ತೇಜಸ್ವಿ ನೆನಪು | ಎಲ್ಲರೊಳಗೊಂದಾಗುವ ತೇಜಸ್ವಿ, ಹೋರಾಟದ ಒಡನಾಡಿ

PoornaChandra

ಶೃಂಗೇರಿಯಲ್ಲಿ ಒಂದು ಅಂತರ್ಜಾತಿ ವಿವಾಹಿತರ ಸಮಾವೇಶ ಏರ್ಪಡಿಸಬೇಕೆಂದೂ ತೇಜಸ್ವಿ, ವಡ್ಡರ್ಸೆ ರಘುರಾಮ ಶೆಟ್ಟರು, ಬಿ. ರಾಮದಾಸ್, ಲಂಕೇಶ್ ಮುಂತಾದವರನ್ನೆಲ್ಲ ಕರೆಯಬೇಕೆಂದೂ ನಿರ್ಧಾರವಾಯಿತು. ಸುಂದರೇಶ್, ಮಂಜುಳಾ, ಚಂದ್ರೇಗೌಡ, ವಿಠಲ್ ಹೆಗ್ಗಡೆ, ಎ.ಕೆ. ಮಂಜಪ್ಪ, ನಾನು ಎಲ್ಲರೂ ತೇಜಸ್ವಿಯವರ ಮನೆಗೆ ಹೋದೆವು...

1985ಕ್ಕೆ ಮೊದಲು ತೇಜಸ್ವಿಯವರ ಬಗ್ಗೆ ಓದಿದ್ದಷ್ಟೇ. ಲಂಕೇಶ್, ಕಡಿದಾಳು ಶಾಮಣ್ಣ, ಅನಂತಮೂರ್ತಿ ಮತ್ತಿತರ ಸಮಕಾಲೀನರ ಜೊತೆಯಲ್ಲಿ ತಮ್ಮ ಕಾಲೇಜು ದಿನಗಳಿಂದಲೂ ಕರ್ನಾಟಕದ ಸಾಂಸ್ಕೃತಿಕ-ಸಾಹಿತ್ಯಕ ಮತ್ತು ಪ್ರಗತಿಪರ ಚಳವಳಿಗಳ ವಲಯದಲ್ಲಿ ಛಾಪು ಮೂಡಿಸಿದ್ದ ಹಲವು ಚಿಂತಕರು, ಬರಹಗಾರರ ಪಟ್ಟಿಯಲ್ಲಿ ತೇಜಸ್ವಿ ಕೂಡ ನನ್ನ ಮಟ್ಟಿಗೆ ಒಂದು ಹೆಸರು ಅಷ್ಟೇ. ಆದರೂ ಅವರೆಲ್ಲರ ಪ್ರಗತಿಪರ ಚಿಂತನೆಗಳ ಒಂದು ಎಳೆ ನಮ್ಮಗಳ ಚಿಂತನೆ-ಕ್ರಿಯೆಗಳು ರೂಪುಗೊಳ್ಳುವುದರಲ್ಲೂ ಪ್ರಭಾವ ಬೀರಿದ್ದು ಸುಳ್ಳಲ್ಲ. ತೇಜಸ್ವಿಯವರ ಜೊತೆ ನನ್ನ ನೇರ ಒಡನಾಟದ ಬಗ್ಗೆ ಹೇಳುವ ಮೊದಲು ಸ್ವಲ್ಪ ಹಿನ್ನೆಲೆಗೆ ಹೋಗೋಣ.

Eedina App

1982ರಲ್ಲಿ ನಾನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪವನ್ನು ಕೇಂದ್ರವಾಗಿಟ್ಟುಕೊಂಡು ‘ಮುಂಜಾವು’ ಎಂಬ ವಾರದ ಸುದ್ದಿಪತ್ರಿಕೆ ಆರಂಭಿಸುವ ಮೊದಲು, 1970ರ ದಶಕದಲ್ಲಿ ಮೈಸೂರಿನಲ್ಲಿ ದಲಿತ, ರೈತ, ಕಾರ್ಮಿಕ, ಪರಿಸರ ಮತ್ತು ಕನ್ನಡ ಪರ ಹಾಗೂ ಜಾತಿ ವ್ಯವಸ್ಥೆ ವಿರೋಧಿಯಾದ ಪ್ರಗತಿಪರ-ಎಡಪಂಥೀಯ ಚಳವಳಿ-ಹೋರಾಟಗಳ ಕಾವಿನಲ್ಲಿ ರೂಪುಗೊಂಡು, ಅಂಚೆ-ತಂತಿ ಇಲಾಖೆಯ ಖಾಯಂ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು, ‘ಆಂದೋಲನ’ದ ರಾಜಶೇಖರ ಕೋಟಿಯವರ ಬಳಿ ಸುಮಾರು ಒಂದೂವರೆ ವರ್ಷ ಪತ್ರಿಕೋದ್ಯಮದ ಅಆಇಈ ಕಲಿತು ಊರಿಗೆ ಹೋದವನು.

