ಮಡಿ-ಮೈಲಿಗೆ ತುಂಬಿದ ಪಠ್ಯಪುಸ್ತಕಗಳನ್ನು ನಮ್ಮ ಮಕ್ಕಳು ಓದಬೇಕೆ?: ಶಿಕ್ಷಕರೊಬ್ಬರ ಪ್ರಶ್ನೆ

Rohit nag

6ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿನ ಮೈಸೂರು ವಿಭಾಗದ ‘ಕಲೆ, ಸಾಹಿತ್ಯ, ಸಂಗೀತ, ಜಾನಪದ, ನಾಟಕ, ನೃತ್ಯ’ ಉಪಶೀರ್ಷಿಕೆ ಅಡಿಯಲ್ಲಿ ನೀಡಲಾಗಿದ್ದ 8 ಮಂದಿ ವಿವಿಧ ಕ್ಷೇತ್ರಗಳ ದಿಗ್ಗಜರ ಚಿತ್ರಗಳ ಸಾಲಿನಿಂದ ದಲಿತ ಸಾಹಿತಿ ದೇವನೂರ ಮಹಾದೇವ ಅವರ ಚಿತ್ರವನ್ನು ತೆಗೆದು ವಿಜ್ಞಾನಿ ರಾಜರಾಮಣ್ಣ ಅವರ ಚಿತ್ರವನ್ನು ಅಳವಡಿಸಿದ್ದಾರೆ.

ಸಮಾಜದ ವಿವಿಧ ವರ್ಗಗಳ ಪ್ರಾತಿನಿಧ್ಯವಿಲ್ಲದ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯು ಹೇಗೆ ಏಕಮುಖವಾದ, ಪೂರ್ವಾಗ್ರಹ ಪೀಡಿತ ವಿಚಾರಗಳನ್ನೆ ಪಠ್ಯಪುಸ್ತಕದಲ್ಲಿ ತುಂಬುವ ಪ್ರಯತ್ನ ನಡೆಸಿದೆ ಎಂಬುದಕ್ಕೆ ಪಠ್ಯಪುಸ್ತಕದಲ್ಲಿಯೇ ಅನೇಕ ಉದಾಹರಣೆಗಳಿವೆ.

ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿನ ‘ಪುನರ್ ಪರಿಷ್ಕರಣೆ ಕುರಿತು’ ಎಂಬ ಭಾಗದಲ್ಲಿ ಪಠ್ಯಪುಸ್ತಕದ ಆಶಯದ ಬಗೆಗೆ ಆದರ್ಶಪೂರ್ಣ ಮಾತುಗಳನ್ನೆ ಬರೆಯಲಾಗಿದೆ. “ಸಮಾಜದ ವಿವಿಧ ವರ್ಗ-ಸಮುದಾಯಗಳಲ್ಲಿ ಪರಸ್ಪರ ಅಪನಂಬಿಕೆ, ದ್ವೇಷ, ತಾತ್ಸಾರಗಳನ್ನು ಹರಡುವಂತಿರಬಾರದು. ಸ್ವಹಿತಾಸಕ್ತಿಯ ಯಾವ ಸಿದ್ಧಾಂತಗಳಿಗೂ ಜಾಗ ಕೊಡಕೂಡದು. ಅರ್ಧಸತ್ಯ, ಅಸತ್ಯ, ಉತ್ಪ್ರೇಕ್ಷೆ, ನಿರ್ಣಯ ಮುಂತಾದವನ್ನು ಕೈಬಿಟ್ಟು ಅಧಿಕೃತ ಆಧಾರಗಳಿರುವ ಸಂಗತಿಗಳನ್ನಷ್ಟೆ ಮುಂದಿಡಬೇಕು. ಎಲ್ಲ ವಿಷಯಗಳಿಗೆ ತಕ್ಕ ಪ್ರಾತಿನಿಧ್ಯ ಕೊಡಬೇಕು” ಇತ್ಯಾದಿ ಅಂಶಗಳನ್ನು ಪುನರ್ ಪರಿಷ್ಕರಣಾ ಸಮಿತಿಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಪುಸ್ತಕದ ಆರಂಭದಲ್ಲಿಯೇ ಬರೆದಿದ್ದಾರೆ. ಈ ಆಶಯಗಳು ಪಠ್ಯಪುಸ್ತಕಗಳಲ್ಲಿ ಎಷ್ಟರ ಮಟ್ಟಿಗೆ ಪ್ರತಿಫಲನಗೊಂಡಿವೆ ಎಂಬುದನ್ನು ಪರಿಶೀಲಿಸಿದರೆ ತಮ್ಮ ಆಶಯವನ್ನು ತಾವೇ ಮುರಿದಿರುವುದು ನಿಚ್ಚಳವಾಗಿ ಗೋಚರಿಸುತ್ತದೆ.

6ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಪಠ್ಯ ಪುಸ್ತಕಗಳನ್ನು ಅವಲೋಕಿಸುತ್ತಾ ಹೊರಟರೆ, ಸಮಿತಿಯು ಅನುಸರಿಸಿರುವ ಮಡಿ ಮೈಲಿಗೆಯ ಕರ್ಮಕಾಂಡವೇ ಬಿಚ್ಚಿಕೊಳ್ಳುತ್ತದೆ. ಇದೇ ಪಠ್ಯ ಪುಸ್ತಕದ ಭಾಗ-1ರ (ಪುಟ: 14ರಲ್ಲಿ) ಸರ್. ಎಂ. ವಿಶ್ವೇಶ್ವರಯ್ಯ ಅವರ ಚಿತ್ರವಿದೆ. ಪುನಃ ಪುಟ 22ರ ಪಠ್ಯದಲ್ಲಿ ಬರಗೂರು ರಾಮಚಂದ್ರಪ್ಪ ಅವರ ಕಾಲದ ಸಮಿತಿಯು ಹಾಕಿದ್ದ ಟಿಪ್ಪುಸುಲ್ತಾನನ ಚಿತ್ರವನ್ನು ತೆಗೆದು ವಿಶ್ವೇಶ್ವರಯ್ಯನವರ ಚಿತ್ರವನ್ನೇ ಅಳವಡಿಸಿದ್ದಾರೆ. ಟಿಪ್ಪುವಿನ ಚಿತ್ರ ಹೋದರೆ ಹೋಗಲಿ, ಅವನ ಕುರಿತು ಬರೆದಿದ್ದ ವಾಕ್ಯಗಳನ್ನೂ ಕತ್ತರಿಸಿದ್ದಾರೆ. “ಬ್ರಿಟಿಷರ ವಿರುದ್ಧ ಅನೇಕ ಹೋರಾಟಗಳನ್ನು ಟಿಪ್ಪು ನಡೆಸಿದನು. ಫ್ರೆಂಚರ ಜೊತೆಯಲ್ಲಿ ಸಹಾಯಕ್ಕೆ ಸಂಧಾನ ನಡೆಸಿ ಬ್ರಿಟಿಷರನ್ನು ದೇಶದಿಂದ ಹೊರಹಾಕಲು ಟಿಪ್ಪುಸುಲ್ತಾನ್ ಪ್ರಯತ್ನಿಸಿದ. ಟಿಪ್ಪು ಅನೇಕ ಜನಪರ ಕಾರ್ಯಗಳನ್ನು ಕೈಗೊಂಡನು” ಎಂಬ ಸಾಲುಗಳನ್ನು ತೆಗೆದು “ಅರಸರು ದುರ್ಬಲರಾಗಿದ್ದರು ಆ ಸಮಯದಲ್ಲಿ ಸೇನಾಪತಿಯಾಗಿದ್ದ ಹೈದರಾಲಿಯು ಆಳ್ವಿಕೆಯನ್ನು ಅಕ್ರಮವಾಗಿ ವಶಪಡಿಸಿಕೊಂಡ. ಅವನು ಮತ್ತು ಅವನ ಮಗ ಟಿಪ್ಪೂಸುಲ್ತಾನ್ 1761-1799ರವರೆಗೆ ಆಡಳಿತ ನಡೆಸಿದರು” (ಪುಟ 22) ಎಂದು ವಿಷಯವನ್ನೇ ತೆಳುಗೊಳಿಸಿರುವುದರ ಹಿಂದೆ ಸ್ವಹಿತಾಸಕ್ತಿ ಇಲ್ಲವೇ? ಟಿಪ್ಪು ಕುರಿತು ಮೊದಲಿನ ಬರಹದಲ್ಲಿದ್ದ ಅರ್ಧಸತ್ಯವಾದರೂ ಏನು?

