ಪಠ್ಯಪುಸ್ತಕಗಳಲ್ಲಿ ಧಾರ್ಮಿಕ ಮೂಲಭೂತವಾದವನ್ನು ಹೇರುವ ಉದ್ದೇಶ ಸ್ಪಷ್ಟ

students

ಸರ್ಕಾರಕ್ಕೆ ವಿದ್ಯಾರ್ಥಿಗಳ ಭವಿಷ್ಯದ ಪರಿವೇ ಇಲ್ಲ. ಅದು ಆರ್‌ಎಸ್‌ಎಸ್‌ ಅನ್ನು ಓಲೈಸಲು ಮತ್ತು ಅದರ ಬ್ರಾಹ್ಮಣೀಕರಣದ ಅಜೆಂಡಾವನ್ನು ಸಂತುಷ್ಟಗೊಳಿಸಲು ಮಕ್ಕಳಿಗೆ ಅನ್ಯಾಯವೆಸಗಲು ತೊಡಗಿತು. ಇದೊಂದು ವ್ಯವಸ್ಥಿತ ಸಂಚಿನ ಭಾಗವಾಗೇ ನೆರವೇರಿತು. ಈ ಹುನ್ನಾರಗಳನ್ನು ಅರಿಯಲು ಜನರಿಗೆ ಹೆಚ್ಚು ಸಮಯ ಹಿಡಿಯಲಿಲ್ಲ

ಪಠ್ಯಪುಸ್ತಕಗಳ ಪರಿಷ್ಕರಣಾ ಸಮಿತಿ ಲಂಕೇಶ್, ಸಾರಾ ಅಬೂಬಕ್ಕರ್, ನಾರಾಯಣಗುರು ಮುಂತಾದವರ ಪಾಠಗಳನ್ನು ಪಠ್ಯದಿಂದ ತೆಗೆಯಲಾಗಿದೆ ಅಂದಾಗ ಸಹಜವಾಗಿ ಆತಂಕವಾಯಿತು. ಮಕ್ಕಳ ಮೇಲೆ ಇವರ ಹಿಂಸೆಯ ಅಜೆಂಡಾ ಬಿತ್ತುತ್ತಾರೆ ಎಂಬ ಖಾತ್ರಿಯಾಗಿತ್ತು.

ಬರಗೂರು ರಾಮಚಂದ್ರಪ್ಪನವರು ಹಿಂದಿನ ಪಠ್ಯಗಳ ನಿಲುವಿದ್ದದ್ದೇನು? ಎಡವೂ ಅಲ್ಲದ ಬಲವೂ ಅಲ್ಲದ ಸಂವಿಧಾನದ ಆಶಯಗಳ ದೃಷ್ಟಿಯಿಂದ ಪಾಠ ಕ್ರಮಗಳನ್ನು ವೈವಿಧ್ಯಮಯವಾಗಿ, ಪ್ರಾದೇಶಿಕತೆಗೆ ಒತ್ತುಕೊಟ್ಟು  ಹೇಗೆ ರೂಪಿಸಲಾಯಿತು ಎಂದು ಎಳೆ ಎಳೆಯಾಗಿ ವಿವರಿಸಿದ್ದರು.

ಇತಿಹಾಸ, ವಿಜ್ಞಾನದ ಪಾಠಗಳನ್ನು ಹೆಚ್ಚು ಕಾರುರುವಕ್ಕಾಗಿ ಪ್ರಸ್ತುತಪಡಿಸಲು ಪ್ರತಿಯೊಂದು ವಿಷಯಕ್ಕೂ ವಿಷಯ ತಜ್ಞರನ್ನು ಹಾಕಿ ಆಯಾ ಪಠ್ಯದ ಅನುಭವವಿರುವ ಮೇಷ್ಟ್ರ ಅಭಿಪ್ರಾಯ ತಿಳಿದು, ಸಮುದಾಯದ ವ್ಯಕ್ತಿಗಳಿಂದ ಬಂದ ಆಕ್ಷೇಪಗಳನ್ನು ಪರಿಶೀಲಿಸಿ ಇದು ಇತಿಹಾಸವೆ, ಪುರಾಣವೆ, ವಿಜ್ಞಾನವೆ ಎಂಬ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿತ್ತು. ಪೋಷಕರಿಂದಲೂ ಅಭಿಪ್ರಾಯ ಸಂಗ್ರಹಿಸುವಂತಹ ವೈಜ್ಞಾನಿಕ ಕ್ರಮಗಳ ಬಗ್ಗೆ ಇಡೀ ಕನ್ನಡ ನಾಡಿಗೆ ಸವಿಸ್ತಾರವಾಗಿ ಒಂದು ಪರಿಷ್ಕರಣಾ ಸಮಿತಿ ಹೇಗಿರಬೇಕೆಂಬುದನ್ನು ಸಾವಧಾನವಾಗಿ ತಾಳ್ಮೆಯಿಂದ ಬರಗೂರರು ವಿವರಿಸಿದ್ದರು.

