ತಾಜ್‌ ಮಹಲ್‌ ಕುರಿತ ವಿವಾದಗಳನ್ನು ತಗ್ಗಿಸಲಿದೆಯೇ ಅಲಹಾಬಾದ್ ಹೈಕೋರ್ಟ್ ಟಿಪ್ಪಣಿ?

William Hart Photo

ಪ್ರೀತಿಯ ಸ್ಮಾರಕ ತಾಜ್ ಮಹಲ್ ರಾಜಕೀಯ ಕಾಲ್ಚೆಂಡಾಗಿರುವುದು ದುರಂತ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ವಿವಾದ ಹೆಚ್ಚಿವೆ. ಆದರೆ, ಮಹಲಿನೊಳಗಿನ 22 ಕೊಠಡಿಗಳ ಬಾಗಿಲು ತೆರೆಸುವ ಕುರಿತ ಅರ್ಜಿ ವಿಚಾರಣೆ ವೇಳೆ, ಅಲಹಾಬಾದ್ ಹೈಕೋರ್ಟ್‌ ಆಡಿರುವ ಮಾತು ಆಶಾವಾದಕ್ಕೆ ಕಾರಣವಾಗಿದೆ

'ತಾಜ್‌ ಮಹಲ್ ಅಂದರೆ ಪ್ರೀತಿ, ಪ್ರೀತಿ ಅಂದರೆ ತಾಜ್‌ ಮಹಲ್' ಎಂಬ ನಾಣ್ಣುಡಿಯನ್ನು, 'ತಾಜ್‌ ಮಹಲ್ ಅಂದರೆ ವಿವಾದ, ವಿವಾದವೆಂದರೆ ತಾಜ್‌ ಮಹಲ್' ಎಂದು ಬದಲಿಸಬೇಕಾದ ಸಂದರ್ಭ ಬಂದಿದೆಯೇ? ಆಗ್ರಾದ ಈ ವಿಶ್ವವಿಖ್ಯಾತ ಸ್ಮಾರಕದ ಸುತ್ತ ನಿರಂತರ ಹುಟ್ಟುಹಾಕುತ್ತಿರುವ ವಿವಾದಗಳನ್ನು ಗಮನಿಸಿದರೆ ಯಾರಿಗಾದರೂ ಹೀಗನ್ನಿಸದೆ ಇರದು.

ಪ್ರೀತಿಯ ಪತ್ನಿ ಮುಮ್ತಾಜ್ ಮಹಲ್‌ಳ ನೆನಪಿಗಾಗಿ ಷಹಜಹಾನ್ ಕಟ್ಟಿಸಿದ ‘ಸಮಾಧಿ’ ಅಮರ ಪ್ರೀತಿಯ ಬುನಾದಿ ಆಗಿದ್ದು ಸೋಜಿಗವಂತೂ ಹೌದು. ಆದರೆ, ಯಮುನೆಯ ತೀರದಲ್ಲಿರುವ ಅಮೃತ ಶಿಲೆಯ ಈ ಭವ್ಯ ವಾಸ್ತುಶಿಲ್ಪದ ಕಟ್ಟಡ ಭಾರತದ ಹೆಗ್ಗುರುತುಗಳಲ್ಲಿ ಒಂದು. ಉಸ್ತಾದ್ ಅಹ್ಮದ್ ಲಹೌರಿ ಕೈಚಳಕದಿಂದ ಮೂಡಿಬಂದಿರುವ ತಾಜ್‌ ಮಹಲ್‌ ಅನ್ನು 1983ರಲ್ಲಿ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲಾಯಿತು. ಜಗತ್ತಿನ ಏಳು ಅದ್ಭುತಗಳಲ್ಲಿ ಇದೂ ಒಂದು ಎನ್ನುವುದು ಭಾರತೀಯರ ಹೆಮ್ಮೆ.