ಈ ಹಿನ್ನೆಲೆಯಲ್ಲಿ, ನನ್ನ ಇಬ್ಬರು ತಂಗಿಯರಲ್ಲಿ ಮೊದಲನೆಯವಳಾದ ಸುನಂದನ ಮದುವೆಯನ್ನು 1986ರ ಡಿಸೆಂಬರಿನಲ್ಲಿ ದ.ಸಂ.ಸ ಜಿಲ್ಲಾ ಸಮಿತಿಯ ನನ್ನ ಸಹ ಸದಸ್ಯ ಎ.ಕೆ.ಮಂಜಪ್ಪ ಅವರ ತಮ್ಮ ಸಿದ್ದುಸ್ವಾಮಿಯೊಂದಿಗೆ, ನಮ್ಮ ತಂದೆ-ತಾಯಿಯರ ಒಪ್ಪಿಗೆ ಮತ್ತು “ಮನಃಪೂರ್ವಕ” ಆಶೀರ್ವಾದ ಪಡೆದು ನೆರವೇರಿಸಿದೆವು. ದಸಂಸ ಸಂಸ್ಥಾಪಕ ಬಿ. ಕೃಷ್ಣಪ್ಪನವರು ಆ ಸಾರ್ವಜನಿಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು, ಕತೆಗಾರ ಭದ್ರಾವತಿಯ ಬಿ. ರಾಜಣ್ಣ ಮುಂತಾಗಿ ಹಲವು ಗಣ್ಯರು ಅತಿಥಿಗಳಾಗಿದ್ದರು. ಇಡೀ ದಸಂಸ ಜಿಲ್ಲಾ ಸಮಿತಿ ಮತ್ತು ದಲಿತ ಕಲಾ ಮಂಡಲಿ ಹಾಜರಿತ್ತು. ನಮ್ಮ ಕುಟುಂಬದ (ಅಪ್ಪಯ್ಯ-ಅಮ್ಮ ಹೊರತು) ಎಲ್ಲರೂ ಇದರಲ್ಲಿ ಪಾಲ್ಗೊಂಡಿದ್ದರು.

AV Eye Hospital ad

ಮದುವೆಯೇನೋ ಚೆನ್ನಾಗಿಯೇ ಆಯಿತು. ಆದರೆ ಇದು ಆ ಭಾಗದ ಕಟ್ಟಾ ಸಂಪ್ರದಾಯಸ್ಥ ಬ್ರಾಹ್ಮಣರಲ್ಲಿ ಅಪಾರ ಆತಂಕ ಹುಟ್ಟಿಸಿತು. “ಕಟ್ಣದ (ಕಲ್ಲು ಗೋಡೆ) ಒಂದು ಕಲ್ಲು ಸರಿದುಹೋಗಿದೆ, ಕೂಡಲೇ ದುರಸ್ತಿ ಮಾಡದಿದ್ದರೆ ಇಡೀ ಕಟ್ಣವೇ ಸಡಿಲಗೊಂಡು ಕ್ರಮೇಣ ಬಿದ್ದುಹೋಗುತ್ತೆ” ಎನ್ನುವುದು ಅವರ ಭಯವಾಗಿತ್ತು. ಹೀಗಾಗಿ ಜಾತಿ ಸಂಘದವರು ಹರಿಹರಪುರದಲ್ಲಿರುವ ನಮ್ಮ ಉಪಜಾತಿ ಮಠದ ಗುರುಗಳಿಂದ ನಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಿಸಿ, ಕಟ್ಟುನಿಟ್ಟಾಗಿ ಜಾರಿಗೊಳಿಸಿದರು. ನಮ್ಮ ನೆರೆಮನೆಯವರು, ಬಂಧು-ಬಳಗ, ಜಾತಿಯವರು ಯಾರೇ ಆದರೂ ನಮ್ಮ ಮನೆಗೆ ಬಂದು-ಹೋಗಿ ಮಾಡಿದಲ್ಲಿ ಅವರಿಗೂ ಬಹಿಷ್ಕಾರ ಹಾಕಲಾಗುವುದು. ಒಂದು ನಿರ್ದಿಷ್ಟ ಧಾರ್ಮಿಕ ಸಮಾರಂಭದಲ್ಲಿ ನಮ್ಮ ಅಪ್ಪಯ್ಯ ಹೋಗಿ, ಪ್ರಾಯಶ್ಚಿತ್ತಕ್ಕಾಗಿ ತಪ್ಪುಕಾಣಿಕೆ ಸಲ್ಲಿಸಿ ಗುರುಗಳಲ್ಲಿ ತೀರ್ಥ-ಪ್ರಸಾದ ಪಡೆದುಬಂದು, ನನಗೂ ನನ್ನ ತಂಗಿಗೂ ಕಟ್ಟುನಿಟ್ಟಿನ ಬಹಿಷ್ಕಾರ ಹಾಕುವುದಾದರೆ ಅವರನ್ನು ಪುನಃ ಜಾತಿಗೆ ಸೇರಿಸಿಕೊಳ್ಳಲಾಗುವುದು. ಪುನಃ ಉಲ್ಲಂಘಿಸಿದರೆ ಶಾಶ್ವತ ಬಹಿಷ್ಕಾರ. ಇವು ನಿಬಂಧನೆಗಳು.

ಅಪ್ಪಯ್ಯ ಸ್ವಲ್ಪ ನೊಂದುಕೊಂಡರಾದರೂ ಹೆಚ್ಚೇನೂ ಕೇರ್ ಮಾಡಲಿಲ್ಲ. ಅಮ್ಮನಂತೂ “ನಾನು ನನ್ನ ಹೆತ್ತ ಮಕ್ಕಳನ್ನು ತೊರೆಯುವವಳಲ್ಲ ...” ಎಂದು ಘೋಷಿಸಿ ಮಂಗಳೂರಿಗೆ ಮಗಳ ಮನೆಗೆ ಹೋಗಿಬಂದು ಮಾಡುತ್ತಲೇ ಇದ್ದರು. ಮನೆಯಲ್ಲಿದ್ದ ನನ್ನ ತಮ್ಮಂದಿರೂ ದಿಟ್ಟವಾಗಿ ನಿಂತರು. ಬಳಗದ ಇತರ ಅಣ್ಣ-ತಮ್ಮಂದಿರು ಕೂಡ ಒಳ್ಳೆಯ ನೈತಿಕ ಬೆಂಬಲ ನೀಡಿದರು. ಬ್ರಾಹ್ಮಣ ಯುವಕರನ್ನೂ ಒಳಗೊಂಡಂತೆ ಇಡೀ ಪ್ರದೇಶದ ಪ್ರಜ್ಞಾವಂತರು ಈ ಮದುವೆಗೆ, ನಮ್ಮ ಕುಟುಂಬಕ್ಕೆ ಬೆಂಬಲ ವ್ಯಕ್ತಪಡಿಸಿದರು. ಇದೆಲ್ಲ ಆ ಪ್ರದೇಶದಾದ್ಯಂತ ದೊಡ್ಡ ಸಂಚಲನ ಮೂಡಿಸಿ, 25-30 ವರ್ಷವಾದರೂ ಮದುವೆಯ ಸಾಧ್ಯತೆ ಕಾಣದ ಬ್ರಾಹ್ಮಣ ಯುವತಿಯರು ಕೂಡ ‘ತಾವೂ ಇಂಥ ಮದುವೆಗೆ ಸಿದ್ಧ’ ಎಂದು ಮಾತಾಡಿಕೊಳ್ಳುತ್ತಿದ್ದಾರೆಂಬ ವರದಿಗಳು ಹರಿದಾಡಿದವು. ನಾಲ್ಕೈದು ತಿಂಗಳು ಕಳೆಯಿತು.

