ಸಂಕುಚಿತ ಮನೋಭಾವದವರಿಂದ ಪಠ್ಯ ಪರಿಷ್ಕರಣೆಯೇ ವಿವಾದಕ್ಕೆ ಕಾರಣ: ವಿವೇಕಾನಂದ ಹೆಚ್‌ ಕೆ

Rohith

ಹಿಂದೆಯೂ ಪಠ್ಯಪುಸ್ತಕ ಪರಿಷ್ಕರಣೆ ಆದಾಗ ಸಣ್ಣ ಪುಟ್ಟ ಅಸಮಾಧಾನಗಳು ಇದ್ದವು. ಆದರೆ ಈಗ ಅದು‌ ಗಂಭೀರ ವಿಷಯವಾಗಿ ಮಾರ್ಪಟ್ಟಿದೆ. ಅದಕ್ಕೆ ಬಹುಮುಖ್ಯ ಕಾರಣ ಕಳೆದ ಕೆಲವು ವರ್ಷಗಳಲ್ಲಿ ದೇಶದ ಒಟ್ಟು ರಾಜಕೀಯ ವ್ಯವಸ್ಥೆಯಲ್ಲಿ ಆಗುತ್ತಿರುವ ಸೈದ್ಧಾಂತಿಕ ಭಿನ್ನಾಭಿಪ್ರಾಯ ಮತ್ತು ಅದರ ಪರಿಣಾಮವಾಗಿ ನಡೆಯುತ್ತಿರುವ ಅಧಿಕಾರದ ಘರ್ಷಣೆ.

ಶಿಕ್ಷಣ ಎಂಬುದು ಮಾನವೀಯತೆಯ ವಿಕಾಸ ಎಂಬುದನ್ನು ಜಗತ್ತಿನ ಬಹುತೇಕ  ವಿದ್ವಾಂಸರು ಮತ್ತು ಚಿಂತಕರ ಅಭಿಪ್ರಾಯ ಸದಾ ವ್ಯಕ್ತವಾಗುತ್ತಲೇ ಇದೆ. ಈ ಸಾರ್ವತ್ರಿಕ ಸತ್ಯ ಭಾರತಕ್ಕೆ ಸದಾ  ಅರಿವಿನಲ್ಲಿ ಇರಲೇಬೇಕು. ಮಾನವೀಯ ಮೌಲ್ಯಗಳನ್ನು ಒಂದು ಜನಾಂಗದಿಂದ ಮತ್ತೊಂದು ಪೀಳಿಗೆಗೆ ವರ್ಗಾಯಿಸುವ ಬಹುದೊಡ್ಡ ಸಾಧನ ಶಿಕ್ಷಣ. ಆಧುನಿಕ ಕಾಲದಲ್ಲಿ ಇದು ಮತ್ತಷ್ಟು ತೀಕ್ಷ್ಣ ಸ್ವರೂಪ ಪಡೆದಿದೆ.

ಈ ಹಿನ್ನೆಲೆಯಲ್ಲಿ ಇತ್ತೀಚಿನ ಕರ್ನಾಟಕ ಸರ್ಕಾರದ ಪಠ್ಯ ಪುಸ್ತಕ ಪರಿಷ್ಕರಣ ವಿವಾದ ನೋಡಬೇಕಿದೆ.

ಮೊದಲನೆಯದಾಗಿ, ಪಠ್ಯ ಪುಸ್ತಕ ಎಂದರೇನು ? ಎಂಬ ಪ್ರಶ್ನೆ ಕಾಡುತ್ತದೆ. ವಿದ್ಯೆ ಬುದ್ದಿ ತಿಳಿವಳಿಕೆ ನಡವಳಿಕೆ ಮಾಹಿತಿ ಬೆಳವಣಿಗೆ ಅರಿವು ಜ್ಞಾನ ಚಿಂತನೆ ಅಧ್ಯಯನ ಮುಂತಾದ ಅನೇಕ ಅಂಶಗಳ ಮೂಲಕ ವೈಯಕ್ತಿಕ ಮತ್ತು ಸಾಮುದಾಯಿಕ ಪ್ರಜ್ಞೆ ಬೆಳೆಸುವ ಒಂದು ಕ್ರಮಬದ್ಧ ವಿಧಾನ. ಭಾಷೆ ಮತ್ತು ಅಕ್ಷರದ ಉಗಮದಿಂದ ಇದಕ್ಕೆ ಒಂದು ಆಯಾಮ ಕೊಡಲಾಗಿದೆ. ಅದನ್ನು ಅಧಿಕೃತವಾಗಿ ಪಠ್ಯ ಪುಸ್ತಕ ಎಂದು ಕರೆಯಲಾಗುತ್ತದೆ.