ಅವರಲ್ಲಿ ಜ್ಞಾನವನ್ನು ಹಂಚುವ ಕ್ರಮಗಳ ಬಗ್ಗೆ ಅದರಲ್ಲೂ ವಿದ್ಯಾರ್ಥಿಗಳ ಜ್ಞಾನಾರ್ಜನೆಯನ್ನು ರೂಪಿಸುವ ಕರಾರುವಕ್ಕಾದ ಯೋಜನೆ ಮತ್ತು ಅದನ್ನು ಕಾರ್ಯಗತಗೊಳಿಸುವ ವಿಧಾನಗಳಿದ್ದವು. ಇಷ್ಟಾದ ಮೇಲೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಸರ್ಕಾರ ನಿಜಕ್ಕೂ ಮಕ್ಕಳ ಮೇಲೆ ಕಾಳಜಿವಹಿಸಿದ್ದರೆ ತುರ್ತಾಗಿ ರೋಹಿತ್ ಚಕ್ರತೀರ್ಥನನ್ನು ಬದಲಿಸಬೇಕಿತ್ತು, ಕ್ರಮ ಕೈಗೊಳ್ಳಬೇಕಿತ್ತು. ಆದರೆ ಸರ್ಕಾರಕ್ಕೆ ಜನತೆಗೆ ಅದರಲ್ಲೂ ವಿದ್ಯಾರ್ಥಿಗಳ ಭವಿಷ್ಯದ ಪರಿವೇ ಇಲ್ಲ. ಅದು ಆರ್.ಎಸ್.ಎಸ್ ಸಂಘಟನೆಯನ್ನು ಒಲೈಸಲು ಮತ್ತು ಅದರ ಬ್ರಾಹ್ಮಣೀಕರಣದ ಅಜೆಂಡಾವನ್ನು ಸಂತುಷ್ಟಗೊಳಿಸಲು ಮಕ್ಕಳಿಗೆ ಅನ್ಯಾಯವೆಸಗಲು ತೊಡಗಿತು.

ಈ ಹುನ್ನಾರಗಳನ್ನು ಅರಿಯಲು ಹೆಚ್ಚು ಸಮಯ ಹಿಡಿಯಲಿಲ್ಲ. ಇದೊಂದು ವ್ಯವಸ್ಥಿತ ಸಂಚಿನ ಭಾಗವಾಗೇ ನೆರವೇರಿತು. ಸಾಹಿತಿಗಳು ಯಾರು ವಾದಗಳ ಅಜೆಂಡಾವನ್ನೆ ಮಂಡಿಸಲಿಲ್ಲ. ಸಂವಿಧಾನದ ಆಶಯಗಳಿಗೆ ಹೇಗೆ ಈ ಪಠ್ಯ ವಿರುದ್ದವಾಗಿದೆ ಅಂತ ಹೇಳುತ್ತಾ ಹೋದರು. ಇದು ಮೊದಲ ಬಾರಿಯಲ್ಲ, ಸಿ.ಎ.ಎ ಕಾನೂನಿನ ಮೂಲಕ ಮುಸ್ಲಿಮರನ್ನು ಎರಡನೇ ದರ್ಜೆ ಪ್ರಜೆಗಳಾಗಿ ಕಾನೂನು ತರಲು ಹೊರಟಾಗಲು ಬಿಜೆಪಿ ಸರ್ಕಾರಕ್ಕೆ ಮತ್ತೆ ಕಾಲೇಜು ವಿದ್ಯಾರ್ಥಿಗಳೇ ಸಂವಿಧಾನದ ಪಾಠ ಹೇಳಿದರು. ಹಿಜಾಬ್ ವಿಚಾರವಾಗಿ ನಾಲ್ಕೈದು ಮಂದಿ ಹಿಜಾಬ್ ಪರವಾಗಿದ್ದರೆ ತೊಂಭತ್ತೆಂಟು ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸದೇ ಬರುತ್ತಿದ್ದರು. ಅದರೂ ಹಿಜಾಬ್ ಕಾರಣ ಮುಂದೊಡ್ಡಿ ವಿದ್ಯಾರ್ಥಿಗಳ ಭವಿಷ್ಯವನ್ನು ತೊಂದರೆಗೆ ಸಿಲುಕಿಸಿದರು. ಇದನ್ನು ಮಾಧ್ಯಮ, ಶಾಲಾಡಳಿತ ಹೇಳಲೇ ಇಲ್ಲ ಎಂದು ಪತ್ರಕರ್ತ ಹನೀಫ್ ವಿಷಾದದಿಂದ ಹೇಳಿದ್ದಾರೆ.

