ಬಾಡಿಗೆ ತಾಯ್ತನ; ಹಣ ನೀಡಿ ಮಹಿಳೆಯರನ್ನು ಶೋಷಿಸುವ ಹೊಸ ದಾರಿ

ಬಾಡಿಗೆ ತಾಯ್ತನವನ್ನು ಮಹಿಳೆಯರು ತಮ್ಮ ಹಕ್ಕಿನ ಮತ್ತು ಆಯ್ಕೆಯ ಸ್ವಾತಂತ್ರದ ಭಾಗವಾಗಿ ಮುಂದಿಡುವುದು. ಮಹಿಳಾ ಸ್ವಾತಂತ್ರದ ಹರಿಕಾರರು ನೆನಪಿಡಬೇಕಾಗಿರುವುದು ಹಣದ ಆಮಿಷವಿಲ್ಲದಿದ್ದರೆ ಬಾಡಿಗೆ ತಾಯ್ತನಕ್ಕೆ ಯಾವುದಾದರೂ ಹೆಣ್ಣು ಒಪ್ಪುವುದು ಸಾಧ್ಯವೇ? ಅಂದರೆ ಇದು ಹಣ ನೀಡಿ ಮಹಿಳೆಯರನ್ನು ಶೋಷಿಸುವ ಹೊಸ ದಾರಿ ಮಾತ್ರ

ಪ್ರಿಯಾಂಕ ಚೊಪ್ರಾ ಬಾಡಿಗೆ ತಾಯ್ತನದಿಂದ ಮಗುವನ್ನು ಪಡೆದಿರುವುದು ಮಾಧ್ಯಮಗಳಿಗೆ ದೊಡ್ಡ ಸುದ್ದಿಯಾಗುವುದು ಸಹಜ. ತನಗೆ ದೈಹಿಕ ತೊಂದರೆಗಳಿದ್ದುದರಿಂದ ಹಾಗೆ ಮಾಡಬೇಕಾಯಿತು ಎನ್ನುವ ಅವರ ಸಮರ್ಥನೆಯನ್ನು ನಾವೇನು ಪ್ರಶ್ನಿಸಬೇಕಾಗಿಲ್ಲ. ತನಗಿರುವ ವ್ಯಕ್ತಿ ಸ್ವಾತಂತ್ರವನ್ನು ಬಳಸಿಕೊಂಡರುವ ಪ್ರಿಯಾಂಕ ಚೋಪ್ರಾ ನಡೆಯ ಸುತ್ತ ಚರ್ಚೆ ಅನಗತ್ಯ. ಆದರೆ ಬಾಡಿಗೆ ತಾಯ್ತನದ ಸುತ್ತ ಇರುವ ಮಾನವೀಯ ಪ್ರಶ್ನೆಗಳನ್ನು ನಾವು ಕಡೆಗಣಿಸುವಂತಿಲ್ಲ. ಹಣವಂತರ ಶೋಕಿಯಾಗುತ್ತಿರುವ ಇದು ಎಷ್ಟು ಪ್ರಾಕೃತಿಕವೇ ಮತ್ತು ಅಪೇಕ್ಷಣೀಯವೇ ಎನ್ನುವುದು ನಮಗೆಲ್ಲರಿಗೂ ಸಂಬಂಧಿಸಿದ ಪ್ರಶ್ನೆ.

