ʼತೀಸ್ತಾ ಸೆಟಲ್ವಾಡ್‌ʼ ಗೌರವಿಸಿ ಪೋಷಿಸಬೇಕಾದ ಅಮೂಲ್ಯ ಜೀವ

teesta activist

ಮುಂಬೈ ಮೂಲದ ತೀಸ್ತಾ ಅವರ ಅಜ್ಜ ಎಂ.ಸಿ. ಸೆಟಲ್ವಾಡ್ ಭಾರತದ ಮೊದಲ ಅಟಾರ್ನಿ ಜನರಲ್ ಆಗಿದ್ದವರು; ತಂದೆ ಅತುಲ್ ಸೆಟಲ್ವಾಡ್ ಪ್ರಸಿದ್ಧ ವಕೀಲರು; ಹೀಗಾಗಿ ತೀಸ್ತಾ ಸಾಮಾಜಿಕ ವಿದ್ಯಮಾನಗಳನ್ನು ಸಂವಿಧಾನಿಕ ನ್ಯಾಯದ ಒರೆಗಲ್ಲಿಗೆ ತಿಕ್ಕಿ ನ್ಯಾಯಾನ್ಯಾಯಗಳನ್ನು ವಿವೇಚಿಸಬೇಕೆಂಬ ವೈಚಾರಿಕತೆಯ ಪ್ರಭಾವದಲ್ಲಿ ಬೆಳೆದವರು.

ʼಸರಿಯಾದದ್ದು ಮತ್ತು ನಿಜವಾದದ್ದು ಎರಡೂ ಬೇರೆಯದೇ ಖಾತೆಗಳು. ತೀಸ್ತಾರ ಪ್ರತಿಭಟನೆಯು, ಸರಿಯಾದದ್ದು, ನಿಜದಿಂದ ಜಾರಿಕೊಳ್ಳುವುದನ್ನು ಮರೆಮಾಚುವ ಮುಸುಕು ಎನ್ನುವುದನ್ನು ಎತ್ತಿ ತೋರುತ್ತದೆ. ತೀಸ್ತಾ, ಮೇಧಾರಂಥವರು ನಮ್ಮ ಸಮಾಜವನ್ನು ಚುರುಕಾಗಿ ಇಟ್ಟಿರುವವರು. ಅವರು ಸಂಗೀತವು‌ ಲಯ ತಪ್ಪದ ಹಾಗೆ ಇಡುವ ಶ್ರುತಿ ಪೆಟ್ಟಿಗೆಗಳು. ನ್ಯಾಯಾಲಯದ ಘನತೆಯನ್ನು ಒಪ್ಪಿಯೂ ಸಮಾಜವು ತೀಸ್ತಾರ ಪ್ರತಿಭಟನೆಗೆ ಅವಕಾಶ ನೀಡಬೇಕು. ಅಷ್ಟು ಮಾತ್ರವಲ್ಲದೆ ಅವರನ್ನು ಅಮೂಲ್ಯ ಜೀವವೆಂದು ಗೌರವಿಸಿ ಪೋಷಿಸಬೇಕುʼ

Eedina App

- ಸಮಾಜ ಶಾಸ್ತ್ರಜ್ಞ ಶಿವ್ ವಿಶ್ವನಾಥನ್ (2008ರಲ್ಲಿ, 'ಗುಜರಾತ್ ಹಿಂಸಾಕಾಂಡದ ವಿಚಾರಣೆಗಳನ್ನು ನ್ಯಾಯಾಲಯವು ವಿಳಂಬಿಸುತ್ತಿರುವುದು, ನ್ಯಾಯ ನಿರಾಕರಣೆಗೆ ಸಮಾ' ಎಂದು ತೀಸ್ತಾ ಹೇಳಿದ್ದಕ್ಕೆ, ಸರ್ವೋಚ್ಚ ನ್ಯಾಯಾಲಯವು ಅವರ ಮೇಲೆ ಕಾನೂನುಕ್ರಮ ಜರುಗಿಸುವುದಾಗಿ ಎಚ್ಚರಿಸಿದಾಗ ಬರೆದ 'ವ್ಯಾಲ್ಯು ಆಫ್ ರೇವ್ ಅಂಡ್ ರ್ಯಾಂಟ್' ಇಂಡಿಯನ್ ಎಕ್ಸ್‌ಪ್ರೆಸ್, ಮಾರ್ಚ್ 6, 2008 ಬರಹದಿಂದ).