Image
Ramakrishna

ಹಾಗಾದರೆ ಬಲಪಂಥೀಯ ಸಿದ್ಧಾಂತ ಎನ್ನುವುದು ಹಿಂಸಾತ್ಮಕಗೊಳಿಸಿ ದೇಶದ ಸಹಧರ್ಮಿಯರ ಮಧ್ಯೆ ದ್ವೇಷ ಹುಟ್ಟಾಗಿ ಇಡೀ ದೇಶದಲ್ಲೆ ರಕ್ತದ ಕೋಡಿ ಹರಿಸಬೇಕೆಂಬುದು ಇವರ ಹುನ್ನಾರವೇ? ಬಹುಷ: ಅದು ನೆರವೇರಲಾರದು. ಮೊನ್ನೆ ಬಿಜೆಪಿಯಲ್ಲೆ ಪ್ರವಾದಿ ಮಹಮದರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಕೊಟ್ಟರೆಂಬ ಕಾರಣಕ್ಕೆ ಪ್ರಾಥಮಿಕ ಸದಸ್ಯತ್ವದಿಂದ ಪಕ್ಷದ ವಕ್ತಾರೆಯನ್ನು ತೆಗೆದುಹಾಕಲಾಯಿತು. ಕತಾರ್‌ನ ಭಾರತದ ರಾಯಭಾರಿಗೆ ಕಟು ಸಂದೇಶದ ಮೂಲಕ ಮುಸ್ಲಿಂ ದ್ವೇಷವನ್ನು ಅನುಸರಿಸುತ್ತಿರುವ ಬಿಜೆಪಿ ಸರ್ಕಾರದ ಮತ್ತು ಖಾಸಗಿ ವಲಯದ ಎಲ್ಲಾ ಪದಾರ್ಥಗಳ ರಫ್ತನ್ನು ನಿಷೇಧಿಸುವುದಾಗಿ ಎಚ್ಚರಿಕೆ ನೀಡಿತು.

ಬಡ ಮುಸ್ಲಿಂ ವ್ಯಾಪಾರಸ್ತರ ಬದುಕನ್ನು ನಾಶಪಡಿಸಲು ಹೊರಟ ಬಿಜೆಪಿ ಸರ್ಕಾರ ಕತಾರ್‌ನ ಕಟು ಮಾತಿಗಳಿಗೆ ಅಕ್ಷರಶಃ ಮಂಡಿಯೂರಿತು. ಹೀಗೆ ಸಂವಿಧಾನದ ವಿರುದ್ದವಾದ ಯಾವುದೇ ಆಶಯಗಳನ್ನು ಈ ಸರ್ಕಾರ ಕಾರ್ಯಗತಗೊಳಿಸಲು ಸಾಧ್ಯವಾಗಿಲ್ಲ. ಆದರೆ ಪಠ್ಯಪುಸ್ತಕದಂತಹ ಗಂಭೀರ ವಿಷಯಗಳಲ್ಲಿ  ಸರ್ಕಾರ ಬೇಜವಾಬ್ದಾರಿ ಪ್ರದರ್ಶನ ತೋರಿ ಮಕ್ಕಳ ಭವಿಷ್ಯದ ಮೇಲೆ ಚೆಲ್ಲಾಟವಾಡಿತು. ಸರ್ಕಾರಕ್ಕೆ ಸ್ವಾತಂತ್ರ್ಯ ಚಳವಳಿಯ ಆಶಯಗಳಾಗಲಿ ಆ ಮೂಲಕ ವ್ಯಕ್ತವಾದ ಸಂವಿಧಾನದ ಆಶೋತ್ತರಗಳಾಗಲಿ ಮುಖ್ಯವಲ್ಲ ತಾಲಿಬಾನ್ ಆಡಳಿತದಂತೆ ನೂರಾರು ವರ್ಷಗಳ ಹಿಂದಿನ ಧಾರ್ಮಿಕ ಮೂಲಭೂತವಾದವನ್ನೆ ಜನರ ಮೇಲೆ ಹೇರುವ ಉದ್ದೇಶ ಸ್ಪಷ್ಟವಾಗಿದೆ.