ವಾರ್ಷಿಕವಾಗಿ ತಾಜ್ ಮಹಲ್‌ಗೆ ಎರಡರಿಂದ ನಾಲ್ಕು ದಶಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ. ಇವರಲ್ಲಿ ಎರಡು ಲಕ್ಷಕ್ಕಿಂತ ಹೆಚ್ಚು ಜನ ವಿದೇಶಿಗರು. ಹೆಚ್ಚಿನ ಪ್ರವಾಸಿಗರು ಅಕ್ಟೋಬರ್, ನವೆಂಬರ್ ಹಾಗೂ ಫೆಬ್ರವರಿ ತಿಂಗಳಲ್ಲಿ ಮಹಲ್‌ಗೆ ಭೇಟಿ ನೀಡುತ್ತಾರೆ.

ವಿಶ್ವದ ಅದ್ಭುತಗಳಲ್ಲಿ ಒಂದು - ಹೇಗೆ?

Image
Adnan Khan Photo
ಚಿತ್ರ ಕೃಪೆ: ಅದ್ನಾನ್ ಖಾನ್

ತಾಜ್ ಮಹಲ್ ವಾಸ್ತವವಾಗಿ ಅನೇಕ ಸಂರಚನೆಗಳ ಸಮಗ್ರ ಸಂಕೀರ್ಣ. ಗೌರವರ್ಣದ ಗುಮ್ಮಟಾಕಾರದ ಅಮೃತಶಿಲೆಯ ಭವ್ಯ ಸಮಾಧಿಯು ಇದರ ಅತ್ಯಂತ ಸುಪರಿಚಿತ ಭಾಗ. ಈ ಕಟ್ಟಡದ ನಿರ್ಮಾಣ ಪ್ರಾರಂಭ ಆಗಿದ್ದು 1632ರಲ್ಲಿ. ಕಾಮಗಾರಿ ಮುಗಿದದ್ದು 1653ರ ಹೊತ್ತಿಗೆ. ಈ ಸಮಾಧಿಯು 17 ಹೆಕ್ಟೇರ್ (42 ಎಕರೆ) ಸಂಕೀರ್ಣದ ಕೇಂದ್ರ. ಕಟ್ಟಡ ನಿರ್ಮಾಣಕ್ಕೆ ಸಾವಿರಾರು ಕುಶಲಕರ್ಮಿಗಳು ಮತ್ತು ನುರಿತ ಕೆಲಸಗಾರರನ್ನು ಬಳಸಿಕೊಳ್ಳಲಾಗಿತ್ತು. ಅಬ್ದುಲ್ ಕರೀಮ್ ಮಾಮುರ್ ಖಾನ್, ಮಖ್ರಾಮತ್ ಖಾನ್ ಮತ್ತು ಉಸ್ತಾದ್ ಅಹ್ಮದ್ ಲಹೌರಿ ಸೇರಿದಂತೆ ವಾಸ್ತುಶಿಲ್ಪಿಗಳ ತಂಡಕ್ಕೆ ನಿರ್ಮಾಣ ಕಾರ್ಯದ ಮೇಲ್ವಿಚಾರಣೆ ವಹಿಸಲಾಗಿತ್ತು. ಅವರಲ್ಲಿ ಲಹೌರಿ ಅವರನ್ನು ತಾಜ್ ಮಹಲ್ ನಿರ್ಮಾಣದ ಪ್ರಧಾನ ಶಿಲ್ಪಿ ಎಂದು ಪರಿಗಣಿಸಲಾಗಿದೆ.

