ಪಠ್ಯಪುಸ್ತಕ ವಿವಾದ | ನಾಡಗೀತೆ ತಿರುಚಿದವರ ವಿರುದ್ಧ ಕ್ರಮಕ್ಕೆ ಕಸಾಪ ಆಗ್ರಹ

  • "ಕುವೆಂಪು ಸಾಹಿತ್ಯ ಓದದವರಿಂದ ಅವಹೇಳನ"
  • "ಸರ್ವಜನಾಂಗದ ಶಾಂತಿಯ ತೋಟವಾಗಬೇಕೆಂದವರು ಕುವೆಂಪು"

ʼರಾಷ್ಟ್ರಕವಿ ಕುವೆಂಪು ಅವರನ್ನು ನಿಂದಿಸಿ, ನಾಡಗೀತೆಯನ್ನು ತಿರುಚಿ ಬರೆದವರ ವಿರುದ್ಧ ಸರ್ಕಾರ ತಡಮಾಡದೇ ಕ್ರಮಕೈಗೊಳ್ಳಬೇಕುʼ ಎಂದು ಕನ್ನಡ ಸಾಹಿತ್ಯ ಪರಿಷತ್ತು ಆಗ್ರಹಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕಸಾಪ ಅಧ್ಯಕ್ಷ ಮಹೇಶ್‌ ಜೋಷಿ, ʼರಾಷ್ಟ್ರಕವಿ ಕುವೆಂಪು ಅವರ ಕುರಿತು ಅವಹೇಳನಕಾರಿ ಮಾತುಗಳ ಬಗ್ಗೆ ಹಾಗೂ ನಾಡಗೀತೆಯನ್ನು ತಿರುಚಿ ಬರೆದಿರುವ ಕುರಿತು ದಿನಪತ್ರಿಕೆಗಳಲ್ಲಿ ಓದುವ, ಹೀನಾಯ ಸ್ಥಿತಿ ತಲುಪಿರುವುದು ಕನ್ನಡ ಸಾಹಿತ್ಯ ಪರಿಷತ್ತಿಗೆ ಅತ್ಯಂತ ಬೇಸರದ ಸಂಗತಿಯಾಗಿದೆʼ ಎಂದು ತಿಳಿಸಿದ್ದಾರೆ.

ʼನಾಡು ಕಂಡ ಅಪ್ರತಿಮ ಮಹಾಕವಿ, ದಾರ್ಶನಿಕ, ರಸಋಷಿ ಕುವೆಂಪು ಅವರಿಗೆ ಅತ್ಯಂತ ಗೌರವ ಸಲ್ಲಿಸುವ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. 1924ರಲ್ಲಿ ಕುವೆಂಪು ವಿರಚಿತ ʼಜಯಭಾರತ ಜನನಿಯ ತನುಜಾತೆ…ʼಗೀತೆಯನ್ನು ನಾಡಗೀತೆ ಮಾಡಬೇಕೆಂದು ಬಯಸಿದ್ದು ಕಸಾಪ. 1971ರಲ್ಲಿ ಕುವೆಂಪು ಅವರ ಸಮ್ಮತಿ ಪಡೆದ ಪರಿಷತ್ತು ನಾಡಗೀತೆಯನ್ನು ತನ್ನ ಎಲ್ಲ ಕಾರ್ಯಕ್ರಮಗಳಲ್ಲೂ ಹಾಡಿಸಲು ಆರಂಭಿಸಿತ್ತು. ಅನಂತರ ಸರ್ಕಾರವೂ ಇದನ್ನೇ ನಾಡಗೀತೆ ಎಂದು ಅಂಗೀಕರಿಸಿ 2004ರಲ್ಲಿ ಕರ್ನಾಟಕದ ನಾಡಗೀತೆಯನ್ನಾಗಿ ಆದೇಶ ಹೊರಡಿಸಿತುʼ ಎಂದು ನಾಡಗೀತೆಯ ಇತಿಹಾಸವನ್ನು ನೆನಪಿಸಿದ್ದಾರೆ.

ಕುವೆಂಪು ಸಾಹಿತ್ಯ ಓದದವರಿಂದ ಅವಹೇಳನ
ʼಕುವೆಂಪು ಅವರು ʼಮನುಜ ಮತ ವಿಶ್ವಪಥʼ ಎಂಬ ಸಂದೇಶದ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ, ಪ್ರಕೃತಿಯಲ್ಲಿ ದೇವರನ್ನು ಕಾಣುವ, ದೇವರಲ್ಲಿ ಪ್ರಕೃತಿಯನ್ನು ಕಾಣುವ ಸರ್ವೋದಯ ತತ್ವ ಪ್ರತಿಪಾದಕರು. ಸಾಮಾಜಿಕ, ಧಾರ್ಮಿಕ, ಆರ್ಥಿಕ ಅಸಮಾನತೆಯನ್ನು ಮತ್ತು ಲಿಂಗಭೇದವನ್ನು ನಿವಾರಿಸಿಕೊಂಡು ಈ ಜಗತ್ತು ʼಸರ್ವಜನಾಂಗದ ಶಾಂತಿಯ ತೋಟʼ ವಾಗಬೇಕೆಂದು ಕನಸು ಕಂಡ ಶ್ರೇಷ್ಠ ದಾರ್ಶನಿಕರು. ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಲು ಸಾಹಿತ್ಯದ ಮೂಲಕ ಅರ್ಥಗರ್ಭಿತ ಪ್ರಯತ್ನ ಮಾಡಿದ ಮೇರು ಸಾಹಿತಿಗಳು. ಅವರ ಸಾಹಿತ್ಯವನ್ನು ಓದಿದವರ್ಯಾರೂ ಅವರ ಕುರಿತು ಚಕಾರ ಎತ್ತುವ ಧೈರ್ಯವನ್ನು ಮಾಡುವುದಿಲ್ಲ. ಯಾರು ಈ ಮಹಾ ದಾರ್ಶನಿಕರನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲವೋ, ಅಂಥವರು ಮಾತ್ರ ಅಡ್ಡದಾರಿಯನ್ನು ಹಿಡಿದು, ಅವರ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡುತ್ತಾರೆʼ ಎಂದು ಅವರು ಹೇಳಿದ್ದಾರೆ.

