ಪಠ್ಯಪುಸ್ತಕ ವಿವಾದ: ಸರ್ಕಾರಿ ಶಿಕ್ಷಕರೊಬ್ಬರ ಅಭಿಪ್ರಾಯ

school girls

ನಾನೊಬ್ಬ ಪ್ರಜಾಪ್ರಭುತ್ವವನ್ನು ಗೌರವಿಸುವ ಪೋಷಕನಾಗಿ ನನ್ನ ಮಗುವಿಗೆ ಎಂತಹ ಪಠ್ಯ ಇರಬೇಕು ಎಂದು ಯೋಚಿಸುತ್ತೇನೆ. ನಮ್ಮ ಬಹುತ್ವ ಭಾರತದ ಬಹು ಸಂಸ್ಕೃತಿಯ ಬಹು ಆಯಾಮಗಳನ್ನು ಒಳಗೊಂಡು ಮಗುವೊಂದು ಎಲ್ಲರನ್ನೂ ಪ್ರೀತಿಯಿಂದ ಒಳಗೊಳ್ಳುವುದನ್ನು ಕಲಿಸಬೇಕೆಂದು ಬಯಸುತ್ತೇನೆ. ಆದರೆ ಈಗ ಆಗಿರುವುದೇನು?

ಶಾಲೆ ಪ್ರಾರಂಭವಾಗಿದೆ, ಮಕ್ಕಳು ಖುಶಿ ಖುಶಿಯಿಂದ ಶಾಲೆಗೆ ಹೋಗುತ್ತಿದ್ದಾರೆ. ಎಂದಿನಂತೆ ಅರ್ಧಂಬರ್ಧ ಪುಸ್ತಕಗಳು ಮುದ್ರಣಗೊಂಡು ಹಂಚಿಕೆಯಾಗಿವೆ. ನೂತನ ಪಠ್ಯಕ್ರಮದ 10ನೇ ತರಗತಿಯ ಸಮಾಜವಿಜ್ಞಾನ ಪಠ್ಯಪುಸ್ತಕದಲ್ಲಿ ದೇಶದ ಯುವಜನರ ಸ್ಫೂರ್ತಿ ಭಗತ್‍ಸಿಂಗ್, ಸಮಾಜವನ್ನು ಸಮಸಮಾಜದ ನೆಲೆಯಲ್ಲಿ ಕಟ್ಟಲು ಶ್ರಮಿಸಿದ ಬಸವಣ್ಣ, ನಾರಾಯಣಗುರು, ವಿವೇಕಾನಂದರ ಪಾಠಗಳನ್ನು ತೆಗೆದುಹಾಕಿ ಇದುವರೆಗೂ ಭಾರತದ ಶೈಕ್ಷಣಿಕ ಚರಿತ್ರೆಯಲ್ಲಿ ಕಟ್ಟಿಕೊಟ್ಟ ಪಠ್ಯಕ್ರಮಕ್ಕೆ ವ್ಯತಿರಿಕ್ತ ಮಾನದಂಡದಲ್ಲಿ ಒಂದೇ ಜಾತಿಯ ಜನಗಳ ಹಾಗೂ ಅಲೌಕಿಕ ಜ್ಞಾನ ನೀಡುವ ಪಠ್ಯಗಳನ್ನ ಹಾಕಲಾಗಿದೆ ಎಂದು ವಿವಾದ ಎದ್ದಿದೆ. ಸಾಹಿತಿಗಳು, ಶಿಕ್ಷಣ ತಜ್ಞರು ವಿವಿಧ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯನ್ನು ವಿಸರ್ಜಿಸಿ, ಅದರ ಅಧ್ಯಕ್ಷನನ್ನು ವಜಾಮಾಡಿ ಬಹುತ್ವ ಪ್ರಾತಿನಿಧಿತ್ವ ಇರುವ ಸಮಿತಿ ರಚಿಸಿ ಮರುರಚನೆ ಮಾಡಿ ಎಂದು ಬಲವಾದ ಒತ್ತಾಯವನ್ನು ಮಾಡುತ್ತಿದ್ದಾರೆ.

