ಯಾವ ಲಜ್ಜೆಯೂ ಇಲ್ಲದೇ ಶಿಕ್ಷಣವನ್ನು ಬ್ರಾಹ್ಮಣೀಕರಣ ಮಾಡಲು ಸರ್ಕಾರ ಹೊರಟಿದೆ- ರಂಗನಾಥ ಕಂಟನಕುಂಟೆ

Textbooks

ಬಾಲ್ಯದಿಂದಲೇ ಮಕ್ಕಳ ಮನಸ್ಸಿನಲ್ಲಿ ಪುರೋಹಿತಶಾಹಿಗಳ ಮೇಲ್ಮೆಯ ವಿಚಾರಗಳನ್ನು ಕಲಿಸುತ್ತಾ ಹೋದರೆ ಆ ಬಗೆಗೆ ಸಾರ್ವಜನಿಕ ಸಮ್ಮತಿ ರೂಪಿಸುವುದು ಸುಲಭವಾಗುತ್ತದೆ. ಸದ್ಯ ಶಿಕ್ಷಣ ವ್ಯವಸ್ಥೆಯ ಹೊರಗೆ ಇದನ್ನು ಸಾಧಿಸಲಾಗಿದೆ. ಮತದಾರರ ಮನಸ್ಸಿನಲ್ಲಿ ಹಿಂದುತ್ವದ ಹೆಸರಿನಲ್ಲಿ ಬ್ರಾಹ್ಮಣ್ಯದ ವಿಚಾರಗಳನ್ನು ಆಳವಾಗಿ ಬೇರೂರಿಸಲಾಗಿದೆ.

ಸದ್ಯ ನಮ್ಮ ರಾಜ್ಯದಲ್ಲಿ ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ಪಠ್ಯಪುಸ್ತಕಗಳ ಮರು ಪರಿಷ್ಕರಣೆ ನಡೆದು ಅವು ಜಾರಿಗೆ ಬರುವ ಹೊತ್ತಿನಲ್ಲಿ ಪ್ರತಿರೋಧ ವ್ಯಕ್ತವಾಗಿದೆ. ಈ ಪ್ರತಿರೋಧ ಸಕಾರಣವಾಗಿಯೇ ಇದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಪಠ್ಯಪುಸ್ತಕದ ಈ ವಿವಾದವನ್ನು ಹುಟ್ಟಿ ಹಾಕಿದ ಶ್ರೇಯಸ್ಸು ರಾಜ್ಯ ಸರ್ಕಾರದ್ದು! ಯಾಕೆಂದರೆ ರೋಹಿತ್ ಚಕ್ರತೀರ್ಥ ಎಂಬ ಅನರ್ಹ, ಜ್ಞಾನ ವಿರೋಧಿಯಾದ ಮತ್ತು ಕೊಳಕು ಮನಸ್ಸಿನ ವ್ಯಕ್ತಿಯನ್ನು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷನನ್ನಾಗಿ ನೇಮಿಸಿದ್ದೇ ಸರ್ಕಾರ. ಅಲ್ಲದೆ ಈ ಸಮಿತಿಯಲ್ಲಿ ಒಂದೇ ಜಾತಿಯ ಜನರು ಇರುವಂತೆ ನೋಡಿಕೊಂಡಿರುವುದೂ ಸರ್ಕಾರ; ಇಲ್ಲವೇ ಅದನ್ನು ನಿಯಂತ್ರಿಸುವ ಸಂವಿಧಾನೇತರ ಶಕ್ತಿಗಳು. ಸರ್ಕಾರ ರಚಿಸಿದ ಈ ಸಮಿತಿ ಮರುಪರಿಷ್ಕರಿಸಿದ ಪಠ್ಯಪುಸ್ತಕಗಳು ಸುಳ್ಳು, ಅಜ್ಞಾನ, ಬ್ರಾಹ್ಮಣ ಪಕ್ಶಪಾತಿತನ, ತಿರುಚಿದ ವಿಚಾರಗಳು, ಬೌದ್ಧಿಕ ದ್ವೇಷ, ಮತೀಯವಾದ ಹಾಗೂ ಸಂವಿಧಾನ ವಿರೋಧಿ ಮೌಲ್ಯಗಳಿಂದ ಕೂಡಿದ ಕಾರಣಕ್ಕಾಗಿಯೇ ಈ ಪ್ರತಿರೋಧ ಹುಟ್ಟಿಕೊಂಡಿದೆ.

ಇಂತಹ ತಿರುಚಿದ ಮತ್ತು ಪಕ್ಷಪಾತಿತನದಿಂದ ಕೂಡಿದ ವಿಚಾರಗಳನ್ನು ಪಠ್ಯಪುಸ್ತಕಗಳಲ್ಲಿ ತುರುಕಿದರೆ ವಿರೋಧ ವ್ಯಕ್ತವಾಗುತ್ತದೆ ಎಂಬುದನ್ನು ತಿಳಿಯದಶ್ಟು ಅಜ್ಞಾನ ಸರ್ಕಾರಕ್ಕೂ, ಸಮಿತಿಗೂ ಇಲ್ಲದಿಲ್ಲ. ಹಾಗೆ ಬರಬಹುದಾದ ಯಾವುದೇ ಪ್ರತಿರೋಧವನ್ನು ಬುಲ್ಡೋಸ್ ಮಾಡಿಯೇ ತನ್ನ ಕಾರ್ಯ ಸಾಧಿಸುವ ಉದ್ದೇಶ ಸರ್ಕಾರಕ್ಕೂ ಸಮಿತಿಗೂ ಇರುವುದು ನಿಗೂಢ ವಿಚಾರವಲ್ಲ. ಸಂಘ ಪ್ರಣೀತ ಬ್ರಾಹ್ಮಣವಾದಿ ಸಿದ್ದಾಂತವನ್ನು ಪ್ರಚಾರ ಮಾಡಲು ನೆರವಾಗುವ ಪಠ್ಯಗಳನ್ನು ಪುಸ್ತಕಗಳಿಗೆ ತುರುಕುವ ಉದ್ದೇಶದಿಂದಲೇ ಈ ಸಮಿತಿ ರಚನೆಯಾಗಿರುವುದು.

