರಾಜಕಾರಣಿಗಳಿಗೆ ಎಲ್ಲೂ ಶಿಕ್ಷೆಯಾಗಿಲ್ಲ. ಆದರೆ ಮಾನವ ಹಕ್ಕು ಹೋರಾಟಗಾರರ ಆಯಾಮ ಬೇರೆ.
ಸರ್ಕಾರವೊಂದು ತಾನು ಸಂವಿಧಾನಕ್ಕೆ ಬದ್ಧವಾಗಿ, ಈ ನೆಲದ ಕಾನೂನಿಗೆ ಅನುಗುಣವಾಗಿ ಆಡಳಿತ ಮಾಡುತ್ತೇನೆ ಎಂದು ಹೇಳುತ್ತೆ. ಆದರೆ ಸರ್ಕಾರ ಸಂವಿಧಾನಕ್ಕೆ ವಿರೋಧವಾಗಿ, ಅಕ್ರಮವಾಗಿ ಕೆಲಸ ಮಾಡುತ್ತಿದೆ ಎಂದು ದಾಖಲೆಗಳ ಮೂಲಕ  ಸರ್ಕಾರದ ದ್ರೋಹಗಳನ್ನು ಅನಾವರಣಗೊಳಿಸುವ ಈ ಹೋರಾಟಗಾರರು ಸದಾ ಸರ್ಕಾರಕ್ಕೆ ಪಕ್ಕೆ ಮುಳ್ಳು. ಯಾವ ಸರ್ಕಾರವೂ ಇವರನ್ನು ಸಹಿಸುವುದಿಲ್ಲ.  

ಕಾಂಗ್ರೆಸ್ಸಿನ ತುರ್ತು ಪರಿಸ್ಥಿತಿ ಮೋದಿಗೆ ಸ್ಫೂರ್ತಿ

ಮೋದಿ ಸರ್ಕಾರ ಇಷ್ಟೆಲ್ಲಾ ಹಗೆತನ ತೋರಿ ಈ ಹೋರಾಟಗಾರರನ್ನು ಜೈಲಿಗೆ ತಳ್ಳುವಾಗ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳಿಂದ ಯಾಕೆ  ದೊಡ್ಡ ಮಟ್ಟದ ವಿರೋಧ ಬಂದಿಲ್ಲ ಎಂಬುದನ್ನು ಗಮನಿಸಬೇಕು. ಮೋದಿಗೆ ಇರುವ ಪೂರ್ವ ನಿದರ್ಶನ ಸ್ವತಃ ಕಾಂಗ್ರೆಸ್ಸಿನ ತುರ್ತು ಪರಿಸ್ಥಿತಿ. ಇದೇ ಮೋದಿಗೆ ಸ್ಫೂರ್ತಿ. ಆದ್ದರಿಂದಲೇ ಕಾಂಗ್ರೆಸ್‌ ನ ನಾಲಗೆ, ಕೈಗಳಿಗೆ ಗರ ಬಡಿದಿದೆ. ಈ ಹಿಂದಿನ ಯುಪಿಎ ಸರ್ಕಾರ ಡಾ. ಬಿನಾಯಕ್‌ ಸೆನ್‌ ಅಂಥವರನ್ನು ಜೈಲಿಗೆ ತಳ್ಳಿತ್ತು. ಸಲ್ವಾ ಜುಡಂನಂಥಾ ಕಾನೂನು ಬಾಹಿರ ಸೇನೆಯ ಸೃಷ್ಟಿಗೆ ಕಾರಣವಾಗಿತ್ತು.  ಒಂದರ್ಥದಲ್ಲಿ ಚಿದಂಬರಂ ಅವರೇ ಮೋದಿಯ ಪರೋಕ್ಷ ಗುರು!

