ಪಠ್ಯಪುಸ್ತಕದ ಪ್ರತಿರೋಧ: ಹೊಸ ಸಾಮಾಜಿಕ ಎಚ್ಚರದ ಚಳವಳಿ

Doreswamy

ಮತಿಯವಾದವು, ಮುಸ್ಲಿಮರ, ಕ್ರೈಸ್ತರ, ಕಮ್ಯುನಿಸ್ಟರ ಪ್ರತಿರೋಧವನ್ನು, ಅವುಗಳ ಹಿಂದಿನ ಧರ್ಮ/ ಸಿದ್ಧಾಂತಗಳ ವಿದೇಶಿ ಮೂಲದ ಪ್ರಶ್ನೆಯನ್ನು ಎತ್ತಿ, ಅವನ್ನು `ಅಭಾರತೀಯ’ ಎಂದು ಸುಲಭವಾಗಿ ತಳ್ಳಿಹಾಕುತ್ತದೆ. ಆದರೆ ಅದಕ್ಕೆ ನುಂಗಲಾರದ ತುತ್ತಾಗುವುದು ಬ್ರಾಹ್ಮಣವಾದ ವರ್ಸಸ್ ಶೂದ್ರ/ದಲಿತರ ಮುಖಾಮುಖಿಯ ಸಾಮಾಜಿಕ ವಿನ್ಯಾಸ.

ದೇವನೂರ ಮಹಾದೇವ ಅವರು ಪಠ್ಯಪುಸ್ತಕಗಳ ಕೇಸರೀಕರಣ ವಿರೋಧಿಸಿ ಆರಂಭಿಸಿದ ಪಠ್ಯ ಹಿಂತೆಗೆತವು ಒಂದು ಚಳವಳಿಯಾಗಿ ಮಾರ್ಪಡುತ್ತಿದೆ. ಇದು ಕನ್ನಡಿಗರ ವಿವೇಕವು ಜಾಗೃತಪ್ರಜ್ಞೆಯ ಪ್ರತೀಕವಾಗಿದೆ. ಈ ಚಳವಳಿಯ ಹಿನ್ನೆಲೆಯಲ್ಲಿ `ಸತ್ತಂತಿಹರನು ಬಡಿದೆಚ್ಚರಿಸುವ’ ವಿಚಾರಗಳನ್ನು ಕನ್ನಡಿಗರಿಗೆ ಕೊಟ್ಟ ಕುವೆಂಪು ಅವರಿಗಾದ ಅಪಮಾನದ ಪ್ರಶ್ನೆಯು ಇರುವುದು ಮಾರ್ಮಿಕ ಸಂಗತಿಯಾಗಿದೆ.