ಇಂತಹ ತಾಜ್ ಮಹಲ್‌ ಸುತ್ತ ಇದೀಗ ವಿವಾದಗಳ ಕೋಟೆಯನ್ನೇ ಕಟ್ಟಲಾಗಿದೆ. ಬಿಜೆಪಿ ಸರ್ಕಾರದ ಸಚಿವರು, ಇತಿಹಾಸ ತಜ್ಞರು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಇತ್ಯಾದಿ-ಇತ್ಯಾದಿ ಮಂದಿ, ನಿರಂತರವಾಗಿ ಈ ಕಟ್ಟಡದ ಚರಿತ್ರೆ ಬದಲಿಸುವ ಪ್ರಯತ್ನ ಮಾಡುತ್ತ ಬಂದಿದ್ದಾರೆ. ಇತ್ತೀಚಿನ ಇಂಥ ಕೆಲವು ವಿವಾದಗಳತ್ತ ಇಣುಕುನೋಟ ಇಲ್ಲಿದೆ.

ಈ ಲೇಖನ ಓದಿದ್ದೀರಾ?: ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 2 | 'ಪದಗಳಿಗೆ ಹೆದರುವವರು ಮೂರ್ಖರು ಮಾತ್ರ ಎಂದೆಣಿಸಿದ್ದೆ'

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಐತಿಹಾಸಿಕ, ಧಾರ್ಮಿಕ ಸ್ಥಳಗಳ ಹೆಸರು ಬದಲಾವಣೆಯ ಕೂಗು ಕೇಳಿಬರುತ್ತಿದೆ. ಅದರಲ್ಲಿ ತಾಜ್ ಮಹಲ್ ಕೂಡ ಒಂದು. ಆದರೆ, ಈ ಬಾರಿ ತಾಜ್ ಮಹಲ್‌ಗೆ ಎದುರಾಗಿರುವ ಸವಾಲು ಕೇವಲ ಹೆಸರಿಗೆ ಸೀಮಿತವಾಗಿಲ್ಲ. ಬಿಜೆಪಿಯ ಹಲವು ನಾಯಕರು ದಿನದಿಂದ ದಿನಕ್ಕೆ ಸ್ಫೋಟಕ ಹೇಳಿಕೆಗಳನ್ನು ನೀಡುತ್ತಿದ್ದು, ಯೋಗಿ ಸರ್ಕಾರ 'ಐತಿಹಾಸಿಕ' ತಿರುವಿನ ನಿರೀಕ್ಷೆಯಲ್ಲಿದೆ.

ರಜಪೂತ ದೊರೆ ನಿರ್ಮಿಸಿದ ಶಿವ ದೇವಾಲಯ?

ಇತಿಹಾಸ ತಜ್ಞ ಪಿ ಎನ್ ಓಕ್ ಅವರ 'ತಾಜ್ಮಹಲ್: ದಿ ಟ್ರೂ ಸ್ಟೋರಿ' ಪ್ರಕಾರ, ತಾಜ್ ಮಹಲ್ ರಜಪೂತ ದೊರೆ ನಿರ್ಮಿಸಿದ ಶಿವ ದೇವಾಲಯ. ಇದನ್ನು ಶಹಜಹಾನ್ ದತ್ತು ಪಡೆದುಕೊಂಡಿದ್ದ. ಓಕ್ ಅವರು ಪುಸ್ತಕ ಬರೆದಿದ್ದಲ್ಲದೆ, ತಾಜ್ ಮಹಲ್ ಅನ್ನು ಶಿವ ದೇವಾಲಯ ಎಂದು ಘೋಷಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದರು. ಆದರೆ, ಕೋರ್ಟ್ ಅವರ ವಾದವನ್ನು ಪುರಸ್ಕರಿಸಲಿಲ್ಲ. 