ನಾಡಿನ ಸಾಕ್ಷಿ ಪ್ರಜ್ಞೆ ದೇವನೂರ ಮಹಾದೇವ ಮತ್ತು ಹಿರಿಯ ಬರಹಗಾರ ಜಿ.ರಾಮಕೃಷ್ಣ ಅವರು ಸರ್ಕಾರಕ್ಕೆ ಪತ್ರಬರೆದು ಪಠ್ಯಪುಸ್ತಕ ಸಾಮಾಜಿಕ ನ್ಯಾಯದಿಂದ ವಂಚಿತಗೊಂಡು ಭಾರತದ ಬಹುತ್ವ, ಪಾರ್ಟಿಸಿಪೇಟರಿ ಪ್ರಜಾಪ್ರಭುತ್ವ ಕಣ್ಮರೆಯಾಗಿದೆ, ಪಠ್ಯಗಳಲ್ಲಿ ಮಕ್ಕಳಿಗೆ ವಿಷ ಉಣಿಸಲಾಗುತ್ತಿದೆ. ಹಾಗಾಗಿ ಇಂತಹ ಪಠ್ಯಸಾಲಿನಲ್ಲಿ ನಮ್ಮ ಪಾಠಗಳನ್ನು ಸೇರಿಸಬೇಡಿ ಎಂದು ಹೇಳಿದ್ದಾರೆ. ಹಿಂದಿನ ಪಠ್ಯ ಪುಸ್ತಕ ಸಮಿತಿಯ ಅಧ್ಯಕ್ಷರಾಗಿದ್ದ  ಬರಗೂರು ರಾಮಚಂದ್ರಪ್ಪ ಮತ್ತು ಹಂಪಾ ನಾಗರಾಜಯ್ಯರಂತಹ ಹಿರಿಯ ವಿದ್ವಾಂಸರು ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಲು ವಿನಂತಿಸಿಕೊಂಡಿದ್ದಾರೆ. ಏತನ್ಮಧ್ಯೆ ಸರ್ಕಾರ ಭಗತ್‍ಸಿಂಗ್ ಪಠ್ಯ ತೆಗೆದಿಲ್ಲ, ಪುಸ್ತಕ ಮುದ್ರಣಕ್ಕೆ ತಡೆ ಒಡ್ಡಿದೆ, ಹಂಚಿದ ಪುಸ್ತಕಗಳನ್ನು ಹಿಂತೆಗೆದುಕೊಳ್ಳುವ ಮಾತನಾಡಿದೆ. ಗೊಂದಲ ಎಡ-ಬಲ ತಾತ್ವಿಕ ಜಗಳದಲ್ಲಿ ಮತ್ತಷ್ಟು ಕಗ್ಗಂಟಾಗಿದೆ.

ನನ್ನ ಮಗುವಿಗೆ ಎಂತಹ ಪಾಠ ಬೇಕು?
ನಾನೊಬ್ಬ ಪ್ರಜಾಪ್ರಭುತ್ವವನ್ನು ಗೌರವಿಸುವ ಪೋಷಕನಾಗಿ ನನ್ನ ಮಗುವಿಗೆ ಎಂತಹ ಪಠ್ಯ ಇರಬೇಕು ಎಂದು ಯೋಚಿಸುತ್ತೇನೆ. ನಮ್ಮ ಬಹುತ್ವ ಭಾರತದ ಬಹು ಸಂಸ್ಕೃತಿಯ ಬಹು ಆಯಾಮಗಳನ್ನು ಒಳಗೊಂಡು ಮಗುವೊಂದು ಎಲ್ಲರನ್ನೂ ಪ್ರೀತಿಯಿಂದ ಒಳಗೊಳ್ಳುವುದನ್ನು ಮುಖ್ಯವಾಗಿ ಕಲಿಸಬೇಕೆಂದು ಬಯಸುತ್ತೇನೆ. ಮನೆಯಲ್ಲಿ ಪರಿಪೂರ್ಣವಾಗಿ ಕಲಿಸಲಾಗದ ಸಹಬಾಳ್ವೆ, ಜಾತ್ಯತೀತತೆ, ಧರ್ಮನಿರಪೇಕ್ಷತೆ, ಸಾಮರಸ್ಯ, ಸಹೋದರತ್ವವನ್ನು ಯಶಸ್ವಿಯಾಗಿ ಯಾವ ಪೂರ್ವಗ್ರಹವೂ ಇಲ್ಲದೇ ಸಮಚಿತ್ತದಿಂದ ಕಲಿಸಲಾಗುವುದು ನಮ್ಮ ಶಾಲೆಗಳಲ್ಲಿ ಮತ್ತು ನಿಷ್ಪಕ್ಷಪಾತ ಪಠ್ಯದ ಮೂಲಕ ಮಾತ್ರ! ಜಗದ ಎಲ್ಲಾ ಶಿಕ್ಷಣ ತಜ್ಞರು ನಿರೂಪಿಸುವಂತೆ ಶಿಕ್ಷಣ ಎಂದರೆ ಎಲ್ಲ ಎಲ್ಲೆಗಳನ್ನು ಮೀರಿ ಸ್ವತಂತ್ರ ಮಾನವ ಚೇತನವನ್ನು ಸೃಜಿಸುವುದು, ಮನುಷ್ಯನನ್ನು ಉನ್ನತ ಉದಾತ್ತ ಮಾನವನನ್ನಾಗಿ ರೂಪಿಸುವುದು. ಹೀಗೆಂದೇ ಇಂದು ಅತ್ಯಂತ ಅವಶ್ಯಕವಾಗಿ ಬೇಕಾಗಿರುವುದು ವೈಚಾರಿಕ, ವೈಜ್ಞಾನಿಕ, ಸಂವಿಧಾನಬದ್ಧ, ಉದಾತ್ತ, ಮುಕ್ತ ಚಿಂತನೆಯ ಪಠ್ಯ.