ʼಶ್ರೀರಾಮಕೃಷ್ಣ ಪರಮಹಂಸರ, ಶ್ರೀ ವಿವೇಕಾನಂದರ ಚಿಂತನೆಗಳನ್ನು ಆದರ್ಶವನ್ನಾಗಿಸಿಕೊಂಡು, ಸಾಹಿತ್ಯದಲ್ಲಿ ಆಧ್ಯಾತ್ಮಿಕತೆಯನ್ನು ಸರಳವಾಗಿ, ಎಲ್ಲರೂ ಅರ್ಥ ಮಾಡಿಕೊಳ್ಳುವ ಹಾಗೆ ರಚಿಸಿದ ಮಹಾಕವಿಯ ಕುರಿತು ನಿಂದನೆಯನ್ನು ಮಾಡಿರುವುದು ವೈಯಕ್ತಿಕವಾಗಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಖಂಡಿಸುತ್ತೇನೆ. ಜೊತೆಗೆ ಅವಹೇಳನಕಾರಿ ಹೇಳಿಕೆಯನ್ನು ನೀಡಿದವರ ವಿರುದ್ಧ ಸರ್ಕಾರ ತಡಮಾಡದೆ ಕ್ರಮಕೈಗೊಳ್ಳಬೇಕುʼ ಎಂದು ಒತ್ತಾಯಿಸಿದ್ದಾರೆ.

ʼಕುವೆಂಪು ಅವರ ಪುಸ್ತಕಗಳನ್ನು ಬಹಳ ಗೌರವದಿಂದ, ಭಕ್ತಿಯಿಂದ ಓದುವ ನಾನು, ಅವರ ಪ್ರಕೃತಿ ವರ್ಣನೆಗೆ ಮಾರುಹೋಗುವುದರ ಜೊತೆಗೆ, ಅವರ ಶ್ರೇಷ್ಠ ಚಿಂತನೆಗಳಿಂದ ಪ್ರೇರಿತನಾಗಿ "ಮನುಜ ಮತದಲ್ಲಿ" ನಂಬಿಕೆ ಇಟ್ಟಂಥವನು. ಕುವೆಂಪು ಅವರ ಚಿಂತನೆಯ ಮಾರ್ಗದಲ್ಲಿಯೇ, ಕನ್ನಡ ಸಾಹಿತ್ಯ ಪರಿಷತ್ತು ಜಾತಿ, ಮತ, ಧರ್ಮ, ಲಿಂಗ ತಾರತಮ್ಯವಿಲ್ಲದೆ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ. ಸಾಧಾರಣವಾಗಿ ನನ್ನ ಎಲ್ಲ ಭಾಷಣಗಳಲ್ಲೂ ಕುವೆಂಪು ಅವರ ಚಿಂತನೆಗಳನ್ನು ಉಲ್ಲೇಖಿಸುತ್ತೇನೆ. ಯಾವುದೇ ಸಾಹಿತಿಯನ್ನು ಟೀಕಿಸುವ ಮೊದಲು ಅವರ ಸಾಹಿತ್ಯದ ಸಾರ-ಸರ್ವವನ್ನು ಅರಿತುಕೊಳ್ಳಬೇಕು. ತಿಳಿದುಕೊಳ್ಳದೇ ಮಾತನಾಡುವುದು ಶೋಭೆಯಲ್ಲ. ಹಿನ್ನೆಲೆ ತಿಳಿದುಕೊಳ್ಳದೇ ಮಾತನಾಡುವುದು, ಅವರ ಬೇಜವಾಬ್ದಾರಿತನವನ್ನು ಹಾಗೂ ಅಪ್ರಬುದ್ಧತೆಯನ್ನು ತೋರಿಸುತ್ತದೆ. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಮಹಾಸ್ವಾಮೀಜಿಗಳ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಮಾನ್ಯ ಮುಖ್ಯಮಂತ್ರಿಗಳು ಕ್ರಮ ತೆಗೆದುಕೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಹೇಳಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ತು ಬೆಂಬಲಿಸುತ್ತಾ, ತಡಮಾಡದೇ ಅಂಥವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತದೆʼ ಎಂದಿದ್ದಾರೆ.

ಪರಿಷತ್ತಿನ ಎಲ್ಲಾ ಜಿಲ್ಲಾ ಘಟಕಗಳ, ಗಡಿನಾಡ ಘಟಕಗಳ, ತಾಲ್ಲೂಕು ಹಾಗೂ ಹೋಬಳಿ ಘಟಕಗಳ ಅಧ್ಯಕ್ಷರುಗಳು, ಈ ಖಂಡನೆಗೆ ಒಮ್ಮತದಿಂದ ಕೇಂದ್ರ ಪರಿಷತ್ತಿಗೆ ಬೆಂಬಲವನ್ನು ಸೂಚಿಸಿದ್ದಾರೆ ಎಂದು ಮಹೇಶ್‌ ಜೋಷಿ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್