ಕರ್ನಾಟಕದ ಶಾಲಾ ಪಠ್ಯಪುಸ್ತಕಗಳ ಮರುಪರಿಷ್ಕರಣೆಯಲ್ಲಿ, ತೆಗೆದುಹಾಕಿದ ಮತ್ತು ಸೇರ್ಪಡೆಯಾದ ಪಾಠಗಳ ವಿದ್ಯಮಾನವು ಆಘಾತಕರವಾಗಿದ್ದರೂ, ಅನಿರೀಕ್ಷಿತವಾಗಿಲ್ಲ. ಮತೀಯವಾದವು, ಹಿಂದೂರಾಷ್ಟ್ರದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ತನ್ನ ಸಾಮಾಜಿಕ ಕಾರ್ಯಕ್ರಮಗಳ ಮೂಲಕವೂ, ತನ್ನ ಅಂಕೆಯಲ್ಲಿರುವ ರಾಜಕೀಯ ಪ್ರಭುತ್ವಗಳ ಮೂಲಕವೂ ಇಡುತ್ತಿರುವ ದೃಢವಾದ ಮತ್ತು ಎಚ್ಚರಿಕೆಯ ಹೆಜ್ಜೆಗಳನ್ನು ಅರಿತರೆ, ಇದೆಲ್ಲವೂ ನಿರೀಕ್ಷಿತವೆಂದು ಮನವರಿಕೆಯಾಗುತ್ತದೆ. ಸಾಮಾನ್ಯವಾಗಿ ಬಿಜೆಪಿ ಸರ್ಕಾರಗಳಲ್ಲಿ ನೀರಾವರಿ ರೆವಿನ್ಯೂ ಲೋಕೋಪಯೋಗಿ ಇತ್ಯಾದಿ ಖಾತೆಗಳನ್ನು ಸಂಘದ ಹಿನ್ನೆಲೆಯಿಲ್ಲದ ಶೂದ್ರ-ದಲಿತ ಸಾಮಾಜಿಕ ಹಿನ್ನೆಲೆಯವರಿಗೆ ಬಿಟ್ಟುಕೊಡಲಾಗುತ್ತದೆ. ಆದರೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆಯನ್ನು ಸಂಘದಲ್ಲಿ ಸೈದ್ಧಾಂತಿಕ ತಾಲೀಮು ಪಡೆದ ಉಚ್ಚಜಾತಿಯವರಿಗೇ ವಹಿಸಲಾಗುತ್ತದೆ. ಈ ಸರ್ಕಾರಗಳಲ್ಲಿ ಪಠ್ಯಪುಸ್ತಕಗಳ ರಚನೆ ಮತ್ತು ಪರಿಷ್ಕರಣೆಯನ್ನು ಯಾವಾಗಲೂ ಆದ್ಯತೆಯ ಸಂಗತಿಯಾಗಿ ಪರಿಗಣಿಸಲಾಗುತ್ತದೆ. ಕಾರಣ, ಆರಂಭಿಕ ಹಂತದ ಶಿಕ್ಷಣ ವ್ಯವಸ್ಥೆಯು ಎಳೆಯ ಮನಸ್ಸುಗಳಲ್ಲಿ ತನ್ನ ಸೈದ್ಧಾಂತಿಕ ಬೀಜಗಳನ್ನು ಬಿತ್ತಲು ಸೂಕ್ತ ಹೊಲವೆಂದು ಅದು ನಂಬಿರುವುದು. ಆದ್ದರಿಂದ ಈ ಸಂಬಂಧವಾಗಿ ಶಿಕ್ಷಣ ಮಂತ್ರಿಗಳನ್ನು ಅಥವಾ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯನ್ನು ಮಾತ್ರ ಹೊಣೆಗಾರರನ್ನಾಗಿ ಮಾಡುವುದು, ಹುತ್ತವ ಬಡಿದಂತೆ.

ಮತೀಯವಾದಿ ಸಿದ್ಧಾಂತದ ಚೌಕಟ್ಟು ಮತ್ತು ದೇಖರೇಖಿಯಲ್ಲಿ ರಚಿತವಾಗುವ ಸರ್ಕಾರಗಳಲ್ಲಿ ರೂಪಿತವಾಗುವ/ ಪರಿಷ್ಕೃತವಾಗುವ ಪಠ್ಯಪುಸ್ತಕಗಳ ಸಾಮಾನ್ಯ ಲಕ್ಷಣಗಳು ಹೀಗಿರುತ್ತವೆ:
1. ಧಾರ್ಮಿಕವಾಗಿ ಮುಸ್ಲಿಂ, ಕ್ರೈಸ್ತ ಸಮುದಾಯಗಳ ಬಗ್ಗೆ, ರಾಜಕೀಯವಾಗಿ ಕಮ್ಯುನಿಸ್ಟ್ ಹಾಗೂ ಕಾಂಗ್ರೆಸ್ಸಿಗೆ ಸಂಬಂಧಪಟ್ಟ ವ್ಯಕ್ತಿ-ಘಟನೆಗಳ ನಕಾರಾತ್ಮಕ ಅಥವಾ ದ್ವೇಷಭಾವ ಹುಟ್ಟಿಸುವಂತಹ ಪಾಠಗಳನ್ನು ಅಳವಡಿಸುವುದು. ಸಿದ್ಧಗೊಂಡ ಪಾಠಕ್ಕಿಂತ ಸಮಿತಿಯೇ ಸಿದ್ಧಪಡಿಸಿ ಸೇರಿಸುವ ಪಾಠಗಳಲ್ಲಿ ಈ ಸಾಧ್ಯತೆ ಹೆಚ್ಚು. ಒಂದು ಪಠ್ಯಪುಸ್ತಕದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಪಕ್ಷಿಗಳ ಗೂಡಿರುವ ಹಸಿರುತುಂಬಿದ ಮರವನ್ನು ಶಾಲೆಯ ಮಕ್ಕಳು ವಿನಂತಿಸಿದರೂ ಕಡಿಯುವ, ಆದರೆ ಹಿಂದೂ ಹಿನ್ನೆಲೆಯಿಂದ ಬಂದ ಕೇವಲ ಒಣಗಿದ ಮರಗಳನ್ನು ಕಡಿದು ವನದೇವತೆಗೆ ಸಂತೋಷ ಮಾಡುವ ಪಾಠ ಬರೆಸುವುದು; ಮುಸ್ಲಿಂ ವ್ಯಕ್ತಿಯ ಮನೆಯಲ್ಲಿ 12 ಜನ ಮಕ್ಕಳಿದ್ದರೆ, ಹಿಂದೂ ವ್ಯಕ್ತಿಯ ಮನೆಯಲ್ಲಿ ಮೂರು ಮಕ್ಕಳಿರುವ ನಿದರ್ಶನ ಕೊಡುವುದು ಇತ್ಯಾದಿ.