ಪಿ ಲಂಕೇಶ್‌, ಅನಂತಮೂರ್ತಿ ಮತ್ತು ತೇಜಸ್ವಿ
ಪಿ ಲಂಕೇಶ್‌, ಅನಂತಮೂರ್ತಿ ಮತ್ತು ತೇಜಸ್ವಿ

ಆದರೆ ನನ್ನ ಇಬ್ಬರು ಅಣ್ಣಂದಿರು ಕೈ ಕೊಟ್ಟರು. ಜಾತಿ ಸಂಘದವರ ಜೊತೆ ಶಾಮೀಲಾಗಿ, ಅಪ್ಪಯ್ಯನನ್ನು ಪ್ರಾಯಶ್ಚಿತ್ತಕ್ಕೆ ಒಪ್ಪಿಸಿಬಿಟ್ಟರು. ನಾವೂ ಪಟ್ಟು ಬಿಡಲಿಲ್ಲ; ಕಲ್ಕುಳಿ ವಿಠಲ್ ಹೆಗ್ಗಡೆ ಮತ್ತು ನಾನು ಹೋಗಿ ಗುರುಗಳ ಸಂದರ್ಶನ ನಡೆಸಿದೆವು: ನಗುನಗುತ್ತಲೇ ನಾವು ಕೇಳುತ್ತಿದ್ದ ಹರಿತವಾದ ಪ್ರಶ್ನೆಗಳಿಗೆ ನಮ್ಮ ತಂದೆ ಸಮಾನರಾದ ಗುರುಗಳು ಉತ್ತರ ಕೊಡಲಾರದೆ ಚಡಪಡಿಸಿ ಹೋದರು. ಪ್ರಾಯಶ್ಚಿತ್ತಕ್ಕೆ ನಿಗದಿಯಾಗಿದ್ದ ಧಾರ್ಮಿಕ ಸಮಾರಂಭಕ್ಕೆ ಹೋಗದೆ ಉಳಿದುಕೊಂಡರು. ಮುಂದೊಂದು ದಿನ ಅದನ್ನು ಮಾಡಿ ಮುಗಿಸಿದರು ಅನ್ನೋದು ಬೇರೆ ಮಾತು.