ವಿಜ್ಞಾನ ಬೆಳೆದಂತೆ ಹೊಸಹೊಸ ಅವಿಷ್ಕಾರಗಳಾಗುವುದು ಸಹಜ. ಆದರೆ ಆಧುನಿಕ ವಿಜ್ಞಾನದ ದೊಡ್ಡ ತೊಂದರೆಯಿರುವುದು ಪ್ರಮುಖವಾಗಿ ನಾಲ್ಕು ಅಂಶಗಳಲ್ಲಿ. ಮೊದಲನೆಯದು ಇದು ಮಾನವನ ದೈಹಿಕ ಸುಖ ಸೌಲಭ್ಯಗಳನ್ನು ಹೆಚ್ಚಿಸುವತ್ತ ಮಾತ್ರ ಗಮನ ಹರಿಸುತ್ತಿದೆ. ಎರಡನೆಯದು ವಿಜ್ಞಾನ ಯಾವುದೇ ನೈತಿಕ ಮಾನದಂಡಗಳಿಗೆ ಒಳಪಡದೆ ಸರ್ವಶಕ್ತವಾಗಿ ಬೆಳೆಯುತ್ತಿದೆ. ಮೂರನೆಯದು ವೈಜ್ಞಾನಿಕ ಸಂಶೋಧನೆಗಳು ಎಲ್ಲವನ್ನೂ ವಿಭಜಿಸಿ ಅಧ್ಯಯನ ಮಾಡುತ್ತಾ ಸಮಗ್ರ ದೃಷ್ಟಿಕೋನವನ್ನೇ ಕಳೆದುಕೊಂಡಿದೆ. ನಾಲ್ಕನೆಯದಾಗಿ ಸಂಶೋಧನೆಗಳಿಂದ ಉತ್ಪನ್ನವಾದ ತಂತ್ರಜ್ಞಾನ ಯಾವುದೇ ಪ್ರಾಕೃತಿಕ ನಿಯಮಗಳಿಗೆ ಒಳಪಡದೆ ಬಿಡಿಬಿಡಿಯಾಗಿ ಬಳಕೆಯಾಗುತ್ತಿದೆ. ಇಂತಹ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಕಾರ್ಪೋರೇಟ್‌ಗಳು ಭರಪೂರ ಹಣ ಮಾಡಿಕೊಳ್ಳುತ್ತಿವೆ. ಇದೆ ಹಣವನ್ನು ಬಳಸಿ ಬಂಡವಾಳಶಾಹಿಗಳು ವಿಜ್ಞಾನಿಗಳನ್ನು ಧರ್ಮಗಳನ್ನು ಆಡಳಿತವ್ಯವಸ್ಥೆಗಳನ್ನು ಕೊಂಡು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತವೆ.

ಬಾಡಿಗೆ ತಾಯ್ತನ ಇತ್ತೀಚನ ವರ್ಷಗಳಲ್ಲಿ ವಿಜ್ಞಾನದಿಂದ ಆಗುತ್ತಿರುವ ಮತ್ತೊಂದು ದೊಡ್ಡ ಅಪಚಾರ. ಪ್ರಯೋಗಶಾಲೆಗಳಲ್ಲಿ ಯಂತ್ರದ ಎರಡು ಭಾಗಗಳನ್ನು ಜೋಡಿಸಿದಂತೆ ಒಂದು ಹೊಸಜೀವವನ್ನು ಸೃಷ್ಟಿಸುವುದು ಅತ್ಯಂತ ಅನೈಸರ್ಗಿಕವಾದದ್ದು. ಪ್ರಾಣಿಗಳಿರಲಿ, ಸಸ್ಯಗಳಿರಲಿ ಹೊಸ ಜೀವದ ಹುಟ್ಟು ಮೇಲು ನೋಟಕ್ಕೆ ಕಾಣಿಸುವಂತೆ ಕೇವಲ ಯಾಂತ್ರಿಕ ಕ್ರಿಯೆಯಲ್ಲ. ಸಸ್ಯಗಳಲ್ಲಿ ಕೃತಕವಾಗಿ ಹೊಸ ಜೀವವನ್ನು ಹುಟ್ಟಿಸುವ ಇಂತಹ ಪ್ರಯೋಗಗಳನ್ನು ಹಲವಾರು ದಶಕಗಳಿಂದ ಮಾಡುತ್ತಾ ಬಂದಿರುವುದರಿಂದ ಇವತ್ತಿನ ಜೀವಪ್ರಭೇದಗಳು ಕಲುಷಿತಗೊಂಡಿವೆ. ಇದನ್ನು ಪ್ರಕೃತಿ ಹಲವಾರು ರೀತಿಗಳಲ್ಲಿ ಪ್ರತಿಭಟಿಸುತ್ತಿದೆ. ಮನುಷ್ಯ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ಆಗಿರುವ ದುಷ್ಪರಿಣಾಗಳು ಪ್ರಕೃತಿಯ ಒಂದು ರೀತಿಯ ಪ್ರತಿಭಟನೆಯೇ ಆಗಿದೆ ಎನ್ನುವುದನ್ನು ಗಮನಿಸದಷ್ಟು ಆಧುನಿಕ ವಿಜ್ಞಾನ ಕುರುಡಾಗಿದೆ. ಈಗ ಅದೇ ಪ್ರಯೋಗಗಳನ್ನು ಮಾನವರ ಮೇಲೆ ನಡೆಸಲಾಗುತ್ತಿದೆ.