Image
ಟಿಪ್ಪು ಸುಲ್ತಾನ್‌ ಚಿತ್ರ ತೆಗೆದು ವಿಶ್ವೇಶ್ವರಯ್ಯ ಅವರ ಚಿತ್ರ ಸೇರ್ಪಡೆ
ಟಿಪ್ಪು ಸುಲ್ತಾನ್‌ ಚಿತ್ರ ತೆಗೆದು ವಿಶ್ವೇಶ್ವರಯ್ಯ ಅವರ ಚಿತ್ರ ಸೇರ್ಪಡೆ

ಪಠ್ಯದಲ್ಲಿ ಮಡಿ ಮೈಲಿಗೆ ಧೋರಣೆ!

ಪುನರ್ ಪರಿಷ್ಕರಣಾ ಸಮಿತಿಯ ಮಡಿ, ಮೈಲಿಗೆಯ ಧೋರಣೆ ಎಂತಹದ್ದು ಎಂಬುದಕ್ಕೆ ಹಲವು ಉದಾಹರಣೆಗಳಿವೆ.

ಒಂದು: ‘ವಚನ ಚಳವಳಿ’ ಶೀರ್ಷಿಕೆ ಅಡಿಯಲ್ಲಿ ಬರಗೂರರ ಅವಧಿಯಲ್ಲಿ ಹೀಗೆ ಬರೆಯಲಾಗಿತ್ತು- “ಈ ಚಳವಳಿಯಲ್ಲಿ ಎಲ್ಲ ಬಗೆಯ ಅಸಮಾನತೆಗಳನ್ನು ತಿರಸ್ಕರಿಸಲಾಯಿತು. ಅಸ್ಕೃಶ್ಯತೆಯ ವಿರುದ್ಧ ವಚನ ಚಳವಳಿಯು ಯುದ್ಧವನ್ನು ಸಾರಿತು. ಈ ಚಳವಳಿಯ ಭಾಗವಾಗಿ ದಮನಿತ ಸಾಮಾಜಿಕ ವಲಯದ ಅನೇಕ ಪುರುಷರು ಮತ್ತು ಮಹಿಳೆಯರು ವಚನಗಳನ್ನು ಬರೆದರು”. ಇದೇ ಪಠ್ಯವನ್ನು ಚಕ್ರತೀರ್ಥ ಸಮಿತಿಯು “ಈ ಚಳವಳಿಯ ಭಾಗವಾಗಿ ಸಮಾಜದ ಎಲ್ಲ ಸ್ತರದ ಪುರುಷರು ಮತ್ತು ಮಹಿಳೆಯರು ವಚನಗಳನ್ನು ಬರೆದರು” (ಪುಟ 37) ಎಂದು ಸರಳೀಕರಿಸಿದ್ದಾರೆ. ಆ ಮೂಲಕ ವಚನ ಚಳವಳಿಯ ಮೂಲ ಆಶಯವೇ ಮಕ್ಕಳ ಅರಿವಿಗೆ ಧಕ್ಕದಂತೆ ಮಾಡಿದ್ದಾರೆ.

ಎರಡು: (ಪುಟ 37ರಲ್ಲಿ) ‘ದಾಸ ಸಾಹಿತ್ಯ’ ಉಪಶೀರ್ಷಿಕೆ ಅಡಿಯಲ್ಲಿ ಬರಗೂರರ ಅವಧಿಯಲ್ಲಿ ಬರೆದಿದ್ದ  “ಶ್ರೀ ವ್ಯಾಸರಾಯರ ನೇತೃತ್ವದಲ್ಲಿ ದಾಸಕೂಟವನ್ನು ರೂಪಿಸಲಾಯಿತು. ಮಡಿ-ಮೈಲಿಗೆ ಕುರಿತು ತಾರತಮ್ಯದ ಆಚರಣೆಗಳನ್ನು ಇದು ತಿರಸ್ಕರಿಸಿತು... ಜಾತಿ ತಾರತಮ್ಯಗಳನ್ನು ತಮ್ಮ ಕೀರ್ತನೆಗಳಲ್ಲಿ ಟೀಕಿಸಿದರು” ಎಂಬ ವಾಕ್ಯಗಳನ್ನೇ ಈಗ ಕೈಬಿಟ್ಟಿದ್ದಾರೆ. ಯಾಕೆ ಕೈಬಿಟ್ಟಿದ್ದಾರೆ? ಇದು ಅಸತ್ಯವೇ? ಉತ್ಪ್ರೇಕ್ಷೆಯ ಮಾತುಗಳೇ?