ಈ ಪಠ್ಯ ಪುಸ್ತಕಗಳನ್ನು ಯಾರು ಮತ್ತು ಯಾವ ಆಧಾರದ ಮೇಲೆ ಸಿದ್ದಪಡಿಸುತ್ತಾರೆ ?

ಇದು ಒಂದು ಅತ್ಯಂತ ಮಹತ್ವದ ಘಟ್ಟ. ಒಂದು ರಾಜ್ಯ ಅಥವಾ ರಾಷ್ಟ್ರದ ಅಥವಾ ಒಂದು ನಿರ್ಧಿಷ್ಟ ವ್ಯಾಪ್ತಿಯ ನಿರ್ಧಿಷ್ಟ ವಿಷಯದಲ್ಲಿ ಪಠ್ಯಪುಸ್ತಕ ರಚಿಸಲು ಸಾಮಾನ್ಯವಾಗಿ ಆ ಕಾಲಘಟ್ಟದಲ್ಲಿ ಅತ್ಯಂತ ಹೆಚ್ಚು ಕ್ರಿಯಾತ್ಮಕವಾಗಿರುವ ಶ್ರೇಷ್ಠ ಸಾಮಾಜಿಕ ಚಿಂತಕರು, ಶಿಕ್ಷಣ ತಜ್ಞರು, ಭಾಷಾ ಪಂಡಿತರು, ಸಂಶೋಧಕರು, ಇತಿಹಾಸಜ್ಞರು, ಮನಶಾಸ್ತ್ರಜ್ಞರು, ಸಂವಿಧಾನ ಮತ್ತು ರಾಜಕೀಯ ತಜ್ಞರು, ಸಮಾಜ ಶಾಸ್ತ್ರಜ್ಞರು, ವಿಜ್ಞಾನಿಗಳು ಮುಂತಾದ ಅತ್ಯಂತ ಅಧ್ಯಯನಶೀಲರನ್ನು ಆಯ್ಕೆ ಮಾಡಿ ಅವರಿಗೆ ಒಪ್ಪಿಸಲಾಗುತ್ತದೆ. ಅವರು ‌ಸಾಕಷ್ಟು ಸಮಯ ಮತ್ತು ಚರ್ಚೆಗಳನ್ನು ಮಾಡಿ ಒಂದು ಮಾದರಿಯನ್ನು ಸರ್ಕಾರಕ್ಕೆ ಕಳುಹಿಸುತ್ತಾರೆ. ಆಗ ಸರ್ಕಾರಗಳು ಸಾಮಾನ್ಯವಾಗಿ ಅದನ್ನು ಒಪ್ಪಿಕೊಳ್ಳುತ್ತವೆ ಅಥವಾ ತೀರಾ ಅನಿವಾರ್ಯವಾದಲ್ಲಿ ಸಣ್ಣ ಬದಲಾವಣೆಗೆ ಸೂಚಿಸಬಹುದು.

ಈ ವಿಧಾನದಲ್ಲಿಯೇ ಭಾರತದ ಗಣರಾಜ್ಯಗಳ ಒಕ್ಕೂಟದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಪಠ್ಯ ಪುಸ್ತಕಗಳು ರಚಿತವಾಗಿದೆ. ಹಾಗೆಯೇ ಕಾಲ ಕಾಲಕ್ಕೆ ತಕ್ಕಂತೆ ಅದನ್ನು ಪರಿಷ್ಕರಣೆ ಮತ್ತು ಮರು ಪರಿಷ್ಕರಣೆ ಮಾಡುವ ವ್ಯವಸ್ಥೆಯೂ ಇದೆ. ಇದರಲ್ಲಿ ಹೊಸದೇನು ಇಲ್ಲ ಮತ್ತು ಇದರಲ್ಲಿ ಸಾರ್ವಜನಿಕರ ಪಾತ್ರ ಅಥವಾ ಅಭಿಪ್ರಾಯಗಳಿಗೆ ಹೆಚ್ಚಿನ ಅವಕಾಶವೂ ಇರುವುದಿಲ್ಲ.

