ದಿಕ್ಕುತಪ್ಪಿದ ಪಠ್ಯ ಪರಿಷ್ಕರಣೆ ಚರ್ಚೆ, ಆಗಬೇಕಿರುವುದೇನು?

classroom

ಒಬ್ಬ ವ್ಯಕ್ತಿಯ ಸಾಮರ್ಥ್ಯವನ್ನು ವೃದ್ಧಿಸುವುದಕ್ಕಾಗಿ ಶಿಕ್ಷಣ ಬೇಕು. ಆದಾಯ ಗಳಿಸುವ ಸಾಮರ್ಥ್ಯವನ್ನು ವೃದ್ಧಿಸುವುದು ಶಿಕ್ಷಣದ ಒಂದು ಉದ್ದೇಶ. ಗಳಿಸಿದನ್ನು ಬಳಸಿಕೊಂಡು ಹೇಗೆ ಬದುಕಬೇಕೆಂದು ಕಲಿಸುವುದು ಎರಡನೇ ಉದ್ದೇಶ. ಮೊದಲನೆಯದ್ದು ಆದಾಯ ಗಳಿಸುವ ಪರಿಣಿತಿ (ಸ್ಕಿಲ್)ಗೆ ಸಂಬಂಧಿಸಿದರೆ, ಎರಡನೆಯದ್ದು ಮೌಲ್ಯಕ್ಕೆ ಸಂಬಂಧಿಸಿದೆ.

ಕರ್ನಾಟಕ ಸರ್ಕಾರದ ಪಠ್ಯ ಮರುಪರಿಷ್ಕರಣೆ ಸೃಷ್ಟಿಸಿದ ಚರ್ಚೆ ಇಂದು ಶಿಕ್ಷಣ ಬಿಟ್ಟು ಎಡ-ಬಲ ರಾಜಕೀಯ ಐಡಿಯಲಾಜಿ ಕಡೆಗೆ ತಿರುಗಿದೆ. ಶಿಕ್ಷಣದಲ್ಲಿ ಐಡಿಯಲಾಜಿ ಇಲ್ಲ ಅಥವಾ ಐಡಿಯಲಾಜಿಯ ಚರ್ಚೆ ಮುಖ್ಯ ಅಲ್ಲವೆಂದು ವಾದಿಸುವುದು ನನ್ನ ಉದ್ದೇಶವಲ್ಲ. ಸದ್ಯಕ್ಕೆ ಎಡಬಲ ಐಡಿಯಲಾಜಿಯ ಚರ್ಚೆಗಿಂತ ಶಿಕ್ಷಣದ ಉದ್ದೇಶ ಏನು? ಶಿಕ್ಷಣದ ಉದ್ದೇಶವನ್ನು ಈ ಪರಿಷ್ಕರಣೆ ಈಡೇರಿಸುತ್ತದೋ? ಎನ್ನುವ ಚರ್ಚೆ ಮುಖ್ಯವೆಂದು ವಾದಿಸುವುದು ನನ್ನ ಉದ್ದೇಶ.

