ತೇಜಸ್ವಿ ನೆನಪು | ಅವರಂತೆ ಸ್ವ ವಿಮರ್ಶೆ ಮಾಡಿಕೊಳ್ಳುವ ಲೇಖಕರು ಈಗ ಯಾರಿದ್ದಾರೆ?

Tejaswi schetch

'ಬರೆದು ಗೆಲ್ಲಬೇಕೇ ವಿನಃ ಪ್ರಶಸ್ತಿಯ ಬೆನ್ನು ಹತ್ತಬಾರದು. ದಿಢೀರ್ ಜನಪ್ರಿಯತೆ ನನಗೆಂದೂ ದೊರೆತೇ ಇಲ್ಲ. ನಾನು‌ ನಿರೀಕ್ಷಿಸುವುದೂ ಇಲ್ಲ. ಓದುಗರು ನನ್ನಂತೆಯೇ ಅನ್ನ ತಿನ್ನುವ ಮನುಷ್ಯರು. ನನಗೆ ಅನ್ನಿಸಿದ್ದು ಇವತ್ತಲ್ಲದಿದ್ದರೆ, ನಾಳೆ ನಿಧಾನವಾಗಿಯಾದರೂ ಅವರಿಗೂ ಅನ್ನಿಸುತ್ತದೆ ಎನ್ನುವ ನಂಬಿಕೆಯಿಂದಲೇ ನಾನು ಬರೆಯುವುದು' ಎಂದಿದ್ದರು ತೇಜಸ್ವಿ

ಪೂರ್ಣಚಂದ್ರ ತೇಜಸ್ವಿ ಅವರನ್ನು ನಾನು ನೋಡಿದ್ದು ಅವರ ಬರಹಗಳ ಮೂಲಕ. ಜಿಮ್ ಕಾರ್ಬೆಟ್‌ನ ನರಭಕ್ಷಕ ಹುಲಿ ಬೇಟೆಯಾಡಿದ ಕತೆ ಧಾರಾವಾಹಿಯಾಗಿ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. ನಾನು ಮೊದಲಿಗೆ ಓದಿದ ತೇಜಸ್ವಿ ಅವರ ಬರಹವೂ ಸಹ ಅದೆ. ನಂತರ ಕರ್ವಾಲೋ ಓದಿದೆ. ಚಿದಂಬರ ರಹಸ್ಯ ಮತ್ತೊಂದು ಓದು‌‌. ನಂತರ ಅಬಚೂರಿನ ಪೋಸ್ಟ್ ಆಫೀಸು. ಲಂಕೇಶ್ ಪತ್ರಿಕೆಯಲ್ಲಿ ಹಕ್ಕಿಗಳ ಚಿತ್ರಗಳು ಹಾಗೂ ಅವುಗಳ ಬಗ್ಗೆ ಪುಟ್ಟ ವಿವರಣೆ ಬರುತ್ತಿತ್ತು. ಅದನ್ನು ಸಹ ತಪ್ಪದೇ ಓದಿದೆ.