2. ವರ್ಣಾಶ್ರಮ, ಜಾತಿಪದ್ಧತಿ, ದ್ವಿಜಶ್ರೇಷ್ಠತೆ, ವೈದಿಕ ಸಂಸ್ಕೃತಿಗಳನ್ನು ಪ್ರಶ್ನಿಸುವ ಮತ್ತು ಭಂಜಿಸುವ ಚಿಂತಕರು, ಸಮಾಜ ಸುಧಾರಕರು ಹಾಗೂ ಲೇಖಕರನ್ನು  ಉಪಾಯವಾಗಿ ಬದಿಗೆ ಸರಿಸುವುದು. ಈ ಹಿನ್ನೆಲೆಯಲ್ಲಿ ನಾರಾಯಣ ಗುರುಗಳ ಪಾಠವನ್ನು ಮೊದಲ ಹಂತದಲ್ಲಿ ಕೈಬಿಟ್ಟಿದ್ದು, ಮಾಲಗತ್ತಿಯವರು ಬುದ್ಧನ ಮೇಲೆ ಬರೆದ ಕವನವನ್ನು ತೆಗೆದುಹಾಕಿರುವುದು ಗಮನಾರ್ಹ.

3. ಬ್ರಾಹ್ಮಣವಾದಿ ಸಾಮಾಜಿಕ ಯಜಮಾನಿಕೆಯ ಸಮಾಜ ರಚನೆ ಮತ್ತು ಜೀವನಮೌಲ್ಯಗಳನ್ನು ಪ್ರಶ್ನಿಸದೆ ಒಪ್ಪುವ, ಶೂದ್ರ ದಲಿತ ಕ್ರೈಸ್ತ ಮುಸ್ಲಿಂ ಚಿಂತಕ ಮತ್ತು ಲೇಖಕರಿಗೆ ಆದ್ಯತೆ ನೀಡುವುದು. ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ, ದೊಡ್ಡರಂಗೇಗೌಡ ಮುಂತಾದವರು ಈ ವಿಭಾಗದಲ್ಲಿ ಪ್ರಾತಿನಿಧ್ಯ ಪಡೆಯುವರು.    

4. ಬ್ರಾಹ್ಮಣವಾದಿ ಮೌಲ್ಯಗಳನ್ನು ಒಪ್ಪದ ಬಂಡುಕೋರ ಲೇಖಕರು ಮತ್ತು  ಚಿಂತಕರು, ಅವರು ಮೇಲ್ಜಾತಿಗೆ ಸೇರಿದ್ದರೂ, ಒಳಶತ್ರುಗಳೆಂದು ಭಾವಿಸಿ ಅವರ ಬರೆಹಗಳನ್ನು ದೂರವಿಡುವುದು. ಟಾಗೂರ್, ಬಸವಣ್ಣ, ಶಂಬಾ ಜೋಶಿ, ಗೌರೀಶ ಕಾಯ್ಕಿಣಿ, ಮೊದಲಾದವರು ಇಲ್ಲಿ ಬರುತ್ತಾರೆ. ನಾಸ್ತಿಕ ಮಾನವತಾವಾದಿಯಾದ ಎ.ಎನ್. ಮೂರ್ತಿರಾವ್ ಅವರ ಪಾಠವನ್ನು ಕೈಬಿಟ್ಟಿದ್ದು ಇದಕ್ಕೆ ಸಾಕ್ಷಿ. ಕೋಮುವಾದದ ವಿರುದ್ಧ ದನಿಯೆತ್ತಿದ ಅನಂತಮೂರ್ತಿ, ಗಿರೀಶ ಕಾರ್ನಾಡ, ಎಚ್.ಎಸ್. ದೊರೆಸ್ವಾಮಿ ಮುಂತಾದವರು, ತಮ್ಮ ಕೊನೆಯ ದಿನಗಳಲ್ಲಿ ಎದುರಿಸಿದ ದ್ವೇಷವನ್ನು ಇಲ್ಲಿ ಸ್ಮರಿಸಬಹುದು.