ಶಿಕ್ಷಣದ ಉದ್ದೇಶ ಏನು, ಅಥವಾ ಶಿಕ್ಷಣ ಯಾಕೆ ಬೇಕು ಎನ್ನುವ ಪ್ರಶ್ನೆಗೆ ಸರಳ ಉತ್ತರ ಇದೆ. ಅದೇನೆಂದರೆ ವ್ಯಕ್ತಿಯ ಸಾಮರ್ಥ್ಯವನ್ನು ವೃದ್ಧಿಸುವುದಕ್ಕಾಗಿ ಶಿಕ್ಷಣ ಬೇಕು ಎನ್ನುವ ಸರಳ ಉತ್ತರ ಇದೆ. ಆದಾಯ ಗಳಿಸುವ ಸಾಮರ್ಥ್ಯವನ್ನು ವೃದ್ಧಿಸುವುದು ಒಂದು ಉದ್ದೇಶ. ಗಳಿಸಿದನ್ನು ಬಳಸಿಕೊಂಡು ಹೇಗೆ ಬದುಕಬೇಕೆಂದು ಕಲಿಸುವುದು ಎರಡನೇ ಉದ್ದೇಶ. ಮೊದಲನೆಯದ್ದು ಆದಾಯ ಗಳಿಸುವ ಪರಿಣಿತಿ (ಸ್ಕಿಲ್)ಗೆ ಸಂಬಂಧಿಸಿದರೆ, ಎರಡನೆಯದ್ದು ಮೌಲ್ಯಕ್ಕೆ ಸಂಬಂಧಿಸಿದೆ. ಶಿಕ್ಷಣದ ಈ ಎರಡು ಉದ್ದೇಶಗಳು ಈಡೇರಿದರೆ ವ್ಯಕ್ತಿಯ ಬದುಕು ಶ್ರೀಮಂತವಾಗಬಹುದೇ? ಇದನ್ನೇ ಇನ್ನೊಂದು ವಿಧದಲ್ಲಿ ಕೇಳುವುದಾದರೆ ಶಿಕ್ಷಣದಿಂದ ವ್ಯಕ್ತಿಯ ‘ದುಡಿದು ಗಳಿಸುವ ಸಾಮರ್ಥ್ಯ’ ವೃದ್ಧಿ ಆದ ಕೂಡಲೇ ಅವರ ಬದುಕಿನ ಸಾಧ್ಯತೆಗಳು ಹೆಚ್ಚಬಹುದೇ ಅಥವಾ ಶಿಕ್ಷಣ ನೀಡಿದ ‘ಮೌಲ್ಯಕ್ಕೆ’ ಅನುಗುಣವಾಗಿ ಶಿಕ್ಷಿತರು ತಮ್ಮ ಬದುಕನ್ನು ಕಟ್ಟಿಕೊಳ್ಳಬಹುದೇ ಈ ಪ್ರಶ್ನೆಗಳಿಗೆ ಸಕಾರಾತ್ಮಕ ಉತ್ತರ ಕಷ್ಟ. ಏಕೆಂದರೆ ನಮ್ಮ ದೇಶದ ಅನುಭವವನ್ನು ನೋಡಿದರೆ ಬದುಕಿನ ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳುವಲ್ಲಿ ಶಿಕ್ಷಣದ ಸಾಮರ್ಥ್ಯಕ್ಕಿಂತ ಹುಟ್ಟಿನಿಂದ ಬಂದ ಅನುಕೂಲಗಳು ಹೆಚ್ಚಿನ ಪ್ರಭಾವ ಬೀರುವುದು ಕಾಣುತ್ತಿದೆ. ಜೊತೆಗೆ ಈಗಾಗಲೇ ನಮ್ಮ ಮುಂದೆ ಕೊಟ್ಟಿಗಟ್ಟಲೆ ಶಿಕ್ಷಿತ ನಿರುದ್ಯೋಗಿಗಳಿದ್ದಾರೆ. ಅಷ್ಟು ಮಾತ್ರವಲ್ಲ  ಭ್ರಷ್ಟಾಚಾರ, ಕೋಮುವಾದ, ಲಿಂಗ, ಜಾತಿ, ಧರ್ಮ, ವರ್ಗ ತಾರತಮ್ಯ ಇತ್ಯಾದಿ ಸಮಾಜದ್ರೋಹಿ ಕೆಲಸಗಳಲ್ಲಿ  ಶಿಕ್ಷಿತರು ಸಕ್ರಿಯವಾಗಿ ಪಾಲುಗೊಳ್ಳುತ್ತಿದ್ದಾರೆ.    

