ಪಠ್ಯಪರಿಷ್ಕರಣೆ: ಮಣ್ಣಿನ ಮಕ್ಕಳ ಮೇಲೆ ಬ್ರಾಹ್ಮಣ್ಯದ ಹೇರಿಕೆ

school boys

ವಿಶ್ವವಿದ್ಯಾನಿಲಯಗಳು, ಅಕಾಡೆಮಿಗಳು ಮತ್ತು ಪಠ್ಯ ಪರಿಷ್ಕರಣಾ ಸಮಿತಿ ಹಿಂದುತ್ವದ ವೈಭವೀಕರಣ ನಡೆಸುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಒಟ್ಟಾರೆ ಪಠ್ಯ ಪರಿಷ್ಕರಣೆ ಆರ್‌ಎಸ್‍ಎಸ್ ಪ್ರಾಯೋಜಿತ ಮಕ್ಕಳ ಮನಸ್ಸುಗಳನ್ನು ಮಲೀನಗೊಳಿಸುವ ಮತ್ತು ಯುವಜನರ ಮೇಲೆ ಬ್ರಾಹ್ಮಣ್ಯದ ಹೇರಿಕೆ ಉಂಟು ಮಾಡುವ ಕೆಟ್ಟ ಬೆಳವಣಿಗೆಯಾಗಿದೆ.

ಇತ್ತೀಚೆಗೆ ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಜರುಗುತ್ತಿರುವ ಪಠ್ಯಪರಿಷ್ಕರಣೆ ಅತ್ಯಂತ ವಿವಾದಾತ್ಮಕ ಬೆಳವಣಿಗೆಯಾಗಿದೆ. ಶಿಕ್ಷಣ ವ್ಯವಸ್ಥೆಯನ್ನು ಕೇಸರೀಕರಣಗೊಳಿಸಲು ಹೊರಟಿರುವ ಸರ್ಕಾರದ ಅಸಾಂವಿಧಾನಿಕ ಮತ್ತು ಬಹುತ್ವ ವಿರೋಧಿ ನಡೆಯನ್ನು ವಿರೋಧಿಸಿ ರಾಜ್ಯದಾದ್ಯಂತ ಪ್ರತಿಭಟನೆಗಳು ಜರುಗುತ್ತಿವೆ. ಭಾರತದ ಅಪ್ರತಿಮ ಸ್ವಾತಂತ್ರ್ಯ ಸೇನಾನಿ ಭಗತ್‍ಸಿಂಗ್ ಕುರಿತ ಪಠ್ಯ ಕೈಬಿಟ್ಟು ಬ್ರಿಟಿಷರ ಅಪ್ಪಟ ಗುಲಾಮರಾಗಿದ್ದ ಆರ್‌ಎಸ್‍ಎಸ್ ಸಂಸ್ಥಾಪಕ ಹೆಡಗೇವಾರ್ ಭಾಷಣವನ್ನು ಪಠ್ಯದಲ್ಲಿ ಸೇರಿಸುವುದು ಪ್ರಜ್ಞಾವಂತರ ಕೆಂಗಣ್ಣಿಗೆ ಗುರಿಯಾಗಿದೆ. ರಾಷ್ಟ್ರಪ್ರೇಮಿಗಳನ್ನು ಧಿಕ್ಕರಿಸಿ ರಾಷ್ಟ್ರದ್ರೋಹಿಗಳನ್ನು ವೈಭವೀಕರಿಸಿ ಮಕ್ಕಳನ್ನು ವೈದಿಕಶಾಹಿಯ ಗುಲಾಮರನ್ನಾಗಿಸುವಲ್ಲಿ ಸಂಘ ಪರಿವಾರಿಗಳು ಮುಂದಾಗಿದ್ದಾರೆ.