ಅದು ಈಗಾಗಲೇ ಜಾರಿಯಲ್ಲಿದ್ದ ಪಠ್ಯಪುಸ್ತಕಗಳನ್ನು ಪರಿಶ್ಕರಿಸಲು ಮುಂದಾಗಿದ್ದು. ಅಂತಹ ಉದ್ದೇಶವಿಲ್ಲದಿದ್ದರೆ ಸಂಘದ ಬ್ರಾಹ್ಮಣವಾದಿ ಸಿದ್ದಾಂತಕ್ಕೆ ವಿರುದ್ಧವಾಗಿರುವ ಮತ್ತು ಬ್ರಾಹ್ಮಣ ಪುರೋಹಿತಶಾಹಿಯನ್ನು ಪ್ರಶ್ನಿಸಿ ವೈಚಾರಿಕತೆಯನ್ನು ಬೆಳೆಸುವ ಅನೇಕರ ಪಠ್ಯಗಳನ್ನು ಕೈಬಿಡುತ್ತಿರಲಿಲ್ಲ. ಚಕ್ರವರ್ತಿ ಸೂಲಿಬೆಲೆಯಂತಹ ಮಹಾನ್ ಸುಳ್ಳುಪುರುಕನ ಬರೆಹಗಳನ್ನು ಪಠ್ಯಗಳಲ್ಲಿ ಸೇರಿಸುತ್ತಿರಲಿಲ್ಲ. ಹಾಗಾಗಿ ಸಮಿತಿಯನ್ನು ರಚಿಸಿ ಅದನ್ನು ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿದ ಸರ್ಕಾರವೇ ಎಲ್ಲ ಸಮಸ್ಯೆಯ ಮೂಲ. ಎಲ್ಲ ತಿಳಿದಿದ್ದೂ ಸರ್ಕಾರ ಇಂತಹ ಕೆಲಸಕ್ಕೆ ಉದ್ದೇಶಪೂರ್ವಕವಾಗಿ ಮುಂದಾಗಿದೆ. ಹಾಗಾಗಿ ಈ ವಿವಾದದ ಹೊಣೆಯನ್ನು ಸರ್ಕಾರವೇ ಹೊರಬೇಕಾಗುತ್ತದೆ. ಮತ್ತು ಈ ನಾಡಿನ ಪ್ರಜ್ಞಾವಂತರು ತೋರುತ್ತಿರುವ ಪ್ರತಿರೋಧವನ್ನು ಎದುರಿಸಬೇಕಿದೆ. ಅವರಿಗೆ ನ್ಯಾಯಯುತ ಉತ್ತರ ನೀಡಿ ಈಗ ಪಠ್ಯಪುಸ್ತಕಗಳ ಪರಿಶ್ಕರಣೆಯ ಹೆಸರಿನಲ್ಲಿ ನಡೆದಿರುವ ಅಕ್ರಮ-ಅನ್ಯಾಯವನ್ನು ಆದಶ್ಟು ಬೇಗ ಸರಿ ಮಾಡಬೇಕಿದೆ.

ಇಲ್ಲಿನ ಮುಖ್ಯ ಪ್ರಶ್ನೆಯೆಂದರೆ ಇಂದಿನ ರಾಜ್ಯ ಸರ್ಕಾರ ಶಾಲಾ ಪಠ್ಯಪುಸ್ತಕಗಳನ್ನು ಪರಿಶ್ಕರಿಸುವ ಕೆಲಸಕ್ಕೆ ಯಾಕೆ ಕೈಹಾಕಿತು? ಇದಕ್ಕೆ ಉತ್ತರ ಸರಳ ಮತ್ತು ನೇರವಾಗಿದೆ. ಇಂದಿನ ಸರ್ಕಾರಕ್ಕೆ ನಿರ್ದಿಶ್ಟವಾದ ಸಿದ್ದಾಂತವಿದೆ. ಅದಕ್ಕೆ ಆರ್‌ಎಸ್‍ಎಸ್‍ನ ವಿಚಾರ ಮತ್ತು ಮಾರ್ಗದರ್ಶನದ ತಳಹದಿಯಿದೆ. ಅದಕ್ಕೆ ಅಧಿಕಾರ ಬೇಕಿರುವುದು ಕೇವಲ ಈ ದೇಶದ ಸಂಪತ್ತನ್ನು ನಿಯಂತ್ರಿಸುವುದು, ಲೂಟಿ ಮಾಡುವ ಉದ್ದೇಶಕ್ಕೆ ಮಾತ್ರವಲ್ಲ. ಅದನ್ನೂ ಒಳಗೊಂಡಂತೆ ಅದಕ್ಕೆ ನಿಜಕ್ಕೂ ಅಧಿಕಾರ ಬೇಕಿರುವುದು ಈ ದೇಶದ ಜನರ ಮನಸ್ಸನ್ನು ಸದಾ ನಿಯಂತ್ರಿಸುವುದು. ಆ ಮೂಲಕ ವರ್ಣ-ಜಾತಿ ವ್ಯವಸ್ಥೆಯನ್ನು ಭದ್ರವಾಗಿ ಉಳಿಸಿಕೊಳ್ಳುವುದು.