ಮೂರು: 6ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿನ ಮೈಸೂರು ವಿಭಾಗದ ‘ಕಲೆ, ಸಾಹಿತ್ಯ, ಸಂಗೀತ, ಜಾನಪದ, ನಾಟಕ, ನೃತ್ಯ’ ಉಪಶೀರ್ಷಿಕೆ ಅಡಿಯಲ್ಲಿ ನೀಡಲಾಗಿದ್ದ 8 ಮಂದಿ ವಿವಿಧ ಕ್ಷೇತ್ರಗಳ ದಿಗ್ಗಜರ ಚಿತ್ರಗಳ ಸಾಲಿನಿಂದ ದಲಿತ ಸಾಹಿತಿ, ಜನಪರ ಚಿಂತಕ ದೇವನೂರು ಮಹಾದೇವ ಅವರ ಚಿತ್ರವನ್ನು ತೆಗೆದು ವಿಜ್ಞಾನಿ ರಾಜರಾಮಣ್ಣ ಅವರ ಚಿತ್ರವನ್ನು ಅಳವಡಿಸಿದ್ದಾರೆ. ಆ ಮೂಲಕ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ತನಗಿರುವ ಮಡಿ ಮೈಲಿಗೆಯ ಪುರೋಹಿತ ಮನೋಭಾವ ಎಂಥದ್ದು  ಎಂಬುದನ್ನು ಜಗಜ್ಜಾಹೀರು ಮಾಡಿದೆ. ಸಾಮಾಜಿಕ ನ್ಯಾಯದಡಿ ಪ್ರಾತಿನಿಧಿಕವಾಗಿ ಇರಿಸಲಾಗಿದ್ದ ದೇವನೂರರ ಚಿತ್ರ ಬದಲಿಸಿರುವುದನ್ನು ಏನನ್ನಬೇಕು? ಇದು ಬ್ರಾಹ್ಮಣ್ಯದ ಮಡಿವಂತಿಕೆಯಲ್ಲದೆ ಮತ್ತೇನು? ಜೊತೆಗೆ, ರಾಜರಾಮಣ್ಣ ತುಮಕೂರು ಜಿಲ್ಲೆಗೆ ಸೇರಿದವರಾದ್ದರಿಂದ ಅವರ ಚಿತ್ರವನ್ನು ಮೈಸೂರು ವಿಭಾಗದ ಬದಲಿಗೆ ಬೆಂಗಳೂರು ವಿಭಾಗದಲ್ಲಿ ಅಳವಡಿಸಬೇಕಾಗಿತ್ತು. ಅಲ್ಲಿಯೂ ತಪ್ಪು ಮಾಡಿದ್ದಾರೆ.

Image
ಬರಗೂರು ಸಮಿತಿ ಅಳವಡಿಸಿದ ದೇವನೂರ ಮಹಾದೇವ ಅವರ ಫೋಟೋ ಅಳವಡಿಸಿತ್ತು
ಬರಗೂರು ಸಮಿತಿ ಅಳವಡಿಸಿದ ದೇವನೂರ ಅವರ ಫೋಟೋ 

ಯಾವ ವೈದಿಕ ಧರ್ಮವನ್ನು ವಿರೋಧಿಸಿ, ಹೊಸ ಪಂಥಗಳನ್ನು ಹುಟ್ಟು ಹಾಕಿದ ಬುದ್ಧಗುರು ಮತ್ತು ಮಹಾವೀರರ ಪಾಠಗಳನ್ನು 6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಈ ಹಿಂದೆ ಸೇರಿಸಲಾಗಿತ್ತು. ಆದರೆ, ಆ ಪಾಠವನ್ನು ಕೈಬಿಡುವುದರ ಮೂಲಕ ‘ಎಲ್ಲ ವಿಷಯಗಳಿಗೆ ತಕ್ಕ ಪ್ರಾತಿನಿಧ್ಯ ಕೊಡಬೇಕು’ ಎಂಬ ತಮ್ಮ ಆಶಯವನ್ನೆ ಚಕ್ರತೀರ್ಥ ಸಮಿತಿ ಜಾಣತನದಿಂದ ಮರೆತಿದೆ. ಇದು ಸಮಾಜದ ವಿವಿಧ ವರ್ಗ-ಸಮುದಾಯಗಳ  ಬಗೆಗಿನ ತಾತ್ಸರವಲ್ಲದೆ ಮತ್ತೇನು?