ಈಗ ನೋಡಿ, ಅಭಿಷೇಕ್‌ ಸಿಂಗ್ವಿಯಂಥಾ ಕಾಂಗ್ರೆಸ್‌ ನಾಯಕ ಈ ತೀರ್ಪಿನ ಬಗ್ಗೆ ಏನೂ ಮಾತಾಡುತ್ತಿಲ್ಲ! ತನ್ನ ಪಕ್ಷದ ಸಂಸದನೊಬ್ಬನ ಅಮಾನವೀಯ ಹತ್ಯೆಯ ಬಗ್ಗೆಯೂ ಭಾವುಕರಾಗದಷ್ಟು ಪುಕ್ಕಲವಾಗಿದೆ ಕಾಂಗ್ರೆಸ್.
ಇನ್ನು ಮೋದಿಯ ನಡೆಯ ಬಗ್ಗೆ (ಎಡಪಕ್ಷಗಳು ಬಿಟ್ಟರೆ) ಉಳಿದ ಯಾವ ಪ್ರಾದೇಶಿಕ ಪಕ್ಷಗಳೂ ಸೆಟೆದು ನಿಂತಿಲ್ಲ. ಯಾಕೆ?

ಯಾಕೆಂದರೆ ಅವರಿಗೂ ತಮ್ಮ ತಮ್ಮ ರಾಜ್ಯಗಳಲ್ಲಿ ತಮ್ಮ ಭ್ರಷ್ಟತೆಯನ್ನು ಬಯಲಿಗೆಳೆಯುವವರನ್ನು ಬಲಿ ಹಾಕಲು ಈ ದಮನದ ಕಾನೂನುಗಳು ಬೇಕು. ಭಾಜಪ ಆಳುತ್ತಿದ್ದ ರಾಜ್ಯಗಳಿಗಿಂತ ಹೆಚ್ಚು ರಾಷ್ಟ್ರದ್ರೋಹದ ಪ್ರಕರಣಗಳನ್ನು ಜಯಲಲಿತಾ ತಮಿಳುನಾಡಿನಲ್ಲಿ ದಾಖಲಿದ್ದರು! ಮೊನ್ನೆ ಮೊನ್ನೆ ಮಮತಾ ಬ್ಯಾನರ್ಜಿ, ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ್‌, ಮಹಾರಾಷ್ಟ್ರದ ಉದ್ಧವ್ ಥಾಕರೆ ಇಂಥದೇ ಪ್ರಕರಣಗಳನ್ನು ತಮಗೆ ಕಿರಿಕಿರಿ ತಂದವರ ಮೇಲೆ ದಾಖಲಿದ್ದರು. ಅರ್ಥಾತ್‌ ಮೋದಿ ಒಂದು ರೀತಿಯ ಅಸ್ತ್ರಗಳ ಆವಿಷ್ಕಾರಿಯಂತೆ ಇವರಿಗೆ ಕಾಣಿಸುತ್ತಿದ್ದಾರೆ. ಓಹೋ ಇದು ಚೆನ್ನಾಗಿದೆ, ನಾವೂ ಬಳಸೋಣ ಎಂದು ಅವರು ತುದಿಗಾಲಲ್ಲಿ ಇದ್ದಾರೆ.

Image
Narendra modi

ಅಂದರೆ ರಾಜಕೀಯ ಪಕ್ಷಗಳ ಲೇಪವಿಲ್ಲದ, ಅಂತಸ್ಸಾಕ್ಷಿಗೆ ತಕ್ಕಂತೆ ಸ್ವಾಯತ್ತವಾಗಿ ಕ್ರಿಯಾಶೀಲವಾಗಿರುವ ಮಾನವ ಹಕ್ಕು ಕಾರ್ಯಕರ್ತರು ನಮ್ಮ ರಾಜಕೀಯ ಪಕ್ಷಗಳಿಗೂ ಬೇಡ. ಅವರಿಗೆ ದೊಡ್ಡ ಜಾತಿ/ ಜನಸಮೂಹದ ಬೆಂಬಲವೂ ಇಲ್ಲ, ಇರಲು ಸಾಧ್ಯವೂ ಇಲ್ಲ. ಅವರಿಗಿರುವ ರಕ್ಷಣೆಯ ಮೂಲ-ನ್ಯಾಯಾಂಗ ಮತ್ತು ಸತ್ಯ ನಿಷ್ಠುರ ಮಾಧ್ಯಮ ಮತ್ತು ನಾಗರಿಕ ಸಮಾಜ. ಇವುಗಳಲ್ಲಿ  ನ್ಯಾಯಾಂಗ ವಿಶ್ವಾಸಾರ್ಹತೆ ಕಳೆದುಕೊಂಡರೆ, ಮಾಧ್ಯಮಗಳು ಮಾರಿಕೊಂಡ ನಿರ್ಲಜ್ಜ ಕೇಕೆಯಲ್ಲಿವೆ.

