ಇಲ್ಲದ ಗುರುವನ್ನು ಪಠ್ಯದಲ್ಲಿ ತಂದು ಬಸವಣ್ಣನವರನ್ನು ಸಣ್ಣವರನ್ನಾಗಿಸುವ ಉದ್ದೇಶವೇ?

Basavanna

ಶೈವ ಗುರುವಿನ ಸಮೀಪವೇ ಬಸವಣ್ಣ ಹೋಗಿಲ್ಲವೆಂದ ಮೇಲೆ ಅವರಿಂದ ದೀಕ್ಷೆ ಪಡೆಯಲು ಹೇಗೆ ಸಾಧ್ಯ ? ವೀರಶೈವ ಎಂಬ ಪದ ಸಹ ಹದಿನಾಲ್ಕನೇ ಶತಮಾನದಿಂದ ಬಳಕೆಗೆ ಬಂದ ಪದವೆನ್ನುವುದು ಹಲವಾರು ಜನ ಅದಾಗಲೇ ಸಂಶೋಧಿಸಿ ಆಗಿದೆ. ಆದ್ದರಿಂದ ಅದನ್ನು ಅಭಿವೃದ್ಧಿಪಡಿಸುವುದೆಲ್ಲಿಂದ ಬಂತು ? ಇದು ದುರುದ್ದೇಶವಲ್ಲದೆ ಮತ್ತಿನ್ನೇನು ?

ರೋಹಿತ್‌ ಚಕ್ರತೀರ್ಥ ಎಂಬ ಅರೆಬರೆ ಜ್ಞಾನದ ವ್ಯಕ್ತಿ ಪಠ್ಯ ಪುಸ್ತಕ ರಚನಾ ಸಮಿತಿ ಅಧ್ಯಕ್ಷನಾಗಿರುವುದರಿಂದ ಸಹಜವಾಗಿಯೆ ಕನ್ನಡ ನಾಡಿನ ಘನತೆ ಗೌರವಗಳಿಗೆ ಚ್ಯುತಿ ಬಂದಿದೆ. ಬಸವಣ್ಣನವರ ಕುರಿತು ಪಠ್ಯ ತೆಗೆದಿಲ್ಲವೇನೋ ನಿಜ. ಆದರೆ ಕುತ್ಸಿತ ಮನೋಭಾವದಿಂದ ಹಲವು ಸಂಗತಿಗಳು ಅಲ್ಲಿ ತಿರುಚಿದ್ದು ಸ್ಪಷ್ಟವಾಗಿ ಕಾಣುತ್ತದೆ.

ಇವರ ಉದ್ದೇಶವೂ ಅತ್ಯಂತ ಸ್ಪಷ್ಟ ಎಂಬುದನ್ನು ಯಾರಾದರೂ ಅರಿಯಬಹುದಾಗಿದೆ. ಮಕ್ಕಳ ಮನಸ್ಸು ಪರಿಶುಭ್ರ. ಅಲ್ಲಿ ಬೇವಿನ ಬೀಜ ಬಿತ್ತಲು ಈ ಪಠ್ಯ ಪುಸ್ತಕ ಸಮಿತಿ ಹೊರಟಿದೆ. ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟಿಯ ಕಟ್ಟಿ, ಆಕಳ ಹಾಲನೆರೆದು, ಜೇನುತುಪ್ಪವ ಹೊಯ್ದಡೆ, ಸಿಹಿಯಾಗಬಲ್ಲುದೆ, ಕಹಿಯಹುದಲ್ಲದೆ ಶಿವಭಕ್ತರಲ್ಲದವರ ಕೂಡೆ ನುಡಿಯಲಾಗದು, ಕೂಡಲಸಂಗಮದೇವಾ... ಎಂಬ ಬಸವಣ್ಣನವರ ವಚನದಂತೆಯೆ ಬಸವಣ್ಣನವರ ಹೋರಾಟ, ಮಹಿಳೆಯ ಪರವಾಗಿರುವ ಅವರ ನಿಲುವು. ತನಗೆ ತಾನೇ ಗುರುವಾಗಿ ಮೆರೆದ ಹಿರಿಮೆಗಳನ್ನು ಮಣ್ಣು ಪಾಲು ಮಾಡಲು ಚಿಕ್ಕ ಚಿಕ್ಕ ವಾಕ್ಯಗಳ ಮೂಲಕ ಇಲ್ಲಿ ಯತ್ನಿಸಿದ್ದು ಸುಸ್ಪಷ್ಟವಿದೆ.

