ಪಠ್ಯಪುಸ್ತಕ ಪರಿಷ್ಕರಣೆ ಹೊಸ ಶಿಕ್ಷಣ ನೀತಿಯ ಶಿಫಾರಸುಗಳಿಗೆ ಅನುಗುಣವಾಗಿಲ್ಲ (ಭಾಗ1): ಪುರುಷೋತ್ತಮ ಬಿಳಿಮಲೆ

school students

ಪಠ್ಯ ಪರಿಷ್ಕರಣೆ ಎಂಬುದು ಹೊಸ ಶಿಕ್ಷಣ ನೀತಿಯ ಶಿಫಾರಸುಗಳಿಗೆ ಅನುಗುಣವಾಗಿರಬೇಕು. 2014ರಲ್ಲಿ ಬರಗೂರು ಅವರು ಪರಿಷ್ಕರಣೆ ಮಾಡಿದ್ದಾರೆ, ನಾವೂ ಮಾಡುತ್ತೇವೆ ಎಂಬುದಲ್ಲ. ಅದರಿಂದಾಗಿ ಹಣ ವ್ಯರ್ಥ, ಅನಗತ್ಯ ಜಗಳ. ಇದನ್ನು ತಪ್ಪಿಸಬೇಕಾದರೆ ಸರ್ಕಾರ ಸುದೀರ್ಘ ಯೋಜನೆ ಮಾಡಿ ಹೊಸ ಶಿಕ್ಷಣ ನೀತಿಯ ಶಿಫಾರಸುಗಳನ್ನು ಪಾಲಿಸಬೇಕು.

ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಸರ್ಕಾರ ಸಾಕಷ್ಟು ಸಿದ್ಧತೆ ಮಾಡದೇ ಗಡಿಬಿಡಿ ಮಾಡಿಕೊಂಡಂತೆ ಅನ್ನಿಸುತ್ತಿದೆ. ದೇಶದ ಬೇರೆ ಯಾವ ರಾಜ್ಯಗಳೂ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿಲ್ಲ. ಯಾಕೆಂದರೆ ಹೊಸ ಶಿಕ್ಷಣ ನೀತಿಯ ಶಿಫಾರಸುಗಳನ್ನು ಜಾರಿಗೆ ತರಲು ತುಂಬಾ ತಯಾರಿ ಮಾಡಬೇಕಾಗುತ್ತದೆ. ಸಾಕಷ್ಟು ತಯಾರಿ ಮಾಡಿಕೊಂಡ ನಂತರವೇ ಜಾರಿಗೆ ತರಬೇಕು ಎಂದು ಹೊಸ ಶಿಕ್ಷಣ ನೀತಿಯಲ್ಲಿ ಹೇಳಿದೆ. ಇಡೀ ಶಿಕ್ಷಣ ವ್ಯವಸ್ಥೆಯನ್ನು ಪುನಾರಚನೆ ಮಾಡಲು ಅದು ಸಲಹೆ ಕೊಡುತ್ತದೆ.