Image
Freedom

ಶಿಕ್ಷಣ ಪ್ರತಿಪಾದಿಸುವ ಮೌಲ್ಯಗಳನ್ನು, ಹುಟ್ಟಿನಿಂದ ಬಂದ ಮೌಲ್ಯಗಳು ದಿನಾ ಉಲ್ಲಂಘಿಸುತ್ತಿರುವುದನ್ನು ನೋಡುತ್ತಿದ್ದೇವೆ. ಹುಟ್ಟಿನಿಂದ ಬಂದ ಮೌಲ್ಯಗಳು ಇಂದು ಕೂಡ ಲಿಂಗ, ಜಾತಿ, ಧರ್ಮ ಅಸಮಾನತೆಗಳನ್ನು ಜೀವಂತ ಇಟ್ಟಿವೆ. ಅಷ್ಟು ಮಾತ್ರವಲ್ಲ ಪಕ್ಷಗಳು ತಮ್ಮ ಸಮೀಪ ದೃಷ್ಟಿಯ ರಾಜಕೀಯ ಲಾಭಕ್ಕಾಗಿ ಜಾತಿ, ಧರ್ಮ ಅಸಮಾನತೆಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿವೆ. ಇವೆಲ್ಲವೂ  ಹೊಸ ಶಿಕ್ಷಣ ನೀತಿಯ ಉದ್ದೇಶಗಳಿಗೆ - ‘ತಳಸ್ತರವನ್ನು ಬೆಂಬಲಿಸುವ (ಈಕ್ವಿಟಿ)’,  ‘ಎಲ್ಲರನ್ನೂ ಒಳಗೊಳ್ಳುವ (ಇನ್‍ಕ್ಲುಸಿವ್)ʼ ಮತ್ತು ‘ಎಲ್ಲರಿಗೂ ಲಭ್ಯವುಳ್ಳ (ಆಕ್ಸೆಸ್)’ ಶಿಕ್ಷಣ ವ್ಯವಸ್ಥೆ ಮತ್ತು ಸಮಾಜವನ್ನು ರೂಪಿಸುವ ಉದ್ದೇಶಗಳಿಗೆ ವಿರುದ್ಧವಾಗಿವೆ. ಇವೇ ಕಾರಣಗಳಿಂದ ವ್ಯಕ್ತಿಯ ಬದುಕುವ ಸಾಧ್ಯತೆಗಳನ್ನು ಶಿಕ್ಷಣ ರೂಪಿಸುವುದಕ್ಕಿಂತ ಹೆಚ್ಚು ಹೊರಗಿನ ಪರಿಸರ ರೂಪಿಸುತ್ತಿವೆ. ಈ 70 ವರ್ಷಗಳಲ್ಲಿ ಶಿಕ್ಷಣ ತನ್ನ ಆದರ್ಶಕ್ಕೆ ಅನುಗುಣವಾಗಿ ಸಮಾಜವನ್ನು ರೂಪಿಸಿದ್ದು ಕಡಿಮೆ ಸಮಾಜ ತನ್ನ (ಬಲಾಢ್ಯರ) ಆಸಕ್ತಿಗೆ ಅನುಸಾರ ಶಿಕ್ಷಣವನ್ನು ರೂಪಿಸಿದ್ದು ಹೆಚ್ಚು. ಈ ಬೆಳವಣಿಗೆಯನ್ನು ದೇಶಿಯತೆ, ಸ್ಥಳೀಯತೆ, ನಮ್ಮ ಪರಂಪರೆ, ನಮ್ಮ ಸಂಸ್ಕೃತಿ ಇತ್ಯಾದಿ ನೆಲೆಯಲ್ಲಿ ಸ್ವೀಕರಿಸುತ್ತಾ ಬಂದಿದ್ದೇವೆ.