ಹಾಗಾಗಿ ಪಠ್ಯಕ್ರಮದ ಪರಿಷ್ಕರಣೆಗೆ ನಿಯೋಜನೆಗೊಂಡ ರೋಹಿತ್ ಚಕ್ರತೀರ್ಥರವರನ್ನು ಅರ್ಹತೆ ಇಲ್ಲದಿದ್ದರೂ ಕಾಟಾಚಾರಕ್ಕೆ ಸಮಿತಿಯ ಅಧ್ಯಕ್ಷರಾಗಿ ಮಾಡಲಾಯಿತು. ಈತ‌ನಂತೂ ತಮ್ಮ ಸಿದ್ದಾಂತಕ್ಕೆ ಒಗ್ಗದ ಕುವೆಂಪು, ಅಂಬೇಡ್ಕರ್, ನಾರಾಯಣಗುರು, ಬಸವಣ್ಣರನ್ನು ಹೀನಾಯವಾಗಿ ಕಾಣುವುದಲ್ಲದೆ, ಪಠ್ಯಪುಸ್ತಕದಲ್ಲೂ ತಿರುಚಿ ಅವರ ತತ್ವಗಳಿಗೆ ಅವಮಾನ ಮಾಡಿದ್ದಾಯಿತು. ಇದಕ್ಕೆ ಬೆಂಬಲ ಸೂಚಿಸಲು ಜಿ ಬಿ ಹರೀಶ್ ಎಂಬ ಮತ್ತೊಬ್ಬ ಸನಾತನವಾದಿಯನ್ನು ದೇವನೂರರ ಮೇಲೆ ಎತ್ತಿಕಟ್ಟಲು ಕಳಿಸಲಾಯಿತು. ಇಂಥ ವಿಕೃತ ಮನಸ್ಥಿತಿಗಳ ವಿರುದ್ದವಾಗಿ ಆದಿಚುಂಚನಗಿರಿ ಸ್ವಾಮೀಜಿ, ಪಂಡಿತಾರಾಧ್ಯ ಸ್ವಾಮೀಜಿ ಧ್ವನಿ ಎತ್ತಿದರೂ ಸರ್ಕಾರ ಮಾತ್ರ ತೇಪೆ ಹಚ್ಚುವ ಕೆಲಸಕ್ಕೆ ಮುಂದಾಯಿತು. ಸರ್ಕಾರಕ್ಕೆ ಬೌದ್ದಿಕ ಸವಾಲನ್ನು ಸ್ವೀಕರಿಸಿಗೊತ್ತಿಲ್ಲ. ಅದು ಓಟ್ ಬ್ಯಾಂಕಿಗಾಗಿ ಸಾಹಿತಿ, ಲೇಖಕರ ಮಾತನ್ನು ಕೇಳದೆ ಹೋಯಿತು. ಈ ವಿಚಾರಗಳ್ನು ಬಹಳ ವ್ಯವಸ್ಥಿತವಾಗಿ ಮಾಡಲಾಗಿತ್ತು.