Image
Jyothi ba phule

ಪ್ರತಿಯೊಬ್ಬ ಪೋಷಕ ಕೂಡ ತನ್ನ ಮಗು ಈ ಸಮಾಜದಲ್ಲಿ ಗಾಂಧಿ, ವಿವೇಕಾನಂದ, ಭಗತ್‍ಸಿಂಗ್, ಅಂಬೇಡ್ಕರ್, ಫುಲೆ ದಂಪತಿಗಳು, ಮದರ್ ತೆರೆಸಾರಂತೆ ಆದರ್ಶ ವ್ಯಕ್ತಿ ಆಗಬೇಕು; ಕುವೆಂಪು, ಬೇಂದ್ರೆ, ಶಿವರಾಮ ಕಾರಂತರಂತೆ ದೊಡ್ಡ ಕವಿ-ಸಾಹಿತಿ ಆಗಬೇಕು; ಮೇರಿಕ್ಯೂರಿ, ಐನ್‌ಸ್ಟೀನ್, ಅಬ್ದುಲ್‌ ಕಲಾಂ, ಸಿ ವಿ ರಾಮನ್‍ರಂತೆ ದೊಡ್ಡ ವಿಜ್ಞಾನಿ ಆಗಬೇಕು; ಓಬವ್ವ, ರಾಣಿ ಚೆನ್ನಮ್ಮ, ರಝಿಯಾ, ಚಾಂದ್‍ಬೀಬಿಯರಂತೆ ವೀರವನಿತೆಯರಾಗಬೇಕು; ಅಂಬೇಡ್ಕರ್, ವಿಶ್ವೇಶ್ವರಯ್ಯರಂತೆ ಅದ್ವಿತೀಯ ಬುದ್ದಿವಂತರಾಗಬೇಕು ಎಂದು ಬಯಸುತ್ತಾರೆ. ಇಂತಹವನ್ನೆಲ್ಲಾ ಸಾಧ್ಯವಾಗಿಸಲು ಸಾಧ್ಯವಿರುವುದು ಶಿಕ್ಷಣದಲ್ಲಿ ಮಾತ್ರ. ಅದಕ್ಕಾಗಿ ದೇಶಕ್ಕೊಂದು ಸಮಗ್ರ ಶಿಕ್ಷಣ ನೀತಿಬೇಕು, ಆ ನೀತಿಗಾಗಿ ಒಂದು ಪರಿಪೂರ್ಣ ಪೂರ್ವಗ್ರಹ ಮುಕ್ತ ಪಠ್ಯಕ್ರಮಬೇಕು, ಆ ಪಠ್ಯಕ್ರಮದ ಆಧಾರದಲ್ಲಿ ಪಠ್ಯಗಳು ರಚನೆ ಆಗಬೇಕು ಮತ್ತದನ್ನು ಸಮರ್ಥವಾಗಿ ಕಲಿಸಲು ಉದಾತ್ತ ಚಿಂತನೆಯ ಶಿಕ್ಷಕರು ಹಾಗೂ ಪರಿಪೂರ್ಣ ಶಾಲೆಗಳು ಬೇಕು. ಹಾಗಾಗಿ ‘ಶಿಕ್ಷಣ- ಶಿಕ್ಷಕ-ಪಠ್ಯ-ಶಾಲೆ’ ಎಂಬ ಚತುಸ್ತಂಭಕ್ಕೆ ಆಧಾರ ಆ ದೇಶದ ಸಂವಿಧಾನ.

ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005
ಶಿಕ್ಷಣ ನೀತಿಯನ್ನು ವಯಸ್ಸಿಗನುಗುಣವಾಗಿ ಪ್ರಾಯೋಗಿಕ ನೆಲೆಗೆ ಒಗ್ಗಿಸಲು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ಭಾರತ ಸರ್ಕಾರ ರೂಪಿಸಿದೆ. ಮತ್ತದನ್ನು ಕಾಲಕ್ಕನುಗುಣವಾಗಿ ಪರಿಷ್ಕರಿಸಿದೆ, ಪರಿಷ್ಕಾರಗೊಳ್ಳಬೇಕು ಕೂಡ. ಹಾಗೆ ಪರಿಷ್ಕರಣೆಗೊಳ್ಳುವಾಗ ಸಂವಿಧಾನದ ಮೂಲತತ್ವಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾಗಿರುವುದು ಹಾಗೂ ಪ್ರಜಾಸತ್ತಾತ್ಮಕವಾಗಿರುವುದು ಸರ್ಕಾರ ಹಾಗೂ ಪಠ್ಯರಚನಾ ಸಮಿತಿಯ ಜವಾಬ್ದಾರಿಯಾಗಿರುತ್ತದೆ. ಪರಿಷ್ಕರಣೆ ಬೇಕೆಂದಾಗ; ಹೇಳುವ ಹೊಸಪಾಠಗಳು ಏಕೆ ಬೇಕು, ಬಿಡುವ ಪಠ್ಯಗಳು ಏಕೆ ಬಿಡಬೇಕು ಎನ್ನುವ ಸ್ಪಷ್ಟನೆಯನ್ನೂ ಸ್ಪಷ್ಟತೆಯನ್ನು ಜನರಿಗೆ ಕೊಡಬೇಕು.

ರಾಷ್ಟ್ರೀಯ ಶಿಕ್ಷಣ ನೀತಿ-1986 ಆದ್ಯತೆ ಕೊಡುವ 10 ಮೂಲತತ್ವಗಳಾದ ಭಾರತದ ರಾಷ್ಟ್ರೀಯ ಚಳವಳಿ, ಸಂವಿಧಾನಾತ್ಮಕ ಹೊಣೆಗಾರಿಕೆಗಳು/ಮೌಲ್ಯಗಳು, ರಾಷ್ಟ್ರೀಯ ಭಾವೈಕ್ಯತೆ, ಭಾರತದ ರಾಷ್ಟ್ರೀಯ ಪರಂಪರೆ, ಸರ್ವಮಾನ್ಯ ಸಂಸ್ಕೃತಿ-ಸಮಾನತೆ, ಪ್ರಜಾಪಭುತ್ವ, ಧರ್ಮ ನಿರಪೇಕ್ಷತೆ, ಲಿಂಗ ಸಮಾನತೆ, ಪರಿಸರ ಸಂರಕ್ಷಣೆ, ಸಾಮಾಜಿಕ ಅಂತರಗಳ ನಿರ್ಮೂಲನ, ಸಣ್ಣ ಕುಟುಂಬ ಆದರ್ಶ ಮತ್ತು ವೈಜ್ಞಾನಿಕ ಮನೋಧರ್ಮ ಇವುಗಳನ್ನು ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳ ಪರಿಶೀಲನೆ ಮಾಡುವಾಗ ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ನಂತರ 2005ರಲ್ಲಿ ಪಠ್ಯಕ್ರಮ ಚೌಕಟ್ಟು ಸಮಾಜ ವಿಜ್ಞಾನದಲ್ಲಿ ಏಕತೆಯ ಮನೋಭಾವ ಮುಖ್ಯ ವಿಷಯವಾಗಬೇಕು. ಈ ವಿಷಯವನ್ನು ದಮನಿತ, ಅಂಚಿಗೊತ್ತರಿಸಲ್ಪಟ್ಟ ಜಾತಿ ವರ್ಗಗಳ ದೃಷ್ಠಿಕೋನದಿಂದ ಅಧ್ಯಯನ ಮಾಡುವ ಬಗ್ಗೆ ಶಿಫಾರಸು ಮಾಡಿದೆ. ಈ ನೆಲೆಯಲ್ಲಿ ಪಠ್ಯಕ್ರಮ ಚೌಕಟ್ಟನ್ನು ರೂಪಿಸಲಾಗಿದೆ. ಮತ್ತೆ ಈ ಚೌಕಟ್ಟಿನಡಿ ಆಗಾಗ ಪಠ್ಯಕ್ರಮಗಳನ್ನು ಪರಿಷ್ಕರಿಸಲಾಗುತ್ತಿದೆ. ಆದರೆ ಈಗ ಮಾಡಿರುವ ಪರಿಷ್ಕರಣೆ ಈ ತತ್ವಗಳನ್ನು ಗಾಳಿಗೆ ತೂರಿದೆ ಎನ್ನುವುದೇ ಈ ಪರಿಷ್ಕರಣೆ ವಿರೋಧದ ಪ್ರಮುಖ ನೆಲೆ.