ಮನುಸ್ಮೃತಿ ಪ್ರಣೀತ ವಿಚಾರಗಳ ಹೇರಿಕೆ

ಸಾಮಾಜಿಕವಾಗಿ ಜಾತಿ ಶ್ರೇಶ್ಟತೆಯನ್ನು ಎತ್ತಿಹಿಡಿಯುತ್ತ ಇಡೀ ಸಮಾಜದ ಮೇಲೆ ಬ್ರಾಹ್ಮಣರ ದಬ್ಬಾಳಿಕೆ ನಡೆಸುವುದೇ ಆಗಿದೆ. ಇದನ್ನು ಮಿಲಿಟರಿ-ಪೊಲೀಸು ಬಲದಿಂದ ಮಾಡಲು ಸಾಧ್ಯವಿಲ್ಲ. ಈ ಹಿಂದೆ ಅದನ್ನು ದೇವರು-ದೇವಾಲಯ ಮತ್ತು ಮೂಢನಂಬಿಕೆಗಳನ್ನು ಸೃಶ್ಟಿಸುವ ಮೂಲಕ ಮಾಡಿದಂತೆ ಈಗ ಶಿಕ್ಶಣದ ಮೂಲಕವೂ ಮಾಡಬೇಕಿದೆ. ಶಿಕ್ಶಣದ ಮೂಲಕ ಮನುಸ್ಮೃತಿ ಪ್ರಣೀತ ವಿಚಾರಗಳನ್ನು ಹೇರುತ್ತ ಮೇಲ್ಜಾತಿ ಯಜಮಾನಿಕೆಯನ್ನು ಉಳಿಸಿಕೊಳ್ಳಬೇಕಿದೆ. ಈಗಾಗಲೇ ಜಾರಿಯಲ್ಲಿರುವ ಮನುಸ್ಮೃತಿ ಪ್ರಣೀತ ವಿಚಾರಗಳನ್ನು ಇನ್ನಶ್ಟು ದೃಢವಾಗಿಸಿ ಈ ದೇಶದಲ್ಲಿ ಯಥಾಸ್ಥಿತಿ ಇರುವಂತೆ ನೋಡಿಕೊಳ್ಳುವುದಾಗಿದೆ. ಆರ್‌ಎಸ್‍ಎಸ್ ಎಂಬ ಬ್ರಾಹ್ಮಣ ಪುರೋಹಿತಶಾಹಿಗಳ ಸಂಘ ಇದಕ್ಕಾಗಿ ಸದಾ ಹಪಾಹಪಿಸುತ್ತದೆ. ಇದಕ್ಕಾಗಿ ಇನ್ನಿಲ್ಲದ ಪಿತೂರಿ ನಡೆಸುತ್ತದೆ. ಎಲ್ಲ ಬಗೆಯ ವಾಮಮಾರ್ಗಗಳ ಮೂಲಕ ತನ್ನ ಗುಪ್ತಕಾರ್ಯಸೂಚಿಯನ್ನು ಜಾರಿಗೆ ತರಲು ಯತ್ನಿಸುತ್ತದೆ. ಅದರ ಒಂದು ಸಣ್ಣ ಸ್ಯಾಂಪಲ್ ಈ ಪಠ್ಯಪುಸ್ತಕಗಳ ಪರಿಶ್ಕರಣೆಯ ಪ್ರಹಸನ.
ಹಾಗಾಗಿ ಸಂಘ ಪೋಶಿತ ಯಾವುದೇ ಸರ್ಕಾರ ರಾಜ್ಯದಲ್ಲಿ ದೇಶದಲ್ಲಿ ಅಧಿಕಾರಕ್ಕೆ ಬಂದರೂ ಅದು ತಕ್ಶಣವೇ ಶಿಕ್ಶಣವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಬಯಸುತ್ತದೆ. ಯಾಕೆಂದರೆ ತಮ್ಮ ಗುಪ್ತ ಬ್ರಾಹ್ಮಣ ಕಾರ್ಯಸೂಚಿಯನ್ನು ಜಾರಿಗೆ ತರಲು ಇರುವ ಅತ್ಯಂತ ಪರಿಣಾಮಕಾರಿ ಸಾಧನವೆಂದರೆ ಶಿಕ್ಶಣವೇ ಆಗಿದೆ.

Image
RSS leaders

ಬಾಲ್ಯದಿಂದಲೇ ಮಕ್ಕಳ ಮನಸ್ಸಿನಲ್ಲಿ ಪುರೋಹಿತಶಾಹಿಗಳ ಮೇಲ್ಮೆಯ ವಿಚಾರಗಳನ್ನು ಕಲಿಸುತ್ತಾ ಹೋದರೆ ಆ ಬಗೆಗೆ ಸಾರ್ವಜನಿಕ ಸಮ್ಮತಿ ರೂಪಿಸುವುದು ಸುಲಭವಾಗುತ್ತದೆ. ಸದ್ಯ ಶಿಕ್ಶಣ ವ್ಯವಸ್ಥೆಯ ಹೊರಗೆ ಇದನ್ನು ಸಾಧಿಸಲಾಗಿದೆ. ವಿವಿಧ ಬಗೆಯ ಮಾಧ್ಯಮಗಳನ್ನು ಇದಕ್ಕೆ ಬಳಸಿಕೊಳ್ಳಲಾಗುತ್ತಿದೆ. ಮತದಾರರ ಮನಸ್ಸಿನಲ್ಲಿ ಹಿಂದೂತ್ವದ ಹೆಸರಿನಲ್ಲಿ ಬ್ರಾಹ್ಮಣ್ಯದ ವಿಚಾರಗಳನ್ನು ಆಳವಾಗಿ ಬೇರೂರಿಸಲಾಗಿದೆ. ಇದು ಅವರಿಗೆ ಚುನಾವಣೆಯಲ್ಲಿ ಒಳ್ಳೆಯ ಮತದ ಬೆಳೆಯನ್ನು ತೆಗೆದುಕೊಡುತ್ತಿದೆ. ಇದು ಅವರಲ್ಲಿ ಮತ್ತು ಅಹಂಕಾರ ಹಾಗೂ ಅಧಿಕಾರದ ಮದ ಬೆಳೆಯಲು ಕಾರಣವಾಗಿದೆ. ಇದನ್ನು ಶಾಶ್ವತಗೊಳಿಸಲು ಶಿಕ್ಶಣವನ್ನೂ ಒಂದು ಮಾಧ್ಯಮವನ್ನಾಗಿ ಬಳಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಎಲ್ಲ ಜಾತಿಗಳ ವಿದ್ಯಾರ್ಥಿಗಳನ್ನು ಬ್ರಾಹ್ಮಣ್ಯದ ಗುಲಾಮರನ್ನಾಗಿಸಿ, ಅವರನ್ನು ಹಿಂದೂತ್ವ ಮತ್ತು ಬ್ರಾಹ್ಮಣವಾದಿ ಸಿದ್ದಾಂತದ ಬೆಂಬಲಿಗರನ್ನಾಗಿ ಮತಾಂತರಿಸಲು ಶಿಕ್ಶಣವನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.

ಆದರೆ ನಮ್ಮ ಶಿಕ್ಶಣ ವ್ಯವಸ್ಥೆ ಬ್ರಾಹ್ಮಣ್ಯವನ್ನು ಪ್ರಶ್ನಿಸುತ್ತ ವೈಚಾರಿಕತೆಯನ್ನು ಬೆಳೆಸುತ್ತ ಬಂದಿದೆ. ಇದು ಬ್ರಾಹ್ಮಣ ಪುರೋಹಿತಶಾಹಿಗೆ ನುಂಗಲಾರದ ತುತ್ತು. ಹಾಗಾಗಿ ಎಲ್ಲೆಲ್ಲಿ ಪುರೋಹಿತಶಾಹಿಯನ್ನು ಪ್ರಶ್ನಿಸುವ ಪಠ್ಯ ಭಾಗಗಳು ಇವೆಯೋ ಅವನ್ನು ಕೈಬಿಟ್ಟಿರುವುದನ್ನು ಇಲ್ಲವೇ ತಿರುಚಿರುವುದನ್ನು ಗಮನಿಸಿದರೆ ಇದು ಸ್ಪಶ್ಟವಾಗುತ್ತದೆ. ಅಂದರೆ ಶೈಕ್ಶಣಿಕವಾಗಿ ಪುರೋಹಿತಶಾಹಿಗೆ ಎದುರಾಗಿರುವ ಸವಾಲುಗಳನ್ನು ನಿವಾರಿಸಿಕೊಳ್ಳುವ ಉದ್ದೇಶವಿದೆ.