ತಾಜ್ ಮಹಲ್ ವರ್ಸಸ್ ತೇಜೋ ಮಹಾಲಯ

Image
Sebastian Leonhardt Photo
ಚಿತ್ರ ಕೃಪೆ: ಎಲ್ ಸೆಬಾಸ್ಟಿಯನ್

ತಾಜ್ ಮಹಲ್ ಎಂಬುದು ಶಿವನ ದೇವಾಲಯ ಎಂಬ ವಾದ ಕೆಲವು ವರ್ಷಗಳಿಂದ ಕೇಳಿಬರುತ್ತಲೇ ಇದೆ. ಈ ಹಿಂದೆ, ಯೋಗಿ ಆದಿತ್ಯನಾಥ್ ಕೂಡ, "ತಾಜ್ ಮಹಲ್ ಶಿವನ ಮಂದಿರವಾಗಿತ್ತು. ಈ ದೇಶದ ಜನರು ರಕ್ತ, ಬೆವರು ಸುರಿಸಿ ಅದನ್ನು ಕಟ್ಟಿದ್ದಾರೆ," ಎಂದು ಹೇಳಿಕೆ ನೀಡಿದ್ದರು.

ರಾಮ ಮಂದಿರ ಉತ್ಖನನ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೇರಳ ಮೂಲದ ಪುರಾತತ್ವ ಶಾಸ್ತ್ರಜ್ಞ ಕೆ ಕೆ ಮುಹಮ್ಮದ್, ತಾಜ್ ಮಹಲ್ ಶಿವನ ಮಂದಿರವಾಗಿತ್ತು ಎಂಬ ವಿಚಾರವನ್ನು ಅಲ್ಲಗಳೆಯುತ್ತಾರೆ. "ತಾಜ್ ಮಹಲ್ ಕಟ್ಟಿದ ಕಾಲಘಟ್ಟದಲ್ಲಿ ಕಟ್ಟಡದ ವಿನ್ಯಾಸವೇ ಭಿನ್ನವಾಗಿತ್ತು. ಅದು ಮೊಘಲ್ ಶೈಲಿಯ ಕಟ್ಟಡವಾಗಿದ್ದು, ಈ ರೀತಿಯ ಕಮಾನುಗಳು, ಶಿಲೆಗಳನ್ನು ಈ ಹಿಂದಿನ ಯಾವ ನಿರ್ಮಾಣದಲ್ಲಿಯೂ ಬಳಸಿರಲಿಲ್ಲ. ದೇಶಾದ್ಯಂತ ಬಹಳಷ್ಟು ದೇವಸ್ಥಾನಗಳ ಬಗ್ಗೆ ಅಧ್ಯಯನ ನಡೆಸಿರುವ ನಾನು, ಎಲ್ಲಿಯೂ ಎಂದೂ 'ತೇಜೋ ಮಹಾಲಯ' ಎಂಬ ಹೆಸರನ್ನೇ ಕೇಳಿಲ್ಲ," ಎಂದು ಸ್ಪಷ್ಟವಾಗಿ ಹೇಳುತ್ತಾರೆ.

ಸಂಚಲನ ಸೃಷ್ಟಿಸಿದ ಸಂಸದೆಯ ಹೇಳಿಕೆ

ರಾಜಕುಮಾರಿ ಮತ್ತು ಮಾಧೋಪುರದ ಬಿಜೆಪಿ ಸಂಸದೆ ದಿಯಾ ಕುಮಾರಿ ಇತ್ತೀಚೆಗೆ ಸ್ಫೋಟಕ ಹೇಳಿಕೆಯೊಂದನ್ನು ನೀಡಿದರು. "ತಾಜ್ ಮಹಲ್ ನಮ್ಮ ಜಮೀನು, ಅಗತ್ಯವಿದ್ದರೆ ದಾಖಲೆ ನೀಡಲೂ ಸಿದ್ಧ," ಎಂಬುದು ಅವರ ಪ್ರತಿಪಾದನೆ. ಈ ಹೇಳಿಕೆ ಸಾಕಷ್ಟು ಸಂಚಲನ ಸೃಷ್ಟಿಸಿದ್ದು, ತಾಜ್ ಮಹಲ್ ಇತಿಹಾಸವೇ ಬದಲಾಗಲಿದೆಯೇ ಎಂಬ ಚರ್ಚೆ ಹುಟ್ಟುಹಾಕಿದೆ.