‌ʼತಮ್ಮ ಹವಾನಿಯಂತ್ರಿತ ಕಚೇರಿಗಳಲ್ಲಿ ಕೂತು, ಭೀಕರ ಹಿಂಸೆಯ ಕಾಲದಲ್ಲಿ ರಾಜ್ಯ ಆಡಳಿತದ ಕೆಲವು ಹಂತದ ಜನರ ಕರ್ತವ್ಯ ಲೋಪಗಳನ್ನು ಪೊಣಿಸುವ ನ್ಯಾಯಾಗ್ರಹಿ ಪಾತ್ರಧಾರಿಗಳಿಗೆ (ತೀಸ್ತಾ, ಶ್ರೀಕುಮಾರ್, ಸಂಜೀವ್ ಭಟ್), ಕ್ಷಣಚೋದಿತ ಸಮೂಹ ಹಿಂಸೆಯನ್ನು ಹದ್ದುಬಸ್ತಲ್ಲಿಡಲು ಆಡಳಿತ ವ್ಯವಸ್ಥೆಯು ಎಷ್ಟು ಕಷ್ಟಪಡುತ್ತದೆ ಅರಿವಿದ್ದಂತಿಲ್ಲ ಅಥವ ಅದವರಿಗೆ ಗಮನ ಯೋಗ್ಯವಲ್ಲ. ತಾವು ಹೇಳುತ್ತಿರುವುದು ಸುಳ್ಳು ಎಂದು ತಿಳಿದಿದ್ದರೂ ಇವರು ವಿದ್ಯಮಾನಗಳನ್ನು ರಾಜಕೀಯಗೊಳಿಸಿ ಅತಿ ರೋಚಕವಾಗಿ ಬಿಂಬಿಸುವ ಕೆಲಸ ಮಾಡಿರುವುದಾಗಿ ಕಾಣುತ್ತದೆ. ವಾಸ್ತವಿಕವಾಗಿ ನ್ಯಾಯಿಕ ಕಾರ್ಯಕ್ರಮವನ್ನು ದುರುಪಯೋಗ ಪಡಿಸಿಕೊಂಡಿರುವ ಇವರನ್ನು ಕಟಕಟೆಗೆ ತಂದು, ಕಾನೂನು ರೀತ್ಯಾ ಕ್ರಮ ಜರುಗಿಸಬೇಕುʼ 

AV Eye Hospital ad

- 2002ರ ಗುಜರಾತ್ ಹತ್ಯಾಕಾಂಡದ ಭಾಗವಾಗಿ ನಡೆದಿದ್ದ, ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದ ಬಗ್ಗೆ 'ವಿಶೇಷ ತನಿಖಾ ತಂಡ' ದ ನಿರ್ಣಯವನ್ನು ಪ್ರಶ್ನಿಸಿ ಝಕಿಯಾ ಜಾಫ್ರಿಯವರು ಸರ್ವೋಚ್ಛ ನ್ಯಾಯಾಲಯಕ್ಕೆ ಕೊಟ್ಟ ಅಹವಾಲನ್ನು ತಳ್ಳಿ ಹಾಕಿ, ಸರ್ವೋಚ್ಛ ನ್ಯಾಯಾಲಯದ ಪೀಠವು ಜೂನ್ 24, 2022ರಂದು ನೀಡಿರುವ ತೀರ್ಪಿನ ಭಾಗ. 

ಗುಲ್ಬರ್ಗ್ ಸೊಸೈಟಿ ಹಿಂಸೆಯಲ್ಲಿ ಕಾಂಗ್ರೆಸ್ಸಿನ ಮಾಜಿ ಸಂಸದ ಎಹ್ಸಾನ್ ಜಾಫ್ರಿಯವರನ್ನೂ ಸೇರಿದಂತೆ 70 ಜನರನ್ನು ಹತ್ಯೆ ಮಾಡಲಾಗಿತ್ತು. ಈ ಹಿಂಸೆಯು ಅಂದಿನ ಮುಖ್ಯಮಂತ್ರಿಗಳೂ ಹಾಗು ಆಡಳಿತ ವ್ಯವಸ್ಥೆಯ 60 ಜನರೂ ರಚಿಸಿದ ಯೋಜನೆಯ ಭಾಗವಾಗಿದೆ,  ಎಂದು ಎಹ್ಸಾನ್ ಜಾಫ್ರಿಯವರ ಪತ್ನಿ ಝಕಿಯಾ ಜಾಫ್ರಿಯವರು ಸಲ್ಲಿಸಿದ್ದ ಅಹವಾಲನ್ನು ವಿಶೇಷ ತನಿಖಾ ತಂಡ ತಳ್ಳಿ ಹಾಕಿತ್ತು. ಅದರ ತೀರ್ಪನ್ನು ಪ್ರಶ್ನಿಸಿ, ತೀಸ್ತಾ ಸೆಟಲ್ವಾಡ್  ಕಾರ್ಯದರ್ಶಿಯಾಗಿರುವ 'ಸಿಟಿಜನ್ ಫಾರ್ ಜಸ್ಟಿಸ್ ಅಂಡ್ ಪೀಸ್' ಸರಕಾರೇತರ ಸಂಸ್ಥೆಯ ಬೆಂಬಲದೊಂದಿಗೆ, ಝಕಿಯಾ ಜಾಫ್ರಿ ಸರ್ವೋಚ್ಚ ನ್ಯಾಯಾಲಯಕ್ಕೆ ಅಹವಾಲು ಒಯ್ದಿದ್ದರು.

ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬಿದ್ದಾಕ್ಷಣವೇ, ಒಕ್ಕೂಟ ಸರ್ಕಾರದ ಗೃಹಮಂತ್ರಿ ಅಮಿತ್ ಶಾ, ತೀಸ್ತಾ ಅವರ ವಿರುದ್ಧ ಝಕಿಯಾ ಜಾಫ್ರಿಯವರನ್ನು ಮುಂದಿಟ್ಟುಕೊಂಡು, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನರೇಂದ್ರ ಮೋದಿ ಸೇರಿದಂತೆ 60 ನಿರಾಪರಾಧಿಗಳಿಗೆ ಶಿಕ್ಷೆಯಾಗುವಂತಹ ಕೋರ್ಟ್ ಖಟ್ಲೆ ಸಂಚು ರೂಪಿಸಿದ ಆರೋಪ ಮಾಡಿದರು. ಅದರ ಬೆನ್ನಿಗೇ ಗುಜರಾತ್ ಪೊಲೀಸರು ತೀಸ್ತಾ ಸೆಟಲ್ವಾಡ್, ಗುಜರಾತ್ ಮಾಜಿ ಪೊಲೀಸ್‌ ಅಧಿಕಾರಿ ಶ್ರೀಕುಮಾರ್ ಮೇಲೆ ದೂರು ದಾಖಲಿಸಿ ಬಂಧಿಸಿರುವರು. ಇನ್ನೊಂದು ಆರೋಪದ ಮೇಲೆ ಮತ್ತೊಬ್ಬ ನಿವೃತ್ತ ಅಧಿಕಾರಿ ಸಂಜೀವ್ ಭಟ್ ಈಗಾಗಲೇ ಸೆರೆಯಲ್ಲಿರುವರು. ಈ ಬಂಧನವು 'ಅನ್ಯಾಯಯುತ ಹಾಗು ಮಾನವ ಹಕ್ಕುಗಳನ್ನು ದಮನಿಸುವ ಸರ್ವಾಧಿಕಾರಿ ಕೃತ್ಯ' ವೆಂದು ಜಗತ್ತಿನಾದ್ಯಂತದ ಮಾನವ ಹಕ್ಕು ಸಂಘಟನೆಗಳು ಹಾಗು ಹೋರಾಟಗಾರರು ಖಂಡಿಸುತ್ತಿರುವರು.

teestha

ತೀಸ್ತಾ ಅವರದು ಸುಪ್ರೀಂ ನಿರೂಪಿಸಿದ ವ್ಯಕ್ತಿತ್ವವಲ್ಲ

ಶಿವ್ ವಿಶ್ವನಾಥನ್ ಹಾಗು ಮಾನವ ಹಕ್ಕು ಹೋರಾಟಗಾರರು ನಿರೂಪಿಸುವ ತೀಸ್ತಾರ ವ್ಯಕ್ತಿ ಚಿತ್ರಕ್ಕೂ ಸರ್ವೋಚ್ಚ ನ್ಯಾಯಾಲಯದ ತೀರ್ಪು ಕಟ್ಟಿರುವ 'ಹವಾನಿಯಂತ್ರಿತ ಕಚೇರಿಯ ಸುಖದಲ್ಲಿ ಸುಳ್ಳಿನ ಕಂತೆ ಹೊಸೆಯುವ ನ್ಯಾಯಾಗ್ರಹಿ' ಎಂಬ ವ್ಯಕ್ತಿಚಿತ್ರಕ್ಕೂ ಇರುವ ಅಜಗಜಾಂತರವಿರುವುದು ವಿವೇಕಿಗಳಿಗೆ ಕಾಣದೇ ಇರದು. ಆದರೆ ಶಿವ್ ಅವರ ಮಾತಾಗಲೀ, ಮಾನವ ಹಕ್ಕು ಹೋರಾಟಗಾರ ವಿಚಾರವಾಗಲೀ ದೇಶದ ಪ್ರಜೆಗಳ ಸಾಮಾನ್ಯ ಅರಿವಿನ ಭಾಗವಲ್ಲ; ಇಂದಿಗೂ ಪ್ರಪಂಚದಾದ್ಯಂತ ಮಾನವ ಹಕ್ಕುಗಳ ವಿಚಾರವು ಜನಮಾನಸದ ಸಹಜ ವಿವೇಕವಾಗಿ ಬೇರೂರಿಲ್ಲ. ಮೋದಿ-ಷಾರ ಮಾತುಗಳೂ, ಸರ್ವೋಚ್ಚ ನ್ಯಾಯಾಲಯದ ತೀರ್ಪೂ, ಪ್ರಭಾವಿ ಮಾಧ್ಯಮಗಳ ಅರ್ಥ ನಿರೂಪಣೆಯ ಮೂಲಕ ಜನಮಾನಸದಲ್ಲಿ ಸಹಜ ಜ್ಞಾನವಾಗಿ ಬಿತ್ತಿಕೊಳ್ಳುತ್ತವೆ.