ಬಸವಣ್ಣ, ಕನಕದಾಸ, ಕುವೆಂಪು, ದೇವನೂರು ಸಾಹಿತ್ಯ ಪರಂಪರೆಗೆ ವಿರೋಧ

ಇದುವರೆಗಿನ ಶಿಕ್ಶಣ ವ್ಯವಸ್ಥೆ ತನ್ನದೇ ಆದ ವೈಚಾರಿಕತೆಯನ್ನು ಬೆಳೆಸಿದ್ದು ಅದು ಪುರೋಹಿತಶಾಹಿ ವಿರೋಧಿ ವಾತಾವರಣವನ್ನು ರೂಪಿಸಿದೆ. ಅಲ್ಲದೆ ಕನ್ನಡ ಸಾಹಿತ್ಯ ಚಿಂತನೆಯ ಪರಂಪರೆಯೂ ಪುರೋಹಿತಶಾಹಿಯ ವಿರುದ್ಧವೇ ಇದೆ. ಬಸವಣ್ಣ, ಕನಕದಾಸ ಕುವೆಂಪು ದೇವನೂರು ಮಹಾದೇವ ಹೀಗೆ ನಿಡುಗಾಲದ ಸಾಹಿತ್ಯ ಪರಂಪರೆ ಅದನ್ನು ವಿರೋಧಿಸುತ್ತಲೇ ಬರುತ್ತದೆ. ಇಂತಹ ಪರಂಪರೆಯ ಪ್ರಭಾವ ಹಾಗೂ ಆಧುನಿಕ ಶಿಕ್ಶಣ ಪಡೆದು ಬೆಳೆದು ಬಂದವರು ಪುರೋಹಿತಶಾಹಿಯ ಸಿದ್ದಾಂತವನ್ನು, ವಿಚಾರಧಾರೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಇದನ್ನು ಪುರೋಹಿತಶಾಹಿಗಳಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಹಾಗಾಗಿಯೇ ತಮ್ಮನ್ನು ವಿರೋಧಿಸುವ ಜನರನ್ನು ‘ಬುದ್ಧಿಜೀವಿ’ಗಳು ಎಂದು ಅವರನ್ನು ಬ್ರಾಂಡ್ ಮಾಡಿ, ಹಂಗಿಸಿ, ಗೇಲಿ ಮಾಡಿ ಅವರ ವ್ಯಕ್ತಿತ್ವ ನಾಶ ಮಾಡುವ ಕೆಲಸವನ್ನು ಲಜ್ಜೆಯಿಲ್ಲದೆ ಮಾಡಿಕೊಂಡು ಬರಲಾಗುತ್ತಿದೆ. ಹೀಗೆ ಮಾಡಿಕೊಂಡು ಬರುವಂತೆ ದಲಿತ ಶೂದ್ರ ಯುವಕರಿಗೂ ಕಲಿಸಿಕೊಡಲಾಗಿದೆ. ಅವರನ್ನು ತಮ್ಮ ಕಾಲಾಳುಗಳನ್ನಾಗಿ ಮಾಡಿಕೊಳ್ಳಲಾಗಿದೆ. ಅಲ್ಲದೆ ವಿದ್ಯಾರ್ಥಿಗಳ ಜ್ಞಾನ ಮತ್ತು ವೈಚಾರಿಕತೆಯನ್ನು ಬೆಳೆಸುವಂತಹ ಜೆಎನ್‍ಯುನಂತಹ ಶಿಕ್ಶಣ ಸಂಸ್ಥೆಗಳ ಮೇಲೆ ಅಪಪ್ರಚಾರ ಮಾಡಿ ಅವುಗಳನ್ನು ನಾಶ ಮಾಡಲಾಗುತ್ತಿದೆ. ಮೇಲೆ ಹೇಳಿದಂತೆ ಪುರೋಹಿತಶಾಹಿಯ ವಿರುದ್ಧ ಸಮರ ಸಾರಿದ್ದ ಬಸವಣ್ಣ, ಅಂಬೇಡ್ಕರ್, ಕುವೆಂಪು ಅವರಂತಹ ಯುಗಪ್ರವರ್ತಕರ ವಿರುದ್ಧ ಅಪಪ್ರಚಾರ ಮಾಡುತ್ತ, ಅವರ ವ್ಯಕ್ತಿತ್ವವನ್ನು ನಾಶ ಮಾಡುತ್ತ ಬರಲಾಗುತ್ತಿದೆ. ಉದಾಹರಣೆಗೆ ಮಲೆನಾಡಿನ ಶೂದ್ರ ಹುಡುಗರನ್ನೇ ಕುವೆಂಪು ವಿರುದ್ದ ಎತ್ತಿಕಟ್ಟಲಾಗಿದೆ. ಕುವೆಂಪು ಅವರ ವಿರುದ್ದ ಅಪಪ್ರಚಾರ ಮಾಡುವಂತೆ ಮಾಡಲಾಗಿದೆ. ಸಾಂಸ್ಕೃತಿಕವಾಗಿ ಮಹತ್ವವಾಗಿರುವ ವ್ಯಕ್ತಿತ್ವಗಳನ್ನು ನಾಶ ಮಾಡುವ ಕೆಲಸದಲ್ಲಿ ನಿರತನಾಗಿದ್ದವನನ್ನೇ ಪಠ್ಯಪುಸ್ತಕಗಳನ್ನು ಪರಿಶ್ಕರಿಸುವ ಸಮಿತಿಗೆ ಅಧ್ಯಕ್ಶನನ್ನಾಗಿಸಿರುವುದು ಕಾಕತಾಳೀಯವಲ್ಲ.