18ನೇ ಶತಮಾನದಲ್ಲಿ ‘ಭರತಖಂಡದ ಹೆಬ್ಬುಲಿ’ಯಾಗಿ ಬ್ರಿಟಿಷರ ವಸಾಹತುವಾದಕ್ಕೆ ಪ್ರಬಲ ಪ್ರತಿರೋಧ ಒಡ್ಡಿದ ಮಹಾನ್ ರಾಷ್ಟ್ರೀಯವಾದಿ ಹಾಗೂ ಹುತಾತ್ಮ ಟಿಪ್ಪುಸುಲ್ತಾನ್ ಅವರನ್ನು ಕುರಿತ ‘ಮೈಸೂರು ಹುಲಿ’ ಪಾಠವನ್ನು ಪಠ್ಯದಿಂದ ಕೈಬಿಟ್ಟಿರುವುದು ಅವಿವೇಕದ ಕ್ರಮವಾಗಿದೆ. ಸ್ಥಳೀಯ ರಾಜರು ಮತ್ತು ವಿದೇಶಿ ಆಡಳಿತಗಾರರ ನೆರವಿನಿಂದ ಬ್ರಿಟಿಷ್ ವಸಾಹತುವಾದವನ್ನು ಮೂಲೋತ್ಪಾಟನೆ ಮಾಡಲು ಹೊರಟು ತನ್ನ ಬದುಕು ಮತ್ತು ಅಧಿಕಾರಗಳನ್ನು ಪ್ರಜ್ಞಾಪೂರ್ವಕವಾಗಿ ಕಳೆದುಕೊಂಡ ಮಹಾನ್ ರಾಷ್ಟ್ರೀಯವಾದಿ ಟಿಪ್ಪುಸುಲ್ತಾನ್ ಅವರನ್ನು ಪಠ್ಯದಿಂದ ಕೈಬಿಡುವ ಅವಶ್ಯಕತೆ ಇರಲಿಲ್ಲ. ವಾಸ್ತವವಾಗಿ ಮೈಸೂರಿನ ಸಂಸದ ಪ್ರತಾಪ್‍ಸಿಂಹ ಅಸಲಿ ಸಿಂಹವಲ್ಲದಿದ್ದರೂ ನೈಜ ಹುಲಿ ಟಿಪ್ಪುಸುಲ್ತಾನರನ್ನು ಹುಲಿಯಲ್ಲವೆಂದು ಜರಿದಿರುವುದು ಇತಿಹಾಸಕ್ಕೆ ಬಗೆದ ಅಪಚಾರವಾಗಿದೆ.

Image
Tippu tablow

ಸ್ವಾಮಿ ವಿವೇಕಾನಂದರು ಪ್ರಬುದ್ಧ ಭಾರತದ ಸಂಕೇತವಾಗಿ ಜಗತ್ತಿನಲ್ಲಿ ಭಾರತದ ಪರಂಪರೆಯನ್ನು ಎತ್ತಿ ಹಿಡಿದಿದ್ದಾರೆ. ಅವರು ಏಕತ್ವ - ಹಿಂದುತ್ವಗಳ ಶೋಷಣಾ ಪ್ರವೃತ್ತಿಗಳು ಮತ್ತು ಅನಿಷ್ಟಗಳ ವಿರುದ್ಧ ದಿಟ್ಟ ಹೋರಾಟ ನಡೆಸಿ ದೇಶದ ಮಿಲಿಯಾಂತರ ಜನರ ಹೃದಯವನ್ನು ಗೆದ್ದರು. ಇಂತಹ ಮಹಾಪುರುಷರ ಚಿಂತನೆಗಳು ಮತ್ತು ಸಮಾಜ ಸುಧಾರಣೆ ಕಾರ್ಯಗಳನ್ನು ಸಂಘ ಪರಿವಾರಿಗಳ ನಿಯಂತ್ರಣದಲ್ಲಿರುವ ಪಠ್ಯ ಪರಿಷ್ಕರಣೆ ಸಮಿತಿ ಮತ್ತು ರಾಜ್ಯ ಸರ್ಕಾರ ದುರುದ್ದೇಶಪೂರ್ವಕವಾಗಿ ಕೈಬಿಟ್ಟು ವಿವೇಕಾನಂದರು ದೇಶದ ಸಂಸ್ಕೃತಿ ಮತ್ತು ವೇದಾಂತಗಳ ಉತ್ತೇಜಕರೆಂಬುದಾಗಿ ಬಣ್ಣಿಸಿ ಯುವಜನರ ಸತ್ಯದರ್ಶನ ಹಕ್ಕನ್ನು ನಿರಾಕರಿಸಿರುವುದು ಅವಿವೇಕತನದ ಸಂಕೇತವಾಗಿದೆ.