ಜನ ' ಬಿಡ್ರೀ! ಈ ಕಾಲದಲ್ಲಿ ಯಾರನ್ನೂ ನಂಬಗಿಲ್ಲ' ಎಂಬ ಮನೋಭಾವ ತಾಳಿದರೆ ಅಚ್ಚರಿ ಏನು ಇಲ್ಲ. ಹೀಗಾಗಿ ತೀಸ್ತಾ ಯಾರು? UAPAಯಡಿ ಬಂಧಿತರಾಗಿರುವ 16 ಜನ ಯಾರು? ಎಂಬ ಸರಳವಾದ ವರದಿಗಳನ್ನು ಪದೇ ಪದೇ ಸಾರ್ವಜನಿಕವಾಗಿ ಕೂಗಿ ಹೇಳಬೇಕಾಗುತ್ತದೆ- ತಮ್ಮ ನಿತ್ಯದ ಬವಣೆಗಳನ್ನು ಎದೆ ಬಡಿದು ನಾಟಕೀಯವಾಗಿ ನಿರೂಪಿಸುವ ನಿರ್ಗತಿಕ ಜನರ ದನಿಯಲ್ಲೂ ಹೇಳಬೇಕಾಗುತ್ತದೆ!

'ಕಮ್ಯುನಲಿಸಂ ಕಂಬ್ಯಾಟ್'

60ರ ಪ್ರಾಯದ ತೀಸ್ತಾ, ಮುಂಬೈನ ಗುಜರಾತಿ ಕುಟುಂಬದಿಂದ ಬಂದವರು. ಅವರ ಅಜ್ಜ ಎಂ.ಸಿ.ಸೆಟಲ್ವಾಡ್ ಭಾರತದ ಮೊದಲ ಅಟೋರ್ನಿ ಜನರಲ್ ಆಗಿದ್ದವರು; ತಂದೆ ಅತುಲ್ ಸೆಟಲ್ವಾಡ್ ಪ್ರಸಿದ್ದ ವಕೀಲರು; ಹೀಗಾಗಿ ತೀಸ್ತಾ ಸಾಮಾಜಿಕ ವಿದ್ಯಮಾನಗಳನ್ನು ಸಂವಿಧಾನಿಕ ನ್ಯಾಯದ ಒರೆಗಲ್ಲಿಗೆ ತಿಕ್ಕಿ ನ್ಯಾಯಾನ್ಯಾಯಗಳನ್ನು ವಿವೇಚಿಸಬೇಕೆಂಬ ವೈಚಾರಿಕತೆಯ ಪ್ರಭಾವದಲ್ಲಿ ಬೆಳೆದವರು. ಅಮೆರಿಕಾದ ಅಧ್ಯಕ್ಷ ಕಚೇರಿಯ ಸಂಚನ್ನು ಬಯಲುಗೊಳಿಸಿದ 'ವಾಟರ್ ಗೇಟ್ ಹಗರಣದ' ತನಿಖಾ ವರದಿಯಿಂದ ಪ್ರಭಾವಿತರಾಗಿ ಪತ್ರಕರ್ತ ವೃತ್ತಿ ಆಯ್ಕೆ ಮಾಡಿಕೊಂಡರು. 1984ರಲ್ಲಿ ಮುಂಬೈ ಸಮೀಪದ ಭಿವಂಡಿಯಲ್ಲಿ ನಡೆದ ಭೀಕರ ಕೋಮುಹಿಂಸೆಯು ಅವರಿಗೆ ಪತ್ರಕರ್ತರು ತಮ್ಮ ವರದಿಗಳಲ್ಲಿ ನಿಭಾಯಿಸಬೇಕಾದ ಜವಾಬ್ದಾರಿಗಳ ಕುರಿತು ಹೊಸ ಪಾಠಗಳನ್ನು ಕಲಿಸಿತು.