5. ಸಂಪನ್ಮೂಲಗಳ ಹಂಚಿಕೆ ಮತ್ತು ವರ್ಗದ ಪ್ರಶ್ನೆಗಳನ್ನು ಎತ್ತುವ ಎಡಪಂಥೀಯ ಲೇಖಕರನ್ನು ಮತ್ತು ಚಿಂತನೆಗಳನ್ನು, ಅವರು ಯಾವುದೇ ಜಾತಿ-ಧರ್ಮಗಳ ಹಿನ್ನೆಲೆಯಿಂದ ಬಂದಿದ್ದರೂ, ದೇಶವನ್ನು ಕಟ್ಟುವಿಕೆಯಲ್ಲಿ ಸಮಾಜವಾದಿ ಮುನ್ನೋಟ ಹೊಂದಿದ್ದರೂ-ಪರಿಗಣಿಸದೆ ಇರುವುದು. ಜಿ. ರಾಮಕೃಷ್ಣ ಅವರು ಭಗತ್‍ಸಿಂಗ್ ಬಗ್ಗೆ ಬರೆದ ಪಾಠವನ್ನು ಮೊದಲ ಹಂತದಲ್ಲಿ ಕೈಬಿಟ್ಟಿದ್ದರ ಕಾರಣ ಇದಾಗಿತ್ತು.

6. ದುಡಿಮೆ ಉತ್ಪಾದನೆ ಹಂಚಿಕೆಯಂತಹ ಪ್ರಶ್ನೆಗಳಿಗಿಂತ, ಯುದ್ಧ, ಸೈನಿಕಸಂಸ್ಕೃತಿ, ಶೂದ್ರರ ಬಲಿದಾನ, ಸ್ನಾಯುಬಲ ಮತ್ತು ಪುರುಷವಾದದ ಅಂಶಗಳನ್ನುಳ್ಳ ಸಂಗತಿಗಳಿಗೆ ಆದ್ಯತೆ ಕೊಡುವುದು. ಶತ್ರುವಿನ ಪರಿಕಲ್ಪನೆ ಕಟ್ಟಿಕೊಡುವುದು, ಜನರಹಿತವಾದ ಅಮೂರ್ತ ದೇಶಭಕ್ತಿ, ಗತಕಾಲದ ವೈಭವೀಕರಣ ಮುಂತಾದ ಆಯಾಮಗಳಲ್ಲಿ ರೂಪುಗೊಂಡ ರಾಷ್ಟ್ರೀಯತೆಯ ಚೌಕಟ್ಟನ್ನು ಆದರ್ಶವಾಗಿ ಮಂಡಿಸುವುದು. ಇಲ್ಲಿ ರಾಷ್ಟ್ರಪ್ರೇಮಿಗಳು ಎಂದು ಅದು ಭಾವಿಸುವ ವ್ಯಕ್ತಿಗಳನ್ನು ಆದರ್ಶವೆಂದು ಮಂಡಿಸುವುದು. ಹೆಡಗೆವಾರ್ ಸಾವರ್ಕರ್ ಮುಂತಾದವರ ಪಾಠಗಳನ್ನು ಸೇರಿಸಿರುವುದು ಇದಕ್ಕೆ ಸಾಕ್ಷಿ.

