ಜಾತ್ಯತೀತವಾಗಿ ವಿದ್ಯಾರ್ಥಿಗಳನ್ನು ರೂಪಿಸುವುದು ಬಹಳ ಮುಖ್ಯ: ಡಾ. ಇಸ್ಮಾಯಿಲ್‌ ಎನ್

Govt school childrens

ಮಕ್ಕಳಿಗೆ ಬೇಕಾಗಿರುವುದು ನಮ್ಮ ಹಿರಿಯರು, ರಾಜ್ಯ, ದೇಶ, ಭಾಷೆ, ಸಂಸ್ಕೃತಿ ಇವುಗಳ ಅರಿವನ್ನು ಮೂಡಿಸುವ ಮಾರ್ಗದರ್ಶಿ ಶಿಕ್ಷಣ. ಬೆಳೆಯುತ್ತಾ ಮಕ್ಕಳು ಉತ್ತಮ ನಡವಳಿಕೆಗಳನ್ನು ಕಲಿಯುತ್ತಾರೆ, ಆಟ ಆಡುತ್ತಾ ಪಾಠಗಳನ್ನು ಓದುತ್ತಾರೆ. ಎಳೆಯ ಮನಸ್ಸುಗಳು ಪ್ರಪಂಚಕ್ಕೆ ತೆರೆದುಕೊಳ್ಳುತ್ತವೆ. ಬೌದ್ಧಿಕತೆಯೊಂದಿಗೆ, ಭೌತಿಕತೆಯೂ ಬೆಳೆಯುತ್ತದೆ.

ಎಳೆಯ ಮಕ್ಕಳಿಗೆ ಎಂತಹ ಓದು ಬೇಕು? ಮಕ್ಕಳ ಬೌದ್ಧಿಕತೆ ಅರಳುವುದು ಹೇಗೆ? ಅವರನ್ನು ಸಮಾಜಕ್ಕೆ ಅರ್ಪಿಸುವುದು ಹೇಗೆ? ಇತ್ಯಾದಿ ವಿಚಾರಗಳ ಕುರಿತಂತೆ ಇಂದಿನ ನಾಮಾಂಕಿತ ಶಿಕ್ಷಣ ತಜ್ಞರು, ಜನಪ್ರತಿನಿಧಿಗಳು, ಮುಖ್ಯವಾಗಿ ಶಿಕ್ಷಣ ಸಚಿವರು ವೈಜ್ಞಾನಿಕ, ವೈಚಾರಿಕವಾಗಿ ಯೋಚಿಸುತ್ತಿದ್ದಾರೆಯೇ? ದೇಶ, ರಾಜ್ಯಗಳನ್ನು ಆಳುವ ರಾಜಕೀಯ ಪಕ್ಷಗಳ ಮುಖವಾಣಿಯಾಗಿ ಪಠ್ಯಕ್ರಮವನ್ನು ಅಳವಡಿಸುವುದು ಎಷ್ಟು ಸರಿ? ನಾಳಿನ ಪ್ರಜೆಗಳಾಗುವ ಇಂದಿನ ಮಕ್ಕಳಿಗೆ ನಾವು ಎಂತಹ ಮೌಲ್ಯಗಳನ್ನು ಬೋಧಿಸಬೇಕಾಗಿದೆ? ಒಮ್ಮೆ ಎಲ್ಲರೂ ಕೂತು ಯೋಚಿಸಬೇಕು.