Eedina App

ಕನ್ನಡದ ಲೇಖಕನೊಬ್ಬ ಫೋಟೋಗ್ರಫಿ, ಕೃಷಿ ಹಾಗೂ ಅಕ್ಷರ ಕೃಷಿ ಮಾಡಿ, ಹೆಸರುಗಳಿಸಿ, ಸ್ವಾಭಿಮಾನಿಯಾಗಿ ಬದುಕಿ ಹಠಾತ್ ಕಣ್ಮರೆಯಾದ ಲೇಖಕ ಎಂದರೆ ಅದು ತೇಜಸ್ವಿ‌. ಅಣ್ಣ (ಕುವೆಂಪು) ಅವರ ಕೀರ್ತಿ, ವರ್ಚಸ್ಸು ಬಳಸದೇ ತಮ್ಮ ಪಾಡಿಗೆ ತಾವಿದ್ದು, ಕನ್ನಡದ ಮನಸ್ಸುಗಳನ್ನು ತಟ್ಟಿದವರು ತೇಜಸ್ವಿ‌. ನಮ್ಮಲ್ಲಿ ನಡುಪಂಥೀಯ ಲೇಖಕರು ಬೇಕಾದಷ್ಟು ಜನ ಸಿಗ್ತಾರೆ. ಅವರೆಲ್ಲಾ ತೇಜಸ್ವಿ ಅವರನ್ನು, ಅವರ ಬರಹಗಳನ್ನು ಇಷ್ಟ ಪಡೋರೆ. ಅವರ ಜನ್ಮದಿನದ ಸಂದರ್ಭದಲ್ಲಿ ಇದು ಸ್ವಲ್ಪ ಹೆಚ್ಚೇ ಇರ್ತದೆ. ಆದರೆ ಇವತ್ತಿನ ಕರ್ನಾಟಕದ ರಾಜಕೀಯ ಸ್ಥಿತಿ ಹಾಗೂ ಸಾಹಿತ್ಯ ರಾಜಕಾರಣದ ಸನ್ನಿವೇಶದಲ್ಲಿ ತೇಜಸ್ವಿಯನ್ನು ನಮ್ಮ ಕಣ್ಮುಂದೆ ಇಟ್ಟುಕೊಂಡು ಸ್ವವಿಮರ್ಶೆ ಮಾಡಿಕೊಳ್ಳುವ ಹಾಗೂ ಕರ್ನಾಟಕದ ಇವತ್ತಿನ ಆಗು ಹೋಗುಗಳಿಗೆ ಬಾಯ್ಬಿಡುವ ತಾಕತ್ತು ಎಷ್ಟು ಜನ ಸಾಹಿತಿಗಳಿಗಿದೆ? ಈ ವಾಸ್ತವದಲ್ಲಿ ನಾವು ತೇಜಸ್ವಿ ಅಭಿಮಾನಿಗಳನ್ನು ಸಹ ನೋಡಬೇಕು.

ತೇಜಸ್ವಿ ಅವರ ಹೇಳಿಕೆಗಳನ್ನು ನಾವು ನಮ್ಮ  ಸ್ಟೇಟಸ್‌ನಲ್ಲಿ ಹಾಕಿಕೊಂಡರಷ್ಟೇ ಸಾಲದು. ಕೊಂಚವಾದರೂ, ನಾವು ಓದಿದ ಕರ್ನಾಟಕದ ಸಾಕ್ಷಿ ಪ್ರಜ್ಞೆಯಂತಿದ್ದ ಲೇಖಕರನ್ನು ಉಸಿರಾಡಿದರೆ ಬದುಕಿಗೆ ಒಂದಿಷ್ಟು ಅರ್ಥ ಬಂದೀತು.

AV Eye Hospital ad

ಇವತ್ತು ತೇಜಸ್ವಿ ಅವರ ಜನ್ಮದಿನದ ಕಾರಣ ಅವರು ಅಲ್ಲಿಲ್ಲಿ ಮಾತಾಡಿದ, ಅಪರೂಪಕ್ಕೆ ಕೊಟ್ಟ ಸಂದರ್ಶನಗಳಲ್ಲಿ ಸಿಕ್ಕ ಹೇಳಿಕೆಗಳನ್ನು ಗಮನಿಸುತ್ತಿದ್ದಾಗ, ಒಬ್ಬ ಲೇಖಕ ಈ ಸಮಾಜವನ್ನು ಸೂಕ್ಷ್ಮ ಸಂವೇದಿಯಾಗಿ ಗ್ರಹಿಸಿದ್ದರು ಹಾಗೂ ಎಷ್ಟು ನಿಷ್ಟುರತೆ ಇಟ್ಟುಕೊಂಡಿದ್ದರಲ್ಲ ಅನಿಸಿತು.