ಬಾಬ್ರಿ ಮಸೀದಿ ಧ್ವಂಸದ ನಂತರ, 1992ರ ಡಿಸೆಂಬರ್-93ರ ಜನವರಿ ತಿಂಗಳಲ್ಲಿ ಮುಂಬೈನಲ್ಲಿ ನಡೆದ ಕೋಮು ಹಿಂಸಾಚಾರ ಕಂಡ ನಂತರ, ವೃತ್ತಿ ಪತ್ರಕರ್ತರಾಗಿ ತಮಗೇ ಇರುವ ಮಿತಿ ಅರಿವಾಯಿತು. ವೃತ್ತಿ ತೊರೆದು ಸ್ವತಂತ್ರವಾಗಿ 'ಸಬ್ರಂಗ್ ಸಂವಹನ ಸಂಸ್ಥೆ' ಕಟ್ಟಿ, ಕೋಮು ಹಿಂಸೆಗಳ ಆಳ ಅಗಲಗಳನ್ನು ತನಿಖೆ ಮಾಡಿ ವಾಸ್ತವಿಕ ಮಾಹಿತಿ ಪ್ರಸಾರಿಸುವ 'ಕಮ್ಯುನಲಿಸಂ ಕಂಬ್ಯಾಟ್' ಎಂಬ ಮಾಸಿಕ ಪತ್ರಿಕೆ ಪ್ರಾರಂಭಿಸಿದರು. 1992-93ರ ಮುಂಬೈ ಕೋಮು ಹಿಂಸಾಚಾರದ ವಿಚಾರಣೆಗೆ ನಿಯುಕ್ತವಾದ ಬಿ ಎನ್ ಶ್ರೀಕೃಷ್ಣ ಆಯೋಗದ ವರದಿಯ ಸತ್ಯನಿಷ್ಠತೆ, ಸಂವಿಧಾನ ಬದ್ಧತೆಗಳ ಮಹತ್ವ ಅರಿತು, ಇಡೀ ವರದಿಯನ್ನು ಪುಸ್ತಕವಾಗಿ ಸಬ್ರಂಗ್ ಸಂಸ್ಥೆಯ ಮೂಲಕ ಪ್ರಕಟಿಸಿದರು. ಅದೇ ಹೊತ್ತಿಗೆಯಲ್ಲಿ, ಸ್ವಾತಂತ್ರೋತ್ತರ ಭಾರತದಲ್ಲಿ ನಡೆದ ಇತರ ನಾಲ್ಕು ಕೋಮು ಹಿಂಸೆಗಳ ವಿಚಾರಣೆ ನಡೆಸಿದ ಆಯೋಗಗಳ ವರದಿಯ ಸಂಕ್ಷಿಪ್ತ ಟಿಪ್ಪಣಿಗಳನ್ನು ಸೇರಿಸಿ, ಕೋಮು ಹಿಂಸೆಯ ನೈಜ ಸ್ವರೂಪವನ್ನು ಅರಿಯಲು ಅವಶ್ಯಕವಾದ ಜ್ಞಾನಕೋಶ ಸಂಪಾದಿಸುವ ಮಹತ್ಕಾರ್ಯವನ್ನು ತೀಸ್ತಾ ನಿಭಾಯಿಸಿದರು. ಅದು ಇಂದಿಗೂ, ಕೋಮು ಹಿಂಸೆಯ ಕುರಿತ ಸತ್ಯಶೋಧನಾ ಅಧ್ಯಯನ, ವರದಿಗಳ ನಿರೂಪಣೆಗಳಿಗೆ ಮಾರ್ಗಸೂಚಿ‌ ಕೈಪಿಡಿಯಾಗಿದೆ.

ಗುಜರಾತ್ ಪ್ರಭುತ್ವಕ್ಕೆ ಮಗ್ಗಲ ಮುಳ್ಳಾದವರು

2002ರ ಫೆಬ್ರುವರಿ-ಮಾರ್ಚ್ ತಿಂಗಳುಗಳಲ್ಲಿ ನಡೆದ ಗುಜರಾತ್ ನರಮೇಧವು, ತೀಸ್ತಾರನ್ನು ಸಂವಿಧಾನಿಕ ಬೌದ್ಧಿಕ ಜವಾಬ್ದಾರಿ ಹೊತ್ತ ಪತ್ರಕರ್ತೆಯಿಂದ, ಸಾಮಾಜಿಕ ಹಿಂಸೆಯ ತಡೆಯೊಡ್ಡುವ ಉತ್ತರದಾಯಿತ್ವ ಉಳ್ಳ ನಾಗರಿಕ ಹಕ್ಕು ಹೋರಾಟಗಾರರನ್ನಾಗಿಸಿತು. ಮುಂಬೈ ಹಿಂಸೆಯ ಕುರಿತು ಅತ್ಯಂತ ಸತ್ಯಪಕ್ಷಪಾತಿ ವರದಿಯ ಸಲಹೆಗಳನ್ನು ಜಾರಿಗೊಳಿಸಲು ಮಹಾರಾಷ್ಟ್ರದ ಸರ್ಕಾರವು ಹಿಂದೇಟು ಹಾಕಿದ್ದು, ಹಿಂಸೆಯ ಸಂತ್ರಸ್ತರಿಗೆ ಆದ ಘೋರ ಅನ್ಯಾಯವೆಂದು ಮನಗಂಡ ತೀಸ್ತಾ, ಗುಜರಾತ್ ಹತ್ಯಾಕಾಂಡದ ಸಂತ್ರಸ್ತರಿಗೆ ನ್ಯಾಯಿಕ ಹೋರಾಟದ ನೆರವು ಒದಗಿಸಲು 'ನ್ಯಾಯ ಮತ್ತು ಶಾಂತಿಗಾಗಿ ನಾಗರಿಕರು' (CJP) ಎಂಬ ಸರಕಾರೇತರ ಸಂಸ್ಥೆ ಕಟ್ಟಿದರು; ಅದಕ್ಕೆ ಮುಂಬೈನ ನ್ಯಾಯಪರ ಪ್ರಮುಖರ ಬೆಂಬಲವನ್ನೂ ದೊರಕಿಸಿಕೊಂಡು ತ್ವರಿತವಾಗಿ ನ್ಯಾಯಿಕ ನೆರವಿನ ಕಾರ್ಯ ಶುರು ಮಾಡಿದರು.

