ಸ್ತ್ರೀದ್ವೇಷಿ ಪೋಸ್ಟ್‌ಗಳಿಗೆ ವಿರೋಧ; ಫೇಸ್‌ಬುಕ್‌, ಟ್ವಿಟರ್‌ ಖಾತೆ ಲಾಕ್‌ ಮಾಡಿದ ರೋಹಿತ್‌ ಚಕ್ರತೀರ್ಥ

Rohith chakrathirth

ರೋಹಿತ್‌ ಚಕ್ರತೀರ್ಥ ಅವರ ಹಳೆಯ ಪೋಸ್ಟ್‌ ಗಳನ್ನು ಹುಡುಕಿ ತೆಗೆದ ನೆಟ್ಟಿಗರು ಅದರ ಸ್ಕ್ರೀನ್‌ ಶಾಟ್‌ ಗಳನ್ನು ಫೇಸ್‌ಬುಕ್‌, ವಾಟ್ಸಪ್‌ಗಳಲ್ಲಿ ಹಂಚಿ ವೈರಲ್‌ ಮಾಡಿದ್ದರು. ಸ್ತ್ರೀದ್ವೇಷ, ಅತ್ಯಾಚಾರ ಕೊಲೆಯ ಸಮರ್ಥನೆಯ ಹಲವು ಟ್ವೀಟ್‌ಗಳನ್ನು ಹೊರತೆಗೆದು ಆಕ್ರೋಶ ಹೊರ ಹಾಕಿದ್ದರು. ಇದರಿಂದ ಮುಖಭಂಗಕ್ಕೊಳಗಾದ ಚಕ್ರತೀರ್ಥ ಫೇಸ್‌ಬುಕ್‌ ಟ್ವಿಟರ್‌ ಖಾತೆ ಲಾಕ್‌ ಮಾಡಿದ್ದಾರೆ.

ಪಠ್ಯಪುಸ್ತಕ ಪುನರ್‌ ಪರಿಷ್ಕರಣ ಸಮಿತಿಯ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಪಠ್ಯಗಳಲ್ಲಿ ಲೇಖಕಿಯರನ್ನು ಹೊರಗಿಡುವ ಮೂಲಕ ತನ್ನ ಸ್ತ್ರೀ ದ್ವೇಷ ಹೊರಹಾಕಿದ್ದಾರೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣುಮಕ್ಕಳನ್ನು ಅಸಹ್ಯವಾಗಿ ಗೇಲಿ ಮಾಡಿರುವ ಅವರ ಹಳೆಯ ಪೋಸ್ಟ್‌ ಮತ್ತು ಕಮೆಂಟುಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ.

Eedina App

2017ಸೆಪ್ಟೆಂಬರ್‌ 5ರಂದು ಹಿಂದುತ್ವವಾದಿಗಳಿಂದ ಪತ್ರಕರ್ತೆ ಗೌರಿ ಲಂಕೇಶ್‌ ಅವರ ಕೊಲೆಯಾಗುತ್ತದೆ. ಒಂದೇ ವಾರದಲ್ಲಿ ಅಂದರೆ, ಸೆ. 12ರಂದು ಬೆಂಗಳೂರಿನಲ್ಲಿ ನಡೆದ ʼನಾನೂ ಗೌರಿʼ ಸಮಾವೇಶಕ್ಕೆ ರಾಜ್ಯ ಮಾತ್ರವಲ್ಲ ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನ ಸೇರಿದ್ದರು. ಆಗ “ಇಷ್ಟು ದಿನ ಆಕೆ ಸಿಕ್ಕಸಿಕ್ಕ ಹೆಣಗಳನ್ನು ಎದುರಿಗಿಟ್ಟುಕೊಂಡು ಗಂಜಿ ಸಂಪಾದಿಸುತ್ತಿದ್ದಳು. ಇಂದು ಇವರು ಆಕೆಯದ್ದೇ ಶವ ಎದುರಿಗಿಟ್ಟುಕೊಂಡು ಗಂಜಿ ಸಂಪಾದಿಸುತ್ತಿದ್ದಾರೆ” ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು.

tweet

ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧಿಸಿದಂತೆ ವಿವಾದ ಶುರುವಾದ ನಂತರವೂ ತಮ್ಮ ಫೇಸ್‌ಬುಕ್‌ನಲ್ಲಿ ಬರಗೂರು, ದೇವನೂರು ಸೇರಿದಂತೆ ಪಠ್ಯಪರಿಷ್ಕರಣೆ ವಿರುದ್ಧ ಧ್ವನಿ ಎತ್ತಿದ ಪ್ರಗತಿಪರರನ್ನು ಗೇಲಿ ಮಾಡುವ ಪೋಸ್ಟ್‌ ಹಾಕುತ್ತಾ ಪಠ್ಯಪರಿಷ್ಕರಣೆಯಲ್ಲಿ ನಡೆದಿರುವ ದೋಷವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದರು.