ಇಂತಹ ಸಂದರ್ಭದಲ್ಲಿ ಹೊಸ ಶಿಕ್ಷಣ ನೀತಿ ಬಯಸುವ ಎಲ್ಲರನ್ನು ಒಳಗೊಳ್ಳುವ, ತಳಸ್ತರದವರನ್ನು ಬೆಂಬಲಿಸುವ ಮತ್ತು ಎಲ್ಲರಿಗೂ ಲಭ್ಯವಾಗುವ ಶಿಕ್ಷಣ ವ್ಯವಸ್ಥೆ ಮತ್ತು ಸಮಾಜ ರೂಪುಗೊಳ್ಳಬೇಕಾದರೆ ಶಿಕ್ಷಣದ ಉದ್ದೇಶ - ಜ್ಞಾನ ಸೃಷ್ಟಿ ಮತ್ತು ಜ್ಞಾನ ವರ್ಗಾವಣೆ ಆಗಬೇಕು. ಇಲ್ಲಿ ಜ್ಞಾನ ಎಂದರೇನು ಮತ್ತು ಅದರ ಸೃಷ್ಟಿ ಹೇಗಾಗುತ್ತದೆ ಎನ್ನುವ ಎರಡು ಪ್ರಮುಖ ಪ್ರಶ್ನೆಗಳಿವೆ. ಸತ್ಯ ಎಂದು ಸಾಧಿಸಿ ತೋರಿಸಿಬಹುದಾದ ನಂಬಿಕೆಯನ್ನು ಜ್ಞಾನ ಎನ್ನಬಹುದು. ದಿನಿತ್ಯದ ಬದುಕಿನಲ್ಲಿ ಸಾಮಾನ್ಯವಾಗಿ ಯಾವುದನ್ನು ನಾವು ಸತ್ಯವೆಂದು ನಂಬುತ್ತೇವೆ. ಬರುತ್ತೇನೆಂದು ಬಂದಾಗ, ಮಾಡುತ್ತೇನೆಂದು ಮಾಡಿದಾಗ, ಆಗುವುದಿಲ್ಲ ಎನ್ನುವುದು ಆಗದಿರುವಾಗ, ಆಗುತ್ತದೆ ಎನ್ನುವುದು ಆಗುಮಾಡಿದಾಗ ನಂಬಿಕೆ ಸೃಷ್ಟಿ ಆಗುತ್ತದೆ. ಅಂದರೆ ಮಾತು ಮತ್ತು ಕೃತಿ ನಡುವೆ ಸಂಬಂಧ ಏರ್ಪಟ್ಟಾಗ ನಂಬಿಕೆ ಸೃಷ್ಟಿ ಆಗುತ್ತದೆ. ವ್ಯಕ್ತಿಯೊಬ್ಬರಿಗೆ ನಿರ್ಧಿಷ್ಟ ಮಾರ್ಗದಲ್ಲಿ ಸತ್ಯದರ್ಶನ ಆಗಿದೆ ಎನ್ನುವುದನ್ನು ಮತ್ತೊಬ್ಬರು ನಂಬಬೇಕಾದರೆ ಅವರಿಗೂ ಅದೇ ಮಾರ್ಗದಲ್ಲಿ ಸತ್ಯದರ್ಶನ ಆದಾಗ ಸತ್ಯದ ನಂಬಿಕೆ ಸೃಷ್ಟಿ ಆಗುತ್ತದೆ. ಇಲ್ಲಿ ಸತ್ಯದ ಪ್ರತಿಪಾದನೆಯನ್ನು ಪ್ರಶ್ನಿಸುವುದು, ಪರೀಕ್ಷಿಸಿ, ಪ್ರಯೋಗಿಸಿ ತಮಗೂ ಸತ್ಯದರ್ಶನ ಆದ ನಂತರ ಸತ್ಯದ ನಂಬಿಕೆ ಸೃಷ್ಟಿ ಆಗುವುದು ಮುಖ್ಯ. ಅಂದರೆ ಪ್ರಶ್ನೆ, ಪರೀಕ್ಷೆ, ಪ್ರಯೋಗ, ಪರಾಮರ್ಶೆಗಳು ಸತ್ಯದ ನಂಬಿಕೆ ಸೃಷ್ಟಿಯ ಆಧಾರ ಸ್ತಂಭಗಳು.

ಪರೀಕ್ಷೆ, ಪ್ರಯೋಗ, ಪರಾಮರ್ಶೆ ಇವೆಲ್ಲವೂ ಆರಂಭವಾಗುವುದು ಪ್ರಶ್ನೆಯಿಂದ. ಪ್ರಶ್ನೆ ಏಕೆ ಹುಟ್ಟುತ್ತದೆ? ವ್ಯಕ್ತಿಯ ಒಳಗಿನ ಅಥವಾ ಹೊರಗಿನ ಸ್ಥಿತಿಗೆ ಅಥವಾ ಬೆಳವಣಿಗೆಗೆ ಈಗಾಗಲೇ ಇರುವ ವಿವರಣೆ ಸಮಧಾನ ತರದಿದ್ದರೆ ಪ್ರಶ್ನೆ ಹುಟ್ಟುತ್ತದೆ. ಈಗಾಗಲೇ ಇರುವ ವಿವರಣೆ ಸಮಾಧಾನ ತರದಿರಲು ಬಹುಮುಖ್ಯ ಕಾರಣ ವ್ಯಕ್ತಿಯ ಸ್ವತಂತ್ರ ಆಲೋಚನೆ. ಅಂದರೆ ವ್ಯಕ್ತಿಯ ಪ್ರಶ್ನಿಸುವ ಶಕ್ತಿಯ ಬುನಾದಿ ಸ್ವತಂತ್ರ ಆಲೋಚನೆ. ಸ್ವತಂತ್ರ ಆಲೋಚನೆಯನ್ನು ಹತ್ತಿಕ್ಕುವ ಹಲವು ಅಂಶಗಳು ನಮ್ಮಲ್ಲಿ ಕಾರುಬಾರು ಮಾಡುತ್ತಿವೆ. ಅವುಗಳಲ್ಲಿ  ಲಿಂಗ, ಜಾತಿ, ಧರ್ಮ, ವರ್ಗ ತಾರತಮ್ಯಗಳು ಪ್ರಮುಖ. ಇವು ವ್ಯಕ್ತಿ ಸ್ವಾತಂತ್ರ್ಯವನ್ನು ನಾಶ ಮಾಡುವ ಬಹುಮುಖ್ಯ ಅಂಶಗಳು. ಇವುಗಳ ಹಿಡಿತದಿಂದ ಮುಕ್ತವಾದ ಪರಿಸರದಲ್ಲಿ ಸ್ವತಂತ್ರ ಆಲೋಚನೆ ಬೆಳೆದಷ್ಟು ಇವುಗಳ ಹಿಡಿತ ಬಿಗಿಯಾಗಿರುವ ಪರಿಸರದಲ್ಲಿ ಸ್ವತಂತ್ರ ಆಲೋಚನೆ ಬೆಳೆಯಲು ಸಾಧ್ಯವಿಲ್ಲ.