ಇತಿಹಾಸದ ಚಕ್ರ ಉರುಳುತ್ತಿರುತ್ತದೆ

ಈ ಹೋರಾಟಗಾರರ ಸಂತತಿ ಇನ್ನಷ್ಟು ಕರಾಳ ದಿನಗಳನ್ನು ನೋಡಲಿದೆ. ಹಾಗೆಂದು ಈ ಬಂಧನ ಸತ್ರಗಳ ಮೂಲಕ ಈ ಹೋರಾಟದ ಸೆಲೆಯನ್ನು ಬತ್ತಿಸಬಹುದು ಎಂದು ಸರ್ಕಾರ ಭಾವಿಸಿದ್ದರೆ ಅದು ತಪ್ಪು. ಯಾಕೆಂದರೆ ಈ ಹೋರಾಟಗಾರರು ಬೆಳೆಯುವುದು ಅಂತಸ್ಸಾಕ್ಷಿಯ ಪ್ರೇರಣೆಯಿಂದಲೇ ಹೊರತು, ಅವರಿಗೆ ಸಿಕ್ಕ ಹೆಸರು ತನಗೂ ಬರುತ್ತದೆ ಎಂಬ ಹುಂಬ ಅನುಕರಣೆಯಿಂದ ಅಲ್ಲ.

ಹೀಗೆ ಭಯ ಬಿದ್ದಿದ್ದರೆ ಯಾವ ದೇಶಗಳಲ್ಲೂ ಹೋರಾಟ ಆಗುತ್ತಿರಲಿಲ್ಲ, ಕ್ರಾಂತಿಯೂ ಆಗುತ್ತಿರಲಿಲ್ಲ. ಸರ್ಕಾರಗಳು ಬೀಳುತ್ತಿರಲಿಲ್ಲ. ಮೋದಿ ಮತ್ತು ಭಾಜಪ ಮಾಡುತ್ತಿರುವ ಬಲು ದೊಡ್ಡ ತಪ್ಪೆಂದರೆ ಆಗಿಹೋದ ಹಲವು ದೇಶಗಳ ಹುಂಬ ಸರ್ವಾಧಿಕಾರಿಗಳಂತೆ ಅಧಿಕಾರ ಶಾಶ್ವತ ಎಂದು ನಂಬಿಕೊಂಡಿರುವುದು. ಇತಿಹಾಸದ ಚಕ್ರ ಉರುಳುತ್ತಿರುತ್ತದೆ. ಈ  ಉತ್ತುಂಗದಿಂದ ಉರುಳುವ ದಿನವೂ ಬರುತ್ತದೆ. ಆಗ ತಾನು ಬಳಸಿದ ಅಸ್ತ್ರ ತರುವಾಯ ಬರುವ ಅಧಿಕಾರಸ್ಥನ ಕೈಯ ಅಸ್ತ್ರವಾಗುತ್ತದೆ ಎಂಬ ಕಿಂಚಿತ್‌ ಇತಿಹಾಸದ ಪ್ರಜ್ಞೆ ಇದ್ದಿದ್ದರೆ ಮೋದಿ ಸರ್ಕಾರ ಕೊಂಚ ಹಿಂಜರಿಕೆಯಲ್ಲಿರುತ್ತಿತ್ತು. ತುರ್ತು ಪರಿಸ್ಥಿತಿಯನ್ನು ಉದ್ದೀಪಿಸುವಾಗಲೂ ಅದರಿಂದ ಪಾಠ ಕಲಿತ ಚಿಹ್ನೆಯನ್ನು ಭಾಜಪ ತೋರಿಸುತ್ತಿಲ್ಲ.