Image
ದದೇವನೂರ ಅವರ ಫೋಟೋ ತೆಗೆದು ರಾಜಾರಾಮಣ್ಣ ಫೋಟೊ ಅಳವಡಿಸಿರುವುದು
ಚಕ್ರತೀರ್ಥ ಸಮಿತಿ ದೇವನೂರರ ಫೋಟೋ ತೆಗೆದು ರಾಜಾರಾಮಣ್ಣ ಅವರ ಫೋಟೊ ಅಳವಡಿಸಿರುವುದು

ಭಾರತೀಯ ಸಮಾಜದ ಸೌಂದರ್ಯವಿರುವುದೇ ವೈವಿಧ್ಯತೆಯಲ್ಲಿನ ಏಕತೆಯ ಕಾರಣಕ್ಕಾಗಿ. ಈ ವೈವಿಧ್ಯತೆಯ ಪ್ರಾತಿನಿಧ್ಯವೇ ಇಲ್ಲದ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ತನ್ನೊಳಗಿನ ಬ್ರಾಹ್ಮಣ್ಯವನ್ನು ನೆಲೆಗೊಳಿಸುವ ಉನ್ನಾರವೇ ಪ್ರಸ್ತುತ ಪಠ್ಯ ಪುಸ್ತಕಗಳ ಹಿಂದಿರುವ ಆಶಯವಾಗಿದೆ. ಇಂತಹ ಮಡಿ, ಮೈಲಿಗೆಯುಕ್ತ ಪಠ್ಯಪುಸ್ತಕಗಳನ್ನು ಉಳಿದ ಜಾತಿ, ಧರ್ಮದ ಮಕ್ಕಳು ಓದಬೇಕೆ?

ನಾಲ್ಕು: 6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿನ ‘ಗಂಗರ’ ಮನೆತನಕ್ಕೆ ಸಂಬಂಧಿಸಿದ ಪಾಠದಲ್ಲಿ ಈ ಹಿಂದೆ ಗಂಗ ಮನೆತನದ ಸ್ಥಾಪಕ, ರಾಜಧಾನಿ, ಲಾಂಛನಗಳ ಪರಿಚಯದ ಜೊತೆಗೆ ಪ್ರಮುಖ ದೊರೆಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸಲಾಗಿತ್ತು. ಜೊತೆಗೆ ಗಂಗರ ಸಾಂಸ್ಕೃತಿಕ ಕೊಡುಗೆಗಳನ್ನು ಸ್ಮರಿಸಲಾಗಿತ್ತು. ಆದರೆ ಪ್ರಸ್ತುತ ಸಮಿತಿಯು ಅದೆಲ್ಲವನ್ನು ಗೌಣಗೊಳಿಸಿ, ಗೊಮ್ಮಟೇಶ್ವರ ಮತ್ತು ಗುಳುಕಾಯಿ ಅಜ್ಜಿ ಕಥೆಗೆ ಪ್ರಾಧಾನ್ಯತೆ ನೀಡಿದ್ದಾರೆ. ಅಂದರೆ ಇಲ್ಲಿ ಇತಿಹಾಸಕ್ಕೆ ಬದಲಾಗಿ ಪುರಾಣಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ. ವಿಷಯಗಳನ್ನು ಕ್ರಮಬದ್ಧವಾಗಿ, ಕಾಲಪಟ್ಟಿಗನುಗುಣವಾಗಿ ಕೊಡಬೇಕು, ಅನಗತ್ಯ ವಿಷಯಗಳು ತುಂಬಿತುಳುಕಾಡುವ ಮಾಹಿತಿಕೋಶವಾಗಿಸದೆ ಜ್ಞಾನಕೋಶಗಳಾಗಿ ಮಾಡಬೇಕು ಎಂಬ ಪಠ್ಯದ ಆಶಯಕ್ಕೆ ವಿರುದ್ಧವಾಗಿದೆ.