ನಾನು ಹೇಳಲು ಹೊರಟಿರುವುದು ಪಠ್ಯ ಪುಸ್ತಕಗಳ ಕುರಿತಾದ ಇಂದಿನ ಚರ್ಚೆಗಳ ಬಗೆಗೆ. ಮಕ್ಕಳಿಗೆ ಬೇಕಾಗಿರುವುದು ತಾಯಿ, ತಂದೆ, ಹಿರಿಯರು, ಕಿರಿಯರು, ರಾಜ್ಯ,ದೇಶ, ಭಾಷೆ, ಸಂಸ್ಕೃತಿ ಇವುಗಳ ಅರಿವನ್ನು ಮೂಡಿಸುವ ಮಾರ್ಗದರ್ಶಿ ಶಿಕ್ಷಣ. ಬೆಳೆಯುತ್ತಾ ಮಕ್ಕಳು ಉತ್ತಮ ನಡವಳಿಕೆಗಳನ್ನು ಕಲಿಯುತ್ತಾರೆ, ಆಟ ಆಡುತ್ತಾ ಪಾಠಗಳನ್ನು ಓದುತ್ತಾರೆ. ಎಳೆಯ ಮನಸ್ಸುಗಳು ಹೊರಗಿನ ಪ್ರಪಂಚಕ್ಕೆ ತೆರೆದುಕೊಳ್ಳುತ್ತವೆ. ಬೌದ್ಧಿಕತೆಯೊಂದಿಗೆ, ಭೌತಿಕತೆಯೂ ಬೆಳೆಯುತ್ತದೆ. ಇವುಗಳನ್ನು ಖಾತರಿ ಪಡಿಸಿಕೊಂಡು ಮಕ್ಕಳ ಪಠ್ಯಕ್ರಮವನ್ನು ನಿಗದಿಪಡಿಸಬೇಕು.

ಎಡಪಂಥ, ಬಲಪಂಥ, ನಡುಪಂಥ ಮುಂತಾದ ವಿಚಾರ ಧಾರೆಗಳು ಪಠ್ಯ ಕ್ರಮದಲ್ಲಿ ಇರಬಾರದು. ಕೋಮುವಾದಿ ಸಂಘಟನೆಗಳ ನಾಯಕರ ಸಿದ್ಧಾಂತಗಳನ್ನು ಮಕ್ಕಳ ಮೇಲೆ ಹೇರುವುದು ಅಕ್ಷಮ್ಯ. ದೇಶದ ಬಗೆಗೆ ರಾಷ್ಟ್ರ ಪ್ರೇಮದ ಬಗೆಗೆ ಪರಿಚಯ ಮಾಡುವಾಗ ಗಾಂಧಿ, ಮೌಲಾನ ಅಜಾ಼ದ್, ಅಂಬೇಡ್ಕರ್, ಸಾವಿತ್ರಿ ಬಾಯಿ ಪುಲೆ, ಫಾತಿಮಾಶೇಖ್, ವಿವೇಕಾನಂದ, ಬಸವಣ್ಣ, ಕುವೆಂಪು, ಶಿವರಾಮ ಕಾರಂತ ಮೊದಲಾದ ಮಹನೀಯರನ್ನು ಮರೆಯಬಾರದು. ದೇಶದ ಪ್ರಸಿದ್ಧ ಆಟಗಾರರು, ವಿಜ್ಞಾನಿಗಳು, ಲೇಖಕರು, ಸಂಗೀತಗಾರರು, ಉದ್ಯಮಿಗಳು, ವೈದ್ಯರು ಇವರುಗಳ ಕುರಿತಂತೆ ನಮ್ಮ ಮಕ್ಕಳು‌ ಓದಬೇಕು. ಪ್ರತಿಗಾಮಿ ಚಿಂತಕರನ್ನು ಅವರ ಸಂಕುಚಿತ ದೃಷ್ಟಿಕೋನದ ಸಿದ್ಧಾಂತಗಳನ್ನು ನಮ್ಮ ಮಕ್ಕಳ ತಲೆಗೆ ಹೇರುವುದು ಸಾಧುವಲ್ಲ.