ಪ್ರಕರಣಗಳ ಖಚಿತ ದಾಖಲೆ ಪುರಾವೆಗಳನ್ನು ಕಲೆಹಾಕಿ, ಕ್ರಿಯಾಶೀಲ ವಕೀಲರ ಬೆಂಬಲದಲ್ಲಿ CJPಯು ನ್ಯಾಯಾಲಯಗಳಲ್ಲಿ ಸಂತ್ರಸ್ತರ ಪರ ವಾದ ಮಂಡಿಸತೊಡಗಿದ್ದೇ, ಗುಜರಾತ್ ಪ್ರಭುತ್ವಕ್ಕೆ ಅವರು ಮಗ್ಗಲ ಮುಳ್ಳಾದರು. ಹತ್ಯಾಕಾಂಡವನ್ನು ಹಲವು ದನಿಗಳಲ್ಲಿ ಸಮರ್ಥಿಸಿಕೊಳ್ಳುತ್ತಾ 'ಹಿಂದು ಹೃದಯ ಸಾಮ್ರಾಟ'ನಾದವನ ಒಡ್ಡೋಲಗದ ಸೇಡಿನ ಕಿಡಿಗೆ ತೀಸ್ತಾ ಹಿಮ್ಮೆಟ್ಟಲಿಲ್ಲ. 'ಬೆಸ್ಟ್ ಬೇಕರಿ ಪ್ರಕರಣ', 'ನರೋದ ಪಟಿಯಾ ಪ್ರಕರಣ' ಗಳಲ್ಲಿ ಪ್ರಭಾವಿ ಮಂತ್ರಿ ಮಾಯಾ ಕೊಡಾನಿನಿಯೂ ಸೇರಿದಂತೆ ಹಲವು ಆರೋಪಿಗಳಿಗೆ ಕಾನೂನು ರೀತ್ಯಾ ಶಿಕ್ಷೆಯಾಗುವಂತೆ ಮಾಡಿದ ಕೆಲಸವು ಸುರಳೀತವಾಗಿರಲಿಲ್ಲ. ತೀಸ್ತಾ ತನ್ನ ಸುರಕ್ಷತೆಯನ್ನು ಪಣಕ್ಕಿಟ್ಟು ಯಾವ ಸಂತ್ರಸ್ತರಿಗೆ ನ್ಯಾಯ ದಕ್ಕಿಸಲು ಸೆಣಸುತ್ತಿದ್ದರೋ, ಅಂಥಾ ಕೆಲವು ಸಂತ್ರಸ್ತರಲ್ಲಿ ಕೆಲವರಿಗೆ ಬೆದರಿಕೆ ಆಮಿಷಗಳನ್ನೊಡ್ಡಿ, ತೀಸ್ತಾರ ವಿರುದ್ಧವೇ ತಿರುಗಿ ಬೀಳುವಂತೆ ಮಾಡುವ ಪ್ರಯತ್ನಗಳು ನಡೆದವು.

ಕಾಂಗ್ರೆಸ್ಸಿನ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಪತ್ನಿ ಝಾಕಿಯಾ ಜಾಫ್ರಿ ಜೊತೆ ತೀಸ್ತಾ
ಕಾಂಗ್ರೆಸ್ಸಿನ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಪತ್ನಿ ಝಾಕಿಯಾ ಜಾಫ್ರಿ ಜೊತೆ ತೀಸ್ತಾ