ಮದುವೆ ಕುರಿತ ಈವರೆಗಿನ ಎಲ್ಲ ಘಟನಾವಳಿಗಳನ್ನೂ ಸಂದರ್ಶನದ ಪೂರ್ಣ ಪಾಠವನ್ನೂ ನಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದೆವು; ಅದಕ್ಕೆ ಓದುಗರಿಂದ, ಸಭ್ಯತೆಯ ಎಲ್ಲೆ ಮೀರದಂತೆ, ಪ್ರತಿಕ್ರಿಯೆಗಳನ್ನು ಆಹ್ವಾನಿಸಿದೆವು. 42 ಪತ್ರಗಳು ಪ್ರಕಟವಾದವು. ಬಹುತೇಕ ಬ್ರಾಹ್ಮಣ ಯುವಕರನ್ನೂ ಒಳಗೊಂಡು ಹೆಚ್ಚಿನ ಎಲ್ಲರೂ ನಮ್ಮ ನಡೆಯನ್ನು ಶ್ಲಾಘಿಸಿ, ಗುರುಗಳ ಮತ್ತು ಜಾತಿ ಸಂಘದವರ ನಡೆಯನ್ನು ವಿಮರ್ಶೆಗೆ ಗುರಿ ಮಾಡಿದ್ದರು. ಇದನ್ನು ಇಷ್ಟಕ್ಕೇ ಬಿಡಬಾರದೆಂದು ಚಿಕ್ಕಮಗಳೂರು ಜಿಲ್ಲೆಯ ಎಲ್ಲ ಪ್ರಗತಿಪರ ಹೋರಾಟಗಾರ ಮಿತ್ರರೂ ಹಿರಿಯರೂ ಅಭಿಪ್ರಾಯ ಪಟ್ಟರು. ಆಗ ಕಮ್ಯೂನಿಸ್ಟ್ ಯುವ ನಾಯಕ ಬಿ.ಕೆ.ಸುಂದರೇಶ್ ಇದ್ದರು, ಪ್ರಜಾವಾಣಿಯ ಸಿ.ಜಿ.ಮಂಜುಳಾ, ‘ಕಟ್ಟೆ ಪುರಾಣ’ದ ಬಿ.ಚಂದ್ರೇಗೌಡ ಚಿಕ್ಕಮಗಳೂರಿನಲ್ಲಿದ್ದರು. ಇನ್ನೂ ಅನೇಕ ಸಮಾನ ಮನಸ್ಕರೊಂದಿಗೆ ಚರ್ಚಿಸಿ, ಶೃಂಗೇರಿಯಲ್ಲಿ ಒಂದು ಅಂತರ್ಜಾತಿ ವಿವಾಹಿತರ ಸಮಾವೇಶ ಏರ್ಪಡಿಸಬೇಕೆಂದೂ ತೇಜಸ್ವಿ, ವಡ್ಡರ್ಸೆ ರಘುರಾಮ ಶೆಟ್ಟರು, ಬಿ. ರಾಮದಾಸ್, ಲಂಕೇಶ್ ಮುಂತಾದವರನ್ನೆಲ್ಲ ಕರೆಯಬೇಕೆಂದೂ ನಿರ್ಧಾರವಾಯಿತು. ಸುಂದರೇಶ್, ಮಂಜುಳಾ, ಚಂದ್ರೇಗೌಡ, ವಿಠಲ್ ಹೆಗ್ಗಡೆ, ಎ.ಕೆ.ಮಂಜಪ್ಪ, ನಾನು, ಹೇಮಾ, ನಾಕು ವರ್ಷದ ಮಗು ಮಲ್ಲಿಗೆ ಎಲ್ಲರೂ ತೇಜಸ್ವಿಯವರ ಮನೆಗೆ ಹೋದೆವು.
ಬಂದ ಉದ್ದೇಶವನ್ನು ಸ್ನೇಹಿತರು ವಿವರಿಸಿದರು. ಆದರೆ ತೇಜಸ್ವಿ ಸುತರಾಂ ಒಪ್ಪಲು ತಯಾರಿರಲಿಲ್ಲ. “ಇದರಿಂದೆಲ್ಲ ಏನೂ ಆಗಲ್ಲ ಕಣ್ರಯ್ಯ. ನಾವೆಲ್ಲ ಬೇಕಾದಷ್ಟು ಮಾಡಿದೆವಲ್ಲ. ಏನಾಯಿತು? ಎಲ್ಲವೂ ಯಥಾಪ್ರಕಾರ ನಡೀತಾನೇ ಇದೆ. ... ಸುಮ್ಮನೆ ಮೈಕೈ ನೋಯಿಸಿಕೊಳ್ತೀರಿ ಅಷ್ಟೇ ...” ಎಂದು ಕಡ್ಡಿ ತುಂಡುಮಾಡಿದರು. ಎಲ್ಲರೂ ಪರಿಪರಿಯಾಗಿ ವಾದಿಸಿದರೂ ತೇಜಸ್ವಿ ಪಟ್ಟು ಸಡಿಲಿಸಲಿಲ್ಲ. ಕೊನೇ ಪ್ರಯತ್ನವೆಂಬಂತೆ ನಾನು, “ಏನೂ ಪ್ರಯೋಜನ ಇಲ್ಲವೆಂದು ಹೇಗೆ ಹೇಳ್ತೀರಿ? ನಮಗೆಲ್ಲ ನೀವಾಗಲಿ, ಲಂಕೇಶ್, ಅನಂತ ಮೂರ್ತಿ ಮುಂತಾದವರಾಗಲಿ ಖುದ್ದಾಗಿ ಪರಿಚಿತರೇನಲ್ಲ. ಆದರೂ ಇಷ್ಟು ವರ್ಷಗಳ ನಂತರ ಇಷ್ಟೊಂದು ಯುವಜನರು ಇಂಥ ಪ್ರಯತ್ನ ಮಾಡ್ತಿಲ್ವ? ನೀವೆಲ್ಲ ಮಾಡಿದ ಹೋರಾಟ-ಚಳವಳಿಗಳು ಎಲ್ಲೂ ಹುಸಿ ಹೋಗಿಲ್ಲ, ಸಮಾಜದಲ್ಲಿ ಗುಪ್ತಗಾಮಿಯಾಗಿ ಉಳಿದಿದ್ದು, ಕಾಲ ಕೂಡಿ ಬಂದಾಗ ಮತ್ತೆ ಮತ್ತೆ ತಲೆಯೆತ್ತುತ್ತವೆ ಎಂದು ನನ್ನ ನಂಬಿಕೆ...” ಎಂದೆ. ತೇಜಸ್ವಿ ಸ್ವಲ್ಪ ಹೊತ್ತು ಯೋಚಿಸುತ್ತಾ ಕೂತವರು, “ಆಯ್ತು. ಈಗ ನಾನೇನು ಮಾಡಬೇಕು ಹೇಳಿ” ಎಂದರು. ಎಲ್ಲರಿಗೂ ಖುಷಿಯೋ ಖುಷಿ.