ಪರಿಷ್ಕೃತ ಪಠ್ಯದಲ್ಲಿ ಬ್ರಿಟಿಷರ ಮುಂದೆ ಮಂಡಿಯೂರಿ ರಾಷ್ಟ್ರೀಯತೆ ಮತ್ತು ದೇಶಪ್ರೇಮವನ್ನು ಒತ್ತೆಯಿಟ್ಟ ಹೆಡಗೇವಾರ್ ಎಂಬ ಸಂಘ ಪರಿವಾರಿಗಳ ಪಿತಾಮಹರ ಭಾಷಣವನ್ನು ಸೇರ್ಪಡೆಗೊಳಿಸಿರುವುದು ಯುವಜನರನ್ನು ಗುಲಾಮಗಿರಿಯೆಡೆಗೆ ದಬ್ಬುವ ಕೆಟ್ಟ ಪ್ರಯತ್ನವಾಗಿದೆ. ಗಾಂಧಿ, ನೆಹರು, ಪಟೇಲ್ ಮೊದಲಾದ ರಾಷ್ಟ್ರ ನಾಯಕರು ಎಲ್ಲ ಧರ್ಮೀಯರು ಮತ್ತು ಜನಾಂಗಗಳನ್ನು ರಾಷ್ಟ್ರೀಯತೆಯ ಹೆಸರಿನಲ್ಲಿ ಒಗ್ಗೂಡಿಸಿ ತಮ್ಮ ಬದುಕನ್ನೇ ಪಣವಿಟ್ಟು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಆದರೆ ಹೆಡಗೇವಾರ್, ಗೋಲ್ವಾಲ್ಕರ್ ಮತ್ತು ಸಾವರ್ಕರ್ ಎಂಬ ಹುಟ್ಟು ಮನುವಾದಿಗಳು ಸ್ವಾತಂತ್ರ್ಯ ಚಳವಳಿಯನ್ನು ವಿರೋಧಿಸಿ ಬ್ರಿಟಿಷರಿಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟು ಚಮಚಾಗಿರಿಗಾಗಿ ವಿಶೇಷ ಭತ್ಯೆ ಸ್ವೀಕರಿಸಿ ಸೆರೆವಾಸವನ್ನು ತಪ್ಪಿಸಿಕೊಂಡರು. ರಾಷ್ಟ್ರಕ್ಕಿಂತ ಧರ್ಮ ಮುಖ್ಯವೆಂದು ಪ್ರತಿಪಾದಿಸಿದ ಅಪ್ಪಟ ಪ್ರತಿಗಾಮಿಗಳ ನಾಯಕ ಹೆಡಗೇವಾರ್ ಭಾಷಣವನ್ನು ಪರಿಷ್ಕೃತ ಪಠ್ಯದಲ್ಲಿ ಸೇರಿಸಿರುವುದು ಸರಿಯಲ್ಲ.

ಕೇರಳದಲ್ಲಿ ವೈದಿಕಶಾಹಿಯನ್ನು ಬಗ್ಗುಬಡಿದು ಸಾಮಾಜಿಕ – ರಾಜಕೀಯ ಮನ್ವಂತರಕ್ಕೆ ಭೂಮಿಕೆಯನ್ನು ಸಿದ್ಧಪಡಿಸಿದ ನಾರಾಯಣ ಗುರು ಕುರಿತ ‘ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಯೋಗಂ’ ಎಂಬ ಪಠ್ಯವನ್ನು ಕೈಬಿಟ್ಟಿರುವುದು ಸಾಮಾಜಿಕ ನ್ಯಾಯ ವಿರೋಧಿ ನಡೆಯಾಗಿದೆ. ಇವರ ವಿಚಾರಧಾರೆಗಳಿಂದ ಪ್ರಭಾವಿತರಾದ ಕೇರಳದ ಜನರು ಹಿಂದುತ್ವವಾದಿಗಳಿಗೆ ಮಣೆ ಹಾಕದೇ ಕೇರಳವನ್ನು ಭಾರತದಲ್ಲಿ ಒಂದು ಮಾದರಿ ರಾಜ್ಯವನ್ನಾಗಿ ರೂಪಿಸಿದ್ದಾರೆ. ಇಂದು ಭಾರತಕ್ಕೆ ಬೇಕಿರುವುದು ‘ಕೇರಳ ಅಭಿವೃದ್ಧಿ ಮಾದರಿ’ ಹೊರತಾಗಿ ‘ಗುಜರಾತ್ ಅಭಿವೃದ್ಧಿ ಮಾದರಿ’ ಅಲ್ಲ.