ತೀಸ್ತಾ ಹಾಗು ಅವರ CJPಯ ಸಂಗಾತಿಗಳು ಅನುಕರಣೀಯ ಸಹನೆ, ಸಂಕಲ್ಪಗಳಿಂದ ಆರೋಪಗಳನ್ನು ಅರಗಿಸಿಕೊಂಡು, ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಿದರು. ತೀಸ್ತಾ ಹಾಗು CJPಯ ವಿರುದ್ಧದ ಸುಳ್ಳು ಆರೋಪಗಳನ್ನು ನ್ಯಾಯಾಲಗಳೇ ತಳ್ಳಿ ಹಾಕಿದವು. ನಂತರ ಗುಲ್ಬರ್ಗ್ ಸೊಸೈಟಿಯ ಸಂತ್ರಸ್ತರಿಂದ ಹಣ ಲಪಟಾಯಿಸುವಿಕೆಯ ಆರೋಪ ಹೊರಿಸಿ, ತೀಸ್ತಾರನ್ನು ಬಂಧಿಸುವ ಪ್ರಕರಣವೂ ನಡೆಯಿತು; ಅಲ್ಲಿಯೂ ಹಗರಣಕೋರರು ನ್ಯಾಯಾಲಯಗಳ ವಿಚಾರಣೆಯಲ್ಲಿ ಸೋತರು. ಇಷ್ಟೆಲ್ಲದರ ನಂತರ, ಕೇಂದ್ರದಲ್ಲಿ ಅಧಿಕಾರ ಗದ್ದುಗೆಗೇರಿದ್ದ ನರೇಂದ್ರ ಮೋದಿ ಸರ್ಕಾರವು, ತನ್ನ ಸುಪರ್ದಿನ ಸಂಸ್ಥೆಗಳನ್ನು ಛೂ ಬಿಟ್ಟು, ವಿದೇಶಿ ದೇಣಿಗೆ ದುರ್ವ್ಯವಹಾರದ ಆರೋಪ ಹೋರಿಸಿ, ಸೆರೆಗೆ ತಳ್ಳುವ ಕಾರ್ಯಚರಣೆ ನಡೆಸಿತು; ಅವರ ಬ್ಯಾಂಕ್ ಖಾತೆಗಳನ್ನು ಜಪ್ತು ಮಾಡಿ, ಹಣಕಾಸು ವಹಿವಾಟನ್ನು ಕೈದುಗೊಳಿಸಿತು; ವಿದೇಶ ಪ್ರಯಾಣದ ನಿರ್ಬಂಧ ಹೇರಿತು; ತೀಸ್ತಾ ಅವರು ಬೇಲ್ ಪಡೆಯಲು ಸರ್ವೋಚ್ಚ ನ್ಯಾಯಾಲಯಕ್ಕೆ ಅಂಡಲೆಯುವಂತೆ ಮಾಡಲಾಯಿತು; ಆರೋಪಗಳ ನ್ಯಾಯಿಕ ವಿಚಾರಣೆ ಇನ್ನೂ ಜೀವಂತವಾಗಿವೆ; ಆದರೆ ತೀಸ್ತಾರನ್ನು ಸೆರೆಗೆ ತಳ್ಳಿ ಅವರ 'ನ್ಯಾಯಾಗ್ರಹ ಚೇತನ'ವನ್ನು ನಿರ್ನಾಮಗೊಳಿಸುವುದು ಕೇಂದ್ರದ ಮೋದಿ ಪ್ರಭುತ್ವದ ಉದ್ದೇಶವಾಗಿರುವುದು, ಕಳೆದ 8 ವರ್ಷಗಳ ಅದರ ಸತತ ಕಾರ್ಯಚರಣೆಗಳಿಂದ ವಿಧಿತವಾಗುತ್ತದೆ.

ನ್ಯಾಯಾಧೀಶರು ಸಾಂಪ್ರದಾಯಿಕ ಯಜಮಾನಿಕೆಗಳ ಸಮರ್ಥಕರು

ಭಾರತದ ನ್ಯಾಯಾಲಯಗಳ ನ್ಯಾಯಾಧೀಶರುಗಳು ಸಾಂಪ್ರದಾಯಿಕ ಯಜಮಾನಿಕೆಗಳ ಸಮರ್ಥಕರಾಗಿದ್ದುಕೊಂಡು, ಸಂವಿಧಾನಿಕ ನ್ಯಾಯ ಚೇತನವನ್ನು ಕಡೆಗಣಿಸಿ ನೀಡಿರುವ ತೀರ್ಪುಗಳು ಹಲವು ಇವೆ; ಸಾಕ್ಷಿ ಪುರಾವೆಗಳ ಗೈರಿನ ನೆಪವೊಡ್ಡಿ, ಅಲ್ಪಸಂಖ್ಯಾತರು ಹಾಗು ದಲಿತರ ಮೇಲೆ ಹಿಂಸಾಚಾರ ನಡೆಸಿದ ಆರೋಪಿಗಳು ಖುಲಾಸೆಗೊಂಡು, ಸಂತ್ರಸ್ತರೆದುರು ವಿಜಯಯಾತ್ರೆ ನಡೆಸಿ ಗಹಗಹಿಸುವ ದೃಶ್ಯ ಬಹಳ ಸಾಮಾನ್ಯವಾಗಿ ಹೋಗಿದೆ. ಇಂಥ ಸನ್ನಿವೇಶದಲ್ಲೂ ದಣಿವರಿಯದೆ ತೀಸ್ತಾ ಸಂತ್ರಸ್ತರ ಪರ ಕಾನೂನು ಸಮರವನ್ನು ಮುಂದುವರೆಸುವ ಧೀಮಂತಿಕೆ ಹೊಂದಿದ್ದರೆ, ಅದಕ್ಕೆ ಕಾರಣ 'ಹವಾನಿಯಂತ್ರಿತ ಕಚೇರಿಯ ಐಷಾರಾಮಿ' ಬದುಕಿನ ಆಸೆಯೋ? ಅಥವ ಎಂಥಾ ಕಷ್ಟಗಳನ್ನೂ ಸಹಿಸಿ 'ಸಂವಿಧಾನದ  ಕಾಲಾಳು'ವಾಗಿ, ಸಂವಿಧಾನಿಕ ನ್ಯಾಯ ಚೇತನವನ್ನು ಉಳಿಸಿ ಬೆಳೆಸುವ ಹೋರಾಟದ ಛಲವೋ?