ಬ್ರಾಹ್ಮಣಶಾಹಿಯ ವಿರುದ್ಧ ಅರಿವು ಮೂಡಿಸುವ ಯಾವುದೇ ಬಗೆಯ ಶಿಕ್ಶಣವನ್ನು ‘ಮೆಕಾಲೆ ಶಿಕ್ಶಣ’ ಎಂದು ಜರಿಯುತ್ತ ಬರಲಾಗಿದೆ. ಆಧುನಿಕ ‘ವೈಚಾರಿಕತೆ’ಯನ್ನು ಪಾಶ್ಚಿಮಾತ್ಯ ಮೂಲದ್ದು ಎಂದು ವಾದಿಸುತ್ತ ಅದರ ಬಗೆಗೆ ಅಪಪ್ರಚಾರ ಮಾಡುತ್ತ ಬರಲಾಗುತ್ತಿದೆ. ಹಾಗೆ ವಾದಿಸುತ್ತ ದೇಸೀ ಶಿಕ್ಶಣದ ಹೆಸರಲ್ಲಿ ಪುರೋಹಿತಶಾಹಿ ಮೌಲ್ಯಗಳನ್ನು ಎತ್ತಿ ಹಿಡಿಯಲು ಹೊರಟಿದೆ. ಅದಕ್ಕಾಗಿಯೇ ಪಠ್ಯಪುಸ್ತಕಗಳ ಪರಿಶ್ಕರಣೆಯ ಹೆಸರಲ್ಲಿ ಕಾನೂನು ಬದ್ಧವಾದ ದೌರ್ಜನ್ಯ ಎಸಗಲು ಹೊರಟಿದೆ. ಆದರೆ ಆಧುನಿಕ ವೈಚಾರಿಕತೆ ಈ ನೆಲದಲ್ಲಿ ವಿವಿಧ ಜನಸಮುದಾಯಗಳಲ್ಲಿ ಹುಟ್ಟಿರುವ ಒಂದು ಆಂತರಿಕ ಎಚ್ಚರ. ಶತಮಾನಗಳ ಅಪಮಾನದ ವಿರುದ್ಧ ಹುಟ್ಟಿಕೊಂಡಿರುವ ಆಕ್ರೋಶ. ಜನರು ತಮ್ಮ ಬಿಡುಗಡೆಗೆ ತಾವೇ ಕಂಡುಕೊಳ್ಳುತ್ತಿರುವ ಅರಿವಿನ ದಾರಿ. ಆದರೆ ಅದನ್ನು ನಿರಾಕರಿಸಿ ಅಪಮಾನಿಸುವ ಕೆಲಸವನ್ನು ಬ್ರಾಹ್ಮಣಶಾಹಿ ಮಾಡುತ್ತ ಬರುತ್ತಿದೆ.

Image
Brahmin

ಇಂತಹ ದೌರ್ಜನ್ಯಕ್ಕೆ ಬಹಳ ಉದ್ದೇಶಪೂರ್ವಕವಾಗಿ ಬ್ರಾಹ್ಮಣರೇ ಸಮಿತಿಯಲ್ಲಿರುವಂತೆ ನೋಡಿಕೊಳ್ಳಲಾಗಿದೆ.  ಆ ಮೂಲಕ ಬ್ರಾಹ್ಮಣ್ಯವನ್ನು ಪ್ರಶ್ನೆ ಮಾಡುವ ಎಲ್ಲ ಪಠ್ಯಗಳನ್ನು ಕೈಬಿಟ್ಟು ಬ್ರಾಹ್ಮಣ್ಯವನ್ನು ಎತ್ತಿಹಿಡಿಯುವ ಪಠ್ಯಗಳನ್ನು ಸೇರಿಸಿದೆ. ಇದನ್ನು ಗಮನಿಸಿದರೆ ಈ ಸರ್ಕಾರದ ಮತ್ತು ಸಮಿತಿಯ ಉದ್ದೇಶವೇನು ಎಂಬುದು ಸ್ಪಶ್ಟವಾಗುತ್ತದೆ. ಈ ಸಮಿತಿ ಮರುಪರಿಶೀಲನೆಯ ಹೆಸರಲ್ಲಿ ಕೆಲವನ್ನು ಕೈಬಿಟ್ಟು, ಕೆಲವನ್ನು ತಿರುಚಿ ಕೆಲವನ್ನು ಹೊಸದಾಗಿ ಸೇರಿಸಿದೆ. ಹೀಗೆ ಮಾಡುವಾಗ ಅದರಲ್ಲಿ ಬ್ರಾಹ್ಮಣ್ಯದ ಪೂರ್ವಾಗ್ರಹ ಕೆಲಸ ಮಾಡಿರುವುದು ಮತ್ತು ಹಿಂದೂತ್ವವಾದವನ್ನು ಹೇರಲು ಯತ್ನಿಸಿರುವುದು ಸ್ಪಶ್ಟವಾಗಿ ಗೋಚರಿಸುತ್ತದೆ. ಹೀಗೆ ದುರುದ್ದೇಶ ಮತ್ತು ಪೂರ್ವಾಗ್ರಹಪೀಡಿತ ಉದ್ದೇಶದಿಂದ ಮಾಡುವ ಕೆಲಸ ಇಡೀ ನಾಡಿಗೆ ಎಸಗುವ ಬಹುದೊಡ್ಡ ದ್ರೋಹವಾಗಿರುತ್ತದೆ.