ರಾಮಚಂದ್ರಗುಹಾ ಇತ್ತೀಚೆಗೆ ತಮ್ಮ ಲೇಖನದಲ್ಲಿ ಹೇಳಿದ್ದಾರೆ. ಇಟಲಿಯ ಮುಸಲೋನಿ, ಜರ್ಮನಿಯ ಹಿಟ್ಲರ್ ನಂತಹ ಸರ್ವಾಧಿಕಾರದ ಸಿದ್ಧಾಂತವನ್ನು ಹಿಂದೂ ಧರ್ಮಕ್ಕೆ ಅಳವಡಿಸಿ ಜನರ ಬದುಕನ್ನು ರಕ್ತಸಿಕ್ತಗೊಳಿಸಲು ಹುನ್ನಾರ ನಡೆಸಿದ್ದಾರೆಂದು ಇತಿಹಾಸಜ್ಞೆಯೊಬ್ಬರ ಬರಹವನ್ನು ಉಲ್ಲೇಖಿಸಿ ಹೇಳಿದ್ದರು. ಹಾಗಾಗಿ ಈ ಅಜೆಂಡಾ ಕೇವಲ ಪಠ್ಯಕ್ಕೆ ಮಾತ್ರವಲ್ಲ, ಇದರ ಹಿಂದೆ ವ್ಯವಸ್ಥಿತ ಪಿತೂರಿ ಇದೆ. ವಿವೇಕಾನಂದರು, ಗಾಂಧಿ ನಂಬಿದ ಹಿಂದೂಧರ್ಮ ಇವರ ಹಿಂಸೆ ಅಧರ್ಮಕ್ಕೂ ಅಜಗಜಾಂತರವಿದೆ. ಇತ್ತೀಚೆಗೆ ವಾದಿರಾಜ್ ಸಾಮರಸ್ಯ ಎನ್ನುವ ಬಲಪಂಥೀಯ ಲೇಖಕರೊಂದಿಗೆ ಫೇಸ್‌ಬುಕ್ ನಲ್ಲಿ ಚರ್ಚೆ ಮಾಡಿದ್ದೆ. ಸಿದ್ದರಾಮಯ್ಯನವರ ಆರ್ಯ- ದ್ರಾವಿಡ ಹೇಳಿಕೆ, ಅಂಬೇಡ್ಕರ್ ಆರ್ಯರು ದ್ರಾವಿಡರ ಮೇಲೆ ಯುದ್ಧ ಹೂಡಿ ಗೆದ್ದರೆಂಬುದು ಸುಳ್ಳು ಎನ್ನುವುದನ್ನು ಹೇಳಿದ್ದನ್ನು, ಆರ್ಯರೇ ಇಲ್ಲ ಎನ್ನುವ ಹೇಳಿಕೆಯನ್ನು ಅಂಬೇಡ್ಕರ್‌ರವರೇ ಹೇಳಿದ್ದರು ಎಂಬಂತೆ ವಾದಿಸಿದ್ದರು. ಆದರೆ ಮೂಲತ: ಆರ್‌ಎಸ್‌ಎಸ್ ಮೂಲದ ʼಗೋಲ್ವಾಲ್ಕರ್‌ ಕಸ್ಟಮೈಸ್ಡ್ ಬೇಬಿʼ ಅನ್ನುವ ಕಾರ್ಯಕ್ರಮವನ್ನು ಆರ್‌ಎಸ್‌ಎಸ್ ನಲ್ಲಿ ಹುಟ್ಟುಹಾಕಿ ಆರ್ಯರ ರಕ್ತ ನಮ್ಮ ಜೊತೆ ಬೆರೆಯುವಂತೆ ಮಾಡಿ ಜರ್ಮನ್ನರಂತೆ ಬಿಳಿ ಚರ್ಮದವರಾಗಬೇಕು ಎನ್ನುವ ವಿಚಿತ್ರವಾದ ವಾದ ಮಂಡಿಸಿದ್ದರು. ಹಾಗಾಗಿ ಆರ್ಯರು ದ್ರಾವಿಡ ಎನ್ನುವುದು ಈಗ ಸಂಕರಗೊಂಡು ವಿಶಿಷ್ಟ ತಳಿಗಳು ಹುಟ್ಟಿಕೊಂಡಿದ್ದರೂ ಇವರ ಆರ್ಯ ಪ್ರೀತಿ ಮಾತ್ರ ಬಿಟ್ಟಿಲ್ಲ.