ಇವತ್ತು ನಾವು 21ನೇ ಶತಮಾನದ ಎರಡನೇ ದಶಕದಲ್ಲಿ ಮುನ್ನಡೆಯುತ್ತಿದ್ದೇವೆ. ಈ ಕಾಲಘಟ್ಟದಲ್ಲಿ ಜಗತ್ತು ಅನೇಕ ಬಗೆಯ ಬದಲಾವಣೆಗಳನ್ನು ಕಾಣುತ್ತಿದೆ. ಹೀಗೆ ನಮ್ಮ ಕಾಲದಲ್ಲಿ ನಡೆಯುತ್ತಿರುವ ಬದಲಾವಣೆಗಳಲ್ಲಿ ಜಾಗತೀಕರಣ ಬಹಳ ಮುಖ್ಯ ಸಂಗತಿ. ಮೂಲತಃ ಇದು ಆರ್ಥಿಕತೆಗೆ ಸಂಬಂಧಿಸಿ ಒಂದು ಪದ. 1990ರ ದಶಕದಲ್ಲಿ ಪಿ.ವಿ. ನರಸಿಂಹರಾವ್‌ ಮತ್ತು ಮನಮೋಹನ್‌ ಸಿಂಗ್‌ ಅವರ ಮೂಲಕ ಜಾರಿಗೆ ಬಂದ ಜಾಗತೀಕರಣ ಪ್ರಕ್ರಿಯೆಯು, ಕಳೆದ 30 ವರ್ಷಗಳಲ್ಲಿ  ಜಗತ್ತಿನ ಚಿಂತನಾ ಕ್ರಮ, ಆರ್ಥಿಕ ಸಂಬಂಧಗಳನ್ನು, ಸಾಮಾಜಿಕ ರೀತಿ ನೀತಿಗಳನ್ನು, ಶಿಕ್ಷಣ ಸಂಸ್ಥೆಗಳನ್ನು ಅಮೂಲಾಗ್ರವಾಗಿ ಬದಲಾಯಿಸಿದೆ. ಈ ಜಾಗತೀಕರಣದ ಒಟ್ಟಿಗೆ ಬಳಕೆಗೆ ಬಳಕೆಗೆ ಬಂದ ಎರಡು ಪದಗಳೆಂದರೆ ಕೈಗಾರಿಕೀಕರಣ ಮತ್ತು ಖಾಸಗೀಕರಣ.

ಸಮಾಜವಾದ ಸಿದ್ಧಾಂತದ ಪ್ರಕಾರ ಒಂದು ದೇಶ ಏನನ್ನು ಉತ್ಪಾದನೆ ಮಾಡುತ್ತೋ ಅದನ್ನು ದೇಶದ ನಾಗರಿಕರಿಗೆ ಸಮಾನವಾಗಿ ಹಂಚಲು ಪ್ರಯತ್ನಿಸಬೇಕು. ಸಾಧ್ಯವಾಗುತ್ತೋ ಇಲ್ಲವೋ ಅದು ಬೇರೆ ಪ್ರಶ್ನೆ. ಅದೊಂದು ಕನಸು. ಆ ಕನಸನ್ನು ನನಸಾಗಿಸುವತ್ತ ಚಲಿಸಬೇಕು. ಎಲ್ಲ ನಾಗರಿಕರು ಬೆಳವಣಿಗೆ ಆಗಬೇಕು ಎಂದು ಸಮಾಜವಾದ ಹೇಳುತ್ತದೆ. 1947ರ ನಂತರದ ಭಾರತ ನೆಹರೂ ಅವರ ನೇತೃತ್ವದಲ್ಲಿ ಈ ಬಗೆಯ ಸಮಾಜವಾದವನ್ನು ಅಂಗೀಕರಿಸಿತು. ʼಸಮಾಜವಾದದ ಕಡೆ ಚಲಿಸುವುದು ನಮ್ಮ ಗುರಿ, ಅದೊಂದು ಆದರ್ಶʼ ಎಂದು ನೆಹರೂ ಸ್ಪಷ್ಟವಾಗಿ ಹೇಳಿದ್ದರು. ಅದಕ್ಕೆ ಬೇಕಾದ ಆರ್ಥಿಕ ನೀತಿ, ಪಂಚವಾರ್ಷಿಕ ಯೋಜನೆಗಳು, ಪ್ರಗತಿಯ ಪರಿಕಲ್ಪನೆ, ಅಭಿವೃದ್ಧಿಯ ಪರಿಕಲ್ಪನೆಗಳನ್ನು ಜಾರಿಗೆ ತಂದರು. ಅದರಲ್ಲಿ ಎಷ್ಟು ಯಶಸ್ವಿಯಾದರು, ಸೋತರು ಎಂಬುದು ಪ್ರತ್ಯೇಕ ಸಂಗತಿ.