ಮನುಷ್ಯರು ಮತ್ತು ಪ್ರಾಣಿಗಳಲ್ಲಿ ಹೊಸ ಜೀವದ ಹುಟ್ಟು ಸಸ್ಯಗಳಿಗಿಂತ ಸಂಕೀರ್ಣವಾದ ಕ್ರಿಯೆ. ಹುಟ್ಟಿಗೆ ಕಾರಣವಾಗುವ ಪೋಷಕರು ತಮ್ಮ ಭಾವನಾತ್ಮಕ ಜೀವಜಲವನ್ನು ಮಗುವಿಗೆ ಧಾರೆಯೆರೆದಿರುತ್ತಾರೆ. ಹುಟ್ಟಿನ ಪ್ರಕ್ರಿಯೆಯಲ್ಲಿ ತಾಯಿಯಲ್ಲಿ ಸಾಕಷ್ಟು ರಾಸಾಯನಿಕ ಬದಲವಾಣೆಗಳಾಗುತ್ತವೆ. ಗರ್ಭಧರಿಸಿದಾಗ ಸೃಜನೆಯಾಗುವ ಆಕ್ಸಿಟೋಸಿನ್‌ನಂತಹ ಹಾರ್ಮೋನ್‌ಗಳು ಮಗು ಜನಿಸಿದ ನಂತರ ಅದನ್ನು ಜತನದಿಂದ ಕಾಪಾಡಲು ಪ್ರೇರೇಪಿಸುತ್ತದೆ. ಮನುಷ್ಯರು ಮತ್ತು ಪ್ರಾಣಿಗಳಲ್ಲಿ ಕಕ್ಕುಲಾತಿ ಪ್ರೀತಿ ಬಾಂಧವ್ಯಗಳು ಕೇವಲ ಮಾನಸಿಕ ಕ್ರಿಯೆಯಲ್ಲ. ಇವೆಲ್ಲವೂ ಜೈವಿಕ ರಾಸಾಯನಿಕ ಮಾನಸಿಕ ಕ್ರಿಯೆಗಳು. ಹಾಗಾಗಿಯೇ ಮನುಕುಲ ಕೋಟಿಕೋಟಿ ವರ್ಷಗಳಿಂದ ಮುಂದುವರೆದುಕೊಂಡು ಬಂದಿದೆ. ಈ ಎಲ್ಲ ಸಂಕೀರ್ಣ ಕ್ರಿಯೆಗಳನ್ನು ಕೇವಲ ಅಂಡಾಣು ಮತ್ತು ವೀರ್ಯಾಣುಗಳ ಸಂಯೋಜನೆ ಮಾಡುವ ಮಾಡುವ ಪ್ರಯೋಗಶಾಲೆಯ ಪ್ರಕ್ರಿಯೆಯಾಗಿಸಿದರೆ ಅದು ತಾಯಿ ಮಗು ಇಬ್ಬರಿಗೂ ಮಾಡುವ ಅಪಚಾರವಲ್ಲದೆ ಮತ್ತೇನು?  ಹೊಸ ಜೀವದ ಹುಟ್ಟು ನಮ್ಮ ಮನೆಯಿಂದ ಸಾಮಾನುಗಳನ್ನು ಕಳಿಸಿ ಬೇರೆಯವರ ಮನೆಯಲ್ಲಿ ಅಡಿಗೆ ಮಾಡಿಸಿ ತರಿಸಿಕೊಂಡು ಉಣ್ಣುವಷ್ಟು ಸರಳವಾದ ವಿಚಾರವೇ?

ಇದನ್ನು ಓದಿದ್ದೀರಾ?: ಕರ್ನಾಟಕದ ಮುಖ್ಯಮಂತ್ರಿಗಳು ಮತ್ತು ವೃತ್ತಿನಿಷ್ಠ ಪತ್ರಕರ್ತ ಕೆ ಸತ್ಯನಾರಾಯಣ