Image
Periyar

ತಮಿಳುನಾಡಿನ ಕ್ರಾಂತಿಕಾರಿ ನಾಯಕ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಕುರಿತ ‘ಪೆರಿಯಾರ್’ ಎಂಬ ಪಠ್ಯವನ್ನು ಕೈ ಬಿಟ್ಟಿರುವುದು ಅವಿವೇಕದ ಪರಮಾವಧಿಯಾಗಿದೆ. ತಮಿಳುನಾಡಿನಲ್ಲಿ ವೈದಿಕಶಾಹಿಯ ವಿರುದ್ಧ ಬಹುಸಂಖ್ಯಾತ ಹಿಂದುಳಿದವರನ್ನು ವೈಚಾರಿಕತೆಯ ನೆಲೆಗಟ್ಟಿನಲ್ಲಿ ಸಂಘಟಿಸಿ ದ್ರಾವಿಡ ಚಳುವಳಿಯನ್ನು ಮುನ್ನಡೆಸಿ ಬ್ರಾಹ್ಮಣ್ಯವನ್ನು ಬಗ್ಗುಬಡಿದ ಪೆರಿಯಾರ್ ಮಹಾನ್ ಆದರ್ಶ ಪುರುಷ. ದ್ರಾವಿಡ ಪಕ್ಷಗಳು ತಮಿಳುನಾಡಿನಲ್ಲಿ ರಾಜ್ಯಾಧಿಕಾರ ಪಡೆಯುವಲ್ಲಿ ಪೆರಿಯಾರ್ ಐತಿಹಾಸಿಕ ಪಾತ್ರ ವಹಿಸಿದ್ದಾರೆ. ಇಂದಿಗೂ ಕೂಡ ತಿಪ್ಪರಲಾಗ ಹಾಕಿದರೂ ಹಿಂದುತ್ವವಾದಿಗಳು ತಮಿಳುನಾಡಿನಲ್ಲಿ ರಾಜ್ಯಾಧಿಕಾರ ಪಡೆಯಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಲು ತಂದೆ ಪೆರಿಯಾರ್ ಬಹುಮುಖ್ಯ ಕಾರಣ. ಇಂತಹ ಮಹಾನ್ ಸಾಧಕರ ಪಠ್ಯವನ್ನು ಕೈಬಿಡುವ ಪಠ್ಯ ಪರಿಷ್ಕರಣಾ ಸಮಿತಿಯ ಪ್ರಯತ್ನ ಖಂಡನೀಯ.

ಸ್ವರಾಜ್ಯದ ರೂವಾರಿ ಮಹಾತ್ಮಗಾಂಧಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್, ಪ್ರಖರ ನಾಸ್ತಿಕವಾದಿ ಎ.ಎನ್.ಮೂರ್ತಿರಾವ್, ಆಧುನಿಕ ಅಲ್ಲಮ ಎಲ್. ಬಸವರಾಜು ಮೊದಲಾದವರ ವಿಚಾರಧಾರೆಗಳಿಗೆ ಪ್ರಸ್ತುತ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಎಳ್ಳು ನೀರು ಬಿಟ್ಟಿದೆ. ಪ್ರಗತಿಶೀಲ ಸಾಹಿತಿಗಳಾದ ಬಿ.ಟಿ. ಲಲಿತಾನಾಯಕ್, ಸಾರಾ ಅಬೂಬಕ್ಕರ್, ಅರವಿಂದ ಮಾಲಗತ್ತಿ, ಕೆ. ನೀಲಾ ಮುಂತಾದವರ ಕೋಮು ಸಹಿಷ್ಣುತೆ ಮತ್ತು ವೈಚಾರಿಕ ಚಿಂತನೆಗಳಿಗೆ ಕೊಕ್ ನೀಡಿ ಯುವಜನರ ಸಮಗ್ರ ಕಲಿಕೆ ಹಕ್ಕನ್ನು ನಯವಾಗಿ ನಿರಾಕರಿಸಲಾಗಿದೆ. ಎಲ್.ಬಸವರಾಜರ ‘ಊರು ಭಂಗ’, ಅರವಿಂದ ಮಾಲಗತ್ತಿಯವರ ‘ಮರಳಿ ಮಣ್ಣಿಗೆ’, ಕೆ.ನೀಲಾರವರ ‘ರಮಜಾನ್ ಸುರಕುಂಬ’, ಸಾರಾ ಅಬೂಬಕರ್‌ ಅವರ ‘ಯುದ್ಧ’ ಮೊದಲಾದ ಮೂಲನಿವಾಸಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಪಾತ್ರಗಳಿಗೆ ಸಂಬಂಧಿಸಿದ ಮಹತ್ವದ ವಿವರಗಳನ್ನು ಪಠ್ಯದಿಂದ ದುರುದ್ದೇಶಪೂರ್ವಕವಾಗಿ ಕೈಬಿಡಲಾಗಿದೆ.