ಈ ದೇಶ ಬ್ರಾಹ್ಮಣರ ಖಾಸಗಿ ಸ್ವತ್ತಲ್ಲ

ಇದನ್ನೇ ದೇವನೂರು ಮಹಾದೇವ ಅವರು ತಮ್ಮ ಪತ್ರವೊಂದರಲ್ಲಿ ಕೇಡಿನ ಕೃತ್ಯವೆಂದು ಎಚ್ಚರಿಸಿರುವುದು. ಇಂತಹ ಕೇಡಿನ ಕೆಲಸ ಮುಂದುವರಿಯಬಾರದು ಎಂದಿದ್ದಾರೆ. ಈ ಕೇಡಿನ ಪರಿಣಾಮವನ್ನು ಅರಿತೇ ದೇವನೂರ ಮಹಾದೇವ, ಎಸ್ ಜಿ ಸಿದ್ದರಾಮಯ್ಯ, ಮೂಡ್ನಾಕೂಡು ಚಿನ್ನಸ್ವಾಮಿ, ಜಿ ರಾಮಕೃಶ್ಣ ಮುಂತಾದವರು ವಿರೋಧಿಸಿದ್ದಾರೆ. ಅಲ್ಲದೆ ತಮ್ಮ ಬರೆಹಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಲು ನೀಡಿದ್ದ ಅನುಮತಿಯನ್ನು ಹಿಂಪಡೆದುಕೊಂಡು ಪ್ರತಿಭಟಿಸಿದ್ದಾರೆ. ಹೀಗೆ ಪ್ರತಿಭಟಿಸಲು ಹಲವು ಕಾರಣಗಳಿವೆ. ಮೊದಲಿಗೆ ಈ ದೇಶ ಬ್ರಾಹ್ಮಣರ ಖಾಸಗಿ ಸ್ವತ್ತಲ್ಲ. ಇದು ಎಲ್ಲ ಜನಸಮುದಾಯಗಳ ಸ್ವತ್ತು. ಇಲ್ಲಿ ಎಲ್ಲರೂ ಹಕ್ಕುದಾರರೇ ಆಗಿದ್ದಾರೆ. ಇಲ್ಲಿ ಎಲ್ಲರಿಗೂ ಸಮಾನ ಸ್ಥಾನವಿದೆ ಮತ್ತು ಹಕ್ಕಿದೆ. ಇದನ್ನು ಸಂವಿಧಾನ ಮಾನ್ಯ ಮಾಡಿದೆ. ಆದರೆ ಇದನ್ನು ಮರೆಮಾಚಿ ಬ್ರಾಹ್ಮಣರ ಇರುವಿಕೆಯನ್ನು ಮಾತ್ರ ಸಮರ್ಥಿಸುವ ಪಠ್ಯಪುಸ್ತಕಗಳನ್ನು ರೂಪಿಸುವುದು ಅಕ್ಶಮ್ಯ. ಅಲ್ಲದೆ ಸಂವಿಧಾನದ ಉದಾತ್ತವಾದ ಮೌಲ್ಯಗಳನ್ನು ಬದಿಗೊತ್ತಿ ಊಳಿಗಮಾನ್ಯ ದೊರೆಗಳ ಕಾಲದಲ್ಲಿದ್ದಂತೆ ಬ್ರಾಹ್ಮಣ ಪುರೋಹಿತಶಾಹಿ ಕೇಂದ್ರಿತ ಶಿಕ್ಶಣವನ್ನು ರೂಪಿಸುವುದು; ವೇದ, ಉಪನಿಶತ್ತು, ಗೀತೆ, ಸ್ಮೃತಿ, ಸಂಸ್ಕೃತಗಳ ಜಪ ಮಾಡುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ. ಅದನ್ನೇ ಈ ದೇಶದ ನಿಜವಾದ ಜ್ಞಾನ ಮತ್ತು ಸಂಸ್ಕೃತಿ ಎಂದು ವಾದಿಸುವುದು ವಿಕೃತಿಯೇ ಸರಿ. ಈ ವಿಕೃತ ಧೋರಣೆ ಹೊಂದಿರುವವರು ಎಲ್ಲ ಜಾತಿಗಳ ಜನರು ಬ್ರಾಹ್ಮಣರ ಗುಲಾಮಗಿರಿ ಮಾಡಿಕೊಂಡಿರುವಂತೆ ಬಯಸುತ್ತಾರೆ. ಹಾಗಾಗಿ ಶಿಕ್ಶಣದಲ್ಲಿ ಬ್ರಾಹ್ಮಣರು ಮೇಲುಗೈ ಸಾಧಿಸುವುದನ್ನು ಇಲ್ಲವೇ ಶಿಕ್ಶಣದ ಬ್ರಾಹ್ಮಣೀಕರಣವನ್ನು ಯಾವ ಕಾರಣಕ್ಕೂ ಒಪ್ಪಲಾಗದು.

Image
Devanuru

ಸಂವಿಧಾನದ ಮಾರ್ಗದರ್ಶಿ ಸೂತ್ರಗಳ ಆಧಾರದ ಮೇಲೆ ಎಲ್ಲ ಬಗೆಯ ಅಸಮಾನತೆಯನ್ನು ತೊಡೆದು ಹಾಕಿ ಸಮಾನತೆಯನ್ನು ಸಾಧಿಸುವ ಆಶಯವಿರುವ ಶಿಕ್ಶಣವನ್ನು ಮಾತ್ರ ಈ ದೇಶದಲ್ಲಿ ಜಾರಿಗೆ ತರಬೇಕಿದೆ. ವರ್ಗ, ಜಾತಿ, ಮತಗಳನ್ನು ಮೀರಿದ ಧರ್ಮನಿರಪೇಕ್ಶವಾದ ಶಿಕ್ಶಣವನ್ನು ನೀಡಬೇಕಿದೆ. ಪುರುಶ ದುರಭಿಮಾನ ಹೊಂದಿರುವ ಶಿಕ್ಶಣವನ್ನು ನೀಡದಂತೆ ಎಚ್ಚರವಹಿಸಬೇಕಾಗುತ್ತದೆ. ಅದಕ್ಕಾಗಿ ರಾಶ್ಟ್ರೀಯ ಮತ್ತು ರಾಜ್ಯದ ಶಿಕ್ಶಣ ನೀತಿಗಳನ್ನು ರೂಪಿಸಬೇಕಿದೆ. ಆದರೆ ಈ ದಿಸೆಯಲ್ಲಿ ನಡೆದಿದ್ದ ಪ್ರಯತ್ನಗಳ ಕೊರಳು ಹಿಸುಕಿ ಬ್ರಾಹ್ಮಣಶಾಹಿ ಮೌಲ್ಯಗಳನ್ನು ಶಿಕ್ಶಣದ ಮೂಲಕ ಜಾರಿಗೆ ತರಲು ಇಂದಿನ ಸರ್ಕಾರ ಇಚ್ಚಿಸಿದೆ. ಅದಕ್ಕಾಗಿ ರಾಶ್ಟ್ರೀಯ ಶಿಕ್ಶಣ ನೀತಿಯನ್ನು ಜಾರಿಗೆ ತರಲು ಆತುರಾತುರವಾಗಿ ಯತ್ನಿಸಲಾಗುತ್ತಿದೆ.

ಸಮಾಜದಲ್ಲಿ ಇಂದಿಗೂ ಜಾತಿ ಪದ್ದತಿಯನ್ನು ಇಡಿಯಾಗಿ ನಿವಾರಿಸಲಾಗದಿದ್ದರೂ ಕನಿಶ್ಟ ಶೈಕ್ಶಣಿಕ ಪರಿಸರದಲ್ಲಿಯಾದರೂ ಸಮಾನತೆಯ ಮೌಲ್ಯಗಳನ್ನು ಮಕ್ಕಳಿಗೆ ಬೋಧಿಸಲೇಬೇಕಾಗಿದೆ. ಇದು ನಿಡುಗಾಲದಲ್ಲಿ ಸಮಾಜದಲ್ಲಿ ಬದಲಾವಣೆ ತರುವ ಕೆಲಸ ಮಾಡಬಹುದು ಕನಸು ಪ್ರಜ್ಞಾವಂತರದು. ಆದರೆ ಇದಕ್ಕೆ ಅವಕಾಶ ನೀಡದೆ ಶಿಕ್ಶಣವನ್ನು ಸಂಪೂರ್ಣವಾಗಿ ಬ್ರಾಹ್ಮಣೀಕರಣ ಮಾಡಲು ಹೊರಟಿರುವುದು ಬಹುದೊಡ್ಡ ದುರಂತ. ಅದರಲ್ಲಿಯೂ ದಲಿತರು ಮತ್ತು ಶೂದ್ರ ಜಾತಿ ಸಮುದಾಯಗಳನ್ನು ವ್ಯವಸ್ಥಿತವಾಗಿ ಶಿಕ್ಶಣದ ಹೊರಗಿಟ್ಟು ಪಠ್ಯಪುಸ್ತಕಗಳನ್ನು ರೂಪಿಸುತ್ತಿರುವುದು ಕಾಣಿಸುತ್ತಿದೆ. ಆ ಮೂಲಕ ಅವುಗಳ ಅಸ್ಮಿತೆಯನ್ನೇ ನಿರಾಕರಿಸಿ ಶೂದ್ರ ಮತ್ತು ದಲಿತ ಸಮುದಾಯಗಳನ್ನು ಕೇವಲ ಸೇವಕ ಜಾತಿಗಳಂತೆ ಬಿಂಬಿಸಲು ಪ್ರಯತ್ನಿಸುವುದು ನಿಚ್ಚಳವಾಗಿ ಕಾಣುತ್ತಿದೆ.