ಆದರೆ 1990ರ ದಶಕದಲ್ಲಿ ಜಾರಿಗೆ ಬಂದ ಜಾಗತೀಕರಣವು ʼಸಮಾಜವಾದʼ ಎಂಬ ಪದವನ್ನು ತೊಡೆದು ಹಾಕಿ ಖಾಸಗೀಕರಣಕ್ಕೆ ಎಡೆಮಾಡಿಕೊಟ್ಟಿತು. ಈ ಖಾಸಗೀಕರಣ ಸರ್ಕಾರದ ಸಮ್ಮತಿ ಪಡೆದುಕೊಂಡು ದೇಶದ ಸಂಪತ್ತನ್ನು ಕೆಲವೇ ಮಂದಿಯಲ್ಲಿ ಕ್ರೋಢೀಕರಿಸುತ್ತದೆ. ಇದರ ಪರಿಣಾಮವಾಗಿ ಜಗತ್ತಿನ 15-16 ಕಂಪನಿಗಳು ಇಡೀ ಜಗತ್ತಿನ ಆರ್ಥಿಕತೆಯನ್ನು ನಿಯಂತ್ರಿಸುತ್ತಿವೆ. ಈ ಕ್ರೋಢೀಕರಣದ ಸಂದರ್ಭದಲ್ಲಿ ಸಮಾಜಕ್ಕೆ ಮತ್ತು ಸರ್ಕಾರಕ್ಕೆ ಕೊಡುವ ಆಶ್ವಾಸನೆ ಏನೆಂದರೆ, ನಾವು ಸಮಾಜದ ಅಭಿವೃದ್ಧಿಗೆ ಸಹಾಯ ಮಾಡುತ್ತೇವೆ ಎಂಬುದು. ಅಂದರೆ ಸರ್ಕಾರದ ಜವಾಬ್ದಾರಿಯನ್ನು ಖಾಸಗಿಯವರು ಹೊತ್ತುಕೊಂಡಂತೆ. ಇತ್ತೀಚೆಗೆ ಗೌತಮ್‌ ಅದಾನಿಯವರು ಭಾರತದ ಬಡತನ ತೊಡೆದು ಹಾಕುವುದಾಗಿ ಹೇಳಿದ್ರು. ಇದು ಸರ್ಕಾರದ ಜವಾಬ್ದಾರಿ ಹೊತ್ತುಕೊಂಡಂತೆ. ಆದರೆ, ಸರ್ಕಾರದ ಜವಾಬ್ದಾರಿ ಹೊತ್ತುಕೊಂಡ ಖಾಸಗಿಯವರು ಬಡತನ ತೊಡೆದು ಹಾಕಿರುವುದಕ್ಕೆ ಯಾವುದೇ ಸಾಕ್ಷಿ ಇಲ್ಲ.