ಹಾಗಾದರೆ ಈಗ ಇದೊಂದು ದೊಡ್ಡ ವಿವಾದವಾಗಲು ಕಾರಣವೇನು ?

ಹಿಂದೆಯೂ ಪಠ್ಯ ಪುಸ್ತಕ ಪರಿಷ್ಕರಣೆ ಆದಾಗ ಸಣ್ಣ ಪುಟ್ಟ ಅಸಮಾಧಾನಗಳು ಇದ್ದವು. ಆದರೆ ಈಗ ಅದು‌ ಗಂಭೀರ ಸಾರ್ವಜನಿಕ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಅದಕ್ಕೆ ಬಹುಮುಖ್ಯ ಕಾರಣ ಕಳೆದ ಕೆಲವು ವರ್ಷಗಳಲ್ಲಿ ದೇಶದ ಒಟ್ಟು ರಾಜಕೀಯ ವ್ಯವಸ್ಥೆಯಲ್ಲಿ ಆಗುತ್ತಿರುವ ಸೈದ್ಧಾಂತಿಕ ಭಿನ್ನಾಭಿಪ್ರಾಯ ಮತ್ತು ಅದರ ಪರಿಣಾಮವಾಗಿ ನಡೆಯುತ್ತಿರುವ ಅಧಿಕಾರದ ಘರ್ಷಣೆ.

ಮೂಲಭೂತವಾಗಿ ಭಾರತದ ಸಾಮಾಜಿಕ ರಚನೆ ವರ್ಣಾಶ್ರಮ ಪದ್ಧತಿಯಲ್ಲಿ ರಚಿತವಾಗಿದೆ ಮತ್ತು ತದನಂತರ ವಿವಿಧ ಧರ್ಮಗಳು ಈ ದೇಶದೊಳಗೆ ಪ್ರವೇಶಿಸಿದವು ಮತ್ತು ಸ್ವಾತಂತ್ರ್ಯ ನಂತರ ನಮ್ಮ ದೇಶ ಜಾತ್ಯತೀತ ಮತ್ತು ಧರ್ಮ ನಿರಪೇಕ್ಷ ಸಂವಿಧಾನವನ್ನು ಅಂಗೀಕರಿಸಿತು. ಅದರಿಂದಾಗಿ ಅತ್ಯಂತ ವೈವಿಧ್ಯಮಯ ಜೀವನ ವಿಧಾನ ನಮ್ಮದಾಯಿತು. ಹಿಂದೂ ಜೀವನಶೈಲಿಯ ಸುಮಾರು ಶೇಕಡಾ 80% ರಷ್ಟು ಮತ್ತು ಇತರ ಧರ್ಮಗಳ ಶೇಕಡಾ 20%  ಜನ ನಮ್ಮಲ್ಲಿದ್ದಾರೆ.

Image
Textbooks

ಆಧುನಿಕತೆ ಬೆಳೆದಂತೆಲ್ಲಾ ಸಮೂಹ ಸಂಪರ್ಕ ಮಾಧ್ಯಮಗಳ ಕ್ರಾಂತಿಯಿಂದ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಎಂಬ ಅಧಿಕಾರ ಕೇಂದ್ರದ ಮೆಟ್ಟಿಲು ರಾಜಕೀಯ ತಂತ್ರಗಾರಿರಿಗೆ ಒಂದು ಸಾಧನವಾಯಿತು. ಹೆಚ್ಚು ಜನರನ್ನು ಒಲಿಸಿಕೊಳ್ಳಲು ಯಾವ ಮಾನದಂಡಗಳನ್ನು ಕುತಂತ್ರಗಳನ್ನು ಉಪಯೋಗಿಸಿಕೊಳ್ಳಬೇಕು ಎಂಬುದು ನಿಧಾನವಾಗಿ ಅರಿವಾಗತೊಡಗಿತ್ತು.