Image
hedagevar

7. ಮಹಿಳಾ ಸಮಾನತೆಯನ್ನು ಆದ್ಯತೆಯ ಸಂಗತಿಯೆಂದು ಪರಿಭಾವಿಸದಿರುವುದು; ಧಾರ್ಮಿಕವಾಗಿ ಹೆಣ್ಣನ್ನು ಮಾತೃರೂಪದಲ್ಲಿ ಆರಾಧಿಸುವ; ಸಾಮಾಜಿಕವಾಗಿ ಗೃಹಕೃತ್ಯಗಳಿಗೆ ಸೀಮಿತಗೊಳಿಸುವ ಆಶಯವನ್ನು ಹೊಂದಿರುವ ಪಾಠಗಳನ್ನು ಸೇರಿಸುವುದು. ಮಹಿಳೆಯನ್ನು ಸಂಪತ್ತಿಗೆ ಸಮೀಕರಿಸಿ ದುರುಳೀಕರಿಸಿದ ಶೈಲಿಯಲ್ಲಿದ್ದ ಬನ್ನಂಜೆ ಗೋವಿಂದಾಚಾರ್ಯರ ಲೇಖನದ ಸೇರ್ಪಡೆಯು ಇದಕ್ಕೆ ಪುರಾವೆಯಾಗಿದೆ.   

8. ಧರ್ಮರಕ್ಷಣೆ, ದೇಶರಕ್ಷಣೆ, ರಾಷ್ಟ್ರಭಕ್ತಿ, ದಾನ, ತ್ಯಾಗ ಇತ್ಯಾದಿ ಭಾವನಾತ್ಮಕ ಮೌಲ್ಯಗಳ ನೆಪದಲ್ಲಿ ಬ್ರಾಹ್ಮಣವಾದಿ ಆಲೋಚನಕ್ರಮವುಳ್ಳ ಬರೆಹಗಳನ್ನು ತುಂಬುವುದು.

ಮೇಲ್ಕಾಣಿಸಿದ ಆಶಯವುಳ್ಳ  ಪಾಠಗಳಿರುವ ಪಠ್ಯಪುಸ್ತಕಗಳು ಎಳೆಯ ಮಕ್ಕಳಲ್ಲಿ ನಮ್ಮ ಸಮಾಜ ದೇಶ ಧರ್ಮಗಳ ಬಗ್ಗೆ ತಪ್ಪಾದ ಗ್ರಹಿಕೆಗಳನ್ನು ಬಿತ್ತುತ್ತವೆ. ಅಂತಹ ಪಠ್ಯಗಳನ್ನು ವಿರೋಧ ಮಾಡುವುದು ಉಚಿತವಾಗಿದೆ. ಇದರ ಜತೆಯಲ್ಲಿ ಇಂತಹ ಪಠ್ಯಗಳ ಹಿಂದಿರುವ ಸಮಾನತೆ ಮತ್ತು ಕೂಡುಬಾಳಿನ ಆಶಯವಿಲ್ಲದ, ಮೇಲ್ಜಾತಿಗಳ ಯಜಮಾನಿಕೆಯುಳ್ಳ ಸಮಾಜ ಅಥವಾ ದೇಶಗಳನ್ನು ಪರಿಕಲ್ಪಿಸಿಕೊಂಡಿರುವ ಸಿದ್ಧಾಂತ ಮತ್ತು ರಾಜಕಾರಣಗಳನ್ನೂ ಗಮನಿಸಬೇಕು.  ಸದ್ಯ ಕರ್ನಾಟಕದಲ್ಲಿ ಈ ವಿರೋಧವು, ಬಹುಸಂಖ್ಯಾತ ಶೂದ್ರರ ದಲಿತರ ಮೇಲೆ ಬ್ರಾಹ್ಮಣವಾದಿ ಪಠ್ಯಗಳನ್ನು ಹೇರಲಾಗುತ್ತಿದೆ, ಒಂಬತ್ತು ಜನರ ಸಮಿತಿಯಲ್ಲಿ ಎಂಟು ಜನ ಒಂದೇ ಜಾತಿಯವರಿದ್ದಾರೆ ಎಂಬ ನೆಲೆಯಲ್ಲಿದೆ. ಬ್ರಾಹ್ಮಣವಾದಿ ಲೇಖಕರು ಕುವೆಂಪು ಅವರ ಬಗ್ಗೆ ತುಚ್ಛವಾದ ಭಾಷೆಯ ಟೀಕೆಗಳನ್ನು ಮಾಡಿದ್ದಾರೆ ಎಂಬ ನೆಲೆಯಲ್ಲಿದೆ. ಇದು ತಕ್ಷಣದ ಪ್ರತಿರೋಧಕ್ಕೆ ತೀವ್ರತೆ ಒದಗಿಸುತ್ತದೆ ಮತ್ತು ಒದಗಿಸಿದೆ.