ತೀಸ್ತಾ ಅವರು ತೋರಿದ  ಈ ಸಾಂವಿಧಾನಿಕ  ಪ್ರತಿರೋಧ ತೀಸ್ತಾ ಅವರಿಗಷ್ಟೇ ಸೀಮಿತವಾಗಿ ನೋಡಬಾರದು.
ಸ್ಥಳೀಯವಾಗಿ ಮಾಹಿತಿ ಹಕ್ಕಿನ ಮೂಲಕವೋ, ಇನ್ಯಾವುದೋ ಮೂಲದಿಂದಲೋ ಸರ್ಕಾರವನ್ನು ಎಕ್ಸ್‌ಪೋಸ್‌ ಮಾಡುವವರೆಲ್ಲಾ ತೀಸ್ತಾ ಅವರ ಜೀನ್‌ ಹಂಚಿಕೊಂಡವರೆಂದು ನಾವು ಭಾವಿಸಬೇಕು. ಅವರನ್ನು ಬೆಂಬಲಿಸುತ್ತಾ ಈ ನಾಗರಿಕ ಪ್ರತಿರೋಧವನ್ನು ಸಶಕ್ತಗೊಳಿಸಬೇಕಾಗಿದೆ.

ಇದನ್ನು ಓದಿದ್ದೀರಾ? ಎಂಟು ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರದ ʼದ್ವೇಷದ ಕೈದಿʼಗಳಾದವರಿವರು

ಇಬ್ಸೆನ್‌ನ ನಾಟಕವೊಂದರಲ್ಲಿ ಇಡೀ ನಗರವೇ ಭ್ರಷ್ಟವಾಗಿ ಸತ್ಯವನ್ನು ಅನಾವರಣಗೊಳಿಸುವ ವೈದ್ಯನೊಬ್ಬನ ಮೇಲೆ ಮುಗಿ ಬಿದ್ದು ಆತನನ್ನು ಬಾಯಿ ಮುಚ್ಚಿಸಲು ನೋಡುತ್ತಾರೆ. ಆಗ ಆತ ʼಒಂಟಿಯಾದರೂ ಪರವಾಗಿಲ್ಲ, ಸತ್ಯ ಹೇಳುವ ಧೈರ್ಯ ಮಾಡುವೆʼ ಎಂದು ಸೆಟೆಯುತ್ತಾನೆ. ನಾಗರಿಕತೆಯ ಅಂತಸ್ಸಾಕ್ಷಿ ನಿರಂತರವಾಗಿ ಪ್ರವಹಿಸುವುದು ಹೀಗೆ.

ಭಾರತದ ವಿಚಿತ್ರ ಶಕ್ತಿ ಬಗ್ಗೆ ವಿಎಸ್‌ ನೈಪಾಲ್‌ ಇದೊಂದು ದಶಲಕ್ಷ ದಂಗೆಗಳ ದೇಶ ಎನ್ನುತ್ತಾನೆ. ಇಲ್ಲಿನ ಪ್ರತಿರೋಧವನ್ನು ಅಡಗಿಸುವುದು ಸಾಧ್ಯವೇ ಇಲ್ಲ. ತಾತ್ಕಾಲಿಕವಾಗಿ ಯಶ ಪಡೆಯಬಹುದು. ಆದರೆ ಖಾಯಂ ಆಗಿ ಈ ಚೈತನ್ಯವನ್ನು ದಮನಿಸುವುದು ಸಾಧ್ಯವಿಲ್ಲ. ಮುಖ್ಯವಾಹಿನಿ ರಾಜಕೀಯ ಪಕ್ಷಗಳೂ ಭಾಜಪದ ಅಮೀಬಾ ಸಂತತಿ ಎಂಬ ಎಚ್ಚರ ಇಟ್ಟುಕೊಂಡು ಅಲ್ಲಿಂದ ಬೆಂಬಲ ಬರುತ್ತೆ ಎನ್ನುವ ಹುಸಿ ನಿರೀಕ್ಷೆಯನ್ನು ಬಿಟ್ಟುಕೊಟ್ಟು ಇಬ್ಸೆನ್ನನ ವೈದ್ಯನಂತೆ ಈ  ಹೋರಾಟ ನಡೆಸಬೇಕಾಗಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್