ಮೂಡಿಗೆರೆಯ ನಿರುತ್ತರ ಮನೆ
ಮೂಡಿಗೆರೆಯಲ್ಲಿ ತೇಜಸ್ವಿ ದಂಪತಿ ವಾಸವಿದ್ದ ಮನೆ ʼನಿರುತ್ತರʼ

ತೇಜಸ್ವಿ ಒಂದು ಕಡೆ ಹೇಳ್ತಾರೆ, ʼನಮ್ಮ ಅಂತಿಮ ಸವಾಲು ಇರೋದು ಪ್ರಶಸ್ತಿ ಗೆಲ್ಲೊದರಲ್ಲಿ ಅಲ್ಲ, ಓದುಗರನ್ನು ತಲುಪುವುದರಲ್ಲಿ. ಭಾಷೆ, ಸಾಹಿತ್ಯ ಎರಡೂ ಕಮ್ಯುನಿಕೇಷನ್‌ಗೆ ಇರೋದು. ಬರೆದು ಗೆಲ್ಲಬೇಕೇ ವಿನಃ ಪ್ರಶಸ್ತಿಯ ಬೆನ್ನು ಹತ್ತಬಾರದು. ದಿಢೀರ್ ಜನಪ್ರಿಯತೆ ನನಗೆಂದೂ ದೊರೆತೇ ಇಲ್ಲ. ನಾನು‌ ನಿರೀಕ್ಷಿಸುವುದೂ ಇಲ್ಲ. ಓದುಗರು ನನ್ನಂತೆಯೇ ಅನ್ನ ತಿನ್ನುವ ಮನುಷ್ಯರು. ನನಗೆ ಅನ್ನಿಸಿದ್ದು ಇವತ್ತಲ್ಲದಿದ್ದರೆ, ನಾಳೆ ನಿಧಾನವಾಗಿಯಾದರೂ ಅವರಿಗೂ ಅನ್ನಿಸುತ್ತದೆ ಎನ್ನುವ ನಂಬಿಕೆಯಿಂದಲೇ ನಾನು ಬರೆಯುವುದು'.

ಅದರೆ, ಇವತ್ತು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಏನಾಗುತ್ತಿದೆ? ಪ್ರಶಸ್ತಿ ಕೊಡಿಸುವ ಮೀಡಿಯೇಟರ್ಸ್‌ ಹಾಗೂ ಕೆಲವು ಕಡೆ ಸೂಲಗಿತ್ತಿಯರೂ ಇದ್ದಾರೆ‌. ತೇಜಸ್ವಿ ಪಂಪ ಪ್ರಶಸ್ತಿ ಸ್ವೀಕರಿಸಲು ಬನವಾಸಿಗೆ ಬರಲಿಲ್ಲ. ಹಾಗೂ ಕುವೆಂಪು ಮೊದಲಾಗಿ ಹಲವರು ಪಡೆದ ಪ್ರಶಸ್ತಿಯನ್ನು ಸ್ವೀಕರಿಸುವ ಸಮಾರಂಭವನ್ನು ಅವರು ನಯವಾಗಿ ತಿರಸ್ಕರಿಸಿ, ತಮ್ಮ ಪಾಡಿಗೆ ತಾವಿದ್ದರು.

ಟೀಕೆಗಳಿಗೆ ನಮ್ಮ ಜೀವನ, ವ್ಯಕ್ತಿತ್ವ, ನಡವಳಿಕೆಗಳೇ ಉತ್ತರ ಹೇಳಬೇಕೆ ಹೊರತು ಮಾತಿನಿಂದ ಹೇಳಿ ಪ್ರಯೋಜನವಿಲ್ಲ ಎನ್ನುತ್ತಿದ್ದರು. ರಾಜಕಾರಣಿಗಳು ಎಂದೆಂದೂ ಭಾರತವನ್ನು ಜಾತ್ಯಾತೀತ ಸಮಾಜ ಆಗದ ಹಾಗೆ ನೋಡಿಕೊಳ್ಳುತ್ತಾರೆ. ಏಕೆಂದರೆ ಇನ್ಯಾವ ಅರ್ಹತೆಗಳು ಇಲ್ಲದ ಅವರಿಗೆ, ಜಾತಿ ಬಿಟ್ಟರೆ ವೋಟಿಗೆ ಬೇರೆ ಗತಿಯೇ ಇಲ್ಲ ಎಂದಿದ್ದ  ತೇಜಸ್ವಿ ಅವರ ಮಾತನ್ನು ಎಷ್ಟು ಜನ ಇವತ್ತು ಪುನರುಚ್ಛರಿಸುವ ಧೈರ್ಯ ಮಾಡುತ್ತಾರೆ?