ಸದರಿ ಪಠ್ಯಪರಿಷ್ಕರಣದಲ್ಲಿ 2005ರ ಪಠ್ಯಕ್ರಮ ಚೌಕಟ್ಟಿಗೆ ಹೊರತಾಗಿ ಏನಿದೆ?

2005ರ ಪಠ್ಯಕ್ರಮ ಚೌಕಟ್ಟಿನಡಿ 2014-15ರಲ್ಲಿ ಬರಗೂರು ರಾಮಚಂದ್ರಪ್ಪನವರ ಸರ್ವಾಧ್ಯಕ್ಷತೆಯಲ್ಲಿ ಪರಿಷ್ಕರಣೆ ಮಾಡಿದ ಪಠ್ಯದಲ್ಲಿ ಬಹುತ್ವ ಪ್ರತಿಪಾದಿಸುವ ಜಿ.ರಾಮಕೃಷ್ಣ, ಸಾರಾ ಅಬೂಬಕ್ಕರ್, ಎ.ಎನ್.ಮೂರ್ತಿರಾಯ, ಬಿ.ಟಿ. ಲಲಿತಾನಾಯಕ್, ಅರವಿಂದ ಮಾಲಗತ್ತಿ, ಎಲ್.ಬಸವರಾಜು ಹಾಗೂ ಕೆ.ನೀಲಾ ಅವರ ಪಠ್ಯಗಳನ್ನು ಕಾರಣ ನೀಡದೆ ಕೈಬಿಟ್ಟು. 10 ಹೊಸ ಪಠ್ಯಗಳನ್ನು ಸೂಕ್ತ ಕಾರಣ ಕೊಡದೆ ಸೇರಿಸಲಾಗಿದೆ. ಆ ಪಠ್ಯಗಳಲ್ಲಿ 9 ಪಠ್ಯಗಳು ಒಂದೇ ಜಾತಿಗೆ ಸೇರಿದವರದ್ದು. (ಎಸ್.ಎಲ್.ಭೈರಪ್ಪ, ಕೆ.ಬಿ.ಹೆಡಗೆವಾರ್, ಗಜಾನನಶರ್ಮ, ಎನ್.ರಂಗನಾಥಶರ್ಮ, ಸುಶ್ರುತ ದೊಡ್ಡೇರಿ, ಎಸ್.ವಿ.ಪರಮೇಶ್ವರ ಭಟ್, ಗಣೇಶ ಶತಾವಧಾನಿ, ಬನ್ನಂಜೆ ಗೋವಿಂದಾಚಾರ್ಯ, ಚಕ್ರವರ್ತಿ ಸೂಲಿಬೆಲಿ ಮತ್ತು ಶಿವಾನಂದ ಕಳವೆ) ಇಲ್ಲಿಯೇ ಪಠ್ಯಪರಿಷ್ಕರಣೆ ತನ್ನ ಚೌಕಟ್ಟನ್ನು ಮೀರಿ ಅಡ್ಡದಾರಿ ಹಿಡಿಯಿತು. ಈ ಅಡ್ಡದಾರಿಯ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯಲ್ಲಿ ಸಂಚಾಲಕರು ಮತ್ತದೇ ಮೇಲುಜಾತಿಯ ಜನರು. ಸಮಿತಿಯ 7ಜನರಲ್ಲಿ 6 ಜನ ಬ್ರಾಹ್ಮಣರು. ಈ ಸಮಿತಿ ಯಾವುದೇ ಪ್ರಜಾತಾಂತ್ರಿಕ ಮಾರ್ಗ ಅನುಸರಿಸಿಲ್ಲ ಹಾಗೂ ಒಬ್ಬರೇ ಒಬ್ಬ ಸದಸ್ಯ ಮಹಿಳಾ ಪ್ರತಿನಿಧಿಯನ್ನು ಒಳಗೊಂಡಿಲ್ಲ. (50% ಪ್ರಾತಿನಿಧಿತ್ವ ಇರಬೇಕು ಎನ್ನುವುದು ಇಂದಿನ ಸರ್ಕಾರದ ನೀತಿ) ಅಲ್ಲದೆ ಮಹಿಳೆಯರ ಕುರಿತ ಪಾಠವಾಗಲಿ, ಮಹಿಳೆಯರು ಬರೆದ ಪಾಠವಾಗಲಿ ಇಲ್ಲ! ಈ ಕಲಿಕೆಯಿಂದ ಇನ್ನೆಂತಹ ಸಾಮಾಜಿಕ ನ್ಯಾಯ ನಿರೀಕ್ಷಿಸಬಹುದು?.