ಯಥಾಸ್ಥಿತಿವಾದದ ಸಮರ್ಥಕರಿಗೆ ಮಣೆ

ಅಂತೆಯೇ ಕಟ್ಟರ್ ಹಿಂದುತ್ವವಾದಿಗಳಾದ ಎನ್. ರಂಗನಾಥಶರ್ಮರ ‘ರಾಮರಾಜ್ಯ’, ಎಸ್.ಎಲ್. ಭೈರಪ್ಪನವರ ‘ನಾನು ಕಂಡಂತೆ ಡಾ.ಬಿ.ಜಿ.ಎಲ್.ಸ್ವಾಮಿ’, ಗಜಾನನ ಶರ್ಮರ ‘ಚನ್ನಭೈರದೇವಿ’, ಎಸ್.ವಿ.ಪರಮೇಶ್ವರ ಭಟ್ಟರ ‘ಹೇಮಂತ’, ಶುಶ್ರುತ ದೊಡ್ಡೇರಿಯವರ ‘ಹೊಳೆ ಬಾಗಿಲು’,  ಬನ್ನಂಜೆ ಗೋವಿಂದಾಚಾರ್ಯರ ‘ಶುಕನಾಸನ ಉಪದೇಶ’, ಶತಾವಧಾನಿ ಡಾ.ಆರ್.ಗಣೇಶರ ‘ಶ್ರೇಷ್ಟ ಭಾರತೀಯ ಚಿಂತನೆಗಳು’, ಕೇಶವ ಬಲಿರಾಮ ಹೆಡಗೇವಾರ್ ರವರ ‘ನಿಜವಾದ ಆದರ್ಶ ಪುರುಷ ಯಾರಾಗಬೇಕು’ ಮೊದಲಾದ ಕೃತಿಗಳನ್ನು ಹೊಸದಾಗಿ ಸೇರ್ಪಡೆಗೊಳಿಸಿ ಯಥಾಸ್ಥಿತಿವಾದದ ಸಮರ್ಥಕರಿಗೆ ಮಣೆ ಹಾಕಿ ಮಕ್ಕಳ ಮುಗ್ಧ ಮನಸ್ಸುಗಳನ್ನು ಮಲಿನಗೊಳಿಸಲು ಸರ್ಕಾರ ಹೊರಟಿರುವುದು ಖಂಡನೀಯ.

ನಿಜವಾದ ಆದರ್ಶಪುರುಷರನ್ನು ಬದಿಗೊತ್ತಿ ನಕಲಿ ಆದರ್ಶ ಪುರುಷರನ್ನು ವೈಭವೀಕರಿಸುವ ಸಂಘ ಪರಿವಾರಿಗಳ ನಡೆ ಸಾಧುವಲ್ಲ. ಇತ್ತೀಚೆಗೆ ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರವರ್ತಿ ಮತ್ತು ಮತ್ತೋರ್ವ ಸಂಘ ಪರಿವಾರಿ ಲಕ್ಷ್ಮಣ ಆಕಾಶೆ ಕಾರ್ಕಳ ರಾಷ್ಟ್ರಕವಿ ಕುವೆಂಪು ಅವರನ್ನು ಅವಹೇಳನ ಮಾಡಿ ನಾಡಗೀತೆಗೆ ಅಪಚಾರವೆಸಗಿದ್ದಾರೆ. ಇದರ ವಿರುದ್ಧ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆಗಳು ಜರುಗುತ್ತಿವೆ. ನಾಡಗೀತೆ ತಿರುಚಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಆದಿಚುಂಚನಗಿರಿ ಶ್ರೀಗಳು ಮತ್ತು ಪ್ರಗತಿಪರ ಹೋರಾಟಗಾರರಿಗೆ ಭರವಸೆ ನೀಡಿದ್ದಾರೆ.