ಪರಿಸರದ ಕುರಿತು ಬರೆಯುತ್ತಾ 'ಈ ಜೀವ ಸಮುಚ್ಚಯದಲ್ಲಿ ಕ್ರಿಮಿಕೀಟಗಳು ಪಶುಪಕ್ಷಿ ಪ್ರಾಣಿಗಳು ತೋರಿಸುತ್ತಿರುವಷ್ಟು ಹೊಂದಾಣಿಕೆ ಮತ್ತು ಸಾಮರಸ್ಯಗಳನ್ನು ವಿವೇಕಿ ಮತ್ತು ಬುದ್ಧಿಶಾಲಿಯಾದ ಮಾನವ ತೋರಿಸಲು ಸಾಧ್ಯವಿಲ್ಲವೇ?' ಎನ್ನುವುದೇ ಈಗ ನಮ್ಮ ಮುಂದೆ ಇಕಾಲಜಿ ಇಟ್ಟಿರುವ ಪ್ರಶ್ನೆ.

ರೈತರ ಕುರಿತು ಮಾತನಾಡುವ ತೇಜಸ್ವಿ ಅವರು ʼದೇಶವನ್ನು ಆಹಾರದಲ್ಲಿ ಸ್ವಾವಲಂಬಿ ಮಾಡಿದ ರೈತನಿಗೆ ಯಾವ ಪ್ರೋತ್ಸಾಹವೂ ಇಲ್ಲ. ಕಾಳಧನದ ಖದೀಮರಿಗೆ, ಅಘೋಷಿತ ಹಣ ಇಟ್ಟುಕೊಂಡವರಿಗೆ ಆಶ್ರಯ, ಪ್ರೋತ್ಸಾಹ, ವಿನಾಯ್ತಿಗಳನ್ನು ಘೋಷಿಸುತ್ತ ದೇಶದ ಇಡೀ ಅರ್ಥವ್ಯವಸ್ಥೆಯನ್ನು, ಕೈಗಾರಿಕೋದ್ಯಮಿಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ತಿರುಚುತ್ತಾ ಹೋದರೆ, ಇದರ ಆರ್ಥಿಕ ದುಷ್ಪರಿಣಾಮಗಳಿಗಿಂತ ದೇಶದ ಜನತೆಯ ಮೇಲಾಗುವ ನೈತಿಕ ದುಷ್ಪರಿಣಾಮಗಳು ಭಯಂಕರವಾದವು ಎಂದು 25 ಆಗಸ್ಟ್ 1991ರಲ್ಲೇ ಹೇಳಿದ್ದರು.

ಒಬ್ಬ ಲೇಖಕ ಸಮಾಕಾಲೀನ‌ ಆಗುಹೋಗುಗಳಿಗೆ ಕಣ್ಣು ಕಿವಿಗಳನ್ನು ತೆರೆದುಕೊಂಡಿರಬೇಕು ಎಂಬುದು ಈ ಕಾರಣಕ್ಕಾಗಿ. ʼಕಣ್ಮುಂದೆ ನಡೆಯೋದನ್ನು ಯಾವನು ಸರಿಯಾಗಿ ನೋಡೋದನ್ನು ಕಲಿತುಕೊಳ್ಳೊದಿಲ್ಲವೋ ಅವನಿಗೆ ಹಿಂದೇನಾಯ್ತು ಅಂತಾನೂ ಗೊತ್ತಾಗೋದಿಲ್ಲʼ ಎಂದಿದ್ದರು ತೇಜಸ್ವಿ .

ರಾಜೇಶ್ವರಿ ತೇಜಸ್ವಿ
ರಾಜೇಶ್ವರಿ ತೇಜಸ್ವಿ

ಸ್ವಾತಂತ್ರ್ಯ ಮತ್ತು ಉಪದೇಶ, ಮಾತಿನ ಮೌಲ್ಯದ ಬಗ್ಗೆ ಸಹ ಪೂರ್ಣಚಂದ್ರ ತೇಜಸ್ವಿ ಅರ್ಥಪೂರ್ಣ ಮಾತುಗಳನ್ನು ನಮ್ಮ ಮುಂದಿಟ್ಟು ಹೋಗಿದ್ದಾರೆ. ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು, ಸುಲಭಕ್ಕೆ ಸಿಗುವುದಿಲ್ಲ ಎಂದಿದ್ದರು.