ಎರಡನೆಯದಾಗಿ, ಬದಲಿಗೆ ಆರಿಸಿದ ಪಠ್ಯಗಳು 14-15ರ ವಯೋಮಾನಕ್ಕೆ ಮೀರಿದವು. ಮತ್ತವು ಉಪದೇಶ ಶೈಲಿಯವು ಹಾಗೂ ಬಹಳಷ್ಟು ಕೃತಿಕಾರರು ವಿವಾದಿತ ವ್ಯಕ್ತಿಗಳು. ಕೇಶವ ಬಲಿರಾಮ ಹೆಡಗೆವಾರರ ಆದರ್ಶ ಪುರುಷ ಯಾರಾಗಬೇಕು? ತಲೆಬರಹದಡಿ ಪ್ರಕಟವಾಗಿರುವ ಲೇಖನ ಪಠ್ಯವಾಗಿದೆ. ಶೀರ್ಷಿಕೆಯೇ ಮಹಿಳಾ ವಿರೋಧವನ್ನ ಹೇಳುತ್ತಿದೆ. ಮತ್ತವರ ಸಿದ್ಧಾಂತ ರಾಷ್ಟ್ರೀಯ ಚಳವಳಿಗೆ ಬೆನ್ನು ತಿರುಗಿಸಿ ಬ್ರಿಟೀಷರ ಜೊತೆ ನಿಂತವರು ಮತ್ತು ಅಂದಿನ ಸಮಾಜ ಬಾಂಧವರಿಗೆ ಭಾರತ ರಾಷ್ಟ್ರೀಯ ಚಳವಳಿಯಲ್ಲಿ ತೊಡಗಿಸಿಕೊಳ್ಳುವುದು ವ್ಯರ್ಥ ಎಂದವರು. 1930ರಲ್ಲಿ ತ್ರಿವರ್ಣ ಧ್ವಜ ಎಲ್ಲಡೆ ಹಾರಬೇಕು ಎಂದು ಅಂದಿನ ಸ್ವಾತಂತ್ರ್ಯ ಹೋರಾಟದ ಕಾಂಗ್ರೆಸ್ ಕರೆ ನೀಡಿದಾಗ ಇವರು ಕೇವಲ ಭಗವಾಧ್ವಜ ಹಾರಿಸಲು ಆದೇಶ ಇತ್ತವರು. ಹಾಗೂ ಭಾರತದ ಸಂವಿಧಾನ ಮತ್ತು ರಾಷ್ಟ್ರಧ್ವಜವನ್ನು ಎಂದೂ ಒಪ್ಪಿಕೊಳ್ಳದ ಅಟಲಚಿಂತನಾ ಸಿದ್ಧಾಂತಿ ಎನ್ನುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಇವರ ಪಾಠದಿಂದ ಎಂತಹ ಆದರ್ಶ ವ್ಯಕ್ತಿತ್ವಗಳನ್ನು ಈ ದೇಶ ಪಡೆಯಬಲ್ಲದು?