ಯೋಜನೆ ಚರ್ಚೆಯಾಯಿತು. ಈ ಎಲ್ಲರನ್ನೂ, ನಮ್ಮ ಕ್ಷೇತ್ರದ ಸಮಾನ ಮನಸ್ಕ ಗೆಳೆಯರು-ಹಿರಿಯರನ್ನೂ ಒಳಗೊಂಡ ಸ್ವಾಗತಿ ಸಮಿತಿ ರಚಿಸಬೇಕು, ತೇಜಸ್ವಿಯವರೇ ಅದಕ್ಕೆ ಪ್ರಧಾನ ಸಂಚಾಲಕರು, ಸಮಾರಂಭದ ಅಧ್ಯಕ್ಷತೆಗೆ ವಡ್ಡರ್ಸೆಯವರನ್ನು ಆಹ್ವಾನಿಸಬೇಕು ಇತ್ಯಾದಿ ಇತ್ಯಾದಿ ಮುಖ್ಯಾಂಶಗಳನ್ನು ಹಾಗೂ ತಾರೀಕನ್ನು ಫೈನಲ್ ಮಾಡಿ ಹೊರಟು ಬಂದೆವು. ತಯಾರಿಗಳು ಭರದಿಂದ ನಡೆದವು. ನಡುವೆ ಮೂರ್ನಾಲ್ಕು ಬಾರಿ ಮೂಡಿಗೆರೆಗೆ ಹೋಗಿ ಅವರಿಗೆ ವರದಿ ಒಪ್ಪಿಸಿ ಬರುತ್ತಿದ್ದೆವು. ಎಲ್ಲವೂ ಅಂದುಕೊಂಡಂತೆ ನಡೆದು 1987ರ ಅಕ್ಟೋಬರ್ 2ರಂದು ಶೃಂಗೇರಿಯಲ್ಲಿ ರಾಜ್ಯದ ಪ್ರಪ್ರಥಮ ಅಂತರ್ಜಾತಿ ವಿವಾಹಿತರ ಸಮಾವೇಶ ಅದ್ದೂರಿಯಾಗಿ ನಡೆದೇ ಬಿಟ್ಟಿತು. ರಾಜ್ಯದ ಮುಕ್ಕಾಲು ಭಾಗದಿಂದ 550ಕ್ಕೂ ಹೆಚ್ಚು ಜನ ಆಸಕ್ತರು ಭಾಗವಹಿಸಿದ್ದರು. ವಡ್ಡರ್ಸೆಯವರ ಅಧ್ಯಕ್ಷತೆ. ತೇಜಸ್ವಿ ಬಹಳ ಅಚ್ಚುಕಟ್ಟಾಗಿ ದಿಕ್ಸೂಚಿ ಭಾಷಣವನ್ನು ಬರೆದುಕೊಂಡು ಬಂದು ಮಾತನಾಡಿದರು. ಬಿ. ರಾಮದಾಸ್, ವೆಂ.ವನಜ-ಕಾಳಚನ್ನೇಗೌಡ ಮುಂತಾದ ಅನೇಕಾನೇಕ ಸಹೃದಯರು ಬಂದಿದ್ದರು. ಅಂತರ್ಜಾತಿ ವಿವಾಹಿತರಿಗೆ ಉದ್ಯೋಗದಲ್ಲಿ 5% ಮೀಸಲಾತಿ ಕೊಡಬೇಕೆಂಬ ಪ್ರಮುಖ ನಿರ್ಣಯವನ್ನು ಸಭೆ ಪಾಸು ಮಾಡಿತು.

ಈ ಕಾರ್ಯಕ್ರಮವೂ ಆ ಭಾಗದಲ್ಲಿ ವಿಶೇಷವಾಗಿ ಚರ್ಚಿತವಾದ ವಿದ್ಯಮಾನವಾಯಿತು. ಇದರ ಪ್ರೇರಣೆಯಿಂದ ಶೃಂಗೇರಿ-ಕೊಪ್ಪ-ನರಸಿಂಹರಾಜಪುರ ಭಾಗದಲ್ಲಿ ಹತ್ತಾರು ಅಂತರ್ಜಾತಿ ಮದುವೆಗಳು ನಡೆದವು. ‘ಮಂತ್ರ ಮಾಗಲ್ಯ’ದ ಮದುವೆಗಳೂ ಸಾಕಷ್ಟು ನಡೆದವು. ಬ್ರಾಹ್ಮಣ, ಒಕ್ಕಲಿಗ, ಮೊಗವೀರ, ದಲಿತ ಹೀಗೆ ವಿವಿಧ ಸಮುದಾಯಗಳ ಯುವಕ-ಯುವತಿಯರು ಈ ಪ್ರಕ್ರಿಯೆಯ ಪಾತ್ರಧಾರಿಗಳಾದರು. ವಿಠಲ್ ಹೆಗ್ಗಡೆ ಮತ್ತು ಪ್ರೊ. ಕೆ. ಪುಟ್ಟಯ್ಯ ಪ್ರಮುಖ ಪ್ರೇರಕರಾಗಿದ್ದರು. ತೋಟ-ಗದ್ದೆ ಕೆಲಸಕ್ಕೆ ಬರುತ್ತಿದ್ದ ತಳ ಸಮುದಾಯದ ಯುವಕನನ್ನು ಅಥವಾ ಯುವತಿಯನ್ನು ಆ ಮನೆಯ ಯುವತಿ ಅಥವಾ ಯುವಕ ಮದುವೆಯಾಗಿ, ಎಲ್ಲಿಗೂ “ಓಡಿ ಹೋಗದೆ” ಊರಲ್ಲೇ ನೆಲೆಸುವುದು ಈ ಮದುವೆಗಳ ವಿಶೇಷತೆಯಾಗಿತ್ತು. ಮತ್ತೆ ಯಾವುದೇ ಬಹಿಷ್ಕಾರದ ಪ್ರಕರಣಗಳು ನಡೆಯಲಿಲ್ಲ ಎನ್ನುವುದು ಗಮನಾರ್ಹ. ಮುಂದೆ ಕಾಲಾಂತರದಲ್ಲಿ ನಮ್ಮ ಕುಟುಂಬದಲ್ಲೂ ಎಲ್ಲ ಸುಸೂತ್ರವಾಗಿದೆ.