ಐದು: ಹಿಂದಿನ 7ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಯಲಹಂಕ ನಾಡಪ್ರಭುಗಳ ಬಗೆಗೆ ಎರಡು ಪುಟಗಳ ಪರಿಚಯವನ್ನು ಮಾಡಿಕೊಡಲಾಗಿತ್ತು. ಯಲಹಂಕ ನಾಡಪ್ರಭುಗಳ ಆಳ್ವಿಕೆಯು ಬೆಂಗಳೂರು, ರಾಮನಗರ, ತುಮಕೂರು ಮತ್ತು ಅವಿಭಜಿತ ಕೋಲಾರ ಜಿಲ್ಲೆಯ ಕೆಲವು ಪ್ರದೇಶಗಳನ್ನು ಒಳಗೊಂಡಿತ್ತು ಎಂದು ಬರೆಯಲಾಗಿತ್ತು. ಆದರೆ, ಹೊಸ ಪಠ್ಯಪುಸ್ತಕದಲ್ಲಿ ಎರಡು ಪುಟಗಳ ಪಾಠವನ್ನು ಒಂದು ಪುಟಕ್ಕೆ ಇಳಿಸಿದ್ದಾರೆ. ಅಲ್ಲದೆ, ಯಲಹಂಕ ನಾಡಪ್ರಭುಗಳ ಆಳ್ವಿಕೆಯನ್ನು ಬೆಂಗಳೂರು ಜಿಲ್ಲೆಗೆ ಸೀಮಿತಗೊಳಿಸುವ ಮೂಲಕ ಇತಿಹಾಸವನ್ನು ತಿರುಚಲಾಗಿದೆ.

ಆರು: 6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿಯೇ ಕಾಶ್ಮೀರದ ಕಾರ್ಕೋಟ ಸಾಮ್ರಾಜ್ಯದ ಪಠ್ಯದ ಕೊನೆಯ ಭಾಗದಲ್ಲಿ ಹೆಸರಾಂತ ಕವಿಯಾದ ಕಲ್ಹಣನು ಲಲಿತಾಧಿತ್ಯನ ಆಸ್ಥಾನದಲ್ಲಿದ್ದನು ಎಂದು ಬರೆಯಲಾಗಿದೆ. ಲಲಿತಾಧಿತ್ಯನ ಕಾಲ ಸಾ.ಶ. 8ನೇ ಶತಮಾನ. ಕಲ್ಹಣನ ಕಾಲ ಸಾ.ಶ. 12ನೇ ಶತಮಾನ. ಈಗಿರುವಾಗ ಕಲ್ಹಣ ಹೇಗೆ ಲಲಿತಾಧಿತ್ಯನ ಆಸ್ಥಾನದಲ್ಲಿರಲು ಸಾಧ್ಯ? ಇದು ಎಲ್ಲ ಬಗೆಯ ತಪ್ಪುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ತಗ್ಗಿಸಬೇಕು - ಎಂಬ ಆಶಯವನ್ನೇ ಲೇವಡಿ ಮಾಡುವಂತಿದೆ.

ಏಳು: ಸಮಾಜದ ವಿವಿಧ ವರ್ಗ-ಸಮುದಾಯಗಳಲ್ಲಿ ಪರಸ್ಪರ ಅಪನಂಬಿಕೆ, ದ್ವೇಷ, ತಾತ್ಸಾರಗಳನ್ನು ಹರಡುವಂತಿರಬಾರದೆಂಬ ಪಠ್ಯದ ಆಶಯವನ್ನೇ 6ನೇ ತರಗತಿ ಸಮಾಜ ವಿಜ್ಞಾನ ಭಾಗ-2ರಲ್ಲಿ ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ. ಔರಂಗಜೇಬನನ್ನು ಕೊನೆಯ ಮೊಘಲ ಸಾಮ್ರಾಟ ಎಂದು ಬರೆಯಲಾಗಿದೆ. ವಾಸ್ತವವಾಗಿ, ಕೊನೆಯ ಮೊಘಲ್ ದೊರೆ ‘2ನೇ ಬಹದ್ದೂರ್ ಷಾ ಜಫರ್’. ಈತನನ್ನು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರು ರಂಗೂನಿಗೆ ಗಡಿಪಾರು ಮಾಡುತ್ತಾರೆ. ಅಲ್ಲಿಯೇ ಕೊನೆ ಉಸಿರೆಳೆಯುತ್ತಾನೆ.