ದಿನನಿತ್ಯದ ಬದುಕಿನಲ್ಲಿ ಎಲ್ಲರೂ ಒಂದಲ್ಲ ಒಂದು ಅನ್ಯಾಯ, ಅಸಮಾನತೆ, ತಾರತಮ್ಯಗಳನ್ನು ಎದುರಿಸುತ್ತಲೇ ಇರುತ್ತಾರೆ. ಇವೆಲ್ಲ ಅನ್ಯಾಯ, ಅಸಮಾನತೆ, ತಾರತಮ್ಯಗಳೆಂದು ವ್ಯಕ್ತಿಗೆ ಅನ್ನಿಸಿದರೆ ಮಾತ್ರ ಪ್ರಶ್ನೆ ಹುಟ್ಟಲು ಸಾಧ್ಯ.ಇವೆಲ್ಲ ಅನ್ಯಾಯ, ಅಸಮಾನತೆ, ತಾರತಮ್ಯಳಾಗಬೇಕಾದರೆ ವ್ಯಕ್ತಿಗೆ ಸಮಾನತೆಯ ಪ್ರಜ್ಞೆ ಇರಬೇಕಾಗುತ್ತದೆ. ತಾನು ಇತರರಿಂದ ಕಡಿಮೆಯಲ್ಲ ಎನ್ನುವ ಪ್ರಜ್ಞೆ ವ್ಯಕ್ತಿಗೆ ಅನ್ಯಾಯ, ಅಸಮಾನತೆಯ ಕಲ್ಪನೆಯನ್ನು ಕಟ್ಟಿಕೊಡುತ್ತದೆ. ಎಲ್ಲ ಕ್ಷೇತ್ರಗಳಲ್ಲೂ (ಸಮಾಜ, ಅರ್ಥ, ರಾಜಕೀಯ, ಸಂಸ್ಕೃತಿಗಳಲ್ಲೂ) ಸಮಾನತೆ ಇದ್ದಾಗ ಮಾತ್ರ ತಾನು ಇತರರಿಂದ ಕಡಿಮೆಯಲ್ಲ ಎನ್ನುವ ಕಲ್ಪನೆ ವ್ಯಕ್ತಿಯ ಪ್ರಜ್ಞೆಯ ಭಾಗವಾಗುವುದು. ಒಂದು ವೇಳೆ ಮೆಲಿನ ಎಲ್ಲ ಕ್ಷೇತ್ರಗಳಲ್ಲೂ ಅಸಮಾನತೆ ಇದ್ದು ಅದನ್ನೇ ನಮ್ಮ ಸಂಸ್ಕೃತಿ, ನಮ್ಮ ಪರಂಪರೆ, ನಮ್ಮ ಧರ್ಮವೆಂದು ಜನರನ್ನು ಒಪ್ಪಿಸುವ ಕೆಲಸ ಸತತ ನಡೆಯುತ್ತಿದ್ದರೆ ಅನ್ಯಾಯ, ಅಸಮಾನತೆಗಳು ಸಹಜವಾಗುತ್ತವೆ ಮತ್ತು ಅವುಗಳ ವಿರುದ್ಧ ಪ್ರಶ್ನೆ ಹುಟ್ಟುವುದು ಅಸಹಜವಾಗುತ್ತದೆ.  