ಮೊದ ಮೊದಲು ಊಟ, ಬಟ್ಟೆ, ವಸತಿ, ಶಿಕ್ಷಣ, ಉದ್ಯೋಗ ಮುಂತಾದ ವಿಷಯಗಳು ಕ್ರಮೇಣ ಅಭಿವೃದ್ಧಿಯ ರೂಪಾಂತರವಾಗಿ ಮುಂದೆ ಜಾತಿ ಧರ್ಮಗಳು ಚುನಾವಣೆಯ ಮುಖ್ಯ ವಿಷಯಗಳಾಗಿ ಹೊರ ಹೊರಹೊಮ್ಮಿದವು. ಅದು ‌ಧಾರ್ಮಿಕ ಆಧಾರದ ಹಿಂದುತ್ವ ಮತ್ತು ಇಸ್ಲಾಂ ಹಾಗು ಸೈದ್ಧಾಂತಿಕ ಆಧಾರದ ಎಡಪಂಥೀಯ ಮತ್ತು ಬಲಪಂಥೀಯ ಚಿಂತನೆಗಳ ಘರ್ಷಣೆಗೆ ಕಾರಣವಾಯಿತು. ಅದರ ಮುಂದುವರಿದ ಭಾಗವೇ ಇಂದಿನ ಪಠ್ಯ ಪುಸ್ತಕ ವಿವಾದ.

ಈಗ ಕೇಂದ್ರ ಮತ್ತು ರಾಜ್ಯದಲ್ಲಿ ಸಂಪೂರ್ಣ ಬಲಪಂಥೀಯ ಚಿಂತನೆಯ ಸರ್ಕಾರಗಳೇ ಆಡಳಿತ ನಡೆಸುತ್ತಿವೆ. ಅವರ ‌ದೃಷ್ಟಿಯಲ್ಲಿ‌ ಇಲ್ಲಿಯವರೆಗಿನ ಪಠ್ಯಗಳು ಸಂಪೂರ್ಣ ಎಡಪಂಥೀಯ ದೃಷ್ಟಿಕೋನ ಹೊಂದಿವೆ. ಅವು ತಮ್ಮ ಚಿಂತನಗೆ ಅಪಾಯಕಾರಿ ಎಂದು ಪಠ್ಯ ಪುಸ್ತಕ ಪರಿಷ್ಕರಣೆಯ ನೆಪದಲ್ಲಿ ಬಲಪಂಥೀಯ ಚಿಂತನೆಯ ವಿಚಾರಧಾರೆಗಳನ್ನು ಪಠ್ಯದಲ್ಲಿ ಅಳವಡಿಸಲು ಪ್ರಯತ್ನಿಸುತ್ತಿದೆ. ಅದಕ್ಕೆ ವಿರುದ್ಧ ಪ್ರತಿಭಟನೆ ಎಡಪಂಥೀಯ ಚಿಂತಕರಿಂದ ನಡೆಯುತ್ತಿದೆ.

ಎರಡನೆಯದಾಗಿ, ಈಗ ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡಲು ರಚಿತವಾಗಿರುವ ತಂಡವನ್ನು ನೋಡಿದಾಗ ಒಂದು ರೀತಿಯ ಉದ್ದೇಶ ಪೂರ್ವಕ ಬದಲಾವಣೆ ಮಾಡುವ ಪ್ರಯತ್ನ ಮತ್ತು ಅದಕ್ಕಾಗಿ ‌ಸ್ವಲ್ಪ ಮಟ್ಟಿನ ಸೇಡಿನ ಮನೋಭಾವದ ಹಾಗು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಬೆಳೆದ, ಸಮಗ್ರ ಚಿಂತನೆಯ ಕೊರತೆಯ ಸಂಕುಚಿತ ಮನೋಭಾವದ ಹಸಿ ಹಸಿ ಚಿಂತನೆಯ ವ್ಯಕ್ತಿತ್ವದವರಿಗೆ ಇದನ್ನು ಒಪ್ಪಿಸಲಾಗಿದೆ ಎಂಬ ಅಭಿಪ್ರಾಯ ಮೇಲ್ನೋಟಕ್ಕೆ ವ್ಯಕ್ತವಾಗುತ್ತಿದೆ. ಒಬ್ಬರ ಬುದ್ಧಿವಂತಿಕೆ ಅಳೆಯುವ ನಿರ್ಧಿಷ್ಟ ಮಾನದಂಡಗಳೇನು ಇಲ್ಲ ಎಂಬುದು ನಿಜ.