2020ರ ಮಾರ್ಚ್‌ ನಂತರ ಕಂಡುಬಂದ ಘನಘೋರ ಕೊರೊನಾ ಗಂಡಾಂತರದಲ್ಲಿ ದೊಡ್ಡದೊಡ್ಡ ಕಂಪನಿಗಳು ಬಾಗಿಲು ಹಾಕಿದವು. ಕೋಟ್ಯಂತರ ಜನ ಸತ್ತರು. ಹೆಣ ಸುಡಲೂ ಜಾಗ ಇರಲಿಲ್ಲ. ಅಂತಹ ಇಕ್ಕಟ್ಟಿನ ಸಂದರ್ಭದಲ್ಲಿ ಹಲವರು ಕೆಲಸ ಕಳೆದುಕೊಂಡರು. ಹೆಚ್ಚಿನ ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಮಾಡಿ ಉತ್ಪಾದನೆಯನ್ನು ಹೆಚ್ಚಿಸಿಕೊಂಡವು. ಎರಡು ವರ್ಷದ ನಂತರ ಬಂದು ಆಡಿಟ್‌ನ ಪ್ರಕಾರ ಬಹುರಾಷ್ಟ್ರೀಯ ಕಂಪನಿಗಳು ಕೊರೊನಾದಿಂದ ಗಂಭೀರ ಆಪತ್ತಿಗೆ ಒಳಗಾಗಿವೆ. 90ರ ದಶಕದ ಆರ್ಥಿಕತೆ ಖಾಸಗೀಕರಣಗೊಂಡು, ಕೆಲವರ ಬಳಿ ಸಂಪತ್ತಿನ ಕ್ರೋಢೀಕರಣ ಆಗಿ ಸಾಮಾಜಿಕವಾಗಿ ಹೆಚ್ಚು ಪ್ರಯೋಜನ ಮಾಡದೇ ಇರುವ ಕಾರಣ ಬಡತನ ಹೆಚ್ಚಾಯಿತು. 1992ರಿಂದ 2017ರವರೆಗಿನ ಭಾರತೀಯ ಅಂಕಿಅಂಶಗಳನ್ನು ನೋಡಿದರೆ 7 ಲಕ್ಷದಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಭಾರತೀಯ ಇತಿಹಾಸದಲ್ಲಿಯೇ ಹೆಚ್ಚು. ಯಾವ ಉದ್ದೇಶ ಇಟ್ಟುಕೊಂಡು ಭಾರತ ಸೇರಿದಂತೆ ಹಲವು ದೇಶಗಳು ಜಾಗತೀಕರಣ ಪ್ರಕ್ರಿಯೆಯನ್ನು ಜಾರಿಗೆ ತಂದವೋ ಅದು ನಿರ್ಧಿಷ್ಟವಾದ, ಉದ್ದೇಶಿತ ಪರಿಣಾಮ ಬೀರಲಿಲ್ಲ ಎಂಬುದು ಸ್ಪಷ್ಟ.

Image
NEP

ಆದರೆ, ನಮ್ಮ ಆರ್ಥಿಕ ಪ್ರಕ್ರಿಯೆ ಸಾಂಸ್ಕೃತಿಕ, ಶೈಕ್ಷಣಿಕ ಪರಿಭಾಷೆಯನ್ನು ಬದಲಿಸಿತು. ಅದು ಆರ್ಥಿಕಕ ಪದವಾಗಿದ್ದರೂ ಅದು ನಮ್ಮ ಸಾಂಸ್ಕೃತಿಕ ಸಾಹಿತ್ಯಕ, ಶೈಕ್ಷಣಿಕ ಕ್ಷೇತ್ರಕ್ಕೆ ಪ್ರವೇಶಿಸಿದೆ. 2007ರಲ್ಲಿ ಪೂನಾ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಆಗಿದ್ದ ಭೂಷಣ್‌ ಪಟವರ್ಧನ್‌ ಅವರ ನೇತೃತ್ವದಲ್ಲಿ ಭಾರತೀಯ ಶಿಕ್ಷಣ ಪದ್ಧತಿಯನ್ನು ಅಮೂಲಾಗ್ರವಾಗಿ ಬದಲಾಯಿಸಲು ಒಂದು ಸಮಿತಿ ರಚಿಸಲಾಯಿತು. ಅಲ್ಲಿ ನಾನೂ ಸ್ವಲ್ಪ  ಕಾಲ ಸದಸ್ಯನಾಗಿದ್ದೆ. ಆ ಸಮಿತಿ ಜಾಗತಿಕ ಸಂದರ್ಭಕ್ಕೆ ಅನುಗುಣವಾಗಿ ಶಿಕ್ಷಣ ಕ್ಷೇತ್ರವನ್ನು ಸಜ್ಜುಗೊಳಿಸಲು ಮೂರು ನಿರ್ಣಯಗಳನ್ನು ಯುಜಿಸಿಗೆ ಶಿಫಾರಸು ಮಾಡಿತು.