AV Eye Hospital ad

ರೋಹಿತ್‌ ಚಕ್ರತೀರ್ಥ ಅವರ ಹಳೆಯ ಪೋಸ್ಟ್‌ ಗಳನ್ನು ಹುಡುಕಿ ತೆಗೆದ ನೆಟ್ಟಿಗರು ಅದರ ಸ್ಕ್ರೀನ್‌ಶಾಟ್‌ಗಳನ್ನು ಫೇಸ್‌ಬುಕ್‌, ವಾಟ್ಸಪ್‌ಗಳಲ್ಲಿ ಹಂಚಿ ವೈರಲ್‌ ಮಾಡಿದ್ದರು. ಸ್ತ್ರೀದ್ವೇಷ, ಅತ್ಯಾಚಾರ- ಕೊಲೆಯ ಸಮರ್ಥನೆಯ ಹಲವು ಟ್ವೀಟ್‌ಗಳನ್ನು ಹೊರತೆಗೆದು ಆಕ್ರೋಶ ಹೊರ ಹಾಕಿದ್ದರು. ಇದರಿಂದ ಮುಖಭಂಗಕ್ಕೊಳಗಾದ ಚಕ್ರತೀರ್ಥ ಗುರುವಾರ ಫೇಸ್‌ಬುಕ್‌ ಮತ್ತು ಟ್ವಟರ್‌ ಖಾತೆಗಳನ್ನು ಲಾಕ್‌ ಮಾಡಿದ್ದಾರೆ.

ನೆಟ್ಟಿಗರು ಹುಡುಕಿ ತೆಗೆದ ಟ್ವಿಟರ್‌ ಪೋಸ್ಟ್ ಗಳಲ್ಲಿ ಹೆಣ್ಣುಮಕ್ಕಳನ್ನು ಅಶ್ಲೀಲವಾಗಿ ಗೇಲಿ ಮಾಡಿರುವುದು ಕಾಣುತ್ತದೆ. “ಪಕ್ಕದ ಕೋಣೆಯಲ್ಲಿರುವ ಹೆಂಗಸು ಹೆಚ್ಚು ಪೋರ್ನ್‌ ಸಿನಿಮಾಗಳನ್ನು ನೋಡಲ್ಲ ಅನ್ಸುತ್ತೆ. ಸಿಂಕ್‌ ರಿಪೇರಿಗೆಂದು ಆಕೆ ಕರೆದಿದ್ದರು. 20 ನಿಮಿಷಗಳಿಂದ ಸಿಂಕ್‌ ರಿಪೇರಿ ಮಾಡುತ್ತಲೇ ಇದ್ದೇವೆ, ನಮ್ಮ ನಡುವೆ ಏನೂ ನಡೆದೇ ಇಲ್ಲ” ಇದು ಚಕ್ರತೀರ್ಥ ಅವರ ಒಂದು ಟ್ವೀಟ್.‌  ಅಂದರೆ, ಮನೆಯಲ್ಲಿ ಕೆಟ್ಟಿರುವ ವಸ್ತುಗಳ ರಿಪೇರಿ ಕೆಲಸಕ್ಕೆ ಬಂದವರ ಜೊತೆ ಗೃಹಿಣಿಯರು ಸೆಕ್ಸ್‌ ಮಾಡುತ್ತಾರೆ ಎಂದು ಅರ್ಥವೇ? ಈ ಟ್ವೀಟನ್ನು ಹಲವರು ಹಂಚಿಕೊಂಡು ಪಠ್ಯಪುಸ್ತಕ ಪರಿಷ್ಕರಣೆ ಮಾಡಿರುವ ವ್ಯಕ್ತಿಯ ಮನಸ್ಥಿತಿಯನ್ನು ಬಹಿರಂಗಪಡಿಸಿದ್ದಾರೆ.