ಮತಿಯವಾದವು, ಮುಸ್ಲಿಮರ ಕ್ರೈಸ್ತರ ಕಮ್ಯುನಿಸ್ಟರ ಪ್ರತಿರೋಧವನ್ನು, ಅವುಗಳ ಹಿಂದಿನ ಧರ್ಮ/ ಸಿದ್ಧಾಂತಗಳ ವಿದೇಶಿ ಮೂಲದ ಪ್ರಶ್ನೆಯನ್ನು ಎತ್ತಿ, ಅವನ್ನು `ಅಭಾರತೀಯ’ ಎಂದು ಸುಲಭವಾಗಿ ತಳ್ಳಿಹಾಕುತ್ತದೆ. ತನ್ನ ತರ್ಕವನ್ನು ಸಾರ್ವಜನಿಕರಿಗೆ ಸುಲಭವಾಗಿ ಒಪ್ಪಿಸುತ್ತದೆ. ಆದರೆ ಅದಕ್ಕೆ ನುಂಗಲಾರದ ತುತ್ತಾಗುವುದು ಬ್ರಾಹ್ಮಣವಾದ ವರ್ಸಸ್ ಶೂದ್ರ/ದಲಿತರ ಮುಖಾಮುಖಿಯ ಸಾಮಾಜಿಕ ವಿನ್ಯಾಸ. ಯಾಕೆಂದರೆ, ಈ ವಿನ್ಯಾಸದಲ್ಲಿ `ಬಹುಸಂಖ್ಯಾತರ ಭಾವನೆಗೆ ಬೆಲೆಯಿರಬೇಕು’ ಎಂದು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಅದು ಮಂಡಿಸುವ ವಾದವೇ, ಸಾಮಾಜಿಕ ನೆಲೆಯಲ್ಲಿ ಅದಕ್ಕೆ ತಿರುಗಿ ಅನ್ವಯವಾಗುತ್ತಿರುತ್ತದೆ. ಈ ಸಾಮಾಜಿಕ ಪ್ರಶ್ನೆಯು ಅದು ನೆಂತ ನೆಲವನ್ನು ಅಲುಗಿಸುತ್ತದೆ.

Image
narayana guru

ಇಂತಹ ಸಾಮಾಜಿಕ ನೆಲೆಯ ಪ್ರತಿರೋಧ ಬಂದಾಗಲೆಲ್ಲ, ಅದು ಹಿಂದು-ಮುಸ್ಲಿಂ ಭಾವನಾತ್ಮಕ ಪ್ರಶ್ನೆಯನ್ನೆತ್ತಿ, ಗಮನ ಬದಲಿಸುವ ಹಳೇತಂತ್ರ ಪ್ರಯೋಗಿಸಬಹುದು-ಓಬಿಸಿ ಮೀಸಲಾತಿಯ ಪ್ರಶ್ನೆ ಬಂದಾಗ ರಾಮಜನ್ಮಭೂಮಿ ಪ್ರಶ್ನೆಯನ್ನ ಎತ್ತಿಕೊಂಡಂತೆ. ನಾರಾಯಣ ಗುರುಗಳ ಟ್ಯಾಬ್ಲೊ ಕೈಬಿಟ್ಟ ವಿಷಯ ಬಂದಾಗ ಹಿಜಾಬ್ ಪ್ರಶ್ನೆಯನ್ನು ಮುಂದೊಡ್ಡಿದಂತೆ. ಅದರ ಈ ಸೋಶಿಯಲ್ ಇಂಜಿನಿಯರಿಂಗ್ ಅರ್ಥಮಾಡಿಕೊಂಡು ಪ್ರತಿಕ್ರಿಯಿಸುವಷ್ಟು ಸೈದ್ಧಾಂತಿಕ ಸ್ಪಷ್ಟತೆ ಮತ್ತು ರಾಜಕೀಯ ಚಾಣಾಕ್ಷತನ, ಸೈದ್ಧಾಂತಿಕ ಹಿನ್ನೆಲೆಯಿಲ್ಲದ ರಾಜಕೀಯ ಪಕ್ಷಗಳಲ್ಲ್ಲಿ ಕಡಿಮೆ. ಈ ಕುರಿತ ಸೈದ್ಧಾಂತಿಕ ಸ್ಪಷ್ಟತೆ ಎಡಪಕ್ಷಗಳಿಗಿದೆ. ಆದರೆ ಅವುಗಳ ಪ್ರತಿರೋಧವು ಸೀಮಿತ ನೆಲೆಯಲ್ಲಿ ಉಳಿದುಬಿಟ್ಟಿದೆ.