ಬಾಡಿಗೆ ತಾಯಿಯಾಗುವವಳಿಗೆ ತಕ್ಷಣ ಇರುವ ಹಣಕಾಸಿನ ಅಗತ್ಯಕ್ಕೆ ಪರಿಹಾರಗಳು ಸಿಗಬಹುದಾದರೂ ಅವಳ ಮಾನಸಿಕ ಸ್ಥಿತಿಯಾದರೂ ಎಂತಹದಿರಬಹುದು? ತನ್ನದಲ್ಲದ ಒಂದು ಜೀವವನ್ನು ಗರ್ಭದಲ್ಲಿ ಪೋಷಿಸುವುದು ಬಹುದೊಡ್ಡ ಮಾನಸಿಕ ಹೋರಾಟವನ್ನು ಸೃಷ್ಟಿಮಾಡುತ್ತದೆ. ಒಂದು ದಿಕ್ಕಿನಿಂದ ಗರ್ಭಧರಿಸಿದ ಕಾರಣಕ್ಕಾಗಿ ಸೃಜನೆಯಾಗುವ ರಾಸಾಯನಿಕಗಳು ಅವಳನ್ನು ಮಗುವಿನೊಡನೆ ಬಾಂಧವ್ಯ ರೂಪಿಸಿಕೊಳ್ಳಲು ಪ್ರೇರೇಪಿಸಿದರೆ ಮತ್ತೊಂದು ಕಡೆಯಿಂದ ಅದು ತನ್ನದಲ್ಲ ಎನ್ನುವ ಎಚ್ಚರಿಕೆ ಅಂತಹ ಬಾಂಧವ್ಯದಿಂದ ಅವಳನ್ನು ದೂರ ತಳ್ಳುತ್ತಿರುತ್ತದೆ. ಪ್ರಸವವಾದ ನಂತರ ಕಕ್ಕುಲಾತಿಯ ಪ್ರತೀಕವಾಗಿ ಉಕ್ಕಿ ಬರುವ ಎದೆಹಾಲನ್ನು ಕಡೆಗಣಿಸಿ ಮಗುವನ್ನು ಇನ್ನೊಬ್ಬರ ವಶಕ್ಕೆ ಕೊಡುವುದು ಎಂತಹ ಮಾನಸಿಕ ಹಿಂಸೆಯಾಗಿರಬಹುದು? ಮುಂದೊಮ್ಮೆ ತನ್ನದೇ ಮಗುವನ್ನು ಹೊರುವಾಗ ಆ ಮಹಿಳೆ ಎದುರಿಸುವ ಮಾನಸಿಕ ಹೋರಾಟಗಳೇನಿರಬಹುದು?

ಗರ್ಭಧರಿಸಿರುವ ಮಹಿಳೆಯ ಮಾನಸಿಕ ಸ್ಥಿತಿ ಜನಿಸುವ ಮಗುವಿನ ಮನೋದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಸ್ಪಷ್ಟ ವೈಜ್ಞಾನಿಕ ಪುರಾವೆಗಳಿವೆ. ಆದರೆ ಬಾಡಿಗೆ ತಾಯಂದಿರು ತನ್ನೊಳಗಿರುವ ಮಗುವಿನೊಡನೆ ಬಾಂಧವ್ಯವನ್ನು ರೂಪಿಸಿಕೊಳ್ಳಲು ನಿರಾಕರಿಸುತ್ತಿರುವಾಗ ಅದು ಮಗುವಿಗೆ ಮಾಡುವ ಅನ್ಯಾಯವಲ್ಲವೇ? ತನ್ನದಲ್ಲದ ತಪ್ಪಿಗೆ ಭೂಮಿಗೆ ಬರುವ ಮುನ್ನವೇ ಮಗುವನ್ನು ಹೊಣೆಗಾರನನ್ನು ಮಾಡುವುದು ಮನುಕುಲದ ಕ್ರೌರ್ಯವಲ್ಲವೇ? ತನಗಾಗಿ ತಂದೆತಾಯಂದಿರು ದೈಹಿಕ ಕಷ್ಟಗಳನ್ನು ಎದುರಿಸಿದ್ದಾರೆ ಎನ್ನುವ ಭಾವವೇ ಮಗುವಿನಲ್ಲಿ ಪೋಷಕರ ಕುರಿತು ಕೃತಜ್ಞತಾ ಪೂರ್ವಕ ಪ್ರೀತಿ ಕಾಳಜಿಗಳಿಗೆ ಕಾರಣವಾಗುತ್ತದೆ. ಆದರೆ ಬಾಡಿಗೆ ತಾಯಿಯಿಂದ ಜನಿಸಿದ ಮಗುವಿಗೆ ಮುಂದೊಂದು ದಿನ ವಾಸ್ತವ ತಿಳಿದಾಗ ತನ್ನನ್ನು ಪೋಷಿಸುತ್ತಿರುವ ತಾಯಿತಂದೆಯರ ಕುರಿತು ಆ ಜೀವಕ್ಕೆ ಏನೆನ್ನಿಸಬಹುದು. ಆ ಮಗುವಿನಲ್ಲಿ ಒಂದು ರೀತಿಯ ಅನಾಥಪ್ರಜ್ಞೆ ಕಾಡಿದರೆ ಅದನ್ನು ಸರಿಪಡಿಸುವುದು ಹೇಗೆ? ಇಂತಹ ಸತ್ಯವನ್ನು ಮಕ್ಕಳಿಂದ ಮುಚ್ಚಿಡಲು ಜೀವಮಾನವಿಡೀ ತಂದೆತಾಯಂದಿರು ಎಚ್ಚರಿಕೆ ವಹಿಸಬೇಕಲ್ಲವೇ? ದತ್ತುಕಗಳಲ್ಲಿಯೂ ಈ ರೀತಿಯ ಹಲವಾರು ಸಮಸ್ಯೆಗಳಿರುತ್ತವೆ. ಆದರೆ ಅವುಗಳನ್ನು ನಿಭಾಯಿಸುವುದು ಇಷ್ಟು ಕಷ್ಟವೇನಲ್ಲ.