ಚಿಂತಕರ ಅವಹೇಳನ

ಅಸಮಾನತೆಯ ಮೌಲ್ಯಗಳನ್ನು ಸ್ಥಿರೀಕರಿಸಲು ಶಿಕ್ಶಣವನ್ನು ಬಳಸಿಕೊಳ್ಳಲಾಗುತ್ತಿದೆ. ಬ್ರಾಹ್ಮಣ ಪುರೋಹಿತಶಾಹಿಗಳ ವಿಕೃತ ಸ್ವಾರ್ಥಕ್ಕೆ ಈ ನಾಡಿನ ಭವಿಶ್ಯವನ್ನು ಬಲಿಕೊಡುವ ಕೆಲಸಕ್ಕೆ ಕೈಹಾಕಲಾಗಿದೆ.
ಇಲ್ಲಿ ಗಮನಿಸಬೇಕಾದ ಇನ್ನೊಂದು ಅತ್ಯಂತ ಪ್ರಮುಖ ಸಂಗತಿಯೆಂದರೆ ಈ ಪಠ್ಯಪುಸ್ತಕ ಪರಿಶ್ಕರಣೆಯ ಪ್ರಯತ್ನವು ಜ್ಞಾನವಿರೋಧಿಯಾದುದು. ಶಿಕ್ಶಣದ ಬಹುಮುಖ್ಯ ಉದ್ದೇಶವೇ ಜ್ಞಾನ ಸಂಗೋಪನೆ. ಆದರೆ ಈಗಿನ ಶಿಕ್ಶಣವನ್ನು ಜ್ಞಾನ ವಿರೋಧಿಯಾದ ದ್ವೇಶ ಸಿದ್ಧಾಂತದ ತಳಹದಿಯ ಮೇಲೆ ಜಾರಿಗೆ ತರಲು ಪ್ರಯತ್ನಿಸ ಲಾಗುತ್ತಿದೆ. ಯಾಕೆಂದರೆ ಸಂಘಪರಿವಾರವು ಯಾವತ್ತೂ ಜ್ಞಾನದ ಮತ್ತು ವೈಚಾರಿಕತೆಯ ವಿರೋಧಿ. ಹಾಗಾಗಿಯೇ ಈ ನಾಡಿನ ಮಹತ್ವದ ಚಿಂತಕರನ್ನು ಅವಹೇಳನ ಮಾಡುತ್ತಲೇ ಬಂದ ವ್ಯಕ್ತಿಯನ್ನು ಪಠ್ಯಪುಸ್ತಕ ಮರುಪರಿಶ್ಕರಣೆ ಸಮಿತಿಯ ಅಧ್ಯಕ್ಶನನ್ನಾಗಿಸಲಾಗಿದೆ. ಆತ ಸದಾ ನೈಜ ವಿಚಾರಗಳನ್ನು ವಕ್ರೀಕರಿಸಿದ್ದು, ಅವಹೇಳನ ಮಾಡಿದ್ದು ಬಿಟ್ಟರೆ ಜ್ಞಾನ ಮತ್ತು ವೈಚಾರಿಕತೆಗಳ ಹಾಗೂ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿದ ಮನುಶ್ಯನೇ ಅಲ್ಲ. ದ್ವೇಶವು ಆತನ ಅರ್ಹತೆಯಾಗಿರುವುದು ಬಿಟ್ಟರೆ ಉಳಿದೇನೂ ಇಲ್ಲ. ಅಂತಹವನ ನೇತೃತ್ವದಲ್ಲಿ ಪಠ್ಯಪುಸ್ತಕಗಳನ್ನು ರೂಪಿಸಿ ನಿಜಸಂಗತಿಗಳನ್ನು ಡೈಲ್ಯೂಟ್ ಮಾಡಲು ಯತ್ನಿಸಲಾಗುತ್ತಿದೆ. ಆ ಮೂಲಕ ಸತ್ಯಸಂಗತಿಗಳನ್ನು ಬದಿಗೆ ಸರಿಸಿ ಚರಿತ್ರೆಯನ್ನು, ಸಾಹಿತ್ಯ ಸಂಸ್ಕೃತಿಯನ್ನು ವಕ್ರೀಕರಿಸುವ ಕೆಲಸ ಮಾಡಲಾಗುತ್ತಿದೆ. ಈ ಕೆಲಸವನ್ನು ಜನರ ಬೆಂಬಲದ ಹೆಸರಲ್ಲಿ ಮತ್ತು ಜನರ ಬೆವರಿನ ಹಣದ ನೆರವಿನಿಂದ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವ ನೀಡಿರುವ ಅವಕಾಶಗಳನ್ನು ಬಳಸಿಕೊಂಡೇ ಪ್ರಜಾಪ್ರಭುತ್ವ ವಿರೋಧಿಯಾದ ಮತ್ತು ಜ್ಞಾನ ವಿರೋಧಿಯಾದ ಕೆಲಸವನ್ನು ಮಾಡಲಾಗುತ್ತಿದೆ. ಇದು ಅವರನ್ನು ಬೆಂಬಲಿಸಿದ ಮತದಾರರಿಗೆ ಮತ್ತು ಈ ನಾಡಿಗೆ ಮಾಡುವ ಅಪಮಾನ.