Image
brahmanism

ಮೇಲು ನೋಟಕ್ಕೆ ಜಾತಿ ಎಂದರೆ ಗೊತ್ತಿಲ್ಲ. ಆರ್ಯ ದ್ರಾವಿಡವೆಂಬುದೇ ಇಲ್ಲ ಎನ್ನುವುದು ಒಳಗೊಳಗೆ ಆರ್ಯ ಮನಸ್ಥಿತಿಯನ್ನು ಇಷ್ಟಪಡೋದು ಇದು ಆರ್.ಎಸ್.ಎಸ್ ಮೂಲ ಸಿದ್ಧಾಂತ. ಸಿದ್ದರಾಮಯ್ಯನವರ ಚಡ್ಡಿ ಸುಡುವ ಕಾರ್ಯಕ್ರಮಕ್ಕೆ ಚಡ್ಡಿಗಳನ್ನು ವಿರೋಧಿಸಿದವರಿಗೆ ಕಳಿಸುವ ಜವಾಬ್ದಾರಿಯನ್ನು ಪಕ್ಷ ಪರಿಶಿಷ್ಟ ಪಂಗಡದ ಮೋರ್ಚಾಗೆ ವಹಿಸಿದೆ. ಪರಿಶಿಷ್ಟ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರನ್ನು ಎರಡನೆ ದರ್ಜೆ ಪ್ರಜೆಗಳಾಗಿಸಿ ಇವರು ಪುರೋಹಿತರಂತೆ ಹೇಳಿದ್ದನ್ನು ಮಿಕ್ಕೆಲ್ಲ ಜಾತಿ, ಧರ್ಮಗಳು ಕೇಳಬೇಕೆಂಬುದು ಇವರ ಹುನ್ನಾರ. ಇದನ್ನು ಮುಂಚಿನಿಂದಲೂ ವಿರೋಧಿಸಿದ ಅಂಬೇಡ್ಕರ್, ಗಾಂಧಿ ಕುವೆಂಪು, ಬಸವಣ್ಣ, ನಾರಾಯಣಗುರು, ದೇವನೂರ ಮಹದೇವ, ಲಂಕೇಶ್ ಮುಂತಾದವರೆಲ್ಲ ಪಠ್ಯದಲ್ಲಿ ಇರಲು ಯೋಗ್ಯರಲ್ಲ, ಇದ್ದರೂ ಅವರ ಆಲೋಚನೆಗಳನ್ನು ತಿರುಚಿ ಇವರ ಅನುಕೂಲಕ್ಕೆ ಬಳಸಿಕೊಳ್ಳಬೇಕೆಂಬ ಅತ್ಯಂತ ಕಳಪೆ ಮಟ್ಟದ ಆಲೋಚನೆ ಇವರದಾಗಿತ್ತು.

ಇದನ್ನು ಓದಿದ್ದೀರಾ? ಆಶಯಗಳೇ ಅಪಹಾಸ್ಯಗೊಂಡ ಪಠ್ಯಪುಸ್ತಕಗಳು!

ಆದರೆ ಕನ್ನಡ ಜನತೆ ಎಚ್ಚೆತ್ತುಕೊಂಡಿತು. ಇವರ ಒಡೆದಾಳುವ ನೀತಿಯನ್ನು ಬಯಲಿಗೆಳೆಯಿತು. ಆದರೂ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಹಾಗಾಗಿ ನಾವು ಜನತೆಯನ್ನು ಎಚ್ಚರಿಸಿ ಮಕ್ಕಳಿಗೆ ಮಹಾನ್ ಆಲೋಚನೆ ಹೊಂದಿದಂತಹ ಮಹನೀಯರ ಜೀವನ ದರ್ಶನವನ್ನು ಹೇಳಬೇಕಾಗಿದೆ. ಇಲ್ಲದಿದ್ದರೆ ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ, ಹಿಂದೂ ಎಂಬ ಹೆಸರಲ್ಲಿ ಇಲ್ಲಿ ಹಿಂಸೆಗೆ ತೊಡಗುತ್ತೆ. ಸರ್ವ ಧರ್ಮ ಸಮನ್ವಯದ ತತ್ವಗಳೆ ಇಲ್ಲವಾಗಿ ಮನುಷ್ಯ ಮನುಷ್ಯರ ನಡುವೆ ಭೇದವೆಣಿಸಿ ವರ್ಣಾಶ್ರಮ ಧರ್ಮವನ್ನು ಜಾರಿಗೆ ತರಲು ಮುಂದಾಗುತ್ತದೆ. ಇದನ್ನು ನಾವು ವಿರೋಧಿಸಬೇಕು. ಕುವೆಂಪು, ದೇವರಾಜ್ ಅರಸು, ಡಾ.ರಾಜಕುಮಾರರ ಆಲೋಚನೆಗಳನ್ನು ಮುಂದಿನ ಜನಾಂಗಕ್ಕೆ ದಾಟಿಸಬೇಕು. ಇದು ಇವತ್ತಿನ ತುರ್ತು ಅಗತ್ಯ ಮತ್ತು ಅನಿವಾರ್ಯ.

ನಿಮಗೆ ಏನು ಅನ್ನಿಸ್ತು?
0 ವೋಟ್