ದಕ್ಷಿಣ ದ್ವಾರ ಧ್ವಂಸ ಮಾಡಿದ್ದ ವಿಎಚ್‌ಪಿ

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಾರ್ಯಕರ್ತರು ತಾಜ್ ಮಹಲ್‌ನ ದಕ್ಷಿಣ ದ್ವಾರವನ್ನು ಧ್ವಂಸ ಮಾಡಲು ಯತ್ನಿಸಿದ ಘಟನೆ 2018ರಲ್ಲಿ ನಡೆಯಿತು. 400 ವರ್ಷ ಹಳೆಯ ಶಿವನ ದೇವಸ್ಥಾನಕ್ಕೆ ಹೋಗಲು ತಾಜ್ ಮಹಲ್‌ನ ದಕ್ಷಿಣ ದ್ವಾರ ಅಡ್ಡಿಯಾಗುತ್ತಿದೆ ಎಂಬುದು ಇದಕ್ಕೆ ನೀಡಲಾದ ಕಾರಣ. ಈ ಸಂದರ್ಭ ಸುಮಾರು 15 ವಿಎಚ್‌ಪಿ ಕಾರ್ಯಕರ್ತರ ಮೇಲೆ ಕೇಸು ಕೂಡ ದಾಖಲಾಗಿತ್ತು.

Image
Tajmahal
ಚಿತ್ರ ಕೃಪೆ: ಸ್ಪ್ಲ್ಯಾಶ್ ಜಾಲತಾಣ

"ತಾಜ್ ಮಹಲ್ ಶಿವನ ಮಂದಿರವಾಗಿದ್ದು, ಅದನ್ನು ಕೆಡವಿ ಹಾಕಬೇಕು," ಎಂದು, ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ್ದು ಇದೇ ಸಂದರ್ಭದಲ್ಲಿ. ಇದಕ್ಕೆ ಪ್ರತಿಕ್ರಿಯೆಯಾಗಿ, "ಯೋಗಿ ಬೆಂಬಲಕ್ಕೆ ನಾನು ನಿಲ್ಲುತ್ತೇನೆ. ಒಂದು ವೇಳೆ ತಾಜ್ ಮಹಲ್ ಶಿವನ ಮಂದಿರ ಆಗಿದ್ದರೆ, ಅದನ್ನು ಕೆಡವಲೇಬೇಕು," ಎಂದು ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ವ್ಯಂಗ್ಯವಾಡಿದ್ದರು.

ಅಲಹಾಬಾದ್ ಹೈಕೋರ್ಟ್ ಪಾಠ

ತಾಜ್ ಮಹಲ್‌ನ 22 ಕೋಣೆಗಳನ್ನು ಹಲವಾರು ವರ್ಷಗಳಿಂದ ಮುಚ್ಚಲಾಗಿದೆ. ಅದನ್ನು ತೆರೆಯುವುದಕ್ಕೆ ಯಾವುದೇ ಅವಕಾಶ ಇಲ್ಲ. ಈ ಬಗ್ಗೆಯೂ ಮಾತನಾಡಿದ್ದ ಸಂಸದೆ ದಿಯಾ ಕುಮಾರಿ, "ತಾಜ್ ಮಹಲ್‌ನ ಮುಚ್ಚಿದ ಕೋಣೆಗಳ ಬಾಗಿಲು ತೆರೆದರೆ ಬಹಳಷ್ಟು ರಹಸ್ಯಗಳು ಬಯಲಿಗೆ ಬರಲಿವೆ," ಎಂದಿದ್ದರು.

ದಿಯಾ ಕುಮಾರಿ ಅವರ ಹೇಳಿಕೆ ಚರ್ಚೆಯಲ್ಲಿ ಇರುವಾಗಲೇ, ಮುಚ್ಚಿರುವ 22 ಕೊಠಡಿಗಳ ಬಾಗಿಲು ತೆರೆಸುವಂತೆ ಕೋರಿ ಅಲಹಾಬಾದ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. "ಹಿಂದೂ ದೇವತೆಗಳ ವಿಗ್ರಹಗಳಿವೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೊಠಡಿಗಳ ಬಾಗಿಲು ತೆರೆಯಬೇಕು. ಈ ಬಗ್ಗೆ ತನಿಖೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡಬೇಕು," ಎಂದು ಕೋರಿ ರಜನೀಶ್ ಸಿಂಗ್ ಎಂಬುವವರು ಮನವಿ ಮಾಡಿದ್ದರು.