ಮೊದಲನೆಯದು ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸುವುದು. ವಿದೇಶಿ ವಿಶ್ವವಿದ್ಯಾಲಯದ ವಿದ್ಯಾಥಿಗಳು ಬಂದು ಕಲಿಯುವ ವಾತಾವರಣ ನಿರ್ಮಾಣವಾಗಬೇಕು. ಜಾಗತೀಕರಣದ ಒಂದು ಭಾಗವಿದು. ಇದರ ಭಾಗವಾಗಿ ದೆಹಲಿ ಅನೇಕ ವಿಶ್ವವಿದ್ಯಾಲಯದಲ್ಲಿ ಈಗಾಗಲೇ ಪಾಶ್ಚಾತ್ಯ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಜೆ ಎನ್‌ಯುನಲ್ಲಿ ಒಂದೂವರೆ ಸಾವಿರ ವಿದೇಶಿ ವಿದ್ಯಾರ್ಥಿಗಳು ಇದ್ದಾರೆ. ಅಶೋಕ ವಿಶ್ವವಿದ್ಯಾಲಯ, ಜಾಮಿಯಾದಲ್ಲಿ ಈ ಪ್ರಕ್ರಿಯೆ ಈಗಾಗಲೇ ನಡೆದಿದೆ. ಶಾಂತಿನಿಕೇತನದಲ್ಲಿ ʼಸ್ಟಡಿ ಅಬ್ರಾಡ್‌ ಪ್ರೋಗ್ರಾಂʼ ಭಾಗವಾಗಿ ಬೇರೆ ಬೇರೆ ದೇಶದ ವಿದ್ಯಾರ್ಥಿಗಳು ಒಂದು ಸೆಮಿಸ್ಟರ್‌ ಓದುತ್ತಿದ್ದಾರೆ. ನಮ್ಮ  ವಿವಿಗಳಲ್ಲಿ ವಿದೇಶದ ವಿದ್ಯಾರ್ಥಿಗಳ ಹಾಜರಾತಿ ಇರಬೇಕು. ಹಾಗಿರುವಾಗ ಅದಕ್ಕೆ ಅನುಗುಣವಾಗಿ ನಮ್ಮ ಗುಣಾಂಕ, ಮೌಲ್ಯ ಮಾಪನ ಅಂತರರಾಷ್ಟ್ರೀಯ ಗುಣಮಟ್ಟದ್ದಾಗಿರಬೇಕು. ನಾನು ಒಂದು ವಿವಿಯಲ್ಲಿ ಪಾಠ ಮಾಡುತ್ತಾ ಒಬ್ಬನಿಗೆ ಗುಣಾಂಕ ಕೊಟ್ಟರೆ ಅದನ್ನು ಆತ ಯಾವ ವಿವಿಯಿಂದ ಬಂದಿರುತ್ತಾನೋ, ಅದು ಕೊಲಂಬಿಯಾ, ಟೋಕಿಯೋ, ಮಾಸ್ಕೊ, ಷಿಕಾಗೋ ಇರಬಹುದು ಅಲ್ಲಿಗೆ ಸ್ವೀಕಾರ ಆಗಬೇಕು. ಅಂತರರಾಷ್ಟ್ರೀಯ ಮಟ್ಟದ ಪಠ್ಯ ಕ್ರಮ, ಮೌಲ್ಯಮಾಪನ, ಗ್ರೇಡ್‌ ಇತ್ಯಾದಿಗಳನ್ನು ತರುವುದು ಇದರ ಉದ್ದೇಶ. ಅದನ್ನು ಈಗಾಗಲೇ ಭಾರತದ ಕೆಲವು ಕಡೆ ತರಲಾಗಿದೆ.  