ಬನ್ನಂಜೆ ಗೋವಿಂದಾಚಾರ್ಯರ ಶುಕನಾಸನ ಉಪದೇಶ ಪಾಠ ಇಡಿ ಹೆಣ್ಣುಕುಲವನ್ನು ಅಪಮಾನಿಸುವ, ಆಕೆಯನ್ನು ಭೋಗಿಸುವ ಸರಕಿನ ರೂಪದಲ್ಲಿ ನೋಡುವ ಉಪದೇಶ ʼಹಾಲುಗಡಲಿನಿಂದ ಮೇಲೆದ್ದು ಬರುವಾಗಲೆ ತನ್ನ ಜತೆಗಾರರಿಂದ ದುರ್ಗುಣಗಳನ್ನ ಹೊತ್ತುಕೊಂಡೆ ಬಂದಿದ್ದಾಳೆ. ಚಂದ್ರಕಲೆಯ ವಕ್ರತೆ, ಉಚ್ಚೈಃ ಶವಸ್ಸಿನ ಚಾಪಲ್ಯ, ಕಾಲಕೂಟದ ಮೋಹಕತ್ವ, ಮಧ್ಯದ ಮಾದಕ, ಕೌಸ್ತುಭದ ಕಾಠಿಣ್ಯ ಎಲ್ಲ ಗುಣಗಳು ಸಂಪತ್ತಿನ ಸಹಕಾರಿಗಳು. ಈ ಸಿರಿಯೆಂಬ ಹೊಸ ಹೆಣ್ಣನ್ನು ಕಂಡು ಮರುಳಾಗದವರನ್ನು ನಾನು ಕಂಡಿಲ್ಲʼ ಇದೊಂದು ಪ್ಯಾರ ಅಷ್ಟೇ ಈ ಶಬ್ಧಗಳು, ಈ ವ್ಯಾಖ್ಯಾನ 14-15 ವರ್ಷದ ವಿದ್ಯಾರ್ಥಿಗಳಲ್ಲಿ ಎಂತಹ ಮನೋವೃತ್ತಿ ಮೂಡಿಸಬಹುದು? ವಿದ್ಯಾರ್ಥಿನಿಯರಲ್ಲಿ ಇನ್ನೆಂತಹ ಭಾವ ಮೂಡಿಸಬಹುದು. ಇನ್ನುಳಿದ ಸೇರ್ಪಡೆಗೊಂಡವರ ಪಾಠಗಳಲ್ಲಿ ಶಿವಾನಂದ ಕಳವೆಯವರನ್ನು ಹೊರತುಪಡಿಸಿ ಪ್ರಾಥಮಿಕ ಶಿಕ್ಷಣಹಂತದ ಮಕ್ಕಳಿಗೆ ಹೇಳುವ ಶೈಕ್ಷಣಿಕ ತತ್ವದ ಅಂಶಗಳ ಕುರಿತು ಹೇಳಲು ಏನೂ ಇಲ್ಲ. ಅವೂ ಕೂಡ ಬನ್ನಂಜೆಯವರ, ಹೆಡಗೆವಾರರ ಜಾಡು ಹಿಡಿದೇ ಸಾಗುತ್ತದೆ.

Image
childrens

ಗೊಂದಲ ಪರಿಹರಿಸಲು ಆಗಬೇಕಾದುದೇನು?
ಈಗ ನಡೆಯುತ್ತಿರುವ ವಿವಾದದ ಒಳಗಡೆ ನಾಡಿನ ಚಿಂತಕರು ಹೋರಾಟಗಾರರು ಸಾಹಿತಿಗಳು ಕೆಲವು ಪ್ರಾಧ್ಯಾಪಕರುಗಳು ಮಾತ್ರ ಮಾತನಾಡುತ್ತಿದ್ದಾರೆ. ಮಾಧ್ಯಮಗಳಂತೂ ಶಿಕ್ಷಣದ ಪರ ಎಂದೂ ವಾದಿಸಿದ್ದಿಲ್ಲ. ಆದರೆ ವಾಸ್ತವವಾಗಿ ಈ ವಿಷಯದ ಕುರಿತು ಹೆಚ್ಚು ಚರ್ಚೆ ಮಾಡಬೇಕಾಗಿದ್ದು ಶಿಕ್ಷಕರು. ಶಿಕ್ಷಣ ಸಂಘಟನೆಗಳು, ಶಿಕ್ಷಣ ಸಂಸ್ಥೆಯ ಅಧಿಕಾರಿಗಳು ಮತ್ತು ಪೋಷಕರು. ಇವರ ದಿವ್ಯ ಮೌನ ನಮ್ಮ ಮಕ್ಕಳ ಕಲಿಕೆಯನ್ನು ಗೊಂದಲಗೊಳಿಸೀತು.
ಪಠ್ಯ ಪುಸ್ತಕಗಳು ಪಕ್ಷ ಪುಸ್ತಕಗಳು ಆಗಬಾರದು. ಶಿಕ್ಷಣ ಅನ್ನುವುದು ಪಕ್ಷಾತೀತವಾಗಿ ಇರಬೇಕು, ಧರ್ಮಾತೀತವಾಗಿ ಇರಬೇಕು, ಅದು ರಾಜಕೀಯದಿಂದ ಹೊರತಾಗಿರಬೇಕು, ಅಲೌಕಿಕ ಜ್ಞಾನದಿಂದ ಸ್ವತಂತ್ರಗೊಂಡು ಲೌಕಿಕ ಜ್ಞಾನಾಧಾರಿತವಾಗಿರಬೇಕು. ಪಠ್ಯ ರಚನೆ ಮತ್ತು ಪಠ್ಯಪರಿಷ್ಕರಣೆ ಸಮಿತಿಯವರು ಯಾವುದೇ ಸಿದ್ದಾಂತ/ಪಂಥಕ್ಕೆ ಅಂಟಿಕೊಂಡಿದ್ದರೂ ಶಿಕ್ಷಣದ ವಿಷಯದಲ್ಲಿ ಅವುಗಳೊಂದಿಗೆ ಮಾನಸಿಕ ದೂರ ಕಾಯ್ದುಕೊಂಡು ಸಂವಿಧಾನದ ಶಿಕ್ಷಣ ಚೌಕಟ್ಟಿನ ಪಂಥಿಯಾಗಿರಬೇಕು.