ಈ ಲೇಖನ ಓದಿದ್ದೀರಾ?: ನುಡಿಚಿತ್ರ | ಇವರು ಹಾಡನ್ನು ಮಾತ್ರವಲ್ಲ, ಬದುಕನ್ನೂ ಹಾಡುತ್ತಾರೆ

ಅರ್ಜಿಯ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್‌ನ ದ್ವಿಸದಸ್ಯ ಪೀಠ ಸ್ಪಷ್ಟವಾಗಿ ಹೇಳಿದ್ದಿಷ್ಟು: "ಇದೀಗ ತಾಜ್ ಮಹಲ್ ಬಗ್ಗೆ ಪ್ರಶ್ನೆ ಎತ್ತಿದ್ದೀರಿ. ಮುಂದೊಂದು ದಿನ ಹೈಕೋರ್ಟ್‌ ಚೇಂಬರ್ ಒಳಗೆ ಏನಿದೆ ಎಂದು ಕೇಳುತ್ತೀರಿ. ಯಾವುದೇ ಹಕ್ಕುಗಳ ಉಲ್ಲಂಘನೆ ಆಗದ ಹೊರತು ಕೋಣೆಗಳನ್ನು ತೆರೆಯಲು ಆದೇಶ ನೀಡಲು ಸಾಧ್ಯವಿಲ್ಲ."

"ನಾವು ಯಾವ ರೀತಿಯ ತೀರ್ಪು ನೀಡಬೇಕು ಎಂದು ನೀವು ಬಯಸುತ್ತೀರಿ? ತಾಜ್ ಮಹಲ್ ನಿರ್ಮಿಸಿದವರು ಯಾರು ಎಂಬ ಐತಿಹಾಸಿಕ ಸಂಗತಿಗಳಿಗೆ ಹೋಗಬೇಡಿ. ಹಕ್ಕುಗಳನ್ನು ಉಲ್ಲಂಘಿಸಿದಾಗ ಮಾತ್ರ ಪ್ರಶ್ನಿಸಬಹುದು. ನಿಮ್ಮ ಯಾವ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ?" ಎಂದು ಕೋರ್ಟ್ ಖಾರವಾಗಿ ಪ್ರಶ್ನೆ ಮಾಡಿ, ಅರ್ಜಿ ವಜಾ ಮಾಡಿತು.

ಅಲಹಾಬಾದ್ ಹೈಕೋರ್ಟ್ ಹೀಗೆ ಕಟುವಾದ ಪ್ರಶ್ನೆಗಳನ್ನು ಕೇಳಿ, ಖಾರವಾಗಿ ಪ್ರತಿಕ್ರಿಯಿಸಿದ ನಂತರ, ತಾಜ್ ಮಹಲ್ ಕುರಿತ ಚರ್ಚೆಗಳ ದಿಕ್ಕು ಕೊಂಚ ಬದಲಾದಂತಿದೆ. ಹಿಂದೂ ಪರ ಸಂಘಟನೆಗಳು ಈ ಮಹಲಿನ ಕುರಿತು ಮಾಡುತ್ತಿರುವ ನಿರಂತರ ಅಪಪ್ರಚಾರ ಜನಸಾಮಾನ್ಯರಿಗೂ ತಿಳಿಯುವಂತಾಗಿದ್ದು ಇದಕ್ಕೆ ಕಾರಣ.

ನಿಮಗೆ ಏನು ಅನ್ನಿಸ್ತು?
2 ವೋಟ್