6ನೇ ತರಗತಿಯ ಸಮಾಜ ವಿಜ್ಞಾನ (ಭಾಗ-2) ಪಠ್ಯಪುಸ್ತಕದಲ್ಲಿನ ಇನ್ನೊಂದು ಮುಖ್ಯವಾದ ದೋಷ ಎಂದರೆ- ಔರಂಗಜೇಬನ ರಾಜಾಜ್ಞೆಯಂತೆ ಅನೇಕ ಮಂದಿರಗಳು ನಾಶವಾದವು. ಅವುಗಳಲ್ಲಿ ಖ್ಯಾತ ಸೋಮನಾಥ ಮಂದಿರ, ಕಾಶಿಯ ಶಿವಮಂದಿರ ಮತ್ತು ಮಥುರೆಯ ಕೃಷ್ಣಮಂದಿರ ಒಳಗೊಂಡಿದ್ದವು ಎಂಬುದಾಗಿದೆ. ಪಠ್ಯಪುಸ್ತಕಗಳು “ಸಮಾಜದ ವಿವಿಧ ವರ್ಗ-ಸಮುದಾಯಗಳಲ್ಲಿ ಪರಸ್ಪರ ಅಪನಂಬಿಕೆ, ದ್ವೇಷ, ತಾತ್ಸಾರಗಳನ್ನು ಹರಡುವಂತಿರಬಾರದು” ಎಂಬ ತಮ್ಮ ಆಶಯದ ಮಾತುಗಳನ್ನೆ ಮರೆತು ಪರಿಷ್ಕರಣಾಕಾರರು ಕೋಮುದ್ವೇಷ ಭಾವನೆಯನ್ನು ಬಿತ್ತುವ ಅಂಶವನ್ನು ತಂದಿದ್ದಾರೆ. ಇದು ಪಠ್ಯಪುಸ್ತಕದ ಶೈಕ್ಷಣಿಕ ಚೌಕಟ್ಟಿನ ಮೂಲ ಆಶಯಕ್ಕೆ ತದ್ವಿರುದ್ಧವಾದುದು ಮಾತ್ರವಲ್ಲ, ಪೂರ್ವಾಗ್ರಹ ಪೀಡಿತವಾದುದು ಎಂದು ಹೇಳಬೇಕು.

ಇದೇ ವಿಷಯವಾಗಿ ಇತಿಹಾಸಕಾರ ಬಿ.ಎನ್.ಪಾಂಡೆ ಅವರು ತಮ್ಮ ‘ಹಿಂದೂ ಮಂದಿರಗಳು ಹಾಗೂ ಔರಂಗಜೇಬನ ಆದೇಶಗಳು’ ಎಂಬ ಸಂಶೋಧನಾ ಪ್ರಬಂಧದಲ್ಲಿ ಔರಂಗಜೇಬನು ಅನೇಕ ಹಿಂದೂ ದೇವಾಲಯಗಳಿಗೆ ನೀಡಿದ ಭೂದಾನದ ಆದೇಶಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ. ಶ್ರದ್ಧಾವಂತ ಮುಸಲ್ಮಾನನಾದ ಔರಂಗಜೇಬನು ಗೋಲ್ಕೊಂಡದ ಜಾಮಿಯ ಮಸೀದಿಯ ದ್ವಂಸಕ್ಕೂ, ಕಾಶಿಯ ವಿಶ್ವನಾಥ ದೇವಾಲಯದ ನಾಶಕ್ಕೂ ಕಾರಣಗಳನ್ನು ನೀಡಿದ್ದಾರೆ.