ಇದನ್ನು ಓದಿದ್ದೀರಾ? ಹಾಸನ| ಶಿಕ್ಷಣ ಸಚಿವ ಸ್ಥಾನದಿಂದ ನಾಗೇಶ್‌ ಪದಚ್ಯುತಿಗೆ ಆಗ್ರಹ

ಬರಗೂರರ ನೇತೃತ್ವದಲ್ಲಿ ನಡೆದ ಪರಿಷ್ಕರಣೆ 172ಕ್ಕೂ ಅಧಿಕ ವಿಷಯ ತಜ್ಞರನ್ನೊಳಗೊಂಡ 27 ವಿವಿಧ ವಿಷಯ ಸಮಿತಿಗಳು 30ಕ್ಕೂ ಅಧಿಕ ಬಾರಿ ಅಧ್ಯಾಪಕರ ಸಂಘ, ಶಿಕ್ಷಕರ ಸಂಘಗಳು, ಡಯೆಟ್ ಪ್ರಾಂಶುಪಾಲರ ಸಂಘ ಹಾಗೂ ಶಿಕ್ಷಣ ತಜ್ಞರುಗಳ ಸಭೆ ನಡೆಸಿ ಪ್ರಜಾಸತ್ತಾತ್ಮಕವಾಗಿ ನಡೆಸಿದ ದಾಖಲೆ ಇದೆ. ಇವರು ಕೇವಲ 7 ಜನ ಒಂದೇ ಜಾತಿಯ ಪುರುಷರು ಇದನ್ನು ಪರಿಷ್ಕರಿಸಿರುವುದು ಎಷ್ಟು ಶಿಕ್ಷಣಮುಖಿ? ಎಷ್ಟು ಸಂವಿಧಾನಮುಖಿ?

ಈಗ ರಚನೆ ಆಗಿರುವ ವಿವಾದಿತ ಪಠ್ಯಕ್ರಮ ಅಸಂವಿಧಾನಿಕವಾದುದು ಅನ್ನುವುದು ಎದ್ದು ಕಾಣುತ್ತಿದೆ. ಮತ್ತದನ್ನು ಉದ್ದೇಶಪೂರ್ವಕವಾಗಿ ಮಾಡಿರುವಂತಿದೆ. ಬಹಳ ಸೂಕ್ಷ್ಮವಾಗಿ ಹದಿಹರೆಯದ ಮಕ್ಕಳನ್ನು ಜಾತ್ಯಾತೀತ ತತ್ವದಿಂದ ಹೊರಗೆಳೆಯುವ ನೆಲೆಯಲ್ಲಿ ರೂಪಿಸುವಂತಿದೆ. ಹೀಗೇ ಆದರೆ ಭವಿಷ್ಯದಲ್ಲಿ ನಮ್ಮ ಮಕ್ಕಳು ಆದರ್ಶ ಸಮಾಜ ಕಟ್ಟುವುದಕ್ಕಿಂತ ದ್ವೇಷ ತುಂಬಿದ ವಿಘಟಕ ಸಮಾಜ ಕಟ್ಟುವ ಮನಸ್ಥಿತಿಯನ್ನ ಬೆಳೆಸಿಕೊಳ್ಳುವ ಭಯ ಕಾಡುತ್ತಿದೆ. ಹಾಗಾಗಿ ನಮ್ಮ ಮುಖ್ಯಮಂತ್ರಿಗಳು  ಮಧ್ಯಪ್ರವೇಶ ಮಾಡಿ, ಪಠ್ಯಪರಿಷ್ಕರಣ ಸಮಿತಿಯನ್ನು ವಿಸರ್ಜಿಸಿ ಪ್ರಜಾಸತ್ತಾತ್ಮಕ ಹಾದಿಯಲ್ಲಿ ಪಠ್ಯಕ್ರಮ ಮರುರೂಪಿಸಿ ನಮ್ಮ ಶಿಕ್ಷಣ ಕಲುಷಿತಗೊಳ್ಳದಂತೆ ನೋಡಿಕೊಳ್ಳುವರೆಂದು ಆಶಿಸೋಣವೆ?

ಲೇಖಕರು: ಹೆಸರಹೇಳಲಿಚ್ಛಿಸದ ಸರ್ಕಾರಿ ಕಾಲೇಜಿನ ಶಿಕ್ಷಕರು
ನಿಮಗೆ ಏನು ಅನ್ನಿಸ್ತು?
11 ವೋಟ್