ದುರಾದೃಷ್ಟದಿಂದ ಆಧುನಿಕ ವಿಜ್ಞಾನ ಇವೆಲ್ಲವೆನ್ನೂ ಕಡೆಗಣಿಸುತ್ತಿದೆ. ಯಾವುದೇ ವಿಜ್ಞಾನಿಗಳು ಇದರ ಕುರಿತಾಗಿ ಸ್ಪಷ್ಟ ವಿರೋಧವನ್ನು ದಾಖಲಿಸದಂತಿಲ್ಲ. ಸರ್ಕಾರಗಳು ಇದನ್ನು ವ್ಯಕ್ತಿ ಸ್ವಾತಂತ್ರದಡಿ ಬರುವ ಆಯ್ಕೆಯಾಗಿ ಮಾತ್ರ ಪರಿಗಣಿಸುತ್ತಿದೆ. ಹಾಗಾಗಿ ಬಾಡಿಗೆ ತಾಯ್ತನ ಪ್ರಕ್ರಿಯೆಯು ದುರುಪಯೋಗವಾಗದಂತಹ ಕಾನೂನುಗಳ ಕುರಿತಾಗಿ ಮಾತ್ರ ಯೋಚಿಸುತ್ತಿವೆ. ಗರ್ಭಪಾತ, ಸಲಿಂಗಕಾಮಗಳನ್ನೆಲ್ಲಾ ವಿರೋಧಿಸುವ ಧಾರ್ಮಿಕ ನಾಯಕರುಗಳು ಬಾಡಿಗೆ ತಾಯ್ತನವನ್ನು ವಿರೋಧಿಸಿದಂತೆ ಕಾಣಿಸುತ್ತಿಲ್ಲ.

ಇದಕ್ಕಿಂತ ದೊಡ್ಡ ದುರಂತವೆಂದರೆ ಮಹಿಳೆಯರು ಇದನ್ನು ತಮ್ಮ ಹಕ್ಕಿನ ಮತ್ತು ಆಯ್ಕೆಯ ಸ್ವಾತಂತ್ರದ ಭಾಗವಾಗಿ ಮುಂದಿಡುವುದು. ಮಹಿಳಾ ಸ್ವಾತಂತ್ರದ ಹರಿಕಾರರು ನೆನಪಿಡಬೇಕಾಗಿರುವುದು ಹಣದ ಆಮಿಷವಿಲ್ಲದಿದ್ದರೆ ಬಾಡಿಗೆ ತಾಯ್ತನಕ್ಕೆ ಯಾವುದಾದರೂ ಹೆಣ್ಣು ಒಪ್ಪುವುದು ಸಾಧ್ಯವೇ? ಅಂದರೆ ಇದು ಹಣನೀಡಿ ಮಹಿಳೆಯರನ್ನು ಶೋಷಿಸುವ ಹೊಸದಾರಿ ಮಾತ್ರ. ಈಗಾಗಲೇ ನಾವು ಪ್ರಕೃತಿಯಿಂದ ಬಹಳ ದೂರ ಬಂದು ಕೇವಲ ಮನುಕುಲವನ್ನಷ್ಟೇ ಅಲ್ಲ, ಸಂಪೂರ್ಣ ಜೀವಸಂಕುಲವನ್ನು ವಿನಾಶದೆಡೆ ತಳ್ಳುತ್ತಿದ್ದೇವೆ. ಬಾಡಿಗೆ ತಾಯ್ತನವನ್ನು ಸಂಪೂರ್ಣವಾಗಿ ಕಾನೂನು ಬಾಹಿರ ಎಂದು ಎಲ್ಲಾ ದೇಶಗಳು ಘೋಷಿಸದಿದ್ದರೆ ವ್ಯಕ್ತಿಸ್ವಾತಂತ್ರ ಮತ್ತು ವಿಜ್ಞಾನದ ಮುಖವಾಡದಲ್ಲಿ ಮನುಕುಲ ಹೆಚ್ಚಿನ ದುರಂತದೆಡೆಗೆ ಮುಖಮಾಡುತ್ತದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app