ಪೂರ್ಣಚಂದ್ರತೇಜಸ್ವಿ

ತೇಜಸ್ವಿಯವರ ಜೊತೆಗಿನ ನಮ್ಮ ಒಡನಾಟ ಮುಂದೆಯೂ ಹಲವು ರೀತಿಗಳಲ್ಲಿ ಮುಂದುವರಿಯಿತು. ಅಂಥ ಇನ್ನೊಂದು ಪ್ರಮುಖ ಸಂದರ್ಭ 1988ರಿಂದ ನಡೆದ ಗುಬ್ಬಗದ್ದೆ ಕಾಡಿನ ಹೋರಾಟ.
ಕುಪ್ಪಳಿ ಕಾಡಿನಿಂದ ಸುಮಾರು ಮೂರ್ನಾಲ್ಕು ಕಿಲೋಮೀಟರ್ ದಕ್ಷಿಣಕ್ಕೆ ಅದೇ ಕಾಡಿನ ಸೆರಗಿನ ಗುಡ್ಡದ ಇಳಿಜಾರಿನಲ್ಲಿ ದೂರದೂರಕ್ಕೆ ಹದಿನೈದಿಪ್ಪತ್ತು ಸಣ್ಣಪುಟ್ಟ ರೈತರ ಮನೆಗಳಿದ್ದ ಪುಟ್ಟ ಹಳ್ಳಿ ಗುಬ್ಬಗದ್ದೆ. ಆ ಗುಡ್ಡದ ಮೇಲ್ಭಾಗವೆಲ್ಲ ದಟ್ಟಾರಣ್ಯ. ಅಲ್ಲಿಂದ ಗುಬ್ಬಗದ್ದೆ ಹಳ್ಳ ಎಂಬ ಹೆಸರಿನ ಒಂದು ಸಣ್ಣ ಝರಿ ಉಗಮಿಸಿ ಆರೇಳು ಕಿಲೋಮೀಟರ್ ಹರಿದು ಹಾದಿಗುಂಟ ಸುಮಾರು ನಾಲ್ಕುನೂರು ಎಕರೆಗಳಷ್ಟು ಗದ್ದೆ-ತೋಟಗಳಿಗೆ ನೀರುಣಿಸುತ್ತ ತುಂಗಾ ನದಿಗೆ ಹೋಗಿ ಸೇರುತ್ತದೆ. ಆ ಗುಡ್ಡದ ಇನ್ನೊಂದು ಮಗ್ಗುಲಿಗೆ ಎಚ್.ಜಿ. ಗೋವಿಂದ ಗೌಡರ ಮನೆ, ಕಾಫಿ ತೋಟಗಳೂ ಕೊಪ್ಪ ಪೇಟೆಯೂ ಇವೆ.

ಈ ಕಾಡಿನ ಲಕ್ಷಾಂತರ ರೂಪಾಯಿ ಬೆಲೆಬಾಳುವ ಭಾರಿಭಾರೀ ಮರಗಳ ಮೇಲೆ ಕಣ್ಣು ಹಾಕಿದ ಕಾಡುಗಳ್ಳ ಟಿಂಬರ್ ಕಂಟ್ರಾಕ್ಟರುಗಳೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಶಾಮೀಲಾಗಿ, ಗುಡ್ಡದ ನೆತ್ತಿಯ 50 ಎಕರೆ ಕಾಡು ಬೋಳಿಸಲು ಸಂಚು ಹೂಡಿ, ಅರಣ್ಯ ಕಾಯ್ದೆಯಲ್ಲಿನ ಒಂದು ಕಳ್ಳದಾರಿ ಬಳಸಿ, ಹೈಕೋರ್ಟಿನ ವಿಭಾಗ ಪೀಠದಿಂದಲೂ ಡಿಕ್ರಿ ಪಡೆದುಕೊಂಡುಬಿಟ್ಟರು. ಆ ಕಾಡು ನಾಶವಾದರೆ ಆ ಹಳ್ಳವೂ ಬತ್ತಿಹೋಗಿ, ಅಷ್ಟೂ ಜಮೀನಿಗೆ ನೀರಿನ ಬರ ಕಾಡುವುದಿತ್ತು. ಎಲ್ಲವೂ ಮುಗಿದುಹೋಯಿತು ಎಂಬಂತಹ ಈ ಹಂತದಲ್ಲಿ ಹಳ್ಳಿಯ ಜನರು ನಮ್ಮನ್ನು ಸಂಪರ್ಕಿಸಿದರು. ಕಿಶನ್ ಸಿಂಗ್ ಸುಗಾರ ಎಂಬ ಆಗಿನ ಪ್ರಾಮಾಣಿಕ ವಿಭಾಗ ಅರಣ್ಯ ಅಧಿಕಾರಿ ಕೂಡ ಸುಪ್ರೀಂ ಕೋರ್ಟಿನಿಂದಾದರೂ ತಡೆ ತಂದು ಕಾಡು ಉಳಿಸಬೇಕೆಂಬ ಪ್ರಯತ್ನದಲ್ಲಿದ್ದರು. ನಾವು ಕೂಡಲೇ ಗೋವಿಂದ ಗೌಡರ ಅಧ್ಯಕ್ಷತೆಯಲ್ಲಿ ಅಲ್ಲಿನ ಸುತ್ತಮುತ್ತಲ ಹಳ್ಳಿಗಳ ರೈತರ ಸಭೆ ಏರ್ಪಡಿಸಿದೆವು. ಕೋರ್ಟಿನಲ್ಲೂ ಹೋರಾಟ ಮುಂದುವರಿಸಬೇಕು ಹಾಗೂ ಸ್ಥಳೀಯವಾಗಿಯೂ ತೀವ್ರ ಚಳವಳಿ ನಡೆಸಬೇಕು ಎಂದು ನಿರ್ಣಯವಾಗಿ, ‘ಕೊಪ್ಪ ತಾಲೂಕು ಪರಿಸರ ಜಾಗೃತಿ ವೇದಿಕೆ’ ರಚಿಸಿಕೊಂಡು ಪ್ರಯತ್ನಕ್ಕಿಳಿದೆವು.
ಮೊದಲಿಗೆ ಹೈಕೋರ್ಟಿನಲ್ಲಿ ತಡೆಯಾಜ್ಞೆ ತರಲು ಪ್ರಯತ್ನಿಸಿದೆವು. ಪ್ರಯೋಜನವಾಗಲಿಲ್ಲ. ಆಗ ಟಿ.ಎನ್. ರಘುಪತಿ ಎಂಬ ಹೈಕೋರ್ಟ್ ವಕೀಲರು ಒಂದು ‘ಉಪಾಯ’ ಹೇಳಿಕೊಟ್ಟರು. ಹೋಗಿ ಜಿಲ್ಲಾ ನ್ಯಾಯಾಲಯದಲ್ಲಿ ಕೇಸು ದಾಖಲಿಸಿ. ಹೈಕೋರ್ಟ್ ತೀರ್ಪಿನ ಬಗ್ಗೆ ಏನೂ ಕಾಣಿಸಬೇಡಿ. ಕೇವಲ ದಾಖಲೆಗಳು ಮತ್ತು ನಕಾಶೆಗಳನ್ನು ಮಾತ್ರ ಜಡ್ಜ್ ಮುಂದಿಡಿ. ಕೇಸು ಹಾಕಲು ಯಾರಾದರೊಬ್ಬ ಖ್ಯಾತ ಜನಜನಿತ ವ್ಯಕ್ತಿ, ಒಬ್ಬ ಒಳ್ಳೆಯ ವಕೀಲರು ಹಾಗೂ ಎದೆ ಗಟ್ಟಿ ಇರುವ ಜಡ್ಜ್ ಇದ್ದರೆ ಸ್ಟೇ ಸಿಗುತ್ತದೆ. ಮುಂದಿನದು ನೋಡೋಣ ಎಂದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ತೇಜಸ್ವಿಯವರಿಗಿಂತ ಖ್ಯಾತ ಜನಜನಿತ ವ್ಯಕ್ತಿ ಯಾರಿದ್ದಾರೆ! ಕೂಡಲೇ ಅವರಲ್ಲಿಗೆ ಓಡಿದೆವು. ಅವರಿಗೆ ದಾಖಲೆ, ನಕಾಶೆಗಳನ್ನೆಲ್ಲ ತೋರಿಸಿ, ವಕೀಲರು ಹೇಳಿದ್ದ ಮಾತುಗಳನ್ನು ಹೇಳಿದೆವು. “ಇಷ್ಟೆಲ್ಲಾ ಅನಾಹುತ ಮಾಡಿದಾರಾ ಮಾರಾಯಾ!” ಎನ್ನುತ್ತ ಚಿಂತಾಕ್ರಾಂತರಾದ ಅವರು, “ಆಯ್ತು, ನನ್ನ ಹೆಸರಲ್ಲೇ ಕೇಸು ಹಾಕಿ. ಈ ವಿಚಾರಕ್ಕೆ ನನ್ನ ಹೆಸರನ್ನು ಯಾವ ರೀತಿ ಬೇಕಾದರೂ ಬಳಸಿಕೊಳ್ಳಿ” ಎಂದು ಬ್ಲಾಂಕ್ ಚೆಕ್ ಕೊಟ್ಟಂತೆ ಅನುಮತಿ ಕೊಟ್ಟುಬಿಟ್ಟರು.