ಹಿಂದುತ್ವದ ವೈಭವೀಕರಣ

ಇತ್ತೀಚಿನ ಸಂಘ ಪರಿವಾರಿಗಳ ಅವಿವೇಕದ ವಿರುದ್ಧ ಬಂಡಾಯದ ಸಂಕೇತವಾಗಿ ಹಿರಿಯ ಸಾಹಿತಿ ನಾಡೋಜ ಹಂಪಾ ನಾಗರಾಜಯ್ಯ ಕುವೆಂಪು ಪ್ರತಿಷ್ಟಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಪ್ರತಿಷ್ಟಿತ ಜಿಎಸ್‍ಎಸ್ ಪ್ರತಿಷ್ಟಾನಕ್ಕೆ ಮತ್ತೋರ್ವ ಸಾಹಿತಿ ಎಸ್.ಜಿ.ಸಿದ್ಧರಾಮಯ್ಯ ಮೊದಲಾದವರು ರಾಜೀನಾಮೆ ಸಲ್ಲಿಸಿದ್ದಾರೆ. ವಿಶ್ವವಿದ್ಯಾನಿಲಯಗಳು, ಸರ್ಕಾರದ ಅಕಾಡೆಮಿಗಳು ಮತ್ತು ಪಠ್ಯ ಪರಿಷ್ಕರಣಾ ಸಮಿತಿ ಜಾತಿ ರಾಜಕಾರಣ ಮತ್ತು ಹಿಂದುತ್ವದ ವೈಭವೀಕರಣ ನಡೆಸುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಒಟ್ಟಾರೆ ಪಠ್ಯ ಪರಿಷ್ಕರಣೆ ಆರ್‌ಎಸ್‍ಎಸ್ ಪ್ರಾಯೋಜಿತ ಸರ್ಕಾರ ಮುಗ್ದ ಮಕ್ಕಳ ಮನಸ್ಸುಗಳನ್ನು ಮಲೀನಗೊಳಿಸುವ ಮತ್ತು ಯುವಜನರ ಮೇಲೆ ಬ್ರಾಹ್ಮಣ್ಯದ ಹೇರಿಕೆ ಉಂಟು ಮಾಡುವ ಅತ್ಯಂತ ಕೆಟ್ಟ ಬೆಳವಣಿಗೆಯಾಗಿದೆ. ಬಹುತ್ವ ಭಾರತವನ್ನು ಏಕತ್ವದೆಡೆಗೆ ದಬ್ಬುವ ಮತ್ತು ಸ್ವತಂತ್ರ ಭಾರತೀಯರನ್ನು ಗುಲಾಮಗಿರಿಯೆಡೆಗೆ ಮುನ್ನಡೆಸುವ ಹುನ್ನಾರಗಳನ್ನು ಸಂಘ ಪರಿವಾರಿಗಳು ಇತ್ತೀಚೆಗೆ ಎಗ್ಗಿಲ್ಲದೆ ನಡೆಸುತ್ತಿದ್ದಾರೆ.        