ಕೇಡಿನ ಪಿತ್ತ ನೆತ್ತಿಗೇರಿರುವ ಸೂಚನೆ

ಮಾನವ ಹಕ್ಕುಗಳ ಮೌಲ್ಯವನ್ನು ಬಲ್ಲ ಬೆರಳಿಕೆಯಷ್ಟು ಸಮಾಜಶಾಸ್ತ್ರ ವಿದ್ವಾಂಸರು ಹಾಗು ಸ್ವಾತಂತ್ರ್ಯ-ಸಮಾನತೆಯ ಧ್ಯೇಯವುಳ್ಳ ವಿರಳ ಸಂಘಟನೆಗಳಿಗೆ ಬದ್ಧರಾದ ಹೋರಾಟಗಾರರಿಗೆ ತೀಸ್ತಾ 'ಗೌರವಿಸಿ ಪೋಷಿಸಬೇಕಾದ ಅಮೂಲ್ಯ ಜೀವ'ವಾಗಿ ಕಾಣುವುದು ಅಚ್ಚರಿಯಲ್ಲ. ಆದರೆ, ದಿನನಿತ್ಯದ ಬದುಕಿನ ಭದ್ರತೆಗಾಗಿ, ಅಧಿಕಾರಸ್ಥರ ಭ್ರಷ್ಟ ಅಧಿಕಾರದೆದುರು ನಡು ಬಗ್ಗಿಸುವ ಬಹುಸಂಖ್ಯಾತ ಸಮಾಜ ಜೀವಿಗಳಿಗೆ, ತೀಸ್ತಾರಂಥ ಅಧಿಕಾರಹೀನ ಸಾಮಾನ್ಯ ಜೀವಿಯು ಹಲ್ಲು ಕಚ್ಚಿ ಸೆಣೆಸುತ್ತಿರುವುದು, ನೀವು ನಡು ನೆಟ್ಟಗೆ ಮಾಡಿಕೊಂಡು, ಅಧಿಕಾರಸ್ಥರ ಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸುವ ಛಲವಂತಿಕೆಯನ್ನು ನಿಮ್ಮಲ್ಲಿ ರೂಢಿಸಲಿಕ್ಕಾಗಿ ಮಾತ್ರವೇ ಎಂದು ಅರಿಸುವ ಸವಾಲು ದೊಡ್ಡದ್ದು.‌

ಇದನ್ನು ಓದಿದ್ದೀರಾ? ಮಾನವ ಹಕ್ಕು ಹೋರಾಟದಲ್ಲಿ ತೀಸ್ತಾ ಸೆಟಲ್ವಾಡ್‌ ಎಂಬ ಜಾಗೃತ ನದಿ

ಹಣ ಅಧಿಕಾರದ ಮದದಲ್ಲಿ ಮಿಂದೇಳುತ್ತಿರುವ ಅಧಿಕಾರ ವರ್ಗವೂ ಮತ್ತವರ ಬೇಟೆ ನಾಯಿಗಳಾದ ಭ್ರಷ್ಟ ಮಾಧ್ಯಮಗಳೂ, ತೀಸ್ತಾರಂಥ ಹೋರಾಟದ ಚೇತನಗಳನ್ನು 'ತುಕ್ಡೆ ಗ್ಯಾಂಗ್', 'ಅಂದೋಲನ್ ಜೀವಿ', 'ದೇಶದ್ರೋಹಿ' ಎಂದು ಹೀಯಾಳಿಸುವುದು ವಿಶೇಷವಲ್ಲ; ಆದರೆ ಸಂವಿಧಾನಿಕ ನ್ಯಾಯಪ್ರಜ್ಞೆ ಕಾಪಾಡುವ ಉತ್ತರದಾಯಿತ್ವವಿರುವ ನ್ಯಾಯಾಂಗ ವ್ಯವಸ್ಥೆಯೇ 'ಸುಳ್ಳಿನ ಕಂತೆ ನೇಯುವ ನ್ಯಾಯಾಗ್ರಹಿಗಳು' ಎಂಬ ಮೂದಲಿಕೆಯ ಮಾತನ್ನು ಆಡುವುದು ಕೇಡಿನ ಪಿತ್ತ ನೆತ್ತಿಗೇರಿರುವ ಸೂಚನೆ. ಜನರ ಪ್ರಜ್ಞೆ ಜಡವಾದುದು ಎಂಬುದು ಸೊಕ್ಕಿನ ಮಾತು. ಆದರೆ ಜನ, ತೀಸ್ತಾರ ಬದುಕಿನ ಮೌಲ್ಯ ಅರಿಯಲು ಇನ್ನಷ್ಟೂ ಅಗ್ನಿಪಥಗಳಿಗೆ ಕಾಯಬೇಕಾ!?

ನಿಮಗೆ ಏನು ಅನ್ನಿಸ್ತು?
0 ವೋಟ್
eedina app