ನಾವು ನೀವೆಲ್ಲ ಬಲ್ಲಂತೆ ಬಸವ ಬ್ರಾಹ್ಮಣವನ್ನು ಗುರುತಿಸಬಹುದಾದ ಸಂಕೇತವಾದ ಜನಿವಾರವನ್ನು ಬಿಸುಟಿ ಬಂದವರು. ತನ್ನ ಅಕ್ಕ ಅಕ್ಕನಾಗಮ್ಮನಿಗೆ ಇಲ್ಲದ ಜನಿವಾರ ನನಗೇಕೆ ? ಎಂದು ಪ್ರಶ್ನಿಸಿದ್ದೆ ಆ ಸಂದರ್ಭದಲ್ಲಿ ಬಸವಣ್ಣನವರನ್ನು ಆ ಪರಂಪರೆಯ ಸಮಾಜ ಬಹಿಷ್ಕರಿಸಿ ಊರಿಂದ ಅಟ್ಟಿತು. ಬಸವ ಅಕ್ಕನಾಗಮ್ಮ ಜೊತೆಗೂಡಿ ಕೂಡಲ ಸಂಗಮಕ್ಕೆ ಬಂದರು. ನಾನಾ ಪಡಿಪಾಟಲು ಅನುಭವಿಸಿದರು. ಹಲವಾರು ಜೀವನಾನುಭವಗಳನ್ನು ಬಸವ ಅರಿತು ಹಣ್ಣಾದರು.

ಕರ್ಮಲತೆಯಂತಿರ್ದ ಜನಿವಾರಮಂ ಬಿಸುಂಟಿ ಎಂಬ ಹರಿಹರ ಕವಿಯ ಕಾವ್ಯ ಬಸವಣ್ಣನವರ ಮನಸ್ಥಿತಿಗೆ ಸಾಕ್ಷಿ ಎಂಬಂತೆ ಇದೆ. ಸ್ವತಃ ಬಸವಣ್ಣನವರು ಸಹ ತಮ್ಮ ವಚನದಲ್ಲಿ , ಒಡೆಯರು ಬಂದಡೆ ಗುಡಿ ತೋರಣವ ಕಟ್ಟಿ, ನಂಟರು ಬಂದಡೆ ಸಮಯವಿಲ್ಲೆನ್ನಿ. ಅಂದೇಕೆ ಬಾರರು ನೀರಿಂಗೆ ನೇಣಿಂಗೆ ಹೊರಗಾದಂದು, ಸಮಯಾಚಾರಕ್ಕೆ ಒಳಗಾದಂದು. ಪರುಷ ಮುಟ್ಟಲು ಕಬ್ಬುನ ಸುವರ್ಣವಾಯಿತ್ತು. ಬಳಿಕ ಬಂಧುಗಳುಂಟೆ, ಕೂಡಲಸಂಗಮದೇವಾ

ನೀರಿಂಗೆ ನೇಣಿಂ( ಜನಿವಾರ)ಗೆ, (ತಿರಸ್ಕಾರದ ಪದವಾಗಿ) ಇಲ್ಲಿ ಪ್ರಯೋಗಿಸಿದ್ದನ್ನು ನಾವು ಕಾಣಬಹುದು. ಆನು ಹಾರುವನೆಂದರೆ ಕೂಡಲ ಸಂಗದೇವಾ ನಗುವನಯ್ಯಾ ಎಂಬ ಮಾತಿನ ಮೂಲಕವೂ ಸಹ ಬಸವ, ಬ್ರಾಹ್ಮಣ್ಯವನ್ನು ಜರಿದದ್ದನ್ನು ನೋಡಬಹುದು. ಅಡ್ಡ ದೊಡ್ಡ ನಾನಲ್ಲವಯ್ಯ, ದೊಡ್ಡ ಬಸಿರು ಎನಗಿಲ್ಲವಯ್ಯಾ. ಬಾಣನವ ನಾನು ಮಯೂರನವ ನಾನು ಎಂಬ ಸಾಲುಗಳ ಮೂಲಕವಾಗಲಿ, ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯ ಎಂಬ ವಚನದ ಸಾಲುಗಳ ಮೂಲಕ ಬ್ರಾಹ್ಮಣರ ಸಂಕೇತವಾದ ಜನಿವಾರವನ್ನು ತಿರಸ್ಕರಿಸಿದ್ದು, ಜರಿದದ್ದು ಸುಸ್ಪಷ್ಟ.