ಎರಡನೆಯದು ಜಾಯಿಂಟ್‌ ಪ್ರೋಗ್ರಾಂ. ಭಾರತದ ಒಂದು ವಿವಿ ಮತ್ತು ವಿದೇಶದ ಒಂದು ವಿವಿ ಜಂಟಿಯಾಗಿ ಪದವಿ ನೀಡುವುದು ಇದರ ಉದ್ದೇಶ. ಒಬ್ಬ ವಿದ್ಯಾರ್ಥಿ ಒಂದು ಸೆಮಿಸ್ಟರ್‌ ಒಂದು ದೇಶದಲ್ಲಿ ಮತ್ತೊಂದು ಸೆಮಿಸ್ಟರ್‌ ಮತ್ತೊಂದು ದೇಶದಲ್ಲಿ ಓದಬಹುದು. ಇದರಿಂದ ಜಾಗತೀಕರಣ ಪ್ರಕ್ರಿಯೆಗೆ ಸುಲಭವಾಗುತ್ತದೆ. ಬೇರೆ ಸಂಸ್ಕೃತಿಯ ಪರಿಚಯವೂ ಆಗುತ್ತದೆ. ಇದು ಈಗಾಗಲೇ ಜಾರಿಗೆ ಬಂದಿದೆ. ಮೂರನೆಯದು ವಿಶೇಷ ಶೈಕ್ಷಣಿಕ ವಲಯಗಳ ಸ್ಥಾಪನೆ. ಅದಿನ್ನೂ ಜಾರಿಯಾಗಿಲ್ಲ.

ಸರ್ಕಾರಕ್ಕೆ ಸ್ಪಷ್ಟತೆ ಇಲ್ಲ

1990ರ ನಂತರ ಜಾರಿಗೆ ಬಂದ ಶಿಕ್ಷಣದಲ್ಲಿ ಆದ ಅಮೂಲಾಗ್ರ ಬದಲಾವಣೆ ನೋಡಿಕೊಂಡು ಎನ್‌ಇಪಿ ಕೆಲವು ಶಿಫಾರಸುಗಳನ್ನು ಮಾಡಿದೆ. ಅದರಲ್ಲಿ ವಿದ್ಯಾಭ್ಯಾಸ ಕ್ರಮದ ಪುನಾರಚನೆ  ಮಾಡಬೇಕು ಎಂದಿದೆ. ಆದರೆ, ಕರ್ನಾಟಕ ಸರ್ಕಾರ ಈಗ ತರಾತುರಿಯಲ್ಲಿ ಹೊಸ ಪದ್ಧತಿಯನ್ನು ಜಾರಿಗೆ ತಂದಾಗ ಅದು ಶಿಕ್ಷಣ ಪದ್ಧತಿಯನ್ನು ಯಾವ ರೀತಿಯಲ್ಲಿ ಪುನಾರಚಿಸಿದೆ? ಏನು ಯೋಜನೆ ಕೈಗೊಂಡಿದೆ? ಯಾವ ವಿದ್ಯಾವಂತರು, ಶಿಕ್ಷಣ ತಜ್ಞರು ಭಾಗಿಯಾಗಿದ್ದಾರೆ ಎಂಬ ಸ್ಪಷ್ಪತೆ ಇಲ್ಲ.

ಪಠ್ಯಪರಿಷ್ಕರಣೆ ಎಂಬುದು ಹೊಸ ಶಿಕ್ಷಣ ಪದ್ದತಿ ನೀಡಿದ ಶಿಫಾರಸಿಗಳಿಗೆ ಅನುಗುಣವಾಗಿರಬೇಕು. 2014ರಲ್ಲಿ ಬರಗೂರು ಅವರು ಪರಿಷ್ಕರಣೆ ಮಾಡಿದ್ದಾರೆ, ನಾವೂ ಮಾಡುತ್ತೇವೆ ಎಂಬುದಲ್ಲ. ಅದರಿಂದಾಗಿ ಹಣ ವ್ಯರ್ಥ, ಅನಗತ್ಯ ಜಗಳ, ಕೆಟ್ಟ ಹೆಸರು. ಇದನ್ನು ತಪ್ಪಿಸಬೇಕಾದರೆ ಸರ್ಕಾರ ಸುದೀರ್ಘ ಯೋಜನೆ ಮಾಡಿ ಹೊಸ ಶಿಕ್ಷಣ ನೀತಿಯ ಶಿಫಾರಸುಗಳನ್ನು ಪಾಲಿಸಬೇಕು. 5-3-3-4 ಪದ್ಧತಿಗೆ ಅನುಗುಣವಾಗಿ ಪುನಾರಚನೆ ಆಗಬೇಕು. ಪುನಾರಚನೆಗೆ ಅನುಗುಣವಾಗಿ ಪಠ್ಯ ತಯಾರು ಮಾಡಬೇಕು.