ನಿಜವಾಗಿ ಎಚ್ಚೆತ್ತ ಜನಸಮುದಾಯದ ಪ್ರತಿರೋಧದ ನೆರವಿಲ್ಲದೆ ಇಂತಹ ಅತಿಕ್ರಮವನ್ನು ಯಶಸ್ವಿಯಾಗಿ ತಡೆಯಲಾಗದು. ಆದರೆ ಸಮುದಾಯಕ್ಕೆ ಇದು ಉರಿಯುವ ಪ್ರಶ್ನೆಯೆಂದು ಮನಗಾಣಿಸುವುದು ಹೇಗೆ? ಜನಸಾಮಾನ್ಯರಲ್ಲಿ ಹೆಚ್ಚಿನವರು, ಚರ್ಚುಗಳ ಮೇಲಿನ ದಾಳಿ, ಮತಾಂತರ ನಿಷೇಧ ಕಾಯಿದೆ, ಗೋಹತ್ಯಾ ನಿಷೇಧ, ಹಿಜಾಬ್, ಅಜಾನ್, ಹಲಾಲ್, ಪೌರತ್ವ ಕಾಯ್ದೆ, ರೈತಹೋರಾಟ ಮೊದಲಾದ ವಿಷಯಗಳು ಬಂದಾಗ, ಕ್ರೈಸ್ತರು ಮುಸ್ಲಿಮರು ರೈತರು ಬಗೆಹರಿಸಿಕೊಳ್ಳಬೇಕಾದ ಸಮಸ್ಯೆ ಎಂದು ಭಾವಿಸಿರುವವರು. ಪಠ್ಯದ ಸಮಸ್ಯೆ, ಪಾಠಬರೆದ ಲೇಖಕರು, ಪಾಠ ಮಾಡುವ ಶಿಕ್ಷಕರ ಮತ್ತು ಕಲಿವ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ ಎಂದು ಭಾವಿಸಿದವರೂ ಇದ್ದಾರು.

ಆದರೆ ಶಾಲಾಪಠ್ಯದ ವಿಷಯವು ಕೇವಲ ಶೈಕ್ಷಣಿಕವಾದುದಲ್ಲ. ಮತೀಯ ನೆಲೆಯಲ್ಲಿ, ಪರ್ಯಾಯ ಸಮಾಜ ಮತ್ತು ದೇಶವನ್ನು ಕಟ್ಟುವ ಪರಿಕಲ್ಪನೆಯೊಂದಕ್ಕೆ ಸಂಬಂಧಿಸಿದೆ; ಇದು ಬ್ರಾಹ್ಮಣವಾದಿ ಮೌಲ್ಯಗಳನ್ನು ಉಳಿದವರ ಮೇಲೆ ಹೇರುತ್ತ, ಅವರನ್ನು ಸಾಂಸ್ಕೃತಿಕ ಗುಲಾಮಗಿರಿಗೆ ಒಳಪಡಿಸುವ ಸಮಾಜ ಮತ್ತು ರಾಷ್ಟ್ರ್ರವನ್ನು ರೂಪಿಸುವ ಯೋಜನೆಯಲ್ಲಿ  ಒಂದು ಉಪಕರಣವಾಗಿದೆ. ಬಡತನದ ಹಸಿವಿನ ಪ್ರಶ್ನೆಯನ್ನು ಎತ್ತದಿರುವುದು, ಮುಸ್ಲಿಂ ಕ್ರೈಸ್ತ ಬೌದ್ಧ ದ್ವೇಷ, ಸ್ತ್ರೀಯನ್ನು ಮನೆಗೆ ಸೀಮಿತಗೊಳಿಸುವುದು, ದಲಿತ-ಶೂದ್ರರನ್ನು ಕಾಲಾಳುಗಳನ್ನಾಗಿ ಪರಿವರ್ತಿಸುವುದು, ವಿಜ್ಞಾನದ ವಿರೋಧ, ಪ್ರಗತಿಪರ ಬ್ರಾಹ್ಮಣ ಚಿಂತಕರನ್ನು ಒಳಶತ್ರುಗಳೆಂದು ದ್ವೇಷಿಸುವುದು, ಯುದ್ಧಶೌರ್ಯವನ್ನು ಮತ್ತು ಹಿಂಸೆಯನ್ನು ವೈಭವೀಕರಿಸುವುದು-ಇವೆಲ್ಲವೂ ಪರಸ್ಪರ ಸಂಬಂಧವುಳ್ಳವು. ಈ ರಾಜಕೀಯ-ಸಾಮಾಜಿಕ ಅರಿವುಳ್ಳ ಲೇಖಕರು ಚಿಂತಕರು ಮತ್ತು ಮಠಾಧೀಶರು, ಎಡಪಕ್ಷಗಳು ಮಾಡುತ್ತಿರುವ ಪ್ರತಿರೋಧಕ್ಕೆ ಚಾರಿತ್ರಿಕ ಮಹತ್ವ ಪ್ರಾಪ್ತವಾಗಿದೆ.