ಸರ್ಕಾರದ ಅಸಮಾನ ನಡವಳಿಕೆಯಿಂದ ಪ್ರಶ್ನೆ ಹುಟ್ಟುತ್ತದೆ

ಸಮಾನತೆ ಮತ್ತು ಪ್ರಶ್ನೆ ನಡುವೆ ಮತ್ತೊಂದು ಸಂಬಂಧ ಇದೆ. ಅದು ಪ್ರಶ್ನೆ ಸಾರ್ವಜನಿಕಗೊಳ್ಳುವುದಕ್ಕೆ ಸಂಬಂಧಿಸಿದ್ದು. ಬಹುತೇಕ ಸಂದರ್ಭಗಳಲ್ಲಿ ಮತ್ತೊಂದು ವ್ಯಕ್ತಿಯ, ಸಂಸ್ಥೆಯ, ಪಕ್ಷದ, ಸರ್ಕಾರದ ಅಸಮಾನ ನಡವಳಿಕೆಯಿಂದ ಪ್ರಶ್ನೆ ಹುಟ್ಟುತ್ತದೆ. ಮನಸ್ಸಲ್ಲಿ ಹುಟ್ಟಿದ ಪ್ರಶ್ನೆಯನ್ನು ಅನ್ಯಾಯ ಮಾಡಿದ ವ್ಯಕ್ತಿ ಅಥವಾ ಸಂಸ್ಥೆಗೆ ಅಥವಾ ಸರ್ಕಾರಕ್ಕೆ ಕೇಳಬೇಕಾದರೆ (ಅಥವಾ ಪ್ರಶ್ನೆ ಸಾರ್ವಜನಿಕಗೊಳ್ಳಬೇಕಾದರೆ) ಪರಿಣಾಮದ ಬಗ್ಗೆ ಚಿಂತೆ ಇರಬಾರದು. ಅಂದರೆ ಪ್ರಶ್ನೆ ಕೇಳುವುದರಿಂದ ಸಮಸ್ಯೆ ಪರಿಹಾರವಾಗಬಹುದು ಅಥವಾ ಪರಿಹಾರವಾಗ ದಿರಬಹುದು. ಪರಿಣಾಮ ಏನೇ ಆದರೂ (ಸಕಾರಾತ್ಮಕ ಅಥವಾ ನಕಾರಾತ್ಮಕ ಆದರೂ) ಅದು ವ್ಯಕ್ತಿಯ ಬದುಕಿನ ಸಾಧ್ಯತೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನುವ ಆತ್ಮ ವಿಶ್ವಾಸ ಇದ್ದಾಗ ಪ್ರಶ್ನೆ ಸಾರ್ವಜನಿಕಗೊಳ್ಳುತ್ತದೆ. ಸಮಾನತೆಯ ಪ್ರಜ್ಞೆ ಮಾತ್ರ ಇಂತಹ ಆತ್ಮ ವಿಶ್ವಾಸವನ್ನು ಕೊಡಲು ಸಾಧ್ಯ. ಅಂದರೆ ಪರಿಸರದಲ್ಲಿ ಸಮಾನತೆ ಇದ್ದಾಗ ಪ್ರಶ್ನೆಗಳು ಸಾರ್ವಜನಿಕಗೊಳ್ಳುತ್ತವೆ. ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾನತೆಗಳು ಕಾನೂನಿನಿಂದಲೇ ಆಚರಣೆಗೆ ಬರುವ ಸಂಗತಿಗಳಲ್ಲ. ಇವನ್ನು ಪೋಷಿಸಿ ಬೆಳೆಸುವ ಸಾಂಸ್ಕೃತಿಕ ಪರಿಸರದ ಅಥವಾ ಭ್ರಾತೃತ್ವದ ಅವಶ್ಯಕತೆ ಇದೆ.

Image
Unemplyment

ಇವೆಲ್ಲದರ ಹಿನ್ನೆಲೆಯಲ್ಲಿ ತೀರ್ಮಾನಿಸುವುದಾದರೆ ಶಿಕ್ಷಣದ ಉದ್ದೇಶ ಈಡೇರಬೇಕಾದರೆ 1)ಶಿಕ್ಷಣದ ಉದ್ದೇಶ ‘ಜ್ಞಾನ ಸೃಷ್ಟಿ ಮತ್ತು ಜ್ಞಾನ ವರ್ಗಾವಣೆ’ಆಗಬೇಕು ಮತ್ತು 2)ಹೊರಗಿನ ‘ಪರಿಸರದಲ್ಲಿ ವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳು ಜೀವಂತ ’ಇರಬೇಕು. ದುರಂತವೆಂದರೆ ವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಭಾತೃತ್ವ... ಈ ಮೂರು ಮೌಲ್ಯಗಳನ್ನು ಅಲ್ಲಗೆಳೆಯುವ ಶಕ್ತಿಗಳು ಸಮಾಜದಲ್ಲಿ ಕಾರುಬಾರು ಮಾಡುತ್ತಿವೆ. ಹಲವು ರೂಪಗಳಲ್ಲಿ ಈ ಶಕ್ತಿಗಳು ಕೆಲಸ ಮಾಡುತ್ತಿವೆ.