“ಹೆಣ್ಣುಮಕ್ಕಳಿಗೆ ತಮ್ಮ ಗಂಡನ ಕೋಟಿನ ಗುಂಡಿಗೆ ಸಿಕ್ಕಿಕೊಂಡಿರುವ ತಲೆಗೂದಲು 20 ಮೀಟರ್‌ ದೂರದಿಂದಲೇ ಕಾಣುತ್ತದೆ. ಆದರೆ ಕಾರು ಪಾರ್ಕ್‌ ಮಾಡುವಾಗ 2 ಮೀಟರ್ ದೂರದಲ್ಲಿರುವ ಕಂಬ ಕಾಣಲ್ಲ” ಇದು ಚಕ್ರತೀರ್ಥ ಅವರ ಇನ್ನೊಂದು ಟ್ವೀಟ್.

Deepika

“ಮದುವೆಯಿಂದಾಚೆಗೆ ಸೆಕ್ಸ್‌ ನನ್ನ ಆಯ್ಕೆ ಎಂಬ ದೀಪಿಕಾ ಪಡುಕೋಣೆಯವರ ಹೇಳಿಕೆಯನ್ನು ಉದ್ದೇಶಿಸಿ, ಮುಖೇಶ್‌ ಸಿಂಗ್‌(ದೆಹಲಿ ಅತ್ಯಾಚಾರಿ) ಕೂಡಾ ಅತ್ಯಾಚಾರ ಮತ್ತು ಕೊಲೆ ಮಾಡುವುದು ನನ್ನ ಆಯ್ಕೆ ಎಂದು ಹೇಳಬಹುದು” ಎಂದು ಗೇಲಿ ಮಾಡಿದ್ದರು. ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ/ ಕೊಲೆಯನ್ನು ಸಮರ್ಥಿಸುವ ಹೇಳಿಕೆ ಕೊಡುವ ವ್ಯಕ್ತಿ ಸಿದ್ಧಪಡಿಸಿದ ಪಠ್ಯವನ್ನು ನಮ್ಮ ಮಕ್ಕಳು ಓದಬೇಕೇ ಎಂದು ಅನೇಕರು ಪ್ರಶ್ನೆ ಮಾಡಿದ್ದರು.