ಇದನ್ನು ಓದಿದ್ದೀರಾ? : ಮೋದಿ 8| ಹೆಣ್ಣು ಜೀವಗಳ ಕೊರಳಿಗೆ ಬಿಗಿದ ದುರಾಡಳಿತದ ಗಂಟು

ಈ ಹಿನ್ನೆಲೆಯಲ್ಲಿ, ಪಠ್ಯಪುಸ್ತಕಗಳ ಮತೀಕರಣದ ವಿರುದ್ಧವಾಗಿ ಕರ್ನಾಟಕದಲ್ಲಿ ಎದ್ದಿರುವ ಪ್ರತಿರೋಧವು, ಸಮಾನತೆ ಸೋದರತೆ ಮತ್ತು ಕೂಡುಬಾಳಿನ ಭಾರತದ ಎದುರು ಮೇಲ್ಜಾತಿ ಯಜಮಾನಿಕೆಯ ತರತಮದ ಭಾರತದ ಪರಿಕಲ್ಪನೆಯ ಮುಖಾಮುಖಿ ಅನಿಸುತ್ತಿದೆ. ಪ್ರಗತಿಪರರ ಈ ಪ್ರ್ರತಿರೋಧಕ್ಕೆ ಬಸವಣ್ಣ, ಸಿದ್ಧಾರೂಢಸ್ವಾಮಿ, ನಾಲ್ವಡಿಯವರು, ಕುವೆಂಪು, ತೇಜಸ್ವಿ, ಲಂಕೇಶ್, ದೇವರಾಜ ಅರಸು, ಅಂಬೇಡ್ಕರ್ ವಿಚಾರ ಮತ್ತು ಚಳವಳಿಗಳ ಪರಂಪರೆಯಿದೆ. ಎಂತಲೇ ಈ ವಿಷಯದಲ್ಲಿ ಬಿಜೆಪಿ ಆಡಳಿತವುಳ್ಳ ಇತರೆ ರಾಜ್ಯಗಳಲ್ಲಿ ಕಾಣದ ಸಾರ್ವಜನಿಕ ಪ್ರತಿರೋಧವು ಕರ್ನಾಟಕದಲ್ಲಿ ರೂಪತಾಳಿದೆ. ಈ ಪ್ರತಿರೋಧವು ಪಠ್ಯಪುಸ್ತಕದಂತಹ ಶೈಕ್ಷಣಿಕ ಸಂಗತಿಯ ನೆಲೆಯಿಂದ ಸಾಮಾಜಿಕ ಪ್ರಶ್ನೆಯಾಗಿಯೂ ಬದಲಾಗುತ್ತಿದೆ. ಈ ಸಾಮಾಜಿಕ ಪ್ರಶ್ನೆಯು ರಾಜಕೀಯ ಚಳವಳಿಯಾಗಿ ರೂಪುಗೊಂಡು ಪರಿಣಾಮವುಂಟು ಮಾಡುತ್ತದೆಯೇ ಇಲ್ಲವೇ ಎಂಬುದು ನಿರ್ಣಾಯಕ ಸಂಗತಿಯಾಗಿದೆ. 

ನಿಮಗೆ ಏನು ಅನ್ನಿಸ್ತು?
5 ವೋಟ್