ಭಾರತದ ಬಹುತ್ವ ಪರಂಪರೆಯನ್ನು ಬಿಂಬಿಸುವ ಕಲೆ, ಸಂಸ್ಕೃತಿ, ಆಚಾರ, ವಿಚಾರಗಳನ್ನು ನಮ್ಮ ಮಕ್ಕಳಿಗೆ ತಿಳಿಹೇಳಬೇಕು. ಪರಸ್ಪರ ಹೊಂದಾಣಿಕೆ, ಸಮನ್ವಯ ಭಾವ ನಮ್ಮ ವಿದ್ಯಾರ್ಥಿಗಳಲ್ಲಿ ಬೆಳೆಸಬೇಕಾಗಿರುವುದು ಕಾಲದ ಅವಶ್ಯಕತೆ. ಇಲ್ಲಿ ಧರ್ಮ, ದೇವರು ಮುಖ್ಯವಾಗಬಾರದು. ಗುಣಾತ್ಮಕ ಶಿಕ್ಷಣದ ಮೂಲಕ‌ ಮಕ್ಕಳಲ್ಲಿ ನೈತಿಕ ಮೌಲ್ಯಗಳ ಅನಾವರಣ ಆಗಬೇಕು. ವಿದ್ಯಾರ್ಥಿಗಳು ಪರಸ್ಪರ ಸೌಹಾರ್ದತೆಯಿಂದ, ಪ್ರೀತಿಯಿಂದ, ಸಹಕಾರದಿಂದ ಬಾಳುವಂತಹ ಮನೋಭಾವ ತರಗತಿಯ ಪಠ್ಯದಿಂದ ದೊರಕಬೇಕೇ ಹೊರತು ಅವರನ್ನು ಜಾತಿ,ಧರ್ಮಗಳ ಹೆಸರಿನಲ್ಲಿ ಒಡೆಯುವ ಗೋಡೆಯನ್ನು ಕಟ್ಟುವಂತೆ ಆಗಬಾರದು. ನಮ್ಮ ದೇಶದ ಸಂಸ್ಕೃತಿ ಮತ್ತು ನಾಗರಿಕತೆಗಳ ಸ್ಪಷ್ಟವಾದ ತಿಳಿವಳಿಕೆ ಶಾಲಾ ಪಠ್ಯಕ್ರಮದಿಂದ ದೊರೆತಾಗ ಮಾತ್ರ ಶಿಕ್ಷಣಕ್ಕೆ ಬೆಲೆ ಸಿಗುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ನಮ್ಮ ಸಂವಿಧಾನ‌ ಅದರ ಮೌಲ್ಯ ವಿದ್ಯಾರ್ಥಿಗಳಿಗೆ ಬದುಕುವ ಅವಕಾಶಗಳನ್ನು ಮಾಡಿಕೊಡುತ್ತದೆ ಎಂಬ‌ ದೃಢವಾದ ನಂಬಿಕೆ ವಿದ್ಯಾರ್ಥಿಗಳಲ್ಲಿ ಮೂಡುವಂತಹ ಶಿಕ್ಷಣ ಇಂದು ಬಹಳ ಅಗತ್ಯವಾಗಿದೆ.

ನಮ್ಮ ಪರಿಸರದ ಬಗೆಗಿನ ಜ್ಞಾನ ಮಕ್ಕಳಿಗೆ ಬೇಕು. ಪರಿಸರ ವಿಜ್ಞಾನ ಮಕ್ಕಳ ಬದುಕಿನ ಅತ್ಯಂತ ಪ್ರಮುಖವಾದ ವಿಚಾರವಾಗಿರುತ್ತದೆ. ನೆಲ, ಜಲ, ಬೆಟ್ಟ, ಗುಡ್ಡ, ಕಾಡು, ಪ್ರಾಣಿ, ಪಕ್ಷಿಗಳು ಇವುಗಳ ಕುರಿತಂತೆ ಪಠ್ಯಪುಸ್ತಕಗಳಲ್ಲಿ ಮಾಹಿತಿಗಳಿರಬೇಕು. ಪರಿಸರ ಜ್ಞಾನವಿಲ್ಲದ ವಿದ್ಯಾರ್ಥಿಗಳು ದೇಶವನ್ನು ಕಟ್ಟಲಾರರು. ಈ ನಿಟ್ಟಿನಲ್ಲಿ ಇಲಾಖೆ ಆರೋಗ್ಯಪೂರ್ಣವಾಗಿ ಯೋಚಿಸಬೇಕಾದ ಅಗತ್ಯ ಇದೆ. ವೈಚಾರಿಕ, ವೈಜ್ಞಾನಿಕ ದೃಷ್ಟಿ ಕೋನದಿಂದ ಮಕ್ಕಳ ಭವಿಷ್ಯತ್ತನ್ನು ರೂಪಿಸುವಂತಹ ಶಿಕ್ಷಣ ಇಂದಿನ ಅಗತ್ಯ. ಪಕ್ಷಾತೀತವಾಗಿ, ಜಾತ್ಯತೀತವಾಗಿ ವಿದ್ಯಾರ್ಥಿಗಳನ್ನು ಕಟ್ಟಬೇಕು. ಕೋಮುವಾದಿ ಯೋಚನೆಗಳು ಹೆಚ್ಚು ಕಾಲ ಉಳಿಯದು. ಪಠ್ಯಕ್ರಮವು ವಸ್ತುನಿಷ್ಠವಾಗಿರಬೇಕೇ ಹೊರತು ವ್ಯಕ್ತಿನಿಷ್ಠವಾಗಿರಬಾರದು.