ʼನಾವು ಯಾವ ರೀತಿ ಬದುಕುವುದಿಲ್ಲವೋ ಆ ರೀತಿ ಬೇರೆಯವರು ಬದುಕಲಿ ಎಂದು ಹೇಳುವ ಅಧಿಕಾರ ನಮಗ್ಯಾರಿಗೂ ಇಲ್ಲ' ಎಂಬ ಮಾತನ್ನು ಗ್ರಹಿಸಿದರೆ ಇವತ್ತಿನ ವರ್ತಮಾನಕ್ಕೆ, ಆಳುವವರಿಗೆ ಈ ಮಾತು ಮುಖಕ್ಕೆ ತಿವಿದಂತಿದೆ‌.

ಇದನ್ನು ಓದಿದ್ದೀರಾ? ತೇಜಸ್ವಿ ನೆನಪು | ತೇಜಸ್ವಿ ಮತ್ತು ಪಲಾಯನದ ಪೂಜಾರ್ಹ ಪ್ರತಿಮೆಗಳು

ಒಬ್ಬ ಲೇಖಕ, ಅವನ ಭೌತಿಕ ಇಲ್ಲವಾಗುವಿಕೆಯ ನಂತರವೂ ಜನ ಮಾನಸದಲ್ಲಿ ಉಳಿಯುವುದು ಈ ಕಾರಣಕ್ಕಾಗಿ. ನಾವು ಬರೆದದ್ದು ಸಾರ್ಥಕವಾಗುವುದು ಸಹ ಹೀಗೆಯೇ. ನಮ್ಮ ಮಾತಿಗೆ ಅರ್ಥ ಬರಬೇಕಾದರೆ ಮಾತನಾಡುವಷ್ಟೇ, ಮಾತನಾಡದೆ ಇರುವುದೂ ಅಗತ್ಯ. ನಮ್ಮ ಮಾತಿಗೆ ಅರ್ಥ ಬರುವುದು ನಮ್ಮ ನಡವಳಿಕೆಯಿಂದ ಎಂಬ ಮಾತು ಅಕ್ಷರಶಃ ನಿಜ.

ತೇಜಸ್ವಿ ಅವರು ಕುವೆಂಪು ಹೆಸರು ಹಾಗೂ ಕೀರ್ತಿಯನ್ನು ಎಂದು ಬಳಸಿಕೊಂಡವರಲ್ಲ. ಬಯಸಿದ್ದರೆ  ಅವರು ಮೈಸೂರು ವಿ.ವಿ.ಯ ಅಧ್ಯಾಪಕರಾಗಬಹುದಿತ್ತು. ಆ ಅರ್ಹತೆಯೂ ಇತ್ತು. ಈ ಬಗ್ಗೆ ಜಿ.ಎಚ್. ನಾಯಕರು ಒಮ್ಮೆ ತೇಜಸ್ವಿ ಅವರನ್ನು ಕೇಳಿದಾಗ, 'ಹಾಗೆ ನಾನು ವಿ.ವಿ.ಯಲ್ಲಿ ಅಧ್ಯಾಪಕನಾಗಿದ್ದರೆ, ನಿಮ್ಮ ಕಣ್ಣಲ್ಲಿ  ಹೇಲುಗುಪ್ಪೆಯಂತಾಗುತ್ತಿದ್ದೆ' ಎಂಬ ಸ್ವ ವಿಮರ್ಶೆ ತೇಜಸ್ವಿ ಅವರಲ್ಲಿತ್ತು. ಇಂತಹ ಕಠೋರತೆ ನಮ್ಮ ಕಣ್ಮುಂದಿನ ಎಷ್ಟು ಜನ ಲೇಖಕರಲ್ಲಿ‌ದೆ?

ನಿಮಗೆ ಏನು ಅನ್ನಿಸ್ತು?
2 ವೋಟ್
eedina app