ಎಂಟು: ಬರಗೂರು ರಾಮಚಂದ್ರಪ್ಪನವರ ಕಾಲದಲ್ಲಿ 7ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದ್ದ ಮಹಿಳಾ ಸಮಾಜ ಸುಧಾರಕಿಯರು ಮತ್ತು ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಪಾಠಗಳನ್ನೆ ಕೈಬಿಡಲಾಗಿದೆ. ಅಧ್ಯಕ್ಷರು ಕನ್ನಡ ಭಾಷಾ ಪಠ್ಯಪುಸ್ತಕಕ್ಕೆ ಬರೆದಿರುವ ಮಾತುಗಳಲ್ಲಿ ಸಾಮಾಜಿಕ ನ್ಯಾಯ ಮತ್ತು ಲಿಂಗಸಮಾನತೆ ಭಾಷಾ ಪಠ್ಯಪುಸ್ತಕಗಳಲ್ಲಿ ಅಗತ್ಯವಿಲ್ಲ ಎಂಬ ಅಜ್ಞಾನವನ್ನೇ ಇಲ್ಲಿಯೂ ಪ್ರದರ್ಶಿಸಿದ್ದಾರೆ.
ಕೊನೆಯದಾಗಿ ಒಂದು ಅಂಶ ಹೇಳಲೇ ಬೇಕು. ಸ್ಥಳೀಯ ಇತಿಹಾಸ ಮತ್ತು ಸಂಸ್ಕೃತಿಗೆ ಇಲ್ಲದಷ್ಟು ಸ್ಥಳಾವಕಾಶವನ್ನು ದೂರದ ಅಸ್ಸಾಮಿನಲ್ಲಿ ಆಳಿದ ಅಹೋಮ್ ರಾಜವಂಶಕ್ಕೆ ಕಲ್ಪಿಸಿಕೊಡಲಾಗಿದೆ. ಇದಕ್ಕೆ ಕಾರಣ ಈ ಮನೆತನದವರು ಮೊಘಲರನ್ನು ಸೋಲಿಸಿದರು ಎಂಬುದೊಂದೇ ಕಾರಣವಾಗಿದೆ.

ಇದನ್ನು ಓದಿದ್ದೀರಾ? ಇನ್ನೆಂದೂ ತಂಟೆಗೆ ಬರಲ್ಲ ಎಂದು ಕ್ಷಮಾಪಣೆ ಪತ್ರ ಬರೆದಿದ್ದ ರೋಹಿತ್‌ ಚಕ್ರತೀರ್ಥ

ಪಕ್ಷ‌ ಪುಸ್ತಕಗಳಾಗಿ ಹೋಗಿವೆ!

ಒಟ್ಟಾರೆ, 6ನೇ ತರಗತಿಯ ಸಮಾಜ ವಿಜ್ಞಾನ ಪುನರ್ ಪರಿಷ್ಕೃತ ಪಠ್ಯ ಪುಸ್ತಕಗಳ ಆಶಯದ ಆದರ್ಶಗಳು ಕೇವಲ ಪುಸ್ತಕದ ಬದನೆಕಾಯಿಯಾಗಿದ್ದು, ಆಶಯಗಳನ್ನೆ ಅಪಹಾಸ್ಯಕ್ಕೀಡು ಮಾಡಿವೆ. “ಸ್ವಹಿತಾಸಕ್ತಿಯ ಯಾವ ಸಿದ್ಧಾಂತಗಳಿಗೂ ಜಾಗ ಕೊಡಕೂಡದು” ಎಂಬುದನ್ನು ಹೇಳುತ್ತಲೇ ಖುಲ್ಲಂಕುಲ್ಲ ಅದೇ ಕೆಲಸವನ್ನು ಮಾಡಿಮುಗಿಸಿದ್ದಾರೆ. ಸಂವಿಧಾನದ ಆಶಯಗಳಾದ ಸಾಮಾಜಿಕ ನ್ಯಾಯ, ಲಿಂಗಸಮಾನತೆಗಳನ್ನು ಗಾಳಿಗೆ ತೂರಲಾಗಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಒಂದು ವರ್ಗದ ಚರಿತ್ರೆಗಷ್ಟೇ ಮನ್ನಣೆ ನೀಡಿ, ಬಹುಸಂಖ್ಯಾತರ ಚರಿತ್ರೆಯನ್ನು ಗೌಣಗೊಳಿಸಿರುವ ಮೇಲ್ವರ್ಗದವರ ಹುನ್ನಾರ ಯಾರಿಗೂ ಅರ್ಥವಾಗದೇ ಇರದು. ಈ ದೃಷ್ಟಿಯಲ್ಲಿ 6 ಮತ್ತು 7ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳು ಈಗ ಪಠ್ಯಪುಸ್ತಕಗಳಾಗಿ ಉಳಿದಿಲ್ಲ; ಪಕ್ಷಪುಸ್ತಕಗಳಾಗಿ ಹೋಗಿವೆ!

ಹೆಸರು ಹೇಳಲಿಚ್ಛಿಸದ ಶಿಕ್ಷಕರು
ನಿಮಗೆ ಏನು ಅನ್ನಿಸ್ತು?
3 ವೋಟ್