ಸಮಾಜ ಸುಧಾರಕಿಯರು ಅಪಥ್ಯ ಯಾಕೆಂದರೆ…

ಸ್ತ್ರೀಯರ ಶಿಕ್ಷಣಕ್ಕಾಗಿ ಹೋರಾಟ ಮಾಡಿದ, ಬಾಲವಿಧವೆಯರಿಗೆ ವಿವಾಹದ ಹಕ್ಕಿನ ಬಗ್ಗೆ ಮಾತನಾಡಿದ ಸಾವಿತ್ರಿ ಬಾಯಿ ಪುಲೆ, ಅವರ ಜೊತೆ ʼಸತ್ಯ ಶೋಧಕ ಸಮಾಜʼ ದ ಮೂಲಕ ಬಾಲ ವಿಧವೆಯರ ರಕ್ಷಣೆ, ಪುನರ್‌ ವಿವಾಹಕ್ಕಾಗಿ ದುಡಿದ ತಾರಾಬಾಯಿ ಶಿಂಧೆ,  ʼಮುಕ್ತಿ ಮಿಷನ್‌ʼ ಮೂಲಕ ವಿಧವೆಯರು, ಮದ್ಯವ್ಯಸನಿಗಳು ಮತ್ತು ಅನಾಥರಿಗಾಗಿ ದುಡಿದ ಪಂಡಿತ್‌ ರಮಾಬಾಯಿ ಅವರ ವಿಷಯವನ್ನು ಪಠ್ಯದಿಂದ ಕೈಬಿಡಲಾಗಿದೆ. ಯಾಕೆಂದರೆ, ವಿಧವಾ ವಿವಾಹ, ಬಾಲ್ಯವಿವಾಹ, ಸ್ತ್ರೀಯರಿಗೆ ಶಿಕ್ಷಣ ನೀಡುವುದು ಮೂಲಭೂತವಾದಿಗಳಿಗೆ ಯಾವತ್ತಿಗೂ ಅಪಥ್ಯವೇ. ಹಾಗಾಗಿ ಸಮಾಜ ಸುಧಾರಕಿಯರನ್ನು ಪಠ್ಯಗಳಿಂದ ಮರೆ ಮಾಡಲಾಗಿದೆ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ವೀರ ವನಿತೆಯರಾದ ಅಬ್ಬಕ್ಕದೇವಿ, ಬಳ್ಳಾರಿ ಸಿದ್ಧಮ್ಮ, ಯಶೋಧರಮ್ಮ ದಾಸಪ್ಪ, ಉಮಾಬಾಯಿ ಕುಂದಾಪುರ ಇವರ ಆದರ್ಶವನ್ನು ಓದುವುದರಿಂದಲೂ ಮಕ್ಕಳನ್ನು ವಂಚಿಸಿದ್ದಾರೆ. ನಾಡಿದ ಗಟ್ಟಿ ಮಹಿಳಾ ಧ್ವನಿಗಳಾದ ಡಾ ಎಚ್ಎಸ್‌ ಅನುಪಮಾ,  ಕೆ ನೀಲಾ, ಬಿ ಟಿ ಲಲಿತಾನಾಯಕ್‌, ಸಾರಾ ಅಬೂಬಕ್ಕರ್‌ ಅವರ ಪಠ್ಯಗಳನ್ನು ತೆಗೆದಿದ್ದಾರೆ. ಹೀಗೆ ತೆಗೆದ ಸ್ತ್ರೀಯರ ಪಠ್ಯಗಳ ಜಾಗಕ್ಕೆ ಸೇರಿಸಿರುವ ಪಠ್ಯಗಳೆಲ್ಲವೂ ಬ್ರಾಹ್ಮಣರವು ಅದರಲ್ಲೂ ಪುರುಷರವು. ಈ ಮಣ್ಣಿನ ಸ್ತ್ರೀಯರ ಸಾಧನೆ, ಆಲೋಚನೆ ಎರಡನ್ನೂ ಸಂಪೂರ್ಣವಾಗಿ ಮಕ್ಕಳ ಮನೋಭೂಮಿಕೆಯಿಂದ ಹೊರಗಿಡುವ ವ್ಯವಸ್ಥಿತ ಹುನ್ನಾರ ನಡೆದಿದೆ ಎಂಬುದು ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನು ಓದಿದ್ದೀರಾ? ಸಾವಿತ್ರಿ ಬಾಯಿ ಪುಲೆ ಸೇರಿದಂತೆ ಮೂವರು ಸಮಾಜ ಸುಧಾರಕಿಯರನ್ನು ಪಠ್ಯದಿಂದ ಕಿತ್ತೆಸೆದ ರೋಹಿತ್‌ ಚಕ್ರತೀರ್ಥ ಸಮಿತಿ

ಲಿಂಗ ಸಮಾನತೆ, ಪ್ರಾದೇಶಿಕ ಪ್ರಾತಿನಿಧ್ಯವನ್ನು ಪಠ್ಯಗಳಲ್ಲಿ ತುರುಕಬಾರದು ಎಂಬ ಚಕ್ರತೀರ್ಥರ ಹೇಳಿಕೆ ಸ್ತ್ರೀಯರ ಪಾಲಿಗೆ ಅಪಾಯಕಾರಿ. ಇದರ ಜೊತೆಗೆ ಸಾರ್ವಜನಿಕ ವೇದಿಕೆಯಲ್ಲಿ ಸ್ತ್ರೀವಿರೋಧಿ ಹೇಳಿಕೆ ದಾಖಲಿಸುವುದು ಮತ್ತು ಅಂತಹ ಮನಸ್ಥಿತಿಯ ವ್ಯಕ್ತಿಗಳು ನೀತಿ ನಿರೂಪಣೆಯ ಜಾಗಗಳಲ್ಲಿ ಇರುವುದು ಅಸಂವಿಧಾನಿಕ ಎಂಬ ಟೀಕೆಗಳು ವ್ಯಕ್ತವಾದ ಬೆನ್ನಲ್ಲೆ ಚಕ್ರತೀರ್ಥ ತಮ್ಮ ಫೇಸ್‌ ಬುಕ್‌ ಮತ್ತು ಟ್ವಿಟರ್‌ ಖಾತೆಯನ್ನು ಲಾಕ್‌ ಮಾಡಿ ಮತ್ತೆ ಟ್ರೋಲ್‌ಗೆ ಒಳಗಾಗಿದ್ದಾರೆ.

ನಿಮಗೆ ಏನು ಅನ್ನಿಸ್ತು?
5 ವೋಟ್
eedina app