ಶಿಕ್ಷಣ ತಜ್ಞರೇ ಅಲ್ಲದ ಸಂಘ ಪರಿವಾರಿ ಮತ್ತು ಬೆಂಗಳೂರು ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ಸಣ್ಣ ವ್ಯಾಪಾರಿಯಾಗಿದ್ದ ರೋಹಿತ್ ಚಕ್ರತೀರ್ಥರನ್ನು ಮುಂದಿಟ್ಟುಕೊಂಡು ಪಠ್ಯ ಪರಿಷ್ಕರಣೆ ಮಾಡಲು ಹೊರಟಿರುವುದು ಕೇವಲ ಕೇಸರೀಕರಣ ಗೌಪ್ಯ ಕಾರ್ಯಸೂಚಿಯಲ್ಲ. ಇದೊಂದು ಹಿಂದುತ್ವದ ಅಜೆಂಡಾವನ್ನು ಸಾಂಸ್ಥೀಕರಣಗೊಳಿಸಿ ಬಹುಜನರ ಮೂಲಭೂತ ಹಕ್ಕುಗಳನ್ನು ದಮನಗೊಳಿಸುವ ಅಮಾನವೀಯ ಕ್ರಿಯಾಯೋಜನೆಯಾಗಿದೆ. ಮೊಘಲರು 700 ವರ್ಷ ಭಾರತವನ್ನು ಆಳಿದರೂ ಸಹ ದೇಶದ ಕಲೆ, ಸಾಹಿತ್ಯ, ಸಂಗೀತ, ವಾಸ್ತುಶಿಲ್ಪ, ಸಂಸ್ಕೃತಿ, ಪರಿಸರ ಮೊದಲಾದವುಗಳನ್ನು ಹೆಚ್ಚು ಶ್ರೀಮಂತಗೊಳಿಸಿದ್ದಾರೆ.

ಇದನ್ನು ಓದಿದ್ದೀರಾ? ಪಠ್ಯಪುಸ್ತಕದ ಪ್ರತಿರೋಧ: ಹೊಸ ಸಾಮಾಜಿಕ ಎಚ್ಚರದ ಚಳವಳಿಯ

ಪೋರ್ಚುಗೀಸರು, ಡಚ್ಚರು, ಫ್ರೆಂಚರು ಮತ್ತು ಬ್ರಿಟಿಷರು 300 ವರ್ಷಗಳ ಕಾಲ ಭಾರತವನ್ನು ಆಳಿದರೂ ಸಹ ಮೂಲನಿವಾಸಿಗಳಿಗೆ ಅಮಾನುಷ ಗುರುಕುಲ ಪದ್ಧತಿಯಿಂದ ಬಿಡುಗಡೆ ನೀಡಿ ಆಧುನಿಕ ಶಿಕ್ಷಣ ಸೌಲಭ್ಯವನ್ನು ನೀಡಿದರು. ಮೆಕಾಲೆ ಶಿಕ್ಷಣದಿಂದಲೇ ಗಾಂಧಿ, ನೆಹರು, ಅಂಬೇಡ್ಕರ್, ಲೋಹಿಯಾ ಮೊದಲಾದ ದಾರ್ಶನಿಕರು ಉನ್ನತ ಶಿಕ್ಷಣ ಗಳಿಸಿ ಪ್ರಬುದ್ಧ ಭಾರತ ನಿರ್ಮಿಸಲು ಸಾಧ್ಯವಾಯಿತು. ಪಠ್ಯ ಪರಿಷ್ಕರಣೆ ಹೆಸರಿನಲ್ಲಿ ಬಹುತ್ವವನ್ನು ನಾಶಗೊಳಿಸಿ ಬಹುಜನ ಮೂಲನಿವಾಸಿಗಳನ್ನು ಅತಂತ್ರಗೊಳಿಸಲು ಹೊರಟಿರುವ ಆರ್‌ಎಸ್‍ಎಸ್ ಮತ್ತಿತರ ಸಂಘ ಪರಿವಾರಿಗಳ ಸಂಚಿನ ವಿರುದ್ಧ ಪ್ರಜ್ಞಾವಂತ ನಾಗರೀಕರು ಬೀದಿಗಿಳಿದು ಪ್ರಜಾಸತ್ತಾತ್ಮಕ ಹೋರಾಟದ ಮೂಲಕ ದೇಶದ ಸಂಸ್ಕೃತಿ, ಇತಿಹಾಸ, ಸಂವಿಧಾನ ಮತ್ತು ಪ್ರಜಾಪ್ರಭುತ್ವಗಳನ್ನು ರಕ್ಷಿಸುವುದು ಇಂದು ಅನಿವಾರ್ಯವಾಗಿದೆ.    

ನಿಮಗೆ ಏನು ಅನ್ನಿಸ್ತು?
2 ವೋಟ್