ಇದನ್ನು ಓದಿದ್ದೀರಾ? ಪಠ್ಯಪುಸ್ತಕ ವಿವಾದ: ಪಠ್ಯದಲ್ಲಿ ಮಾಯವಾದ ಲಿಂಗಸಮಾನತೆ

ಒಂದು ಜನಪ್ರಿಯ ಸರ್ಕಾರ ಒಂದು ನಿಯಮ ಜಾರಿಗೆ ತಂದಾಗ, ಅದನ್ನು ಒಪ್ಪುವ ಸರ್ಕಾರಗಳು ಅದನ್ನು ಚಾಚೂ ತಪ್ಪದೇ ಪಾಲಿಸಬೇಕು. ಈಗಿನ ಕರ್ನಾಟಕ ಸರ್ಕಾರ ಅದನ್ನು ಮಾಡುತ್ತಿಲ್ಲ. ಗಡಿಬಿಡಿಯಲ್ಲಿ ಹೊಸ ನೀತಿ ಜಾರಿ ಮಾಡುತ್ತಿದ್ದಾರೆ. ಪುನಾರಚನೆ ಎಲ್ಲಿ ಆಗಿದೆ?  ನಾಲ್ಕು ವರ್ಷದ ಪದವಿ ತರಗತಿಯನ್ನು ಬದಲಾವಣೆ ಮಾಡುವಂತೆ ಕೆಲವು ಕಾಲೇಜುಗಳಿಗೆ ತಿಳಿಸಿದ್ದಾರಂತೆ, ಆದರೆ ನಾಲ್ಕು ವರ್ಷದಲ್ಲಿ ಏನು ಪಠ್ಯಕ್ರಮ ಏನು? ಅದಕ್ಕೂ ಹಿಂದಿನ ಮೂರು ವರ್ಷ ಏನು? ಅದಕ್ಕೂ ಹಿಂದಿನ ಮೂರು ವರ್ಷ ಏನು? ಅದಕ್ಕೂ ಹಿಂದಿನ ಐದು ವರ್ಷದ ಪೂರ್ವಪ್ರಾಥಮಿಕದಲ್ಲಿ ಮಗುವಿಗೆ ಏನು ಹೇಳಿಕೊಡುತ್ತೀರಿ ಎಂಬುದು ಯಾರಿಗೂ ಗೊತ್ತಿಲ್ಲ. ಇದಕ್ಕೆಲ್ಲ ಒಳಸಂಬಂಧ ಇದೆ. ಹೊಸ ಶಿಕ್ಷಣ ನೀತಿ 2040ರವರೆಗಿನ ಯೋಜನೆ. ಇದಕ್ಕೆ ಎರಡ್ಮೂರು ವರ್ಷಗಳ ತಯಾರಿ ಬೇಕು. ಗಡಿಬಿಡಿ ಮಾಡಿ ಇಡೀ ಒಂದು ಜನಾಂಗವನ್ನು ಹಾಳು ಮಾಡುತ್ತಿದ್ದೀರಿ. ಹೊಸ ತಲೆಮಾರಿನ ಯುವಜನರನ್ನು ತಪ್ಪು ಹಾದಿಗೆ ಎಳೆಯುತ್ತಿದ್ದೀರಿ. ನಿಮ್ಮ ರಾಜಕೀಯ ಉದ್ದೇಶಕ್ಕೆ ಇಡೀ ಒಂದು ದೊಡ್ಡ ಜನವರ್ಗವನ್ನು ಹಾಳು ಮಾಡುತ್ತಿದ್ದೀರಿ.