ಹಲವು ರೂಪಗಳು

1) ಅಧಿಕಾರದಲ್ಲಿರುವವರು (ಹಿರಿತನದ ಅಧಿಕಾರದ ಜೊತೆಗೆ ಮಠ ಮಂದಿರ, ಮಸೀದಿ, ಚರ್ಚ್‍ಗಳ ಅಧಿಕಾರಗಳನ್ನು ಸೇರಿಸಿಕೊಂಡು)ಹೇಳಿದ್ದಾರೆನ್ನುವ ಕಾರಣಕ್ಕೆ ಸತ್ಯ ಎಂದು ನಂಬುವುದು. 2)ಪರಂಪರೆಯಿಂದ ಬಂದಿದೆ ಅಥವಾ ಶತಮಾನಗಳಿಂದ ಇದೆ ಅಥವಾ ವೇದ ಉಪನಿಷತ್‍ಗಳಲ್ಲಿ, ರಾಮಾಯಣ ಮಹಾಭಾರತಗಳಲ್ಲಿದೆ ಅಥವಾ ಕುರಾನ್ ಬೈಬಲ್‍ಗಳಲ್ಲಿದೆ ಎನ್ನುವ ಕಾರಣಕ್ಕೆ ಸತ್ಯ ಎಂದು ನಂಬುವುದು ಮತ್ತು 3)ಬಹುತೇಕರು ನಂಬಿದ್ದಾರೆ ಎನ್ನುವ ಕಾರಣಕ್ಕೆ ಸತ್ಯ ಎಂದು ನಂಬುವುದು.

ಬಹುತೇಕರ ನಂಬಿಕೆಯ ನೆಲೆಯಲ್ಲಿ ಸತ್ಯ ತೀರ್ಮಾನ ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಕೋರ್ಟ್ ಕೂಡ ಸಾಕ್ಷಿ, ಪುರಾವೆಗಳನ್ನು ಅಲ್ಲಗೆಳೆದು ಬಹುತೇಕರ ನಂಬಿಕೆ ನೆಲೆಯಲ್ಲಿ ಸತ್ಯ ತೀರ್ಮಾನ ಮಾಡುವ ಮಟ್ಟಕ್ಕೆ ಹೋಗಿದೆ. ಹಾಗೆಂದು ಇಲ್ಲೆಲ್ಲ ಸತ್ಯ ಇಲ್ಲ ಎನ್ನುವ ವಾದ ನನ್ನದಲ್ಲ. ಆದರೆ ಇವುಗಳಲ್ಲಿರುವ ಸತ್ಯವನ್ನು ಪ್ರಶ್ನಿಸುವ, ಪರೀಕ್ಷಿಸುವ, ಪರಾಮರ್ಶಿಸುವ ಪರಿಸರ ಇಲ್ಲ ಎನ್ನುವ ವಾದ ನನ್ನದು. ಈ ಬಗೆಯ ಸತ್ಯದ ನಂಬಿಕೆಗಳನ್ನು ಪ್ರಶ್ನಿಸುವ, ಪರಾಮರ್ಶಿಸುವ ಕೆಲಸ ಶಿಕ್ಷಣ ಕ್ಷೇತ್ರದ ಶಕ್ತಿಗೆ ಮೀರಿದ್ದು. ಶಿಕ್ಷಣ ಕ್ಷೇತ್ರದಲ್ಲಿ ನಡೆಯಬೇಕೆಂದು ಬಯಸುವ ಪ್ರಶ್ನೆ, ಪರಾಮರ್ಶೆಗಳು ಹೊರಗಿನ ಎಲ್ಲ ಕ್ಷೇತ್ರಗಳಲ್ಲೂ ನಡೆಯಬೇಕಾಗಿದೆ. ಹಾಗಾದರೆ ಮಾತ್ರ ಶಿಕ್ಷಣ ಸೃಷ್ಟಿಸುವ ಸಾಮರ್ಥ್ಯಗಳನ್ನು ಬಳಸುವ ಪರಿಸರ ಸೃಷ್ಟಿ ಆಗಲು ಸಾಧ್ಯ.