ಚಿಕ್ಕಮಗಳೂರಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ದಿನಕರ ರಾವ್ ಎಂಬ ಗೌರವಾನ್ವಿತ ಹಿರಿಯ ವಕೀಲರನ್ನು ಕಂಡು ಎಲ್ಲ ವಿಷಯ ಹೇಳಿದೆವು. ಅವರೂ ಒಪ್ಪಿದರು. ಆಗ ಕೋರ್ಟಿಗೆ ರಜೆ. ಮಿಲಿಟರಿ ಮಹದೇವಪ್ಪ ಎಂದೇ ಹೆಸರಾಗಿದ್ದ ರಜಾಕಾಲದ ಜಡ್ಜ್ ಇದ್ದರು. ದಾಖಲೆಗಳನ್ನೆಲ್ಲ ಪರಿಶೀಲಿಸಿದ ಅವರು ತಕ್ಷಣ ಸ್ಟೇ ಕೊಟ್ಟರು.

ಇತ್ತ ಕಾಡುಗಳ್ಳರು ಹೈಕೋರ್ಟ್ ಆದೇಶವನ್ನು ಮುಂದಿಟ್ಟುಕೊಂಡು ಮರಗಳನ್ನು ಕಡಿಯಲು ಶುರು ಮಾಡಿಬಿಟ್ಟಿದ್ದರು. ಐದಾರು ಜನ ಕೈಕೈ ಹಿಡಿದು ನಿಂತರೂ ಒಂದೊಂದು ಮರಕ್ಕೆ ಒಂದು ಸುತ್ತು ಹಾಕಲಾಗದು, ಅಂತಂಥ ಗಾತ್ರದ ಮರಗಳು! ದಿನಕ್ಕೆ 40-50 ಮರಗಳು ಕಡಿದುರುಳುತ್ತಿದ್ದರೆ ಅವು ತಮ್ಮ ಎದೆಯ ಮೇಲೇ ಬಿದ್ದಂತೆ ಹಳ್ಳಿಗರು ತಲ್ಲಣಿಸಿ ಹೋದರು. ಐದು ದಿನದಲ್ಲಿ 312 ಮರಗಳನ್ನು ಕಡಿದುಬಿಟ್ಟರು. ಆದರೆ ಅಷ್ಟರಲ್ಲಿ ನಾವು ಜಿಲ್ಲಾ ಕೋರ್ಟಿನ ತಡೆಯಾಜ್ಞೆ ತೆಗೆದುಕೊಂಡು ಹೋಗಿ, ಡಿಎಫ್‍ಓ ಅನುಪಸ್ಥಿತಿಯಲ್ಲಿ ಎಸಿಎಫ್ ಅವರ ಮುಂದಿಟ್ಟು ಮರ ಕಡಿತ ನಿಲ್ಲಿಸಿಬಿಟ್ಟೆವು! ಕಾಡುಗಳ್ಳರಿಗೆ “ಬೋಲ್ಟ್ ಫ್ರಂ ದ ಬ್ಲ್ಯೂ” ಎಂಬಂತೆ ಆಶ್ಚರ್ಯವೋ ಆಶ್ಚರ್ಯ.