ನಮ್ಮ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಪ್ರವೇಶ 25-26% ಇದೆ. ಅದನ್ನು 50% ಮಾಡಬೇಕು ಎಂದು ಹೊಸ ಶಿಕ್ಷಣ ನೀತಿ ಶಿಫಾರಸು ಹೇಳುತ್ತದೆ. ಮಕ್ಕಳ ಸಾಮೂಹಿಕ ಪ್ರವೇಶ ಡಬಲ್‌ ಮಾಡಲು ಸರ್ಕಾರ ಏನು ಕೆಲಸ ಮಾಡಿದೆ? ಆಮೇಲೆ ಹೊಸ ಶಿಕ್ಷಣ ಪದ್ದತಿ ಜಾರಿಗೆ ತರಲು ಇಡೀ ರಾಜ್ಯದ ಎಲ್ಲಾ ಅಧ್ಯಾಪಕರಿಗೆ ಸೂಕ್ತ ತರಬೇತಿ ನೀಡಬೇಕು. ಬಹಳ ಮುಖ್ಯವಾಗಿ ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ತರಬೇತಿ ಅಗತ್ಯವಿದೆ. ಪ್ರಾದೇಶಿಕ ಭಾಷೆಗಳಿಗೆ ಮಹತ್ವ ತಂದುಕೊಡಬೇಕು ಎಂದು ಹೊಸ ಶಿಕ್ಷಣ ನೀತಿ ಶಿಫಾರಸು ಹೇಳುತ್ತದೆ. ಬಹು ಭಾಷೆ ಮಾತನಾಡುವ ಊರಿನಲ್ಲಿ, ಉದಾಹರಣೆಗಾಗಿ ದಕ್ಷಿಣ ಕನ್ನಡ ಮಂಗಳೂರಿನಲ್ಲಿ ಶಾಲೆಗೆ ಹೋಗುವ ಮಗು ತರಗತಿಯಲ್ಲಿ ಕನ್ನಡ ಮಾತನಾಡಿದರೆ, ಶಿಕ್ಷಕರು ಹೊರಗೆ ಹೋದ ತಕ್ಷಣ ತುಳು ಮಾತನಾಡುತ್ತದೆ. ಕುಟುಂಬದವರು ಸಿಕ್ಕಿದರೆ ಅವರವರ ಮನೆ ಭಾಷೆಯಾದ ಹವ್ಯಕ, ಕೊಂಕಣಿ, ಭಾಷೆ, ಅರೆಭಾಷೆಯೋ ಮಾತನಾಡುತ್ತದೆ. ಏನಿಲ್ಲದಿದ್ದರೂ ಕನಿಷ್ಠ ಮೂರು ಭಾಷೆಗಳು ಸಿಗುತ್ತವೆ. ಇಂತಹ ಭಾಷೆಗಳನ್ನು ಶಾಲೆಯ ವಾತಾವರಣದಲ್ಲಿ ಉಳಿಸಬೇಕು ಎಂದು ಹೊಸ ಶಿಕ್ಷಣ ನೀತಿ ಹೇಳುತ್ತದೆ. ಅದಕ್ಕಾಗಿ ಅಧ್ಯಾಪಕರಿಗೆ ತರಬೇತಿಯ ಅಗತ್ಯ ಇದೆ.

(ಮುಂದುವರಿಯಲಿದೆ)

ನಿಮಗೆ ಏನು ಅನ್ನಿಸ್ತು?
0 ವೋಟ್