ಈ ದಾಳಿಯನ್ನು ಅರಿತುಕೊಂಡು ಇದನ್ನು ಹಿಮ್ಮೆಟ್ಟಿಸದಿದ್ದರೆ ಈ ನಾಡಿನ ಬಹುಸಂಖ್ಯಾತರ ದುಡಿವ ಜನ ವರ್ಗಗಳಿಗೆ ಉತ್ತಮ ಭವಿಶ್ಯ ನಿರ್ಮಾಣವಾಗದು. ಇಂತಹ ಹುನ್ನಾರ ನಡೆಸುವ ಜನರನ್ನು ರಾಜಕೀಯವಾಗಿ ಸೋಲಿಸುವುದು ಮಾತ್ರವಲ್ಲದೆ, ಸೈದ್ಧಾಂತಿಕ ಸಂಘರ್ಶದ ಮೂಲಕ ಅವರನ್ನು ಎದುರುಗೊಂಡು ಅವರ ವಂಚನೆಯನ್ನು ಬಹಿರಂಗಗೊಳಿಸಬೇಕಿದೆ. ಈ ಕೆಲಸ ನಿರ್ವಹಿಸಲು ಶೂದ್ರ ಮತ್ತು ದಲಿತ ಸಮುದಾಯಗಳಿಗೆ ಜ್ಞಾನ ಬೇಕಿದೆ. ಇದು ಅವರ ಬಿಡುಗಡೆಗೆ ಅತ್ಯಗತ್ಯ. ಆದರೆ ಅಂತಹ ಜ್ಞಾನವನ್ನೇ ನಾಶ ಮಾಡುವ ಮೂಲಕ ಶೂದ್ರ-ದಲಿತರನ್ನು ನಿಶ್ಯಸ್ತ್ರವಾಗಿಸಿ ದಾಸ್ಯದಲ್ಲಿ ಬಿದ್ದಿರುವಂತೆ ನೋಡಿಕೊಳ್ಳಲಾಗುತ್ತಿದೆ. ಇದನ್ನು ಅರ್ಥ ಮಾಡಿಕೊಳ್ಳುವಲ್ಲಿ ದಲಿತರು ಶೂದ್ರರು ಸೋತಿರುವ ಕಾರಣದಿಂದಲೇ ಬ್ರಾಹ್ಮಣಶಾಹಿಗಳ ಠೇಂಕಾರ ಮಿತಿಮೀರಿದೆ. ಯಾವ ಲಜ್ಜೆಯೂ ಇಲ್ಲದೆ ಶಿಕ್ಶಣವನ್ನು ಬ್ರಾಹ್ಮಣೀಕರಣ ಮಾಡಲು ಹೊರಟಿದೆ. ಆ ಮೂಲಕ ಎಲ್ಲ ಪ್ರಗತಿಪರ, ದಲಿತ ಶೂದ್ರ ಚಿಂತನೆಗಳ ಮೇಲೆ ಸಮರ ಸಾರಿದೆ.

ಇದನ್ನು ಓದಿದ್ದೀರಾ? ಸ್ತ್ರೀದ್ವೇಷಿ ಪೋಸ್ಟ್‌ಗೆ ವಿರೋಧ; ಫೇಸ್‌ಬುಕ್‌, ಟ್ವಟರ್‌ ಖಾತೆ ಲಾಕ್‌ ಮಾಡಿದ ರೋಹಿತ್‌ ಚಕ್ರತೀರ್ಥ

ಈ ದೃಶ್ಟಿಯಿಂದ ನೋಡಿದರೆ ಸೈದ್ಧಾಂತಿಕ ನೆಲೆಯಲ್ಲಿ ಎಡ-ಬಲಗಳ ನಡುವೆ ಇಂದಿನ ಕರ್ನಾಟಕ ವಿಭಜನೆಗೊಂಡಿದೆ. ಭಾಶೆ, ಧರ್ಮ, ಸಿದ್ಧಾಂತ ಎಲ್ಲವೂ ಇಲ್ಲಿ ವಿವಾದಿತ ಸಂಗತಿಗಳೇ ಆಗಿವೆ. ಸದ್ಯ ಎಡಪಂಥೀಯ ಮತ್ತು ಪ್ರಗತಿಪರ ಚಿಂತನೆಗಳ ಮೇಲಿನ ದಾಳಿ ತೀವ್ರ ರೂಪ ಪಡೆದಿದ್ದು ಅದು ಅಪಾಯದಲ್ಲಿದೆ. ಅದರ ಮತ್ತೊಂದು ಎತ್ತುಗೆಯಾಗಿ ಪಠ್ಯಪುಸ್ತಕಗಳ ಪರಿಶ್ಕರಣೆಯ ವಿದ್ಯಮಾನವು ಜರುಗಿದೆ. ಹಾಗಾಗಿ ಪಠ್ಯಪುಸ್ತಕಗಳ ಪರಿಶ್ಕರಣೆಯು ಸಂಘಪರಿವಾರದ ಹಿಡನ್ ಅಜೆಂಡವನ್ನು ಜಾರಿಗೆ ತರುವ ಯೋಜನೆಯ ಭಾಗವಾಗಿಯೇ ನಡೆಯುತ್ತಿದೆ ಎಂಬುದರಲ್ಲಿ ಇಂದು ಯಾರಿಗೂ ಸಂದೇಹವಿಲ್ಲ.

ಹಾಗಾಗಿ ಈ ವಿವಾದವನ್ನು ಒಂದು ವಿಸ್ತೃತವಾದ ತಾತ್ವಿಕ ಮತ್ತು ರಾಜಕೀಯ ನೆಲೆಗಟ್ಟಿನಲ್ಲಿ ಅರ್ಥ ಮಾಡಿಕೊಳ್ಳುತ್ತ ಸೈದ್ಧಾಂತಿಕ ಹೋರಾಟವನ್ನು ಮುಂದುವರಿಸಬೇಕಿದೆ. ಬ್ರಾಹ್ಮಣಶಾಹಿಯ ಮಹಿಳೆ, ದಲಿತ ಮತ್ತು ಶೂದ್ರ ವಿರೋಧಿ ಸಿದ್ದಾಂತವನ್ನು ಸೋಲಿಸಬೇಕಿದೆ. ಇದಕ್ಕೆ ಬದಲಿ ಜ್ಞಾನಪರಂಪರೆಯನ್ನು ರೂಪಿಸುವುದು ನಿಜದ ದಾರಿ. ಇದು ಕೇವಲ ಪಠ್ಯಪುಸ್ತಕಗಳ ಪರಿಶ್ಕರಣೆಗೆ ಸಂಬಂಧಿಸಿದ ಹೋರಾಟ ಸಂಘರ್ಶ ಮಾತ್ರವಲ್ಲ. ಇದು ರಾಜಕೀಯ ಆರ್ಥಿಕ ಮತ್ತು ಧಾರ್ಮಿಕ ಮೂಲಭೂತವಾದಿ ಸಿದ್ದಾಂತಗಳ ವಿರುದ್ಧದ ಹೋರಾಟವೂ ಆಗಿದೆ. ಈ ದಾರಿಯಲ್ಲಿ ಬಹಳ ದೂರ ಸಾಗಬೇಕಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್