ಆದಾಗ್ಯೂ ಬಸವಣ್ಣನವರು ಉಪನಯನವನ್ನು ಮಾಡಿಕೊಂಡು ಕೂಡಲ ಸಂಗಮಕ್ಕೆ ಬಂದರು ಎಂಬ ವಾಕ್ಯ ಚರಿತ್ರೆಗೆ ಮಾಡಿದ ದ್ರೋಹವಲ್ಲವೆ ? ಇದೆಲ್ಲ ಅರಿತೂ ಹೀಗೆ ತಿದ್ದು ಪಡಿ ಮಾಡುತ್ತಾರೆಂದರೆ ಇವರೊಳಗೆ ದ್ರೋಹ ಚಿಂತನೆಗಳು ಇಲ್ಲವೆಂದು ಹೇಳಲಾದೀತೆ ?

ಬಸವಣ್ಣನಿಗೆ ಗುರುವಿಲ್ಲ

ಈಗಾಗಲೇ ಸಂಶೋಧಕರು, ಚಿಂತಕರು ಬಸವಣ್ಣನವರ ಸಮಕಾಲೀನ ವಚನಕಾರರು ಹೇಳಿದಂತೆ ಸ್ವತಃ ಬಸವಣ್ಣನವರ ವಚನಗಳೆ ಸಾರಿ ಹೇಳಿದಂತೆ ಬಸವಣ್ಣನವರಿಗೆ ಗುರು ಯಾರೂ ಇಲ್ಲ. ಅವರ ಅನುಭವ, ಅನುಭಾವ,ಸಮಾಜ ಮುಖಿ ಚಿಂತನೆಗಳು, ಕಾಳಜಿಗಳು, ಇವ ನಮ್ಮವ ಎಂಬ ಹೃದ್ಯವಾದ ಭಾವಗಳು ಅವರಿಗೆ ಅರಿವನ್ನು ಮೂಡಿಸಿದ್ದವು. ಹೀಗಾಗಿ ಬಸವ ಗುರುವಿಲ್ಲದ ಗುಡ್ಡ. ಅವರ ಅರಿವೇ ಅವರಿಗೆ ಗುರುವಾಗಿತ್ತು. ಅಲ್ಲದೆ ಯಾವುದೆ ವ್ಯಕ್ತಿ ಅರಿವನ್ನು ಇಟ್ಟುಕೊಂಡು ನಡೆದುದೆ ಆದರೆ ಆತ ಗುರು ಲಿಂಗ ಹಾಗೂ ಜಂಗಮವೂ ಆಗಬಹುದು ಎಂಬುದಕ್ಕೆ ಅಂದಿನ ಶರಣರ ಬದುಕೆ ಒಂದು ಕೈಗನ್ನಡಿ.

ಅಂಗೈನೆಲ್ಲಿಯಂತೆ ಬಸವಣ್ಣನವರ ಮೇರು ವ್ಯಕ್ತಿತ್ವ ಕಣ್ಣ ಮುಂದೆ ಇದಾಗ್ಯೂ ಅವರಿಗೊಬ್ಬ ಗುರುವನ್ನು ತಗಲು ಹಚ್ಚುವುದು ಯಾವ ನ್ಯಾಯ ? ಇಲ್ಲದ ಗುರುವನ್ನು ಅನಾವಶ್ಯಕವಾಗಿ ಪಠ್ಯದಲ್ಲಿ ಬಸವಣ್ಣನವರನ್ನು ಸಣ್ಣವರನಾಗಿಸುವ ಉದ್ದೇಶವೆ ? ಅಥವಾ ಗುರುತ್ವದ ಬಗ್ಗೆ ಹೇಳಿ ಗುರುವಿನ ಪಾರಮ್ಯವನ್ನು ಮೆರೆಯುವ ಹುನ್ನಾರವೆ ?

ಮೋಕ್ಷ, ಸ್ವರ್ಗ ನರಕದ ಬಗ್ಗೆಯೂ ಬಸವಣ್ಣನವರದು ಖಚಿತ ಮಾತುಗಳು. ಈ ಬಗ್ಗೆ ಸಾಕಷ್ಟು ವಚನಗಳೆ ಉದಾಹರಣೆಯಾಗಿ ಇವೆ. ಆಚಾರವೇ ಸ್ವರ್ಗ ಅನಾಚಾರವೇ ನರಕ ಎಂದವರು. ಇಲ್ಲದಿರುವ ಸತ್ತ ನಂತರ ಬದುಕಿನ ಬಗ್ಗೆ ಅವರು ತಲೆ ಕೆಡಿಸಿಕೊಂಡವರೆ ಅಲ್ಲ. ಈಗ ಇರುವ ಬದುಕನ್ನು ಹೇಗೆ ನೇರ್ಪುಗೊಳಿಸಬಹುದು ಎಂಬ ಕಾಳಜಿ ಇಟ್ಟುಕೊಂಡವರು. ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು ಎಂದು ಸಾರಿದವರು. ಸತ್ತ ನಂತರ ಪಡೆಯುವುದು ಮೋಕ್ಷವಲ್ಲ, ಇರುವ ಬದುಕಿನಲ್ಲಿಯೇ ವಿಷಯ ವಾಸನೆಗಳಿಂದ ಮುಕ್ತನಾಗುವುದೇ ಮೋಕ್ಷ ಎಂದವರು ಅರಿತಿದ್ದರು.