ಇದನ್ನು ಓದಿದ್ದೀರಾ? ಸ್ತ್ರೀದ್ವೇಷಿ ಪೋಸ್ಟ್‌ ಗೆ ವಿರೋಧ, ಫೇಸ್‌ಬುಕ್‌ ಟ್ವಿಟರ್‌ ಖಾತೆ ಲಾಕ್‌ ಮಾಡಿದ ರೋಹಿತ್‌ ಚಕ್ರತೀರ್ಥ

ಮೇಲೆ ಹೇಳಿದನ್ನು ಸಾರಾಂಶ ರೂಪದಲ್ಲಿ ಹೇಳುವುದಾದರೆ ಪಠ್ಯ ಪರಿಷ್ಕರಣದ ಮೇಲಿನ ಚರ್ಚೆಯನ್ನು ವ್ಯಕ್ತಿ ಸ್ವಾತಂತ್ರ್ಯ, ಸಮಾನತೆಯ ದೃಷ್ಟಿಯಿಂದ ನೋಡುವ ಅಗತ್ಯವಿದೆ. ಏಕೆಂದರೆ ಶಿಕ್ಷಣದ ಉದ್ದೇಶ ಜ್ಞಾನದ ಸೃಷ್ಟಿ ಮತ್ತು ಜ್ಞಾನದ ವರ್ಗಾವಣೆ. ಜ್ಞಾನದ ಅಡಿಪಾಯ ಪ್ರಶ್ನೆ. ವ್ಯಕ್ತಿ, ಸ್ವಾತಂತ್ರ್ಯ, ಸಮಾನತೆಯುಳ್ಳ ಪರಿಸರದಲ್ಲಿ ಪ್ರಶ್ನೆ ಹುಟ್ಟಿದಷ್ಟು ಇವು ಕೊರತೆ ಇರುವ ಪರಿಸರದಲ್ಲಿ ಪ್ರಶ್ನೆ ಹುಟ್ಟುವುದು ಕಡಿಮೆ. ಲಿಂಗ, ಜಾತಿ, ಧರ್ಮ, ವರ್ಗ ಅಸಮಾನತೆಗಳು ವ್ಯಕ್ತಿ ಸ್ವಾತಂತ್ರ್ಯವನ್ನು ನುಂಗಿ ನೀರು ಕುಡಿಯುವ ಪ್ರಮುಖ ಅಂಶಗಳು. ಹಾಗಾಗಿ ಪರಿಷ್ಕರಣೆ ಮೇಲಿನ ಚರ್ಚೆಯಲ್ಲಿ ವ್ಯಕ್ತಿ ಸ್ವಾತಂತ್ರ್ಯ, ಸಮಾನತೆಗಳನ್ನು ಹೆಚ್ಚಿಸುವ ಕಥನಗಳನ್ನು ಸೇರಿಸುವುದಕ್ಕೆ ಮಹತ್ವ ನೀಡಿದೆಯೇ ಅಥವಾ ಲಿಂಗ, ಜಾತಿ, ಧರ್ಮ, ವರ್ಗಗಳ ನಿಯಂತ್ರಣಗಳನ್ನು ಹೆಚ್ಚಿಸುವ ಕಥನಗಳನ್ನು ಸೇರಿಸುವುದಕ್ಕೆ ಮಹತ್ವ ನೀಡಿದೆಯೇ ಎನ್ನುವ ಅಂಶ ಮುಖ್ಯ. ಈ ವಾದವನ್ನು ಯಾರೇ ಮುಂದಿಟ್ಟರು ಅವರನ್ನು ಎಡಬಲ ಎಂದು ಬ್ರಾಂಡ್ ಮಾಡದೇ ನೋಡಲು ಸಾಧ್ಯವಾದರೆ ಮಾತ್ರ ಶಿಕ್ಷಣದ ಸುಧಾರಣೆಗೆ ನ್ಯಾಯ ಸಿಗಲು ಸಾಧ್ಯ.

ನಿಮಗೆ ಏನು ಅನ್ನಿಸ್ತು?
0 ವೋಟ್