ಇದನ್ನು ಓದಿದ್ದೀರಾ?: ಪಠ್ಯಪರಿಷ್ಕರಣೆ ಸಾಂಸ್ಕೃತಿಕ ರಾಜಕಾರಣದ ಒಂದು ಭಾಗ: ಎಂ ಚಂದ್ರಪೂಜಾರಿ

ಪ್ರಸ್ತುತ ಸಂದರ್ಭದಲ್ಲಿ ನಮ್ಮ ದೇಶದ ರಾಷ್ಟ್ರೀಯತೆಯನ್ನು ಸಂಕುಚಿತ ದೃಷ್ಟಿಯಲ್ಲಿ‌ ನೋಡಲಾಗುತ್ತಿದೆ. ಅಂತಹ ರೀತಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ನಿಗದಿತ ಅಪಾಯಕಾರಿ ಮನೋಧರ್ಮದ ಪಠ್ಯ ಪುಸ್ತಕಗಳನ್ನು ಹೇರುವ ಪ್ರಕ್ರಿಯೆಯನ್ನು ಪ್ರಜ್ಞಾವಂತರು ಖಂಡಿಸಲೇಬೇಕು. ನಮ್ಮ ಜನಪ್ರತಿನಿಧಿಗಳು, ಬೋಧಕರು, ವಿದ್ಯಾರ್ಥಿ ಪೋಷಕರು ಜಾಗೃತರಾಗಬೇಕಾದುದು ಇಂದಿನ ತುರ್ತು ಅಗತ್ಯ. ನಮ್ಮ ಮಾಧ್ಯಮಗಳು ಪ್ರಜಾಸತ್ತಾತ್ಮಕವಾಗಿರಬೇಕೇ ಹೊರತು ಅಪಾಯಕಾರಿ ಸಂಘಟನೆಗಳ ಮುಖವಾಣಿಗಳಂತೆ ವರ್ತಿಸಬಾರದು. ಪ್ರತಿಗಾಮಿ ವಿಚಾರಗಳನ್ನು ಬದಿಗೆ ಸರಿಸಿ, ಪ್ರಗತಿಗಾಮಿ ದೂರದರ್ಶಿತ್ವದ ವಿಚಾರಗಳನ್ನು ಪ್ರಸಾರ ಮಾಡಬೇಕಾದುದು ಮಾಧ್ಯಮಗಳ ಹೊಣೆಗಾರಿಕೆ. ಆದುದರಿಂದ ನಮ್ಮ ಮಕ್ಕಳು ಮುಕ್ತ ಮನಸ್ಸಿನಿಂದ ಕಲಿಯುವಂತಹ ಪಠ್ಯಪುಸ್ತಕಗಳು ಬೇಕಾಗಿವೆ. ಯಾವುದೇ ಪೂರ್ವಗ್ರಹ ಇಲ್ಲದ ಸ್ವಚ್ಛವಾದ ವಾತಾವರಣವನ್ನು ಕಲ್ಪಿಸಬೇಕಾದುದು ಶಿಕ್ಷಣ ಇಲಾಖೆಯ ಮುಖ್ಯ ಉದ್ದೇಶವಾಗಿರಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.

ನಿಮಗೆ ಏನು ಅನ್ನಿಸ್ತು?
0 ವೋಟ್