ಅತ್ತ ಸುಪ್ರೀಂ ಕೋರ್ಟಿಗೆ ಹೋಗಲು ತಯಾರಿ ನಡೆಸಿದ್ದ ಡಿಎಫ್‍ಓ ಅವರಿಗೊಂದು ದೊಡ್ಡ ಅಡ್ಡಗಾಲು ಎದುರಾಗಿತ್ತು: ಟಿಂಬರ್ ಕಂಟ್ರಾಕ್ಟರ್‍ಗಳ ಊರಿನ ಮತ್ತು ಜಾತಿಯವರಾದ ಕಾನೂನು ಇಲಾಖೆಯ ಒಬ್ಬರು ಬಹುಮುಖ್ಯ ಅಧಿಕಾರಿ, ಸಂಬಂಧಿತ ಪರವಾನಗಿಯ ಫೈಲನ್ನು ಮುಚ್ಚಿಟ್ಟು ರಜಾ ಹಾಕಿದ್ದರು. ತಕ್ಷಣ ನಾವು ಕಾನೂನು ಕಾರ್ಯದರ್ಶಿಯಾಗಿದ್ದ (ಅವರು ಹೈಕೋರ್ಟ್ ನ್ಯಾಯಾಧೀಶರೂ ಹೌದು) ಎನ್.ಡಿ.ವಿ. ಭಟ್ ಅವರ ಗಮನಕ್ಕೆ ಈ ವಿಷಯ ತಂದು ಸುಗಾರ ಅವರಿಗೆ ಪರವಾನಗಿ ಸಿಗುವಂತೆ ಮಾಡಿದೆವು. ಕಂಟ್ರಾಕ್ಟರುಗಳು ರೈಲಿನಲ್ಲಿ ದಿಲ್ಲಿ ತಲುಪುವ ಮೊದಲೇ ಸುಗಾರ ವಿಮಾನದಲ್ಲಿ ಹೋಗಿ, ಸುಪ್ರೀಂ ಕೋರ್ಟಿನಿಂದಲೂ ತಡೆಯಾಜ್ಞೆ ತಂದರು. ಕೇಸು ಪುನಃ ಹೈಕೋರ್ಟಿಗೆ ರವಾನೆಯಾಗಿತ್ತು.

ಇದನ್ನು ಓದಿದ್ದೀರಾ? ತೇಜಸ್ವಿ ನೆನಪು | ಅವರಂತೆ ಸ್ವ ವಿಮರ್ಶೆ ಮಾಡಿಕೊಳ್ಳುವ ಲೇಖಕರು ಈಗ ಯಾರಿದ್ದಾರೆ?

ಕೋರ್ಟ್ ಹೋರಾಟದ ಜೊತೆಜೊತೆಗೇ ಸ್ಥಳೀಯವಾಗಿಯೂ ಎಡೆಬಿಡದೆ ಹೋರಾಟಗಳನ್ನು ಮಾಡಿದೆವು. ಸುತ್ತಮುತ್ತಲ ಊರುಗಳ ಜನರಲ್ಲದೆ ಇಡೀ ಜಿಲ್ಲೆಯ ಹಾಗೂ ಶಿವಮೊಗ್ಗದ ಪರಿಸರಾಸಕ್ತರೂ ಜೊತೆಗೂಡಿ ಬಂದರು. ಗೋವಿಂದ ಗೌಡರೂ ಒಳ್ಳೆಯ ಸಾಥ್ ನೀಡಿದರು. ಮುಂದೆ ಲಂಕೇಶರು ‘ಪ್ರಗತಿ ರಂಗ’ ಸ್ಥಾಪಿಸಿದಾಗ ನಾವೆಲ್ಲ ಮಿತ್ರರು ಸೇರಿಕೊಂಡು ನಮ್ಮ ವಿಧಾನ ಸಭಾ ಕ್ಷೇತ್ರದ ಮೂರೂ ತಾಲೂಕುಗಳಲ್ಲಿ ಎರಡು ದಿನ 13 ಕಡೆ ಸಭೆಗಳನ್ನು ಏರ್ಪಡಿಸಿದೆವು. ಆಗ ಲಂಕೇಶ್, ತೇಜಸ್ವಿ, ರಾಮದಾಸ್ ಇವರೆಲ್ಲ ಕೊಪ್ಪದ ಸಭೆಗೆ ಬಂದವರು ಗುಬ್ಬಗದ್ದೆ ಕಾಡಿಗೂ ಭೇಟಿ ಕೊಟ್ಟು, ಕಾಡು ಕಡಿದಿದ್ದಲ್ಲಿ ಆಗಬಹುದಾಗಿದ್ದ ಅನಾಹುತ ನೋಡಿ ಹೌಹಾರಿದ್ದರು. ಆ ಹೋರಾಟ ಹೈಕೋರ್ಟಿನಲ್ಲಿ ಮತ್ತೆಯೂ ಮೂರ್ನಾಲ್ಕು ವರ್ಷ ಎಳೆದಾಡಿತು. ಕೊನೆಗೆ ಕಂಟ್ರಾಕ್ಟರುಗಳು ಒಬ್ಬೊಬ್ಬರಾಗಿ ಮರಣ ಹೊಂದಿದರು. ಕೇಸು ಬಿದ್ದುಹೋಯಿತು.

ಅಂದು ಬದುಕುಳಿದ ಕಾಡು ಇಂದೂ ನಳನಳಿಸುತ್ತ ನಿಂತಿದೆ. ಗುಬ್ಬಗದ್ದೆ ಹಳ್ಳ ಅಂದಿನಂತೆಯೇ ಸ್ವಚ್ಛ ನೀರಿನಿಂದ ಜುಳುಜುಳು ಹರಿಯುತ್ತ ರೈತರನ್ನು ಕಾಪಾಡುತ್ತಿದೆ. ದಿ. ರಾಜೇಶ್ವರಿಯವರು ತೇಜಸ್ವಿ ಕುರಿತ ತಮ್ಮ ನೆನಪಿನ ಬುತ್ತಿಯಲ್ಲಿ ಈ ಕಾಡಿನ ಹೋರಾಟದ ಬಗ್ಗೆ ಉಲ್ಲೇಖಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
7 ವೋಟ್
eedina app