ಸರ್ಕಾರ ಎಡವಿದೆ ಎಂಬ ಅನುಮಾನ ಜನರಲ್ಲಿದೆ

ಆದರೆ ಒಂದು ಇಡೀ ಜನಾಂಗದ ಯೋಚನಾ ಶಕ್ತಿಯನ್ನು ಬೆಳೆಸುವ ಮತ್ತು ಆ ಮೂಲಕ ರಾಜ್ಯ ಮತ್ತು ದೇಶವನ್ನು ಅಭಿವೃದ್ಧಿ ಪಥದಲ್ಲಿ ಹೆಚ್ಚು ನಾಗರಿಕ ಗೊಳಿಸುವ ಜವಾಬ್ದಾರಿ ನಿರ್ವಹಿಸಬೇಕಾದ ವ್ಯಕ್ತಿಗಳು ಖಂಡಿತ ಸಾಕಷ್ಟು ಅನುಭವಿಗಳು ಪ್ರಬುದ್ಧರು, ವಿಶಾಲ ಮನೋಭಾವದವರು, ಎಲ್ಲರನ್ನೂ ಒಳಗೊಳ್ಳುವ ಒಳ್ಳೆಯ ಮನಸ್ಸಿನವರು ಆಗಿರಬೇಕು ಎಂಬುದು ವಾಸ್ತವ. ಆ ವಿಷಯದಲ್ಲಿ ಈಗಿನ ಸರ್ಕಾರ ಸ್ವಲ್ಪ ಮಟ್ಟಿಗೆ ಎಡವಿದೆ ಎಂಬ ಅನುಮಾನ ಸಾಮಾನ್ಯ ಜನರಿಗೆ ಇದೆ. ಎರಡೂ ರೀತಿಯ ಅತಿರೇಕಿಗಳನ್ನು ಹೊರತುಪಡಿಸಿ ಸಂಯಮದಿಂದ ಮತ್ತು ಸಮನ್ವಯದಿಂದ ಈ ಕಾರ್ಯ ನಿರ್ವಹಿಸಬೇಕಿದೆ.

ಇದನ್ನು ಓದಿದ್ದೀರಾ? ಎಂಟನೇ ತರಗತಿಗೆ ಮತ್ತೆ ಬಂದ ಸಿಂಧೂ ಸರಸ್ವತಿ

ಇದನ್ನು ಇನ್ನಷ್ಟು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಎಡಪಂಥೀಯ ಮತ್ತು ಬಲಪಂಥೀಯ ಚಿಂತನೆಗಳ ಅಧ್ಯಯನ ಮಾಡಬೇಕು. ಯಾವುದು ಜೀವಪರ ನಿಲುವುಗಳನ್ನು ಹೊಂದಿದೆ ಯಾವುದು ಜೀವ ವಿರೋಧಿ ನಿಲುವುಗಳನ್ನು ಹೊಂದಿದೆ ಎಂಬುದು ಸ್ಪಷ್ಟವಾದ ನಂತರ ನಮ್ಮ ಅಭಿಪ್ರಾಯ ರೂಪಗೊಳ್ಳುತ್ತದೆ. ಭಾರತದ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಯಾವ‌ ಚಿಂತನೆಗಳು ಹೆಚ್ಚು ‌ಯೋಗ್ಯವಾದುದು ಎಂಬುದನ್ನು ಸರಳವಾಗಿ ಅರ್ಥಮಾಡಿಕೊಳ್ಳಬೇಕು.

ನಿಮಗೆ ಏನು ಅನ್ನಿಸ್ತು?
0 ವೋಟ್