ಪಠ್ಯ ಪುಸ್ತಕ ರಚನಾ ಸಮಿತಿಯ ಅಧ್ಯಕ್ಷ ಸದಸ್ಯರಿಗೆ ಈ ಬಗ್ಗೆ ಗೊತ್ತಿಲ್ಲದಿದ್ದರೆ ಪ್ರಾಜ್ಞರನ್ನು ಸಂಪರ್ಕಿಸಿ ವಿಷಯ ತಿಳಿಯಬಹುದಾಗಿತ್ತು. ಅಥವಾ ಹಿಂದಿನಪಠ್ಯವನ್ನೆ ಯಥಾವತ್ ಪ್ರಕಟಿಸಿದ್ದರೂ ಸಾಕಾಗಿತ್ತು. ಇವರು ಹಿಂದಿನ ಪಠ್ಯದಲ್ಲಿ ಕಡ್ಡಿ ಆಡಿಸಿದ್ದಾರೆ ಅಂದರೆ ಇವರ ಮನಸ್ಸಿನಲ್ಲಿರುವ ದುಷ್ಟ ಆಲೋಚನೆ ಅಥವಾ ಇತಿಹಾಸ ತಿರುಚಬೇಕೆಂಬ ಕುಯುಕ್ತಿ ಎದ್ದು ಕಾಣುತ್ತದೆ ಎನ್ನಲೆಬೇಕಾಗುತ್ತದೆ.

ಇದನ್ನು ಓದಿದ್ದೀರಾ? ಪಠ್ಯಪರಿಷ್ಕರಣೆ: ಮಣ್ಣಿನ ಮಕ್ಕಳ ಮೇಲೆ ಬ್ರಾಹ್ಮಣ್ಯದ ಹೇರಿಕೆ

ಶೈವ ಗುರುವಿನ ಸಮೀಪವೇ ಬಸವ ಹೋಗಿಲ್ಲವೆಂದ ಮೇಲೆ ಅವರಿಂದ ದೀಕ್ಷೆ ಪಡೆಯಲು ಹೇಗೆ ಸಾಧ್ಯ ? ವೀರಶೈವ ಎಂಬ ಪದ ಸಹ ೧೪ ನೇ ಶತಮಾನದಿಂದ ಬಳಕೆಗೆ ಬಂದ ಪದವೆನ್ನುವುದು ಹಲವಾರು ಜನ ಅದಾಗಲೇ ಸಂಶೋಧಿಸಿ ಆಗಿದೆ. ಆದ್ದರಿಂದ ಅದನ್ನು ಅಭಿವೃದ್ಧಿ ಪಡಿಸುವುದೆಲ್ಲಿಂದ ಬಂತು ?

ಬಸವಣ್ಣನವರು ತಮ್ಮ ಧಾರ್ಮಿಕ ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆದದ್ದು ಮಂಗಲವೇಡೆ ಅಲ್ಲ. ಕರ್ನಾಟಕದ ಕಲ್ಯಾಣ ನಗರದಲ್ಲಿ. ಅವರು ಶಕ್ತಿ ವಿಶಿಷ್ಟ ಅದ್ವೈತ ವನ್ನು ಬೋಧಿಸಲಿಲ್ಲ. ಷಟ್ ಸ್ಥಲ ಮಾರ್ಗವನ್ನವರು ಹೇಳಿದರು. ಬಸವ ಇಷ್ಟಲಿಂಗ ಜನಕರೆಂಬುದು ಸುಸ್ಪಷ್ಟವಾಗಿರುವಾಗಲೂ ಹಲವಾರು ಪದ ವಾಕ್ಯಗಳ ಮೂಲಕ ಚರಿತ್ರೆಯನ್ನು ಹದಗೆಡಿಸುವುದು ದುರುದ್ದೇಶವಲ್ಲದೆ ಮತ್ತಿನ್ನೇನು ?

ನಿಮಗೆ ಏನು ಅನ್ನಿಸ್ತು?
2 ವೋಟ್